Mahabba Campaign Part-151/365
ಪ್ರವಾದಿಯವರ ﷺ ಯಾತ್ರೆಯು ಪೂರ್ವ ದಿಕ್ಕಿನಲ್ಲಿ ಚಲಿಸಲು ಆರಂಭಿಸಿತು. ಅಲ್ ಅಸ್ವರಿಯ್ಯ ಲಾವಾ ಮಾರ್ಗದ ಬಳಿಯಿಂದಾಗಿತ್ತು ಅವರು ಯಾತ್ರೆ ಮಾಡುತ್ತಿದ್ದದ್ದು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ, ಎಡ ಭಾಗಕ್ಕೆ ತಿರುಗಿದಾಗ, “ಜುಹ್’ಫ” ಎಂಬ ಸ್ಥಳಕ್ಕೆ ತಲುಪಿದರು. ಇಲ್ಲಾಗಿತ್ತು ಪವಿತ್ರ ಕುರ್’ಆನಿನ “ಅಲ್ ಖಸಸ್” ಅಧ್ಯಾಯದ ಎಂಬತ್ತೈದನೇ ಸೂಕ್ತ ಅವತರಿಸಿದ್ದು. ಅದರ ಸಾರಾಂಶವು ಈ ರೀತಿಯಾಗಿದೆ.
“ನಿಮ್ಮ ಮೇಲೆ ಖುರ್’ಆನ್ ಅವತರಿಸಿ, ನಿಯಮಗಳನ್ನು ಕಡ್ಡಾಯಗೊಳಿಸಿದವನು, ನೀವು ಯಾತ್ರೆ ಆರಂಭಿಸಿದ ಅದೇ ಸ್ಥಳಕ್ಕೆ, ಖಂಡಿತ ಪುನಃ ವಾಪಸ್ಸು ಕಳುಹಿಸುವನು” ಅಥವಾ ಅತೀ ಶೀಘ್ರದಲ್ಲಿ, ಪ್ರವಾದಿಯರವನ್ನು ﷺ ಖಂಡಿತ ಪುನಃ ಮಕ್ಕಾ ನಗರಕ್ಕೆ ವಾಪಸ್ಸು ಕಳುಹಿಸುವನು ಎಂದಾಗಿತ್ತು ಅದರ ಅರ್ಥ. ತಾಯಿನಾಡಿನಿಂದ ದೂರ ಸರಿದು ನಿಂತಾಗ ಉಂಟಾಗುವ ನೋವನ್ನು, ತಣಿಸುವ ವಿಧಾನವಾಗಿತ್ತು ಇದು.
ಜುಹ್’ಫದಲ್ಲಿ, ಈ ಹಿಂದೆಯೇ ಪ್ರವಾದಿಯವರು ﷺ ಬಹಳಷ್ಟು ಬಾರಿ ಸಂಚರಿಸಿದ್ದರು. ಅದು ಎಲ್ಲರಿಗೂ ಚಿರಪರಿಚಿತ ಪ್ರದೇಶವಾಗಿತ್ತು. ಈ ಪ್ರದೇಶದ ಮೂಲಕವಾಗಿತ್ತು, ವ್ಯಾಪಾರ ಯಾತ್ರೆಗಳು ಸಂಚರಿಸಿ ಹೋಗುತ್ತಿದ್ದದ್ದು. ನಂತರದ ಕಾಲದಲ್ಲಿ ಅಬ್ಬಾಸ್ಸಿಗರು ನಿರ್ಮಿಸಿದ ಅಲ್’ಯಾ ಅರಮನೆಯ ಅವಶೇಷಗಳು, ಇಲ್ಲಿ ಈಗಲೂ ಕಾಣಲು ಸಾಧ್ಯವಿದೆ. ಈಜಿಪ್ಟ್, ಸಿರಿಯ, ಮುಂತಾದ ದೇಶಗಳಿಂದ ಬರುವ ತೀರ್ಥಯಾತ್ರಿಕರ ಮೀಖಾತ್’ಗಾಗಿ (ಇಹ್’ರಾಮ್ ಕಟ್ಟುವ ಸ್ಥಳ) ನಿರ್ಣಯಿಸಿದ ಗಡಿಭಾಗ ಕೂಡ ಇದೆ ಆಗಿದೆ. ಹಿಜ್’ರಾದ ಎಂಟನೇ ವರ್ಷ, ಮಕ್ಕಾ ವಿಜಯಕ್ಕೆ ತೆರಳುತ್ತಿದ್ದ ದಾರಿಯಲ್ಲಿ, ಪ್ರವಾದಿಯವರ ﷺ ಚಿಕ್ಕಪ್ಪ ಅಬ್ಬಾಸ್’ರನ್ನು ◌ؓ ಭೇಟಿಯಾದದ್ದು ಕೂಡ ಇಲ್ಲೇ ಆಗಿತ್ತು. ಅವರು ಆ ಸಂದರ್ಭದಲ್ಲಿ, ತಮ್ಮ ಕುಟುಂಬ ಸಮೇತವಾಗಿ ಮದೀನಕ್ಕೆ ಪಲಾಯನ ಮಾಡಿ ಬರುತ್ತಿದ್ದರು. ಪ್ರವಾದಿಯವರನ್ನು ﷺ ಭೇಟಿಯಾದ ಬಳಿಕ ಅಲ್ಲಿಂದ ಪುನಃ ಮಕ್ಕ ನಗರಕ್ಕೆ ವಾಪಸ್ಸು ಬಂದರು. ಅದು ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷ ನೀಡಿದ್ದ ಒಂದು ದೃಶ್ಯವೂ ಕೂಡ ಆಗಿತ್ತು.
ಸೌರ್ ಗುಹೆಯಿಂದ ಹೊರಟು, ಎರಡು ದಿನಗಳ ಕಾಲ ನಿರಂತರವಾಗಿ ಯಾತ್ರೆ ನಡೆಸಿ ಮುಂದೆ ಹೋಗುತ್ತಿದ್ದರು. ಅಬೂಬಕ್ಕರ್ ◌ؓ ಪ್ರವಾದಿಯವರಿಗೆ ﷺ ಸಂದರ್ಭಕ್ಕನುಗುಣವಾಗಿ ಸೇವೆಗಳನ್ನು ನೀಡುತ್ತಿದ್ದರು. ಈ ದಾರಿಯು ಅಬೂಬಕ್ಕರ್’ಗೆ ಬಹಳಷ್ಟು ಬಾರಿ ವ್ಯಾಪಾರ ಯಾತ್ರೆ ನಡೆಸಿ ಬಂದಿದ್ದ ಕಾರಣ, ಚಿರಪರಿಚಿತ ದಾರಿಯೂ ಕೂಡ ಆಗಿತ್ತು.
ಗುಹೆಯಿಂದ ಹೊರಗೆ ಬಂದ ಮೂರನೇ ದಿವಸ, ಅಂದರೆ ರಬಿವುಲ್ ಅವ್ವಲ್ ಮೂರು, ಸೆಪ್ಟೆಂಬರ್ ಹದಿನಾಲ್ಕರಂದು, ಪ್ರವಾದಿಯವರ ﷺ ಯಾತ್ರೆಯು ವಾದಿ ಖರ್’ರ ಎಂಬ ಸ್ಥಳದ ಮೂಲಕ, ಖಂಕ್ರೀಕ್’ನಿಂದ ಹಾದು ಹೋಗುತ್ತಿತ್ತು. ಪ್ರಕೃತಿ ರಮಣೀಯವಾಗಿ, ಬಹಳ ಸುಂದರವಾದ ಜಲಪಾತದಿಂದ ಕೂಡಿದ್ದ ಸ್ಥಳವಾಗಿತ್ತು ಇದು. ಹಿಜ್ರಾ ಹತ್ತನೇ ವರ್ಷ, ವಿದಾಯದ ಹಜ್ಜ್ ಯಾತ್ರೆ ಕಳೆದು ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ, ಈ ಖಂಕ್ರೀಕ್’ನಲ್ಲಿ ಪ್ರವಾದಿಯವರು ﷺ ಶಿಬಿರ ಹಾಕಿದ್ದರು. ಅದರ ನಡುವೆ ಪ್ರವಾದಿಯವರು ﷺ ನಡೆಸಿದ್ದ ಭಾಷಣದಲ್ಲಿ, ಅಲಿಯವರನ್ನು ◌ؓ ಪ್ರತ್ಯೇಕವಾಗಿ ಅಭಿನಂದಿಸಿದ ದೃಶ್ಯವು ಇತಿಹಾಸದಲ್ಲಿ ಉಲ್ಲೇಖವಾದದ್ದು ಕಾಣಬಹುದು. ಅದೇ ರೀತಿ ಹಿಜಾಝ್ ಕಣಿವೆ, ಜುಹ್’ಫ್ ಕಣಿವೆ ಎಂಬ ಹೆಸರಿನಲ್ಲಿಯೂ ಈ ಸ್ಥಳವನ್ನು ಕರೆದಿದ್ದಾಗಿಯೂ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾದದ್ದು ಕಾಣಬಹುದು.
ಮತ್ತೊಂದು ಭಾಗದಿಂದ ಮದೀನದ ವಾತಾವರಣವನ್ನು ಹೋಲಿಕೆಯಾಗುವ ಪ್ರದೇಶದಲ್ಲಾಗಿದೆ ಪ್ರವಾದಿಯವರ ﷺ ಯಾತ್ರೆ ಮುಂದುವರಿಯುತ್ತಿದ್ದದ್ದು. ಕೆಲವೊಮ್ಮೆ ಎತ್ತರದ ಪ್ರದೇಶಗಳ ಮೂಲಕ ತೊರೆಗಳನ್ನು ದಾಟಿ ಮುಂದೆ ಹೋದರೆ, ಇನ್ನೂ ಕೆಲವೊಮ್ಮೆ ಇಳಿಜಾರಿನಲ್ಲಿ ಸಂಚರಿಸಿ ಹೋಗುತ್ತಿದ್ದರು, ಇನ್ನೂ ಕೆಲವೊಮ್ಮೆ ಕಣಿವೆಗಳ ಮೂಲಕ ಯಾತ್ರೆ ಮುಂದುವರಿಸುತ್ತಿದ್ದರು. ಹೀಗೆ ಅಲ್ ಮುರ್’ರಃ ಎಂಬ ಪ್ರದೇಶಕ್ಕೆ ಬಂದು ತಲುಪಿದರು. ಅದರ ಪಶ್ಚಿಮ ದಿಕ್ಕಿನಲ್ಲಿ, “ಮಾಅ ಅಹ್’ಯಾ” ಎಂಬ ತೊರೆಯು ಹರಿಯುತ್ತಿತ್ತು. ನಂತರದ ದಿನಗಳಲ್ಲಿ ಪ್ರವಾದಿಯವರು ﷺ, ನಿಯೋಗಿಸಿದ್ದ ಉಬೈದತ್ ಬಿನ್ ಅಲ್ ಹಾರಿಸ್’ರ ನಾಯಕತ್ವದಲ್ಲಿದ್ದ ತಂಡವು, ಅಬೂಸುಫಿಯಾನ್’ರನ್ನು ಎದುರಿಸಿದ್ದು ಈ ತೊರೆಯ ಬಳಿಯಾಗಿತ್ತು. ಅಂದು ಉಬೈದ್’ರ ತಂಡದಲ್ಲಿ ಇದ್ದದ್ದು ಕೇವಲ ಎಂಬತ್ತು ಸ್ವಾಹಾಬಿಗಳು ಮಾತ್ರವಾಗಿದ್ದರು.
“ಮುರ್’ರ” ಗುಡ್ಡಪ್ರದೇಶವನ್ನು ದಾಟಿದ ಕೂಡಲೇ, ಲಖಫ್ ಕಣಿವೆ ಬಳಿ ತಲುಪಿದರು. ಈ ದಾರಿಯಲ್ಲಿ ಕೆಲವೊಂದು ವಿಶಿಷ್ಟವಾದ ಗುರುತುಗಳನ್ನು ಕಾಣಲು ಸಾಧ್ಯವಾಗಿತ್ತು, ಅವುಗಳಲ್ಲಿ ರೀಉ ಅಬೂದುಕವೆಮಃ, ರಿಅ ಅಲ್ ಹುಮಯ್ಯಃ ಎಂಬ ಉಪದಾರಿ ಹಾಗೂ ಸಾದ್ ಕಣಿವೆ ಬಹು ಮುಖ್ಯವಾದದ್ದು ಆಗಿದೆ. ಅಲ್ಲಿಂದ ಮುಂದೆ ಹೋಗಿ ಅಲ್ ಮುಸೈದಿರ ಕಾರಂಜಿಯ ಮೂಲಕ, ಖುಶೂಂ ಗುಡ್ಡದ ಮೇಲೆ ಹೋದರು. ಎತ್ತರದ ಬೆಟ್ಟಗಳ ಮೂಲಕ, ಯಾತ್ರಿಕರು ನೆರಳು ಪಡೆಯುತ್ತಿದ್ದ, ಸಣ್ಣ ಸಣ್ಣ ಗುಡ್ಡಗಳನ್ನು ಹೊಂದಿದ್ದ ಪ್ರದೇಶವಾಗಿತ್ತು, ಮುಸ್’ತಸಿಲ್ಲಾತು ಖುಶೂಮ್ ಎಂದು ಕರೆಯಲ್ಪಡುವ ಈ ಪ್ರದೇಶ. ಹುಮಯ್ಯಾ ದಾರಿಯು ಆರ್ನೂರು ಮೀಟರ್ ಉದ್ದ, ಹಾಗೂ ಸಮುದ್ರ ಭಾಗದಿಂದ ನೂರಾ ಎಂಟು ಮೀಟರ್ ಎತ್ತರವಿರುವ ಸ್ಥಳವಾಗಿದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-152/365
ಈ ದಾರಿಯಲ್ಲಿ ಚಲಿಸುತ್ತಿದ್ದಾಗ ಹಲವಾರು ಸ್ಥಳಗಳಲ್ಲಿ ಪ್ರಾಣಿಗಳಿಗೆ ನೀರು ಕುಡಿಯಲು ಬೇಕಾಗಿ ಸಣ್ಣ ಸಣ್ಣ ಕೊಳಗಳನ್ನು ನಿರ್ಮಿಸಲಾಗಿತ್ತು. ಇವತ್ತಿಗೂ ಹಿಂದಿನ ಕಾಲದ ನೆನಪಿಗಾಗಿ ಕೆಲವೊಂದು ಕಡೆಗಳಲ್ಲಿ ಕೊಳಗಳನ್ನು ನಿರ್ಮಿಸಿದ್ದು ಕಾಣಬಹುದು. ಪ್ರವಾದಿಯವರ ﷺ ಯಾತ್ರೆ, ನೂರ ಐವತ್ತು ಮೀಟರ್ ಸ್ವಾದ್ ಕಣಿವೆಯ ಮೂಲಕ ಮುಂದೆ ಸಾಗಿತು. ಸಮುದ್ರದ ಕಿನಾರೆಯಿಂದ ನೂರಾ ಒಂದು ಮೀಟರ್ ಎತ್ತರದಲ್ಲಿರುವ ಪ್ರದೇಶದಲ್ಲಾಗಿತ್ತು, ಪ್ರವಾದಿಯವರು ﷺ ಸಂಚರಿಸಿ ಮುಂದೆ ಸಾಗುತ್ತಿದ್ದದ್ದು. ಅಲ್ಲಿಂದ ಮುಸೈದಿರ ತೊರೆಯ ರಸ್ತೆಯ ಮೂಲಕ ಮುಂದೆ ಬಂದು, ಸಾವಿರದ ಎಂಟ್’ನೂರು ಮೀಟರ್ ದೂರದಷ್ಟು ಉದ್ದವಿರುವ ರಿಜಿಲಿಯಾನ್ ರಸ್ತೆಯಾಗಿ ಸಂಚರಿಸಿದರು. ಇದು ಸಾಮಾನ್ಯವಾಗಿ ಚಲಿಸುವ ವ್ಯಾಪಾರ ಮಾರ್ಗಕ್ಕೆ ಸಮಾನಂತರವಾದ ಹನ್ನೆರಡು ಕಿ.ಮೀ ಉದ್ದದ ರಸ್ತೆಯಾಗಿತ್ತು. ಈ ದಾರಿಯಲ್ಲಿ ಮುಂದೆ ಸಾಗಿದರೆ ಹಾಮಿಳಃ ಕಣಿವೆ ಹಾಗೂ ಹಯಾ ಒಳಚರಂಡಿ ಇರುವ ಸ್ಥಳಕ್ಕೆ ಬಂದು ತಲುಪುತ್ತದೆ. ಇದು ಸಾಮಾನ್ಯವಾಗಿ ಪರ್ವತ ಪ್ರವಾಹ ಕಡಿಮೆ ಇರುವ ಸ್ಥಳವಾಗಿದೆ. ಗುರುತುಗಳನ್ನು ತಿಳಿಸುವ ಹಳೆಯ ಕಾಲದ ಸಮಾಧಿಗಳನ್ನು ಕೂಡ ಇಲ್ಲಿ ಕಾಣಬಹುದು. ಅಲ್ಲಿಂದ ಮುಂದೆ ಸಾಗಿ, ರಿತ್ವಖ ಕಣಿವೆಯ ಬಳಿ ತಲುಪಿದರು. ಇಲ್ಲಿ ಅಲ್ ಖುಸೈಬ ಲಾವಾ ಮಾರ್ಗಕ್ಕೆ ಸಂಧಿಸುವ ಉಮ್ಮಲ್ ಹಬ್ಬ್ ಎಂಬ ತೊರೆಯನ್ನೂ ಕೂಡ ಕಾಣಬಹುದು. ಅಲ್ಲಿಂದ ಅಲ್ ಖುಸೈಬ ದಾರಿಯ ಮೂಲಕ ವಾದಿ ಅಲ್ ಫರ್’ಯಿಗೆ ತಲುಪಿದರು. (ಕೆಲವು ದಿನಗಳ ಹಿಂದೆ ನಮ್ಮ ಲೇಖಕರು ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು, ಅಷ್ಟೇ ಅಲ್ಲ ಈ ಕಣಿವೆಯ ಬಗ್ಗೆ ಮಾತ್ರ ತಿಳಿಸುವ ಬಹಳಷ್ಟು ಗ್ರಂಥಗಳನ್ನು ಕಾಣಬಹುದು.) ಹಿಜಾಝ್’ನಲ್ಲೇ ಸುಪ್ರಸಿದ್ಧ ಕಣಿವೆಯಾಗಿದೆ ಇದು. ಲಿಖ್’ಫ್, ಮಿಜಾಹ್, ಅಲ್ ಖಾಹಾ ಎಂಬ ಈ ಕಣಿವೆಗಳ ಮೂಲಕ ಹಾದು ಹೋಗುವ ಈ ಪ್ರದೇಶ, ಮದೀನಕ್ಕೆ ಚಲಿಸುವ ಸಮಾನಾಂತರ ರಸ್ತೆಯೂ ಕೂಡ ಆಗಿದೆ. ವಾದಿ ಫರ್’ಯಿನಿಂದ ನಾಲ್ಕು ಕಿ ಮೀ ಮುಂದೆ ಚಲಿಸಿದ ನಂತರ, ಪ್ರವಾದಿಯವರು ﷺ ಲಿಖ್’ಫ್ ಕಣಿವೆಯ ದಾರಿಯಾಗಿ, ಪಶ್ಚಿಮ ದಿಕ್ಕಿನಲ್ಲಿರುವ ಮುಲೈಸಾ ಬೆಟ್ಟದ ಬಳಿ ತಲುಪಿದರು. ಈ ಪರ್ವತವು ನಯವಾದ ಬ್ರಹತ್ ಬಂಡೆಗಳಿಗೆ ಹೆಸರುವಾಸಿಯಾಗಿದೆ. ಅಲ್ಲಿಂದ ಏಳು ಕಿ.ಮೀ ಮುಂದೆ ಸಾಗಿ, ರಿದ್’ವಾನ್ ಎಂಬ ಬಾವಿಯ ಬಳಿ ಬಂದು ತಲುಪಿದರು. ಸೆಪ್ಟೆಂಬರ್ ಹದಿನಾಲ್ಕು, ರಬಿವುಲ್ ಅವ್ವಲ್ ಮೂರರಂದು ರಾತ್ರಿಯಾಗಿತ್ತು ಈ ಸ್ಥಳಕ್ಕೆ ತಲುಪಿದ್ದು, ಅವತ್ತು ರಾತ್ರಿ ಪ್ರವಾದಿಯವರು ﷺ ಹಾಗೂ ಅವರ ಸಹಚರರು ಅಲ್ಲೇ ವಿಶ್ರಾಂತಿ ಪಡೆದುಕೊಂಡರು.
ನಿರಂತರವಾಗಿ ಕಣಿವೆ, ಪರ್ವತಗಳನ್ನು ದಾಟಿದ್ದ ರೋಮಾಂಚನವಾದ ಯಾತ್ರೆಯ ದಿನಗಳಲ್ಲಾಗಿದೆ ನಾವು ಸಂಚರಿಸುತ್ತಿರುವುದು. ಪಲಾಯನದ ಯಾತನೆ, ಪ್ರಯಾಣದಲ್ಲಿ ನಡುವೆ ಎದುರಿಸುತ್ತಿದ್ದ ಕಷ್ಟಗಳನ್ನು ಸಹಿಸುಕೊಂಡು ನಡೆಸುವ ಯಾತ್ರೆಯಾಗಿದೆ ಇದು. ಪ್ರತಿಯೊಂದು ಬೆಟ್ಟ, ಪರ್ವತ ಶ್ರೇಣಿಗಳಿಗೂ, ಅದರ ಇಳಿಜಾರು ಪ್ರದೇಶಕ್ಕೂ ಅದರದ್ದೇ ಆದ ಹೆಸರುಗಳಿವೆ. ಮುಹಮ್ಮದ್ ﷺ
ಎಂಬುವುದು ಕೇವಲ ಒಂದು ದಂತಕಥೆಯ ಭಾಗವಲ್ಲ, ಸಾವಿರಾರು ಐತಿಹಾಸಿಕ ಸಾಕ್ಷಿಗಳ ಮೂಲಕ ಜೀವಿಸಿ ಹೋದ, ಮಹಾ ವ್ಯಕ್ತಿತ್ವವಾಗಿದ್ದರು ಎಂಬುದನ್ನು ಇಂತಹ ಚರಿತ್ರೆಗಳು ನಮಗೆ ತಿಳಿಸುತ್ತದೆ. ಮನುಷ್ಯ ಜೀವನದ ತಾಪ, ಒತ್ತಡವನ್ನು ಅರಿತು, ಅನುಭವಿಸಿದ ಅವರು, ತಮ್ಮ ಪ್ರಾಯೋಗಿಕ ಜೀವನದ ಮೂಲಕ ಮನುಷ್ಯನಿಗೆ ಅಗತ್ಯವಿರುವ ಉಪದೇಶಗಳನ್ನು ನೀಡುತ್ತಿದ್ದರು.
ಸರಿ ನಾವು ಮತ್ತೊಮ್ಮೆ ಹಿಜ್ರಾದ ದಿನಗಳ ಕಡೆಗೆ ಮರಳೋಣ. ಗುರುವಾರ ಬೆಳಿಗ್ಗೆ ಪ್ರವಾದಿಯವರ ಯಾತ್ರೆ ಪುನಃ ಮುಂದುವರಿಯಿತು. ಲಖ್’ಫ್ ತೊರೆಯ ಮೂಲಕ ಮುಂದೆ ಸಾಗಿದರು. ಈ ಕಣಿವೆ ಹೋಗಿ ತಲುಪುವುದು ಮಿಜಾಹ್ ಕಾಲುವೆ ಬಳಿಯಾಗಿತ್ತು. ಸುಮಾರು ಇನ್ನೂರು ಮೀಟರ್ ಮುಂದೆ ಸಾಗಿದ ನಂತರ ಕಣಿವೆಗಳ ಸಂಗಮದಲ್ಲಿರುವ ಮುಬೈರಿಕ್ ಬಾವಿಯ ಬಳಿ ತಲುಪಿದರು. ವ್ಯಾಪಾರ ಯಾತ್ರಿಕರು ಹಾಗೂ ಇತರ ಸಾಮಾನ್ಯ ಯಾತ್ರಿಕರು ಕೂಡ ಸಾಮಾನ್ಯವಾಗಿ ಅಂದು ಶಿಬಿರ ಹಾಕುತಿದ್ದದ್ದು, ಲಭ್ಯವಿರುವ ಬಾವಿಯ ಬಳಿಯಾಗಿತ್ತು. ಹಾಗಾಗಿ ಅರೇಬಿಯನ್ ಯಾತ್ರೆಗಳಲ್ಲಿ ಪ್ರಮುಖ ಸ್ಥಳ ಸೂಚಕವಾಗಿ ಬಾವಿಯನ್ನು ಬಳಸುವುದು ಸಾಮಾನ್ಯವಾಗಿತ್ತು. ನಂತರದ ದಿನಗಳಲ್ಲಿ ಸ್ಥಳಗಳನ್ನು ಕೂಡ ಬಾವಿಯ ಹೆಸರಿನಿಂದಲೇ ಕರೆಯಲಾಗಿತ್ತು. “ಅಬ್’ಯಾರ್ ಅಲಿ” ಎಂಬ ಹೆಸರು ಅದಕ್ಕೊಂದು ಉದಾಹರಣೆಯಾಗಿದೆ. ಬಾವಿ ಎಂಬುವುದಕ್ಕೆ ಅರೆಬಿ ಪದವಾದ “ಬಿಅರ್” ಎಂಬುದನ್ನು ಸೇರಿಸಿಯಾಗಿದೆ ಅಬ್’ಯಾರ್ ಎಂದು ಕರೆಯುವುದು.
ದುಲ್ ಅಸವೈನ್, ಮಿಜಾಹ್ ಎಂಬ ತೊರೆಗಳನ್ನು ದಾಟಿ, ಪ್ರವಾದಿಯವರ ﷺ ವಾಹನ ಉಮ್ಮು ಕಮ್’ದ್ ಕಣಿವೆ ಬಳಿ ತಲುಪಿತು. ಈ ಇಳಿಜಾರಿನಲ್ಲಿರುವ ದಾರಿಯನ್ನು ಕೂಡ ಉಮ್ಮುಕಶದ್ ಎಂಬ ಹೆಸರಿನಲ್ಲಾಗಿದೆ ಕರೆಯಲ್ಪಡುವುದು.
ಸುಮಾರು ಒಂದೂವರೆ ಸಹಸ್ರಮಾನದ (1500 ವರ್ಷ) ಹಿಂದೆ ನಡೆದು ಬಂದ ಅದೇ ದಾರಿಯಲ್ಲಿ, ಡಾ ಅಬ್ದುಲ್ಲಾಹ್ ಅಲ್ ಖಾಳಿಯವರು, ಸಂಶೋಧಕರ ತಂಡದೊಂದಿಗೆ ನಡೆಸಿದ ಪ್ರವಾಸ ಅಧ್ಯಯನ ಆಧಾರದ ಮೇಲೆ ಉಲ್ಲೇಖಿಸಲಾದ ವಿವರಗಳನ್ನಾಗಿದೆ ನಾವೀಗ ಓದುತ್ತಿರುವುದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-153/365
ಪ್ರವಾದಿಯವರು ﷺ ಹಾಗೂ ಅವರ ಸಹಚರರು ಉಮ್ಮುಕಷ್’ದ್ ಕಣಿವೆಯ ಮೂಲಕ (ವಾದಿ ತಖೀಬ್) ವಾಯುವ್ಯ ದಿಕ್ಕಿನಲ್ಲಿರುವ ಉಜಯ್’ರಿದ್ ಕಣಿವೆಯ ಬಳಿ ಬಂದು ಅಲ್ಲಿಂದ ಈಶಾನ್ಯ ದಿಕ್ಕಿಗೆ ಚಲಿಸಿದರು.
ಉಜೈರಿದ್ ಕಣಿವೆಯನ್ನು, ದೀ ಸಲಾಂ ಕಣಿವೆಗೆ ತಲುಪಿಸುವ, ಬತ್ನ್’ರಿಯಿಯ ಅಥವಾ ರಿಅ ರಸ್ತೆಯ ಮೂಲಕವಾಗಿತ್ತು ಯಾತ್ರೆ ಮುಂದೆ ಸಾಗಿದ್ದು.
ಅಲ್ಲಿಂದ ದೀ ಸಲಮಿನಿಂದ ಆರು ಕಿ.ಮೀ ಬಂಡೆ ಕಲ್ಲುಗಳು ಇರುವ ಕಣಿವೆಯ ಮೂಲಕ ಮದ್’ಲಜತ್ತ್ ತಿಹಿನ್ ಎಂಬ ಒಣಗಿದ ಜಲಮಾರ್ಗದ ಕಡೆಗೆ ಸಾಗಿದರು. ಅಲ್ಲಿಂದ ತಿಹಿನ್ ಕಣಿವೆಯ (ವಾದಿ ತಿಹಿನ್) ಮೂಲಕ ಅಲ್ ಕಹಾಹ್ (ವಾದಿ ಅಲ್ ಖಹ) ಕಣಿವೆಯ ಕಡೆಗೆ ಮುಂದೆ ಸಾಗಿದರು. ಇತಿಹಾಸ ಪ್ರಸಿದ್ಧ ಪ್ರವಾದಿ ಪ್ರೇಮ ಕಾವ್ಯವಾದ ಬುರ್ದಾದ ಮೊದಲನೇ ಸಾಲಿನಲ್ಲಿ ಉಲ್ಲೇಖಿಸಲಾದ ದೀಸಲಮ್ ಈ ಪ್ರದೇಶವಾಗಿರಬಹುದು. ಯಾಕೆಂದರೆ ಸಲಮ್ ಎಂಬ ವಿಶೇಷ ಜಾತಿಯ ಸಸ್ಯಗಳು ಬೆಳೆಯುವ ಪದೇಶವಾಗಿದೆ ಇದು. ಈಗಲೂ ಕೂಡ ಸಲಮ್ ಸಸ್ಯಗಳಿಂದ ತುಂಬಿದ ಕಣಿವೆಗಳನ್ನು ಕಾಣಲು ಸಾಧ್ಯವಿದೆ. ನಮ್ಮ ಲೇಖಕರಿಗೂ ಈ ಸ್ಥಳವನ್ನು ವೀಕ್ಷಿಸುವ ಅವಕಾಶ ಲಭಿಸಿತ್ತು.
ದೀಸಲಂ ಕಣಿವೆಯಿಂದ ಹೊರಟ ನಂತರ, ಯಾತ್ರೆಯ ನಡುವೆ ಮೂರನೇ ಮದ್’ಲಜತ್ತ್ ಅಥವಾ ಒಣಗಿದ ಜಲಮಾರ್ಗವನ್ನು ನೋಡಿದರು. ತಿಹಿನ್ ಕಣಿವೆಗೆ (ವಾದಿ ತಿಹಿನ್) ಪ್ರವೇಶಿಸುವ ಮದ್’ಲಜತ್ತ್ ತಿಹಿನ್ ಎರಡು ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿತ್ತು. ಪೂರ್ವದಲ್ಲಿ ಅಲ್ – ಕಬ್’ಷ್ (ಜಬಲ್ ಅಲ್ ಕಬ್’ಷ್) ಹಾಗೂ ಪಶ್ಚಿಮದಲ್ಲಿ ಮೌಂಟ್ ಅಲ್ ಕಂರ (ಜಬಲ್ ಅಲ್ ಕಂರ).
ಅಲ್ಲಿಂದ ಮುಂದು ಸಾಗಿ, ಅಲ್ ಗುಸ್’ರಿಯಾನಕ್ಕೆ (الغثريانة) ತಲುಪಿದರು. ಅಲ್ ಗುಸ್’ರಿಯಾನ ಎಂಬುವುದು ತಿಹಿನ್ ಕಣಿವೆಯಿಂದ ಅಲ್ ಖಹ ಕಣಿವೆಯವರೆಗೆ ವ್ಯಾಪಿಸಿರುವ ವಿಶಾಲವಾಗಿ, ಸಮತಟ್ಟಾದ ರಸ್ತೆಯಾಗಿದೆ. ಇದು ಸಾಮಾನ್ಯವಾಗಿ ಎಲ್ಲಾ ಯಾತ್ರಿಕರು ಕೂಡ ಸಂಚರಿಸುತ್ತಿದ್ದ ರಸ್ತೆಯಾಗಿತ್ತು. ಅಲ್ ಅಬಾಬಿದ್, ಅಲ್ ಅಬಾಬಿಬ್ ಎಂಬ ಈ ಹೆಸರುಗಳಿಂದಲೂ ಈ ಅಲ್ ಗುಸ್’ರಿಯಾನ್ ಸ್ಥಳವನ್ನು ಕರೆಯಲಾಗುತ್ತದೆ.
ಹಿಜಾಝಿನಲ್ಲಿ ಅತ್ಯಂತ ಉದ್ದವಾದ ಕಣಿವೆಯಾಗಿದೆ ಈ ಅಲ್ ಖಹ ಕಣಿವೆ. ಉತ್ತರದಲ್ಲಿ ಅಲ್ ತಾಲೂಬಿನ ಬಾವಿಯಿಂದ (ಬಿನ್ ಅಲ್ ತಾಲೂಬ್) ದಕ್ಷಿಣದಲ್ಲಿ ಎಪ್ಪತ್ತು ಕಿ.ಮೀ ವರೆಗೆ ವ್ಯಾಪಿಸಿ, ಇನ್ನೂ ಎರಡು ಕಣಿವೆಯ ಮೂಲಕ ಈ ದಾರಿಯು ಕೊನೆಗೊಳ್ಳುತ್ತದೆ. ಅಲ್ ಫಾರ್, ಅಲ್ ಅಬ್ವ (ವಾದಿ ಅಲ್ ಅಬ್ವ) ಇತ್ಯಾದಿಯಾಗಿದೆ ಆ ಸ್ಥಳಕ್ಕೆ ಇರುವ ಹೆಸರುಗಳು. ಅಲ್ ಖಹ ಕಣಿವೆಯ ಮೇಲೆ ಇರುವ ದಾರಿಯು, ಕಾರವನ್ ವ್ಯಾಪಾರ ರಸ್ತೆಯ ಭಾಗವಾಗಿತ್ತು. ದರ್ಬ್ ಅಲ್ ಅಂಬಿಯ (ಪ್ರವಾದಿಗಳ ರಸ್ತೆ ) ಎಂದೂ ಈ ಸ್ಥಳವನ್ನು ಕರೆಯಲಾಗುತ್ತದೆ. ತೀರ್ಥ ಯಾತ್ರಿಕರ, ಸರಕುಗಳನ್ನು ಹೊತ್ತಿರುವ ವಾಹನಗಳು ಸಂಚರಿಸಿ ಹೋಗುವ ರಸ್ತೆ ಕೂಡ ಆಗಿದೆ. ಹಿಜ್’ರಾದ ಅಪೂರ್ವ ಸಂದರ್ಭದಲ್ಲಿ, ಒಮ್ಮೆ ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ಕೂಡ ಮದೀನಕ್ಕೆ ಹೋಗಲು ಈ ದಾರಿಯನ್ನು ಬಳಸಿದರು. ಎಲ್ಲಾ ಪ್ರವಾದಿಗಳು, ಬುದ್ದಿಜೀವಿಗಳು, ಪಂಡಿತರು ಕೂಡ ಪವಿತ್ರ ಮಕ್ಕಾ ನಗರಕ್ಕೆ ಯಾತ್ರೆ ಹೋಗಲು ಈ ರಸ್ತೆಯ ಮೂಲಕ ಸಂಚರಿಸಿರುವುದು ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬಾರಿ ಉಲ್ಲೇಖಿಸಿರುವುದು ಕಾಣಬಹುದು.
ಅಲ್ ಖಹ ಕಣಿವೆಯಿಂದ, ಹೊರಟ ನಂತರ, ಅಲ್ ತಾಲೂಬಿನ (ಬಿರ್ ಅಲ್ ತಾಲೂಬ್) ಬಾವಿಯ ಬಳಿ ತಲುಪಿದರು. ಅದನ್ನು ಇಂದು ಅಲ್ ಹಫ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಅಲ್ ಖಹ ಕಣಿವೆಯ ಉತ್ತರ ದಿಕ್ಕಿನಲ್ಲಿರುವ ಈ ಸ್ಥಳದಿಂದ ಮದೀನಕ್ಕೆ ಎರಡು ವಿಭಿನ್ನವಾದ ದಾರಿಗಳಿವೆ. ಯಾತ್ರಿಕರಿಗೆ ಬೇಕಿದ್ದರೆ ಅಲ್ ಮುನ್’ಸರಫ್ ದಾರಿಯಲ್ಲಿ ಮದೀನಕ್ಕೆ ಹೋಗಬಹುದು, (ನಂತರದ ದಿನಗಳಲ್ಲಿ ಅಲ್ ಮುಸೈಜಿದ್ ಎಂಬ ಹೆಸರಿನಿಂದ ಈ ಸ್ಥಳವನ್ನು ಕರೆಯುತ್ತಿದ್ದರು.) ಅಥವಾ ಶಿಹಾಬು ಫೈದಿನ ರಸ್ತೆಯ ಮೂಲಕವೂ ಸಂಚರಿಸಬಹುದು. ಅದೇ ರೀತಿ ರಿ ಅಲ್ ಅಖನ್’ಖಲಿಲ್ ಎಂಬ ದಾರಿಯ ಮೂಲಕವೂ ಹಾದು ಹೋಗುವ ವ್ಯಾಪಾರ ರಸ್ತೆಯ ಮೂಲಕವೂ ಕೂಡ ಹೋಗಬಹುದು. ಪ್ರವಾದಿಯವರು ﷺ ಹಾಗೂ ಅವರ ಸಹಚರರು, ಅಲ್ ಮುನ್’ಸರಫಿರಿಗೆ ಹೋಗಲು, ಸ್ವಲ್ಪ ಹೊತ್ತು ಉತ್ತರದ ರಸ್ತೆಯನ್ನು ಆಯ್ಕೆ ಮಾಡಿದರು.
ಸೆಪ್ಟೆಂಬರ್ 16 ಶುಕ್ರವಾರ, ರಬಿವುಲ್ ಅವ್ವಲ್ ಐದರೆಂದು, ಪ್ರವಾದಿಯವರು ﷺ ಅಲ್ ಅರ್’ಜ್ ಕಣಿವೆಯ ಅಲ್ ಅರ್’ಜ್ ಗ್ರಾಮದ ಮೂಲಕ ಸಂಚರಿಸಿದರು. “ಅರ್’ಜ್ ಎಂಬ ಪದ ಈ ಕಣಿವೆಯ ತಿರುವು ಮುರುವಿನ ರಸ್ತೆಯ ಕಾರಣದಿಂದಾಗಿದೆ ಬಂದಿದ್ದು. ಹಿಜ್’ರಾದ ಎಂಟನೇ ವರ್ಷ ಮಕ್ಕಾ ವಿಜಯಕ್ಕೆ ತೆರಳುತ್ತಿದ್ದ ಯಾತ್ರೆಯಲ್ಲಿ, ಹದಿನಾಲ್ಕು ಸಾವಿರ ಶಕ್ತಿಶಾಲಿ ಮುಸ್ಲಿಂ ಸೈನ್ಯವು ಅಲ್ ಅರ್’ಜ್’ನ ಇಕ್ಕಟ್ಟಿನ ದಾರಿಯಲ್ಲಾಗಿತ್ತು ಸಂಚರಿಸಿದ್ದದ್ದು, ಆ ಸಂದರ್ಭದಲ್ಲಿ ಒಂದು ಶ್ವಾನವು ತನ್ನ ಮರಿಗಳಿಗೆ ಹಾಲುಣಿಸುತಿದ್ದದ್ದು ಪ್ರವಾದಿಯವರಿಗೆ ﷺ ಕಾಣಲು ಸಾಧ್ಯವಾಯಿತು. ಅವುಗಳಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಪ್ರವಾದಿಯವರು ﷺ, ಜಮೀಲ್ ಬಿನ್ ಸುರಾಖ ಎಂಬ ವ್ಯಕ್ತಿಯನ್ನು ಅವುಗಳ ರಕ್ಷಣೆಗಾಗಿ ಕಾವಲು ನಿಲ್ಲಿಸಿದರು. ಸಂಪೂರ್ಣ ಸೈನ್ಯ ಆ ಕಣಿವೆಯನ್ನು ದಾಟಿ ಹೋಗುವ ವರೆಗೂ ಅವರು ಅಲ್ಲೇ ಕಾವಲು ನಿಂತಿದ್ದರು.
ನಂತರದ ಕಾಲದಲ್ಲಿ ಈ ದಾರಿಯ ಮೂಲಕ ಪ್ರವಾದಿಯವರು ﷺ ಬಹಳಷ್ಟು ಬಾರಿ ಸಂಚರಿಸಿದ್ದರು. “ಖೈಲೂಲತ್” ಅಥವಾ ಮಧ್ಯಾಹ್ನದ ನಿದ್ದೆ ಮಾಡಲು ಈ ಸ್ಥಳವನ್ನು ಆಯ್ಕೆ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಈ ಸ್ಥಳದಲ್ಲಿ ಒಂದು ಮಸ್ಜಿದ್’ನ್ನು ನಿರ್ಮಿಸಲಾಯಿತು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-154/365
ಸೆಪ್ಟೆಂಬರ್ ಹದಿನೇಳು, ರಬಿವುಲ್ ಅವ್ವಲ್ ಆರರಂದು ಶನಿವಾರ, ಸೌರ್ ಗುಹೆಯಿಂದ ಹೊರಟ ಪ್ರವಾದಿಯವರು ﷺ ಹಾಗೂ ಅವರ ಸಹಚರರು, ಆರನೇ ದಿವಸ ಅಲ್ ಅರ್’ಜಿಲ್’ನಿಂದ ಹೊರಟು, ಮಿಷಿವಾನ್ ಪರ್ವತದ ಮೇಲ್ಬಾಗದಿಂದ ರುಕುಬ ಪರ್ವತದ ಬಲ ಭಾಗದಲ್ಲಿ (ದಕ್ಷಿಣದ ದಿಕ್ಕಿನಲ್ಲಿ) ನಡೆದುಕೊಂಡು ರೀಮ್ (ವಾದಿ ರೀಂ) ಕಣಿವೆಗೆ ತಲುಪಿದರು. ಔಫ್ ಪರ್ವತ ಶ್ರೇಣಿಯ (ಜಬಲ್ ಔಫ್) ಹಾಗೂ, ಮೌಂಟ್ ವರ್’ಖಾನ್’ರ (ಜಬಲ್ ವಾರ್’ಗನ್) ನಡುವೆ ಇರುವ ಸ್ಥಳವಾಗಿದೆ ರುಕುಬ ಪರ್ವತ.
ಅಲ್ ಗೈರ್ (ಸನಿಯತ್ ಅಲ್ ಗೈರ್) ಇಳಿಜಾರಿನಿಂದ ಸ್ವಲ್ಪ ದೂರ, ಮಿಷಿರ್’ವಾನ್ ಪರ್ವತದ ಮೇಲಿಂದ ಯಾತ್ರೆ ಮುಂದುವರಿಸಿದರು. ಮಿಷಿರ್’ವಾನ್ ಪರ್ವತ ಹಾಗೂ ರುಕುಬ ಪರ್ವತವನ್ನು ನೋಡುವಾಗ ಪರಸ್ಪರ ಒಟ್ಟಿಗೆ ಇರುವ ಹಾಗೆ ಭಾಸವಾಗುತ್ತದೆ. ಒಂದು ಪರ್ವತ ಎಲ್ಲಿಂದ ಆರಂಭವಾಗಿದೆ ಎಂದು ತಿಳಿಯುವುದು ಕಷ್ಟವಾದರೆ, ಇನ್ನೊಂದು ಪರ್ವತ ಎಲ್ಲಿ ಕೊನೆಗೊಂಡಿದೆ ಎಂಬುದನ್ನು ನಿರ್ಧರಿಸುವುದು ಕೂಡ ಸ್ವಲ್ಪ ಕಷ್ಟದಾಯಕವಾಗುತ್ತದೆ.
ಅಲ್ ಗೈರ್ ರಸ್ತೆಯಲ್ಲಿ ಸಂಚರಿಸುವಾಗ, ವರ್ಖಾನ್ ಪರ್ವತದ, ಬೇರೆ ಬೇರೆ ಭಾಗಗಳ ದೃಶ್ಯಗಳನ್ನು ಕಾಣಲು ಸಾಧ್ಯವಿದೆ. ಅವುಗಳು ಬಹಳ ಸುಂದರವಾದ ರೋಮಾಂಚನ ದೃಶ್ಯವಾಗಿದೆ. ಹಿಂದಿನ ಕಾಲದಲ್ಲಿ ಈ ಪರ್ವತಕ್ಕೆ ಮೌಂಟ್ ಹಂತ್ (ಜಬಲ್ ಹಂತ್) ಎಂದು ಕರೆಯುತ್ತಿದ್ದರು. ಇಂದು ಈ ಬೆಟ್ಟದ ಪೂರ್ವ ದಿಕ್ಕಿನಲ್ಲಿ, ಹಾಬ್’ತ್’ರ ಸಣ್ಣ ಗುಡಿಸಲು ಇರುವುದು ಕಾಣಬಹುದು. ವಿದಾಯದ ಹಜ್ಜ್ ಸಂದರ್ಭದಲ್ಲಿ, ಇದೆ ಪರ್ವತದ ಮೂಲಕವಾಗಿತ್ತು ಪ್ರವಾದಿಯವರು ﷺ ಮದೀನದಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಹೋದದ್ದು. ಇದೇ ಯಾತ್ರೆಯಲ್ಲಿ ರೌಹಾನಿಗೂ ಮುಂದೆ, ಇರ್’ಖುಳ್ಳಂಬಿಯ ಎಂಬ ಸ್ಥಳದಲ್ಲಿ ಇಳಿದು ಪ್ರವಾದಿಯವರು ﷺ ನಮಾಝ್ ಮಾಡಿದ್ದರು. ಇಂದು ಆ ಸ್ಥಳದಲ್ಲಿ ಮಸ್ಜಿದ್’ಗಳು ಇರುವುದು ಕಾಣಬಹುದು. ಈ ಸ್ಥಳದಲ್ಲಿ ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ, ಈ ಪರ್ವತಕ್ಕಿರುವ ಹೆಸರು ಏನೆಂದು ನಿಮಗೆ ಗೊತ್ತೇ.? ಎಂದು ಕೇಳಿದ್ದರು. ಅದಕ್ಕೆ ಅವರು ಅಲ್ಲಾಹನು ಹಾಗೂ ಅವನ ಸಂದೇಶ ವಾಹಕರಲ್ಲದೆ ನಮಗೆ ಗೊತ್ತಿಲ್ಲ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ, “ಇದು ಹಂತ್ ಪರ್ವತವಾಗಿದೆ. ಇದು ಸ್ವರ್ಗದ ಸಾಲಿನ ಬೆಟ್ಟಗಳಲ್ಲಿ ಒಂದಾಗಿದೆ, ಅಲ್ಲಾಹನು ನಮಗೂ, ಇದಕ್ಕೆ ಸಂಬಂಧ ಪಟ್ಟವರಿಗೂ ಅನುಗ್ರಹ ನೀಡಲಿ ಎಂದು ಹೇಳಿದರು”.
ಅಲ್ಲಿಂದ ಮುಂದೆ ಸಾಗಿ, ಅಲ್ ರಾಸ್ (ವಾದಿ ಅಲ್ – ರಾಸ್) ಕಣಿವೆಯ ಮೂಲಕ ಯಾತ್ರೆ ಮುಂದುವರಿಸಿದರು. ಹಫ್’ರ್ ಕಣಿವೆಯ ಕಡೆಗೆ ಅವರು ಸಂಚರಿಸಿದ ಇಕ್ಕಟ್ಟಿನ ದಾರಿಯಾದ ರಿ ಅಲ್ ರಾಸಿನ ಮೂಲಕ ಅವರು ಸಂಚರಿಸುತ್ತಾ ಮುಂದೆ ಸಾಗಿದರು. ಆರು ಕಿ.ಮೀ ಮಾತ್ರ ಉದ್ದವಿರುವ ಈ ಸಣ್ಣ ಕಣಿವೆಯನ್ನು ದಾಟಿ ರೀಮ್ ಕಣಿವೆಗೆ ತಲುಪಿದರು.
ಅಲ್ ಖಲೈಖಿಗೆ ಇರುವ ಯಾತ್ರೆಯಲ್ಲಿ ರೀಮ್ ಕಣಿವೆಯ ಮೂಲಕ, ಬಿಡುವಿಲ್ಲದ ಕಾಲುದಾರಿಯ ಮೂಲಕ ಯಾತ್ರೆ ಗುಂಪು ಮುಂದೆ ಸಾಗಿತು. ಅಲ್ ಗೈರಿನ ಇಳಿಜಾರಿನ ಮೂಲಕ ಮುಂದೆ ಬಂದ ನಂತರ ನಲ್ವತ್ತೆರಡು ಕಿ.ಮೀ ಉದ್ದವಿರುವ ಈ ಕಣಿವೆಯಲ್ಲಿ ಸಂಚರಿಸಲೇ ಬೇಕು. ಯಾತ್ರೆಯ ಮದ್ಯೆ ದಣಿವು ಆಗದೆ ಇರಲು, ಸಹಾಯಕ್ಕಾಗಿ ಬಹಳಷ್ಟು ವ್ಯಾಪಾರಗಳನ್ನು ನಡೆಸಲಾಗುತ್ತದೆ. ಉಮ್ಮು ಮಅ್’ಬದ್’ರ ಪತಿ ಪ್ರವಾದಿಯವರನ್ನು ﷺ ಭೇಟಿಯಾದದ್ದು ಕೂಡ ಇದೇ ಸ್ಥಳದಲ್ಲಿ ಆಗಿತ್ತು. ತಮ್ಮ ಗುಡಿಸಲಿಗೆ ಬಂದ ವ್ಯಕ್ತಿಯ ವಿಸ್ಮಯಕಾರಿ ವಿಷಯಗಳನ್ನು ತಿಳಿದು, ಅವರನ್ನು ಭೇಟಿಯಾಗಲು ನೂರ ಎಪ್ಪತ್ತು ಕಿ.ಮೀ ಸಂಚರಿಸಿ ಇಲ್ಲಿಗೆ ತಲುಪಿದ್ದರು. ರೀಮ್ ಕಣಿವೆಯ ಬಳಿ ಪ್ರವಾದಿಯವರನ್ನು ﷺ ಭೇಟಿಯಾಗಿ, ತಕ್ಷಣವೇ ಇಸ್ಲಾಮ್ ಕೂಡ ಸ್ವೀಕರಿಸಿದರು. ಅಕ್ತಮ್ ಬಿನ್ ಅಬ್’ದಿಲ್ ಉಝ್ಝಾ ಎಂದಾಗಿತ್ತು ಅವರ ನಿಜವಾದ ಹೆಸರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-155/365
ಇನ್ನೂ ಪ್ರವಾದಿಯವರು ﷺ ಸೌರ್ ಗುಹೆಯಿಂದ ಪಲಾಯನ ಮಾಡಿ ಹೊರಟ, ಆರನೇ ದಿನದ ಯಾತ್ರೆಯಲ್ಲಿ ನಾವು ಸಂಚರಿಸೋಣ. ಇದರ ನಡುವೆ ಉಂಟಾದ ಒಂದು ಘಟನೆಯನ್ನು ಉರ್ವ ಉಂಬವರು ತನ್ನ ತಂದೆಯಿಂದ ಉಲ್ಲೇಖಿಸಿದ ಘಟನೆಯನ್ನು, ಇಮಾಮ್ ಬುಖಾರಿಯವರು ◌ؓ ಈ ರೀತಿಯಾಗಿ ವಿವರಿಸುತ್ತಾರೆ. ಝುಬೈರ್’ರ ◌ؓ ನಾಯಕತ್ವದಲ್ಲಿ, ಶಾಮಿನಿಂದ ಹಿಂತಿರುಗಿ ಬರುತ್ತಿದ್ದ ವ್ಯಾಪಾರದ ಗುಂಪನ್ನು ಪ್ರವಾದಿಯವರು ﷺ ದಾರಿಯಲ್ಲಿ ಭೇಟಿಯಾದರು. ಅವರು ಪ್ರವಾದಿಯವರಿಗೆ ﷺ ಧರಿಸಲು ಉಡುಪೊಂದನ್ನು ಉಡುಗೊರೆಯಾಗಿ ಕೊಟ್ಟರು. ಇಮಾಮ್ ಬೈಹಕಿಯವರ ಉಲ್ಲೇಖದಲ್ಲಿ, ದಾರಿಮಧ್ಯದಲ್ಲಿ ತ್ವಲ್’ಹತ್ ಬಿನ್ ಉಬೈದಿಲ್ಲಾಹಿಯವರನ್ನು ಪ್ರವಾದಿಯವರು ﷺ ಭೇಟಿಯಾದರು. ಅವರು ಬಹುಶಃ ಪ್ರವಾದಿಯವರನ್ನು ﷺ ಭೇಟಿಯಾಗಲೆಂದೇ ಬಂದಿರಬಹುದು ಅಥವಾ ಉಮ್ರಾ ಯಾತ್ರೆ ಉದ್ದೇಶಿಸಿಯೂ ಆಗಿರಬಹುದು. ಅವರು ಶಾಮಿನಿಂದ ತಂದಿದ್ದ ಉನ್ನತ ದರ್ಜೆಯ ಬಟ್ಟೆಯನ್ನು, ಪ್ರವಾದಿಯವರು ﷺ ಹಾಗೂ ಅಬುಬಕ್ಕರಿಗೂ ◌ؓ ನೀಡಿದರು. ಅವರಿಬ್ಬರೂ ಅದನ್ನು ಧರಿಸಿದರು.
ಅನಸ್ ಬಿನ್ ಮಾಲಿಕ್’ರು ◌ؓ ಅಸ್ಲಾಮ್ ಜನಾಂಗದ ಒಬ್ಬರಿಂದ ಉಲ್ಲೇಖಿಸಿದ ಘಟನೆ ಈ ರೀತಿಯಾಗಿದೆ. ಪ್ರವಾದಿಯವರು ﷺ ಹಾಗೂ ಅಬೂಬಕ್ಕರ್’ರು ◌ؓ ಮದೀನಕ್ಕೆ ಪಲಾಯನ ಮಾಡುವುದರ ನಡುವೆ, ಜುಹ್’ಫದ ಬಳಿ ನಮ್ಮ ಒಂಟೆಗಳನ್ನು ಕಟ್ಟಿ ಹಾಕಿದ್ದ ಸ್ಥಳಕ್ಕೆ ಬಂದು ತಲುಪಿದರು. ಆಗ ಪ್ರವಾದಿಯವರು ﷺ ಇದು ಯಾರದ್ದು, ಇಷ್ಟೊಂದು ಒಂಟೆಗಳು ಎಂದು ಕೇಳಿದಾಗ, ಅಲ್ಲಿದ್ದವರು ಅದು ಅಸ್ಲಮ್ ಜನಾಂಗದ ಒಬ್ಬ ವ್ಯಕ್ತಿಯ ಒಂಟೆಗಳಾಗಿದೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ, ಅಸ್ಲಮ್ ಎಂಬ ಪದದ ಸುರಕ್ಷತೆ ಎಂಬ ಅರ್ಥವನ್ನು ಸೂಚಿಸಿ, ಇನ್ಷಾ ಅಲ್ಲಾಹ್ ನಾವು ಕೂಡ ರಕ್ಷೆ ಹೊಂದಿದವು ಎಂದು ಹೇಳಿದರು. ಅದಕ್ಕೆ ಅಲ್ಲೇ ಇದ್ದ, ಹದೀಸ್ ಉಲ್ಲೇಖಿಸಿದ ವ್ಯಕ್ತಿ ಹೇಳುವುದು ಕಾಣಬಹುದು, ತಕ್ಷಣವೇ ನನ್ನ ತಂದೆ ಅಲ್ಲಿಗೆ ಬಂದರು. ಅವರು ಪ್ರವಾದಿಯವರಿಗಾಗಿ ﷺ, ಒಂಟೆಯೊಂದನ್ನು ಸಿದ್ದಪಡಿಸಿ ಕೊಟ್ಟು, ಅವರ ಸೇವೆಗಾಗಿ ಮಸ್’ವೂದ್ ಎಂಬ ಸೇವಕನನ್ನು ಜೊತೆಯಲ್ಲಿ ಕಳುಹಿಸಿದರು.
ಇಮಾಮ್ ಬೈಹಕಿ ◌ؓ ಉಲ್ಲೇಖಿಸಿದ, ಇನ್ನೊಂದು ಘಟನೆಯನ್ನೂ ತಿಳಿಯೋಣ, ಖೈಸು ಬಿನ್ ನುಅ್’ಮಾನ್’ರು ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ರಹಸ್ಯವಾಗಿ, ಮದೀನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ, ಸೇವಕನಾದ ಒಬ್ಬ ಕುರುಬನನ್ನು ನೋಡಿದರು. ಅವರಲ್ಲಿ ಪ್ರವಾದಿಯವರು ﷺ, ಕೆಚ್ಚಲಲ್ಲಿ ಹಾಲಿರುವ ಮೇಕೆ ನಿಮ್ಮ ಬಳಿ ಇದೆಯಾ.? ಎಂದು ಕೇಳಿದಾಗ, ಅವರು ಇಲ್ಲ, ಇಲ್ಲಿರುವ ಎಲ್ಲಾ ಮೇಕೆಗಳಲ್ಲಿಯೂ ಹಾಲು ಬತ್ತಿ ಹೋಗಿದೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಸರಿ, ಆದರೂ ಒಂದು ಮೇಕೆಯನ್ನು ಇಲ್ಲಿಗೆ ತನ್ನಿ ಎಂದು ಹೇಳಿದಾಗ, ಅವರು ಒಂದು ಮೇಕೆಯನ್ನು ಪ್ರವಾದಿಯವರ ﷺ ಬಳಿ ತಂದು ನಿಲ್ಲಿಸಿದರು. ಪ್ರವಾದಿಯವರು ﷺ ಅದರ ಕೆಚ್ಚಲಲ್ಲಿ ಒಮ್ಮೆ ಕೈಯಿಂದ ಸವರಿದಾಗ, ಅದರ ಕೆಚ್ಚಲಲ್ಲಿ ಹಾಲು ತುಂಬಿ ಹೋಯಿತು. ಸಿದ್ದೀಕ್’ರು ◌ؓ ಒಂದು ಪಾತ್ರೆಯೊಂದಿಗೆ ಪ್ರವಾದಿಯವರ ﷺ ಬಳಿ ಬಂದರು. ಮೊದಲು ಕರೆದ ಹಾಲನ್ನು ಸಿದ್ದೀಕ್’ರಿಗೆ ◌ؓ ಕೊಟ್ಟರು, ಎರಡನೆಯದ್ದನ್ನು ಕುರುಬನಿಗೂ, ಮೂರನೇ ಬಾರಿ ಕರೆದ ಹಾಲನ್ನು ಪ್ರವಾದಿಯವರು ﷺ ಸ್ವತಃ ತಾವೇ ಕುಡಿದರು. ಅದನ್ನು ಕಂಡು ಕುರುಬನು, ನೀವು ಯಾರು, ಇಂತಹ ಒಬ್ಬರನ್ನು ನಾನು ಇದುವರೆಗೆ ಕಂಡಿಲ್ಲ ಎಂದು ಪ್ರವಾದಿಯವರಲ್ಲಿ ﷺ ಹೇಳಿದಾಗ, ಪ್ರವಾದಿಯವರು ﷺ, ಅವರಲ್ಲಿ ಸರಿ, ನಾನು ನಿಮ್ಮಲ್ಲಿ ತಿಳಿಸುತ್ತೇನೆ, ಆದರೆ ಸದ್ಯಕ್ಕೆ ನೀವು ಅದನ್ನು ರಹಸ್ಯವಾಗಿ ಇಡಬೇಕು ಎಂದು ಹೇಳಿದರು. ಅವರು ಸರಿ ಎಂದು ಹೇಳಿದಾಗ, ಪ್ರವಾದಿಯವರು ﷺ ನಾನು ಅಲ್ಲಾಹನ ಸಂದೇಶ ವಾಹಕನಾದ, ಮುಹಮ್ಮದ್ ﷺ ಪ್ರವಾದಿಯಾಗಿರುವೆನು ಎಂದು ಹೇಳಿದರು. ಅದಕ್ಕೆ ಕುರುಬ, ಸಾಬಿಯಿ ಎಂದು ಖುರೈಷಿಗಳು ವಾದಿಸುತ್ತಿದ್ದ ವ್ಯಕ್ತಿ ಅಲ್ಲವೇ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹೌದು ಎಂದು ಹೇಳಿದರು. ಅದಕ್ಕೆ ಅವರು, ಖುರೈಷಿಗಳು ಹಾಗೆ ಹೇಳಿದರೂ, ನಾನು ಮಾತ್ರ ಖಂಡಿತವಾಗಿ ನಿಮ್ಮ ಒಬ್ಬರು ಪ್ರವಾದಿ ﷺ ಎಂದು ಒಪ್ಪಿಕೊಳ್ಳುತ್ತೇನೆ, ಯಾಕೆಂದರೆ ನೀವು ತೋರಿಸಿದ ವಿಸ್ಮಯಗಳೆಲ್ಲವೂ, ಕೇವಲ ಒಬ್ಬರು ಪ್ರವಾದಿಯಿಂದ ﷺ ಮಾತ್ರ ಉಂಟಾಗುವ ಒಂದು ಕಾರ್ಯವಾಗಿದೆ ಎಂದು ಹೇಳಿದರು.
ಯಾತ್ರೆ ಮುಂದುವರಿಸುತ್ತಾ ಸಂಚರಿಸುತ್ತಿದ್ದಾಗ, ಒಂದು ಆಲೋಚನೆ ಪ್ರವಾದಿಯವರನ್ನು ಕಾಡತೊಡಗಿತು. ಮದೀನಾದಲ್ಲಿ ಸಂಚರಿಸಿ ಹೋಗುವಾಗ, ಇವರೇ ಮಕ್ಕಾದಿಂದ ಬಂದ ಪ್ರವಾದಿ ಎಂದು ಜನರು ತಕ್ಷಣವೇ ಗುರುತು ಹಿಡಿಯದೆ ಇರಲು ಏನು ಮಾಡುವುದು.? ಇದು ಯಾರೆಂದು ಕೇಳುವಾಗ ಏನು ಹೇಳುವುದು ಎಂದು ಪ್ರವಾದಿಯವರು ﷺ ಚಿಂತಿತರಾಗಿದ್ದರು, ಸುಳ್ಳು ಹೇಳುವುದು ಪ್ರವಾದಿಯರ ﷺ ಸ್ವಭಾವವಲ್ಲ ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಅಬೂಬಕ್ಕರ್’ರು ◌ؓ ಒಂದು ಯೋಜನೆಯನ್ನು ರೂಪಿಸಿದರು. ಅವರು ಪ್ರವಾದಿಯವರಲ್ಲಿ ﷺ ನೀವು ವಾಹನದ ಹಿಂದೆ ಕುಳಿತುಕೊಳ್ಳಿ, ಯಾರಾದ್ರೂ ನನ್ನಲ್ಲಿ ನೀವು ಯಾರೆಂದು ಕೇಳಿದರೆ, “ಬಾಗಿ” (ದಾರಿ ತಪ್ಪಿದ ವ್ಯಕ್ತಿ) ಎಂದು ಹೇಳುತ್ತೇನೆ. ನಿಮ್ಮ ಹಿಂದೆ ಕುಳಿತಿರುವ ವ್ಯಕ್ತಿ ಯಾರೆಂದು ಕೇಳಿದರೆ, “ಹಾದಿ” (ದಾರಿ ತೋರಿಸುವ ವ್ಯಕ್ತಿ) ಎಂದು ಹೇಳುತ್ತೇನೆ ಎಂದು ಹೇಳಿದರು. ಅದರರ್ಥ ನಾನು ಪಾಪಿಯಾದ ವ್ಯಕ್ತಿ ಎಂದೂ, ನನ್ನ ಹಿಂದೆ ಕುಳಿತಿರುವ ವ್ಯಕ್ತಿ ನನ್ನ ವಿಜಯಕ್ಕೆ ದಾರಿ ತೋರಿಸುವ ವ್ಯಕ್ತಿ, ಇನ್ನೂ ಯಾರಾದರೂ ಕೇಳಿದಾಗ, ಈ ವ್ಯಕ್ತಿ ದಾರಿ ತಪ್ಪಿರೂದರಿಂದ, ಹಿಂದಿರುವ ವ್ಯಕ್ತಿ ದಾರಿ ತೋರಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ರೀತಿಯಲ್ಲಾಗಿತ್ತು.. ಈ ಘಟನೆಯನ್ನು ಉದ್ದೇಶಿಸಿ ಇಮಾಮ್ ಬುಖಾರಿ ಉಲ್ಲೇಖಿಸಿರುವುದು ಕಾಣಬಹುದು, ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ಮದೀನಕ್ಕೆ ತಲುಪಿದಾಗ, ವಾಹನದ ಮುಂದೆ ಕುಳಿತ್ತಿದ್ದ ಸಿದ್ದೀಕ್’ರು ವಯ್ಯಸ್ಸಾದ ವ್ಯಕ್ತಿಯ ಹಾಗೆ, ಹಾಗೆ ಹಿಂದೆ ಕುಳಿತ್ತಿದ್ದ ಪ್ರವಾದಿಯವರು ﷺ ಪರಿಚಯವೇ ಇಲ್ಲದ ಒಬ್ಬ ಯುವಕನ ಹಾಗೆ ಕಾಣುತ್ತಿದ್ದರು. ಮದೀನದಲ್ಲಿ ಅವರ ಬಳಿ ಬಂದು ಒಬ್ಬ ವ್ಯಕ್ತಿ ನೀವು ಯಾರೆಂದು ಕೇಳಿದಾಗ, ಅವರಿಗೆ ಮೇಲೆ ತಿಳಿಸಿದ ಹಾಗೆ ಉತ್ತರಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-156/365
ಸೆಪ್ಟೆಂಬರ್ 18 ರ ಭಾನುವಾರ, ರಬಿವುಲ್ ಅವ್ವಲ್ ಏಳು, ಸೌರ್ ಗುಹೆಯಿಂದ ಹೊರಟ ಏಳನೇ ದಿನ, ಪ್ರವಾದಿಯವರು ﷺ ಹಾಗೂ ಅವರ ಸಹಚರರು, ರೀಮ್ ಕಣಿವೆಯಿಂದ ಮುಂದುವರೆದು, ಅಲ್ ಸಹ್’ವದ ಮೂಲಕ ಅಲ್ ಜದ್’ಜಾದಗೆ ಹೋಗಲು, ಕಾರವನ್ ವ್ಯಾಪಾರ ರಸ್ತೆಯ ಹಾಗೆ ಜನನಿಬಿಡ ರಸ್ತೆಯಲ್ಲದ ಕಾರಣ ಅಲ್ ಖಲಾಇಖ್ ಪ್ರದೇಶದ ಮೂಲಕ ಯಾತ್ರೆ ಮುಂದುವರಿಸಿದರು. ಈ ಪ್ರದೇಶಕ್ಕೆ ಅಬಿಯಾರ್ ಅಲ್ ಮಾಷಿ ಅಥವಾ ಕಾಲುದಾರಿಯ ಬಾವಿ ಎಂದೂ ಕರೆಯುತ್ತಾರೆ.
ಪ್ರವಾದಿಯವರು ﷺ, ಹಾಗೂ ಅವರ ಅನುಚರರು ಅಲ್ ಅಖೀಖ್ (ವಾದಿ ಅಲ್ ಅಖೀಖ್) ಕಣಿವೆಯ ಮೂಲಕ ತಮ್ಮ ಯಾತ್ರೆ ಮುಂದುವರಿಸಿದರು. ವಾದಿ ಅಖೀಖ್ ಮದೀನದಲ್ಲಿ ಒಂದು ವಿಶೇಷವಾದ ಕಣಿವೆಯಾಗಿತ್ತು. ಆಮಿರ್ ಬಿನ್ ಸಅದ್’ರಿಂದ ಇಬ್’ನು ಸಬಾಲರು ಉಲ್ಲೇಖಿಸುವುದು ಕಾಣಬಹುದು. ಒಮ್ಮೆ ಪ್ರವಾದಿಯವರು ﷺ ಅಖೀಖ್ ಕಣಿವೆಗೆ ಹೋಗಿ ಬಂದ ನಂತರ, ತಮ್ಮ ಪತ್ನಿಯನ್ನು ಕರೆದು, ಓ ಆಯಿಷ ನಾನು ಅಖೀಖ ಕಣಿವೆಗೆ ಹೋಗಿ ಬಂದೆನು ಎಂದು ಹೇಳಿದರು. ಅದಕ್ಕೆ ಆಯಿಷಾ ಬೀವಿಯವರು ◌ؓ ವಾಹ್ ಅದು ಎಷ್ಟೊಂದು ಸುಂದರ ಸ್ಥಳ ಅಲ್ಲವೇ.! ಅಲ್ಲಿ ಎಷ್ಟೊಂದು ಶುದ್ಧವಾದ ನೀರಲ್ಲವೇ ಇರುವುದು.! ಎಂದು ಹೇಳುತ್ತಾ, ಇದು ಮದೀನದಲ್ಲಿ ತೀರ್ಥ ಯಾತ್ರಿಕರಿಗಿರುವ ಮೀಖಾತ್ ಕೂಡ ಆಗಿದೆ ಎಂದು ಹೇಳಿದರು. ಮಕ್ಕಾ ನಗರಕ್ಕೆ ತೆರಳುವ ದಾರಿ ಮಧ್ಯೆ ಇರುವ ಈ ಸ್ಥಳವನ್ನು ಅಬ್’ಯಾರ್ ಅಲಿ ಅಥವಾ ಅಲಿ ಮೀಖಾತಿನ ಬಾವಿ ಎಂದು ಕರೆಯುತ್ತಾರೆ. ನಂತರ ಪ್ರವಾದಿಯವರು ﷺ, ಖುಬದ ಕಡೆಗೆ ಸಾಗುವ, ಅಲ್ ಸಾಬಿಯ (ತರೀಕ್ ಅಲ್ ಸಾಬಿಯ್) ದಾರಿಯಲ್ಲಿ ಮುಂದೆ ಸಾಗಿದರು. ಅಲ್ ಖಲಾಇಖಿನಿಂದ ಹೊರಟ ನಂತರ ಬಿಅರ್ ಷದ್ದಾದ್ (ಷದ್ದಾದ್ ಬಾವಿ) ಎಂಬ ಪ್ರದೇಶಕ್ಕೆ ಬಂದು ತಲುಪಿದರು.
ನಂತರ ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ರಾತ್ರಿ ಅಲ್ ಜದ್’ಜಾದದಲ್ಲೇ ಡೇರೆ ಹಾಕಿದರು. ಹಂರ ಅಲ್ ಅಸದ್ ಪರ್ವತದ ದಕ್ಷಿಣಭಾಗದಲ್ಲಿ 16 ಕಿ.ಮೀ ದೂರದಲ್ಲಿ, ಖುಬಾಗೆ ತಲುಪುದಕ್ಕೂ ಮುಂಚೆಯೇ ಅವರು ಕೊನೆಯದಾಗಿ ಡೇರೆ ಹಾಕಿದ್ದರು. ಆ ಕಾಲದಲ್ಲಿ ಅಲ್ ಜದ್’ಜಾದದಲ್ಲಿ ಒಂದು ಸಣ್ಣ ಗ್ರಾಮವಿತ್ತು. ಬನಿ ಅಬ್ದುಲ್ಲಾ ಬಿನ್ ಅಲ್ ಝುಬೈರಿನ, ಹಂಝ, ಉಬಾದ್, ತಾಬಿತ್ ಮುಂತಾದ ಪ್ರಮುಖ ಮನೆತನಗಳು ಅಲ್ಲಿ ವಾಸಿಸುತ್ತಿದ್ದರು. ನಂತರದ ದಿನಗಳಲ್ಲಿ, ಪ್ರವಾದಿಯವರು ﷺ ಈ ಸ್ಥಳದಲ್ಲಿ ನಮಾಝ್ ಮಾಡಿದ್ದ ಕಾರಣ, ಇಲ್ಲಿ ಮಸ್ಜಿದ್ ನಿರ್ಮಿಸಲಾಯಿತು.
ಇದರ ನಡುವೆ ಸಅದ್ ಬಿನ್ ಉಬಾದರ ಒಂದು ರೋಮಾಂಚನಕಾರಿ ಘಟನೆಯನ್ನು ತಿಳಿಯೋಣ. ಸಅದ್’ರು ತಿಳಿಸುವುದು ಕಾಣಬಹುದು, ಮಕ್ಕಾದ ಅಖಬದಲ್ಲಿ ಪ್ರವಾದಿಯವರೊಂದಿಗೆ ﷺ ಒಪ್ಪಂದ ಮಾಡಿದ ನಂತರ, ಅವರು ಕೆಲವೊಂದು ಅವಶ್ಯಕತೆಗಳಿಗಾಗಿ ಯಮನಿನ ಹಲರ್’ಮೌತ್’ಗೆ ಹೋಗಿದ್ದರು. ಎಲ್ಲಾ ಕಾರ್ಯಗಳನ್ನು ಮುಗಿಸಿ, ಮಕ್ಕಾ ನಗರಕ್ಕೆ ತಿರುಗಿ ಬರುವ ಯಾತ್ರೆಯ ಮಧ್ಯೆ, ವಿಶ್ರಾಂತಿ ಪಡೆಯುತ್ತಿರುವಾಗ, ಒಂದು ಶಬ್ದ ಕೇಳಲು ಸಾಧ್ಯವಾಯಿತು. ಆ ಶಬ್ದದಿಂದ ಬೆಚ್ಚಿಬಿದ್ದ ಅವರು, ಎದ್ದು ನೋಡಿದಾಗ ಅದೊಂದು ಕವಿತೆಯ ಸಾಲುಗಳಾಗಿತ್ತು.
“ಅಬಾಅಂರಿನ್ ತಅವ್ವಬನಿ ಸ್ಸುಹೂದು ವ ರಾಹನ್ನವಮು ವನ್’ಖತಅಲ್ ಹುಜೂದು” ಅದರ ಅರ್ಥವು ಈ ರೀತಿಯಾಗಿದೆ. ಅಬೂ ಅಂರ್’ರೆ ಎಚ್ಚರವು ನನ್ನನ್ನು ಬಹಳಷ್ಟು ಉದಾಸೀನಗೊಳಿಸಿದೆ. ನಿದ್ರೆ ನನ್ನಿಂದ ದೂರ ಸರಿದು ನಿಂತಿದೆ. ಅದು ಮುಗಿದ ಕೂಡಲೇ ಇನ್ನೊಂದು ಶಬ್ದವು ಕೂಡ ಕೇಳಿತು. ಓ ಖರ್’ಗಬ್’ರೆ ನಿಮ್ಮ ಆಯಾಸವನ್ನು ಕೊನೆಗೊಳಿಸಬೇಕು, ಅದ್ಭುತಗಳಲ್ಲಿ ಮಹಾ ಅದ್ಭುತ ಈಗಾಗಲೇ ಮಕ್ಕಾ ಹಾಗೂ ಯಸ್’ರಿಬಿನ ನಡುವೆ ನಡೆದಿದೆ. ಓ ಶಾಹಿಬ್’ರೆ ಅದೇನೆಂದು ಅವರಲ್ಲಿ ತಿರುಗಿ ಕೇಳಿದಾಗ, ಅದಕ್ಕೆ ಅವರಲ್ಲಿ,ಮಾನವ ಕುಲಕ್ಕೆ ಉತ್ತಮ ವಚನದೊಂದಿಗೆ, ಶಾಂತಿಯ ನಾಯಕನ ನಿಯೋಗವಾಗಿತ್ತು, ಆ ನಾಯಕನು ಮಕ್ಕಾದಿಂದ ಖರ್ಜೂರದ ಊರಾದ ಯಸ್’ರಿಬಿಗೆ ಪಲಾಯನ ಮಾಡುತ್ತಿದ್ದಾರೆ ಎಂದು ಹೇಳಲಾಯಿತು. ಕತ್ತಲು ಸರಿದು ಬೆಳಕು ಹರಿದರೂ ನಾನು ಈ ಕನಸಿನ ಬಗ್ಗೆ ಆಳವಾಗಿ ಆಲೋಚಿಸುತ್ತಾ ಕುಳಿತಿದ್ದೆ, ಹೀಗಿರುವಾಗ ಎರಡು ಹಾವು ಸತ್ತು ಬಿದ್ದಿರುವುದು ಕಾಣಲು ಸಾಧ್ಯವಾಯಿತು. ಈ ರೀತಿಯಾಗಿತ್ತು ನನಗೆ ಪ್ರವಾದಿಯವರ ಪಲಾಯನದ ಬಗ್ಗೆ ನನಗೆ ತಿಳಿದದ್ದು ಎಂದು ಸಅದ್’ರು ಹೇಳಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-157/365
ಪಲಾಯನದ ಯಾತ್ರೆ ತನ್ನ ಲಕ್ಷ್ಯದ ಕಡೆಗೆ ಸಾಗುತ್ತಲೇ ಇತ್ತು. ಸೆಪ್ಟೆಂಬರ್ 19 ಸೋಮವಾರ, ರಬಿವುಲ್ ಅವ್ವಲ್ ಎಂಟರಂದು ಅಲ್ ಜದ್’ಜಾದದಲ್ಲಿ ತಮ್ಮ ಡೇರೆಯೊಳಗೆ ಕುಳಿತು, ಬೆಳಗ್ಗಿನ ಉಪಹಾರ ಸೇವಿಸಿದ ನಂತರ ಖುಬಾದ ಈಶಾನ್ಯ ದಿಕ್ಕಿನಲ್ಲಿರುವ ರಸ್ತೆಯಲ್ಲಿ, ತರಿಖ್ ಅಲ್ ಸಾಬಿಯಕಡೆಗೆ ಹೊರಡುತ್ತಾ ಹಿಜ್’ರಾದ ಕೊನೆಯ ದಿವಸವನ್ನು, ಸಮುದ್ರ ತೀರದಿಂದ 940 ಮೀಟರ್ ಎತ್ತರದಲ್ಲಿರುವ ಹಂರ ಅಲ್ ಅಸದ್’ರ (ಜಬಲ್ ಹಂರ ಅಲ್ ಅಸದ್) ಮೂಲಕ ಆರಂಭಿಸಿದರು. ಹಿಜ್’ರ 3 ಕ್ರಿ.ಶ 625 ರಲ್ಲಿ ನಡೆದ, ಉಹುದು ಯುದ್ಧಕ್ಕೆ ಪ್ರವಾದಿಯವರ ﷺ ಸೈನ್ಯ ಹೊರಟ ಸ್ಥಳವಾಗಿತ್ತು ಈ ಕೆಂಪು ಪರ್ವತ. ಉಹುದು ಪರ್ವತದಿಂದ ಮಕ್ಕಾದ ಸೈನ್ಯ ಹಿಂತಿರುಗಿದ ನಂತರ, ಅವರು ಪುನಃ ವಾಪಸ್ಸು ಹಿಂತಿರುಗಿ ಬರಬಾರದು ಎಂಬ ಉದ್ದೇಶದಿಂದ, ಪ್ರವಾದಿಯವರು ﷺ ಅವರನ್ನು ಹಿಂಬಾಲಿಸಲು ತೀರ್ಮಾನಿಸಿ, ಯುದ್ಧದ ಮರುದಿವಸ ಪ್ರವಾದಿಯವರು ﷺ ತಮ್ಮ ಸೈನ್ಯವನ್ನು ಮದೀನದಿಂದ ಹೊರಗೆ ಕಳುಹಿಸಿ, ಮೂರು ದಿನಗಳ ಕಾಲ, ಹಂರ ಅಲ್ ಅಸದ್ ಪರ್ವತದಲ್ಲೇ ಶಿಬಿರ ಹಾಕಿ ಕಾಯುತ್ತಿದ್ದರು. ಹಿಂತಿರುಗಿ ಬರದ ಮಕ್ಕಾದ ಸೈನ್ಯವನ್ನು ಎದುರಿಸಲು, ಮಕ್ಕಾ ನಗರಕ್ಕೆ ತೆರಳುವ ಪ್ರಧಾನ ರಸ್ತೆಗಳ ಪಕ್ಕದಲ್ಲಿ, ಬಹಳ ತಂತ್ರಪೂರ್ವಕವಾಗಿ ಶಿಬಿರ ಹಾಕಿ ಅಲ್ಲೇ ಕಾಯ ತೊಡಗಿದರು.
ಖಾಖ್ (ರೌದತ್ ಖಾಖ್) ಎಂಬ ಹುಲ್ಲುಗಾವಲಿನ ಮೂಲಕವಾಗಿತ್ತು, ಪ್ರವಾದಿಯವರು ﷺ ಯಾತ್ರೆ ಮುಂದುವರಿಸಿದ್ದು. ಕ್ರಿ.ಶ 630, ಹಿಜ್’ರ 8 ನೇ ವರ್ಷ, ಮದೀನದಿಂದ ಬಹಳ ದೊಡ್ಡ ಸೈನ್ಯವೊಂದು ಹೊರಡಲಿದೆ ಎಂಬ ಸುದ್ದಿಯನ್ನು, ಒಬ್ಬರು ಯುವತಿ ರಹಸ್ಯವಾಗಿ ಕೊಂಡು ಹೋಗುತ್ತಿದ್ದರು. ಈ ವಂಚನೆಯನ್ನು ಪ್ರವಾದಿಯವರಿಗೆ ﷺ, ಮಲಕ್ ಜಿಬ್ರೀಲ್’ರು ಬಂದು ತಿಳಿಸಿದಾಗ, ಅಲಿ, ಝುಬೈರ್ ಹಾಗೂ ಮಿಖ್’ದಾದ್’ರನ್ನು ಕರೆದು, ಖಾಖಿನ ಹುಲ್ಲುಗಾವಲಿನಲ್ಲಿ ಹೋಗುತ್ತಿರುವ, ಯುವತಿಯ ಬಳಿ ತೆರಳಿ, ರಹಸ್ಯ ಪತ್ರವನ್ನು ಕೇಳಲು ಕಳುಹಿಸಿದರು. ಮೊದಲು ಅವಳು ಪತ್ರ ಕೊಡಲು ವಿರೋಧಿಸಿದರೂ, ಕೊನೆಗೆ ವಿಧಿಯಿಲ್ಲದೆ ಪತ್ರವನ್ನು ಅವರ ಕೈಗೆ ನೀಡಿದರು. ಈಗಲೂ ಈ ಸ್ಥಳದಲ್ಲಿ, ಹಿಂದಿನ ಕಾಲದಲ್ಲಿ ಇದ್ದ ಹಾಗೆ ತೋಟವಿರುವುದು ಕಾಣಬಹುದು. ಕೆಲವು ದಿನಗಳ ಹಿಂದೆ ನಮ್ಮ ಲೇಖಕರು ಕೂಡ ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಮದೀನಾದ ಕಡೆಗೆ ಯಾತ್ರೆ ಸಮೀಪವಾಗುತ್ತಿದ್ದಂತೆ, ಯಾತ್ರಾ ಸಂಘವು ಅಲ್ ಸಾಬಿ ರಸ್ತೆಯ ಮೂಲಕ ಸಂಚರಿಸಲು ಆರಂಭಿಸಿತು. ಈ ರಸ್ತೆ ಅಲ್ ಉಸ್’ಬ ಜಿಲ್ಲೆಯ ಕಡೆಗೆ, ಬನೀ ಉನೈಫ್’ರ ವಸತಿಗಳಿಗೂ, ಕೊನೆಯ ಲಕ್ಷ್ಯ ಸ್ಥಳವಾದ ಖುಬದ ಕಡೆಗೂ ಹೋಗಿ ತಲುಪುತ್ತದೆ. ನಂತರ ಈ ರಸ್ತೆಯನ್ನು ತರೀಖ್ ಅಥವಾ ದರ್’ಬ್ ಅಲ್ ಜುಸ್ಸ ಎಂದು ಕರೆಯಲಾಯಿತು. ಅಲ್ಲಿಂದ ಅವರ ಯಾತ್ರೆ ಖುಬಾದ ಬಳಿ ತಲುಪಿ, ಐರ್ ಪರ್ವತದ (ಜಬಲ್ ಐರ್) ಪೂರ್ವ ದಿಕ್ಕಿಗೆ ಮುಂದೆ ಸಾಗಿದ ನಂತರ, ಅಲ್ಲಿಂದ ಉತ್ತರ ದಿಕ್ಕಿಗೆ ಮುನ್ನಡೆದರು. ಮದೀನಾ ಹರಮಿನ (ಹರಮ್ ಅಲ್ ಮದೀನತುಲ್ ಮುನವ್ವರ) ಗಡಿ ಭಾಗದಲ್ಲೊಂದಾಗಿದೆ ಈ ಐರ್ ಪರ್ವತ.
ಪ್ರವಾದಿಯವರು ﷺ ಖುಬಾದ ಕಡೆಗೆ ತೆರಳುವ ಮಧ್ಯೆ, ಬನಿ ಉನೈಫಿನ ಸುತ್ತಮುತ್ತಲಿನಲ್ಲಿರುವ ಪ್ರದೇಶದಲ್ಲಿ, ಮೊದಲನೇದಾಗಿ ಭೇಟಿ ಕೊಟ್ಟ ಸ್ಥಳಗಳಲ್ಲಿ ಒಂದಾಗಿತ್ತು ಈ ಅಲ್ ಉಸ್’ಬಃ ಜಿಲ್ಲೆ. ಮಕ್ಕಾದಿಂದ ಬಂದವರು ಮೊದಲು ವಾಸಿಸಿದ್ದು ಕೂಡ ಇದೇ ಸ್ಥಳದಲ್ಲಾಗಿತ್ತು. ಮಸ್ಜಿದ್ ಆಫ್ ಲೈಟ್, (ಮಸ್ಜಿದ್ ಅಲ್ ನೂರ್), ಅಲ್ ಹಾಜಿಮ್ (ಬಿನ್ ಅಲ್ ಹಾಜಿಮ್) ಎಂದು ಕರೆಯಲ್ಪಡುವ ಬಾನಿ ಜಹ್’ಜಬಾದ ಬಾವಿಯೂ (ಬಿನ್ ಬಾನಿ ಜಹ್’ಜಬ) ಕೂಡ ಇರುವುದು ಇದೇ ಜಿಲ್ಲೆಯಲ್ಲಿ ಆಗಿದೆ.
ಖುಬಾಕ್ಕೆ ತಲುಪುದಕ್ಕೂ ಮುಂಚೆಯೇ, ಪ್ರವಾದಿಯವರ ﷺ ತಂಡ ಬನಿ ಉನೈಫಿನ (ದಿಯಾರ್ ಬನಿ ಉನೈಫ್) ಸಮೀಪದಲ್ಲೇ ಹಾದು ಹೋಯಿತು. ಮುಸಬಿಹಿನ ಮಸ್ಜಿದ್ (ಮಸ್ಜಿದ್ ಮುಸಬಿಹ್) ಎಂದು ಕರೆಯಲ್ಪಡುವ ಬನಿ ಉನೈಫಿನ ಮಸ್ಜಿದ್ (ಮಸ್ಜಿದ್ ಬನಿ ಉನೈಫ್) ಕೂಡ ನಿರ್ಮಿಸಿದ್ದು ಇಲ್ಲೇ ಆಗಿತ್ತು. ನಂತರದ ದಿನಗಳಲ್ಲಿ ತಲ್’ಹ ಅಲ್ ಬರಾಅ್’ರು ರೋಗ ಪೀಡಿತರಾದಾಗ, ಪ್ರವಾದಿಯವರು ﷺ ಅವರನ್ನು ಭೇಟಿಯಾಗಲು ಬಂದಿರುವುದು ಉಲ್ಲೇಖಗಳಲ್ಲಿ ಕಾಣಬಹುದು.
ಪ್ರವಾದಿಯವರು ﷺ ಮಕ್ಕಾದಿಂದ ಹೊರಟಿದ್ದಾರೆ, ಎಂಬ ಸುದ್ದಿ ಸಿಕ್ಕಿದ ಕ್ಷಣದಿಂದ, ಮದೀನಾ ಅಥವಾ ಯಸ್’ರಿಬಿನ ಜನತೆ ಪ್ರವಾದಿಯವರನ್ನು ﷺ ಸ್ವಾಗತಿಸಲು ಬಹಳಷ್ಟು ತಯಾರಿ ನಡೆಸಿದ್ದರು. ಸುದ್ದಿ ಲಭಿಸಿದ ಆ ದಿನದಿಂದ, ಪ್ರತಿದಿನವೂ ಮಕ್ಕಾದಿಂದ ಮದೀನಕ್ಕೆ ಬಂದು ತಲುಪುವ, ಗಡಿ ಭಾಗದಲ್ಲಿ ನಿಂತು ಬಿಸಿಲು ಬರುವವರೆಗೂ, ಮಕ್ಕಾದ ದಿಕ್ಕಿಗೆ ನೋಡುತ್ತಾ ಕಾಯುತ್ತಾ ಕುಳಿತ್ತಿದ್ದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-158/365
ಆಯಿಷ ◌ؓ ಬೀವಿಯವರಿಂದ ಇಮಾಮ್ ಬುಖಾರಿಯವರು ಉಲ್ಲೇಖಿಸಿದ್ದು ಕಾಣಬಹುದು. ಪ್ರವಾದಿಯವರು ﷺ ಮಕ್ಕಾದಿಂದ ಹೊರಟ ದಿವಸದಿಂದ, ಮದೀನಾ ನಿವಾಸಿಗಳು, ಮುಂಜಾನೆ ನಮಾಝ್ ಮುಗಿದ ಕೂಡಲೇ ಮದೀನದ ಗಡಿ ಭಾಗದಲ್ಲಿ, ಬಿಸಿಲು ಬರುವ ವರೆಗೂ ಕಾಯುತ್ತಾ ನಿಲ್ಲುವರು. ಬಿಸಿಲು ಬಂದ ನಂತರ, ಸ್ವಲ್ಪ ನೆರಳು ಇರುವ ಕಡೆಗೆ ಹೋಗಿ, ಪುನಃ ಕಾಯುತ್ತಾ ನಿಲ್ಲುವರು. ಬಿಸಿಲು ಇನ್ನಷ್ಟು ಅಧಿಕವಾಗಿ, ನೆರಳು ಸಿಗದೆ ಇರುವಾಗ, ಅವರು ತಮ್ಮ ಮನೆಗಳಿಗೆ ಹಿಂತಿರುಗಿ ಮರಳಿ ಹೋಗುತ್ತಿದ್ದರು. ಹೀಗಿರುವಾಗ ಒಂದು ದಿನ, ಒಬ್ಬರು ಯಹೂದಿಯು ತನ್ನ ಏನೋ ಅವಶ್ಯಕತೆಗಳಿಗೆ ಕಲ್ಲಿನ ಮೆಟ್ಟಿಲಿನ ಮೇಲೆ ಹತ್ತಿ ನೋಡಿದಾಗ, ಸ್ವಲ್ಪ ದೂರದಿಂದ ಯಾರೋ ಬರುತ್ತಿರುವುದು ಅವರ ಗಮನಕ್ಕೆ ಬಂದಿತು. ಅವರು ತಕ್ಷಣವೇ, ಓ ಅರಬಿ ನಿವಾಸಿಗಳೇ, ನೀವು ಕಾತುರದಿಂದ ಕಾಯುತ್ತಾ ಕುಳಿತಿದ್ದ ಆ ಅನುಗ್ರಹ ಬಂದಿರುತ್ತಾರೆ ಎಂದು ಕೂಗಿ ಹೇಳಿದರು. ಅದನ್ನು ಕೇಳಿ ಅವರೆಲ್ಲರೂ ಉಪಚಾರ ಮಾಡಲೆಂದು ತಮ್ಮೆಲ್ಲಾ ಆಯುಧಗಳನ್ನು ಎತ್ತಿ ಮರುಭೂಮಿಯಲ್ಲಿ ಬರುತ್ತಿದ್ದ ಪ್ರವಾದಿಯವರ ﷺ ಬಳಿ ಓಡಿ ಬಂದರು. ಅದನ್ನು ನೋಡಿ ಪ್ರವಾದಿಯವರು ﷺ ಪಕ್ಕದಲ್ಲೇ ಇದ್ದ ನೆರಳಿನ ಅಡಿಯಲ್ಲಿ ತಮ್ಮ ವಾಹನದ ಲಗಾಮು ಎಳೆದು ನಿಲ್ಲಿಸಿ, ಅಲ್ಲೇ ಕುಳಿತು ವಿಶ್ರಾಂತಿ ಪಡೆಯಲು ಆರಂಭಿಸಿದರು, ಅಷ್ಟೊತ್ತಿಗೆ ಪ್ರವಾದಿಯವರ ﷺ ಸಮ ಪ್ರಾಯದವರಾಗಿದ್ದ ಸಿದ್ದೀಕ್’ರು ಮದೀನಾ ನಿವಾಸಿಗಳಲ್ಲಿ, ಮಾತಾಡಲು ಮುಂದೆ ಹೋದರು. ನಂತರ ಅವರ ಹಿಂದೆ ಬಂದು ನೆರೆದಿದ್ದ ಜನರೆಲ್ಲರೂ ಅವರೇ ಪ್ರವಾದಿಯವರೆಂದು ﷺ ಭಾವಿಸಿದ್ದರು, ಆದರೆ ಬಿಸಿಲು ಅಧಿಕವಾದಾಗ, ಸಿದ್ದೀಕ್’ರು ತನ್ನ ಹೆಗಲಿನಲ್ಲಿರುವ ಹೊದಿಕೆಯನ್ನು ತೆಗೆದು, ಪ್ರವಾದಿಯವರ ﷺ ತಲೆಯ ಮೇಲೆ ಹಿಡಿದು ನೆರಳು ನೀಡಲು ಮುಂದಾದರು. ಆ ಸಂದರ್ಭದಲ್ಲಾಗಿತ್ತು ಉಳಿದವರು ಕೂಡ ಪ್ರವಾದಿಯವರು ﷺ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದ್ದು.
ನಂತರ ಮದೀನಾ ನಿವಾಸಿಗಳು, ಅಲ್ಲಿಂದ ಬಲ ಭಾಗಕ್ಕೆ, ಅಂದರೆ ಖುಬಾದ ಕಡೆಗೆ ಪ್ರವಾದಿಯವರನ್ನು ﷺ ಕರೆದುಕೊಂಡು ಹೋಗಿ, (ಅದು ಮದೀನದ ಎತ್ತರದ ಪ್ರದೇಶವಾಗಿತ್ತು.) ಅಲ್ಲಿಂದ ನೇರವಾಗಿ ಕುಲಸುಮ್ ಬಿನ್ ಅಲ್ ಹದಿಮಿಯವರ ಮನೆಯ ಒಳಗೆ ಪ್ರವೇಶಿಸಿದರು. ಸಅದ್ ಬಿನ್ ಖೈಸಮರ ಮನೆಗಾಗಿತ್ತು ಕರೆದುಕೊಂಡು ಹೋದದ್ದು ಎಂಬ ಅಭಿಪ್ರಾಯವು ಇರುವುದು ಕಾಣಬಹುದು. ಆದರೆ ಪ್ರಬಲವಾದ ಅಭಿಪ್ರಾಯದ ಪ್ರಕಾರ ಕುಲ್’ಸುಮ್’ರ ಮನೆಯಾಗಿದೆ. ಆದರೂ ಕೆಲವು ಇತಿಹಾಸಗಾರರು ಎರಡು ಅಭಿಪ್ರಾಯಗಳನ್ನು ಗಮನದಲ್ಲಿಟ್ಟು, ಹೀಗೆ ಹೇಳುವುದು ಕಾಣಬಹುದು. ಕುಲ್’ಸುಮ್ ಬಿನ್ ಅಲ್ ಹದೀಮ್ ಜನರನ್ನು ಸ್ವಾಗತಿಸಲು, ಸಅದ್’ರ ಮನೆಯಲ್ಲಾಗಿದೆ ಇರುವುದು. ಅವರು ಒಬ್ಬರು ಬ್ರಹ್ಮಚಾರಿ ಆಗಿದ್ದರು. ಹಿಜ್’ರಾದಲ್ಲಿ ಮಕ್ಕಾದಿಂದ ಮದೀನಕ್ಕೆ ಬರುತ್ತಿದ್ದ ಬ್ರಹ್ಮಚಾರಿಗಳು ಕೂಡ ಇದೇ ಮನೆಯಲ್ಲಾಗಿತ್ತು ಉಳಿದುಕೊಳ್ಳುತ್ತಿದ್ದದ್ದು. ನಂತರ ಅಬೂಬಕ್ಕರ್’ರನ್ನು ◌ؓ ಖುಬೈಬ್ ಬಿನ್ ಇಸಾಫ್ ಎಂಬವರ ಮನೆಗೆ ಕರೆದುಕೊಂಡು ಹೋದರು.
ಅಬ್ದುಲ್ಲಾಹಿ ಬಿನ್ ಹಾರಿಸ ◌ؓ ಹೇಳುವುದು ಕಾಣಬಹುದು. ಪ್ರವಾದಿಯವರನ್ನು ﷺ ಸ್ವೀಕರಿಸಿದ ನಂತರ, ಕುಲ್’ಸುಮ್ ತನ್ನ ಸೇವಕನನ್ನು, ಓ ನುಜೈಹ್ ಎಂದು ಕರೆದರು. ಪ್ರವಾದಿಯವರು ಆ ಹೆಸರಿನ ಕೂಗನ್ನು ಕೇಳಿಸಿಕೊಂಡಿದ್ದರು. ಅದಕ್ಕೆ ಪ್ರವಾದಿಯವರು ﷺ ನಜಹ ಎಂಬ ಪದದಿಂದ, ಯಶಸ್ಸು ಎಂಬ ಅರ್ಥವನ್ನು ಸೂಚಿಸಿ, ಸಿದ್ದೀಕ್’ರೇ ◌ؓ ಎಲ್ಲಾ ವಿಷಯಗಳಲ್ಲಿಯೂ ಯಶಸ್ವಿ ಆಯಿತು ಅಲ್ಲವೇ.? ಎಂದು ಹೇಳಿದರು.
ತಮ್ಮ ಜೀವವನ್ನು ಒತ್ತೆಯಿಟ್ಟು ಪ್ರವಾದಿಯವರನ್ನು ﷺ ರಕ್ಷಿಸಿದ ನಂತರ, ಅಲಿಯವರು ◌ؓ, ಪ್ರವಾದಿಯವರ ﷺ ಕೈಯಲ್ಲಿ ನೋಡಿಕೊಳ್ಳಲು ಕೊಟ್ಟಿದ್ದ, ಆಸ್ತಿಗಳನ್ನು ಅವರ ಹಕ್ಕುದಾರರಿಗೆ ತಲುಪಿಸುವ ಉದ್ದೇಶದಿಂದ, ಮಕ್ಕಾದಲ್ಲೇ ಮೂರು ದಿನಗಳ ಕಾಲ ಉಳಿದುಕೊಂಡಿದ್ದರು. ಎಲ್ಲಾ ಆಸ್ತಿಗಳನ್ನು ಅವರ ಮಾಲೀಕರಿಗೆ ಹಿಂತಿರುಗಿಸಿ ಕೊಟ್ಟ ನಂತರ, ಅವರೂ ಕೂಡ ಮದೀನಕ್ಕೆ ಹೊರಟರು, ಅವರು ಮದೀನಕ್ಕೆ ತಲುಪಿದ್ದು ಕೂಡ, ಪ್ರವಾದಿಯವರು ﷺ ತಲುಪಿದ ಅದೇ ದಿನ ಆಗಿತ್ತು. ಹಾಗಾಗಿ ಅವರು ಕೂಡ ಕುಲ್’ಸ್ ಬಿನ್ ಹದ್’ಮಿನ ಮನೆಯಲ್ಲೇ ಪ್ರವಾದಿಯವರನ್ನು ﷺ ಕೂಡ ಭೇಟಿಯಾದರು.
ಅಲಿಯವರು ವಿವರಿಸುವ ಒಂದು ಘಟನೆಯನ್ನು ಕಾಣಬಹುದು. ಖುಬಾದಲ್ಲಿ ಒಬ್ಬರು ವಿಧವೆಯಾದ ಯುವತಿ ಇದ್ದರು. ರಾತ್ರಿ ವೇಳೆಯಲ್ಲಿ ಒಬ್ಬ ವ್ಯಕ್ತಿ, ಅವರ ಬಳಿ ಬಂದು ಏನೋ ಕಟ್ಟಿದ ವಸ್ತುವನ್ನು ನೀಡಿ ಹೋದರು. ನಾನು ಅವರಲ್ಲಿ ಅದು ಯಾರು, ಅವರು ಏನು ಕೊಟ್ಟದ್ದು ಎಂದು ಕೇಳಿದಾಗ, ಅವರು, ಆ ಬಂದ ವ್ಯಕ್ತಿಯ ಹೆಸರು ಸಹಿಲ್ ಬಿನ್ ಹುನೈಫ್ ಎಂದಾಗಿದೆ. ಅವರಿಗೆ ನಾನೊಬ್ಬಳು ವಿಧವೆ ಎಂದು ಗೊತ್ತಿರುವ ಕಾರಣ, ಈ ಹಿಂದೆ ಅವರು ಆರಾಧಿಸುತ್ತಿದ್ದ ಮರದ ವಿಗ್ರಹವನ್ನು ತುಂಡು ಮಾಡಿ, ಅದರ ಕೆಲವು ಭಾಗವನ್ನು ನನಗೆ ಕೊಟ್ಟು, ಕಟ್ಟಿಗೆಯಾಗಿ ಬಳಸಲು ಹೇಳಿ ಹೋಗುತ್ತಾರೆ, ಎಂದು ಹೇಳಿದರು. ಅಲಿಯವರು ಹೇಳುವುದು ಕಾಣಬಹುದು ನಂತರದ ದಿನಗಳಲ್ಲಿ ಆ ವ್ಯಕ್ತಿ ಬಗ್’ದಾದಿನಲ್ಲಿ ಮರಣ ಹೊಂದುವ ವರೆಗೂ ನಾನು ಈ ವಿಷಯವನ್ನು ಹೇಳುತ್ತಲೇ ಇರುತ್ತಿದ್ದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-159/365
ಪ್ರವಾದಿಯವರ ﷺ ಮದೀನಕ್ಕೆ ಆಗಮನದ ಕುರಿತು ಇರುವ, ಇಮಾಮ್ ಅಹ್ಮದ್ ◌ؓ ಹಾಗೂ ಇತರರು ಮಾಡಿದ ಉಲ್ಲೇಖದಲ್ಲಿ ಕಾಣಬಹುದು. ಮದೀನದ ಗಡಿಭಾಗಕ್ಕೆ ತಲುಪಿದ ನಂತರ ಪ್ರವಾದಿಯವರು ﷺ, ತಮ್ಮ ಸಂಬಂಧಿಕರಾದ ಬನೂ ನಜ್ಜಾರ್’ಗಳ ಬಳಿ, ಸಂದೇಶ ಕಳುಹಿಸಿದ್ದರು. ಅವರು ಅಬ್ದುಲ್ ಮುತ್ವಲಿಬರ ತಾಯಿಯ ಮೂಲಕ ಉಂಟಾಗುವ ಸಂಬಂಧಿಕರಾಗಿದ್ದರು, ಪ್ರವಾದಿಯವರನ್ನು ﷺ ಬಹಳ ಗೌರವಪೂರಕವಾಗಿ ಸ್ವಾಗತಿಸಲು ತಮ್ಮ ಆಯುಧಗಳ ಜೊತೆಯಲ್ಲಿ ಬಂದಿದ್ದ ಅವರು, ಪ್ರವಾದಿಯವರು ﷺ ಹಾಗೂ ಸಹಚರರಲ್ಲಿ, ನೀವುಗಳು ನಿಮ್ಮ ನಾಯಕರ ಜೊತೆಯಲ್ಲಿ ನಿಶ್ಚಿಂತೆಯಿಂದ ಪ್ರವೇಶ ಮಾಡಿರಿ ಎಂದು ಹೇಳಿದರು. ಪ್ರವಾದಿಯವರು ﷺ ತಮ್ಮ ಖಸ್’ವ ಎಂಬ ಒಂಟೆಯ ಮೇಲೆ ಹತ್ತಿ ಚಲಿಸಲು ಆರಂಭಿಸಿದರು. ಜನರೆಲ್ಲರೂ ಅವರ ಹಿಂದೆ ವೀರಾವೇಶದಿಂದ, ನಡೆದುಕೊಂಡು, ತಕ್’ಬೀರಿನ ಧ್ವನಿಗಳನ್ನು ಮೊಳಗಿಸುತ್ತಾ, ಸಂತೋಷದಿಂದ ಚಲಿಸ ತೊಡಗಿದರು.
ಅಲ್ಲಾಹು ಅಕ್’ಬರ್ ಅಲ್ಲಾಹನ ಸಂದೇಶ ವಾಹಕರ ಆಗಮನವಾಗಿದೆ..
ಅಲ್ಲಾಹು ಅಕ್’ಬರ್, ಮುಹಮ್ಮದ್ ಪ್ರವಾದಿಯವರ ﷺ ಆಗಮನವಾಗಿದೆ.. ಎಂದು ಬಹಳ ಆವೇಶದಿಂದ, ಘೋಷನೆ ಕೂಗುತ್ತಾ, ನಡೆದು ಹೋಗುತ್ತಿದ್ದರು. ಚಿಕ್ಕ ಮಕ್ಕಳು, ಸೇವಕರು ಕೂಡ ಮನೆಯ ಛಾವಣಿಗಳ ಮೇಲೆ ಹತ್ತಿ ಘೋಷಣೆ ಕೂಗಿ ಸ್ವಾಗತಿಸ ತೊಡಗಿದರು. ಅನಸ್’ರವರು ◌ؓ ಹೇಳುವುದು ಕಾಣಬಹುದು. ನಾವು ಕೂಡ ತಕ್ಬೀರ್ ಹೇಳುತ್ತಾ, ಇತರರ ಹಿಂದೆಯೇ ನಡೆಯಲು ಆರಂಭಿಸಿದೆವು ಆದರೆ ಏನು ಕಾಣುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರವಾಗಿತ್ತು ನಮಗೂ ಪ್ರವಾದಿಯವರನ್ನು ﷺ ಕಾಣಲು ಸಾಧ್ಯವಾದದ್ದು. ಆಮೇಲೆ ನಾವೆಲ್ಲರೂ ಒಟ್ಟಾಗಿ ಮುಂದಕ್ಕೆ ಹೋದೆವು, ಆದರೆ ಸ್ವಲ್ಪ ಸಮಯದ ನಂತರ ಒಂದು ಗೋಡೆಯ ಹಿಂದೆ, ಅನ್ಸಾರಿಗಳ ಸ್ವಾಗತಕ್ಕಾಗಿ ನಿಂತು ಕೊಂಡೆವು. ತಕ್ಷಣ ಸುಮಾರು ಐನೂರಷ್ಟು ಬರುವ ಜನರು ಬಂದು, ಪ್ರವಾದಿಯವರಲ್ಲಿ ﷺ, ಸುರಕ್ಷಿತವಾಗಿ, ನಿಶ್ಚಿಂತೆಯಿಂದ, ನಾಯಕರ ಹಾಗೆ ಒಳಗೆ ಬನ್ನಿರಿ ಎಂದು ಹೇಳಿದರು. ಒಂದೇ ಕ್ಷಣದಲ್ಲಿ ಮದೀನ ಜನಸ್ತೋಮದಿಂದ ನೆರೆಯತೊಡಗಿತು. ಮಹಿಳೆಯರು ಮೇಲ್ಛಾವಣಿಯ ಮೇಲೆ ನಿಂತು, ಪ್ರವಾದಿಯವರು ﷺ ಎಲ್ಲಿ ಎಂದು ತಮ್ಮ ತಮ್ಮಲ್ಲೇ ಮಾತಾಡುತ್ತಿದ್ದರು. ಬಹಳ ರೋಮಾಂಚನ ಕಾರಿಯಾದ ದೃಶವಾಗಿತ್ತು ಅದು, ಈ ಹಿಂದೆ ಎಂದೂ ಮದೀನದಲ್ಲಿ ಅಂತಹ ಒಂದು ಘಟನೆಯೇ ನಡೆದಿರಲಿಲ್ಲ.
ಇಮಾಮ್ ಅಹ್ಮದ್ ◌ؓ, ಹಾಗೂ ಇಮಾಮ್ ಅಬೂದಾವೂದ್’ರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಅನಸ್’ರವರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಮದೀನಕ್ಕೆ ತಲುಪಿದಾಗ, ಯುಟೋಪಿಯ ನಿವಾಸಿಗಳಾದ ಕೆಲವು ಜನರು, ಅವರ ಆಯುಧಗಳ ಮೂಲಕ ವಿಶಿಷ್ಟ ರೀತಿಯಲ್ಲಿ ಮನೋರಂಜನೆಯನ್ನು ತೋರಿಸ ತೊಡಗಿದರು. ಅದನ್ನು ಕಂಡು ಯುವಕರು ವೃದ್ಧರೆಲ್ಲರೂ ಒಟ್ಟಾಗಿ ಶುಭ ಹಾರೈಸಲು ಆರಂಭಿಸಿದರು.
ಮದೀನದಲ್ಲಿ ಅಂದು ಸ್ವಾಗತಿಸಲು ಹಾಡಿದ್ದ ಜಗತ್’ಪ್ರಸಿದ್ಧ ಕಾವ್ಯ ಎಲ್ಲರಿಗೂ ಚಿರಪರಿಚಿತವಾಗಿದೆ.
“ತ್ವಾಲಅಲ್ ಬದ್’ರು ಅಲೈನಾ
ಮಿನ್ ಸನಯ್ಯತಿಲ್ ವದಾಯಿ
ವಜಬಶ್ಶುಕ್’ರು ಅಲೈನಾ
ಮಾ ದಆಲಿಲ್ಲಾಹಿದಾಯಿ
ಅಯ್ಯುಹಲ್ ಮಬ್’ಊಸು ಫಿನಾ
ಜಿಅತಾ ಬಿಲ್ ಅಂರಿಲ್ ಮುತಾಇ”
ವಾದ ಬೆಟ್ಟದಿಂದ ಉದಯಿಸಿದವರೆ
ಪೂರ್ಣ ಚಂದ್ರರ ಹಾಗೆ ತೇಜಸ್ವಿ ತುಂಬಿದವರೇ
ಪ್ರಾರ್ಥನೆಗಳು ಇರುವ ಕಾಲದ ವರೆಗೂ ಧನ್ಯವಾದ ತಿಳಿಸಲು ಕಡ್ಡಾಯವಾಗಿ ಅರ್ಹರಾಗಿರುವಿರು.
ಪಾಲಿಸಲೇ ಬೇಕಾದ ನಿಯಮಗಳೊಂದಿಗೆ ನಮಗೊಂದು ಆಶ್ರಯವಾಗಿ ನೇಮಕಗೊಂಡಿರಿ ನೀವು.
ಪ್ರವಾದಿಯವರು ﷺ ಮದೀನಕ್ಕೆ ಬಂದ ಕ್ಷಣದಿಂದ ಮದೀನ ಸಂಪೂರ್ಣವಾಗಿ ಪ್ರಕಾಶಿಸಲ್ಪಟ್ಟವು. ಇಷ್ಟೊಂದು ಪ್ರಕಾಶಮಾನವಾದ, ಅದ್ಭುತ ದಿವಸಗಳು ಈ ಹಿಂದೆ ಮದೀನದಲ್ಲಿ ಕಳೆದು ಹೋಗಿರಲಿಲ್ಲ ಎಂದು ಅಬೂ ಖುಸೈಮರು ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಹೋಗುತ್ತಿದ್ದ ದಾರಿಯ ಮದ್ಯೆ, ಪ್ರತಿಯೊಂದು ಮನೆಯವರೂ ಪ್ರವಾದಿಯವರನ್ನು ﷺ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಲು ವಿನಂತಿಸಿದರು. ಕೆಲವರು ಅವರ ಮನೆಯಲ್ಲಿರುವ ಸೌಕರ್ಯಗಳನ್ನು ಹೇಳಿ, ಪ್ರವಾದಿಯವರನ್ನು ﷺ ಅವರ ಮನೆಗೆ ಕರೆದುಕೊಂಡು ಹೋಗಲು ಬಹಳಷ್ಟು ವಿನಂತಿಸುತ್ತಿದ್ದರು. ಹೀಗೆ ಜನರು ಪರಸ್ಪರ ಮುಗಿಬೀಳುವುದನ್ನು ಕಂಡು, ಪ್ರವಾದಿಯವರು ﷺ ನಾನು ಒಂಟೆಯನ್ನು ಅದರ ಪಾಡಿಗೆ ಬಿಟ್ಟು ಬಿಡುತ್ತೇನೆ, ಅದಕ್ಕೆ ಎಲ್ಲಿ ಹೋಗಿ ನಿಲ್ಲಬೇಕು ಎಂದು ಈಗಾಗಲೇ ಆದೇಶ ಲಭಿಸಿದೆ, ನನ್ನ ಖಸ್ವಾ ಎಲ್ಲಿ ತನ್ನ ಮಂಡಿಯೂರುತ್ತೋ, ಅಲ್ಲೇ ನಾನು ಇಳಿಯುತ್ತೇನೆ ಎಂದು ಹೇಳಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-160/365
ಪ್ರವಾದಿಯವರ ﷺ ಮದೀನ ಪ್ರವೇಶಿಸಿದ ಬಗ್ಗೆ ಇರುವ ಹಲವಾರು, ಉಲ್ಲೇಖಗಳನ್ನು ಪರಿಗಣಿಸಿ ಸರಳವಾಗಿ ತಿಳಿಸುವ ಒಂದು ಉಲ್ಲೇಖವು ಈ ರೀತಿಯಾಗಿದೆ.
ಸೋಮವಾರ ದಿಂದ ನಾಲ್ಕು ದಿನಗಳ ವರೆಗೆ ಖುಬಾದಲ್ಲೇ ಉಳಿದುಕೊಂಡರು. ರಬಿವುಲ್ ಅವ್ವಲ್ ಹನ್ನೆರಡು, ಸೆಪ್ಟೆಂಬರ್ ಇಪ್ಪತ್’ಮೂರರಂದು ಸೋಮವಾರ, ಅಲ್ಲಿಂದಲೂ ಹೊರಟು ಹೋದರು. ಪ್ರವಾದಿಯವರ ﷺ ವಾಹನ ಖಸ್’ವ, ಮುಂದೆ ಸಾಗಿ ನಂತರ ಇನ್ನೊಮ್ಮೆ ಮಂಡಿಯೂರಿ ನಿಂತದ್ದು ಇವತ್ತು ಮದೀನಾ ಮಸ್ಜಿದ್ ಇರುವ ಸ್ಥಳದಲ್ಲಾಗಿತ್ತು.
ಪ್ರವಾದಿಯವರು ﷺ ಬಳಸಿದ್ದ ವಾಹನಗಳಲ್ಲೇ, ಅತ್ಯಂತ ವಿಶೇಷವಿರುವ ವಾಹನವಾಗಿತ್ತು ಖಸ್’ವ ಒಂಟೆ. ಅರೇಬಿಯಾದ ಬನೀ ಖಾಶಿರ್ ಜನಾಂಗದ ಶಿಬಿರದಲ್ಲಾಗಿತ್ತು ಈ ಒಂಟೆ ಜನಿಸಿದ್ದು. ಮೊದಲು ಈ ಹೆಣ್ಣು ಒಂಟೆಯನ್ನು ಅಬೂಬಕ್ಕರ್’ರವರು ◌ؓ ಖರೀದಿಸಿದ್ದರೂ, ಅದಕ್ಕೆ ನಾಲ್ಕು ವರ್ಷ ಪ್ರಾಯವಾದ ನಂತರ ಪ್ರವಾದಿಯವರು ﷺ, ಆ ಒಂಟೆಗೆ ನಾನೂರು ದಿರ್’ಹಮ್ ಕೊಟ್ಟು ಸಿದ್ದೀಕ್’ರಿಂದ ◌ؓ ಖರೀದಿಸಿದರು. ಬಿಳಿ ಹಾಗೂ ಕಪ್ಪು ಮಿಶ್ರಿತವಿರುವ ಕೆಂಪು ಬಣ್ಣವಾಗಿತ್ತು ಅದರ ಮೈ ಬಣ್ಣ. ಒಳ್ಳೆಯ ಅನುಕರಣೆ ಇದ್ದ ವಾಹನವಾಗಿತ್ತು ಅದು, ಸಾಮಾನ್ಯವಾಗಿ ಇತರ ಒಂಟೆಯ ಮೇಲೆ ಕುಳಿತು ಸಂಚರಿಸುವ ಸಂದರ್ಭದಲ್ಲಿ, ಪ್ರವಾದಿಯವರಿಗೆ ﷺ ದಿವ್ಯ ಸಂದೇಶ ಲಭಿಸಿದರೆ ಒಂಟೆಯು ತನ್ನ ಬಾರ ತಾಳಲಾರದೆ ಒಂದೇ ಒಂದು ಹೆಜ್ಜೆಯೂ ಕೂಡ ಮುಂದೆ ಇಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಖಸ್’ವದ ಮೇಲೆ ಕುಳಿತು ಸಂಚರಿಸುವಾಗ, ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ಅದು ಮುಂದೆ ಸಾಗುತ್ತಿತ್ತು. ಯಾವುದೇ ರೀತಿಯ ಸ್ಪರ್ಧೆಯಲ್ಲಾದರೂ ಖಸ್’ವ ಮುಂದಿನ ಸಾಲಿನಲ್ಲಿ ಇರುತ್ತಿತ್ತು. ಒಂದೇ ಒಂದು ಬಾರಿಯೂ ಕೂಡ ಪ್ರವಾದಿಯವರಿಗೆ ﷺ ಇದು ನಿರಾಸೆ ಮಾಡಿರಲಿಲ್ಲ, ಹಿಜ್ರಾದ ಯಾತ್ರೆಯೂ ಕೂಡ ಇದೇ ಒಂಟೆಯ ಮೇಲಾಗಿತ್ತು ಸಂಚರಿಸಿದ್ದು. ಆ ಕಾರಣಕ್ಕಾಗಿತ್ತು ಅದಕ್ಕೆ ಆದೇಶ ಲಭಿಸಿದೆ, ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ ಎಂದು ಪ್ರವಾದಿಯವರು ﷺ ಹೇಳಿದ್ದು. ಮದೀನಾದ ಮಸ್ಜಿದ್ ಅಥವಾ ಮಸ್ಜಿದ್’ನ್ನಬವಿ ನೆಲೆನಿಂತಿರುವ ಸ್ಥಳದಲ್ಲಿ, ಇನ್ನೂ ಸ್ಪಷ್ಟವಾಗಿ ತಿಳಿಸುವುದಾದರೆ, ಮಸ್ಜಿದ್’ನ ಮಿಂಬರ್ ಇರುವ ಸ್ಥಳದಲ್ಲಾಗಿತ್ತು ಅದು ಮಂಡಿ ಊರಿ ನಿಂತದ್ದು. (ಮಿಂಬರ್ ಅಂದರೆ ಜನರನ್ನು ಉದ್ದೇಶಿಸಿ ವಿಶೇಷವಾದ ಖುತುಬ ಎಂದು ಕರೆಯಲ್ಪಡುವ ಆರಾಧನೆಯನ್ನು ಮಾಡಲು, ನಿಶ್ಚಿತ ಮೆಟ್ಟಿಲು ಇರುವ ಹಾಸನವಾಗಿದೆ) ಬದ್’ರ್ ಯುದ್ಧ ನಡೆಸಲು, ಮಕ್ಕಾ ವಿಜಯದ ಸಂದರ್ಭದಲ್ಲಿಯೂ ಇದೇ ಒಂಟೆಯ ಮೇಲಾಗಿತ್ತು ಪ್ರವಾದಿಯವರು ﷺ ಸಂಚರಿಸಿದ್ದು. ಪ್ರವಾದಿಯವರಿಗೆ ನಿರಂತರವಾಗಿ ಸೇವೆ ನೀಡಲು ಭಾಗ್ಯ ಲಭಿಸಿದ ಅಪರೂಪದ ಜೀವಿಯಾಗಿತ್ತು ಅದು. ಪ್ರವಾದಿಯವರ ﷺ ವಿಯೋಗವು ಅದಕ್ಕೆ ಸಹಿಸಲಾಗದೆ, ಪ್ರವಾದಿಯವರ ﷺ ವಫಾತಿನ ನಂತರ ಹದಿನೈದು ದಿನಗಳವರೆಗೆ ಒಂದು ಹನಿ ನೀರು ಕೂಡ ಕುಡಿಯದೆ, ಕಣ್ಣೀರು ಸುರಿಸುತ್ತಲೇ ಇತ್ತು. ಕೊನೆಗೆ ನೋವು ತಾಳಲಾರದೆ ಆ ಭಾಗ್ಯವಂತಳಾದ ಹೆಣ್ಣು ಒಂಟೆಯು ತನ್ನ ಪ್ರಾಣವನ್ನು ಬಿಟ್ಟು ಬಿಟ್ಟಿತು.
ಪ್ರವಾದಿಯವರು ﷺ ಮಕ್ಕಾದಿಂದ ಹೊರಟು ಮದೀನಕ್ಕೆ ತಲುಪಿರುವ ಬಗ್ಗೆ ಇತಿಹಾಸಕಾರರಲ್ಲಿ ಬಹಳಷ್ಟು ಅಭಿಪ್ರಾಯಗಳಿವೆ. ಅವುಗಳಲ್ಲಿ, ಸಫರ್ ತಿಂಗಳ ಕೊನೆಯ ಗುರುವಾರ ರಾತ್ರಿ ಮಕ್ಕಾದಿಂದ ಹೊರಟು, ಮೂರು ದಿನಗಳ ವರೆಗೆ ಸೌರ್ ಗುಹೆಯಲ್ಲಿ ಕಳೆದು, ಭಾನುವಾರ ಅಸ್ತಮಿಸಿದ ರಾತ್ರಿ ಅಥವಾ ಸೋಮವಾರ, ರಬಿವುಲ್ ಅವ್ವಲ್ ಒಂದರಂದು ರಾತ್ರಿ, ಗುಹೆಯಿಂದ ಹೊರಟು, ರಬಿವುಲ್ ಅವ್ವಲ್ ಎಂಟಕ್ಕೆ ಮದೀನಕ್ಕೆ ತಲುಪಿದರು ಎಂಬುದಾಗಿದೆ ಪ್ರಬಲವಾದ ಅಭಿಪ್ರಾಯ. ಆದರೆ ಮಕ್ಕಾದಿಂದ ಹೊರಟು, ಮದೀನಕ್ಕೆ ತಲುಪಿದ್ದೂ ಕೂಡ ಸೋಮವಾರವೇ ಆಗಿತ್ತು. ಅದೇ ರೀತಿ ರಬಿವುಲ್ ಅವ್ವಲ್ ಹನ್ನೆರಡರಂದಾಗಿತ್ತು ಎಂಬ ಉಲ್ಲೇಖವನ್ನೂ ಕೂಡ ನಮಗೆ ಕಾಣಬಹುದು.
ಮದೀನಕ್ಕೆ ತಲುಪಿದ ಕೂಡಲೇ ಪ್ರವಾದಿಯವರು ﷺ ಕೆಲವು ವಿಶಿಷ್ಟವಾದ ಆರಾಧನೆಗಳಲ್ಲಿ ನಿರತರಾದರು, ನಂತರ ಅಲ್ಲಾಹನ ಇಚ್ಛೆ ಇದ್ದರೆ ಇಲ್ಲಾಗಿರುತ್ತೆ ನಮಗೆ ಮನೆ ಆಗುವುದು ಎಂದು ಹೇಳಿ, ಪವಿತ್ರ ಖುರ್’ಆನಿನ ಅಲ್ ಮುಅಮಿನೂನ್ ಅಧ್ಯಾಯದ ಇಪ್ಪತೊಂಬತ್ತನೆ ಸೂಕ್ತವನ್ನು ಪಠಿಸಿದರು. ಅದರ ಸಾರಾಂಶವು ಈ ರೀತಿಯಾಗಿದೆ, “ನೀವು ಹೇಳಿರಿ, ಅಲ್ಲಾಹನೇ ಅತೀ ಉತ್ತಮವಾದ, ಅನುಗ್ರಹಿತ ಸ್ಥಳದಲ್ಲಿ ಇಳಿಸಿ ಕೊಡು, ನೀನೇ ಅಲ್ಲವೇ ಅತೀ ಉತ್ತಮವಾದ ಸ್ಥಳದಲ್ಲಿ ಇಳಿಸಿ ಕೊಡುವವನು”
ನಂತರ ಪ್ರವಾದಿಯವರು ﷺ ಮಾತು ಮುಂದುವರಿಸುತ್ತಾ, ಅಲ್ಲಾಹನೆ ನನಗೆ ಬಹಳ ಇಷ್ಟವಾದ ಊರಿನಿಂದ, ನಿನಗೆ ಬಹಳ ಇಷ್ಟವಿರುವ ಊರಿಗೆ ಬಂದು ತಲುಪಿರುತ್ತೇನೆ, ನಮನ್ನು ಅನುಗ್ರಹಿಸು ಪ್ರಭು.! ನಿನಗೆ ಅತೀ ಇಷ್ಟವಾದ ಪ್ರವಾದಿ ಇಬ್ರಾಹಿಮರಿಗೆ ನೀಡಿದ ಅನುಗ್ರಹಗಳಿಗೆ, ಸಮಾನವಾದ ಅನುಗ್ರಹಗಳನ್ನು ನೀನು ಇಲ್ಲಿಯೂ ಕೂಡ ನೀಡು ಪ್ರಭು ಎಂದು ಪ್ರಾರ್ಥಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-161/365
ಒಂಟೆ ಮಂಡಿಯೂರಿದ ಸ್ಥಳದಲ್ಲಿ ಪ್ರವಾದಿಯವರು ﷺ ಇಳಿದು, ಇಲ್ಲಿ ಪಕ್ಕದಲ್ಲಿ ಇರುವ ಮನೆ ಯಾರದೆಂದು ಕೇಳಿದಾಗ, ಅಬೂಅಯ್ಯೂಬ್’ರು ◌ؓ ಮುಂದೆ ಬಂದು, ಅದು ನನ್ನ ಮನೆಯಾಗಿದೆ ಪ್ರವಾದಿಯವರೇ, ನನ್ನ ಮನೆಯ ಪಕ್ಕದಲ್ಲಾಗಿದೆ ನಿಮ್ಮ ಒಂಟೆ ನಿಂತಿರುವುದು ಎಂದು ಹೇಳಿದರು. ಸರಿ ಆಗಿದ್ದರೆ ಅಲ್ಲಿ ಉಳಿದು ಕೊಳ್ಳಲು ಎಲ್ಲಾ ಸಿದ್ಧತೆಗಳನ್ನು ಮಾಡಿರಿ ಎಂದು ಪ್ರವಾದಿಯವರು ಹೇಳಿದರು. ಇನ್ನೊಂದು ಉಲ್ಲೇಖದ ಪ್ರಕಾರ, ಪ್ರವಾದಿಯವರ ﷺ ಒಂಟೆ ಮೊದಲು ಈ ಸ್ಥಳದಲ್ಲಿ ಮಂಡಿಯೂರಿದರೂ ನಂತರ ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿ ಸುತ್ತಮುತ್ತಲಿನ ಸ್ಥಳವನ್ನು ಒಮ್ಮೆ ನೋಡಿ, ಪುನಃ ಮೊದಲು ಮಂಡಿಯೂರಿದ ಸ್ಥಳಕ್ಕೆ ವಾಪಸು ಬಂದು, ತನ್ನ ಕೈಗಳನ್ನು ನೆಲಕ್ಕೆ ಚಾಚಿ ಅಲ್ಲೇ ಮಲಗಿತು. ಅದನ್ನು ಕಂಡು ಪ್ರವಾದಿಯವರಿಗೆ ﷺ, ಒಂಟೆಗೆ ಆದೇಶ ಲಭಿಸಿದ ಸ್ಥಳ ಇದುವೇ ಎಂದು ಅರ್ಥವಾಯಿತು. ತಕ್ಷಣವೇ ಅಬೂ ಅಯ್ಯೂಬುಲ್ ಅನ್ಸಾರಿಯವರು ◌ؓ ಪ್ರವಾದಿಯವರನ್ನು ﷺ ತಮ್ಮ ಮನೆಗೆ ಕರೆದುಕೊಂಡು ಹೋದರು, ಅವರ ಹಿಂದೆ ನೆರೆಹೊರೆಯ ಸಣ್ಣ ಹೆಣ್ಣು ಮಕ್ಕಳು ಕೂಡ ದಫ್ ಹಿಡಿದು ಸ್ವಾಗತ ಗೀತೆಯನ್ನು ಹಾಡಲು ಆರಂಭಿಸಿದರು.
“ನಹ್’ನು ಬನಾತುಲ್ ಮಿನ್ ಬನಿ ನ್ನಜ್ಜಾರಿ
ಯಾಹಬ್ಬದಾ ಮುಹಮ್ಮದುನ್ ﷺ ಮಿನ್ ಜಾರಿ”
(ಬನೂ ನ್ನಜ್ಜಾರಿನ ಹೆಣ್ಣು ಮಕ್ಕಳಾಗಿದ್ದೇವೆ ನಾವು, ಬಹಳ ಸೌಭಾಗ್ಯದಿಂದ ಸ್ವಾಗತ ಗೀತೆಯನ್ನು ಹಾಡುವೆವು. ನೆರೆಮನೆಯಲ್ಲಿ ಮುಹಮ್ಮದ್’ರು ﷺ ಅತಿಥಿಯಾಗಿ ಬಂದಿರುವುದಕ್ಕೆ ) ಎಂದಾಗಿತ್ತು ಆ ಸಾಲುಗಳು.
ಸ್ವಾಗತ ಗೀತೆಯನ್ನು ಕೇಳಿ ಪ್ರವಾದಿಯವರು ﷺ, ಆ ಮಕ್ಕಳಲ್ಲಿ ನಾನಂದ್ರೆ ನಿಮಗೆ ಇಷ್ಟ ಅಲ್ವಾ.? ಎಂದು ಕೇಳಿದಾಗ, ಅವರೆಲ್ಲರೂ ಒಂದೇ ಧ್ವನಿಯನ್ನು ಹೌದು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಕೂಡ ಅಲ್ಲಾಹನ ಮೇಲಾಣೆ, ನನಗೂ ನೀವುಗಳಂದ್ರೆ ತುಂಬಾನೇ ಇಷ್ಟ ಎಂದು, ಮೂರು ಬಾರಿ ಪುನರಾವರ್ತಿಸಿ ಹೇಳಿದರು.
ಅಬೂ ಅಯ್ಯೂಬ್’ರವರ ◌ؓ ಮನೆಯಲ್ಲಿ ಉಳಿದುಕೊಳ್ಳುವುದು ಕೇವಲ ಕಾಕತಾಳೀಯವಾಗಿರಲಿಲ್ಲ, ಅಥವಾ ಅದು ಅವರ ಆತಿಥ್ಯವೂ ಆಗಿರಲಿಲ್ಲ. ಬದಲಾಗಿ ಪ್ರವಾದಿಯವರಿಗಾಗಿ ﷺ ಮೊದಲೇ ಕಾಯ್ದಿರಿಸಿದ್ದ ಮನೆಯಾಗಿತ್ತು ಅದು, ಸರಿ ಅದರ ಬಗ್ಗೆ ತಿಳಿಯೋಣ.
ಹಿಂಯರದ ರಾಜರಲ್ಲಿ ಒಬ್ಬರಾದ, ತುಬ್ಬಾಅ ಒಂದನೇಯವನು ನಾನೂರು ಪಂಡಿತರ ಜೊತೆಯಲ್ಲಿ ಸಂಚರಿಸುತ್ತಿದ್ದಾಗ, ಮದೀನಕ್ಕೆ ಬಂದು ತಲುಪಿದರು. (ತುಬಾನ್ ಬಿನ್ ಅಸ್’ಅದ್ ಅಬೂ ಕರ್’ಬ್ ಎಂದಾಗಿತ್ತು ಅವರ ಪೂರ್ತಿ ಹೆಸರು.) ಮದೀನಕ್ಕೆ ತಲುಪಿ ನಂತರ, ಪಂಡಿತರೆಲ್ಲರೂ ಮದೀನ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದರು. ಅದಕ್ಕೆ ಕಾರಣ ಕೇಳಿದಾಗ, ಅವರೆಲ್ಲರೂ ಅಹ್ಮದ್ ﷺ, ಮುಹಮ್ಮದ್ ﷺ ಎಂಬ ಹೆಸರಿನಿಂದ ಕರೆಯಲ್ಪಡುವ ಅಂತ್ಯ ಪ್ರವಾದಿಯವರು ﷺ ಪಲಾಯನ ಮಾಡಿ ಬರುವ ಸ್ಥಳವಾಗಿದೆ ಇದು. ನಮಗೆ ಇದನ್ನು ವೇದಗ್ರಂಥಗಳ ಮೂಲಕ ತಿಳಿಯಲು ಸಾಧ್ಯವಾದ ಕಾರಣ, ನಮಗಾಗಲಿ, ನಮ್ಮ ಪರಂಪರೆಯಲ್ಲಿ ಬರುವ ಮಕ್ಕಳಿಗಾಗಲಿ ಅವರನ್ನು ಸ್ವಾಗತಿಸುವ ಭಾಗ್ಯ ಸಿಗಬಹುದು ಎಂದು ಉದ್ದೇಶದಿಂದ ನಾವು ಇಲ್ಲೇ ಉಳಿದುಕೊಳ್ಳುತ್ತೇವೆ ಎಂದು ಹೇಳಿದರು. ಅದನ್ನು ಕೇಳಿ ರಾಜರಿಗೂ ಕುತೂಹಲ ಉಂಟಾಗಿ, ಕೆಲವು ದಿನಗಳ ಕಾಲ ಅವರೂ ಕೂಡ ಮದೀನದಲ್ಲೇ ಉಳಿದುಕೊಂಡರು. ನಾನೂರು ಪಂಡಿತರಿಗೂ ಮನೆಗಳನ್ನು ನಿರ್ಮಿಸಿ ಕೊಟ್ಟರು. ಅವರ ಅಗತ್ಯಗಳಿಗಾಗಿ ಕೆಲವು ಸಂಪತ್ತುಗಳನ್ನೂ ಕೊಟ್ಟು, ಅವರಿಗೆ ಮದುವೆಯನ್ನೂ ಮಾಡಿಸಿ ಕೊಟ್ಟರು. ಅಷ್ಟೇ ಅಲ್ಲದೆ ಪ್ರವಾದಿಯವರು ﷺ ಪಲಾಯನ ಮಾಡಿ ಬಂದಾಗ ಅವರಿಗೆ ಉಳಿದುಕೊಳ್ಳಲು ಮನೆಯನ್ನೂ ಕೂಡ ನಿರ್ಮಿಸಿ, ತನ್ನ ವಿಶ್ವಾಸವನ್ನು ತಿಳಿಸುವ ಸಲುವಾಗಿ ಪತ್ರವನ್ನೂ ಬರೆದು, ಅದರಲ್ಲಿ ಅವರ ಸ್ವರ್ಣಮುದ್ರೆಯನ್ನೂ ಹಾಕಿಸಿ ಅವರಲ್ಲಿ ಹಿರಿಯ ಪಂಡಿತರ ಕೈಯಲ್ಲಿ, ಆ ಪತ್ರವನ್ನು ಕೊಟ್ಟರು. ಆ ಪತ್ರದಲ್ಲಿ ಬರೆದಿದ್ದ ವಿಷಯ ಈ ರೀತಿಯಾಗಿತ್ತು.
“ಅಹ್ಮದ್ ಪ್ರವಾದಿಯವರೆಂದು ﷺ ಸಾಕ್ಷ್ಯಾ ವಹಿಸುತ್ತಾ, ಸೃಷ್ಟಿಕರ್ತನು ನಿಯೋಗಿಸುವ ಮಹಾ ಮನುಷಿಯನ್ನು ಕಾಣಲು ಹಂಬಲಿಸುತ್ತಾ, ಕಾಯುತ್ತಿರುವ ಒಬ್ಬ ಸೇವನಾಗಿದ್ದೇನೆ ನಾನು”
ಪ್ರಸ್ತುತ ಈ ಮನೆಯು, ಹೀಗೆ ಒಬ್ಬರಿಂದೊಬ್ಬರಿಗೆ ತಲುಪಿ, ಕೊನೆಗೆ ಅಬೂಅಯ್ಯೂಬುಲ್ ಅನ್ಸಾರಿಯವರ ಕೈಗೆ ಸಿಕ್ಕಿತ್ತು. ಆ ರಾಜ ಬರೆದಿದ್ದ ಪತ್ರವನ್ನು ಪ್ರವಾದಿಯವರಿಗೆ ﷺ ನೀಡಿರುವ ಬಗ್ಗೆ, ಅಷ್ಟೊಂದು ಪ್ರಬಲವಲ್ಲದಿದ್ದರೂ ಕೆಲವೊಂದು ಉಲ್ಲೇಖಗಳಲ್ಲಿ ಕಾಣಬಹುದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-162/365
ಅಬೂ ಅಯ್ಯೂಬುಲ್ ಅನ್ಸಾರಿಯವರ ◌ؓ ಮನೆಯು, ಮೇಲ್ಚಾವಣಿ ಇರುವ ಮನೆಯಾಗಿತ್ತು. ಹಾಗಾಗಿ ಪ್ರವಾದಿಯವರಲ್ಲಿ ﷺ ಮೇಲಿನ ಮಾಳಿಗೆಯಲ್ಲಿ ಉಳಿದುಕೊಳ್ಳಲು ಹೇಳಿದಾಗ, ಪ್ರವಾದಿಯವರು ﷺ, ಸಂದರ್ಶಕರನ್ನು ಸ್ವಾಗತಿಸಲು, ಹಾಗೂ ಇತರ ಸೌಲಭ್ಯಗಳು ಕೆಳಗೆ ಸುಲಭವಾಗಿ ಆಗುವುದರಿಂದ, ಕೆಳಗೆಯೇ ಉಳಿದುಕೊಳ್ಳುವುದಾಗಿ ಹೇಳಿದರು. ವಿಧಿಯಿಲ್ಲದೆ ಅಬೂಅಯ್ಯೂಬ್ ◌ؓ ಹಾಗೂ ಅವರ ಪತ್ನಿ, ಛಾವಣಿಯ ಮೇಲಿನ ಮಾಳಿಗೆಯಲ್ಲಿ ಉಳಿದುಕೊಳ್ಳಲು ಮುಂದಾದರು. ಆದರೆ ಅವರ ಮನಸ್ಸಿನ ಒಳಗೆ ಬಹಳಷ್ಟು ತಳಮಳ ಕಾಡುತ್ತಿತ್ತು. ಮಾಳಿಗೆಯ ಮೇಲೆ ಉಂಟಾಗುವ ಶಬ್ದಗಳು ಪ್ರವಾದಿಯವರ ﷺ ಏಕಾಂತಕ್ಕೆ ತೊಂದರೆ ಉಂಟಾಗಬಹುದೋ ಎಂದು ಬಹಳಷ್ಟು ಭಯಪಟ್ಟಿದ್ದರು. ಹೀಗಿರುವಾಗ ಒಂದು ದಿನ, ರಾತ್ರಿ ಅವರು ನಿದ್ದೆ ಮಾಡಲು ಹೋಗುವಾಗ ಅವರ ಪಾತ್ರೆಯಲ್ಲಿದ್ದ ನೀರು ಮಗುಚಿ ಚೆಲ್ಲಿ ಹೋಯಿತು. ಅದನ್ನು ಕಂಡು ಅವರಿಬ್ಬರೂ ಬಹಳಷ್ಟು ಚಿಂತಿತರಾದರು. ಈ ನೀರು ಹರಿದು ಪ್ರವಾದಿಯವರ ﷺ ಮೇಲೆ ಬಿದ್ದರೆ ಎಂದು ಬಹಳಷ್ಟು ಭಯಪಟ್ಟು, ಕೊನೆಗೆ ತಮ್ಮ ಬಳಿ ಇದ್ದ, ಒಂದೇ ಒಂದು ಹೊದಿಕೆಯನ್ನೂ ಅದರ ಬಳಿ ಹಾಕಿ ನೀರನ್ನು ತಡೆದು ನಿಲ್ಲಿಸಿ, ಅದನ್ನು ಸ್ವಚ್ಛ ಮಾಡಿದರು. ಆದರೆ ಆ ರಾತ್ರಿ ಅವರು ಬೆಳ್ಳಿಗಿನವರೆಗೆ ನಿದ್ರೆ ಮಾಡಿರಲಿಲ್ಲ. ಈ ವಿಷಯ ಪ್ರವಾದಿಯವರಿಗೆ ﷺ ತಿಳಿದಾಗ, ಅವರ ವಿನಂತಿಯ ಪ್ರಕಾರ ಮಾಳಿಗೆಯಲ್ಲಿ ಉಳಿದುಕೊಳ್ಳಲು ಮುಂದಾದರು.
ಅಬೂಅಯ್ಯೂಬ್’ರ ◌ؓ ಪತ್ನಿ ಆಹಾರ ತಯಾರು ಮಾಡಿ, ಅವರ ಪತಿಯಲ್ಲಿ ಕೊಟ್ಟು ಕಳುಹಿಸಿತಿದ್ದರು. ಪ್ರವಾದಿಯವರು ﷺ ಆಹಾರ ಸೇವಿಸಿದ ನಂತರ, ಬಾಕಿ ಉಳಿದ ಭಾಗದಲ್ಲಿ ಪ್ರವಾದಿಯವರ ﷺ ಕೈ ಸ್ಪರ್ಶದ ಕುರುಹು ಇರುವ ಆಹಾರವನ್ನು ಸೇವಿಸಲು, ಪರಸ್ಪರ ಸ್ಪರ್ಧಿಸುತ್ತಿದ್ದರು. ಹೀಗಿರುವಾಗ ಒಂದು ದಿನ, ಈರುಳ್ಳಿ ಮಿಶ್ರಿತ ಖಾದ್ಯಗಳನ್ನು ತಯಾರಿಸಿ, ಆಹಾರವನ್ನು ಪ್ರವಾದಿಯವರ ﷺ ಮುಂದೆ ಇಡಲಾಯಿತು. ಸ್ವಲ್ಪ ಹೊತ್ತು ಕಳೆದು ಪಾತ್ರೆ ತರಲು ಹೋದಾಗ, ಆಹಾರ ಹಾಗೆ ಬಾಕಿ ಇತ್ತು. ಅದನ್ನು ಕಂಡು ಪ್ರವಾದಿಯವರಲ್ಲಿ ﷺ, ಏನಾಯಿತು.? ಯಾಕೆ ಏನನ್ನು ಸೇವಿಸಲಿಲ್ಲ, ಸಾಮಾನ್ಯವಾಗಿ ನಾನು ಹಾಗೂ ನನ್ನ ಪತ್ನಿ, ನಿಮ್ಮ ಅನುಗ್ರಹ ಪಡೆಯುವ ನಿಟ್ಟಿನಲ್ಲಿ, ಆಹಾರದ ಮೇಲೆ ನಿಮ್ಮ ಕೈ ಸ್ಪರ್ಶದ ಕುರುಹು ಇರುವ ಆಹಾರವನ್ನು ಸೇವಿಸಲು ಸ್ಪರ್ಧಿಸುತ್ತಿದ್ದೆವು, ಆದರೆ ಇವತ್ತು ಕುರುಹು ಕಾಣುತ್ತಿಲ್ಲ, ನೀವು ಆಹಾರ ಸೇವಿಸಿಯೂ ಇಲ್ಲ ಎಂದು ಕೇಳಿದಾಗ, ಪ್ರವಾದಿಯವರು ﷺ ಯಾವುದೇ ಬೇಸರವಿಲ್ಲದೆ ಬಹಳ ಮೃದುವಾಗಿ, ನಾನು ಜನರಲ್ಲಿ ಸಂವಹನ ನಡೆಸುವ ವ್ಯಕ್ತಿಯಾಗಿರುವ ಕಾರಣ, ಈ ಈರುಳ್ಳಿಯ ವಾಸನೆ ಅವರಿಗೆ ತೊಂದರೆಯಾಗಬಹುದು ಹಾಗಾಗಿ ಸೇವಿಸಲಿಲ್ಲ. ಪರವಾಗಿಲ್ಲ ನೀವು ಆಹಾರ ಸೇವಿಸಿರಿ ಎಂದು ಹೇಳಿದರು. ಅಬೂ ಅಯ್ಯೂಬ್ ◌ؓ ಹೇಳುವುದು ಕಾಣಬಹುದು, ಅವತ್ತು ನಾವು ಆಹಾರ ಸೇವಿಸಿದರೂ, ನಂತರ ಯಾವತ್ತೂ ಕೂಡ ಆ ಆಹಾರವನ್ನು ತಯಾರಿಸಲೇ ಇಲ್ಲ ಎಂದು.
ಪ್ರವಾದಿಯವರ ﷺ ಜೀವನ ಶೈಲಿ, ಸ್ವಭಾವ ಶೈಲಿ ಎಲ್ಲವೂ ಆಕರ್ಷಣೀಯವಾಗಿತ್ತು. ಝೈದ್ ಬಿನ್ ಸಾಬಿತ್’ರವರು ◌ؓ ಹೇಳುವುದು ಕಾಣಬಹುದು, ಪ್ರವಾದಿಯವರ ﷺ ಮನೆಗೆ ಆಹಾರವನ್ನು ಉಡುಗೊರೆಯಾಗಿ, ಮೊದಲು ನೀಡಲು ಹೋಗಿದ್ದು ನಾನಾಗಿದ್ದೇನು. ಹಾಲು, ರೊಟ್ಟಿ, ಹಾಗೂ ಬೆಣ್ಣೆಯ ಜೊತೆಯಲ್ಲಿ, ಒಂದು ಪಾತ್ರೆಯನ್ನು ಹಿಡಿದು ಪ್ರವಾದಿಯವರ ﷺ ಬಳಿ ಬಂದು, ತಾಯಿ ಕೊಟ್ಟು ಕಳುಹಿಸಿದ್ದು ಎಂದು ಹೇಳಿ, ಪ್ರವಾದಿಯವರಿಗೆ ﷺ ನೀಡಿದೆನು. ಅದಕ್ಕೆ ಅವರು ನಮ್ಮ ಅನುಗ್ರಹಕ್ಕಾಗಿ ಪ್ರಾರ್ಥನೆ ನಡೆಸಿ, ತಮ್ಮ ಅನುಯಾಯಿಗಳನ್ನು ಕರೆದು, ಅವರಿಗೂ ಬಡಿಸಿದರು. ಸ್ವಲ್ಪ ಸಮಯದ ನಂತರ ಸಅದ್ ಬಿನ್ ಉಬಾದರೂ ◌ؓ ಕೂಡ, ತನ್ನ ಸೇವಕನ ತಲೆಯ ಮೇಲೆ, ಮುಚ್ಚಿದ ಪಾತ್ರೆಯಲ್ಲಿ, ಒಳ್ಳೆಯ ಸ್ವಾದಿಷ್ಟವಾದ, ಎಲುಬಿನೊಂದಿಗಿರುವ ಮಾಂಸದ ಆಹಾರವನ್ನು ಕೊಟ್ಟು ಕಳುಹಿಸಿದ್ದರು. ಅಬೂ ಅಯ್ಯೂಬರ ◌ؓ ಮನೆಯಲ್ಲಿ ಏಳು ತಿಂಗಳ ಕಾಲ ಉಳಿದುಕೊಂಡಿದ್ದ ಪ್ರವಾದಿಯವರಿಗೆ ﷺ, ಎಲ್ಲಾ ದಿವಸವೂ ಈ ರೀತಿಯ ವಿಧ ವಿಧವಾದ, ಆಹಾರಗಳ ಜೊತೆಯಲ್ಲಿ ಪ್ರತಿದಿನ ಮೂರು ನಾಲ್ಕು ಜನರಾದರೂ ಖಂಡಿತ ಬರುತ್ತಿದ್ದರು.
ಒಂದು ದಿನ ಅಬೂಅಯ್ಯೂಬರ ಪತ್ನಿಯಲ್ಲಿ, ಪ್ರವಾದಿಯವರು ﷺ ನಿಮ್ಮ ಮನೆಯಲ್ಲಿ ಅಲ್ಲವೇ.? ಇದ್ದದ್ದು, ಹಾಗಾಗಿ ಅವರಿಗೆ ಬಹಳ ಇಷ್ಟವಾದ ಆಹಾರ ಯಾವುದು ಎಂದು ಕೇಳಿದಾಗ, ಅಬೂ ಅಯ್ಯೂಬರ ◌ؓ ಪತ್ನಿ, ವಿಶೇಷವಾಗಿ ಇಂಥದ್ದೇ ಆಹಾರ ಬೇಕು ಎಂದು ಯಾವತ್ತೂ ಹೇಳಿರಲಿಲ್ಲ. ಒಂದೇ ಒಂದು ದಿನವೂ ಕೂಡ, ತಯಾರಿಸಿ ಕೊಟ್ಟ ಆಹಾರವನ್ನು ದೂಷಿಸಿಯೂ ಇರಲಿಲ್ಲ ಎಂದು ಹೇಳಿದರು. ಅಬೂ ಅಯ್ಯೂಬ್’ರು ◌ؓ ಹೇಳುವುದು ಕಾಣಬಹುದು, ಹರೀಸ್ ಎಂಬ ಆಹಾರವನ್ನು ಬಹಳ ಇಷ್ಟಪಟ್ಟು ಸೇವಿಸುತ್ತಿದ್ದದ್ದು ಕಾಣಬಹುದಿತ್ತು, ಅಷ್ಟೇ ಅಲ್ಲಪ್ರತಿ ದಿನವೂ ಕೂಡ ಐದರಿಂದ ಹದಿನಾರು ಮಂದಿಯಷ್ಟು ಜನರು ಒಟ್ಟಿಗೆ ಕುಳಿತು ಆಹಾರ ಸೇವಿಸುತ್ತಿದ್ದರು.
ಅಬೂ ಅಯ್ಯೂಬರ ◌ؓ ಮರಣದ ನಂತರ ಅವರ ಮನೆಯು, ಅವರ ಸೇವಕ ಅಫ್’ಲಹಿರಿಗೆ ಸಿಕ್ಕಿತ್ತು. ಅವರು ಅದನ್ನು ಸಾವಿರ ದೀನಾರಿಗೆ ಮುಗೀರತ್ ಬಿನ್ ಅಬ್ದುಲ್ ರಹ್ಮಾನಿಗೆ ಮಾರಿದರು. ನಂತರದ ದಿನಗಳಲ್ಲಿ ನೀತಿವಂತನಾದ ಆಡಳಿತ ಅಧಿಕಾರಿ, ನೂರುದ್ದೀನ್ ಅಸ್ಸಿನ್’ಕಿಯ ಮಗ, ಶಿಹಾಬುದ್ದೀನ್ ಅಲ್’ಗಾಸಿ ಅದನ್ನು ಖರೀದಿಸಿದರು. ನಂತರ ಅದು, ಹಿಜ್ರಾ ಹದಿಮೂರರಲ್ಲಿ ಮಸ್ಜಿದ್’ನ ಆಕಾರದಲ್ಲಿ ಸಾವಿಯತ್ತುಲ್ ಜುನೈದಿಯಾಗಿ ಬದಲಾಯಿತು. ಈಗ ಅದು ಮಸ್ಜಿದ್’ನ್ನಬವಿ ಆಗ್ನೇಯ ದಿಕ್ಕಿನ ಒಂದು ಭಾಗವಾಗಿದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-163/365
ಪಲಾಯನ ಕಳೆದು ಮದೀನಕ್ಕೆ ತಲುಪಿದ, ಪ್ರವಾದಿಯವರು ﷺ ಹಾಗೂ ಅವರ ಅನುಚರರಾದ ಮುಹಾಜಿರ್’ಗಳೆಲ್ಲರೂ ಸಂತೋಷದಿಂದ ಮದೀನದಲ್ಲಿ ಜೀವಿಸುತ್ತಿದ್ದರು. ಮಕ್ಕಾದಿಂದ ಮದೀನಕ್ಕೆ ಮಾಡಿದ ಪಲಾಯನ ಯಾತ್ರೆಯಲ್ಲಿ ಉಂಟಾದ ಕೆಲವೊಂದು ವಿಷಯಗಳ ಬಗ್ಗೆ ತಿಳಿಯೋಣ, ಪ್ರವಾದಿಯವರು ﷺ ರಹಸ್ಯವಾಗಿ ಪಲಾಯನ ಮಾಡುವಾಗ, ಉಮರ್’ರವರು ◌ؓ ಸಾರ್ವಜನಿಕವಾಗಿ ಮಕ್ಕಾದಿಂದ ಹೊರಟು ಹೋದದ್ದು ಯಾಕೆ.? ಎಂಬ ಪ್ರಶ್ನೆ ಸಾಮಾನ್ಯವಾಗಿ ಕೆಲವರು ಕೇಳಬಹುದು. ಪ್ರವಾದಿಯವರು ﷺ ಸಾರ್ವಜನಿಕವಾಗಿ ಹೊರಟು ಹೋಗುವಾಗ ಉಂಟಾಗುವ ರಕ್ತಪಾತ, ಘರ್ಷಣೆ ಮುಂತಾದ ಒಳಜಗಳನ್ನು ತಡೆಯುವ ಉದ್ದೇಶದಿಂದಾಗಿತ್ತು ರಹಸ್ಯವಾಗಿ ಹೊರಟಿದ್ದು. ಆದರೆ ಉಮರ್,ರು ◌ؓ ಸಾರ್ವಜನಿಕವಾಗಿ ಮಕ್ಕಾದಿಂದ ಹೊರಟು ಬಂದ ಉದ್ದೇಶ, ಜವಾಬ್ದಾರಿಗಳ ನಿರ್ವಹಣೆಗೆ ಬೇಕಾಗಿ ಮಾಡುವ ಪೂರ್ವ ತಯಾರಿಯಾಗಿದೆ ಇದು, ಅಲ್ಲದೆ ಹೇಡಿತನದ ಪಲಾಯನವಲ್ಲ ಎಂದು ತೋರಿಸಿ ಕೊಡುವ ಉದ್ದೇಶದಿಂದಲೂ ಆಗಿತ್ತು.
ಪೂರ್ವಸೂರಿಗಳಾದ ಪ್ರವಾದಿಗಳ ಕಾಲದಲ್ಲೂ ಬಹಳಷ್ಟು ಪಲಾಯನಗಳು ಉಂಟಾದದ್ದು ಕಾಣಬಹುದು. ಇಬ್ರಾಹಿಂ (ಅ), ಇಸ್ಮಾಯಿಲ್ (ಅ), ಹಾಗೂ ಮೂಸ (ಅ), ಪ್ರವಾದಿಯವರು ಮಾಡಿದ ಪಲಾಯನಗಳೂ ಕೂಡ ಅವರವರ ಜವಾಬ್ದಾರಿ ನಿರ್ವಹಣೆಗೆ ಬೇಕಾಗಿ ಮಾಡಿದ ತಯಾರಿಯ ಭಾಗವಾಗಿತ್ತು. ಹೀಗಿರುವಾಗ ಪ್ರವಾದಿಯವರ ﷺ ನಿಯೋಗಕ್ಕೆ ಸಂಬಂಧಿಸಿದಂತೆ, ಉಂಟಾದ ಈ ಹಿಜ್’ರವು (ಪಲಾಯನ) ಕೂಡ ಅನಿವಾರ್ಯವಾಗಿತ್ತು. ಏಕಾಂತ ಧ್ಯಾನ ಅಥವಾ ಹಿರಾ ಗುಹೆಯಲ್ಲಿ ಕಳೆದ ಏಕಾಂತ ವಾಸ, ಸಾರ್ವಜನಿಕ ಇಸ್ಲಾಮ್ ಘೋಷಣೆ, ಸಮರ್ಪಣೆಯಲ್ಲಿರುವ ಸಹನೆ, ಬಹಳ ಸೂಕ್ಷ್ಮವಾಗಿ ಕಟ್ಟಿದ ಮನೋಬಲ, ಮುಂತಾದವುಗಳಿಗೆ ಬೇಕಾಗಿ ಉಂಟಾದ ಪ್ರಭೋಧನೆಯ ದಾರಿಯಾಗಿತ್ತು ಈ ಹಿಜ್ರಾ ಅಥವಾ ಪಲಾಯನ ಎಂದು ಹೇಳಿದರೂ ತಪ್ಪಾಗಲಾರದು. ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟ ವಧು, ಹೊಸ ಮನೆಯಲ್ಲಿ ಬಂದು ಜೀವನದ ಒಂದೊಂದು ಘಟ್ಟಗಳನ್ನು ನಿಭಾಯಿಸುವ ಹಾಗೆ ಎಂದೂ ಪಲಾಯನವನ್ನು ಉದಾಹರಣೆ ಕೊಟ್ಟವರೂ ಇದ್ದಾರೆ. ಶಾಹ್ ವಲಿಯುಲ್ಲಾಹಿ ಅದ್ದಹ್’ಲವಿಯವರು ◌ؓ, ಪಲಾಯನವನ್ನು ಆದರ್ಶವಾದದ ಉಳಿವು ಎಂದು ಪ್ರಸ್ತುತ ಪಡಿಸಿದ್ದರು.
ಮದೀನಾ ಮಾತ್ರವಲ್ಲದೆ ಪ್ರಪಂಚದ ದಿಕ್ಕನ್ನೇ ಬದಲಾಯಿಸುವ ವಲಸೆಯಾಗಿತ್ತು, ಇದು ಎಂದು ಇತಿಹಾಸವು ತಿಳಿಸಿಕೊಟ್ಟಿದೆ. ಪ್ರಪಂಚದಲ್ಲಿ, ಪ್ರತಿ ಕ್ಷೇತ್ರದಲ್ಲೂ ಅದುವರೆಗೆ ಇದ್ದ ಎಲ್ಲಾ ಆಚರಣೆಗಳನ್ನು ಬದಲಾಯಿಸಲು ಅಥವಾ ಆಧುನೀಕರಣಗೊಳಿಸಲು ಇಟ್ಟ ಹೆಜ್ಜೆಗಳಾಗಿತ್ತು, ಹಿಜ್ರಾದ ಮೂಲಕ ಇಟ್ಟದ್ದು.
ಮಕ್ಕಾದಲ್ಲಿ ಸಂಧಿಕ್ತ ಪರಿಸ್ಥಿತಿಯಲ್ಲಿದ್ದ ಇಸ್ಲಾಮ್, ಮದೀನದಲ್ಲಿ ಹೇಗೆ ಅಷ್ಟು ಸುಲಭವಾಗಿ ಹರಡಿತು ಎಂದೂ ಕೂಡ ಬಹುಶಃ ಕೆಲವರು ಕೇಳಬಹುದು. ಅವುಗಳ ಬಗ್ಗೆ ಪಂಡಿತ ಶಿರೋಮಣಿಗಳು ಸಾಮಾಜಿಕವಾಗಿಯೂ, ಮಾನವಶಾಸ್ತ್ರೀಯವಾಗಿಯೂ ಕೆಲವೊಂದು ವ್ಯತ್ಯಾಸಗಳನ್ನು ತಿಳಿಸಿದ್ದು ಕಾಣಬಹುದು. ಮಕ್ಕಾ ಎಂಬುದು ವ್ಯಾಪಾರಿಗಳು, ಸೇವಕರು ಇರುವ ಪ್ರದೇಶವಾಗಿತ್ತು. ಆದರೆ ಮದೀನಾ ರೈತರ, ವಿನಮ್ರತೆಯಿಂದ ಕೂಡಿದ ಜನರ ಊರಾಗಿತ್ತು. ಹಾಗಾಗಿ ಈ ವ್ಯತ್ಯಾಸಗಳು ಅವರವರ ಜೀವನದಲ್ಲಿ ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ಪರಿಣಾಮ ಬೀರುತ್ತದೆ. ಅಬೂಜಹಲ್, ಉತ್’ಬ, ಶೈಬ ಮುಂತಾದವರ ಹಾಗೆ ಒಬ್ಬರನ್ನೂ ಕೂಡ ಮದೀನದ ಮಣ್ಣಿನಲ್ಲಿ ಇತಿಹಾಸಕ್ಕೆ ಹುಡುಕಲು ಸಾಧ್ಯವಾಗಿಲ್ಲ. ಇವತ್ತಿಗೂ ಕೂಡ ಮದೀನಾ ಹಾಗೂ ಮಕ್ಕಾದ ನಿವಾಸಿಗಳ ನಡುವೆ ಸ್ವಭಾವಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಲು ಸಾಧ್ಯವಿದೆ. ಆಡಳಿತಾತ್ಮಕ ವಿಷಯಗಳಲ್ಲಿ ನಾಯಕತ್ವ ನೀಡಲು ಮುಂಚೂಣಿಯಲ್ಲಿರುತ್ತಿದ್ದದ್ದು ಮಕ್ಕಾ ನಿವಾಸಿಗಳಾಗಿದ್ದರು. ಅದೇ ಕಾರಣಕ್ಕೆ ಆಗಿತ್ತು, ಪ್ರವಾದಿಯವರ ﷺ ನಂತರದ ಕಾಲದಲ್ಲಿಯೂ ಖಲೀಫರಾಗಿ ಆಯ್ಕೆಯಾದ ನಾಲ್ಕು ಜನರು ಕೂಡ ಮಕ್ಕಾ ನಿವಾಸಿಗಳಾಗಿದ್ದರು. ಅದರ ನಂತರ ಖಲೀಫರಾದ ಮುಆವಿಯರು ◌ؓ ಕೂಡ ಮಕ್ಕಾ ನಿವಾಸಿಯೇ ಆಗಿದ್ದರು.
ಇನ್ನು ಮುಂದಿನ ಪ್ರವಾದಿಯವರ ﷺ ಇತಿಹಾಸವನ್ನು ಮದೀನದ ಮಣ್ಣು, ಮನಸ್ಸನ್ನು ಒಟ್ಟಿಗೆ ಸೇರಿಸಿ ಮಾತ್ರವೇ ನಮಗೆ ತಿಳಿಯಲು ಸಾಧ್ಯ. ಪ್ರವಾದಿಯವರ ﷺ ಕರ್ಮಭೂಮಿಯಾಗಿ ಆಯ್ಕೆಯಾದ ಮದೀನದ ಮಣ್ಣು, ಕೊನೆಗೆ ಅಂತ್ಯ ವಿಶ್ರಾಂತಿ ಪಡೆಯಲು ಆಯ್ಕೆ ಮಾಡಿದ್ದು ಕೂಡ ಅದೇ ಭೂಮಿ, ಇವೆಲ್ಲವೂ ಪೂರ್ವನಿರ್ಧಾರಿತವಾಗಿತ್ತು. ಆ ಬೆಳಕಿನ ನಗರವನ್ನು ಭಕ್ತಿಯಿಂದ ತಿಳಿದು, ಆಳವಾದ ಮೌಲ್ಯಗಳನ್ನು ಅರ್ಥ ಮಾಡಿಕೊಂಡ ನಂತರವೇ ಈ ಅಧ್ಯಯನವನ್ನು ಮುಂದಕ್ಕೆ ಕೊಂಡು ಹೋಗಲು ಸಾಧ್ಯವಾಗುವುದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-164/365
ಸರಿ, ಇನ್ನೂ ಪವಿತ್ರ ಮದೀನಾದ ಸಂಚಾರಗಳ ಕುರಿತು ಚರ್ಚೆಗಳನ್ನು ಆರಂಭಿಸೋಣ. ಯಸ್’ರಿಬ್ ಎಂದಾಗಿತ್ತು ಮದೀನಕ್ಕೆ ಇದ್ದ ಹಳೆಯ ಹೆಸರು. ಪ್ರವಾದಿ ನೂಹ್’ರವರ (ಅ) ಮಕ್ಕಳ ಪರಂಪರೆಯಲ್ಲಿ ಬರುವ ಯಸ್’ರಿಬ್ ಎಂಬ ವ್ಯಕ್ತಿಯು ಈ ಪ್ರದೇಶಕ್ಕೆ ಅಡಿಪಾಯ ಹಾಕಿದ ಕಾರಣ, ಇಲ್ಲಿಗೆ ಆ ಹೆಸರು ಬಂದಿತು. ಆಮೇಲೆ ಪ್ರವಾದಿಯವರು ﷺ ಇಲ್ಲಿಗೆ ಬಂದ ನಂತರ, ನಗರ ಎಂದು ಅರ್ಥವನ್ನು ಸೂಚಿಸುವ ಮದೀನಾ ಎಂಬ ಹೆಸರಿನಿಂದ ಈ ಊರನ್ನು ಕರೆದರು. ಅಬೂಹುರೈರ’ರಿಂದ ◌ؓ ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಪ್ರವಾದಿಯವರು ﷺ ಹೇಳುವುದು ಕಾಣಬಹುದು, ಎಲ್ಲಾ ಊರುಗಳನ್ನು ತಿನ್ನುವ (ವಶಪಡಿಸಿಕೊಳ್ಳುವ) ಒಂದು ಊರಿಗೆ ಹೋಗಲು ನನಗೆ ಅನುಮತಿ ಲಭಿಸಿತು, ಜನರು ಆ ಊರನ್ನು ಯಸ್’ರಿಬ್ ಎಂದು ಕರೆಯುತ್ತಿದ್ದರು, ಅದುವೇ ಮದೀನ ಆಗಿದೆ. ಕುಲುಮೆಯಲ್ಲಿರುವ ಬೆಂಕಿಯು ಕಬ್ಬಿಣದ ಮೇಲಿನ ತುಕ್ಕುಗಳನ್ನು ಹೊರಗೆ ಹಾಕುವ ಹಾಗೆ, ಮದೀನಾ ತನ್ನೊಳಗೆ ಇರುವ ದುಷ್ಟ ಜನರನ್ನು ಹೊರಗೆ ಹಾಕುತ್ತದೆ.
ಪ್ರವಾದಿಯವರ ﷺ ಆಗಮನದ ನಂತರ “ಮದೀನತ್’ರಸೂಲ್” ಅಥವಾ ಅಲ್ಲಾಹನ ದೂತರ ನಗರ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಅಲ್ಲಾಹನು ಮಕ್ಕಾ ನಗರವನ್ನು ಸುರಕ್ಷಿತ ನಗರ ಮಾಡಿದ ಹಾಗೆ ಮದೀನವನ್ನು ಕೂಡ ಮಾಡಿದನು. ಇಮಾಮ್ ಮುಸ್ಲಿಂ ಉಲ್ಲೇಖಿಸಿದ ಹದೀಸ್’ನಲ್ಲಿ ಪ್ರವಾದಿಯವರು ﷺ ಹೇಳುವುದು ಕಾಣಬಹುದು, “ಪ್ರವಾದಿ ಇಬ್ರಾಹಿಮರು (ಅ) ಮಕ್ಕಾ ನಗರವನ್ನು ಹರಮ್ ಆಗಿ (ಪವಿತ್ರವಾಗಿ) ಮಾಡಿದ ಹಾಗೆ ನಾನು ಕೂಡ ಮದೀನವನ್ನು ಹರಮ್ ಆಗಿ ಪರಿವರ್ತಿಸಿದೆನು,” ಎಂದು ಪ್ರವಾದಿಯವರು ಅಲ್ಲಾಹನು ನೀಡಿದ ಅನುಗ್ರಹವನ್ನು ಕೂಗಿ ಹೇಳಿದರು. ಅಬೂಹುಮೈದ್’ರು ◌ؓ ಹೇಳುವುದು ಕಾಣಬಹುದು, ಪ್ರವಾದಿಯವರ ﷺ ಜೊತೆಯಲ್ಲಿ ತಬೂಕಿನಿಂದ ಬರುತ್ತಿದ್ದ ವೇಳೆಯಲ್ಲಿ, ಮದೀನದ ಮಣ್ಣಿಗೆ ಹೆಜ್ಜೆ ಇಟ್ಟ ಕೂಡಲೇ, ಪ್ರವಾದಿಯವರು ﷺ ಇದು ತ್ವಯಿಬಾದ (ಪವಿತ್ರವಾದ) ಮಾಣ್ಣಾಗಿದೆ ಎಂದು ಹೇಳಿದರು (ಬುಖಾರಿ). ಪ್ರವಾದಿಯವರು ﷺ ಹೇಳಿರುವುದಾಗಿ, ಸುಫ್’ಯಾನ್’ರವರು ಹೇಳುವುದು ಕಾಣಬಹುದು, ಯಮನ್ ವಶಪಡಿಸಿಕೊಳ್ಳುತ್ತದೆ ಆಗ ಕೆಲವು ಜನರು, ಅವರ ಸಂಬಂಧಿಕರು, ಅನುಯಾಯಿಗಳ ಜೊತೆಯಲ್ಲಿ, ಅತೀ ವೇಗವಾಗಿ ವಾಹನವನ್ನು ಓಡಿಸಿ ಮದೀನವನ್ನು ಬಿಟ್ಟು ಹೋಗುವರು. ಬಹುಶಃ ಅವರಿಗೆ ಮದೀನವೇ ಅತ್ಯಂತ ಉತ್ತಮ ಸ್ಥಳ ಎಂದು ತಿಳಿದಿರುತ್ತಿದ್ದರೆ ಎಷ್ಟೋ ಒಳ್ಳೆದಿತ್ತು. ಸಿರಿಯವು ಕೂಡ ವಶಪಡಿಸಿಕೊಳ್ಳಲಾಗುವುದು ಆಗಲೂ ಕೆಲವು ಜನರು, ಅವರ ಸಂಬಂಧಿಕರ, ಅನುಯಾಯಿಗಳ ಜೊತೆಯಲ್ಲಿ ಮದೀನ ಬಿಟ್ಟು ಹೋಗುವರು, ಬಹುಶಃ ಅವರು ಜ್ಞಾನಿಗಳಾಗಿದ್ದಲ್ಲಿ ಅವರಿಗೆ ಮದೀನವೇ ಉತ್ತಮ ಸ್ಥಳವಾಗಿದೆ ಎಂದು ತಿಳಿಯುತ್ತಿದ್ದರು. ಇರಾಕ್ ಕೂಡ ವಶಪಡಿಸಿಕೊಳ್ಳಲಾಗುವುದು, ಆಗಲೂ ಕೆಲವು ಜನರು ತಮ್ಮ ಸಂಬಂಧಿಕರ, ಅನುಯಾಯಿಗಳ ಜೊತೆಯಲ್ಲಿ ವೇಗವಾಗಿ ವಾಹನ ಓಡಿಸುತ್ತಾ ಮದೀನ ಬಿಟ್ಟು ಹೋಗುವರು. ಬಹುಶಃ ಅವರಿಗೆ ಅರಿವಿರುತ್ತಿದ್ದರೆ ಅವರು ಕೂಡ ಯಾವತ್ತೂ ಮದೀನ ಬಿಟ್ಟು ಹೊಗುತ್ತಿರಲಿಲ್ಲ (ಬುಖಾರಿ).
ಜಾಬಿರ್’ರಿಂದ ◌ؓ ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಕಾಣಬಹುದು, ಒಬ್ಬರು ಗ್ರಾಮೀಣ ವಾಸಿಯು ಇಸ್ಲಾಮ್ ಸ್ವೀಕರಿಸಿ, ಮುಸ್ಲೀಮಾಗಿ ಜೀವಿಸುದಾಗಿ ಪ್ರವಾದಿಯವರಲ್ಲಿ ﷺ ಒಪ್ಪಂದ ಮಾಡಿ ಹೋದರು. ಮರು ದಿನ ಅವರಿಗೆ ಜ್ವರ ಬಂದಿತು, ಅವರು ಪ್ರವಾದಿಯವರು ﷺ ಬಳಿ ಓಡಿ ಬಂದು, ನಾನು ಮಾಡಿದ ಒಪ್ಪಂದವನ್ನು ಹಿಂಪಡೆಯಲು ಅನುಮತಿ ನೀಡಬೇಕು ಎಂದು ವಿನಂತಿಸಿದರು. ಈ ರೀತಿಯಾಗಿ ಮೂರು ಬಾರಿ ಪುನರಾವರ್ತಿಸಿ ಕೇಳಿದಾಗಲೂ ಪ್ರವಾದಿಯವರು ﷺ ನಿರಾಕರಿಸಿದರು. ನಂತರ ಮಾತು ಮುಂದುವರಿಸುತ್ತಾ, ಕುಲುಮೆಯಲ್ಲಿ ಕಾಯುತ್ತಿರುವ ಕಬ್ಬಿಣದ ಮೇಲಿನ ತುಕ್ಕುಗಳನ್ನು ಬೆಂಕಿ ಹೊರಗೆ ಹಾಕುವ ಹಾಗೆ, ಮದೀನಾ ಕೆಟ್ಟದ್ದನ್ನು ಹೊರಗೆ ಹಾಕಿ ಒಳ್ಳೆಯದನ್ನು ಮಾತ್ರ ತಡೆಹಿಡಿಯುತ್ತದೆ ಎಂದು ಹೇಳಿದರು.
ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಇನ್ನೊಂದು ಉಲ್ಲೇಖದದಲ್ಲಿ ಝೈದ್ ಬಿನ್ ಸಾಬಿತ್’ರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಉಹುದು ಯುದ್ಧಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಗುಂಪಿನಲ್ಲಿದ್ದ ಕೆಲವರು ಜನರು ಬಿಟ್ಟು ಹೋದರು. ಅದಕ್ಕೆ ಗುಂಪಿನಲ್ಲಿದ್ದ ಉಳಿದವರಲ್ಲಿ ಕೆಲವರು, ಆ ಬಿಟ್ಟು ಹೋದ ಜನರ ವಿರುದ್ಧ ನಾವು ಕೂಡ ಯುದ್ಧ ಮಾಡೋಣ ಎಂದು ಹೇಳಿದಾಗ, ಬೇಡ ಎಂದು ಇನ್ನುಳಿದ ಜನರು ಹೇಳಿದರು. ಆ ಸಂದರ್ಭದಲ್ಲಾಗಿತ್ತು ಪವಿತ್ರ ಖುರ್’ಆನಿನ ನಿಸಾಅ್ ಅಧ್ಯಾಯದ ಎಂಬತ್ತೆಂಟನೆ ಸೂಕ್ತವು ಅವತರಿಸಿದ್ದು. ತಕ್ಷಣವೇ ಪ್ರವಾದಿಯವರು ﷺ, ಮದೀನ ದುಷ್ಟ ವ್ಯಕ್ತಿಗಳನ್ನು ಹೊರಗೆ ಹಾಕುತ್ತದೆ, ಬೆಂಕಿ ಕಬ್ಬಿಣದ ಮೇಲಿನ ತುಕ್ಕನ್ನು ಹೊರಗೆ ಹಾಕಿದ ಹಾಗೆ ಎಂದು ಹೇಳಿದರು.
ಅಬೂಹುರೈರರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ, ಒಬ್ಬ ಸತ್ಯವಿಶ್ವಾಸಿಯ ಮದೀನವನ್ನು ರಾಜಧಾನಿಯಾಗಿ ಪರಿಚಯಿಸುವುದಾಗಿ ಕಾಣಬಹುದು. “ಖಂಡಿತವಾಗಿಯೂ ಹಾವು ಅದರ ಬಿಲದಲ್ಲಿ ಆಶ್ರಯ ಪಡೆಯಲು ಬಯಸುವ ಹಾಗೆ, ಈಮಾನ್ (ಸತ್ಯ ವಿಶ್ವಾಸ) ಮದೀನದಲ್ಲಿ ಆಶ್ರಯ ಪಡೆಯಲು ಬಯಸುತ್ತದೆ (ಬುಖಾರಿ).”
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-165/365
ಇಮಾಮ್ ಬುಖಾರಿ ◌ؓ ಹಾಗೂ ಮುಸ್ಲಿಮ್’ರವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಪ್ರವಾದಿಯವರು ﷺ ಹೇಳಿರುವುದು ಕಾಣಬಹುದು, ಈರ್ ಹಾಗೂ ಥೌರ್ ಎಂಬ ಈ ಪರ್ವತಗಳ ನಡುವೆ ಇರುವ ಮದೀನದ ಪ್ರದೇಶಗಳೆಲ್ಲವೂ ಪವಿತ್ರವಾಗಿದೆ. ಈ ಸ್ಥಳದಲ್ಲಿ ಯಾರಾದರೂ ನೂತನವಾದವಾಗಲಿ, ಇಸ್ಲಾಮಿನ ಮೂಲಭೂತ ವಿಷಯಗಳಲ್ಲಿ ಹೊಸತೊಂದನ್ನು ತರುವುದಾಗಲಿ, ಅವರಿಗೆ ಆಶ್ರಯ ನೀಡುವುದಾಗಲಿ ಮಾಡುವವರಿಗೆ ಅಲ್ಲಾಹನ, ಅವನ ಮಲಕ್’ಗಳ, ಎಲ್ಲಾ ಮನುಷ್ಯರ ಶಾಪ ಉಂಟಾಗಲಿದೆ. ಅವನು ಮಾಡಿದ ಯಾವುದೇ ಸತ್ಕರ್ಮಗಳು ಕೂಡ ಅವನಿಗೆ ಪ್ರಯೋಜನವಾಗುವುದಿಲ್ಲ.
ಮದೀನಾದ ಮಸ್ಜಿದ್ ಮಾತ್ರವಲ್ಲ ಮದೀನಾದ ವಿಶಾಲವಾದ ಪ್ರದೇಶವು ಕೂಡ ಹರಮ್ ಅಥವಾ ಪುಣ್ಯಭೂಮಿಯಾಗಿದೆ ಎಂದು ಹದೀಸ್ ನಮಗೆ ತಿಳಿಸಿ ಕೊಡುತ್ತದೆ. ಮದೀನಾ ವಿವಾಸಿಗಳ ಮಹತ್ವವನ್ನು, ಇಬಾದತ್ತುಬಿನು ◌ؓ ಸಾಮಿತಿಯವರಿಂದ ಇಮಾಮ್ ತ್ವಬ್’ರಾನಿಯವರು ಉಲ್ಲೇಖಿಸಿದ, ಹದೀಸ್’ನಲ್ಲಿ ಪ್ರವಾದಿಯವರು ﷺ ಹೇಳಿರುವುದು ಕಾಣಬಹುದು. “ಅಲ್ಲಾಹನೇ ಮದೀನ ನಿವಾಸಿಗಳನ್ನು ಯಾರಾದರೂ ಭಯಪಡಿಸಿ, ತೊಂದರೆ ನೀಡಿದರೆ, ನೀನು ಅವನನ್ನು ಭಯಪಡಿಸು ಪ್ರಭು, ಅವನ ಮೇಲೆ ಅಲ್ಲಾಹನ, ಮಲಕ್’ಗಳ, ಎಲ್ಲಾ ಮನುಷ್ಯರ ಶಾಪ ಉಂಟಾಗುವುದು, ಅವನು ಮಾಡಿದ ಯಾವುದೇ ಸತ್ಕರ್ಮಗಳು ಕೂಡ ಪ್ರಯೋಜನವಾಗುವುದಿಲ್ಲ.”
ಇದರ ಬಗ್ಗೆ ಇರುವ ಕೆಲವು ಹದೀಸ್’ಗಳನ್ನು ತಿಳಿಯೋಣ.
ಒಂದು; ಅಬೂಬಕ್ಕರತ್’ರವರ ◌ؓ ಉಲ್ಲೇಖದಲ್ಲಿ ಪ್ರವಾದಿಯವರು ﷺಹೇಳಿರುವುದು ಕಾಣಬಹುದು. ಇಡೀ ಪ್ರಪಂಚವನ್ನೇ ಸುತ್ತಿ ಸಂಚರಿಸಿ ಬರುವ ದಜ್ಜಾಲಿನ ಬಗ್ಗೆ ಇರುವ ಭಯ ಮದೀನಾ ವಿವಾಸಿಗಳಿಗೆ ಇರುವುದಿಲ್ಲ. ಅಂದು ಮದೀನಕ್ಕೆ ಏಳು ಪ್ರವೇಶ ದ್ವಾರಗಳಿರುತ್ತದೆ, ಒಂದೊಂದು ದ್ವಾರದ ಬಳಿಯು ಎರಡೆರಡು ಮಲಕ್ ಕಾವಲು ಕಾಯುತ್ತಾ ಇರುವರು. (ಬುಖಾರಿ)
ಎರಡು; ಅಬೂಹುರೈರರಿಂದ ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಪ್ರವಾದಿಯವರು ﷺ ಹೇಳಿರುವುದು ಕಾಣಬಹುದು, ಮದೀನದ ದ್ವಾರಗಳಲ್ಲಿ ಎರಡು ಮಲಕ್’ಗಳು ಕಾವಲು ನಿಂತಿರುತ್ತಾರೆ, ಪ್ಲೇಗ್ ರೋಗವಾಗಲಿ, ದಜ್ಜಾಲ್ ಆಗಲಿ ಒಳಗೆ ಬರಲು ಸಾಧ್ಯವಾಗುವುದಿಲ್ಲ. (ಬುಖಾರಿ)
ಮೂರು; ಅನಸ್’ರವರ ಉಲ್ಲೇಖದಲ್ಲಿ ಪ್ರವಾದಿಯವರು ﷺ ಹೇಳಿರುವುದು ಕಾಣಬಹುದು, ದಜ್ಜಾಲ್ ಮಕ್ಕಾ ಮದೀನವನ್ನು ಬಿಟ್ಟು, ಹೆಜ್ಜೆ ಇಡದ ಯಾವುದೇ ಸ್ಥಳವೂ ಕೂಡ ಬಾಕಿಯಾಗುವುದಿಲ್ಲ. ಈ ಎರಡು ಸ್ಥಳಗಳ, ಎಲ್ಲಾ ಪ್ರವೇಶ ದ್ವಾರಗಳಲ್ಲಿ ಮಲಕ್’ಗಳು ಸಾಲು ಸಾಲಾಗಿ ಕಾವಲು ನಿಂತಿರುತ್ತಾರೆ. ನಂತರ ಮೂರು ಬಾರಿ ಮದೀನ ನಿವಾಸಿಗಳ ಜೊತೆಯಲ್ಲಿ ಭೂಮಿಯು ಕಂಪಿಸುವುದು. ಅದರೊಂದಿಗೆ ಮದೀನದಲ್ಲಿರುವ ಎಲ್ಲಾ ಕಪಟ ವಿಶ್ವಾಸಿಗಳನ್ನು, ಸತ್ಯನಿಷೇಧಿಗಳನ್ನು ಅದು ಹೊರಗೆ ತರುತ್ತದೆ.
ನಾಲ್ಕು; ಅಬೂಸಈದ್’ರವರ ಉಲ್ಲೇಖದಲ್ಲಿ ಪ್ರವಾದಿಯವರು ﷺ ದಜ್ಜಾಲಿನ ಬಗ್ಗೆ ಇರುವ ವಿಷಯಗಳ ಕುರಿತು ಸುದೀರ್ಘವಾಗಿ ಹೇಳಿರುವುದು ಕಾಣಬಹುದು. ದಜ್ಜಾಲ್ ಬರುವನು, ಮದೀನಕ್ಕೆ ಅವನಿಗೆ ಪ್ರವೇಶ ನಿಷೇಧಿಸಲಾಗಿದೆ, ಅವನು ಮದೀನದ ಪಕ್ಕದಲ್ಲಿ ಜವುಗು ಪ್ರದೇಶದ ಬಳಿ ಇಳಿಯುವನು. ಆ ಸಮಯದಲ್ಲಿ ಜನರ ನಡುವೆ ಉತ್ತಮನಾದ ವ್ಯಕ್ತಿಯೊಬ್ಬ ಅವನ ಬಳಿ ತೆರಳಿ, ಅಲ್ಲಾಹನ ಪ್ರವಾದಿಯವರು ﷺ ನಮಗೆ ಮೊದಲೇ ಸೂಚನೆ ನೀಡಿದ ಹಾಗೆ ನೀನು ದಜ್ಜಾಲ್ ಆಗಿರುತ್ತೀಯ ಎಂದು ಹೇಳುವರು. ಅದಕ್ಕೆ ದಜ್ಜಾಲ್ ಅವನ ಬಳಿಯಿರುವ ಜನರ ಬಳಿ, ನಾನು ಈತನನ್ನು ಸಾಯಿಸಿ, ಪುನಃ ಬದುಕಿಸಿದರೆ ನಾನು ಹೇಳುವುದು ಸತ್ಯ ಎಂದು ಒಪ್ಪಿಕೊಳ್ಳುತ್ತೀರೆ.? ಎಂದು ಹೇಳಿದಾಗ ಜನರೆಲ್ಲರೂ ಅದಕ್ಕೆ ಸಮ್ಮತಿಸುವರು, ಅದೇ ರೀತಿ ಆ ವ್ಯಕ್ತಿಯನ್ನು ಸಾಯಿಸಿ, ಪುನಃ ಬದುಕಿಸಿದಾಗ, ಆ ವ್ಯಕ್ತಿ ಪುನಃ ಹೇಳುವನು, ಅಲ್ಲಾಹನ ಮೇಲಾಣೆ ನೀನೆ ದಜ್ಜಾಲ್ ಎಂದು ನಾನು ಬಲವಾಗಿ ಹೇಳುತ್ತೇನೆ. ಅದಕ್ಕೆ ದಜ್ಜಾಲ್, ನಾನು ಇವನನ್ನು ಶಾಶ್ವತವಾಗಿ ಕೊಂದು ಬಿಡಲೇ ಎಂದು ಹೇಳಿ, ಪುನಃ ಸಾಯಿಸಲು ಮುಂದಾದಾಗ ಅವನಿಗೆ ಅದು ಸಾಧ್ಯವಾಗುವುದಿಲ್ಲ. (ಬುಖಾರಿ)
ಆಗ ಜನರಿಗೆ, ಪ್ರವಾದಿಯವರು ﷺ ನೀಡಿದ ಮುನ್ನೆಚ್ಚರಿಕೆ ನೆನಪಿಗೆ ಬರುವುದು.
ಮದೀನದ ಹೆಸರನ್ನು ಮದೀನ ಎಂದಲ್ಲದೆ ಹಿಂದಿನ ಹೆಸರಾದ ಯಸ್’ರಿಬ್ ಎಂದು ಕರೆಯಬಾರದು ಎಂದು ಸ್ವತಃ ಪ್ರವಾದಿಯವರೇ ﷺ ಹೇಳಿರುವುದು ಇಮಾಮ್ ಅಹ್ಮದ್ ◌ؓ ಹಾಗೂ ಬರಾಅ ಬಿನ್ ಆಸಿಬ್’ರಿಂದ ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು. ಯಾರಾದರೂ ಮದೀನವನ್ನು ಯಸ್’ರಿಬ್ ಎಂಬ ಹೆಸರಿನಿಂದ ಕರೆದರೆ ಅವನು ತಕ್ಷಣವೇ ಪಾಪ ಮೋಚನೆಯನ್ನು ಕೇಳಲಿ, ನಿಶ್ಚಯವಾಗಿಯೂ ಇದು ತ್ವಾಬವೂ ತ್ವಯಿಬವೂ ಆಗಿರುತ್ತದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-166/365
ಮದೀನವು ತನ್ನ ಹಿರಿಮೆ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುವ ಬಹಳಷ್ಟು ಹೆಸರುಗಳನ್ನು ಹೊಂದಿದೆ.
1. ಅರ್’ಳುಲ್ಲಾಹಿ; ಅಲ್ಲಾಹನ ಭೂಮಿ ಎಂದರ್ಥ. ಪ್ರವಾದಿಯವರಿಗೆ ﷺ ಪಲಾಯನ ಮಾಡಲು ಅನುಮತಿ ನೀಡಿದ ಪವಿತ್ರ ಖುರ್’ಆನಿನ ಅನ್ನಿಸಅ್ ಅಧ್ಯಾಯದ ತೊಂಬ್ಬತ್ತೇಳನೇ ಸೂಕ್ತದಲ್ಲಿ ಈ ಹೆಸರಾಗಿದೆ ಉಲ್ಲೇಖಿಸಿರುವುದು.
2. ಅರ್’ದುಲ್ ಹಿಜ್’ರ; ಪಲಾಯನದ ಪ್ರದೇಶ.
3. ಅಕ್ಕಾಲತುಲ್ ಬುಲ್’ದಾನ್; ರಾಷ್ಟ್ರಗಳನ್ನು ಗೆಲ್ಲುವ ಸ್ಥಳ.
4. ಅಕ್ಕಾಲತುಲ್ ಖುರಾ; ಹಳ್ಳಿಗಳನ್ನು ಗೆಲ್ಲುವ ಸ್ಥಳ. ಇಂತಹ ಒಂದು ಪದ ಪ್ರಯೋಗ ಹದೀಸ್’ನಲ್ಲಿ ಬಂದಿರುವುದು ಕಾಣಬಹುದು.
5. ಅಲ್ ಈಮಾನ್; ಅಲ್ ಹಷ್’ರ್ ಅಧ್ಯಾಯದ ಒಂಬತ್ತನೇ ಸೂಕ್ತದಲ್ಲಿ ಈ ಹೆಸರನ್ನು ಉಲ್ಲೇಖಿಸಿದ್ದು ಕಾಣಬಹುದು. ವಿಶ್ವಾಸ ಎಂದು ಈ ಹೆಸರಿನ ಅರ್ಥವಾಗಿದ್ದರೂ, ವಿಶ್ವಾಸದ ರಾಜಧಾನಿ ಎಂದಾಗಿದೆ ಇದರರ್ಥ.
6. ಅಲ್ ಬಾರ್’ರ, 7.ಅಲ್ ಬರ್’ರ ; ಇವೆರಡು ಪದಗಳೂ ಮದೀನ ವಾಸಿಗಳ ಒಳಿತುಗಳನ್ನು ಸೂಚಿಸುವ ಹೆಸರುಗಳಾಗಿವೆ.
8. ಅಲ್ ಬಹ್’ರ, 9. ಅಲ್ ಬುಹೈರ, 10. ಅಲ್ ಬಹೀರ; ಇವುಗಳು ಮದೀನ ವಾಸಿಗಳ ವಿಶಾಲತೆಯನ್ನು ತಿಳಿಸುವ ಹೆಸರುಗಳಾಗಿವೆ.
11. ಅಲ್ ಬಲಾತ್ವ್; ಹರಡಿದ ಕಲ್ಲುಗಳು ಅಥವಾ ವಿಶಿಷ್ಟವಾದ ಕಲ್ಲುಗಳು ಇರುವ ಭೂಮಿ.
12. ಅಲ್ ಬಲದ್; ಶ್ರೇಷ್ಠವಾದ ಪ್ರದೇಶ, ಅಲ್ ಬಲದ್ ಅಧ್ಯಾಯದ ಒಂದನೇ ಸೂಕ್ತದಲ್ಲಿ ಉಲ್ಲೇಖಿಸಿದ ಅಲ್ ಬಲದ್ ಎಂಬ ಪದವು, ಮದೀನದ ಕುರಿತಾಗಿತ್ತು.
13. ಬಲದು ರಸೂಲಿಲ್ಲಾಹ್ ﷺ; ಅಲ್ಲಾಹನ ಸಂದೇಶವಾಹಕರ ಭೂಮಿ. ಪಿಶಾಚಿಯು ನನ್ನ ಊರಿನಲ್ಲಿ ಆರಾಧಿಸಲ್ಪಡದ ಕಾರಣ ನಿರಾಶೆಗೊಂಡಿದ್ದಾನೆ ಎಂಬ ಅರ್ಥ ಬರುವ ಈ ಹೆಸರು ಹದೀಸಿನಲ್ಲಿ ಉಲ್ಲೇಖಿಸಿದ್ದು ಕಾಣಬಹುದು.
14. ಬೈತು ರಸೂಲಿಲ್ಲಾಹ್ ﷺ; ಅಲ್ಲಾಹನ ಸಂದೇಶವಾಹಕರ ಮನೆ, ಅಲ್ ಅನ್’ಫಾಲ್ ಅಧ್ಯಾಯದ ಐದನೇ ಸೂಕ್ತದಲ್ಲಿ “ಮಿನ್ ಬೈತಿಕ” ಎಂಬ ಉಲ್ಲೇಖವನ್ನು ಕಾಣಬಹುದು. ಅದರಿಂದ ಈ ಹೆಸರು ಬಂದಿದೆ.
15. ತನ್’ದದ್, 16. ತನ್’ದರ್, 17. ಅಲ್ ಜಾಬಿರ; ಇತರ ಹಳ್ಳಿಗಳನ್ನೂ ಒಳಿತಿಗಳಿಗೆ ಪ್ರೇರೇಪಿಸಿದ ಪ್ರದೇಶ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ.
18. ಜಬಾರ್, ಅಲ್ ಜಬ್ಬಾರ; ಈ ಹೆಸರಿನ ಪ್ರಯೋಗವು ತೋರ ಗ್ರಂಥದಲ್ಲಿ (ತೌರಾತ್) ಉಲ್ಲೇಖಿಸಿದ ಹೆಸರಾಗಿದೆ ಎಂದು, ಯೂಸುಫ್ ಸ್ವಲಾಹಿಯವರು ವಿವರಿಸಿದ್ದು ಕಾಣಬಹುದು.
20. ಜಝೀರತುಲ್ ಅರಬ್; ಒಟ್ಟಾರೆಯಾಗಿ ಅರೇಬಿಯನ್ ಪರ್ಯಾಯ ದ್ವೀಪಗಳನ್ನು ಕರೆಯುವ ಹೆಸರಾಗಿದೆ ಇದು, ಆದರೆ ಇಮಾಮ್ ತ್ವಬ್’ರಾನಿಯವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಮದೀನಾದ ಕುರಿತು ಪ್ರತ್ಯೇಕವಾಗಿ ಈ ಹೆಸರನ್ನು ಪ್ರಯೋಗಿಸಿದ್ದು ಕಾಣಬಹುದು.
21. ಜುನ್ನತುಲ್ ಹಸ್ವೀನ; ಸಂರಕ್ಷಣೆಯ ಕವಚ ಎಂಬ ಅರ್ಥವನ್ನು ಸೂಚಿಸುವ ಹೆಸರಾಗಿದೆ ಇದು, ಇಮಾಮ್ ಸುಯೂತ್ವಿಯವರು ◌ؓ ಮದೀನದ ಹೆಸರುಗಳನ್ನು ಈ ಹೆಸರನ್ನು ಉಲ್ಲೇಖಿಸಿದ್ದಾರೆ.
22. ಅಲ್ ಹಬೀಬ; ಪ್ರೀತಿಯ ಊರು, ಪ್ರವಾದಿಯವರು ﷺ ಈ ರೀತಿ ಕರೆದಿದ್ದರು.
23. ಅಲ್ ಹಂರ, 24. ಹರಮು ರಸೂಲಿಲ್ಲಾಹ್; ಹದೀಸ್’ನಲ್ಲಿ ಉಲ್ಲೇಖಿಸಿದ ಹೆಸರುಗಳಾಗಿವೆ ಇದು, ಇವುಗಳ ಅರ್ಥ ಪವಿತ್ರವಾದ ಭೂಮಿ ಎಂದಾಗಿದೆ.
25. ಹಸನ; ಒಳಿತು ಎಂದಾಗಿದೆ ಅದರ ಅರ್ಥ, ಅನ್ನಹ್’ಲ್ ಅಧ್ಯಾಯದಲ್ಲಿ “ಹಸನ” ಎಂಬ ಪದದ ಉಲ್ಲೇಖವಾದದ್ದು ಮದೀನಾದ ಕುರಿತಾಗಿತ್ತು.
26. ಅಲ್ ಖಯ್ಯಿರ, 27. ಅಲ್ ಖಿಯರ; ಮಹತ್ವವಿರುವುದು ಎಂಬ ಅರ್ಥವನ್ನು ಸೂಚಿಸುವ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ.
28. ಅದ್ದಾರ್; ಪವಿತ್ರವಾದ ಮನೆ ಎಂದಾಗಿದೆ ಇದರ ಅರ್ಥ, ಅಲ್ ಹಷ್’ರ್ ಅಧ್ಯಾಯದ ಒಂಭತ್ತನೇ ಸೂಕ್ತದಲ್ಲಿ ಈ ಹೆಸರನ್ನು ಉಲ್ಲೇಖಿಸಿದ್ದು ಕಾಣಬಹುದು.
29. ದಾರುಲ್ ಅಬ್’ರಾರ್; ಸಜ್ಜನರ ಮನೆ.
30. ದಾರುಲ್ ಮುಖ್’ತಾರ್; ಚುನಾಯಿತರ ಮನೆ, ಪ್ರವಾದಿಯವರನ್ನು ﷺ ಅಲ್ ಮುಖ್ತಾರ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಹೀಗಿರುವಾಗ ಪ್ರವಾದಿಯವರ ﷺ ಮನೆ ಎಂಬ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.
31. ದಾರುಲ್ ಈಮಾನ್; ಈಮಾನ್ (ಸತ್ಯ ವಿಶ್ವಾಸ) ಮದೀನಕ್ಕೆ ಹಿಂತಿರುಗಿ ಹೋಗುತ್ತದೆ ಎಂಬ ಅರ್ಥವಿರುವ ಹದೀಸಿನಲ್ಲಿ ಬಂದಿರುವ ಹೆಸರಾಗಿದೆ ಇದು.
32. ದಾರುಸ್ಸುನ್ನ; ಮಾದರಿಯುಕ್ತ ಮನೆ, ಆದರ್ಶಗಳ ರಾಜಧಾನಿ ಎಂದೂ ಕೂಡ ಕರೆಯಬಹುದು.
33. ದಾರುಸ್ಸಲಾಮ; ಸುರಕ್ಷಿತ ಮನೆ.
34. ದಾರುಲ್ ಫತ್’ಹ್; ವಿಜಯದ ಮನೆ
35. ಅದ್ದಿರ್’ವುಲ್ ಹಸೀನ; ಸುರಕ್ಷಾ ಕವಚ. ಇಮಾಮ್ ಅಹ್’ಮದ್’ರವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಈ ಹೆಸರನ್ನು ಕಾಣಬಹುದು.
36. ದಾತುಲ್ ಹುಜರ್; ಮನೆಗಳ ಮನೆ, ಬಹಳಷ್ಟು ಉದ್ದಾತ ಮನೆಗಳನ್ನು ಹೊಂದಿರುವ ಸ್ಥಳ ಎಂಬ ಅರ್ಥದಲ್ಲಾಗಿದೆ.
37. ದಾತುಲ್ ಹಿರರ್; ಕಪ್ಪು ಕಲ್ಲುಗಳು ಬಹಳಷ್ಟು ಇರುವ ಕಾರಣದಿಂದ ಈ ಹೆಸರು ಬಂದಿದೆ.
38. ದಾತುನ್ನಖ್’ಲ್; ಖರ್ಜೂರದ ಊರು, ಹದೀಸ್’ನಲ್ಲಿ ಮದೀನವನ್ನು ಈ ಹೆಸರಿನಿಂದಾಗಿದೆ ಪರಿಚಯಿಸಿದ್ದು.
39. ಅಸ್ಸಲಿಖ; ತೌರಾತ್’ನಲ್ಲಿ ಈ ಹೆಸರನ್ನು ಉಲ್ಲೇಖಿಸಲಾಗಿದೆ. ಮದೀನದ ವಿಶಾಲತೆಯನ್ನು, ಅದರ ಸುತ್ತಮುತ್ತಲಿನ ವಾತಾವರಣವನ್ನು ಸೂಚಿಸುವ ಅರ್ಥದಲ್ಲಿ ಈ ಹೆಸರು ಬಂದಿದೆ.
40. ಅಶ್ಶಾಫಿಯ; ಹಿತವಾದ ಭೂಮಿ, ಮದೀನದ ಮಣ್ಣಿನಲ್ಲೂ, ನಿರೀನಲ್ಲೂ ಚಿಕಿತ್ಸೆಯ ಗುಣವಿದೆ. ಮದೀನದ ಮಣ್ಣಿನಲ್ಲಿ ಬಹಳಷ್ಟು ಹಿತವಿದೆ ಎಂದು ಹದೀಸ್’ನಲ್ಲಿ ಉಲ್ಲೇಖಿಸಿದ್ದು ಕಾಣಬಹುದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-167/365
41. ತ್ವಾಬ; ಅಲ್ಲಾಹನು ಮದೀನಕ್ಕೆ ತ್ವಾಬ ಎಂಬ ಹೆಸರನ್ನು ನೀಡಿರುವನು ಎಂದು ಪ್ರವಾದಿಯವರು ﷺ ಹೇಳಿರುವುದನ್ನು ಇಮಾಮ್ ಮುಸ್ಲಿಂ ◌ؓ ಜಾಬಾರ್’ರವರು ಉಲ್ಲೇಖಿಸಿದ ಹದೀಸ್’ನಲ್ಲಿ ತಿಳಿಸಿರುವುದು ಕಾಣಬಹುದು.
42. ತ್ವೈಬ, 43. ತ್ವಯ್ಯಿಬ, 44. ತ್ವಾಯಿಬ, 45. ಮುತ್ವಯ್ಯಿಬ; ಈ ಐದು ಹೆಸರುಗಳು, ಒಂದೇ ರೀತಿಯ ಅರ್ಥಗಳನ್ನು ಹೊಂದಿದ ಪದಗಳಾಗಿವೆ. ಪವಿತ್ರತೆ, ಪರಿಶುದ್ಧತೆ, ಎಂಬ ಪದಗಳಿಂದಾಗಿದೆ ಈ ಹೆಸರುಗಳು ಬಂದಿದ್ದು, ಪವಿತ್ರವಾದ ಹದೀಸಿನ ಉಲ್ಲೇಖದಲ್ಲಿ ಈ ಹೆಸರುಗಳು ಬಂದಿರುವುದು ಕಾಣಬಹುದು. ಮದೀನಾದ ಪುಣ್ಯ ಭೂಮಿ, ಅರ್ಥವೆಲ್ಲವೂ ಪವಿತ್ರವಲ್ಲವೇ.? ತೌರಾತಿನಲ್ಲೂ ಕೂಡ ಈ ಹೆಸರಿನ ಉಲ್ಲೇಖವಾದದ್ದು ಕಾಣಬಹುದು.
46. ತ್ವಿಬಾಬಾ ; ವಿಶಾಲವಾದ ಭೂಪ್ರದೇಶ ಎಂಬ ಅರ್ಥದಲ್ಲಿ ಯಾಖುತುಲ್ ಹಮವಿ ಉಲ್ಲೇಖಿಸಿದ್ದಾರೆ.
47. ಅಲ್ ಆಸ್ವಿಮ; ಸುರಕ್ಷಿತ ಪ್ರದೇಶ, ಸತ್ಯ ನಿಷೇಧಿಗಳಿಂದ ಮಹಾಜಿರ್’ಗಳಿಗೆ, ದೆಜ್ಜಾಲಿನಿಂದ ಮದೀನಾ ನಿವಾಸಿಗಳಿಗೆ ಹಾಗೂ ಇತರ ವಿಪತ್ತುಗಳಿಂದ ಸುರಕ್ಷಿತ ಪ್ರದೇಶ ಎಂಬ ಅರ್ಥ.
48. ಅಲ್ ಅದ್’ರಾಅ ; ತೌರಾತಿನಲ್ಲಿ ಉಲ್ಲೇಖಿಸಿದ ಹೆಸರಾಗಿದೆ ಇದು, ಶತ್ರುಗಳ ವಿರುದ್ಧ ರಕ್ಷಣೆ ಹೊಂದುವ ಸ್ಥಳ ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ.
49. ಅಲ್ ಅರಾಅ ; ಕನ್ಯೆಗೆ ಬಳಸುವ ಪದವಾಗಿದೆ ಇದು.
50. ಅಲ್ ಅರೂಳ್; ಮದೀನದ ಭೂಪ್ರದೇಶವನ್ನು ಸೂಚಿಸುವ ಪದವಾಗಿದೆ ಇದು.
51. ಅಲ್’ಗರ್’ರಾವು; ಪ್ರಶೋಭಿತ, ಸುಂದರ, ಉತ್ತಮ ನಾಯಕತ್ವ, ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ. ಭೂಪ್ರದೇಶಗಳ ನಾಯಕ ಎಂಬ ಅರ್ಥದಲ್ಲಿಯೂ ಈ ಹೆಸರನ್ನು ಬಳಸಬಹುದು.
52. ಗಲಬ; ಇಸ್ಲಾಮ್ ಅತೀ ವೇಗದಲ್ಲಿ ಮದೀನಕ್ಕೆ ತಲುಪಿ, ಬಹಳ ವೇಗದಲ್ಲಿ ಮದೀನಾದಲ್ಲಿ ಪಸರಿಸಿ ಬಹಳಷ್ಟು ಜನರು ಮುಸ್ಲಿಮರಾದ ಕಾರಣ, ಬಹುಮತ ಎಂಬ ಅರ್ಥದಲ್ಲಿ ಈ ಹೆಸರನ್ನು ಮದೀನಕ್ಕೆ ಬಳಸಲಾಗಿದೆ.
53. ಅಲ್ ಫಾಳಿಹ; ಪಾರದರ್ಶಕ ಎಂದಾಗಿದೆ ಇದರರ್ಥ, ಹೊರಗೂ, ಒಳಗೂ ಯಾವುದೇ ಕಲ್ಮಶವಿಲ್ಲದ ಪಾರದರ್ಶಕವಾದ ಪ್ರದೇಶ ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ.
54. ಅಲ್ ಖಾಸ್ವಿಮ; ತೌರಾತಿನಲ್ಲಿ ಈ ಹೆಸರನ್ನು ಬಳಸಲಾಗಿದೆ. ದುರುದ್ದೇಶದಿಂದ ಯಾರಾದರೂ ಮದೀನಕ್ಕೆ ಬಂದರೆ, ಅವರ ಎಲ್ಲಾ ಉದ್ದೇಶಗಳನ್ನೂ ಅಲ್ಲಾಹನು ವಿಫಲಗೊಳಿಸುವನು ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ.
55. ಖುಬ್ಬತುಲ್ ಇಸ್ಲಾಮ್; ಮದೀನಾ ಇಸ್ಲಾಮಿನ ಕೇಂದ್ರವಾಗಿದೆ ಎಂದು ಅರ್ಥ.
56. ಖರ್’ಯತುಲ್ ಅನ್ಸಾರ್; ಅನ್ಸಾರುಗಳ ಹಳ್ಳಿ.
57. ಖರ್’ಯತು ರಸೂಲಿಲ್ಲಾಹ್; ಅಲ್ಲಾಹನ ಸಂದೇಶವಾಹಕರ ಹಳ್ಳಿ, ಇಮಾಮ್ ತ್ವಬ್’ರಾನಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಈ ಹೆಸರಿಗೆ ಸಾಮೀಪ್ಯವಿರುವ ಪದವನ್ನು ಬಳಸಲಾಗಿದೆ.
58. ಖಲ್’ಬುಲ್ ಈಮಾನ್: ವಿಶ್ವಾಸಿಗಳ ಹೃದಯ.
59. ಅಲ್ ಮುಅಮಿನ; ವಿಶ್ವಾಸ ಅಥವಾ ವಿಶ್ವಾಸದ ಊರು
60. ಅಲ್ ಮುಬಾರಕ; ಅನುಗ್ರಹಿತ ಅಥವಾ ಅನುಗ್ರಹಿತ ಪ್ರದೇಶ.
61. ಮುಬವ್ವವುಲ್ ಹಲಾಲಿ ವಲ್’ಹರಾಮ್; ಅಸಕ್ತಿಗಳ ಊರು, ಸರಿ ಅಥವಾ ತಪ್ಪುಗಳನ್ನು ಪ್ರತ್ಯೇಕಿಸುವ ಭೂಮಿ.
62. ಮುಬಯ್ಯಿನುಲ್ ಹಲಾಲಿ ವಲ್’ಹರಾಮ್; ಸರಿ ಅಥವಾ ತಪ್ಪುಗಳ ವಿವರಣೆ, ಮದೀನದಿಂದ ಅಲ್ಲವೇ.? ಸರಿ, ತಪ್ಪುಗಳನ್ನು ಪ್ರತ್ಯೇಕಗೊಳಿಸಿ ವಿವರಿಸಿದ್ದು, ಇಸ್ಲಾಮಿನ ಪರಂಪರೆಯ ನ್ಯಾಯಶಾಸ್ತ್ರದಲ್ಲಿ ಮದೀನಕ್ಕೆ ಪ್ರಮುಖ ಸ್ಥಾನವಿದೆ.
63. ಅಲ್ ಮಜಬೂರ; ಒಳಿತಿಗಾಗಿ ಕಟ್ಟುನಿಟ್ಟು ಪಾಲಿಸುವ ಊರು
64. ಅಲ್ ಮೂಹಿಬ್ಬ, 65.ಅಲ್ ಮುಹಬ್ಬಬ, 66. ಅಲ್ ಮಹ್’ಬೂಬ; ಪ್ರೀತಿ ಎಂಬ ಅರ್ಥ ಬರುವ, ಹುಬ್ಬಿನ (ಪ್ರೀತಿ) ಬೇರೆ ಬೇರೆ ಪದಗಳಾಗಿವೆ ಇದು. ಪ್ರೀತಿಸಲು, ಪ್ರೀತಿಯನ್ನು ಉತ್ತೇಜಿಸುವ ಪ್ರಪಂಚದ ಅತ್ಯುತ್ತಮ ಸ್ಥಳವಾಗಿದೆ ಮದೀನ ಎಂಬ ಅರ್ಥದಲ್ಲಿ ಈ ಪದವನ್ನು ಬಳಸಲಾಗಿದೆ.
67. ಅಲ್ ಮಹ್’ಬೂರ ; ಅನುಗ್ರಹಿತ ಸಂತೋಷ, ಅತೀ ವೇಗದಲ್ಲಿ ಫಲವನ್ನು ಕೊಡುವ ಭೂಮಿ ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಲಾಗಿದೆ.
68. ಅಲ್ ಮುಹರ್’ರಮ; ಅನುಗ್ರಹಿತ ಸ್ಥಳ.
69. ಅಲ್ ಮಹ್’ರೂಸ; ಶಸ್ತ್ರಸಜ್ಜಿತ, ಮಲಕುಗಳು ಪರಸ್ಪರ ಕೈ ಹಿಡಿದು ಬೇಲಿ ಕಟ್ಟಿದ ಪ್ರದೇಶವಾಗಿದೆ ಮದೀನ
70. ಅಲ್ ಮಹ್’ಫೂಫ; ಸುತ್ತಿದ ಸ್ಥಳ, ಅನುಗ್ರಹಗಳಿಂದ, ಮಲಕುಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶ.
71. ಅಲ್ ಮಹ್’ಫೂಳ ; ಸುರಕ್ಷಿತ ಪ್ರದೇಶ.
72. ಅಲ್ ಮುಖ್’ತಾರ; ಆಯ್ಕೆಯಾದ ಪ್ರದೇಶ, ಆಯ್ಕೆಯಾದ ಪ್ರವಾದಿಯವರಿಗಾಗಿ ﷺ, ಆಯ್ಕೆ ಮಾಡಿದ ಪ್ರದೇಶ.
73. ಮುದ್’ಖಲು ಸಿದ್’ಖ್; ಸತ್ಯದ ಪ್ರವೇಶ, ಅಲ್ ಇಸ್’ರಾಅ್ ಅಧ್ಯಾಯದ ಎಂಬತ್ತನೇ ಸೂಕ್ತದಲ್ಲಿ ಈ ಹೆಸರನ್ನು ಉಲ್ಲೇಖಿಸಲಾಗಿದೆ.
74. ಅಲ್ ಮರ್’ಹೂಮ; ಕರುಣೆ ಲಭಿಸಿದ ಊರು, ಕರುಣೆಯ ಪ್ರವಾದಿಯವರು ﷺ ತಲುಪಿ, ವಿಶ್ರಾಂತಿ ಪಡುತ್ತಿರುವ ಊರು.
75. ಅಲ್ ಮರ್’ಝೂಕ ; ಸಂಪನ್ಮೂಲಗಳ ಭೂಮಿ, ಪ್ರಪಂಚದಲ್ಲಿ ಲಭಿಸುವ ಅತ್ಯುತ್ತಮವಾದ ಸಂಪನ್ಮೂಲ ಅಂದರೆ ಅದು ಪ್ರವಾದಿಯವರ ﷺ ಉಪಸ್ಥಿಯಲ್ಲವೇ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-168/365
76. ಮಸ್ಜಿದುಲ್ ಅಖ್’ಸಾ; ಇಬ್’ನುಲ್ ಮಲಖ್ವಿನ್ “ಅಲ್ ಇಶಾರಾತ್” ಎಂಬ ಗ್ರಂಥದಲ್ಲಿ ಈ ಹೆಸರನ್ನು ಉಲ್ಲೇಖಿಸಿದ್ದು ಕಾಣಬಹುದು.
77. ಅಲ್ ಮಿಸ್’ಕೀನ; ತೌರಾತಿನಲ್ಲಿ ಈ ಹೆಸರನ್ನು ಉಲ್ಲೇಖಿಸಲಾಗಿದೆ, ಭಯಭಕ್ತಿಯಲ್ಲಿರುವ ವಿನಮ್ರರ ಅಭಯಾರಣ್ಯದ ಪರಿಕಲ್ಪನೆ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ.
78. ಅಲ್’ಮುಸ್ಲಿಮ; ಅಧೀನಗೊಂಡವರ ಭೂಮಿ.
79. ಮಳ್’ಜಉ ರಸೂಲಿಲ್ಲಾಹ್ ﷺ; ಅಲ್ಲಾಹನ ಸಂದೇಶವಾಹಕರು ವಿಶ್ರಾಂತಿ ಪಡೆಯುತ್ತಿರುವ ಸ್ಥಳ, ಹದೀಸಿನಲ್ಲಿ ಈ ಅರ್ಥವಿರುವ ಪದಗಳ ಉಲ್ಲೇಖವಾಗಿರುವುದು ಕಾಣಬಹುದು.
80. ಅಲ್ ಮುತ್ವಯ್ಯಬ; ತ್ವೈಬ ಎಂಬ ಹೆಸರಿನ ಅರ್ಥಕ್ಕೆ ಸಮಾನವಾದ ಪದವಾಗಿದೆ ಇದು.
81. ಅಲ್ ಮುಖದ್ದಸ; ಪವಿತ್ರವಾದ ಸ್ಥಳ, ಬಹುದೈವಾರಾಧನೆ ಹಾಗೂ ಪಾಪಗಳಿಂದ ಮುಕ್ತವಾದ ಸ್ಥಳ.
82. ಅಲ್ ಮಖರ್’ರ್; ವಾಸ ಸ್ಥಳ, ಮದೀನವನ್ನು ತನ್ನ ವಾಸಸ್ಥಳ ಮಾಡಬೇಕೆಂದು ಪ್ರವಾದಿಯವರು ﷺ ಪ್ರಾರ್ಥನೆ ಮಾಡಿರುವುದು ಹದೀಸ್’ನಲ್ಲಿ ಕಾಣಬಹುದು.
83. ಅಲ್ ಮಕ್ಕತ್ತಾನ್; ಸಅದ್ ಬಿನ್ ಅಬಿಸ್ಸರ್’ಹ್ ಉಸ್ಮಾನ್’ರ ◌ؓ ಗ್ರಹಬಂಧನವನ್ನು ಉಲ್ಲೇಖಿಸಿದಾಗ ಮದೀನವನ್ನು ಪರಿಚಯಿಸಿದ್ದು “ಮಕ್ಕತ್ತಾನ್” ಎಂಬ ಹೆಸರಿನಿಂದಾಗಿತ್ತು. ಮಕ್ಕಾ ಹಾಗೂ ಮದೀನಾವನ್ನು ಸೇರಿಸಿ ಎರಡು ಮಕ್ಕಾ ಎಂಬ ಅರ್ಥದಲ್ಲಿ ಈ ಹೆಸರನ್ನು ಬಳಸಿರಬಹುದು. ಇಶಾಅ್ ಹಾಗೂ ಮಗ್’ರಿಬನ್ನು ಸೇರಿಸಿ ಎರಡು ಮಗ್’ರಿಬ್’ಗಳು, ಎರಡು ಇಶಾಅ್’ಗಳು ಎಂಬ ಪದಪ್ರಯೋಗಗಳು ಅರಬಿಯಲ್ಲಿ ಇರುವುದು ಕಾಣಬಹುದು.
84. ಅಲ್ ಮಕೀನ; ಗೌರವಿಸಲ್ಪಡುವ ಸ್ಥಳ.
85. ಮುಹಾಜರು ರಸೂಲಿಲ್ಲಾಹ್ ﷺ; ಅಲ್ಲಾಹನ ಸಂದೇಶವಾಹಕರು ಪಲಾಯನ ಮಾಡಿ ಬಂದ ಸ್ಥಳ.
86. ಅಲ್ ಮೂಫಿಯ; ಒಪ್ಪಂದಗಳನ್ನು ಪಾಲಿಸುವ ಭೂಮಿ.
87. ಅನ್ನಾಜಿಯ; ಸುರಕ್ಷಿತ ಮನೆ
88. ನಬ್’ಲಾವು; ಶ್ರೇಷ್ಠತೆ, ಸುರಕ್ಷತೆ
89. ಅನ್ನಹ್’ರ್; ಹವಾಮಾನದ ಶಾಖವನ್ನು ತಿಳಿಸುವ ಹೆಸಾರಗಿದೆ ಇದು.
90. ಅಲ್ ಹದ್’ರಾವು; ಯೌಮುನ್ ಹಾದಿರುಲ್ ಎಂಬ ಅರಬಿ ಪದದ ಅರ್ಥ ಉಷ್ಣತೆ ಇರುವ ದಿನ ಎಂದಾಗಿದೆ, ಈ ಹೆಸರು ಮದೀನದ ಸಮಯ ಹಾಗೂ ಹವಾಮಾನವನ್ನು ಸೂಚಿಸಲು ಬಳಸುವ ಪದವಾಗಿದೆ ಇದು.
91. ಯನ್’ದದ್; ಪವಿತ್ರ, ಸಂಪನ್ಮೂಲಗಳಲ್ಲಿ ಸಮೃದ್ಧವಾಗಿರುವ ಅರ್ಥವನ್ನು ಸೂಚಿಸುವ ಪದವಾಗಿದೆ.
92. ಮದೀನ; ನಗರ, ನಗರ ಎಂಬ ಹೆಸರಿನಿಂದಲೇ ಜಗತ್ತಿನಲ್ಲಿ ಪ್ರಸಿದ್ಧವಾದ ಸ್ಥಳವಾಗಿದೆ ಮದೀನ.
93. ಮದೀನತು ರಸೂಲಿಲ್ಲಾಹ್ ﷺ; ಅಲ್ಲಾಹನ ಸಂದೇಶವಾಹಕರ ನಗರ.
ಮದೀನವನ್ನು ಸೇರಿಸಿ ಆಧ್ಯಾತ್ಮಿಕ ಹಾಗೂ ಭೌತಿಕವಾದ ಅರ್ಥಗಳನ್ನು ಸೂಚಿಸುವ ಹೆಸರುಗಳನ್ನಾಗಿದೆ ನಾನು ಈಗ ತಿಳಿದದ್ದು. ಖುರ್’ಆನ್, ಹದೀಸ್, ಗತಕಾಲದ ವೇದ ಗ್ರಂಥಗಳಲ್ಲಿ ಮದೀನದ ವಿಶೇಷತೆಗಳನ್ನು ಪರಿಚಯಿಸಲು ಬಳಸಿದ ಪದಗಳಾಗಿವೆ ಅಧಿಕವು ಕೂಡ. ಒಂದು ಪ್ರದೇಶವನ್ನು ಇಷ್ಟೊಂದು ಹೆಸರುಗಳಿಂದ ಕರೆಯಲ್ಪಡುವುದು ವೈಜ್ಞಾನಿಕವಾಗಿ ಕುತೂಹಲ ಮೂಡಿಸುವ ವಿಷಯವಾಗಿದ್ದರೂ, ಪ್ರೇಮಿಗಳಿಗೆ ಸಂತೋಷದಾಯಕ ವಿಷಯವಾಗಿದೆ. ಅದೇ ಕಾರಣಕ್ಕಾಗಿತ್ತು ಇಮಾಮ್ ಯೂಸುಫ್ ಸ್ವಾಲಿಹಿ ಅಶ್ಶಾಮಿಯವರಂತಹ ◌ؓ ಪ್ರಮುಖರು, ಪ್ರತ್ಯೇಕವಾಗಿ ಕೇವಲ ಈ ವಿಷಯಕ್ಕಾಗಿ ಮಾತ್ರ ಬಹಳಷ್ಟು ಗಮನ ಹರಿಸಿ ಒಂದು ಅಧ್ಯಾಯವನ್ನೇ ಮೀಸಲಿರಿಸಿದ್ದು. ಮದೀನದ ವೈಭವ, ಇತಿಹಾಸವನ್ನು ವಿವರಿಸುವ ಬಹುತೇಕ ಗ್ರಂಥಗಳಲ್ಲಿ ವಿವಿಧ ಹೆಸರುಗಳಲ್ಲಿ ಈ ವಿಷಯದ ಬಗ್ಗೆ ಒಂದು ಅಧ್ಯಾಯವಿರುವುದೇ ಕಾಣಬಹುದು. ಯಾವುದೇ ಒಂದು ವ್ಯಕ್ತಿಗಾಗಲಿ, ಪ್ರದೇಶಕ್ಕಾಗಲಿ ಬಹಳಷ್ಟು ಹೆಸರುಗಳು ಇರುವುದೇ, ಅದೊಂದು ಶ್ರೇಷ್ಠತೆಯ ಸಂಕೇತವಾಗಿದೆ.
ಪ್ರವಾದಿಯವರ ﷺ ಆಗಮನದಿಂದ ಯಸ್’ರಿಬ್ ಮದೀನವಾಯಿತು. ಜೊತೆಯಲ್ಲಿ ಮದೀನದಲ್ಲಿ ಬಹಳಷ್ಟು ಬದಲಾವಣೆ ಕೂಡ ಆಯಿತು. ಪ್ರವಾದಿಯವರು ﷺ ಮದೀನಕ್ಕೆ ಬರುವುದಕ್ಕೂ ಮುಂಚೆ ಇದ್ದ ಸಾಂಕ್ರಾಮಿಕ ರೋಗ ಕೂಡ ಸಂಪೂರ್ಣವಾಗಿ ನಿಂತು ಬಿಟ್ಟಿತು. ಇದರ ಬಗ್ಗೆ ಇಮಾಮ್ ಬುಖಾರಿ ◌ؓ, ತುರ್’ಮುದಿ ◌ؓ, ಹಾಗೂ ಇತರರು ಉಲ್ಲೇಖಿಸಿದ ಹದೀಸಿನಲ್ಲಿ ಆಯಿಷಾ ಬೀವಿಯವರು ◌ؓ ಹೇಳಿರುವುದು ಕಾಣಬಹುದು. ಪ್ರವಾದಿಯವರು ﷺ ಅಂದು ಮದೀನಕ್ಕೆ ಬರುವಾಗ, ಜಗತ್ತಿನಲ್ಲಿ ಮದೀನಾ ಅತೀ ಹೆಚ್ಚು ಜ್ವರ ಪೀಡಿತ ಪ್ರದೇಶವಾಗಿತ್ತು. ಹಾಗಾಗಿ ಅಲ್ಲಿನ ಕಣಿವೆಯಿಂದ ಹರಿಯುತ್ತಿರುವ ನದಿಯ ನೀರಿನ ಕಾರಣದಿಂದ ಪ್ರವಾದಿಯವರು ﷺ ಹಾಗೂ ಅವರ ಸಹಚರರು ರೋಗ ಪೀಡಿತರಾಗಿದ್ದರು. ಅಬೂಬಕ್ಕರ್ ◌ؓ, ಆಮಿರ್ ಬಿನ್ ಫುಹೈರ ◌ؓ, ಹಾಗೂ ಬಿಲಾಲ್’ರವರು ◌ؓ ಒಂದೇ ಮನೆಯಲ್ಲಿ ಜ್ವರಬಂದು ವಿಶ್ರಾಂತಿ ಪಡಿಯುತ್ತಿದ್ದಾಗ, ಪ್ರವಾದಿಯವರ ಅನುಮತಿಯೊಂದಿಗೆ ನಾನು ಅವರನ್ನು ಭೇಟಿಯಾಗಲು ಹೋದೆನು. (ಅಂದು ಹಿಜಾಬಿನ ನಿಯಮ ಜಾರಿಯಲ್ಲಿ ಇರಲಿಲ್ಲ) ಅವರೆಲ್ಲರೂ ಬಹಳಷ್ಟು ಗಂಭೀರ ಸ್ಥಿತಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು, ನಾನು ನನ್ನ ತಂದೆಯ ಬಳಿ ತೆರಳಿ ಹೇಗಿದ್ದೀರಿ.? ಎಂದು ಕೇಳಿದಾಗ, ಅವರು ಕವಿತೆಯ ರೀತಿಯಲ್ಲಿ ಉತ್ತರ ನೀಡಿದರು. “ಕುಲ್ಲುಂರಿಇನ್ ಮುಸ್ವಬ್ಬಹುನ್ ಫೀ ಅಹ್’ಲಿ ಹಿ
ವಲ್ ಮೌತು ಅದ್’ನಾ ಮಿನ್ ಶಿರಾಕ್ಕಿ ನಅಲಿಹಿ”
ಚಪ್ಪಲಿಯ ದಾರ ಚಪ್ಪಲಿಗೆ ಹತ್ತಿರವಾದ ಹಾಗೆ ಮರಣಕ್ಕೆ ಸಮೀಪವಾಗಿ ಮನೆಯಲ್ಲೊಬ್ಬರು ಮಲಗಿದ್ದಾರೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-169/365
ಆಯಿಷಾ ಬೀವಿಯವರು ◌ؓ ತಮ್ಮ ಮಾತು ಮುಂದುವರಿಸುತ್ತಾ, ನಾನು ಆಮಿರ್ ಬಿನ್ ಫುಹೈರರ ◌ؓ ಬಳಿ ಹೋಗಿ ಅವರಲ್ಲಿ ಹೇಗಿದ್ದೀರ ಎಂದು ಕೇಳಿದೆನು.? ಅವರೂ ಕೂಡ ಉತ್ತರಿಸಿದ್ದು ಕವಿತೆಯ ರೀತಿಯಲ್ಲಾಗಿತ್ತು. “ಲಖದ್ ವಜ್’ದ್ ತುಲ್ ಮೌತ ಖಬ್’ಲ ದೌಖಿಹಿ…”
“ರುಚಿ ನೋಡುದಕ್ಕೂ ಮುನ್ನವೇ ಮರಣದ ಆಗಮನವಾಯಿತು.”
ಅಲ್ಲಾಹನೇ ಆಮಿರ್ ◌ؓ ಇದೇನು ಹೇಳುತ್ತಿದ್ದಾರೆ.? ಎಂದು ಸ್ವಲ್ಪ ಮುಂದೆ ಹೋದಾಗ, ಬಿಲಾಲ್ ◌ؓ ಬಹಳ ಬೇಸರದಲ್ಲಿ ಅಲ್ಲೇ ಪಕ್ಕದಲ್ಲಿ ಮಲಗಿದ್ದರು. ಅವರೂ ಕೂಡ ಬಹಳ ಬೇಸರದಿಂದಲೇ ಕವಿತೆ ಹಾಡುತ್ತಿದ್ದರು. ಇದೆಲ್ಲವನ್ನೂ ನಾನು ಹೋಗಿ, ಪ್ರವಾದಿಯವರ ﷺ ಬಳಿ ಹೇಳಿದನು. ತಕ್ಷಣವೇ ಪ್ರವಾದಿಯವರು ﷺ ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಅಲ್ಲಾಹನಲ್ಲಿ, ಮಕ್ಕಾ ನಗರವನ್ನು ಜನರಿಗೆ ಇಷ್ಟವಿರುವ ಸ್ಥಳ ಮಾಡಿದ ಹಾಗೆ ಮದೀನವನ್ನು ಕೂಡ ಅತೀ ಇಷ್ಟವಿರುವ ಸ್ಥಳವನ್ನಾಗಿ ಮಾಡು ಪ್ರಭು.! ಎಂದು ಪ್ರಾರ್ಥಿಸಿದರು. ಇನ್ನೊಂದು ಉಲ್ಲೇಖದ ಪ್ರಕಾರ, ಮಕ್ಕಕ್ಕಿಂತಲೂ ಅಧಿಕವಾಗಿ ಮದೀನವನ್ನು ಜನರಿಗೆ ಇಷ್ಟವಿರುವ ಸ್ಥಳವನ್ನಾಗಿ ಮಾಡು ಪ್ರಭು, ಮದೀನದ ಒಂದೊಂದು ಅನ್ನದ ಅಗುಳಿನಲ್ಲೂ ನಿನ್ನ ಅನುಗ್ರಹ ನೀಡು , ಇಲ್ಲಿಯ ರೋಗವನ್ನು ಜುಹ್’ಫಾಗೆ ವಾರ್ಗಹಿಸು.! ಎಂದು ಪ್ರಾರ್ಥಿಸಿದ್ದರು.
ಪ್ರವಾದಿಯವರ ﷺ ಈ ಪ್ರಾರ್ಥನೆಯ ಕಾರಣದಿಂದ ರೋಗ ಶಮನವಾದ ಬಗ್ಗೆ ತಿಳಿಸುವ ಹದೀಸಿನಲ್ಲಿ, ಪ್ರವಾದಿಯವರು ﷺ ಹೇಳುವ ಮಾತನ್ನು, ಇಬ್’ನು ಉಮರ್’ರವರು ◌ؓ ಉಲ್ಲೇಖಿಸಿದ್ದು ಕಾಣಬಹುದು. ಕೂದಲು ಗಾಳಿಗೆ ಹಾರುತ್ತಿದ್ದ, ಕುರೂಪಿಯಾದ ಹೆಣ್ಣಿನ ಆಕೃತಿಯೊಂದು ಮದೀನದಿಂದ ಜುಹ್ಫಾಗೆ ಹೊರಟದ್ದು ನನಗೆ ಕಾಣಲು ಸಾಧ್ಯವಾಯಿತು, ನಾನು ಈ ದೃಶ್ಯವನ್ನು, ಮದೀನದ ರೋಗವು ಜುಹ್ಫಾಗೆ ವರ್ಗಾವಣೆ ಮಾಡಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದರು.
ಉರ್ವಾದಿಂದ ಬಂದ ಮತ್ತೊಂದು ಹದೀಸಿನಲ್ಲಿ ಉಲ್ಲೇಖವಿರುವುದು ಕಾಣಬಹುದು. ಒಂದು ದಿನ ಪ್ರವಾದಿಯವರು ﷺ ಮಕ್ಕಾದಿಂದ ಬರುತ್ತಿದ್ದ ಒಬ್ಬರು ದಾರಿಹೋಕರಲ್ಲಿ ನೀವು ಬರುವ ದಾರಿಯಲ್ಲಿ ಯಾರನ್ನಾದರೂ ನೋಡಿದ್ದೀರಾ.? ಎಂದು ಕೇಳಿದಾಗ, ಆ ವ್ಯಕ್ತಿ, ನಾನು ಯಾರನ್ನೂ ನೋಡಿಲ್ಲ ಆದರೆ ಒಂದು ಬಿಚ್ಚಿದ ಕೂದಲಿನಿಂದ ಕೂಡಿದ್ದ ಕುರೂಪಿಯಾದ ಒಂದು ಮಹಿಳೆಯ ಆಕೃತಿ ಆ ಕಡೆಗೆ ಹೋಗುವುದಾಗಿ ಕಂಡೆನು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಅದು ರೋಗವಾಗಿದೆ, ಇಲ್ಲಿಂದ ಶಾಶ್ವತವಾಗಿ ಹೊರಟು ಹೋಗುತ್ತಿರುವುದು, ಅದು ಇನ್ನು ಯಾವತ್ತೂ ವಾಪಸು ಬರುವುದಿಲ್ಲ ಎಂದು ಹೇಳಿದರು.
ಇಮಾಮ್ ಇಬ್’ನು ಇಸ್’ಹಾಕ್’ರು ◌ؓ ಹಾಗೂ ಇತರರು ಉಲ್ಲೇಖಿಸಿದ ಹದೀಸಿನಲ್ಲಿ ಅಂರ್ ಬಿನ್ ಅಲ್ ಆಸ್ವ್ ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ತಮ್ಮ ಅನುಚರರ ಜೊತೆಯಲ್ಲಿ ಮದೀನಕ್ಕೆ ತಲುಪಿದಾಗ, ಅವರ ಬಹಳಷ್ಟು ಅನುಚರರಿಗೆ ಜ್ವರ ಬಂದಿತ್ತು. ರೋಗ ಉಲ್ಭಣಿಸಿ ಅವರಿಗೆ ನಿಂತು ನಮಾಝ್ ಮಾಡಲು ಸಾಧ್ಯವಾಗದೆ ಇದ್ದಾಗ, ಅವರು ಕುಳಿತು ನಮಾಝ್ ಮಾಡುತಿದ್ದರು. ಅದನ್ನು ಕಂಡ ಪ್ರವಾದಿಯವರು ﷺ ನಿಂತು ನಮಾಝ್ ಮಾಡುವುದರ ಶ್ರೇಷ್ಠತೆಯನ್ನು ಅವರಿಗೆ ತಿಳಿಸಿ ಕೊಟ್ಟಾಗ, ಅವರೆಲ್ಲರೂ ತಮ್ಮ ಎಲ್ಲಾ ನೋವುಗಳನ್ನು ಮರೆತು ನಿಂತು ನಮಾಝ್ ಮಾಡಲು ಆರಂಭಿಸಿದರು.
ಅಬ್ದುಲ್ಲಾಹಿಬಿನ್ ಫಳಿಲ್ ಬಿನ್ ಅಬ್ಬಾಸ್’ರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ, ಅಲ್ಲಾಹನಲ್ಲಿ ಮದೀನಾ ನಿವಾಸಿಗಳಿಗೂ ಕೂಡ ಮಕ್ಕಾದ ಹಾಗೆ ಅನುಗ್ರಹಕ್ಕಾಗಿ ನಿನ್ನಲ್ಲಿ ಬೇಡುತ್ತಿದ್ದೇನೆ ಎಂದು ಪ್ರಾರ್ಥನೆ ಮಾಡಿದ್ದರು. ಪ್ರವಾದಿಯವರ ﷺ ಪ್ರಾರ್ಥನೆಯ ಫಲವಾಗಿ, ನಡೆದ ವಿಸ್ಮಯವನ್ನು ನಮಗೆ ಕಣ್ಣಾರೆ ಕಾಣಲು ಸಾಧ್ಯವಾಗಿತ್ತು, ನಾವು ಮಕ್ಕಾದಿಂದ ತಂದಿದ್ದ ಆಹಾರ ಧಾನ್ಯಗಳಿಂದ ನಾಲ್ಕನೇ ಒಂದು ಭಾಗದಲ್ಲಿ ಮಾತ್ರ ನೆಮ್ಮದಿಯಿಂದ ಆಹಾರ ಸೇವನೆ ಮಾಡುತ್ತಿದ್ದೆವು. ಇತರ ಪ್ರದೇಶದ ಮೇಕೆಗಳು ಮೇಯುದಕ್ಕಿಂತ ಸ್ವಲ್ಪ ಭಾಗದಲ್ಲಿ ಮಾತ್ರ, ನಮ್ಮ ಮೇಕೆಗಳನ್ನು ಮೇಯಿಸಿ ಬಂದರೂ ಅದು ಅವುಗಳಿಗೆ ಧಾರಾಳವಾಗಿ ಸಾಕಾಗುತ್ತಿತ್ತು.
ಅಬೂಹುರೈರರು ◌ؓ ಹೇಳುವುದು ಕಾಣಬಹುದು, ಮದೀನಾ ನಿವಾಸಿಗಳು ತಮ್ಮ ಕೃಷಿಯಲ್ಲಿ ಬೆಳೆದ ಫಸಲುಗಳಲ್ಲಿ, ಕೆಲವು ಭಾಗಗಳನ್ನು ಪ್ರವಾದಿಯವರಿಗೆ ﷺ ನೀಡುತ್ತಿದ್ದರು. ಅವರು ಅದನ್ನು ಕಣ್ಣಿಗೆ ಒತ್ತಿ ಹಿಡಿದು ಅಲ್ಲೇ ಪಕ್ಕದಲ್ಲಿ ಇಟ್ಟು, ಮದೀನಕ್ಕೂ, ಮದೀನಾ ನಿವಾಸಿಗಳ ಅಭಿವೃದ್ಧಿಗಾಗಿ ಪ್ರಾರ್ಥನೆ ಮಾಡುತ್ತಿದ್ದರು. ನಂತರ ಆ ಗುಂಪಿನಲ್ಲಿರುವ ಅತೀ ಹಿರಿಯ ವ್ಯಕ್ತಿಗಳಿಗೆ ಆ ಫಸಲುಗಳನ್ನು ನೀಡುತ್ತಿದ್ದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-170/365
ಮದೀನಕ್ಕೆ ತೆರಳಲು ಕೆಲವೊಂದು ನಿಯಮ, ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಪ್ರವಾದಿಯವರ ﷺ ಆಗಮನದಿಂದ ಮದೀನ ಕೇವಲ ಒಂದು ಪ್ರದೇಶವಾಗಿರದೆ ಬಹಳಷ್ಟು ಮಹತ್ವಗಳನ್ನು ಹೊಂದಿದ ಪುಣ್ಯ ಭೂಮಿಯಾಯಿತು. ಹಾಗಾಗಿ ಅವುಗಳನ್ನು ಪರಿಗಣಿಸಿಕೊಂಡೇ ಮದೀನಕ್ಕೆ ತೆರಳಬೇಕು, ಅವುಗಳ ಬಗ್ಗೆ ನಡೆಸಿದ ಕೆಲವೊಂದು ಅಧ್ಯಯನದ ಬಗ್ಗೆ ತಿಳಿಯೋಣ.
ಇಮಾಮ್ ಅಹ್ಮದ್’ರು ◌ؓ ಹಾಗೂ ಇತರರು ಉಲ್ಲೇಖಿಸಿದ ಹದೀಸಿನಲ್ಲಿ ಪ್ರವಾದಿಯವರು ﷺ ಹೇಳಿರುವುದು ಕಾಣಬಹುದು. ಮದೀನಕ್ಕೆ ಯಾರಾದರೂ ದುರುದ್ದೇಶದಿಂದ ತೆರಳಿದರೆ, ನೀರು ಉಪ್ಪನ್ನು ಕರಗಿಸುವ ಹಾಗೆ ಅಲ್ಲಾಹನು ಅವನನ್ನು ಕರಗಿಸುತ್ತಾನೆ. ಪ್ರವಾದಿಯವರು ﷺ ಹೇಳಿದ ಮಾತಿನ ಜೊತೆಯಲ್ಲಿ ಮಅಖಲ್ ಬಿನ್ ಯಸಾರ್’ರು ◌ؓ ಉಲ್ಲೇಖಿಸಿದ ಮತ್ತೊಂದು ಹದೀಸಿನಲ್ಲಿ ಕಾಣಬಹುದು. ಮದೀನ ನನ್ನ ಪಲಾಯನದ ಭೂಮಿಯಾಗಿದೆ. ಅಲ್ಲೆಯಾಗಿದೆ ನನ್ನ ವಿಶ್ರಾಂತಿಯೂ ಕೂಡ, ಅಲ್ಲಿಂದಲೇ ಆಗಿದೆ ನನ್ನ ಪರಲೋಕ ಯಾತ್ರೆಯ ಪುನರಾರಂಭವಾಗುವುದು ಕೂಡ, ಹಾಗಾಗಿ ನನ್ನ ನೆರೆಹೊರೆಯವರೊಂದಿಗೆ ಕಾಳಜಿಯಿಂದ ವರ್ತಿಸುವುದು, ಹಾಗೂ ಅವರನ್ನು ರಕ್ಷಿಸುವುದು ನನ್ನ ಸಮುದಾಯದ ಜವಾಬ್ದಾರಿಯಾಗಿದೆ. ಅವರಲ್ಲಿ ಯಾರಾದರೂ ಮಹಾಪಾಪಗಳನ್ನು ಮಾಡಿದರೆ ಅವರನ್ನು ರಕ್ಷಿಸಬೇಕೆಂದಿಲ್ಲ, ಮದೀನಾ ನಿವಾಸಿಗಳೊಂದಿಗೆ ಕಾಳಜಿಯಿಂದ ವರ್ತಿಸುವ ಜನರಿಗೆ ಪರಲೋಕದಲ್ಲಿ ನಾನು ಸಾಕ್ಷಿ ನಿಲ್ಲುತ್ತೇನೆ. ಅವರಿಗಾಗಿ ನಾನು ಶಿಫಾರಸ್ಸು ಮಾಡುತ್ತೇನೆ. ಇನ್ನೂ ಅವರಲ್ಲಿ ಅಗೌರವದಿಂದ ವರ್ತಿಸಿದರೆ ಅಂತವರಿಗೆ “ತ್ವೀನತುಲ್ ಖಬಾಲ್” ಅಥವಾ ನರಕವಾಸಿಗಳ ರಕ್ತವನ್ನು ಕುಡಿಸಲಾಗುವುದು. ನನ್ನನ್ನು, ನನ್ನ ಮದೀನವನ್ನು ನಾಶಮಾಡಲು ಗುರಿ ಹೊಂದಿರುವವನನ್ನು ನೀನು ನಾಶ ಮಾಡು ಪ್ರಭು ಎಂದು ಪ್ರವಾದಿಯವರು ﷺ ಪ್ರಾರ್ಥನೆ ಮಾಡಿರುವುದನ್ನು ಸಈದುಬಿನುಲ್ ಮುಸಯ್ಯಬ್’ರು ◌ؓ ಉಲ್ಲೇಖಿಸಿರುತ್ತಾರೆ.
ಮುಹಮ್ಮದ್ ಬಿನ್ ಮಸ್’ಲಮರ ◌ؓ ಉಲ್ಲೇಖದಲ್ಲಿ ಇಮಾಮ್ ಮಾಲಿಕ್’ರು ◌ؓ ಹೇಳುವುದು ಕಾಣಬಹುದು. ನಾನು ಅಲ್ ಮಹ್’ದಿಯವರ (ಅಬ್ಬಾಸಿ ಆಡಳಿತಾಧಿಕಾರಿ) ಬಳಿ ಹೋಗಿದ್ದಾಗ, ಅವರಿಗೆ ಸ್ವಲ್ಪ ಉಪದೇಶಗಳನ್ನು ನೀಡಲು ಹೇಳಿದರು. ಅದಕ್ಕೆ ನಾನು ಅವರಲ್ಲಿ, ನೀವು ಏಕ ದೇವನಾದ ಅಲ್ಲಾಹನನ್ನು ಭಯಪಡಿರಿ, ಅವರ ಸಂದೇಶ ವಾಹಕರ ಪ್ರೀತಿಯ ಊರಿನ ಮೇಲೆ ಬಹಳಷ್ಟು ಕಾಳಜಿಯಿಂದ ವರ್ತಿಸಿರಿ, ಯಾಕೆಂದರೆ ಪ್ರವಾದಿಯವರು ﷺ ಒಮ್ಮೆ ಹೇಳಿದ್ದರು, ಮದೀನಾ ನನ್ನ ಪಲಾಯನದ ಹಾಗೂ ವಿಶ್ರಾಂತಿ ಪಡೆಯುವ ಭೂಮಿಯಾಗಿದೆ. ಅಲ್ಲಿಂದಲೇ ನನ್ನ ಪುನರುತ್ಥಾನವೂ ಆಗಿದೆ. ಅಷ್ಟೇ ಅಲ್ಲ ಅಲ್ಲಿರುವ ಜನರೆಲ್ಲರೂ ನನ್ನ ನೆರೆಹೊರೆಯವರಾಗಿರುತ್ತಾರೆ, ನನ್ನ ನೆರೆಹೊರೆಯವರನ್ನು ಕಾಳಜಿಯಿಂದ ನೋಡಬೇಕಾದದ್ದು ನನ್ನ ಸಮುದಾಯದ ಜವಾಬ್ದಾರಿಯಾಗಿದೆ. ಅಂತವರಿಗೆ ನಾನು ಪರಲೋಕದಲ್ಲಿ ಶಿಫಾರಸ್ಸು ಮಾಡುತ್ತೇನೆ, ನನ್ನ ನೆರೆಹೊರೆಯವರನ್ನು ಕೇವಲವಾಗಿ ಕಂಡವರಿಗೆ ತ್ವೀನತುಲ್ ಖಬಾಲ್ ಎಂಬ ನರಕವಾಸಿಗಳ ರಕ್ತವನ್ನು ಕುಡಿಸಲಾಗುವುದು ಎಂದು ಅಲ್ ಮಹ್’ದಿಯವರಲ್ಲಿ ಹೇಳಿದೆನು. ನಂತರದ ದಿನಗಳಲ್ಲಿ ಅಲ್ ಮಹ್’ದಿಯವರು ಮದೀನಕ್ಕೆ ಬಂದಾಗ, ಇಮಾಮ್ ಮಾಲಿಕ್’ರು ಹಾಗೂ ಇತರ ಮುಖಂಡರು ಅಲ್ ಮಹ್’ದಿಯವರನ್ನು ಸ್ವಾಗತಿಸಲು ಸುಮಾರು ಮೈಲಿಗಳಷ್ಟು ದೂರಕ್ಕೆ ಹೋಗಿದ್ದರು. ಇಮಾಮರನ್ನು ಕಂಡ ಕೂಡಲೇ, ಮಹ್’ದಿಯವರು ಇಮಾಮರನ್ನು ತಬ್ಬಿಕೊಂಡು, ಬಹಳ ಗೌರವದಿಂದ ಅವರ ಜೊತೆಯಲ್ಲೇ ಮುಂದೆ ಸಾಗಿದರು. ಇಮಾಮರು ಮಾತು ಮುಂದುವರಿಸುತ್ತಾ, ಮಹ್’ದಿಯವರಲ್ಲಿ ನೀವು ಈಗ ಮದೀನಕ್ಕೆ ತಲುಪಿದ್ದೀರಿ, ತಮ್ಮ ಎರಡು ಭಾಗದಲ್ಲೂ ಇರುವುದು ಮುಹಾಜಿರ್ ಹಾಗೂ ಅನ್ಸಾರುಗಳ ಮಕ್ಕಳಾಗಿದ್ದಾರೆ ಅವರು, ಪ್ರಪಂಚದಲ್ಲೇ ಅತ್ಯಂತ ಆಶೀರ್ವಾದಿಸಲ್ಪಟ್ಟ ಊರಿನ ಜನರಾಗಿರುತ್ತಾರೆ, ಹಾಗಾಗಿ ಅವರಿಗೆ ವಂದಿಸಿರಿ ಎಂದು ಹೇಳಿದಾಗ, ಮಹ್’ದಿಯವರು ನೀವು ಯಾವ ಆಧಾರದ ಮೇಲೆ ಹೇಳುತ್ತೀರಿ.? ಎಂದು ಕೇಳಿದರು. ಅದಕ್ಕೆ ಇಮಾಮರು, ನಮ್ಮ ಪ್ರವಾದಿಯವರ ﷺ ಖಬರ್ ಷರೀಫ್ ಪರಿಚಯಿಸಲ್ಪಟ್ಟ ಹಾಗೆ, ಜಗತ್ತಿನಲ್ಲಿ ಯಾರ ಖಬರ್ ಕೂಡ ಅಷ್ಟೊಂದು ಪರಿಚಯಿಸಲ್ಪಡಲಿಲ್ಲ, ಪ್ರವಾದಿಯವರ ﷺ ಖಬರ್ ಷರೀಫ್ ಇರುವ ಸ್ಥಳದ ಜನರು, ಇತರರಿಗಿಂತ ಮಹತ್ವ ಇರುವ ಜನರಾಗಿರುತ್ತಾರೆ ಎಂದು ಹೇಳಿದರು. ಅದನ್ನು ಅರ್ಥ ಮಾಡಿಕೊಂಡ ಮಹ್’ದಿಯವರು ಇಮಾಮರು ಹೇಳಿದ ಹಾಗೆ ಅವರಿಗೆ ವಂದಿಸಿದರು.
ಪ್ರವಾದಿಯವರು ﷺ ನಿರಂತರವಾಗಿ ನೆರೆಹೊರೆಯವರ ಮಹತ್ವಗಳನ್ನು ತಿಳಿಸುತ್ತಿದ್ದರು. ಜಿಬ್’ರೀಲ್’ರು (ಅ) ಬಂದು ನೆರೆಹೊರೆಯಯವರ ಮಹತ್ವವನ್ನು ತಿಳಿಸುವಾಗ, ಅವರಿಗೂ ಕೂಡ ಪಿತ್ರಾರ್ಜಿತ ಆಸ್ತಿಗಳಲ್ಲಿ ಪಾಲು ಕೊಡಬೇಕಾಗಿ ಬರಬಹುದೋ ಎಂದು ಕೆಲವು ಭಯಪತ್ತಿದ್ದರು.
ನೆರೆಹೊರೆಯಯವರ ಇಷ್ಟೊಂದು ಮಹತ್ವವನ್ನು ತಿಳಿಸುವ ಪ್ರವಾದಿಯವರೇ ﷺ, ಮದೀನಾ ವಾಸಿಗಳನ್ನು ತಮ್ಮ ನೆರೆಹೊರೆಯವರು ಎಂದು ಹೇಳುವಾಗ ಅವರೆಷ್ಟು ಭಾಗ್ಯವಂತರು ಅಲ್ಲವೇ…
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-171/365
ಸರಿ ಇನ್ನೂ ಪ್ರವಾದಿಯವರ ﷺ ಬಳಿ ವಾಪಸ್ಸು ಬರೋಣ, ಪ್ರವಾದಿಯವರು ﷺ ಮದೀನಕ್ಕೆ ತಲುಪಿದ ಕೂಡಲೇ ಕೆಲವೊಂದು ಪ್ರಮುಖ ವಿಷಯಗಳ ಬಗ್ಗೆ ಗಮನ ಹರಿಸಬೇಕಿತ್ತು, ಅದು ಅಲ್ಲಿದ್ದವರ ಹಾಗೂ ಅಲ್ಲಿಗೆ ಪಲಾಯನ ಮಾಡಿ ಬಂದು ತಲುಪಿದ ಜನರ ನಡುವಿನ ಸಂಬಂಧಗಳ ಬಗ್ಗೆ ಆಗಿತ್ತು. ಅದರ ನಡುವೆ ಕೆಲವೊಂದು ವಿಷಯಗಳನ್ನು ನಮಗೆ ತಿಳಿಯಲಿದೆ.
ಒಂದು: ಮಕ್ಕಾದಲ್ಲಿ ಬಾಕಿ ಉಳಿದಿದ್ದ ಜನರ ಬಗ್ಗೆ. ಮಕ್ಕಾದಿಂದ ಮದೀನಕ್ಕೆ ಪಲಾಯನ ಮಾಡಿ ಬಂದವರಲ್ಲಿ, ಬಹುತೇಕ ಕೊನೆಯ ವ್ಯಕ್ತಿ ಪ್ರವಾದಿಯವರೇ ಆಗಿದ್ದರು. ಇನ್ನುಳಿದ ಬೆರಳೆಣಿಕೆಯಷ್ಟು ಜನರು ಕೆಲವೊಂದು ನಿರ್ದಿಷ್ಟ ಕಾರಣಗಳಿಂದ ಹಾಗೂ ಕೆಲವೊಂದು ಜವಾಬ್ದಾರಿ ಕೊಟ್ಟಿರುವ ಕಾರಣ ಬಾಕಿಯಾಗಿದ್ದರು. ಅದರಲ್ಲಿ ಮೊದಲನೇ ವಿಭಾಗದ ಕುರಿತಾಗಿತ್ತು ದುರ್ಬಲರನ್ನು ಬಿಟ್ಟು ಎಂದು ಕುರ್’ಆನ್ ತಿಳಿಸಿದ್ದು, ಎರಡನೇ ವಿಭಾಗದಲ್ಲಿರುವ ವ್ಯಕ್ತಿಯಾಗಿದ್ದರು ಅಬೂಬಕ್ಕರ್’ರ ◌ؓ ಮಗನಾದ ಅಬ್ದುಲ್ಲಾಹ್. ಮಕ್ಕಾದಲ್ಲಿ ನಡೆಯುವ ಎಲ್ಲಾ ಘಟನೆಗಳ ಬಗ್ಗೆ ಸುದ್ದಿ ತಲುಪಿಸಲು ನಿಯೋಗಿಸಿದ್ದ ವ್ಯಕ್ತಿಯಾಗಿದ್ದರು ಅವರು. ಅದೇ ರೀತಿ ಅವರ ಸಹೋದರಿಯನ್ನೂ ಕೂಡ ಮಕ್ಕಾದಲ್ಲಿ ಕೆಲವು ದಿನಗಳ ಕಾಲ ನಿಲ್ಲಲು ಸೂಚನೆ ನೀಡಲಾಗಿತ್ತು. ಒಟ್ಟಾರೆ ಹೇಳುವುದಾದರೆ ಪ್ರವಾದಿಯವರು ﷺ ಮದೀನಕ್ಕೆ ಹೋದ ನಂತರ ಇನ್ನುಳಿದಿದ್ದ ಬೆರಳೆಣಿಕೆಯ ಕುಟುಂಬಗಳಲ್ಲಿ, ಪ್ರಮುಖವಾಗಿ ಇದ್ದದ್ದು ಪ್ರವಾದಿಯವರ ﷺ ಹಾಗೂ ಅಬೂಬಕ್ಕರ್’ರವರು ಮನೆಯವರು ಮಾತ್ರವಾಗಿತ್ತು.
ಪ್ರವಾದಿಯವರ ﷺ ಸಂಬಂಧಿಕರನ್ನು ಕರೆದುಕೊಂಡು ಬರಲು ಎರಡು ಒಂಟೆ ಹಾಗೂ ಐನೂರು ದಿರ್’ಹಮ್ ಕೊಟ್ಟು ಝೈದುಬಿನ್ ಹಾರಿಸ ◌ؓ ಹಾಗೂ ಅಬೂ ರಾಫಿಇ’ರನ್ನು ◌ؓ ಮಕ್ಕಾ ನಗರಕ್ಕೆ ಕಳುಹಿಸಲಾಯಿತು. ಅವರು ಮಕ್ಕಾದಿಂದ, ಪ್ರವಾದಿಯವರ ﷺ ಮಗಳು ಫಾತ್ವಿಮ ◌ؓ, ಉಮ್ಮು ಕುಲ್’ಸು ◌ؓ, ಪ್ರವಾದಿಯವರ ﷺ ಪತ್ನಿ ಸೌದಾ ಬಿಂತ್ ಸಂಅಃ ◌ؓ ಹಾಗೂ ಸಾಕು ತಾಯಿ ಉಮ್ಮು ಐಮನ್’ರನ್ನು ◌ؓ ಕರೆದುಕೊಂಡು ಬಂದರು. ಆದರೆ ಪ್ರವಾದಿಯವರ ﷺ ಇನ್ನೊಂದು ಮಗಳಾದ ಝೈನಬಿಯವರನ್ನು ◌ؓ ಕರೆದುಕೊಂಡು ಬರಲು ಅವರ ಪತಿ ಅನುಮತಿ ನೀಡಲಿಲ್ಲ, ಕಾರಣ ಅಂದು ಅವರು ಇಸ್ಲಾಮ್ ಸ್ವೀಕರಿಸಿರಲಿಲ್ಲ. ಪ್ರವಾದಿಯವರ ﷺ ಮತ್ತೊಂದು ಮಗಳಾದ ರುಖಿಯ್ಯಃ ◌ؓ ಬೀವಿಯವರು ತಮ್ಮ ಪತಿ ಉಸ್ಮಾನ್’ರವರ ◌ؓ ಜೊತೆಯಲ್ಲಿ ಮೊದಲೇ ಮದೀನಕ್ಕೆ ಬಂದು ತಲುಪಿದ್ದರು.
ಪ್ರವಾದಿಯವರ ﷺ ಕುಟುಂಬದ ಜೊತೆಯಲ್ಲಿ, ಝೈದ್’ರ ಪತ್ನಿ, ಮಗ ಉಸ್ಮಾನ್ ಹಾಗೂ ಅಬೂಬಕ್ಕರ್’ರ ◌ؓ ಪತ್ನಿ ಉಮ್ಮುರುಮಾನ್ ◌ؓ, ಮಗಳು ಅಸ್’ಮಾಅ್ ◌ؓ, ಆಯಿಶ ◌ؓ, ಮಗ ಅಬ್ದುಲ್ಲಾಹ್ ಕೂಡ ಮದೀನಕ್ಕೆ ಹೊರಟರು. (ಅಸ್’ಮಾಅ್ ◌ؓ ಅಂದು ತುಂಬು ಗರ್ಭಿಣಿಯಾಗಿದ್ದರು) ಮದೀನಕ್ಕೆ ತಲುಪಿದ ನಂತರ ಪ್ರವಾದಿಯವರ ﷺ ಕುಟುಂಬದ ಸದಸ್ಯರು ಹಾರಿಸತ್ ಬಿನ್ ನುಅಮಾನ್’ರ ಮನೆಯಲ್ಲಿ ಹಾಗೂ ಅಬೂಬಕ್ಕರ್’ರ ◌ؓ ಮನೆಯವರು ಬನುಲ್ ಹಾರಿಸ್ ಇಬ್’ನುಲ್ ಖಸ್’ರಜ್’ರ ಮನೆಯಲ್ಲಿ ಉಳಿದುಕೊಂಡರು.
ಎರಡು: ಅಸ್’ಮಾಅ್’ರ ◌ؓ ಹೆರಿಗೆ, ತುಂಬು ಗರ್ಭಿಣಿಯಾಗಿದ್ದ ಅಸ್’ಮಾಅ್’ರು ◌ؓ ಮದೀನದ ಖುಬಾಗೆ ತಲುಪಿದಾಗ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಸೌರ್ ಗುಹೆಗೆ ಆಹಾರ ತಲುಪಿಸಿದ್ದು, ಅದರ ನಂತರದ ಮದೀನಾದ ಪಲಾಯನ ಎಲ್ಲವೂ ಅವರನ್ನು ಬಹಳಷ್ಟು ಆಯಾಸಗೊಳಿಸಿತ್ತು. ಪಲಾಯನದ ನಂತರ ಮುಹಾಜಿರ್’ಗಳಲ್ಲಿ ಮೊದಲು ಜನಿಸಿದ ಮಗು ಎಂಬ ಹೆಗ್ಗಳಿಕೆ ಅಬ್ದುಲ್ಲಾಹಿಬಿನ್ ಝುಬೈರ್ ಎಂಬ ಮಗುವಿಗಾಗಿತ್ತು. ಅನ್ಸಾರ್’ಗಳಲ್ಲಿ ಪಲಾಯನದ ನಂತರ ಮೊದಲು ಜನಿಸಿದ ಮಗು ನುಅಮಾನ್ ಬಿನ್ ಬಷೀರ್ ಎಂಬ ಮಗುವಾಗಿತ್ತು.
ಅಸ್’ಮಾಅ್’ರು ◌ؓ ತಮ್ಮ ನವಜಾತ ಶಿಶುವನ್ನು ಪ್ರವಾದಿಯವರ ﷺ ಬಳಿ ತಂದು ಅವರ ಕೈಗೆ ಕೊಟ್ಟರು. ಪ್ರವಾದಿಯವರು ﷺ ಆ ಮಗುವನ್ನು ತನ್ನ ಮಡಿಲಿನಲ್ಲಿ ಮಲಗಿಸಿ, ಖರ್ಜೂರವನ್ನು ಅಗಿದು ಅದರ ರಸವನ್ನು ಮಗುವಿನ ಬಾಯಿಗೆ ಹಾಕಿದರು. ಹೀಗೆ ಅಬ್ದುಲ್ಲಾಹಿಯವರ ಹೊಟ್ಟೆಗೆ ಮೊದಲು ತಲುಪಿದ್ದು ಪ್ರವಾದಿಯವರ ﷺ ಬಾಯಿಂದ ತೆಗೆದ ಪವಿತ್ರ ರಸವಾಗಿತ್ತು. ಅದರ ಜೊತೆಯಲ್ಲಿ ಪ್ರವಾದಿಯವರು ﷺ ಆ ಮಗುವಿಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಿ, ಆಶೀರ್ವಾದಿಸಿ ಅಬ್ದುಲ್ಲಾಹ್ ಎಂಬ ಎಂಬ ಹೆಸರನ್ನೂ ಇಟ್ಟರು.
ಯಹೂದಿಗಳು ಮುಸ್ಲಿಮರ ವಿರುದ್ಧವಾಗಿ ವಾಮಾಚಾರ ಮಾಡಿರುವ ಕಾರಣ ಮುಸ್ಲಿಮರಿಗೆ ಗಂಡು ಮಕ್ಕಳಾಗುವುದಿಲ್ಲ ಎಂಬ ನಂಬಿಕೆಯೂ ಅಲ್ಲಿ ಪ್ರಚಾರದಲ್ಲಿತ್ತು. ಆದರೆ ಅಬ್ದುಲ್ಲಾಹ್’ರ ಜನನದಿಂದ ಆ ಮಾತು ಸುಳ್ಳು ಎಂದು ಸಾಬೀತಾಯಿತು, ಹಾಗಾಗಿ ಅಬ್ದುಲ್ಲಾಹ್’ರ ಜನನವನ್ನು ತಿಳಿದ ಮದೀನಾ ನಿವಾಸಿಗಳೆಲ್ಲರೂ ಸಂತೋಷದಿಂದ ತಕ್’ಬೀರ್ ಮೊಳಗಿಸುತ್ತಾ ಆನಂದಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-172/365
ಮೂರು: ಬರಾಅ್ ಬಿನ್ ಮಅರೂರ ಮರಣ. ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ ಬರಾಅ್ ಬಿನ್ ಮಅರೂರ್’ರ ಕೇಳಿದಾಗ, ಅವರೆಲ್ಲರೂ, ಬರಾಅ ಮರಣ ಹೊಂದಿರುವ ವಿಷಯವನ್ನು ಪ್ರವಾದಿಯವರಲ್ಲಿ ﷺ ತಿಳಿಸಿ, ಅವರು ತಮ್ಮ ಸಂಪತ್ತಿನ ಮೂರನೇ ಒಂದು ಭಾಗವನ್ನು ತಮಗಾಗಿ ನೀಡಲು ಸೂಚನೆ ನೀಡಿದ್ದಾರೆ, ಎಂದು ಹೇಳಿದರು. ಸಮಕಾಲೀನ ವಿದ್ವಾಂಸರು ಹೇಳುವುದು ಕಾಣಬಹುದು, ಪ್ರವಾದಿಯವರು ﷺ ಮದೀನಕ್ಕೆ ತಲುಪುದಕ್ಕಿಂತ ಒಂದು ತಿಂಗಳ ಮೊದಲೇ ಅವರು ಮರಣ ಹೊಂದಿದ್ದರು. ಅವರು ತಮ್ಮ ಕೊನೆಯ ಸಮಯದಲ್ಲಿ, ತಮ್ಮನ್ನು ಖಿಬ್’ಲದ ಕಡೆಗೆ ನೇರವಾಗಿ ಮಲಗಿಸಲು ವಿನಂತಿಸಿದ್ದರು. ಮರಣದ ಕೊನೆಯ ಸಂದರ್ಭದಲ್ಲಿ, ಖಿಬ್’ಲದ ಕಡೆಗೆ ನೇರವಾಗಿ ಜನರನ್ನು ಮಲಗಿಸುವುದು, ಪುಣ್ಯ ಕರ್ಮವಾಗಿ ಕಾಣುವುದಕ್ಕೆ ಇರುವ ಒಂದೇ ಒಂದು ಪುರಾವೆಯೆಂದರೆ ಈ ಘಟನೆ ಮಾತ್ರವಾಗಿದೆ.
ಬರಾಅರ ವಿನಂತಿಯನ್ನು ಕೇಳಿದ ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ, ಅವರ ಮನುಷ್ಯ ಸ್ವಭಾವದ ಒಳಿತಿನ ಚಿಂತನೆ (ಫಿತ್ವ್’ರ) ಸತ್ಯವಾಗಿದೆ. ತಮ್ಮ ಕೊನೆಯ ಸಮಯದಲ್ಲಿ ಖಿಬ್’ಲದ ಕಡೆಗೆ ನೇರವಾಗಿ ಮಲಗಿಸಬೇಕು ಎಂಬ ಚಿಂತನೆ ಬಂದದ್ದೇ ಅವರ ಫಿತ್ವ್’ರಾದ ಕಾರಣದಿಂದಾಗಿತ್ತು ಎಂದು ಹೇಳಿದರು. ಅವರು ಪ್ರವಾದಿಯವರಿಗೆ ﷺ ನೀಡಲು ಸೂಚನೆ ನೀಡಿದ್ದ ಸಂಪತ್ತನ್ನು, ಪ್ರವಾದಿಯವರು ﷺ ಪುನಃ ಅವರ ಮಕ್ಕಳಿಗೆ ವಾಪಾಸು ತಿರುಗಿ ಕೊಟ್ಟರು. ನಂತರ ನೇರವಾಗಿ ಅವರ ಖಬರಿನ (ಸಮಾಧಿ) ಬಳಿ ಬಂದು, ಅವರ ಮೇಲೆ ಮಯ್ಯತ್ ನಮಾಝ್ ಮಾಡಿದ ನಂತರ, ಅವರಿಗಾಗಿ ಪ್ರವಾದಿಯವರು ﷺ ಅಲ್ಲಾಹನಲ್ಲಿ, ನೀನು ಇವರ ಎಲ್ಲಾ ಪಾಪಗಳಿಗೂ ವಿಮೋಚನೆ ನೀಡಿ, ನಿನ್ನ ಕರುಣೆಯನ್ನು ಅನುಗ್ರಹಿಸಿ ಕೊಡು, ನಿನ್ನ ಸ್ವರ್ಗಕ್ಕೆ ಪ್ರವೇಶಿಸಲು ಅವರಿಗೆ ಅನುಮತಿ ಕೊಡು. ಅಥವಾ ಅದನ್ನು ನೀನು ಈಗಾಗಲೇ ನೀಡಿ ಆಯಿತು ಅಲ್ಲವೇ.? (ಅದರರ್ಥ ಅವರು ಈಗಾಗಲೇ ಸ್ವರ್ಗಕ್ಕೆ ಪ್ರವೇಶ ಮಾಡಿ ಆಯಿತು ಎಂದಾಗಿದೆ) ಎಂದು ಪ್ರಾರ್ಥಿಸಿದರು.
ಎರಡನೇ ಅಖಬ ಒಪ್ಪಂದದಲ್ಲಿ ಭಾಗವಹಿಸಿದ ಎಪ್ಪತ್ತು ಜನರಲ್ಲಿ ಮೊದಲು ಪ್ರವಾದಿಯವರ ﷺ ಕೈ ಹಿಡಿದು ಒಪ್ಪಂದ ಮಾಡಿದ ವ್ಯಕ್ತಿಯಾಗಿದ್ದರು ಅವರು. ಇತರ ಜನಾಂಗಗಳ ನಡುವೆ ಇಸ್ಲಾಮನ್ನು ಪ್ರಚಾರ ಮಾಡಲು ಜವಾಬ್ದಾರಿ ವಹಿಸಿದ್ದ ಹನ್ನೆರಡು ﷺ ನುಖಬಾಗಳಲ್ಲಿ ಒಬ್ಬರಾಗಿದ್ದರು ಅವರು.
ಪ್ರವಾದಿಯವರು ﷺ ಹಾಗೂ ಅವರ ಇತರ ಅನುಚರರೆಲ್ಲರೂ (ಸ್ವಹಾಬಗಳು) ಬೈತುಲ್ ಮುಖದ್ದಸಿನ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡುತ್ತಿದ್ದಾಗಲೂ, ಇವರು ಮಾತ್ರ ಕಅಬಾದ ಕಡೆಗೆ ಆಗಿತ್ತು ತಿರುಗಿ ನಿಂತು ನಮಾಝ್ ಮಾಡುತ್ತಿದ್ದದ್ದು. ಅದೂ ಕೂಡ ಅವರ ಸ್ವಇಚ್ಛೆಯಿಂದಲೇ ಆಗಿತ್ತು. ಹಾಗಾಗಿ ಅವರನ್ನು, “ತನ್ನ ಜೀವನ ಕಾಲದಲ್ಲೂ, ಮರಣದ ನಂತರವೂ ಖಿಬ್’ಲದ ಕಡೆಗೆ ತಿರುಗಿದ ವ್ಯಕ್ತಿ ಎಂಬ ಹೆಸರಿನಿಂದ ಕರೆಯಲಾಯಿತು.
ಪ್ರವಾದಿಯವರ ﷺ ಮಗಳಾದ ಝೈನಬ್’ರ ◌ؓ ಕಥೆಯನ್ನು ಈ ಅಧ್ಯಾಯದಲ್ಲಿ ಮರೆಯುವಂತಿಲ್ಲ, ಪ್ರವಾದಿತ್ವದ ಘೋಷಣೆಗೂ ಮೊದಲೇ ಝೈನಬ್’ರಿಗೆ ◌ؓ ಸೋದರ ಸಂಬಂಧಿಯಾದ ಅಬುಲ್ ಆಸ್ವ್’ರ ಜೊತೆಯಲ್ಲಿ ವಿವಾಹವಾಗಿತ್ತು. ಪ್ರವಾದಿಯವರ ﷺ ಮೊದಲ ಮೊಮ್ಮಗು ಕೂಡ, ಝೈನಬ್’ರ ◌ؓ ಮಗಳಾದ ಉಮಾಮರಾಗಿದ್ದರು. ಅಬುಲ್ ಆಸ್ವ್ ಹಾಗೂ ಝೈನಬ್’ರ ◌ؓ ದಾಂಪತ್ಯ ಜೀವನವು ಸಂತೋಷದಿಂದ ಕಳೆಯುತ್ತಿದ್ದ ಸಂದರ್ಭದಲ್ಲಾಗಿತ್ತು ಪ್ರವಾದಿತ್ವದ ಘೋಷಣೆಯಾದದ್ದು. ಆ ಸಂದರ್ಭದಲ್ಲಿ ಅಬುಲ್ ಆಸ್ವ್ ಊರಿನಲ್ಲಿ ಇರಲಿಲ್ಲ, ಆದರೆ ಝೈನಬ್’ರು ◌ؓ ಪ್ರವಾದಿತ್ವದ ಘೋಷಣೆಯಾದ ಬೆನ್ನಲ್ಲೇ ಇಸ್ಲಾಮ್ ಸ್ವೀಕರಿಸಿದರು. ಊರಿಗೆ ತಿರುಗಿ ಬಂದ ನಂತರವಾಗಿತ್ತು ಪತಿ ಅಬುಲ್ ಆಸ್ವ್, ತನ್ನ ಪತ್ನಿ ಝೈನಬ್ ◌ؓ ಇಸ್ಲಾಮ್ ಸ್ವೀಕರಿಸಿದ ವಿಷಯವು ತಿಳಿಯುವುದು. ಬಹುಶಃ ಪತಿಯಾದ ನನ್ನಲ್ಲಿ ಒಂದೇ ಒಂದು ಮಾತು ಕೇಳದೆ ಯಾಕೆ ಇಸ್ಲಾಮ್ ಸ್ವೀಕರಿಸಿದ್ದು ಎಂದು ಕೇಳಿರುತ್ತಿದ್ದರೆ ? ಅದಕ್ಕೆ ಝೈನಬ್’ರಲ್ಲಿ ◌ؓ ನೀಡಲು ಸರಿಯಾದ ಕಾರಣವಿತ್ತು. ಮೊದಲನೇದು ಸ್ವಂತ ತಂದೆಯಾಗಿತ್ತು ಪ್ರವಾದಿತ್ವದ ಘೋಷಣೆ ಮಾಡಿದ್ದು, ಅಷ್ಟೇ ಅಲ್ಲ ಅವರ ಸತ್ಯನಿಷ್ಠೆ, ನ್ಯಾಯ ಪ್ರಜ್ಞೆ, ಪರಿಶುದ್ಧವಾದ ಜೀವನ, ಮುಂತಾದ ಎಲ್ಲಾ ಒಳ್ಳೆಯ ಸ್ವಭಾವದಲ್ಲೂ ಮೊದಲನೇ ಸ್ಥಾನದಲ್ಲಿ ನಿಲ್ಲುವುದು ತನ್ನ ತಂದೆಯಾಗಿದ್ದರು. ಅಷ್ಟೇ ಅಲ್ಲ ತನ್ನ ತಂದೆಯ ಜೊತೆಯಲ್ಲೇ ಇರುತ್ತಿದ್ದ, ಮಕ್ಕಾದ ಗಣ್ಯ ವ್ಯಕ್ತಿಯಾಗಿದ್ದ ಅಬೂಬಕ್ಕರ್’ರು ◌ؓ ಕೂಡ ಇಸ್ಲಾಮ್ ಸ್ವೀಕರಿಸಿದ್ದರು. ಇಷ್ಟೆಲ್ಲಾ ಮಹತ್ವವಿರುವಾಗ ಜಗದೊಡೆಯನಾದ ಅಲ್ಲಾಹನನ್ನು ಒಪ್ಪಿಕೊಳ್ಳಲು ಇನ್ನೂ ಯಾರಿಗಾಗಿ ಕಾಯಬೇಕಿತ್ತು.?
ಆದರೆ ಅಬುಲ್ ಆಸ್ವ್ ಪ್ರವಾದಿಯವರನ್ನು ﷺ ಅಂಗೀಕರಿಸಿರಲಿಲ್ಲ, ಹಾಗಂತ ಪ್ರೀತಿಯ ಮಡದಿಯಲ್ಲಿ ಕೋಪವೂ ಮಾಡಿರಲಿಲ್ಲ. ಯಾವುದೇ ಜಗಳಗಳಿಲ್ಲದೆ ಜೀವಿಸುತ್ತಿದ್ದ ಆದರ್ಶ ದಂಪತಿಗಳಾಗಿದ್ದರು ಅವರು. ಆದರೆ ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುವ ತಮ್ಮ ವಿಶ್ವಾಸವನ್ನು ಬಿಟ್ಟು ಹೊಸ ವಿಶ್ವಾಸವನ್ನು ಅಂಗೀಕರಿಸಲು ಅವರ ಮನಸ್ಸು ಯಾಕೋ ಒಪ್ಪಿರಲಿಲ್ಲ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-173/365
ಹೀಗಿರುವಾಗ ಬದ್’ರ್ ಯುದ್ಧವು ನಡೆಯಿತು. ಮುಸ್ಲಿಮರು ಈ ಯುದ್ಧದಲ್ಲಿ ಜಯ ಸಾಧಿಸಿದ್ದರು. ವಿರೋಧಿಗಳ ಬಣದಿಂದ ಯುದ್ಧ ಖೈದಿಯಾಗಿ ಅಬುಲ್ ಆಸ್ವ್’ರನ್ನು ಸೆರೆ ಹಿಡಿಯಲಾಯಿತು. ಇದನ್ನರಿತ ಝೈನಬ್ ◌ؓ ತನ್ನ ಪತಿಯನ್ನು ಬಿಡಿಸಲು ತಾಯಿ ಖದೀಜರಿಂದ ◌ؓ ಸಿಕ್ಕಿದ್ದ ಮಾಲೆಯನ್ನು ಪ್ರವಾದಿಯವರ ﷺ ಬಳಿ ಕೊಟ್ಟು ಕಳುಹಿಸಿದರು. ಅದನ್ನು ಕಂಡ ಕೂಡಲೇ ಪ್ರವಾದಿಯವರು ﷺ ಒಂದು ಕ್ಷಣ ಸ್ತಬ್ಧರಾದರು, ಅವರಿಗೆ ಬೀವಿಯವರ ನೆನಪುಗಳು ಬಹಳಷ್ಟು ಕಾಡತೊಡಗಿದವು. ನಂತರ ತಮ್ಮ ಅನುಚರರಲ್ಲಿ ಇದರ ಬಗ್ಗೆ ಚರ್ಚೆ ನಡೆಸಿ, ಅವರ ಸಮ್ಮತಿಯ ಪ್ರಕಾರ ಅವರನ್ನು ಬಿಡುಗಡೆ ಮಾಡಿ ಕಳುಹಿಸಲಾಯಿತು.
ಅದೇ ರೀತಿ ಝೈನಬ್’ರನ್ನು ◌ؓ ಮದೀನಕ್ಕೆ ಕಳುಹಿಸಬೇಕೆಂಬ ಪತ್ರವನ್ನೂ ಪ್ರವಾದಿಯವರು ﷺ ಬರೆದು ಕಳುಹಿಸಿದರು. ಮಕ್ಕಾದಿಂದ ಎಂಟು ಮೈಲಿ ದೂರದಲ್ಲಿರುವ ಯಅಜಜ್ ಕಣಿವೆಯ ಬಳಿ, ಝೈದ್ ಬಿನ್ ಹಾರಿಸ್ ಹಾಗೂ ಅನ್ಸಾರಿಯಾದ ಇನ್ನೊಬ್ಬರ ಸ್ವಹಾಬಿಗಳ ಜೊತೆಯಲ್ಲಿ ಝೈನಬ್’ರನ್ನು ◌ؓ ಕಳುಹಿಸಿ ಕೊಡಬೇಕೆಂದು ಆ ಪತ್ರದಲ್ಲಿ ಪ್ರವಾದಿಯವರು ﷺ ಬರೆದಿದ್ದರು. ಅದನ್ನು ಓದಿದ ಅಬುಲ್ ಆಸ್ವ್ ಅದಕ್ಕೆ ಸಮ್ಮತಿ ನೀಡಿದರು, ಝೈನಬ್ ◌ؓ ಮದೀನಕ್ಕೆ ಹೊರಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ಉತ್’ಬರ ಮಗಳಾದ ಹಿಂದ್ ಬಂದು, ಝೈನಬ್’ರಲ್ಲಿ ◌ؓ ತಂದೆಯ ಬಳಿ ಹೋಗಲು ಬಹಳಷ್ಟು ತಯಾರಿ ನಡೆಯುತ್ತಿರುವ ಹಾಗಿದೆ.? ಎಂದು ಹೇಳುತ್ತಾ, ಗಂಡಸರ ನಡುವೆ ಬಹಳಷ್ಟು ವಿಷಯಗಳು ಇರುತ್ತದೆ ಅದೆಲ್ಲವೂ ಮಹಿಳೆಯರಿಗೆ ಅನ್ವಹಿಸಬೇಕೆಂದಿಲ್ಲ ಎಂದು ಹೇಳಿದರು. ಆದರೆ ಝೈನಬ್ ◌ؓ ಅದಕ್ಕೆ ಯಾವುದೇ ರೀತಿಯ ಉತ್ತರವನ್ನು ನೀಡಲು ಹೋಗಲಿಲ್ಲ. ತನ್ನ ಪತಿಯೊಂದಿಗಿರುವ ಪ್ರೀತಿ, ಬಿಟ್ಟು ಹೋಗಬೇಕೆಂಬ ನೋವು ಒಂದು ಕಡೆಯಲ್ಲಾದರೆ, ಜೀವಕ್ಕಿಂತ ಅಧಿಕವಾಗಿ ಪ್ರೀತಿಸುವ ತಂದೆಯ ಆದರ್ಶ, ಅದರ ಜೊತೆಯಲ್ಲಿ ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗು, ದೊಡ್ಡ ಮಗನಾದ ಅಲಿ, ಇದೆಲ್ಲದರ ನಡುವೆ ಗೊಂದಲದಲ್ಲಿ ಸಿಲುಕಿರುವ ಝೈನಬ್’ರು ◌ؓ ಅವುಗಳನ್ನು ಆಲೋಚಿಸುತ್ತಾ ಬಹಳಷ್ಟು ನೋವು ಪಟ್ಟರು.
ಇದೆಲ್ಲಾ ಆಲೋಚನೆಗಳ ನಡುವೆ ಝೈನಬ್ ◌ؓ ಯಾತ್ರೆ ಹೊರಡಲು ಸಿದ್ಧವಾದರು. ಅಬುಲ್ ಆಸ್ವ್’ಗೆ ನೇರವಾಗಿ ಝೈನಬ್’ರನ್ನು ◌ؓ ಕಳುಹಿಸಲು ಮನಸ್ಸು ಒಪ್ಪದ ಕಾರಣ ತನ್ನ ಸಹೋದರ ಕಿನಾನರನ್ನು ಕರೆದು, ಝೈನಬ್’ರನ್ನು ◌ؓ ಬಿಟ್ಟು ಬರಲು ಹೇಳಿದರು. ಅವರು ತಮ್ಮ ಧನಸ್ಸನ್ನು ತೆಗೆದು, ಬತ್ತಳಿಕೆಯಲ್ಲಿ ಬಾಣವನ್ನು ತುಂಬಿಸಿ, ಹಗಲು ಹೊತ್ತಲ್ಲೇ ಕರೆದುಕೊಂಡು ಹೋಗಲು ಮುಂದಾದರು. ಅದು ಖುರೈಷಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಕತ್ತಿಗಿಂತ ಹರಿತವಾಗಿ ಬಂದ ಹಿಂದ್’ರ ಕವಿತೆ ಖುರೈಷಿ ಯೋಧರನ್ನು ಕೆರಳಿಸಿತು.
“ಯುದ್ಧ ಇಲ್ಲದ ಸಂದರ್ಭದಲ್ಲಿ ಟೊಂಕ ಕಟ್ಟಿ ಓಡುವವರೇ, ರಣರಂಗದಲ್ಲಿ ಯಾಕೆ ನೀವು ಮಹಿಳೆಯರ ಹಾಗೆ ಆದದ್ದು.?
ಬದ್’ರ್ ರಣರಂಗದಲ್ಲಿ ನಿಮ್ಮ ಶೌರ್ಯವೆಲ್ಲವೂ ಎಲ್ಲಿಗೆ ಹೋಯಿತು..? ಎಂದಾಗಿತ್ತು ಆ ಕವಿತೆಯ ಸಾರ. ಅದು ಅವರನ್ನು ಬಹಳಷ್ಟು ಮುಜುಗರ ಗೊಳಿಸಿತು. ಅದರ ಜೊತೆಯಲ್ಲಿ ಯಾವುದೇ ಭಯವಿಲ್ಲದೆ ಪ್ರವಾದಿಯವರ ﷺ ಮಗಳು, ಅವರ ಕಣ್ಣೆದುರಿನಿಂದ ಪಲಾಯನ ಮಾಡಿ ಹೋಗುವುದು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವರು ಅವರನ್ನು ಹಿಂಬಾಲಿಸಿ ಹೋದರು. “ದುತ್ವುವ” ಎಂಬ ಊರಿಗೆ ತಲುಪಿದಾಗ, ‘ಗುಬಾರ್ ಬಿನ್ ಅಸ್’ವದ್’ ಎಂಬ ವ್ಯಕ್ತಿಯು ಕಿನಾನರ ಬಳಿ ತಲುಪಿ, ಅವರಲ್ಲಿ ವಾದಕ್ಕೆ ಇಳಿದರು. ದೃಶ್ಯವು ಅಲ್ಪ ತೀವ್ರತೆಗೆ ತಿರುಗಿದಾಗ, ಝೈನಬ್’ರು ◌ؓ ಕಿನಾನರ ಮತ್ತೊಂದು ಭಾಗದಲ್ಲಿ ಸರಿದು ನಿಂತರು. ಈ ಎಲ್ಲಾ ದೃಶ್ಯವನ್ನು ದೂರದಲ್ಲಿ ನಿಂತು ನೋಡುತ್ತಿದ್ದ, ಅಬೂಸೂಫಿಯಾನ್ ಕಿನಾನರ ಬಳಿ ಬಂದು ಇದೇನು ಮಾಡುತ್ತಿದ್ದೀಯ ಕಿನಾನ.? ನಾವು ಖುರೈಷಿಗಳು ಕೇಳಿದ ಚುಚ್ಚುಮಾತುಗಳೆಲ್ಲವೂ ನಿನಗೆ ಗೊತ್ತಿದೆ ತಾನೇ.? ಈಗ ನೀನು ಸಾರ್ವಜನಿಕವಾಗಿ ಇವರನ್ನು ಕರೆದುಕೊಂಡು ಹೋದರೆ ಜನರಿಗೆ ಇನ್ನಷ್ಟು ಕೋಪ ಬರುತ್ತದೆ ಅಲ್ಲವೇ.? ತಂದೆಯ ಮೇಲಿನ ಕೋಪದಿಂದ ಮಗಳನ್ನು ತಡೆಯುವುದರಿಂದ ಯಾವುದೇ ಲಾಭವೂ ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸದ್ಯಕ್ಕೆ ಪರಿಸ್ಥಿತಿ ಶಾಂತಾವಾದ ಮೇಲೆ ಇಲ್ಲಿಂದ ರಹಸ್ಯವಾಗಿ ಹೊರಟು ಹೋಗಿ ಎಂದು ಹೇಳಿದರು. ಆದರೆ ಕಿನಾನರಿಗೆ ಈ ಮಾತು ಅಷ್ಟೊಂದು ಇಷ್ಟವಾಗಲಿಲ್ಲ, ಅದರ ನಡುವೆ ತುಂಬು ಗರ್ಭಿಣಿಯಾಗಿದ್ದ ಝೈನಬ್’ರು ◌ؓ ಬಹಳಷ್ಟು ಆಯಾಸಗೊಂಡಿದ್ದ ಕಾರಣ ಅವರಿಗೆ ಹೆರಿಗೆ ನೋವು ಕೂಡ ಕಾಣಿಸಿತು. ಅದೇ ಸುಡುಬಿಸಿಲಿನ ಮರುಭೂಮಿಯಲ್ಲೇ ಅವರ ಹೆರಿಗೆಯೂ ಕೂಡ ನಡೆಯಿತು. ಇನ್ನು ಯಾವುದೇ ಕಾರಣಕ್ಕೂ ಹಿಂತಿರುಗಿ ಹೋಗದೆ ಯಾವುದೇ ದಾರಿ ಇರದ ಕಾರಣ, ಸ್ವಲ್ಪ ಆರೋಗ್ಯದಲ್ಲಿ ಸುಧಾರಣೆಯಾದ ನಂತರ ಇನ್ನೊಮ್ಮೆ ಹೋದರೆ ಆಯಿತು ಎಂದು, ಅವರು ಪುನಃ ಮನೆಗೆ ವಾಪಸ್ಸು ಹಿಂತಿರುಗಿ ಬಂದರು. ಕೆಲವು ದಿನದ ಬಳಿಕ, ಝೈನಬ್ ◌ؓ ಪುನಃ ಮದೀನಕ್ಕೆ ತೆರಳಲು ಮುಂದಾಗಿ, ಅವರನ್ನು ಕರೆದುಕೊಂಡು ಹೋಗಲು ಬಂದ ಝೈದ್ ಬಿನ್ ಹಾರಿಸರ ◌ؓ ಜೊತೆಯಲ್ಲಿ ಹೊರಟು ಮದೀನಕ್ಕೆ ಬಂದು ತಲುಪಿದರು. ಯಾವುದೇ ಅಡಚಣೆ ಇಲ್ಲದೆ ಕ್ಷೇಮವಾಗಿ ಮದೀನಕ್ಕೆ ತಲುಪಿದ್ದು ಪ್ರವಾದಿಯವರು ﷺ ಹಾಗೂ ಇತರ ಕುಟುಂಬದ ಸದಸ್ಯರಿಗೆ ಬಹಳಷ್ಟು ಸಮಾಧಾನ ತಂದಿತ್ತು.
ಇನ್ನು ಬದಲಾವಣೆ ಹಾಗೂ ನಿರ್ಮಾಣದ ಶುಭ ದಿನಗಳೆಡೆಗೆ ನಮ್ಮ ಅಧ್ಯಯನವು ಮುಂದೆ ಸಾಗಲಿದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-174/365
ಅಬೂ ಅಯ್ಯೂಬುಲ್ ಅನ್ಸಾರಿಯವರ ◌ؓ ಮನೆಯಲ್ಲಿ ಉಳಿದುಕೊಂಡಿದ್ದ ಪ್ರವಾದಿಯವರು ﷺ, ಒಂದು ಆಸ್ಥಾನ ಅಥವಾ ಮಸ್ಜಿದ್’ನ ನಿರ್ಮಾಣದ ಬಗ್ಗೆ ಬಹಳಷ್ಟು ಆಲೋಚಿಸುತ್ತಿದ್ದರು.
ಪ್ರವಾದಿಯವರ ﷺ ಒಂಟೆ ಮಂಡಿಯೂರಿದ ಸ್ಥಳವು, ಸಹಲ್ ಹಾಗೂ ಸುಹೈಲ್ ಎಂಬ ಎರಡು ಅನಾಥ ಮಕ್ಕಳ ಸ್ಥಳವಾಗಿತ್ತು. ಅದನ್ನು ಅವರು ಖರ್ಜೂರವನ್ನು ಒಣಗಿಸಲು ಹಾಗೂ ಇತರ ಉಪಯೋಗಗಳಿಗೆ ಬಳಸುತ್ತಿದ್ದರು. ಇವರಿಬ್ಬರೂ ಪ್ರವಾದಿಯವರ ﷺ ಚಿಕ್ಕಪರ ಕುಟುಂಬವಾದ ಬನೂ ನಜ್ಜಾರ್ ವಂಶಸ್ಥರಾಗಿದ್ದರು, ಅವರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಪ್ರವಾದಿಯವರ ﷺ ಅನುಚರನಾಗಿದ್ದ ಅಸ್’ಅದ್ ಬಿನ್ ಸುರಾರರಾಗಿತ್ತು. ◌ؓ ಆ ಸ್ಥಳವನ್ನು ಉಚಿತವಾಗಿ ನೀಡುವುದಾಗಿ ಅವರು ಹೇಳಿದ್ದರೂ, ಪ್ರವಾದಿಯವರು ﷺ ಆ ಸ್ಥಳಕ್ಕೆ ಹತ್ತು ದಿನಾರ್ ಬೆಲೆ ನಿರ್ಣಯಿಸಿ, ನಂತರ ಅದರ ಬೆಲೆಯನ್ನು ಅಬೂಬಕ್ಕರ್’ರು ◌ؓ ಕೊಟ್ಟು ಮಸ್ಜಿದ್’ಗಾಗಿ ಆ ಸ್ಥಳವನ್ನು ಖರೀದಿಸಿದರು.
ನಂತರ ಪ್ರವಾದಿಯವರ ﷺ ನಾಯಕತ್ವದಿಂದ ಆ ಮಸ್ಜಿದಿನ ನಿರ್ಮಾಣವನ್ನು ಅನ್ಸಾರ್’ಗಳು ಹಾಗೂ ಮಹಾಜಿರ್’ಗಳು ನಡೆಸಲು ಆರಂಭಿಸಿದರು. ಪ್ರವಾದಿಯವರು ﷺ ಕೂಡ ಅವರ ಜೊತೆಯಲ್ಲಿ ಸೇರಿ ಇಟ್ಟಿಗೆಯನ್ನು ಎತ್ತಿಕೊಡುತ್ತಿದ್ದರು. ತಮ್ಮ ಅನುಚರರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ, “ಪರಲೋಕದ ಒಳಿತಲ್ಲದೆ ಇನ್ಯಾವುದೇ ಒಳಿತು ಬಾಕಿಯಾಗುವುದಿಲ್ಲ” ಎಂದು ಹೇಳುತ್ತಾ, ಅಲ್ಲಾಹನೇ ಅನ್ಸಾರ್’ಗಳು ಹಾಗೂ ಮೂಹಾಜಿರ್’ಗಳಿಗೆ ನಿನ್ನ ಕರುಣೆಯನ್ನು ವರ್ಷಿಸು ಎಂದು ಪ್ರಾರ್ಥಿಸಿದರು. ಪ್ರವಾದಿಯವರ ﷺ ಈ ಪ್ರಾರ್ಥನೆಯನ್ನು ಉಳಿದವರೆಲ್ಲರೂ ಕವಿತೆಯ ರೂಪದಲ್ಲಿ “ಅಲ್ಲಾಹುಮ್ಮ ಇನ್ನಲ್ ಅಜ್’ರ ಅಜ್’ರಲ್ ಆಖಿರಃ
ಫ ಅಯ್ಯಿದಿಲ್ ಅನ್’ಸ್ವಾರಃ ವಲ್ ಮುಹಾಜಿರ” ಹಾಡಲು ಆರಂಭಿಸಿದರು. ಈ ಕವಿತೆಯನ್ನು
ಅಬ್ದುಲ್ಲಾಹಿಬಿನ್ ರವಾಹರು ಬಹಳ ಇಂಪಾಗಿ ಹಾಡಿ ಹುರಿದುಂಬಿಸುತ್ತಿದ್ದರು.
ಪ್ರವಾದಿಯವರು ﷺ ಕೂಡ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿದ್ದನ್ನು ಕಂಡು, ಬಾಕಿ ಉಳಿದಿದ್ದ ಜನರು “ಲಾ ಇನ್ ಖಅದ್’ನಾ ವನ್ನಬಿಯ್ಯು ಯಅಮಲು” (ಪುಣ್ಯ ಪ್ರವಾದಿಯವರು ﷺ ಕೂಡ ಕೆಲಸ ಮಾಡುತ್ತಿರುವಾಗ ನಾವು ದೂರ ನಿಂತು ನೋಡುವುದು ಎಂತಹ ನಷ್ಟ ಅಲ್ಲವೇ) ಎಂದು ಹಾಡಿ ಉಳಿದವರು ಕೂಡ ಅವರ ಜೊತೆಯಲ್ಲಿ ಸೇರಿ ಸಹಾಯ ಮಾಡಲು ಆರಂಭಿಸಿದರು.
ಖರ್ಜೂರದ ಮರಗಳಿಂದ ನಿರ್ಮಿಸಿದ ಕಂಬವನ್ನು ನೆಟ್ಟು, ಇಟ್ಟಿಗೆಯಿಂದ ಗೋಡೆಯನ್ನು ಕಟ್ಟಿದರು. ಖರ್ಜೂರದ ಎಲೆಯನ್ನು ಹೆಣೆದು ಮೇಲ್ಚಾವಣಿಯನ್ನು ನಿರ್ಮಿಸಿ, ಅದರಲ್ಲಿ ಸ್ವಲ್ಪ ಭಾಗವನ್ನು ಹಾಗೆ ತೆರೆದು ಇಟ್ಟರು. ಅನಸ್’ರವರು ◌ؓ ಹೇಳುವುದು ಕಾಣಬಹುದು, ಬೈತುಲ್ ಮುಖದ್ದಸಿನ ಭಾಗಕ್ಕೆ ಖಿಬ್’ಲವನ್ನಾಗಿ ಮಾಡಿ, ಮೇಲ್ಚಾವಣಿ ಇಲ್ಲದ ಗೋಡೆಯನ್ನು ಮೊದಲು ನಿರ್ಮಿಸಲಾಗಿತ್ತು, ನೆಲದ ಮೇಲಿದ್ದ ನೀರನ್ನು ಸ್ವಚ್ಛಗೊಳಿಸಲು ನಮ್ಮೆಲ್ಲರಿಗೂ ಹೇಳಿದರು, ಅದೇ ರೀತಿ ಆರ್ಕಿಡ್, ಬಖೀಅ್ ಮರಗಳೇ ತುಂಬಿರುವ ಪುರಾತನ ಸಮಾಧಿಗಳನ್ನು ಸರಿ ಪಡಿಸಲು ಮರಗಳನ್ನು ಕಡಿದು, ಸಮತಟ್ಟು ಗೊಳಿಸಲು ತಮ್ಮ ಅನುಚರರಿಗೆ ಜವಾಬ್ದಾರಿಯನ್ನು ಕೊಟ್ಟರು. ಇಬ್’ನು ಆಈದ್’ರ ಉಲ್ಲೇಖದ ಪ್ರಕಾರ ಮೇಲ್ಚಾವಣಿ ಇಲ್ಲದ ಕಟ್ಟಡದಲ್ಲೇ ಪ್ರವಾದಿಯವರು ﷺ ಹನ್ನೆರಡು ದಿನಗಳ ಕಾಲ ನಮಾಝ್ ಮಾಡಿದ್ದರು.
ಶಹರ್ ಬಿನ್ ಹೌಷಬ್’ರ ◌ؓ ಉಲ್ಲೇಖದಲ್ಲಿ ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ ಹೇಳಿರುವುದು ಕಾಣಬಹುದು, ಪ್ರವಾದಿ ಮೂಸರವರಿಗಿದ್ದ (ಅ) ಕುಟೀರದ ಹಾಗೆ ನನಗೂ ಕೂಡ ಹುಲ್ಲುಗಳನ್ನು ಬಳಸಿ ನಿರ್ಮಿಸಿದ ಕುಟೀರವನ್ನು ನಿರ್ಮಿಸಿರಿ. ಅದಕ್ಕೆ ಅನುಚರರು ಮೂಸ (◌ؓ) ಪ್ರವಾದಿಯವರಿಗಿದ್ದ, ಕುಟೀರದ ವಿಶೇಷತೆ ಏನು ಎಂದು ಕೇಳಿದಾಗ, ಪ್ರವಾದಿಯವರು ﷺ, ನೇರವಾಗಿ ನಿಂತಾಗ ಮೇಲ್ಚಾವಣಿಯು ತಲೆಗೆ ತಾಗುವ ಹಾಗೆ ಒಂದು ಭಾಗಕ್ಕೆ ಸರಿದು, ಸರಳವಾದ ಕುಟೀರವಾಗಿತ್ತು ಎಂದು ಹೇಳಿದರು. ನಂತರ ಪ್ರವಾದಿಯವರು ﷺ ಹಾಗೂ ಅವರ ಅನುಚರರು ಸೇರಿ ಮಸ್ಜಿದ್’ನ ನಿರ್ಮಾಣವನ್ನು ಆರಂಭಿಸಿದರು.
ಪ್ರವಾದಿಯವರು ﷺ ಹಾಗೂ ಅವರ ಅನುಚರರು ಇಟ್ಟಿಗೆಯನ್ನು ಎತ್ತಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಅಮ್ಮಾರ್ ◌ؓ ಬಂದು ಪ್ರವಾದಿಯವರಲ್ಲಿ ﷺ ತಮ್ಮ ಇಟ್ಟಿಗೆಯನ್ನು ಕೂಡ ನಾನೇ ಎತ್ತಿಕೊಂಡು ಹೋಗುತ್ತೇನೆ ಎಂದು ಹೇಳಿ, ಅವರು ಎತ್ತಿಕೊಂಡು ಹೋದರು. ಹೀಗೆ ಅಮ್ಮಾರ್ ◌ؓ ಎರಡು ಇಟ್ಟಿಗೆ ಹಾಗೂ ಉಳಿದವರು ಒಂದೊಂದು ಇಟ್ಟಿಯನ್ನು ಎತ್ತಿ ಮಸ್ಜಿದ್’ನ ನಿರ್ಮಾಣ ಮುಂದುವರಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-175/365
ಅಬಾಯಅಲಾರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ, ಆಯಿಶ ಬೀವಿಯವರು ◌ؓ ಹೇಳುವುದು ಕಾಣಬಹುದು. ಮದೀನ ಮಸ್ಜಿದ್’ನ ಅಡಿಪಾಯ ಹಾಕುವ ಸಂದರ್ಭದಲ್ಲಿ, ಮೊದಲು ಪ್ರವಾದಿಯವರು ﷺ ಒಂದು ಕಲ್ಲನ್ನು ಹಾಕಿದರು, ನಂತರ ಅಬೂಬಕ್ಕರ್ ◌ؓ, ಉಮರ್ ◌ؓ ಹಾಗೂ ಉಸ್ಮಾನ್ ◌ؓ ಇವರು ಕೂಡ ಕ್ರಮವಾಗಿ ಕಲ್ಲುಗಳನ್ನು ಹಾಕುತ್ತಾ ಬಂದಾಗ, ಪ್ರವಾದಿಯವರಲ್ಲಿ ﷺ ಇದರ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರವಾದಿಯವರು, ಇದು ನನ್ನ ನಂತರದ ದಿನಗಳಲ್ಲಿ ಖಿಲಾಫತ್ತಿನ ಕ್ರಮಗಳಾಗಿದೆ, ಅಥವಾ ಈ ರೀತಿಯಾಗಿರುತ್ತದೆ ನನ್ನ ನಂತರದಲ್ಲಿ ಆಡಳಿತ ನಡೆಸಬೇಕಾದದ್ದು ಎಂದು ಹೇಳಿದರು. ಇಮಾಮ್ ಬೈಹಕಿ ◌ؓ ಉಲ್ಲೇಖಿಸಿದ ಮತ್ತೊಂದು ಹದೀಸಿನಲ್ಲಿ “ನನ್ನ ನಂತರ ಆಡಳಿತವನ್ನು ನೋಡಿಕೊಳ್ಳುಬೇಕಾದದ್ದು ಇವರಾಗಿರುತ್ತಾರೆ” ಎಂದು ಹೇಳಿರುವುದು ಕಾಣಬಹುದು.
ಮಸ್ಜಿದ್ ನಿರ್ಮಾಣದ ಸಮಯದಲ್ಲಿ ಉಂಟಾದ ಮತ್ತೊಂದು ಘಟನೆಯ ಬಗ್ಗೆ ತಿಳಿಯೋಣ, ಪ್ರವಾದಿಯವರು ﷺ ಮಸ್ಜಿದ್’ನ ನಿರ್ಮಾಣಕ್ಕಾಗಿ ಕಲ್ಲು ಹೊತ್ತು ಹೋಗುತ್ತಿರುವುದನ್ನು ಕಂಡು ಉಸೈದ್ ಬಿನ್ ಹುಲೈರ್ ◌ؓ ಪ್ರವಾದಿಯವರಲ್ಲಿ ﷺ ಅದನ್ನು ನನಗೆ ಕೊಡಿ, ನಾನೇ ಅದನ್ನೂ ಕೂಡ ಹೊತ್ತು ಹೋಗುತ್ತೇನೆ ಎಂದು ಹೇಳಿದಾಗ, ಪ್ರವಾದಿಯವರು ﷺ ನೀವು ಬೇರೆ ಕಲ್ಲನ್ನು ಹೊತ್ತು ಹೋಗಿ, ನಾನು ಕೂಡ ನಿಮ್ಮಂತೆ ಅಲ್ಲಾಹನ ಮುಂದೆ ಫಖೀರ್ ಅಥವಾ ಬಡವನಾಗಿರುತ್ತಾನೆ ಎಂದು ಹೇಳಿದರು.
ನಾನೂ ಕೂಡ ಅಲ್ಲಾಹನ ದಾಸ ಹಾಗೂ ಸೇವಕನಾಗಿರುತ್ತೇನೆ ಎಂಬ ಮಾತಿನಲ್ಲಿ, ಪ್ರವಾದಿಯವರ ﷺ ವಿನಮ್ರತೆಯಾನ್ನಾಗಿದೆ ನಮಗೆ ಇಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ತಮ್ಮ ಅನುಚರರಲ್ಲಿ ತೋರಿಸುವ ಪ್ರವಾದಿಯವರ ಸುಂದರವಾದ ವರ್ತನೆಯನ್ನು ಕೂಡ ನಮಗೆ ಇಲ್ಲಿ ಅರ್ಥಮಾಡಿಕೊಳ್ಳಬಹುದು.
ಹಸನ್ ◌ؓ ಎಂಬವರಿಂದ ಇಮಾಮ್ ಬೈಹಖಿ ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು, ಪ್ರವಾದಿಯವರು ﷺ ಮಸ್ಜಿದ್ ನಿರ್ಮಾಣದ ಸಂದರ್ಭದಲ್ಲಿ ಕಲ್ಲು ಹೊತ್ತು ಪ್ರವಾದಿಯವರ ﷺ ಎದೆಯಲ್ಲಿ ಧೂಳುಗಳಾಗಿದ್ದವು, ಆದರೆ ಮತ್ತೊಂದು ಭಾಗದಲ್ಲಿ ಉಸ್ಮಾನ್ ಬಿನ್ ಮಳ್’ಗೂನ್’ರು ◌ؓ ಒಂದೊಂದೇ ಕಲ್ಲನು ಹೊತ್ತೊಯ್ದು ಇಟ್ಟ ನಂತರ ತನ್ನ ಬಟ್ಟೆಯಲ್ಲಾದ ಧೂಳುಗಳನ್ನು ಸ್ವಚ್ಛಗೊಳಿಸುತ್ತಿದ್ದರು, ಅದನ್ನು ಕಂಡ ಅಲಿಯವರು ◌ؓ “ಲಾ ಯಸ್’ತವೀ ಮನ್ ಯಅಮುರುಲ್ ಮಸಾಹಿದಾ
ಯದ್ ಅಬೂ ಫೀಹಾ ಖಾಯಿಮನ್ ವಖಾಯಿದಾ ವಮನ್ ಯುರಾ ಅನಿಲ್ ಗುಬಾರಿ ಹಾಇದಾ” ಎಂದು ಹಾಡಿದರು.
ಮಸ್ಜಿದ್ ಕಟ್ಟಲು ನಿಂತು, ಕುಳಿತು, ಕಷ್ಟಪಡುವವನೂ, ಬಟ್ಟೆಯಲ್ಲಿ ಧೂಳಾಗುತ್ತೆ ಎಂದು ದೂರ ಸರಿದು ನಿಂತವನೂ ಯಾವತ್ತೂ ಸಮವಲ್ಲ ಎಂದಾಗಿತ್ತು ಅದರರ್ಥ. ಈ ಸಾಲುಗಳನ್ನು ಕೇಳಿದ್ದೆ ತಡ, ಅಮ್ಮಾರ್ ಬಿನ್ ಯಾಸಿರ್ ಅದನ್ನು ಎತ್ತರದ ಧ್ವನಿಯಲ್ಲಿ ಹಾಡಲು ಆರಂಭಿಸಿದರು, ಆದರೆ ಅವರಿಗೆ ಅಲಿಯವರು ◌ؓ ಯಾರ ಬಗ್ಗೆ ಈ ಸಾಲುಗಳನ್ನು ಹಾಡಿದ್ದು ಎಂದು ಗೊತ್ತಿರಲಿಲ್ಲ, ಹೀಗಿರುವಾಗ ಅವರು ಹಾಡುತ್ತಾ, ಉಸ್ಮಾನು ಬಿನ್ ಮಳ್’ಗೂನ್’ರ ◌ؓ ಬಳಿಯಿಂದ ಹಾದು ಹೋದರು. ಅಷ್ಟರಲ್ಲಿ ಆ ಸಾಲುಗಳನ್ನು ಕೇಳಿ ಉಸ್ಮಾನ್ ◌ؓ, ಅಮ್ಮಾರ್’ರಲ್ಲಿ ◌ؓ ಓ ಸುಮ್ಮಯ್ಯರ ಮಗನೇ ಇದು ಯಾರ ಬಗ್ಗೆ ನೀನು ಹಾಡಿದ್ದು ಎಂದು ನನಗೆ ಗೊತ್ತಿದೆ.! ನನ್ನ ಕೈಯಲ್ಲಿರುವ ಖರ್ಜೂರದ ಕೋಲಿನಿಂದ ಮುಖಕ್ಕೆ ಬಾರಿಸುತ್ತೇನೆ ಎಂದು ಹೇಳಿದರು.
ಅವರಾಡಿದ ಈ ಮಾತು ಪ್ರವಾದಿಯವರಿಗೆ ﷺ ಕೇಳಲು ಸಾಧ್ಯವಾಯಿತು, ಅದು ಅವರಿಗೆ ಇಷ್ಟವಾಗಿರಲಿಲ್ಲ ಹಾಗಾಗಿ ಅವರು ಕೋಪದಲ್ಲೇ ಉಸ್ಮಾನ್’ರಲ್ಲಿ ◌ؓ ಅಮ್ಮಾರ್ ನನ್ನ ಆತ್ಮೀಯ ವ್ಯಕ್ತಿಯಾಗಿರುತ್ತಾರೆ, ಹಾಗಾಗಿ ನೀವು ಅವರಿಗೆ ಹೇಳಿದ್ದು ಸ್ವಲ್ಪ ಅಧಿಕವಾಯಿತು ಎಂದು ಹೇಳಿ, ತಮ್ಮ ಕೈಯನ್ನು ಕಣ್ಣಿಗೆ ಒತ್ತಿ ಹಿಡಿದರು. ಅಷ್ಟೊತ್ತಿಗೆ ಎಲ್ಲರೂ ಅಮ್ಮಾರ್’ರಿಂದ ◌ؓ ಗೌರವ ಸೂಚಕವಾಗಿ ಸ್ವಲ್ಪ ದೂರ ಸರಿದು ನಿಂತು, ಅಮ್ಮಾರ್’ರಲ್ಲಿ ನೀವು ಕಾರಣವಾಗಿ ನಮ್ಮಲ್ಲಿ ಪ್ರವಾದಿಯವರು ﷺ ಕೋಪ ಮಾಡಿಕೊಂಡರು ಅಲ್ಲವೇ.? ಯಾವುದಾದರೂ ಸೂಕ್ತ ಇದರ ಬಗ್ಗೆ ಅವತರಿಸ ಬಹುದೇ ಎಂದು ಭಯಪಟ್ಟೆವು ಎಂದು ಹೇಳಿದರು. ಅದಕ್ಕೆ ಅಮ್ಮಾರ್ ◌ؓ ನನಗಾಗಿ ಕೋಪಗೊಂಡ ಪ್ರವಾದಿಯವರನ್ನು ﷺ ನಾನೇ ಸಮಾಧಾನ ಪಡಿಸುತ್ತೇನೆ ಎಂದು ಪ್ರವಾದಿಯವರ ﷺ ಬಳಿ ಬಂದು, ಮಾತಾಡಲು ಆರಂಭಿಸಿದಾಗ ಪ್ರವಾದಿಯವರು ﷺ ನೀವು ಹಾಗೂ ಸ್ವಹಾಬಿಗಳ ನಡುವೆ ಏನದು ಸಮಸ್ಯೆ ಎಂದು ಕೇಳಿದರು. ಅದಕ್ಕೆ ಅಮ್ಮಾರ್ ಅವರು ನನ್ನನ್ನು ಸಾಯಿಸಲು ನೋಡುತ್ತಿದ್ದಾರೆ, ಅವರೆಲ್ಲರೂ ಒಂದೊಂದು ಕಲ್ಲನ್ನು ಹೊತ್ತು ಹೋಗುವಾಗ, ನನ್ನ ಭುಜದ ಮೇಲೆ ಮಾತ್ರ ಎರಡು ಕಲ್ಲನ್ನು ಇಟ್ಟು ಕೊಡುತ್ತಿದ್ದಾರೆ ಎಂದು ಹೇಳಿದರು. (ಎರಡು ಕಲ್ಲು ಹೊತ್ತು ಹೋಗುವುದರಿಂದ ಸಾವು ಸಂಭವಿಸುವುದಿಲ್ಲ, ಆದರೆ ಇಲ್ಲಿ ಹೀಗೆ ಹೇಳಿದ್ದು ಪ್ರವಾದಿಯವರನ್ನು ﷺ ನಗಿಸುವ ಉದ್ದೇಶದಿಂದ ಆಗಿತ್ತು, ಅಷ್ಟೇ ಅಲ್ಲದೆ ಎರಡು ಕಲ್ಲನ್ನು ಅವರು ಹೊತ್ತು ಹೋಗುತ್ತಿದ್ದದ್ದು ಪ್ರವಾದಿಯವರ ﷺ ಬದಲಿಗೆ ಆಗಿತ್ತು.) ಅದಕ್ಕೆ ಪ್ರವಾದಿಯವರು ﷺ ಅವರು ನಿಮ್ಮನ್ನು ಸಾಯಿಸುವುದಿಲ್ಲ, ದುಷ್ಟರಾದ ಒಂದು ಗುಂಪು ನಿಮ್ಮನ್ನು ಸಾಯಿಸಲಿದೆ, ನೀವು ಅವರನ್ನು ಸ್ವರ್ಗಕ್ಕೆ ಆಹ್ವಾನಿಸುವಾಗ ಅವರು ನಿಮ್ಮನ್ನು ನರಕಕ್ಕೆ ಆಹ್ವಾನಿಸುವರು ಎಂದು ಹೇಳಿದರು.
ಇದೊಂದು ಭವಿಷ್ಯವಾಣಿಯಾಗಿತ್ತು, ಹಿಜ್ರಾ ಮೂವತ್ತೇಳರ ವರ್ಷದಲ್ಲಿ, ಅಮ್ಮಾರ್ ◌ؓ ತಮ್ಮ ತೊಂಬ್ಬತ್ಮೂರನೇ ವಯಸ್ಸಿನಲ್ಲಿ ಸ್ವಾಫೀನದಲ್ಲಿ ದುಷ್ಟರಿಂದ ಹತರಾದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-176/365
ತ್ವಲ್’ಖ್ ಬಿನ್ ಅಲಿಯವರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಹಾಗೂ ಅವರ ಅನುಚರರು ಸೇರಿ ಮಸ್ಜಿದ್’ನ ನಿರ್ಮಾಣದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಅವರ ಬಳಿ ಹೋದೆನು. ಅವರಿಗೆ ಮಣ್ಣು ಕಲಸಿ ಕೊಡಲು ಗುದಲಿಯನ್ನು ತೆಗೆದು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಪ್ರವಾದಿಯವರ ﷺ ದೃಷ್ಟಿ ನನ್ನ ಮೇಲೆ ಬಿತ್ತು, ಅವರು ನನ್ನನ್ನು ಕಂಡು ಈ ಹನಫಿಯ್ಯ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಅಲ್ಲವೇ ಎಂದು ಹೇಳಿದರು.
ಮಸ್ಜಿದ್’ನ ಉದ್ದ ಮೂವತ್ತು ಮೀಟರ್ ಹಾಗೂ ಅಗಲ ಮೂವತ್ತೈದು ಮೀಟರ್ ವಿಸ್ತೀರ್ಣವಾಗಿತ್ತು, ಪ್ರವಾದಿಯವರು ﷺ ನಿರ್ಮಿಸಿದ ಮೊದಲ ಮಸ್ಜಿದ್’ನಲ್ಲಿ ಮೂರು ಬಾಗಿಲುಗಳು ಇದ್ದವು, ದಕ್ಷಿಣ ಭಾಗಕ್ಕೆ ಬಾಬುರಹ್ಮಃ ಎಂಬ ಬಾಗಿಲು, ಪಶ್ಚಿಮ ಭಾಗದಲ್ಲಿ ಬಾಬುಜಿಬ್’ರೀಲ್ ಹಾಗೂ ಪೂರ್ವ ಭಾಗದಲ್ಲಿ ಬಾಬುನ್ನಿಸಾ ಎಂಬ ಹೆಸರುಗಳನ್ನು ಕೂಡ ಅವುಗಳಿಗೆ ಇಡಲಾಯಿತು.
ಮೊದಲ ಬಾರಿಯ ಮಸ್ಜಿದ್ ನಿರ್ಮಾಣದ ಏಳು ವರ್ಷದ ನಂತರ ಮಸ್ಜಿದ್’ನ ಅಭಿವೃದ್ಧಿಯ ಪುನರ್ನಿರ್ಮಾಣವನ್ನು ಮಾಡಲಾಯಿತು. ಮಸ್ಜಿದ್’ನ ನಿರ್ಮಾಣದ ಜೊತೆಯಲ್ಲಿ ಪ್ರವಾದಿಯವರ ﷺ ಮನೆಯ ನಿರ್ಮಾಣವೂ ಕೂಡ ಆರಂಭವಾಯಿತು, ದಿನಗಳು ಉರುಳಿದಂತೆ ಮಸ್ಜಿದ್’ನ ಸುತ್ತುಮುತ್ತಲಿನಲ್ಲಿ ಒಂಬತ್ತು ಮನೆಗಳನ್ನು ನಿರ್ಮಿಸಲಾಯಿತು, ಪ್ರತಿ ಮನೆಯೂ ಕೂಡ ನಲ್ವತ್ತು ಚದರ ಮೀಟರ್ ವಿಸ್ತೀರ್ಣವಿರುವ ಗುಡಿಸಲುಗಳಾಗಿತ್ತು. ಕೋಣೆಗಳು ಎಂಬ ಅರ್ಥ ಬರುವ ಹುಜರಾತ್ ಎಂಬ ಪದವನ್ನಾಗಿದೆ ಪ್ರವಾದಿಯವರ ﷺ ಮನೆಯ ಬಗ್ಗೆ ಕುರ್’ಆನಿನಲ್ಲಿ ಉಲ್ಲೇಖಿಸಲಾದದ್ದು. ಅಬೂ ಅಯ್ಯೂಬುಲ್ ಅನ್ಸಾರಿಯವರ ◌ؓ ಮನೆಯ ನಂತರ ನೇರವಾಗಿ ಸ್ಥಳಾಂತರವಾದದ್ದು ಮಸ್ಜಿದ್’ನ ಉತ್ತರ ಭಾಗದಲ್ಲಿ ನಿರ್ಮಿಸಲಾಗಿದ್ದ ಪ್ರವಾದಿಯವರ ﷺ ಪತ್ನಿ ಆಯಿಷಾ ◌ؓ ಹಾಗೂ ಸೌದಾರ ◌ؓ ಮನೆಗಳಿಗಾಗಿತ್ತು. ಮಸ್ಜಿದ್’ನ ಅದೇ ಶೈಲಿಯಲ್ಲಿ ಇಟ್ಟಿಗೆಯಿಂದ ಕಟ್ಟಲಾದ ಗೋಡೆ ಹಾಗೂ ಖರ್ಜೂರದ ಎಲೆಯಿಂದ ಹೆಣೆದು ಮಾಡಿದ ಚಾವಣಿಯನ್ನು ಮಾಡಿದ್ದಾಗಿತ್ತು ಅವರ ಮನೆಗಳು. ಕೆಲವು ದಿನ ಪ್ರವಾದಿಯವರು ಸೌದಾರ ◌ؓ ಮನೆಯಲ್ಲಿ ತಂಗಿದ ನಂತರ ಆಯಿಶರ ◌ؓ ಮನೆಗೆ ತೆರಳಿದರು.
ನಂತರ ದಿನಗಳಲ್ಲಿ ವಿವಾಹವಾದ ಪ್ರತಿಯೊಂದು ಪತ್ನಿಯರಿಗಾಗಿ ಒಂದೊಂದು ಕೋಣೆಗಳ ಹಾಗೆ ಪ್ರತಿಯೊಂದು ಮನೆಗಳನ್ನು ನಿರ್ಮಿಸಲಾಯಿತು. ಹಿಜ್ರಾ ಮೂರನೇ ವರ್ಷ ಹಫ್ಸರಿಗಾಗಿ ◌ؓ, ನಾಲ್ಕನೇ ವರ್ಷ ಉಮ್ಮುಸಲಮರಿಗಾಗಿ ◌ؓ, ಐದನೇ ವರ್ಷ ಝೈನಬ್’ರಿಗಾಗಿ ◌ؓ, ಆರನೇ ವರ್ಷ ಜುವೈರಿಯ ◌ؓ ಹಾಗೂ ಉಮ್ಮು ಹಬೀಬರಿಗಾಗಿ ◌ؓ, ಏಳನೇ ವರ್ಷ ಸ್ವಫೀಯ ◌ؓ ಹಾಗೂ ಮೈಮುನರಿಗಾಗಿ ◌ؓ, ಹೀಗೆ ಅವರುಗಳ ವಿವಾಹದ ಆಧಾರದ ಮೇಲೆ ಮನೆಗಳನ್ನು ನಿರ್ಮಿಸಿ ಕೊಡಲಾಯಿತು. ಮಸ್ಜಿದ್’ನ ಪೂರ್ವಭಾಗದಿಂದ ಉತ್ತರ ಭಾಗಕ್ಕೆ ಈ ಮನೆಗಳನ್ನು ಸಾಲಾಗಿ ನಿರ್ಮಿಸಲಾಗಿತ್ತು.
ಮುಹಮ್ಮದ್ ಬಿನ್ ಉಮರ್ ಅಲ್ ಅಸ್’ಲಮಿಯವರು ಹೇಳುವುದು ಕಾಣಬಹುದು, ಹಾರಿಸ್ ಬಿನ್ ಅನ್ನುಅ್’ಮಾನ್’ರಿಗೆ ಮಸ್ಜಿದ್’ನ ಸುತ್ತಮುತ್ತಲಿನಲ್ಲಿ ಹಲವಾರು ಮನೆಗಳಿದ್ದವು, ಪ್ರವಾದಿಯವರು ﷺ ಒಂದೊಂದೇ ಪತ್ನಿಯನ್ನು ವಿವಾಹವಾದಾಗ, ಹಾರಿಸ್ ತಮ್ಮ ಒಂದೊಂದೇ ಮನೆಯನ್ನೂ ಪ್ರವಾದಿಯವರಿಗೆ ﷺ ಬಿಟ್ಟುಕೊಟ್ಟಿದ್ದರು. ಕೆಲವು ದಿನಗಳ ಬಳಿಕ ಅವರಿಗಿದ್ದ ಸಂಪೂರ್ಣ ಸ್ಥಳವನ್ನು ಪ್ರವಾದಿಯವರಿಗಾಗಿ ﷺ ಬಿಟ್ಟುಕೊಟ್ಟರು.
ಅಬ್ದುಲ್ಲಾಹಿಬಿನ್ ಯಝೀದ್ ಅಲ್ ಹುದಲಿಯವರು ಹೇಳುವುದು ಕಾಣಬಹುದು. ಉಮರ್ ಬಿನ್ ಅಬ್ದುಲ್ ಅಝೀಝ್’ರ ◌ؓ ಕಾಲದಲ್ಲಿ ವಲೀದ್’ಬಿನ್ ಅಬ್ದುಲ್ ಮಲಿಕ್’ರ ಆದೇಶದ ಪ್ರಕಾರ ಪ್ರವಾದಿಯವರ ﷺ ಪತ್ನಿಯರ ಮನೆಗಳನ್ನು ಕೆಡವಿ ಹಾಕುವ ಸಂದರ್ಭದಲ್ಲಿ ನಾನಲ್ಲಿ ಉಪಸ್ಥಿತನಿದ್ದೆನು. ಅಂದು ನಮಗೆ ಒಂಬತ್ತು ಮನೆಯಗಳ ಲೆಕ್ಕ ಹಾಕಲು ಸಾಧ್ಯವಾಗಿತ್ತು, ಆ ಮನೆಗಳನ್ನು ಇಟ್ಟಿಗೆಯ ಗೋಡೆ ಹಾಗೂ ಖರ್ಜೂರದ ಎಲೆಗಳಿಂದ ಹೆಣೆದ ಚಾವಣಿಯಿಂದ ನಿರ್ಮಿಸಲಾಗಿತ್ತು, ಅವುಗಳನ್ನು ಆಯಿಶ ಬೀವಿ ◌ؓ ಹಾಗೂ ಅಸ್’ಮಾಅ್ ಬಿಂತ್ ಹಸನಿಯವರ ◌ؓ ಮನೆಗಳ ನಡುವೆ ಸಾಲು ಸಾಲಾಗಿ ಕಟ್ಟಲಾಗಿತ್ತು.
ಆದರೆ ಉಮ್ಮುಸಲಮರ ◌ؓ ಮನೆಯನ್ನು ಮಾತ್ರ ಸಂಪೂರ್ಣವಾಗಿ ಇಟ್ಟಿಗೆಯಿಂದ ನಿರ್ಮಿಸಲಾಗಿತ್ತು. ಬೀವಿಯವರ ಮೊಮ್ಮಗನಲ್ಲಿ ಇದರ ಬಗ್ಗೆ ಕೇಳಿದಾಗ, ಅವರು ಈ ರೀತಿಯಾಗಿ ಉತ್ತರಿಸಿದರು. ಪ್ರವಾದಿಯವರು ﷺ ದೌತುಲ್ ಜಂದಲ್ ಸೈನಿಕ ಆಂದೋಲನದ ಕಳೆದು ತಿರುಗಿ ಬಂದಾಗ, ಉಮ್ಮಸಲಮರ ಮನೆಯನ್ನು ಸಂಪೂರ್ಣವಾಗಿ ಇಟ್ಟಿಗೆಯಲ್ಲಿ ನವೀಕರಣಗೊಳಿಸಿದ್ದು ಕಂಡಿತು. ಅದರ ಬಗ್ಗೆ ಉಮ್ಮಸಲಮರಲ್ಲಿ ಕೇಳಿದಾಗ ಅವರು, ನಮಗೆ ಸಾಕಷ್ಟು ಪ್ರಮಾಣದಲ್ಲಿ ಮರದ ಕಂಬಗಳು ಸಿಗದ ಕಾರಣ ಅದನ್ನು ಇಟ್ಟಿಗೆಯಿಂದಲೇ ಕಟ್ಟಬೇಕಾಯಿತು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ, ನನ್ನ ಸಮುದಾಯದ ಜನರು ಖರ್ಚು ಮಾಡುವ ಕನಿಷ್ಠ ಹಣವೆಂದರೆ ಅದು ಕಟ್ಟಡಕ್ಕಾಗಿ ಖರ್ಚು ಮಾಡುವ ಹಣವಾಗಿದೆ ಎಂದು ಹೇಳಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-177/365
ಪ್ರವಾದಿಯವರು ﷺ ಮದೀನಕ್ಕೆ ಬಂದ ನಂತರ ಮೊದಲು ನಿರ್ವಹಿಸಿದ ಗಮನಾರ್ಹ ವಿಷಯ ಏನೆಂದರೆ ಅದು ಪ್ರವಾದಿಯವರ ﷺ ಮೊದಲನೇ ಜುಮುಅವಾಗಿತ್ತು. ಪ್ರವಾದಿಯವರು ﷺ ಮದೀನಕ್ಕೆ ತಲುಪದಕ್ಕೂ ಮೊದಲೇ ಪ್ರವಾದಿಯವರ ﷺ ಅನುಮತಿಯಂತೆ ಅಲ್ಲಿ ಜುಮುಅ ನಡೆದಿತ್ತು, ಆದರೆ ಮಕ್ಕಾದಲ್ಲಿ ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರವಾದಿಯವರು ﷺ ಮಿಸ್’ಅಬ್ ಬಿನ್ ಉಮೈರ್’ರಿಗೆ ಬರೆದ ಪತ್ರದಲ್ಲಿ, ನಾಲ್ಕು ರಕಾಅತ್ ಆದ ಲುಹರ್ ನಮಾಝ್’ನಲ್ಲಿ ಎರಡು ರಕಾಅತ್’ಗೆ ಬದಲಾಗಿ ಖುತುಬ ಓದಬೇಕೆಂದು ತಿಳಿಸಿ ಕೊಡಲಾಗಿತ್ತು.
ಆದರೆ ಮತ್ತೊಂದು ಅಭಿಪ್ರಾಯದ ಪ್ರಕಾರ ಪ್ರವಾದಿಯವರ ﷺ ಅನುಚರರ ಸಂಶೋಧನೆಯಿಂದ ಮದೀನದಲ್ಲಿ ಜುಮುಅ ನಡೆಸಲಾಯಿತು ಎಂದಾಗಿದೆ. ಮುಹಮ್ಮದ್ ಬಿನ್ ಸೀರೀನ್ ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು, ಪ್ರವಾದಿಯವರು ﷺ ಮದೀನಕ್ಕೆ ತಲುಪುದಕ್ಕೂ ಮೊದಲೇ ಮದೀನದಲ್ಲಿ ಜುಮುಅ ನಡೆಸಲಾಗಿತ್ತು. ಯಹೂದಿಗಳಿಗೆ ಹಾಗೂ ಇಸಾಯಿಗಳಿಗೆ (ನಸ್ರಾಣಿ) ವಾರದಲ್ಲಿ ಒಂದು ದಿನ ಎಲ್ಲರೂ ಒಟ್ಟಾಗಿ ಸೇರಿ ಪ್ರಾರ್ಥನೆ ನಡೆಸಲು ವಿಶೇಷವಾದ ದಿನಗಳು ಇರುವುದರಿಂದ ನಾವೂ ಕೂಡ ಒಂದು ದಿನ ಗುರುತಿಸಿ ಆ ದಿನದಂದು ನಾವು ಒಟ್ಟಾಗಿ ಪ್ರಾರ್ಥಿಸೋಣ ಎಂದು ಅನ್ಸಾರಿಗಳು ತೀರ್ಮಾನಿಸಿ, ಅರೂಬ ದಿನ ಅಥವಾ ಶುಕ್ರವಾರದ ದಿನದಂದು ಒಟ್ಟಿಗೆ ಸೇರಿ ಜುಮುಅ ನಿರ್ವಹಿಸಿದರು. ಇದರಿಂದ ಮೊದಲ ಬಾರಿ ಜುಮಾಅ ಜಾರಿಗೆ ತಂದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅಸ್’ವದ್ ಬಿನ್ ಸುರಾರರು ಪಾತ್ರರಾದರು. ಅಲ್ ಬಯಾಳ ಎಂಬ ಸ್ಥಳದಲ್ಲಿ, ಮಿಸ್’ಅಬ್ ಬಿನ್ ಉಮೈರ್’ರ ನಾಯಕತ್ವದಲ್ಲಿ ನಲ್ವತ್ತು ಜನರನ್ನು ಸೇರಿಸಿ ಮೊದಲ ಜುಮುಅವನ್ನು ಆರಂಭಿಸಲಾಯಿತು. ಅದರ ನಂತರವಾಗಿತ್ತು ಪವಿತ್ರ ಖುರ್’ಆನಿನ ಜುಮುಅ ಅಧ್ಯಾಯದ ಒಂಭತ್ತನೇ ಸೂಕ್ತವು ಅವತರಿಸಿದ್ದು, “ಶುಕ್ರವಾರ ದಿನದಂದು ನಮಾಝಿಗಾಗಿ ಆಹ್ವಾನಿಸಲಾದಾಗ ತಕ್ಷಣವೇ ಅಲ್ಲಾಹನ ಸ್ಮರಣೆಗಾಗಿ (ಖುತುಬ) ತಲುಪಿರಿ” ಎಂದಾಗಿತ್ತು ಅದರ ಸಾರ.
ಅಬ್ದುರಹ್ಮಾನ್ ಬಿನ್ ಕಅಬ್ ಬಿನ್ ಮಾಲಿಕ್’ರು ◌ؓ ಹೇಳುವುದು ಕಾಣಬಹುದು. ಶುಕ್ರವಾರ ಜುಮುಅ ನಮಾಝಿನ ಅಝಾನ್ ಕೇಳಲ್ಪಟ್ಟಾಗ ನನ್ನ ತಂದೆ ಅಸ್’ವದ್ ಬಿನ್ ಸುರಾರರಿಗಾಗಿ ವಿಶೇಷವಾಗಿ ಪ್ರಾರ್ಥನೆ ಮಾಡುತಿದ್ದರು, ತಮ್ಮ ಕಣ್ಣಿಗೆ ದೃಷ್ಟಿ ದೋಷ ಬಂದ ನಂತರವೂ ತಪ್ಪದೆ ಹೀಗೆ ಪ್ರಾರ್ಥಿಸುವುದನ್ನು ಕಂಡು ನಾನು ತಂದೆಯವರಲ್ಲಿ ಇದರ ಬಗ್ಗೆ ಕೇಳಿದಾಗ, ಮದೀನದಲ್ಲಿ ಮೊದಲ ಬಾರಿಗೆ ಜುಮುಅ ಜಾರಿಗೆ ತಂದದ್ದು ಅವರಾಗಿದ್ದರು ಹಾಗಾಗಿ ನಾನು ಅವರಿಗಾಗಿ ಪ್ರಾರ್ಥನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಪ್ರವಾದಿಯವರು ﷺ ಮದೀನಕ್ಕೆ ತಲುಪಿದ ನಂತರದ ಮೊದಲನೇ ಶುಕ್ರವಾರ ರಾನೂನಾ ಕಣಿವೆಯಲ್ಲಿರುವ ಸಾಲಿಮ್ ಬಿನ್ ಔಫ್’ರವರ ಮನೆಯಲ್ಲಿ, ತಮ್ಮ ನೂರು ಜನ ಅನುಚರರ ಜೊತೆಯಲ್ಲಿ ಜುಮುಅ ನಿರ್ವಹಿಸಿದ್ದರು. ಪ್ರಸ್ತುತ ಜುಮುಅದ ಆರಂಭದಲ್ಲಿ ಅಲ್ಲಾಹನಿಗೆ ಸ್ತುತಿಸಿದ ನಂತರ, ಓ ಜನರೇ ಮೊದಲನೆದಾಗಿ ನೀವು ರಕ್ಷಿಸಬೇಕಾದದ್ದು ನಿಮ್ಮನ್ನೇ ಆಗಿದೆ, ಕಾರಣ ನಿಮ್ಮಲ್ಲಿ ಯಾರಾದ್ರೂ ಮರಣ ಹೊಂದಿದರೆ ಅವನು ಯಾರದೇ ಸಹಾಯವಾಗಲಿ, ಮಧ್ಯಸ್ಥಿಕೆಯಾಗಲಿ ಇಲ್ಲದೆ ತನ್ನ ಪ್ರಭುವಿನ ಬಳಿ ನೇರವಾಗಿ ಹೋಗಿ ತಲುಪುವನು. ಅಲ್ಲಿ ಅವನಲ್ಲಿ ಅಲ್ಲಾಹನು, ನನ್ನ ದೂತನು ನಿನ್ನ ಬಳಿ ಬಂದಿರಲಿಲ್ಲವೇ.? ನಿನಗಾಗಿ ನಾನು ಬಹಳಷ್ಟು ಸಂಪತ್ತನ್ನು ಕೊಟ್ಟಿರಲಿಲ್ಲವೇ.? ನೀನು ಅದಕ್ಕೆ ಬದಲಾಗಿ ಇಲ್ಲಿಗೆ ಏನನ್ನು ತಂದಿರುವೆ.? ಎಂದು ಕೇಳುವಾಗ ಆ ವ್ಯಕ್ತಿಯೂ ಅಲ್ಲಿ ಅವನ ಬಲಭಾಗಕ್ಕೆ ಹಾಗೂ ಎಡಬಾಗಕ್ಕೆ ತಿರುಗಿ ನೋಡುವನು. ಆದರೆ ಅಲ್ಲಿ ಅವನ ಸಹಾಯಕ್ಕೆ ಯಾರೂ ಇರುವುದಿಲ್ಲ, ಅವನ ಮುಂದೆ ಇರುವುದು ಕೇವಲ ನರಕಾಗ್ನಿ ಮಾತ್ರವಾಗಿರುತ್ತದೆ. ಅಲ್ಲಿ ಅವನಿಗೆ ರಕ್ಷೆ ಹೊಂದಬೇಕಿದ್ದರೆ.? ಅವನು ಸ್ವತಃ ಅವನ ಶರೀರವನ್ನು ರಕ್ಷಿಸಲಿ, ಅದು ಕೇವಲ ಒಂದು ಸಣ್ಣ ಖರ್ಜೂರದ ತುಂಡನ್ನು ದಾನ ಮಾಡುವ ಮೂಲಕವಾದರೂ ಸರಿ. ಕೊನೆಯ ಪಕ್ಷ ಅವನಲ್ಲಿ ಏನೂ ನೀಡಲು ಇಲ್ಲದಿದ್ದರೂ ಒಳ್ಳೆಯ ಮಾತುಗಳನ್ನಾದರೂ ಆಡಲಿ. ಯಾಕೆಂದರೆ ಪ್ರತಿಯೊಂದು ಒಳಿತು ಮಾಡುವುದರಿಂದ ಅಲ್ಲಾಹನು ಅದಕ್ಕೆ ಹತ್ತರಿಂದ ಎಪ್ಪತ್ತರಷ್ಟು ಪಟ್ಟು ಅಧಿಕ ಪ್ರತಿಫಲವನ್ನು ನೀಡುವನು ಎಂಬುದಾಗಿತ್ತು ಆ ಮೊದಲ ಖುತುಬದ ಸಾರ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-178/365
ಮದೀನದ ಮಸ್ಜಿದ್ ನಿರ್ಮಾಣದ ನಂತರ ಉಂಟಾದ ಪ್ರಮುಖವಾದ ವಿಷಯವೇನೆಂದರೆ.? ಅದು ಸಹೋದರ್ಯತೆಯನ್ನು ಸ್ಥಾಪಿಸುವುದು ಆಗಿತ್ತು. ಮಕ್ಕಾದಿಂದ ಬಂದಿದ್ದ ಮಹಾಜಿರ್ ಹಾಗೂ ಮದೀನದ ಅನ್ಸಾರಿಗಳ ನಡುವೇ ನಡೆದ ಈ ಸಂಬಂಧವು, ಕುಟುಂಬ ವೈವಾಹಿಕ ಸಂಬಂಧಗಳಿಂಗಿಂತ ವಿಶಿಷ್ಟವಾದ ಈ ಸಹೋದರತೆಯ ಸಂಬಂಧವಾಗಿ, ಇತಿಹಾಸದಲ್ಲೇ ಅನನ್ಯ ಹಾಗೂ ಸರಿಸಾಟಿಯಿಲ್ಲದೆ ವಿಷಯವಾಯಿತು.
ಮೊದಲೇ ಸ್ವಹಾಬಿಗಳ ನಡುವೆ ಆದರ್ಶದ ಹೆಸರಿನಲ್ಲಿ, ಆಳವಾದ ಗೆಳೆತನವಿದ್ದ (ಸಹೋದರತೆ) ಕೆಲವೊಂದು ಜೋಡಿಗಳು ಇದ್ದವು, ಅಬೂಬಕ್ಕರ್ ◌ؓ ಹಾಗೂ ಉಮರ್ ◌ؓ, ಝೈದ್ ಬಿನ್ ಹಾರಿಸ ◌ؓ ಹಾಗೂ ಹಂಝ ◌ؓ, ಉಸ್ಮಾನ್ ◌ؓ ಹಾಗೂ ಅಬ್ದುರಹ್ಮಾನ್ ಬಿನ್ ಔಫ್ ◌ؓ, ಝುಬೈರ್ ಬಿನ್ ಅವ್ವಾಮ್ ◌ؓ ಹಾಗೂ ಇಬ್’ನು ಮಸ್’ವೂದ್ ◌ؓ, ಉಬೈದತ್ ಬಿನ್ ಹಾರಿಸ್ ◌ؓ ಹಾಗೂ ಬಿಲಾಲ್ ◌ؓ, ಮಿಸ್’ಅಬ್ ಬಿನ್ ಉಮೈರ್ ◌ؓ ಹಾಗೂ ಸಅದ್ ಬಿನ್ ಅಬೀ ವಖಾಸ್ ◌ؓ, ಉಬೈದ ◌ؓ ಹಾಗೂ ಸಾಲಿಮ್ ◌ؓ, ಸಅದ್ ಬಿನ್ ಅಬೀ ಝೈದ್ ◌ؓ ಹಾಗೂ ತ್ವಲ್’ಹತ್ ಬಿನ್ ಉಬೈದಿಲ್ಲಾಹ್ ◌ؓ, ಅವುಗಳಲ್ಲಿ ಕೆಲವೊಂದು ಉದಾಹರಣೆಗಳಾಗಿವೆ ಇದು.
ಆದರೆ ಮದೀನದಲ್ಲಿ ಉಂಟಾದ ಈ ಗೆಳೆತನಕ್ಕೆ (ಸಹೋದರತೆಗೆ) ಕೆಲವೊಂದು ನಿಬಂಧನೆಗಳು ಕೂಡ ಇತ್ತು, ವಿಶ್ವಾಸದ ಸಂರಕ್ಷಣೆಗಾಗಿ ಎಲ್ಲವನ್ನೂ ಬಿಟ್ಟು ಬಂದವರಿಗೆ, ಸರ್ವಸ್ವವನ್ನು ನೀಡಿ ಸ್ವಾಗತಿಸಿದ್ದು ಈ ಗೆಳೆತನದ ಪ್ರತ್ಯೇಕತೆಯಾಗಿತ್ತು. ಅನ್ನಿಸ ಅಧ್ಯಾಯದ ಮೂವತ್ಮುರನೇ ಸೂಕ್ತದಲ್ಲಿ ತಿಳಿಸಿದ ಹಾಗೆ, ಕುಟುಂಬ ಸಂಬಂಧವಾಗಲಿ, ವೈವಾಹಿಕ ಸಂಬಂಧವಾಗಲಿ ಇಲ್ಲದಿದ್ದರೂ ಆಸ್ತಿಯಲ್ಲಿ ಪಾಲನ್ನು ಕೂಡ ಅವರಿಗೆ ಕೊಡಲಾಗಿತ್ತು. ತೌರಾತಿನ ಗ್ರಂಥದ ಆಧಾರದ ಮೇಲೆ ಮಾಡಿದ ಆಸ್ತಿಯ ಪಾಲಿನ ಈ ನಿಯಮವು ಕೆಲವು ದಿನಗಳ ಕಾಲ ಹೀಗೆ ಮುಂದುವರಿಯಿತು. ಅಷ್ಟೊತ್ತಿಗೆ ಮಹಾಜಿರ್’ಗಳು ಕೂಡ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಬಲಿಷ್ಠರಾದರು. ಅದರ ನಂತರವಾಗಿತ್ತು ಅಂಫಾಲ್ ಅಧ್ಯಾಯದ ಎಪ್ಪತ್ತೈದನೇ ಸೂಕ್ತದ ಪ್ರಕಾರ ಆಸ್ತಿಯ ಪಾಲಿನ ನಿಯಮಗಳನ್ನು ಮರುಮೌಲ್ಯಮಾಪನ ಮಾಡಲಾಗಿದ್ದು. ಅನಸ್ ಬಿನ್ ಮಾಲಿಕ್’ರ ಮನೆಯಲ್ಲಿ ಪ್ರವಾದಿಯವರು ﷺ ಈ ವಿಶಿಷ್ಟ ಗೆಳೆತನ ಸಂಗಮದ ಘೋಷಣೆಯನ್ನು ಮಾಡಿದರು, ಅವುಗಳಲ್ಲಿ ಕೆಲವು ಗೆಳೆಯರ ಜೋಡಿಗಳು ಈ ಕೆಳಗಿನಂತಿವೆ.
ಅಬೂಬಕ್ಕರ್ ◌ؓ ಹಾಗೂ – ಖಾರಿಜತ್ ಬಿನ್ ಝುಹೈರ್ ◌ؓ, ಉಮರ್ ಬಿನ್ ಖತ್ವಾಬ್ ◌ؓ ಹಾಗೂ ಇತ್’ಬಾನ್ ಬಿನ್ ಮಾಲಿಕ್ ◌ؓ, ಅಬೂ ಉಬೈದ ಆಮಿರ್ ಬಿನ್ ಅಲ್ ಜರ್’ರಾಹ್ ◌ؓ ಹಾಗೂ ಸಅದ್ ಬಿನ್ ಮುಆದ್ ◌ؓ, ಝುಬೈರ್ ಬಿನ್ ಅಲ್ ಅವ್ವಾಮ್ ◌ؓ ಹಾಗೂ ಸಲಾಮತ್’ಬಿನ್ ಸಲಾಮಃ ◌ؓ, ತ್ವಲ್’ಹತ್ ಬಿನ್ ಉಬೈದಿಲ್ಲಾಹ್ ಹಾಗೂ ಕಅಬ್ ಬಿನ್ ಮಾಲಿಕ್, ಮಿಸ್’ಅಬ್ ಬಿನ್ ಉಮೈರ್ ◌ؓ ಹಾಗೂ ಅಬೂಅಯ್ಯೂಬ್ ಖಾಲಿದ್’ಬಿನ್ ಝೈದ್ ◌ؓ ಈ ರೀತಿಯಾಗಿ ಸುಮಾರು ತೊಂಬತ್ತರಷ್ಟು ಗುಂಪುಗಳನ್ನು ಮಾಡಿರುವುದು ಇತಿಹಾಸ ಗ್ರಂಥಗಳಲ್ಲಿ ಕಾಣಬಹುದು.
ಗೆಳೆತನ (ಸಹೋದರ್ಯತೆ) ಮಾಡಿದ ಗುಂಪಿನ ನಡುವೆ ಕರಿಯರು, ಬಿಳಿಯರು, ಶ್ರೀಮಂತ, ಬಡವ, ಉನ್ನತ ಮನೆತನದವರು, ಸಾಮಾನ್ಯರು ಎಂಬ ಯಾವುದೇ ರೀತಿಯ ಭೇದ ಭಾವ ಕೂಡ ಇರಲಿಲ್ಲ. ಅದರಂತೆ ಮಕ್ಕಾದಿಂದ ಬಂದಿದ್ದ ಬಹಳಷ್ಟು ಕರಿಯರು ಮದೀನದ ಮದೀನದ ಬಿಳಿಯರ ಜೊತೆ ಸಹೋದರರಾದರು. ಹಾಗಾಗಿ ಮದೀನದಲ್ಲಿ ಆರಂಭವಾದ ವಿಭಿನ್ನ ರೀತಿಯ ಈ ಗೆಳೆತನ ಇತಿಹಾಸದಲ್ಲೇ ಬಹಳ ಗಮನಾರ್ಹ ಮಾನವ ಕ್ರಾಂತಿಯಾಗಿ ಬದಲಾಯಿತು.
ಇದೊಂದು ಕೇವಲ ಔಪಚಾರಿಕವಾಗಿ ಕೊಡುವುದು, ತೆಗೆದುಕೊಳ್ಳುವುದು ಮಾಡುತ್ತಿದ್ದ ಸಹೋದರರ್ಯತೆಯಾಗಿರಲಿಲ್ಲ, ಬದಲಾಗಿ ಸಂಪೂರ್ಣ ಮನಸ್ಸಿನಿಂದ ಮಾಡುತ್ತಿದ್ದ ಅಪೂರ್ವವಾದ ಸಹೋದರ್ಯತೆಯಾಗಿತ್ತು. ಅದರಲ್ಲಿ ಒಂದು ಉದಾಹರಣೆಯು ಹೀಗೆ ಕಾಣಬಹುದು, ಸಹೋದರತೆಯ ಸ್ಥಾಪನೆಯಲ್ಲಿ ಅಬ್ದುರಹ್ಮಾನ್ ಬಿನ್ ಔಫ್ ಹಾಗೂ ಸಅದ್ ಬಿನ್ ರಬೀಇರನ್ನು ಪರಸ್ಪರ ಸಹೋದರರಾಗಿ ನಿಯೋಜಿಸಲಾಗಿತ್ತು. ಅದರಂತೆ ಸಅದ್, ಇಬ್’ನು ಔಫ್’ರಲ್ಲಿ ನಾನು ನನ್ನ ಆಸ್ತಿಯಲ್ಲಿ ನಿಮಗೆ ಅರ್ಧ ಭಾಗವನ್ನು ನೀಡುತ್ತೇನೆ, ನನ್ನ ಪತ್ನಿಯರಲ್ಲಿ ನಿಮಗೆ ಇಷ್ಟವಿರುವ ಒಬ್ಬರನ್ನು ಆಯ್ಕೆ ಮಾಡಿದರೆ ನಾನು ಅವರನ್ನು ನಿಮಗಾಗಿ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದಾಗ, ಇಬ್’ನು ಔಫ್ ನಾನು ನಿಮ್ಮ ಒಳ್ಳೆಯ ಮನಸ್ಸನ್ನು ಪರಿಗಣಿಸುತ್ತೇನೆ ಆದರೆ ನನಗೆ ನಿಮ್ಮಲ್ಲಿ ತಿಳಿಸಿರುವ ವಿನಂತಿಯೇನೆಂದರೆ, ನಿಮ್ಮ ಆಸ್ತಿಯಲ್ಲಿ ಪಾಲಾಗಲಿ, ವಿವಾಹದ ನಿರ್ಣಯವಾಗಲಿ ಬೇಡ, ಸಧ್ಯಕ್ಕೆ ನನಗೆ ನೀವು ಮಾರುಕಟ್ಟೆಯ ದಾರಿಯನ್ನು ತೋರಿಸಿಕೊಟ್ಟರೆ ಬಹಳ ಒಳ್ಳೆಯದಿತ್ತು. ನಾನು ವ್ಯಾಪಾರ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-179/365
ಎಲ್ಲರಿಗೂ ಸಹೋದರತ್ವದ ಒಂದೊಂದು ಗುಂಪನ್ನು ಮಾಡಿದ ನಂತರ, ಅಲಿಯವರು ಪ್ರವಾದಿಯವರ ﷺ ಬಳಿ ಬಂದು ನನಗೆ ಯಾರ ಜೊತೆಯಲ್ಲಿ ಸಹೋದರನಾಗಿ ಇರಲು ಅನುಮತಿ ನೀಡುತ್ತೀರಿ ಎಂದು ಕೇಳಿದಾಗ, ಪ್ರವಾದಿಯವರು ﷺ ಭೂಲೋಕದಲ್ಲೂ, ಪರಲೋಕದಲ್ಲೂ ನಿಮ್ಮ ಸಹೋದರನಾಗಿ ನಾನಿರುತ್ತೇನೆ ಎಂದು ಹೇಳಿದರು.
ಪವಿತ್ರವಾದ ಈ ಸಹೋದರತೆಯ ಸಂಬಂಧದ ಬಗ್ಗೆ ಪ್ರವಾದಿಯವರಲ್ಲಿ ﷺ ಅನ್ಸಾರಿಗಳು ಬಂದು, ನಮ್ಮ ಸಹೋದರರಿಗೆ ಆಸ್ತಿಯಲ್ಲಿ ಎಷ್ಟು ಪಾಲು ಕೊಡಬೇಕು ಎಂದು ಕೇಳಿದರು. ಅವರ ಆ ಒಳ್ಳೆಯ ಮನಸ್ಸನ್ನು ಪ್ರವಾದಿಯವರು ﷺ ಅಭಿನಂದಿಸುತ್ತಾ ನೀವು ನಿಮ್ಮ ಸಹೋದರರಿಗೆ ನಿಮ್ಮ ಆಸ್ತಿಯಲ್ಲಿ ಪಾಲು ನೀಡಬೇಡಿ ಬದಲಾಗಿ ನಿಮಗೆ ಸಿಗುವ ಲಾಭದಲ್ಲಿ ಪಾಲನ್ನು ನೀಡಿದರೆ ಸಾಕು ಎಂದು ಹೇಳಿದರು.
ಮಕ್ಕಾದಿಂದ ಬಂದವರ ಹಾಗೂ ಮದೀನದಲ್ಲಿ ಅವರನ್ನು ಸ್ವೀಕರಿಸಿದವರ ನಡುವಿನ ಸಂಬಂಧ ಹೇಗಿತ್ತೆಂದು ಪವಿತ್ರ ಕುರ್’ಆನಿನ ಅನ್’ಫಾಲ್ ಅಧ್ಯಾಯದ ಎಪ್ಪತ್ತೆರಡನೇ ಸೂಕ್ತದಲ್ಲಿ ಉಲ್ಲೇಖಿಸಲಾದದ್ದು ಕಾಣಬಹುದು. ” ಸತ್ಯ ವಿಶ್ವಾಸವನ್ನು ಸ್ವೀಕರಿಸಿ, ತಮ್ಮ ಸ್ವಂತ ಊರು ಬಿಟ್ಟು ಪಲಾಯನ ಮಾಡಿ ಬಂದು, ತಮ್ಮ ಸ್ವಂತ ಶರೀರ ಹಾಗೂ ಆಸ್ತಿಯನ್ನು ಅಲ್ಲಾಹನಿಗಾಗಿ ಸಮರ್ಪಿಸಿ, ಹೋರಾಟ ಮಾಡಿದವರು ಹಾಗೂ ಅವರಿಗೆ ಆಶ್ರಯ ನೀಡಿ, ಸಹಾಯ ಮಾಡಿದರು ಖಂಡಿತವಾಗಿ ಅವರು ಪರಸ್ಪರ ಬಂಧುಮಿತ್ರರಾಗಿರುತ್ತಾರೆ. ಸತ್ಯ ವಿಶ್ವಾಸ ಸ್ವೀಕರಿಸಿ, ಸ್ವಂತ ಊರನ್ನು ಬಿಟ್ಟು ಬರದೆ ಇರುವವರು, ಪಲಾಯನ ಮಾಡಿ ಬರುವವರೆಗೂ ಅವರ ರಕ್ಷಣೆ ನಿಮ್ಮ ಹೊಣೆಗಾರಿಕೆಯಲ್ಲ, ಆದರೆ ಧರ್ಮದ ವಿಷಯದಲ್ಲಿ ನಿಮ್ಮಲ್ಲಿ ಸಹಾಯ ಕೇಳಿದರೆ ಅದನ್ನು ಮಾಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ಆದರೆ ಅದು ನಿಮ್ಮ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡವರ ವಿರುದ್ಧ ಆಗಿರಬಾರದು, ಅಲ್ಲಾಹನು ನಿಮ್ಮ ಎಲ್ಲಾ ಕಾರ್ಯಗಳನ್ನು ವೀಕ್ಷಿಸಿತ್ತಿರುತ್ತಾನೆ.” ಎಂದಾಗಿತ್ತು ಅದರ ಸಾರ.
ಮದೀನದ ಆರಂಭಿಕ ದಿನಗಳು, ಇಸ್ಲಾಮಿನ ನಾಗರಿಕತೆಯ ಮೂಲಾಧಾರಗಳಾಗಿ ಸ್ನೇಹ ಹಾಗೂ ಸೌಹಾರ್ದತೆಯನ್ನು ಸ್ಥಾಪಿಸಿದ ದಿನಗಳಾಗಿತ್ತು. ಪ್ರವಾದಿಯವರು ﷺ ಮದೀನಕ್ಕೆ ಬಂದ ನಂತರ ಅಬ್ದುಲ್ಲಾಹಿಬಿನು ಸಲಾಂ ಉಲ್ಲೇಖಿಸಿದ ಮೊದಲ ಹದೀಸಿನಲ್ಲಿ ಸಾರಿದ ಮೊದಲ ಸಂದೇಶವೇ, ಶಾಂತಿಯಿಂದ ಸಂದೇಶವನ್ನು ತಲುಪಿಸುವುದು ಹಾಗೂ ಜನರಿಗೆ ಆಹಾರ ವಿತರಣೆ ಮಾಡುವುದು ಎಂದಾಗಿತ್ತು.
ಇತಿಹಾಸದಲ್ಲೇ ಈ ಪವಿತ್ರವಾದ ಮಹಾಜಿರ್ ಹಾಗೂ ಅನ್ಸಾರಿಗಳ ಸಹೋದರತೆ ಸಂಬಂಧಗಳ ಬಗ್ಗೆ ಪ್ರವಾದಿಯವರು ﷺ ಬಹಳ ವಿಶೇಷವಾಗಿ ಅಭಿನಂದಿಸಿ ತಿಳಿಸಿದ್ದರು. ಎರಡು ವಿಭಾಗದ ಮಹತ್ವವನ್ನು ತಿಳಿಸುವ ಪವಿತ್ರ ಕುರ್’ಆನಿನ ತೌಬಾ ಅಧ್ಯಾಯದ ನೂರನೇ ಸೂಕ್ತದ ಸಾರವೂ ಈ ರೀತಿಯಾಗಿದೆ. ” ಮಹಾಜಿರ್’ಗಳಿಂದ ಹಾಗೂ ಅನ್ಸಾರುಗಳಿಂದ, ಮೊದಲನೆದಾಗಿ ಇಸ್ಲಾಮ್ ಸ್ವೀಕರಿಸಿದವರು, ಹಾಗೂ ಅವರನ್ನು ಹಿಂಬಾಲಿಸಿದವರು ಯಾರಾಗಿದ್ದರೋ ಅವರನ್ನು ಅಲ್ಲಾಹನು ಸಂಪೂರ್ಣವಾಗಿ ತೃಪ್ತಿಪಟ್ಟಿರುವನು. ಅವರೂ ಕೂಡ ಅವನನ್ನು (ಅಲ್ಲಾಹನನ್ನು) ಸಂಪೂರ್ಣವಾಗಿ ತೃಪ್ತಿ ಪಟ್ಟಿರುವರು. ಅವರಿಗಾಗಿ ಅವನು ಕೆಳಭಾಗದಲ್ಲಿ ಹೊಳೆಗಳು ಹರಿಯುವ ಸ್ವರ್ಗದ ತೋಟಗಳನ್ನು ನಿರ್ಮಿಸಿರುವನು, ಅವರು ಶಾಶ್ವತವಾಗಿ ಸ್ವರ್ಗನಿವಾಸಿಯಾಗಿಯೇ ಇರುವರು. ಅದು ಎಷ್ಟೊಂದು ಉತ್ತಮವಾದ, ಮಹತ್ವವಿರುವ ವಿಜಯ ವಲ್ಲವೇ.”
ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಿದ್ದ ಜನ ಸಮೂಹವನ್ನು, ಆದರ್ಶವೆಂಬ ಒಂದೇ ದಾರದಲ್ಲಿ ಜೊತೆ ಸೇರಿಸಿದ ಸುಂದರವಾದ ಯೋಜನೆಯನ್ನಾಗಿದೆ ನಮಗೆ ಇಲ್ಲಿ ಕಾಣಲು ಸಾಧ್ಯವಾಗುವುದು. ಕೇವಲ ಪರಲೋಕದ ಚಿಂತನೆಯೊಂದಿಗೆ ಮಾತ್ರ, ಕಾರ್ಯಗಳನ್ನು, ಆರಾಧನೆಗಳನ್ನು ಮಾಡುವುದು ಇಸ್ಲಾಮಿನ ಸಂಹಿತೆಯ ಅತೀ ದೊಡ್ಡ ವಿಶೇಷವಾಗಿದೆ. ಅದೇ ರೀತಿಯಾಗಿತ್ತು ಪ್ರವಾದಿಯವರು ﷺ ಸ್ಥಾಪಿಸಿದ ಸಹೋದರತೆಯ ಸಂಬಂಧವೂ ಕೂಡ, ಕುರ್’ಆನಿನ ಸೂಕ್ತಗಳು ಕೂಡ ಅದನ್ನು ತಿಳಿಸಿ ಕೊಟ್ಟಿದೆ.
ಮದೀನಾ ಪ್ರಪಂಚದ ರಾಜಧಾನಿಯಾಗಿ ಬೆಳಗುವುದು ಕೂಡ, ಮೌಲ್ಯಗಳನ್ನು ಹಾಗೂ ಮಾನವೀಯತೆಯನ್ನು ಕಾಳಜಿ ವಹಿಸಿ, ಯಾವುದೇ ಸಮಯದಲ್ಲೂ ನಿಷ್ಠೆಯನ್ನು ಪ್ರಸ್ತುತ ಪಡಿಸುವ ಮೂಲಕವಾಗಿದೆ. ಅದರಲ್ಲಿ ಒಂದು ಉದಾಹರಣೆಯಾಗಿತ್ತು ನಾವೀಗ ತಿಳಿದದ್ದು.
ಸರಿ ಇನ್ನೂ ನಮಗೆ ಮದೀನದ ಇತಿಹಾಸಕ್ಕೆ ಹಿಂತಿರುಗಿ ಬರೋಣ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-180/365
ಮದೀನದ ಆರಂಭಿಕ ದಿನಗಳಲ್ಲಿ ಯಾವುದೇ ಸೂಚನೆಗಳಾಗಲಿ, ವಿಶೇಷವಾಗಿ ನೆನಪಿಸುವ ವ್ಯವಸ್ಥೆಯಾಗಲಿ ಇಲ್ಲದಿದ್ದರೂ ಎಲ್ಲರೂ ಸರಿಯಾದ ಸಮಯಕ್ಕೆ ನಮಾಝ್ ಮಾಡಲು ಮಸ್ಜಿದ್’ಗೆ ತಲುಪಿದ್ದರು. ಆದರೆ ದಿನಗಳು ಕಳೆದಂತೆ, ಬಿಡುವಿಲ್ಲದ ಕೆಲಸದ ಹಾಗೂ ನೆನಪಿಲ್ಲದ ಕಾರಣ ಮಸ್ಜಿದ್’ಗೆ ತಲುಪುವುದು ತಡವಾಗ ತೊಡಗಿತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರವಾದಿಯವರು ﷺ ಎಲ್ಲರನ್ನೂ ಮಸ್ಜಿದ್’ನಬವಿಯಲ್ಲಿ ಸಭೆ ಕರೆದರು.
ನಮಾಝಿನ ಸಮಯ ತಿಳಿಯದೆ ಮರೆತು ಹೋಗುವುದಾಗಿದೆ ಇಲ್ಲಿ ಸಮಸ್ಯೆ ಎಂದು ಬಹಳಷ್ಟು ಜನರು ಅಭಿಪ್ರಾಯ ಪಟ್ಟರು. ಹಾಗಾಗಿ ನಮಾಝಿನ ಸಮಯ ಹತ್ತಿರವಾದಾಗ ನೆನಪಿಸಲು ಅಥವಾ ಮಸ್ಜಿದ್’ಗೆ ಕರೆಸಿಕೊಳ್ಳಲು ಬಹಳಷ್ಟು ಸೂಚನೆಗಳನ್ನು ಸಭೆಯಲ್ಲಿ ತಿಳಿಸಲಾಯಿತು. ಅದರಲ್ಲಿ ಕೆಲವರು ಯಹೂದಿಗಳು ಮಾಡುವ ಹಾಗೆ ನಮಾಝಿನ ಸಮಯ ಹತ್ತಿರವಾದಾಗ ಬೆಂಕಿ ಹಚ್ಚೋಣ ಎಂದು ಅಭಿಪ್ರಾಯ ತಿಳಿಸಿದರೆ, ಇನ್ನೂ ಕೆಲವರು ಗಂಟೆ ಹೊಡಿಯುವ ಮೂಲಕ ನಮಾಝಿನ ಸಮಯವನ್ನು ತಿಳಿಸೋಣ ಎಂದು ತಿಳಿಸಿದರು. ಆದರೆ ಉಮರ್’ರವರು ◌ؓ, ಒಬ್ಬ ವ್ಯಕ್ತಿಯನ್ನು ಎಲ್ಲರ ಬಳಿ ಕಳುಹಿಸಿ ನಮಾಝಿಗೆ ಸಮಯವಾಯಿತು ಎಂದು, ಹೇಳಿ ನೆನಪಿಸೋಣ ಎಂದು ಹೇಳಿದರು.
ಇನ್ನೂ ಬಹಳಷ್ಟು ಚರ್ಚೆಗಳು ನಡೆದರೂ, ಕೊನೆಗೆ ಉಮರ್’ರವರ ◌ؓ ಅಭಿಪ್ರಾಯವನ್ನು ಅಂಗೀಕರಿಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ಅಬ್ದುಲ್ಲಾಹಿಬಿನು ಝೈದ್ ◌ؓ ಮಾತ್ರ ಇನ್ನೂ ಕೂಡ ಬಹಳಷ್ಟು ಆಲೋಚನೆಯಲ್ಲೇ ಮುಳುಗಿದ್ದರು. ಅದೇ ಚಿಂತೆಯಲ್ಲೇ ಮನೆಗೆ ತೆರಳಿ, ಬೇರೆ ಏನಾದರೂ ಪರ್ಯಾಯ ವ್ಯವಸ್ಥೆ ಇದೆಯೇ.? ಎಂದು ಆಲೋಚಿಸುತ್ತಲೇ ಮಲಗಿದರು. ನಿದ್ರೆ ಬಂದ ತಕ್ಷಣವೇ ಅವರಿಗೆ ಒಂದು ಕನಸು ಬಿದ್ದಿತ್ತು, ಅದರಲ್ಲಿ ಅವರು ಹಸಿರು ಉಡುಪೊಂದನ್ನು ತೊಟ್ಟಿದ್ದ ಒಬ್ಬ ವ್ಯಕ್ತಿಯ ಕೈಯಲ್ಲಿದ್ದ ಗಂಟೆಯನ್ನು ಕಂಡು ಅದು ನನಗೆ ನೀಡುತ್ತೀರ.? ಎಂದು ಅಬ್ದುಲ್ಲಾಹಿಬಿನ್ ಝೈದ್ ◌ؓ ಅವರಲ್ಲಿ ಕೇಳಿದಾಗ, ಆ ವ್ಯಕ್ತಿ ಯಾಕೆ ಬೇಕು ಎಂದು ಕೇಳಿದರು. ಅದಕ್ಕೆ ಅಬ್ದುಲ್ಲಾಹಿಬಿನ್ ಝೈದ್ ◌ؓ ಅದು ನಮಗೆ ನಮಾಝ್’ಗೆ ಜನರನ್ನು ಕರೆಯಲು ಎಂದು ಹೇಳಿದರು. ಅದಕ್ಕೆ ಆ ವ್ಯಕ್ತಿ ಅದಕ್ಕಿಂತಲೂ ಉತ್ತಮವಾದ ಸೂಚನೆಯೊಂದನ್ನು ನೀಡುತ್ತೇನೆ ಎಂದು ಹೇಳಿ, ಅಲ್ಲಾಹು ಅಕ್’ಬರ್, ಅಲ್ಲಾಹು ಅಕ್’ಬರ್ ಎಂದು ಅಝಾನಿನ ಹಾಗೂ ಇಖಾಮತ್ತಿನ ಸಾಲುಗಳನ್ನು ತಿಳಿಸಿದರು.
ಬೆಳಿಗ್ಗೆ ನಿದ್ರೆಯಿಂದ ಎಚ್ಚರವಾದ ಬಳಿಕ ಅಬ್ದುಲ್ಲಾಹಿಬಿನ್ ಝೈದ್ ◌ؓ, ತಕ್ಷಣವೇ ಓಡಿ ಪ್ರವಾದಿಯವರ ﷺ ಬಳಿ ಬಂದು, ರಾತ್ರಿ ಕಂಡ ಕನಸನ್ನು ಎಲ್ಲವನ್ನು ವಿವರಿಸಿದರು. ಅದನ್ನು ಕೇಳಿ ಪ್ರವಾದಿಯವರು ﷺ, ನೀವು ಕಂಡ ಕನಸು ಸತ್ಯವಾಗಿದೆ, ಹಾಗಾಗಿ ಅದನ್ನು ನಾವು ಅಂಗೀಕರಿಸುತ್ತೇವೆ ಎಂದು ಹೇಳಿ, ಬಿಲಾಲ್’ರನ್ನು ◌ؓ ಕರೆದು ಕನಸಿನಲ್ಲಿ ಕಂಡ ಸಾಲುಗಳನ್ನು ಸ್ಪಷ್ಟವಾಗಿ ತಿಳಿಸಿರಿ, ಅವರಿಗೆ ಇಂಪಾದ ಧ್ವನಿ ಇದೆ ಎಂದು ಹೇಳಿದರು. ಅಬ್ದುಲ್ಲಾಹಿಬಿನ್ ಝೈದ್ ◌ؓ ನೇರವಾಗಿ ಬಿಲಾಲ್’ರ ◌ؓ ಬಳಿ ಹೋಗಿ ಅವರಿಗೆ ತಾನು ಕನಸಿನಲ್ಲಿ ಕಂಡಿದ್ದ ಸಾಲುಗಳನ್ನು ಸ್ಪಷ್ಟವಾಗಿ ತಿಳಿಸಿ ಕೊಟ್ಟರು. ಅವರು ಕೂಡ ಅದನ್ನು ಅದೇ ರೀತಿ ಹೇಳಿ, ಕಲಿತು ಕೊಂಡರು.
ನಮಾಝಿನ ಸಮಯ ಹತ್ತಿರವಾದಾಗ, ಮಸ್ಜಿದ್’ನಬವಿಯಲ್ಲಿ ಬಿಲಾಲ್’ರ ಸುಂದರ ಧ್ವನಿಗಳು ಮೊಳಗಿತು. ಎಲ್ಲಾ ಮುಸ್ಲಿಮರು ನಮಾಝಿಗಾಗಿ ಮಸ್ಜಿದ್’ನಬವಿಗೆ ತೆರಳಿದರು, ದೂರದಲ್ಲಿ ಈ ಶಬ್ದವನ್ನು ಕೇಳಿದ ಉಮರ್’ರವರು ಕೂಡ ಆಶ್ಚರ್ಯದಿಂದ ಎದ್ದು ನಿಂತು, ತನ್ನ ಧರಿಸಿದ್ದ ಬಟ್ಟೆಯನ್ನು ಸರಿಪಡಿಸಿ ತಕ್ಷಣವೇ ಪ್ರವಾದಿಯವರ ﷺ ಬಳಿ ಓಡಿ ಹೋದರು. ನಂತರ ತಾನೂ ಕೂಡ ರಾತ್ರಿ ಕಂಡಿದ್ದ ಕನಸನ್ನು ವಿವರಿಸುತ್ತಾ, ಅದರಲ್ಲಿ ಹಸಿರು ಬಟ್ಟೆಯನ್ನು ತೊಟ್ಟಿದ್ದ ವ್ಯಕ್ತಿಯೊಬ್ಬರು, ನನ್ನ ಬಳಿ ಬಂದು ಇಂದು ಬಿಲಾಲ್’ರು ಕೂಗಿದ್ದ ◌ؓ ಅಝಾನಿನ ಸಾಲುಗಳನ್ನು ಅವರೂ ಕೂಡ ವಿವರಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Leave a Reply