Mahabba Campaign Part-271/365
ಬದ್ರ್‌ನಲ್ಲಿ ಯುದ್ದ ಖೈದಿಗಳಾಗಿ ಬಂಧಿಸಲ್ಪಟ್ಟವರ ಪೈಕಿ ಅಬ್ಬಾಸ್ ರವರ ಕಥೆ ಒಂದು ವಿಭಿನ್ನ ಅಧ್ಯಾಯವಾಗಿದೆ.ಪ್ರವಾದಿ ﷺ ರವರ ಪಿತೃ ಸಹೋದರ ಅಬ್ಬಾಸ್ ಎಂಬವರು ಬದ್ರ್ ಯುದ್ದ ನಡೆಯುವಾಗ ಶತ್ರು ಪಾಳೆಯಲ್ಲಿದ್ದರು.ಯುದ್ಧದಲ್ಲಿ ಅವರನ್ನು ಸೆರೆ ಹಿಡಿಯಲಾಯಿತು. ರಾತ್ರಿಯಾದಾಗ ಅವರು ಜೋರಾಗಿ ಅಳಲು ಪ್ರಾರಂಭಿಸಿದರು.ಅದು ಪ್ರವಾದಿ ﷺ ಅವರ ಮನಸ್ಸಿಗೆ ನೋವನ್ನುಂಟು ಮಾಡಿತು.ಪ್ರವಾದಿ ﷺ ರವರ ಅನುಚರರಲ್ಲಿ ಒಬ್ಬರು ಅಬ್ಬಾಸ್‌ರವರನ್ನು ಕಟ್ಟಲಾದ ಹಗ್ಗವನ್ನು ಬಿಚ್ಚಿದರು.ಇದನ್ನು ತಿಳಿದ ಪ್ರವಾದಿ ﷺ ಇತರ ಖೈದಿಗಳಿಗೆ ಕಟ್ಟಲಾಗಿರುವ ಹಗ್ಗವನ್ನು ಸಹ ಬಿಚ್ಚಲು ಆದೇಶಿಸಿದರು.
ಅಬ್ಬಾಸ್‌ರವರನ್ನು ಸೆರೆಹಿಡಿದು ಖೈದಿಯನ್ನಾಗಿ ಮಾಡಿದ್ದು, ಅಬುಲ್ ಯಸ್ರ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಕಅಬ್ ಬಿನ್ ಉಮೈರ್ (ರ) ಎಂಬವರಾಗಿದ್ದರು. ದೈಹಿಕವಾಗಿ ಸಣ್ಣಗಾತ್ರದ ಯುವಕನಾಗಿದ್ದ ಅಬುಲ್ ಯಸ್ರ್ (ರ) ಬಲಿಷ್ಠ ಅಬ್ಬಾಸ್‌ರವರನ್ನು ಹೇಗೆ ಸೆರೆಹಿಡಿದರು ಎಂಬುದು ಅದ್ಭುತವಾಗಿತ್ತು.ನಿಮ್ಮನ್ನು ಸೆರೆಹಿಡಿದು ಬಂಧಿಯಾಗಿಸಿದ ಆ ಸಣ್ಣ ಮನುಷ್ಯನನ್ನು ಏಕೆ ನಿಮಗೆ ತಡೆಯಲಾಗಲಿಲ್ಲ? ಎಂಬ ಪ್ರಶ್ನೆಗೆ ಅಬ್ಬಾಸ್‌ರವರ ಪ್ರತಿಕ್ರಿಯೆ ಹೀಗಿತ್ತು. “ಆ ಸಮಯದಲ್ಲಿ ನನಗೆ ಮಹಾ ಪರ್ವತ ‘ಖಂತಮಾ’ ಎದುರಾದಂತೆ ಭಾಸವಾಯಿತು” ಅಬುಲ್ ಯಸ್ರ್ (ರ) ರವರ ಬಳಿ ಕೇಳಲಾಯಿತು.ಬಲಿಷ್ಠ ಅಬ್ಬಾಸ್‌ರವರನ್ನು ಸೆದೆಬಡಿದು ಬಂಧಿಸಲು ಮತ್ತು ಅವರ ಕೈಯಿಂದ ಧ್ವಜವನ್ನು ವಶಪಡಿಸಿಕೊಳ್ಳಲು ತಮಗೆ ಹೇಗೆ ಸಾದ್ಯವಾಯಿತು? “ಗೌರವಾನ್ವಿತ ಮಲಕ್ ಒಬ್ಬರು ನನಗೆ ಸಹಾಯ ಮಾಡಿದರು” ಇದೇ ವಿಚಾರವನ್ನು ಅಬ್ಬಾಸ್‌ರವರು ಕೂಡ ಒಪ್ಪಿಕೊಂಡಿದ್ದಾರೆ.”ಕಪ್ಪು ಬಿಳುಪು ಮಚ್ಚೆಯುಳ್ಳ ಕುದುರೆ ಮೇಲೆ ಬಂದ ಸುಂದರ ಮತ್ತು ಚಂದವಿರುವ ಸ್ಪುರದ್ರೂಪಿ ವ್ಯಕ್ತಿಯು ನನನ್ನು ಬಂಧಿಸಿದರು.”
ಅಬ್ಬಾಸ್‌ರವರು ಪ್ರವಾದಿ ﷺ ರವರ ಪಿತೃಸಹೋದರನಾಗಿದ್ದರೂ ಸಹ,ವಿಮೋಚನಾ ಮೌಲ್ಯವನ್ನು ಸ್ವೀಕರಿಸದೆ ಬಿಡುಗಡೆ ಮಾಡಲಾಗುವುದಿಲ್ಲ ಎಂಬ ಅದೇ ನಿಲುವನ್ನು ನಬಿ ﷺ ಹೊಂದಿದ್ದರು. ಜತೆಗೆ ಸಹೋದರರ ಮಕ್ಕಳಾದ ಅಖೀಲ್ ಬಿನ್ ಅಬುತ್ವಾಲಿಬ್ ಮತ್ತು ನೌಫಲ್ ಬಿನ್ ಹಾರಿಸ್ ಹಾಗೂ ಮೈತ್ರಿಸಂಘದ ಸದಸ್ಯ ಉತ್ಬತ್ ಬಿನ್ ಅಮ್ರ್ ಇಷ್ಟು ಜನರ ಪರಿಹಾರ ಧನವನ್ನು ಪಾವತಿಸಲು ಪ್ರವಾದಿ ﷺ ಅಬ್ಬಾಸ್ ಅವರನ್ನು ಕೇಳಿದರು.ಆದರೆ,ತಮ್ಮ ಬಳಿ ಏನೂ ಇಲ್ಲ ಎಂಬುದು ಅಬ್ಬಾಸ್ ರವರ ಪ್ರತಿಕ್ರಿಯಾಗಿತ್ತು.ಇದನ್ನು ಕೇಳಿದ ಕೆಲವು ಅನ್ಸಾರಿಗಳಾದ ಪ್ರವಾದಿ ಅನುಚರರು ಅವರನ್ನು ಸೌಜನ್ಯವಾಗಿ ಬಿಡುಗಡೆ ಮಾಡಲು ಶಿಫಾರಸು ಮಾಡಿದಾಗ ಪ್ರವಾದಿ ﷺ ಪ್ರತಿಕ್ರಿಯೆ ಹೀಗಿತ್ತು,”ಒಂದೇ ಒಂದು ದಿರ್ಹಂಮ್‌ನ್ನು ಕೂಡಾ ಬಿಟ್ಟು ಕೊಡಲಾಗದು ವಿಮೋಚನಾ ಮೌಲ್ಯವನ್ನು ಸಂಪೂರ್ಣವಾಗಿ ಪಾವತಿಸಲೇ ಬೇಕು.”ಕೊನೆಗೆ ಅಬ್ಬಾಸ್ ರವರು ಒಪ್ಪಿಕೊಂಡರು. ಕೇವಲ ಅಖೀಲ್ ಅವರದ್ದೋ ಅಥವಾ ಎಲ್ಲರದ್ದೋ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ.ಅವರು ಪರಿಹಾರ ರೂಪದಲ್ಲಿ ನೀಡಿದ ಚಿನ್ನವನ್ನು ಮರಳಿ ಪಡೆಯಲು ಪ್ರವಾದಿ ﷺ ರನ್ನು ಅವರು ಅನೇಕ ಬಾರಿ ಬೇಡಿಕೊಂಡರು.ನಮ್ಮ ವಿರುದ್ಧ ಬಳಸಲು ಉದ್ದೇಶಿಸಿ ಕೂಡಿಹಾಕಿದ್ದ ಸಂಪತ್ತಿನಿಂದ ನಮಗೆ ಸಿಕ್ಕಿದ್ದನ್ನು ಮರಳಿಸುವ ಪ್ರಶ್ನೆಯೇ ಇಲ್ಲ ಎಂಬ ಬಿಗು ನಿಲುವಿನಲ್ಲಿ ಪ್ರವಾದಿ ﷺ ರವರು ದೃಢವಾಗಿದ್ದರು. ನನ್ನನ್ನು ಖುರೈಷಿಗಳಲ್ಲಿ ಅತ್ಯಂತ ದರಿದ್ರನನ್ನಾಗಿ ಮಾಡಲು ಮತ್ತು ನನನ್ನು ಜೀವನದುದ್ದಕ್ಕೂ ಭಿಕ್ಷುಕನನ್ನಾಗಿ ಮಾಡುವ ಉದ್ದೇಶವಿದೆಯೇ ಎಂದು ಅಬ್ಬಾಸ್‌ರವರು ಪೈಗಂಬರ್ ﷺ ರವರನ್ನು ಪ್ರಶ್ನಿಸುತ್ತಾರೆ.
ತಕ್ಷಣವೇ ಪ್ರವಾದಿ ﷺ ರವರ ಪ್ರವಾದಿತ್ವದ ನೇತ್ರಗಳು ತೆರೆದವು. ಮತ್ತೆ ನಬಿಯವರು ಅಬ್ಬಾಸ್‌ರವರ ಬಳಿ ಕೇಳಿದರು.ನಿಮ್ಮ ಪ್ರೀತಿಯ ಪತ್ನಿ ಉಮ್ಮುಲ್ ಫಲ್‌ರವರ ಕೈಯಲ್ಲಿ ನೀವು ನೀಡಿದ ಚಿನ್ನದ ಕಟ್ಟು ಎಲ್ಲಿವೆ? “[ನಾನು ಬದ್ರ್‌ಗೆ ತೆರಳುತ್ತಿದ್ದೇನೆ] ನನಗೆ ಏನು ಸಂಭವಿಸಬಹುದು ಎಂದು ನನಗೆ ತಿಳಿದಿಲ್ಲ.ಏನಾದರೂ ಆಗಬಹುದು. ಒಂದೊಮ್ಮೆ ನಾನು ಮರಳಿ ಬರಲಿಲ್ಲವೆಂದಾರೆ, ಇದು ನಿನಗೆ ಮತ್ತು ನಮ್ಮ ಮಕ್ಕಳಾದ ಅಬ್ದುಲ್ಲಾ, ಉಬೈದುಲ್ಲಾ ಮತ್ತು ಫಲ್‌ಲ್ ಅವರಿಗೆ ಸೇರಿದ ಸೊತ್ತಾಗಿದೆ.ನಿಮಗೆ ಇಡೀ ಜೀವನ ಸಾಗಿಸಲಿಕ್ಕೆ ಇದು ಧಾರಾಳವಾಗಿದೆ” ಎಂದು ಹೇಳಿ ಆ ಸ್ವರ್ಣದ ಚೀಲವನ್ನು ಪತ್ನಿಯ ಕೈಯಲ್ಲಿ ಒಪ್ಪಿಸಲಿಲ್ಲವೇ?
ಇದು ಕೇಳಿದಾಗ ಅಬ್ಬಾಸ್ ಬೆಚ್ಚಿಬಿದ್ದರು! ಎಂತಹ ಪವಾಡ! ಈ ರಹಸ್ಯ ಮಾತುಕತೆ ಮತ್ತು ವಹಿವಾಟಿನ ಬಗ್ಗೆ ಮುಹಮ್ಮದ್ ﷺ ಅವರಿಗೆ ಹೇಗೆ ಗೊತ್ತಾಯಿತು? ಅಬ್ಬಾಸ್‌ರವರು ಬಹಿರಂಗವಾಗಿಯೇ ಕೇಳಿದರು.”ಅದರ ಬಗ್ಗೆ ನಿಮಗೆ ಮಾಹಿತಿ ಕೊಟ್ಟವರು ಯಾರು?” ತಕ್ಷಣ ಪ್ರವಾದಿ ﷺ ಉತ್ತರಿಸಿದರು,”ನನ್ನ ಅಲ್ಲಾಹನು ನನಗೆ ತಿಳಿಸಿದನು.”ಪ್ರವಾದಿ ﷺ ಈ ಪ್ರತಿಕ್ರಿಯೆ ಕೇಳಿದ ಕೂಡಲೇ ಅಬ್ಬಾಸ್‌ರವರ ಮನಸ್ಸು ಬದಲಾಯಿತು.ಪ್ರವಾದಿ ಮುಹಮ್ಮದ್ ﷺ ರವರ ಪಥ ಸತ್ಯಪಥವೆಂದು,ಹಾಗೂ ಅದು ದೋಷರಹಿತವೆಂಬುದು ಸಾಬೀತಾಗಿದೆ.ನನ್ನ ಮತ್ತು ಪತ್ನಿಯ ನಡುವಿನ ಸಂಭಾಷಣೆ ಮೂರನೇ ವ್ಯಕ್ತಿಗೆ ತಿಳಿದಿರಲಿಲ್ಲ.ರಾತ್ರಿ ನಡೆದ ರಹಸ್ಯ ಮಾತುಕತೆ ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಗೊತ್ತಿರಲಿಲ್ಲ.ನನ್ನ ಎಲ್ಲಾ ಸಂದೇಹಗಳು ತಪ್ಪಾಗಿವೆ.ಅವರು ಅಲ್ಲಾಹನ ಸಂದೇಶವಾಹಕರು ಎಂದು ನಾನು ಘೋಷಿಸುತ್ತೇನೆ. ಅಶ್‌ಹದು ಆನ್ ಲಾಇಲಾಹ ಇಲ್ಲಲ್ಲಾಹ್…… ವ ಅನ್ನಕ ರಸೂಲುಲ್ಲಾಹ್……
ಮುಂದುವರೆಯುವುದು
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ
Mahabba Campaign Part-272/365
ಅಬ್ಬಾಸ್ (ರ) ರವರು ಇಸ್ಲಾಂಗೆ ಮತಾಂತರಗೊಂಡದ್ದು ಯಾವಾಗ ಎಂಬುದರ ಕುರಿತು ಹಲವು ಅಭಿಪ್ರಾಯಗಳಿದೆ,ಆದರೆ
ಮಕ್ಕಾ ವಿಜಯದ ಸನಿಹದಲ್ಲಿ ಅವರು ಇಸ್ಲಾಮ್ ಧರ್ಮ ಸ್ವೀಕರಿಸಿದರು ಎಂಬುದು ಪ್ರಬಲವಾದ ಅಭಿಪ್ರಾಯ.ಏನೇ ಆದರೂ ಬದ್ರ್‌ನಲ್ಲಿ ಅವರೊಂದಿಗಿನ ನಡೆದ ಸಂಭಾಷಣೆ ಮತ್ತು ವಹಿವಾಟಿನ ಕುರಿತು ಹಲವು ತೆರನಾದ ವರದಿಗಳು ಬಂದಿದೆ. ಅದರಲ್ಲಿ ಒಂದು ವರದಿ ಹೀಗಿದೆ.
ಪರಿಹಾರಧನವಾಗಿ ಪಾವತಿಸಿದ ವಿಮೋಚನಾ ಮೌಲ್ಯವನ್ನು ಮರಳಿ ಪಡೆಯಲು ಅಬ್ಬಾಸ್‌ರವರು ಇನ್ನಿಲ್ಲದ ಪ್ರಯತ್ನಪಟ್ಟರು.ಅದರ ಭಾಗವಾಗಿ ಅವರು ಹೀಗೆ ಹೇಳಿದರು: “ಮೊದಲಿನಿಂದಲೂ ನಾನು ಹೃದಯದಿಂದ ಇಸ್ಲಾಮನ್ನು ಅಂಗೀಕರಿಸಿದ್ದೇನೆ.ನಿರ್ವಾಹವಿಲ್ಲದೆ ಮುಶ್ರಿಕುಗಳ ಜತೆ ಬದ್ರ್‌ಗೆ ಬರಬೇಕಾಯಿತು ಎಂಬುದು ನಿಜ.ಆದರೆ ಮನಸ್ಸಿದ್ದು ಬಂದದ್ದಲ್ಲ.
ಇಷ್ಟು ಹೇಳಿದ ನಂತರವೂ ನಬಿ ﷺ ರವರು ಅವರನ್ನು ಬಿಡಲಿಲ್ಲ ನಬಿಯವರು ಹೇಳಿದರು “ನೀವು ಹೇಳುವುದು ನಿಜವಾಗಿದ್ದರೆ ಅಲ್ಲಾಹನು ನಿಮಗೆ ಪ್ರತಿಫಲ ನೀಡುತ್ತಾನೆ.ಆದರೂ ಬಾಹ್ಯವಾಗಿ ನೀವು ಇಸ್ಲಾಂ ವಿರೋಧಿ ಪಾಳಯದಲ್ಲಿದ್ದೀರಿ” ಪ್ರಸ್ತುತ ಸಂದರ್ಭ ಮತ್ತು ನಿಲುವನ್ನು ಉಲ್ಲೇಖಿಸಿ,ಪವಿತ್ರ ಕುರಾನಿನ ಎಂಟನೇ ಅಧ್ಯಾಯ ಅಲ್-ಅನ್ಫಾಲ್‌ನ ಎಪ್ಪತ್ತು ಮತ್ತು ಎಪ್ಪತ್ತೊಂದನೇ ಶ್ಲೋಕಗಳು ಅವತರಿಸಿದವು.ಅದರ ಆಶಯವನ್ನು ಈ ಕೆಳಗಿನಂತೆ ಓದಬಹುದು.
“ಓ ಪೈಗಂಬರರೇ,ನಿಮ್ಮ ವಶದಲ್ಲಿರುವ ಸೆರೆಯಾಳುಗಳಿಗೆ ಹೇಳಿರಿ; ನಿಮ್ಮ ಹೃದಯಗಳಲ್ಲೇನಾದರೂ ಒಳಿತು ಇರುವುದೆಂದು ಅಲ್ಲಾಹು ತಿಳಿದರೆ ಅವನು ನಿಮ್ಮಿಂದ ಪಡೆದುದಕ್ಕಿಂತಲೂ ಉತ್ತಮವಾದುದನ್ನು ನಿಮಗೆ ನೀಡುವನು ಮತ್ತು ನಿಮ್ಮ ಅಪರಾಧಗಳನ್ನು ಕ್ಷಮಿಸುವನು.ಅಲ್ಲಾಹು ಕ್ಷಮಾಶೀಲನೂ ಕೃಪಾನಿಧಿಯೂ ಆಗಿರುತ್ತಾನೆ.
ಆದರೆ ನಿಮ್ಮನ್ನು ವಂಚಿಸುವ ಇರಾದೆ ಅವರಿಗಿದ್ದರೆ [ಚಿಂತೆ ಬೇಡ] ಅವರು ಇದಕ್ಕಿಂತ ಮುಂಚೆ ಅಲ್ಲಾಹನನ್ನು ವಂಚಿಸಿದ್ದಾರೆ.ಇದರ ಫಲವಾಗಿಯೇ ಅವರನ್ನು ನಿಮ್ಮ ವಶಕ್ಕೆ ಒಪ್ಪಿಸಿದನು.ಅಲ್ಲಾಹನು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ”
ಅಬ್ಬಾಸ್ (ರ) ರವರಿಗೆ ಉಂಟಾದ ಅನುಭವದ ಕುರಿತು ಅವರೇ ಅವಲೋಕನ ನಡೆಸಿದ ವಿಷಯವನ್ನು ಇಮಾಮ್ ರಾಝಿ (ರ) ತನ್ನ ಕುರ್ಆನ್ ವ್ಯಾಖ್ಯಾನ ಗ್ರಂಥದಲ್ಲಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ.
ಅಬ್ಬಾಸ್ (ರ) ಹೇಳುತ್ತಾರೆ.
ಶ್ರೇಷ್ಠವಾದುದನ್ನು ಅಲ್ಲಾಹನು ನನಗೆ ಪ್ರತಿಫಲವಾಗಿ ನೀಡಿದನು.ನನಗೆ ಈಗ ಇಪ್ಪತ್ತು ಗುಲಾಮರು ಇದ್ದಾರೆ. ಅವರಲ್ಲಿ ಕನಿಷ್ಠ ವ್ಯಾಪಾರ ಮಾಡುವವರೆಂದರೆ ಇಪ್ಪತ್ತು ಸಾವಿರ ಸಂಪಾದಿಸುವವರಾಗಿದ್ದಾರೆ.ಅದೇ ರೀತಿ ಪವಿತ್ರ ಝಂಝಂ ಪಾನೀಯಗಳನ್ನು ವಿತರಿಸುವ ಪದವಿ ನನಗೆ ಸಿಕ್ಕಿದೆ.ಈ ಪದವಿ ಮಕ್ಕಾದಲ್ಲಿರುವ ಎಲ್ಲಾ ಆಸ್ತಿಗಳನ್ನು ಪಡೆಯುವುದಕ್ಕಿಂತ ಶ್ರೇಷ್ಠವಾದ ಭಾಗ್ಯವೆಂದು ನಾನು ಭಾವಿಸುತ್ತೇನೆ.
ನಾನು ಅಲ್ಲಾಹನಿಂದ ಕ್ಷಮೆಯನ್ನು ಸಹ ನಿರೀಕ್ಷಿಸುತ್ತೇನೆ.
ಮತ್ತೊಂದು ವರದಿ ಹೀಗಿದೆ,
ಕುರ್‌ಆನಿನ ಮೇಲಿನ ವಚನವು ಅವತರಿಸಲ್ಪಟ್ಟ ತಕ್ಷಣ,ಅಬ್ಬಾಸ್(ರ) ರವರು ಪ್ರವಾದಿ ﷺ ರವರಿಗೆ ಹೇಳಿದರು.ಓ ಪ್ರವಾದಿಯವರೆ ﷺ!
ಅಂದು ನಾನು ಪಾವತಿಸಿದ ಮೌಲ್ಯಕ್ಜಿಂತ ದುಪ್ಪಟ್ಟು ಧನ ನೀಡಿದ್ದರೆ ಎಷ್ಟೊಂದು ಉತ್ತಮವಾಗುತ್ತಿತ್ತು ಎಂದು ಆಗ್ರಹಿಸಿದೆ. ಏಕೆಂದರೆ ಅಷ್ಟೊಂದು ಸಂಪತ್ತನ್ನು ಅಲ್ಲಾಹನು ನನಗೆ ಅನುಗ್ರಹಿಸಿದ್ದಾನೆ.[ಅಂದು ದುಪ್ಪಟ್ಟು ನೀಡಿದ್ದರೆ ಇನ್ನೂ ದಾರಳವಾಗಿ ದುಪ್ಪಟ್ಟು ಸಿಗುತ್ತಿತ್ತು ಎಂದು ಸಾರಾಂಶ]
ಅಬ್ಬಾಸ್ (ರ) ರವರು ಹಣ ಸೊತ್ತು,ಆಸ್ತಿ, ಸಂಪತ್ತಿನೊಂದಿಗೆ ಅತಿಯಾದ ಮೋಹ ಹೊಂದಿದವರಾಗಿದ್ದರು.ನಬಿ ﷺ ರವರಿಗೆ ಅದು ತಿಳಿದ ವಿಚಾರವಾಗಿತ್ತು ಅದನ್ನು ಪ್ರವಾದಿ ﷺ ಗುರುತಿಸಿದ್ದರು ಕೂಡಾ.
ಜತೆಗೆ ಅದಕ್ಕೆ ಅನುಗುಣವಾಗಿ ನಬಿಯವರು ಸಮೀಪಿಸಿದ ರೀತಯನ್ನು ಸಹ ನೋಡಬಹುದು.ಅದಕ್ಕಿರುವ ಒಂದು ಉದಾಹರಣೆಯು ಈ ಕೆಳಗಿನಂತಿದೆ.
ಒಮ್ಮೆ ಪ್ರವಾದಿ ﷺ ರವರ ಸನ್ನಿಧಿಗೆ ಬಹ್ರೈನ್‌ನಿಂದ ಸೊತ್ತುಗಳು ಬಂದವು ಅದುವರೆಗೆ ವಿವಿಧ ದೇಶಗಳಿಂದ ಬಂದಿದ್ದ ಆಸ್ತಿಗಳಲ್ಲಿ ಇದು ಅತ್ಯಂತ ದೊಡ್ಡ ಸಂಪತ್ತಾಗಿತ್ತು.ಮೌಲ್ಯಯುತವಾಗಿತ್ತುಇದನ್ನು ಪ್ರವಾದಿ ﷺ ರವರ ಸೂಚನೆಯ ಮೇರೆಗೆ ಮಸೀದಿಯಲ್ಲಿ ಪ್ರದರ್ಶಿಸಲಾಯಿತು.ಆ ಸೊತ್ತುಗಳನ್ನು ತನಗೆ ಕೊಡುವಂತೆ ಅಬ್ಬಾಸ್(ರ) ರವರು ಪ್ರವಾದಿ ﷺ ರೊಂದಿಗೆ ಕೇಳಿಕೊಂಡರು.ಕೂಡಲೇ ಪ್ರವಾದಿ ﷺ ಅನುಮತಿ ನೀಡಿದರು.ಅಬ್ಬಾಸ್‌ರವರು ಒಂದು ವಸ್ತ್ರದಲ್ಲಿ ಎಲ್ಲವನ್ನು ಕೂಡಿಹಾಕಿ ಒಯ್ಯಲು ಪ್ರಯತ್ನಿಸಿದರು ಆದರೆ
ಅವರಿಂದ ಅದನ್ನು ಮೇಲಕ್ಕೆತ್ತಲು ಸಾದ್ಯವಾಗಲಿಲ್ಲ.ಯಾರನ್ನಾದರು ಸಹಾಯ ಮಾಡಲು ಹೇಳಿರಿ ನಬಿಯೇ ಎಂದು ಅವರು ಪ್ರವಾದಿ ﷺ ರವರನ್ನು ಕೇಳಿಕೊಂಡಾಗ ನಬಿ ﷺ ರವರು ನಿರಾಕರಿಸಿದರು.ಆಗ ಅಬ್ಬಾಸ್‌ರವರು ಸ್ವತ ನಬಿಯವರೊಂದಿಗೆ ಮೇಲೆತ್ತಲು ಸಹಾಯ ಮಾಡುವಂತೆ ಕೋರಿದರು! ನಬಿ ﷺ ರವರು ಅದರಲ್ಲಿ ಆಸಕ್ತಿ ತೋರಿಸಲಿಲ್ಲ.ಕೊನೆಗೆ ಕೆಲವು ವಸ್ತುಗಳನ್ನು ಅಲ್ಲೇ ಬಿಟ್ಟು ಎಷ್ಟು ಸಾಗಿಸಲು ಸಾದ್ಯವೋ ಅಷ್ಟೊಂದು ಸೊತ್ತನ್ನು ಸಾಗಿಸಿದರು.ಪ್ರವಾದಿ ﷺ ರವರು ಆ ದೃಶ್ಯವನ್ನು ವೀಕ್ಷಿಸುತ್ತಲೇ ಇದ್ದರು.ಸೊತ್ತು, ಸಂಪತ್ತಿನೊಂದಿಗಿರುವ ಅವರ ಅತಿಯಾದ ಮೋಹವನ್ನು ಕಂಡು ಪ್ರವಾದಿ ﷺ ಆಶ್ಚರ್ಯಚಕಿತರಾದರು.
ಇಷ್ಟೊಂದು ವಿಷಯಗಳನ್ನು ವಾಚಿಸಿದ ನಂತರ ಇದು ನಮಗೆ ಯಾವ ಪಾಠಗಳನ್ನು ಕಲಿಸುತ್ತವೆ? ಒಂದನೇಯದಾಗಿ ಪ್ರವಾದಿ ﷺ ಪಾಲಿಸಿದ ನ್ಯಾಯ,ನೀತಿ ಮತ್ತು ದಯೆ.ಆಪ್ತರು,ಕುಟುಂಬಸ್ಥರು ಯಾರೇ ಆಗಲಿ,ಅವರಿಗಾಗಿ ಕಾನೂನಿನಲ್ಲಿರುವ ನಿಯಮಗಳನ್ನು ಸಡಿಲಿಸಲು ನಬಿಯವರು ಸಿದ್ಧವಾಗಲೇ ಇಲ್ಲ.ಈ ರೀತಿಯಾಗಿ ನ್ಯಾಯ ನೀತಿ ನಿಷ್ಠೆ ಮತ್ತು ದಯೆಯ ಎಷ್ಟೊಂದು ಪಾಠಗಳು……
ಮುಂದುವರೆಯುವುದು…
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-273/365
ಬದ್ರ್‌ನಲ್ಲಿ ಸೆರೆಹಿಡಿಯಲ್ಪಟ್ಟ ಯುದ್ಧ ಕೈದಿಗಳೊಂದಿಗೆ ಒಂದಿಷ್ಟು ಸಮಯ ಇನ್ನೂ ಸಂಚರಿಸಲಿಕ್ಕಿದೆ. ಯುದ್ಧಾನಂತರದ ವಿಧಿ ವಿಧಾನಗಳ ರೀತಿಶಾಸ್ತ್ರವನ್ನಾಗಿದೆ ಈ ಅಧ್ಯಾಯವು ಜಗತ್ತಿಗೆ ಪರಿಚಯಿಸುವುದು.ಪ್ರತಿಯೊಬ್ಬರ ಸ್ಥಿತಿಗತಿ ಹಾಗೂ ಮನಸ್ಥಿತಿಯನ್ನು ಗುರುತಿಸಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಒಂದು ಉದಾಹರಣೆ ನೋಡಿ.ನೌಫಲ್ ಬಿನ್ ಹಾರಿಸ್ ಬಿನ್ ಅಬ್ದುಲ್ ಮುತ್ತಲಿಬ್ ಎಂಬವರು ಪ್ರವಾದಿ ﷺ ರವರ ಕುಟುಂಬದ ಸದಸ್ಯರಾಗಿದ್ದರು.ಪ್ರವಾದಿ ﷺ ರವರು ನೌಫಲ್‌ರವರ ಬಳಿ ಹೇಳಿದರು.”ನೀವು ವಿಮೋಚನಾ ಧನ ನೀಡಿ ಮುಕ್ತಿಯನ್ನು ಪಡೆದುಕೊಳ್ಳಿರಿ.” ನೌಫಲ್ ಹೇಳಿದರು.”ಹಣ ಪಾವತಿಸಲು ನನ್ನ ಬಳಿ ಯಾವುದೇ ದಾರಿ ಇಲ್ಲ.”ಆಗ ಪ್ರವಾದಿ ﷺ ಹೇಳಿದರು,“ಜಿದ್ದಾದಲ್ಲಿರುವ ನಿಮ್ಮ ಸಂಬಂಧಿಕರಿಂದ ಹಣವನ್ನು ಸ್ವೀಕರಿಸಿರಿ.”
ನೌಫಲ್‌ಗೆ ಆಶ್ಚರ್ಯವಾಯಿತು!
ಅಂತಹ ಸಾಧ್ಯತೆಯನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಪ್ರವಾದಿ ﷺ ರವರಿಗೆ ಲಭ್ಯವಾದ ಈ ಮಾಹಿತಿಯನ್ನು ಅಲ್ಲಾಹನು ತಿಳಿಸಿದ್ದಾನೆಯೇ ಹೊರತು ಬೇರೆ ಯಾವ ಮಾರ್ಗದಿಂದಲೂ ತಿಳಿಯಲು ಯಾವುದೇ ಸಾಧ್ಯತೆಗಳಿಲ್ಲ.ಕೂಡಲೇ ನೌಫಲ್ ಹೇಳಿದರು. ಓ ಮುಹಮ್ಮದ್ ﷺ ! ತಾವು ಅಲ್ಲಾಹನ ಸಂದೇಶವಾಹಕರೆಂದು ನಾನು ಒಪ್ಪಿಕೊಳ್ಳುತ್ತೇನೆ.ವಿಮೋಚನಾ ಧನ ಪಾವತಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಇದಕ್ಕಿಂತ ವಿಭಿನ್ನವಾದ ಮತ್ತೊಂದು ಘಟನೆ ಹೀಗಿದೆ,
ಅಮ್ರ್ ಬಿನ್ ಅಬ್ದುಲ್ಲಾಹಿ ಬಿನ್
ಉಸ್ಮಾನ್ ಎಂಬವರು
‘ಅಬೂಇಝ್ಝ ಅಶ್ಶಾಇರ್’ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಮಹಾ ಕವಿಯಾಗಿದ್ದರು.ಅವರ ಕಾವ್ಯದ ಗೆರೆಗಳು ಖಡ್ಗಕ್ಕಿಗಿಂತಲೂ ಹರಿತವಾಗಿದ್ದವು.ಅವರು ಅದನ್ನು ಇಸ್ಲಾಂ ಮತ್ತು ಪ್ರವಾದಿ ﷺ ರವರ ವಿರುದ್ದ ಚೆನ್ನಾಗಿ
ಉಪಯೋಗಿಸಿದರು. ಬದ್ರ್‌ನಲ್ಲಿ ಶತ್ರುಪಾಳೆಯಲ್ಲಿದ್ದ ಅವರನ್ನು ಸೆರೆಹಿಡಿದು,ಯುದ್ಧ ಕೈದಿಯನ್ನಾಗಿ ಮಾಡಲಾಯಿತು.
ತನ್ನನ್ನು ಸ್ವತಂತ್ರ ಗೊಳಿಸಬೇಕೆಂದು ಪ್ರವಾದಿ ﷺ ರವರನ್ನು ಅವರು ಪರಿಪರಿಯಾಗಿ ಬೇಡಿಕೊಂಡರು.
ಅವರ ಮಾತಿನ ಧಾಟಿ ಹೀಗಿತ್ತು,
“ಓ ಅಲ್ಲಾಹನ ರಸೂಲರೇ ﷺ! ನಾನು ಅನೇಕ ಭಾದ್ಯತೆಗಳಿರುವ ಬಡ ವ್ಯಕ್ತಿಯಾಗಿದ್ದೇನೆ.ನನಗೆ ಐದು ಹೆಣ್ಣು ಮಕ್ಕಳಿದ್ದಾರೆ.ಅವರಿಗಾಗಿ ನಾನು ಏನನ್ನೂ ಕೂಡಿಹಾಕಿಲ್ಲ. ಅವರನ್ನು ನೆನಸಿಯಾದರೂ ನನ್ನೊಂದಿಗೆ ದಯೆ ತೋರಬೇಕು.”
ತಕ್ಷಣ ಪ್ರವಾದಿ ﷺ ‘ಅಬೂಇಝ್ಝ’ರವರ ಅಹವಾಲನ್ನು ಸ್ವೀಕರಿಸಿ ಅವರನ್ನು ಬಿಡುಗಡೆ ಮಾಡಿದರು.ಇನ್ನು ಮುಂದೆ ಪ್ರವಾದಿ ﷺ ರವರ ವಿರುದ್ಧ ಸಮರ ಸಾರುವುದಿಲ್ಲ ಹಾಗೂ ಅದಕ್ಕಾಗಿ ಜನರನ್ನು ಸಂಘಟಿಸುವುದಿಲ್ಲ ಎಂಬ ಒಪ್ಪಂದದ ಮೇರೆಗೆ ಅವರಿಗೆ ಮೋಕ್ಷ ನೀಡಲಾಗಿತ್ತು.ಆ ಸಮಯದಲ್ಲಿ ಅವರು ಪ್ರವಾದಿ ﷺ ಅವರನ್ನು ಪ್ರಕೀರ್ತಿಸಿ ಕವಿತೆ ಹಾಡಿದರು.
ಅದರ ಸಣ್ಣ ಸಾಲು ಹೀಗಿದೆ,
“ಮನ್ ಮಬ್‌ಲಿಗಿನ್ ಅನಿರ್ರಸೂಲ ಮುಹಮ್ಮದನ್
————————-
ಫಇನ್ನಕ ಮನ್ ಹಾರಬ್ತಹೂ ಲ ಮುಹಾರಿಬುನ್
ಶಖಿಯ್ಯುನ್ ವಮನ್ ಸಾಲಮ್‌ತಹು ಲಾ ಸಯೀದು”
(ನನ್ನ ಸಂದೇಶವನ್ನು ಪ್ರವಾದಿಗಳಿಗೆ ಮುಟ್ಟಿಸಲು
ಸಂದೇಶವಾಹಕರಾಗಿ ಬರುವವರು ಯಾರಿದ್ದಾರೆ.
ತಾವು ಸತ್ಯದ ಸಂದೇಶವಾಹಕರಾಗಿದ್ದೀರಿ ಪುಣ್ಯರೇ!
ತಾವು ಪ್ರಶಂಸೆನೆಗೆ ಅರ್ಹತೆಯಿರುವ ರಾಜರಾಗಿದ್ದೀರಿ….
ಅಲ್ಲಾಹನ ಕಡೆಯಿಂದ ಬಂದ ಸತ್ಯ ಸಾಕ್ಷಿಯೊಂದಿಗೆ
ಸರಿಯಾದ ದಾರಿ ತೋರಿಸುವ ದಾರಿದೀಪವಾಗಿದ್ದೀರಿ ತಾವು.
ಗಣ್ಯಾತಿಗಣ್ಯರು ತಮಗೆ ಉನ್ನತ ಸ್ಥಾನಗಳನ್ನು ನೀಡಿದರು
ಅಲ್ಲಾಹನು ನೀಡಿದ ಮಹತ್ವದ, ಸ್ಥಿರತೆಯ ನಿಮಿತ್ತ
ತಮ್ಮೊಂದಿಗೆ ಯಾರಾದರು ಸಮರ ಸಾರಿದರೆ
ಅವರಿಗೆ ಸೋಲು ಸುನಿಶ್ಚಿತ ಮತ್ತು ಖಂಡಿತ!
ತಮ್ಮೊಂದಿಗೆ ಯಾರಾದರೂ ಒಪ್ಪಂದ ಮಾಡಿದರೆ,
ಅವರ ಗೆಲುವು ನಿಶ್ಚಿತ ಮತ್ತು ಖಂಡಿತ!)
ಅಧಿಕಾರ ಪ್ರೌಢಿಯೊಂದಿಗೆ ಮಾತನಾಡಬೇಕಾದ ಸಮಯದಲ್ಲಿ ಅದೇ ಪ್ರೌಢಿ ಮತ್ತು ಗಾಂಭಿರ್ಯತೆಯೊಂದಿಗೆ ಪ್ರವಾದಿ ﷺ ರವರು ಮಾತನಾಡಿ ತೋರಿಸಿಕೊಟ್ಟರು.
ಎಲ್ಲಿ ಕರುಣೆಯಿಂದ ವರ್ತಿಸಬೇಕೊ ಅಲ್ಲಿ ದಯೆ,ಕರುಣೆಯಿಂದ ಸಮೀಪಿಸುವ ಸುಂದರವಾದ ಚಿತ್ರವನ್ನು ನಬಿ ﷺ ರಿಂದ ನಮಗೆ ಕಾಣಬಹುದು. ಒಬ್ಬ ಆಡಳಿತಗಾರನಿಗೆ ಇರಬೇಕಾದ ಎಲ್ಲಾ ಮಜಲುಗಳ ಸರ್ವವಿಧ ಸ್ಪರ್ಶ ಒಡನಾಟವನ್ನು ಪ್ರವಾದಿ ﷺ ನಿರ್ವಹಿಸಿದರು.
ಅಬೂ ಇಝ್ಝ ರವರಿಗೆ ಉಂಟಾದ ಇನ್ನೊಂದು ಅನುಭವದ ಘಟನೆಯನ್ನು ಮುಂದೆ ನಮಗೆ ವಾಚಿಸೋಣ….
[ಮುಂದುವರೆಯುವುದು]اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّم.
Mahabba Campaign Part-274/365
ಅಬೂ ಇಝ್ಝ ಮಕ್ಕಾ ತಲುಪಿದನು. ಆದರೆ ಪ್ರವಾದಿ ﷺ ರವರು ಆತನೊಂದಿಗೆ ತೋರಿದ ಔದಾರ್ಯವನ್ನು ಮತ್ತು ಆತ ಬಿಡುಗಡೆ ಹೊಂದಿದ ರೀತಿಯನ್ನು ಮರೆಮಾಚಿ,ಮಕ್ಕಾ ಮುಶ್ರಿಕರೊಂದಿಗೆ ಈ ರೀತಿ ಸುಳ್ಳು ಹೇಳಿದ.”ಮುಹಮ್ಮದ್ ﷺ ನನ್ನು ಮಾಟಮಂತ್ರದ ಮೂಲಕ ನಾನು ವಶೀಕರಿಸಿದೆ.ಹಾಗಾಗಿ ನಾನು ಸ್ವತಂತ್ರನಾದೆ.
ದಿನಗಳು ಕಳೆದುಹೋದವು ಬದ್ರ್‌ನಲ್ಲಿ ಉಂಟಾದ ಹೀನಾಯ ಸೋಲಿನಿಂದ ಮಕ್ಕಾ ಮುಶ್ರಿಕುಗಳು ಕಂಗೆಟ್ಟಿದ್ದರು.ತೀವ್ರ ಹತಾಶೆಯಿಂದ ನಲುಗಿದ್ದರು.ನಷ್ಟ ಮತ್ತು ಮಾನಹಾನಿ ಹೇಳಲಾಗದಷ್ಟು ಗಾಢವಾಗಿತ್ತು.ಇದರ ವಿರುದ್ದ ಸೇಡು ತೀರಿಸಿಕೊಳ್ಳುವ ಸಲುವಾಗಿ ಅವರು ಉಹ್ದ್‌ಗೆ ಹೊರಟಿದ್ದರು.ಸಫ್ವಾನ್ ಬಿನ್ ಉಮಯ್ಯ ಎಂಬಾತ ಅಬೂ ಇಝ್ಝನನ್ನು ಬೇಟಿಯಾಗಿ ನೀವು ನಮ್ಮೊಂದಿಗೆ ಬರಬೇಕೆಂದು ಕೇಳಿಕೊಂಡ.”ಇಲ್ಲ, ನಾನು ಬರುವುದಿಲ್ಲ. ಮುಹಮ್ಮದ್ ﷺ ಇತರ ಯಾರಿಗೂ ತೋರಿಸದ ವಿಶೇಷ ಔದಾರ್ಯವನ್ನು ನನ್ನ ಮೇಲೆ ತೋರಿಸಿದ್ದಾರೆ.ನಾನು ಮುಹಮ್ಮದ್ ﷺ ವಿರುದ್ಧ ಜನರನ್ನು ಸಂಘಟಿಸುವುದಿಲ್ಲ ಹಾಗೂ ಸಮರ ಸಾರುವುದಿಲ್ಲವೆಂದು ಒಪ್ಪಂದ ಮಾಡಿಕೊಂಡಿದ್ದೇನೆ.”ಆದರೆ ಸಫ್ವಾನ್ ಬಿಡಲಿಲ್ಲ.ಆತ ಅಬೂ ಇಝ್ಝನಿಗೆ ಮೋಹಕ ವಾಗ್ದಾನಗಳ ಮಹಾಪೂರವನ್ನೇ ನೀಡಿದನು.ನಿನಗೆ ಏನಾದರೂ ಸಂಭವಿಸಿದರೆ ನಿನ್ನ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವೆನು.ಏನೂ ಸಂಭವಿಸದೆ ನೀನು ಮರಳಿ ಮಕ್ಕಾಗೆ ಬಂದರೆ ನಿನ್ನ ಮತ್ತು ಕುಟುಂಬದ ಜೀವಮಾನಕ್ಕೆ ಬೇಕಾದಷ್ಟು ಸಂಪತ್ತನ್ನು ಕೊಡುತ್ತೇನೆ.ಎಲ್ಲವನ್ನು ಕೇಳಿದ ನಂತರ ಅಬೂ ಇಝ್ಣ ಅಂತಿಮವಾಗಿ ಸಮ್ಮತಿಸಿದನು.
ಜನರನ್ನು ಸಂಘಟಿಸಿ ಯುದ್ಧಕ್ಕೆ ಹೊರಡಲು ಪ್ರೇರಣೆ ಮತ್ತು ಶಕ್ತಿ ತುಂಬಿದನು.
ಅಬೂಇಝ್ಝ ಖುರೈಶಿಗಳ ಜತೆ ಉಹ್ದ್ ಯುದ್ದಕ್ಕೆ,ಹೊರಟಿದ್ದಲ್ಲದೆ, ಮುಸ್ಲಿಮರಿಂದ ಸೆರೆಹಿಡಿಯಲ್ಪಟ್ಟು ಪುನಃ ಯುದ್ಧ ಕೈದಿಯಾದನು. ಅವನು ಒಬ್ಬನೇ ಖುರೈಷಿಗಳ ಪೈಕಿ ಸೆರೆಯಾಳಾಗಿದ್ದವನು ಕೂಡ ಎಂಬುದು ಗಮನಾರ್ಹ. ಅಬೂ ಇಝ್ಝನನ್ನು ಪ್ರವಾದಿ ﷺ ರವರ ಮುಂದೆ ಹಾಜರುಪಡಿಸಲಾಯಿತು. ಆತ ಹಳೆಯ ಅದೇ ವಿನಂತಿಯನ್ನು ಪುನರಾವರ್ತಿಸಿದನು. ಪ್ರವಾದಿ ﷺ ರವರ ಔದಾರ್ಯವನ್ನು ಮತ್ತೊಮ್ಮೆ ಶೋಷಣೆ ಮಾಡಿ ರಕ್ಷೆ ಹೊಂದಬಹುದೆಂದು ಆತ ಭಾವಿಸಿದ್ದನು.ಆದರೆ ಪ್ರವಾದಿ ﷺ ಆತನೊಂದಿಗೆ ಕೇಳಿದರು.”ನೀನು ನನ್ನೊಂದಿಗೆ ಮಾಡಿಕೊಂಡ ಒಪ್ಪಂದ ಏನಾಯಿತು? ಮಗದೊಮ್ಮೆ ಮುಹಮ್ಮದ್ ﷺ ನನ್ನು ಮೋಸಗೊಳಿಸಿದೆಯೆಂದು ಮಕ್ಕಾದಲ್ಲಿ ಡಂಗುರಸಾರಿ ಮಾನ್ಯನಾಗಬಹುದೆಂದು ನೀನು ಭಾವಿಸಿದ್ದಿಯಾ? ಒಬ್ಬ ಸತ್ಯವಿಶ್ವಾಸಿಯನ್ನು ಒಂದೇ ಹುತ್ತದಿಂದ ಎರಡು ಬಾರಿ ಹಾವು ಕಚ್ಚುವುದಿಲ್ಲ. ನೀನು ಏನೆಂದು ಭಾವಿಸಿದ್ದಿಯಾ?”
ನಂತರ,ವಿಶ್ವಾಸದ್ರೋಹ ಮಾಡಿದಕ್ಕಾಗಿ ಆತನಿಗೆ ಮರಣದಂಡನೆ ವಿಧಿಸಲಾಯಿತು.ಆಸ್ವಿಮು ಬಿನ್ ಸಾಬಿತ್ ರವರಿಗೆ ಶಿಕ್ಷೆಯ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಆಡಳಿತದ ನ್ಯಾಯ ನೀತಿ ವ್ಯವಸ್ಥೆ ಮತ್ತು ದೇಶದ ಕ್ಷೇಮಾಭಿವೃದ್ಧಿಯ ಭಾಗವಾಗಿ ಇದೇ ಸಂದರ್ಭದಲ್ಲಿ ನಲ್‌ರ್ ಬಿನ್ ಹಾರಿಸ್,ಉಖ್ಬಾ ಬಿನ್ ಅಬೀ ಮುಅಐತ್ವ್ ರನ್ನು ಗಲ್ಲಿಗೇರಿಸಲಾಯಿತು.
ಬದ್ರ್ ಯುದ್ಧದ ನಂತರ, ವ್ಯವಸ್ಥಿತವಾದ ರಾಷ್ಟ್ರವೊಂದರ ರಚನೆಯೊಂದಿಗೆ ಮುಸ್ಲಿಂ ಸಮುದಾಯ ಹೊರಹೊಮ್ಮಿತು.ಅದೇ ಸಂಧರ್ಭದಲ್ಲಿ ಅಚಾರ ಹಾಗೂ ಅನುಷ್ಠಾನಗಳ ಜೊತೆಗೆ ನವನೂತನ ವ್ಯವಹಾರಗಳು ಸೇರಿಕೊಂಡವು. ದೇಶದ ಮತ್ತು ಜಾಗತಿಕ ಸಮುದಾಯಕ್ಕೆ ಇರಬೇಕಾದ ಕಾನೂನು ಪ್ರತಿಪಾದನೆಗಳನ್ನು ಪ್ರಾಯೋಗಿಕವಾಗಿ ಅವತರಿಸಲ್ಪಡುವ ಸನ್ನಿವೇಶವಿತ್ತು. ಅದೆಲ್ಲವನ್ನು ಯುದ್ಧ ಕೈದಿಗಳ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ಮತ್ತು ಸಮರಾರ್ಜಿತ ಸೊತ್ತಿನ ವ್ಯವಹಾರ ಕ್ರಮಗಳ ಅಧ್ಯಾಯಗಳಲ್ಲಿ ನಮಗೆ ಕಾಣಬಹುದು.
ಬದ್ರ್‌ನಲ್ಲಿ ಲಭ್ಯವಾದ ಸಮರಾರ್ಜಿತ ಸೊತ್ತಿನ ಹಕ್ಕು ಯಾರ ಪಾಲಿಗೆ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದವು.ಯುದ್ಧದ ನಂತರ ರಣರಂಗದಿಂದ ಸಮರಾರ್ಜಿತ ಆಸ್ತಿ ಸಂಗ್ರಹಿಸಿದವರೇ ಅದರ ವಾರಿಸುದಾರರು ಎಂದು ಒಂದು ವಿಭಾಗ ಹೇಳಿತು.ಶತ್ರುಗಳನ್ನು ಹಿಮ್ಮೆಟ್ಟಿಸಿ ಓಡಿಸಿದವರು ಹೇಳಿದರು ನಾವೇ ವಾರಿಸುದಾರರು.ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು.
ಶತ್ರುಗಳನ್ನು ಹಿಮ್ಮೆಟ್ಟಿಸಿ ಓಡಿಸುವ ಮೂಲಕ ಸಮರಾರ್ಜಿತ ಸೊತ್ತನ್ನು ಸಂಗ್ರಹಿಸಲು ನಾವು ದಾರಿಮಾಡಿಕೊಟ್ಟೆವು.ಪ್ರವಾದಿ ﷺ ರವರಿಗೆ ರಕ್ಷಣೆ ನೀಡಲು ನಬಿಯವರ ಡೇರೆಯ ಬಳಿ ನಿಂತವರು ಹೇಳಿದರು.ನಾವೇ ವಾರಿಸುದಾರರು ಕಾರಣ ನಾಯಕತ್ವದ ರಕ್ಷಣೆಯ ಹೊಣೆಯನ್ನು ನಾವು ನಿರ್ವಹಿಸುತ್ತಿದ್ದೆವು.ಈ ಹಿನ್ನೆಲೆಯಲ್ಲಿ ಪವಿತ್ರ ಕುರ್‌ಆನ್‌ನ ಎಂಟನೇ ಅಧ್ಯಾಯದ ಮೊದಲ ಶ್ಲೋಕ ಅಲ್ ಅನ್ಫಾಲ್ ಅವತರಿಸಿತು. ಅದರ ಸಾರಂಶ ಹೀಗಿದೆ.
“[ನಬಿಯೇ] ಅವರು ನಿಮ್ಮೊಡನೆ ಯುದ್ಧಾಸ್ತಿಯ ಕುರಿತು ಪ್ರಶ್ನಿಸುತ್ತಾರೆ.ಹೇಳಿರಿ,ಯುದ್ಧಾಸ್ತಿಯು ಅಲ್ಲಾಹು ಮತ್ತು ಅವನ ರಸೂಲರದ್ದು,ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ.ಮತ್ತು ಪರಸ್ಪರ ಸಂಬಂಧಗಳನ್ನು ಸರಿಪಡಿಸಿರಿ.ನೀವು ವಿಶ್ವಾಸಿಗಳಾಗಿದ್ದರೆ ಅಲ್ಲಾಹು ಹಾಗೂ ಅವನ ರಸೂಲರನ್ನು ಅನುಸರಿಸಿರಿ”
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
1 Comment
MUHAMMED AJMAL OLAMATHIL
November 12, 2023مـــــاشــــــــاء الـــلــــّه 🌹