The biography of Prophet Muhammad – Month 8

Admin February 16, 2023 No Comments

The biography of Prophet Muhammad – Month 8

Mahabba Campaign Part-211/365

ಆತ್ವೀಖ ◌ؓ ಬೀವಿಯವರಿಗೆ ಒಂದು ಕನಸು ಬಿದ್ದಿತು. ಅವರು ಅಬ್ದುಲ್ ಮುತ್ತಲಿಬ್’ರ ಮಗಳು ಹಾಗೂ ಪ್ರವಾದಿಯವರ ﷺ ಅತ್ತೆಯಾಗಿದ್ದರು. ಅವರು ತಮ್ಮ ಸಹೋದರ ಅಬ್ಬಾಸ್’ರನ್ನು ಕರೆದು ತನಗೆ ಬಿದ್ದಿದ್ದ ಕನಸಿಗೆ ಬಗ್ಗೆ ತಿಳಿಸಿದರು. “ನಾನು ನಿನ್ನೆ ರಾತ್ರಿ ಒಂದು ಕನಸನ್ನು ಕಂಡೆನು, ಅದು ತುಂಬಾ ಭಯಾನಕವಾಗಿತ್ತು, ಅದರ ಪರಿಣಾಮ ನಮ್ಮ ಕುಟುಂಬದ ಮೇಲೂ ಪ್ರಭಾವ ಬೀರಬಹುದು ಎಂಬ ಭಯ ಕೂಡ ಕಾಡಿತ್ತು, ಇದೇನಾದರೂ ಸತ್ಯನಿಷೇದಿಗಳಾದ ಖುರೈಷಿಗಳಿಗೆ ತಿಳಿದರೆ, ಖಂಡಿತ ಅವರು ನಮಗೆ ತೊಂದರೆ ಉಂಟುಮಾಡುವ ಸಾಧ್ಯತೆ ಕೂಡ ಇದೆ. ಹಾಗಾಗಿ ಇದನ್ನು ಯಾರಲ್ಲೂ ತಿಳಿಸಬಾರದು ಎಂದು ಪ್ರಮಾಣ ಮಾಡಬೇಕು” ಎಂದು ಹೇಳಿದರು.

ಅದಕ್ಕೆ ಅಬ್ಬಾಸ್’ರು ನಾನು ಯಾರಲ್ಲೂ ಹೇಳುವುದಿಲ್ಲ ಎಂದು ಮಾತು ಕೊಟ್ಟರು. ನಂತರ ಆತ್ವೀಕ ತಾನು ಕಂಡ ಕನಸನ್ನು ವಿವರಿಸಲು ಆರಂಭಿಸಿದರು. “ಒಬ್ಬ ಯಾತ್ರಿಕ ತನ್ನ ಒಂಟೆಯ ಮೇಲೆ, ಅಬ್’ತ್ವಹಿಲ್ ಎಂಬಲ್ಲಿ (ಮಕ್ಕಾದ ಬಳಿ ಇರುವ ಒಂದು ಪ್ರದೇಶ) ಪ್ರತ್ಯಕ್ಷವಾಗಿ, ಓ ವಂಚಕರೇ ನೀವು ಮೂರು ದಿನದ ನಂತರ ನಿಮ್ಮ ಅಂತ್ಯಭೂಮಿಗೆ ಹೊರಡಲಿದ್ದೀರಿ.. ಎಂದು ಕೂಗಿ ಹೇಳಿದ್ದೆ ತಡ, ಶಬ್ದ ಕೇಳಿದ ಕಡೆಗೆ ಎಲ್ಲರೂ ಓಡಿ ಬಂದರು. ಅಷ್ಟರಲ್ಲೇ ಆ ವ್ಯಕ್ತಿ ಮಸ್ಜಿದ್’ನ ಒಳಗೆ ಹೋಗಿ, ಪುನಃ ಅದೇ ರೀತಿ ಕೂಗಿ ಹೇಳಿದರು. ನಂತರ ಆ ವ್ಯಕ್ತಿ ಅಬೂಖುಬೈಸ್ ಬೆಟ್ಟದ ಮೇಲೆ ಹತ್ತಿ, ಅಲ್ಲಿಯೂ ಕೂಡ ಅದೇ ರೀತಿ ಪುನಃ ಕೂಗಿ ಹೇಳಿದ ನಂತರ ಅಲ್ಲಿದ್ದ ಒಂದು ದೊಡ್ಡ ಬಂಡೆಯೊಂದನ್ನು ಉರುಳಿಸಿ ಕೆಳಗೆ ತಳ್ಳಿ ಬಿಟ್ಟರು. ಆ ಬಂಡೆ ಕೆಳಗೆ ಬಿದ್ದು ಹೊಡೆದು ಛಿದ್ರ ಛಿದ್ರವಾಗಿ ಮಕ್ಕಾದ ಎಲ್ಲಾ ಮನೆಯ ಬಳಿಗೆ ಹೋಗಿ ತಲುಪಿತು.”

ಅಬ್ಬಾಸ್’ರು ಬಹಳ ಗಂಭೀರವಾಗಿ ಇದನ್ನು ಕೇಳುತ್ತಿದ್ದರು. ಅವರು ಸ್ವಲ್ಪ ಸಮಯ ದೀರ್ಘವಾದ ಆಲೋಚನೆ ನಡೆಸಿ, ಕೊನೆಗೆ ಸಹೋದರಿಯಲ್ಲಿ ಅಲ್ಲಾಹನ ಮೇಲಾಣೆ ಇದೊಂದು ಬಹಳ ವಿಚಿತ್ರವಾದ ಕನಸೇ ಆಗಿದೆ.! ನೀನು ಅದನ್ನು ಯಾರಲ್ಲೂ ಹೇಳಬೇಡ ರಹಸ್ಯವಾಗಿಯೇ ಇರಲಿ ಎಂದು ಹೇಳಿ ಅಲ್ಲಿಂದ ಹೊರಟರು.
ದಾರಿ ಮಧ್ಯೆ ಅಬ್ಬಾಸ್’ರು ವಲೀದ್ ಬಿನ್ ಉಖ್’ಬರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಬಹಳ ಹತ್ತಿರದ ಗೆಳೆಯರಾಗಿದ್ದರು. ಯಾರಲ್ಲೂ ಹೇಳಬಾರದು ಎಂಬ ಪ್ರಮಾಣದೊಂದಿಗೆ ಕನಸಿನ ಬಗ್ಗೆ ಅಬ್ಬಾಸ್’ರು ವಲೀದ್’ನಲ್ಲಿ ಹೇಳಿದರು. ವಲೀದ್’ನ ಮಗ ಉತ್’ಬನಲ್ಲಿ ಹೇಳಿದನು, ಹೀಗೆ ಕಿವಿಯಿಂದ ಕಿವಿಗೆ ತಲುಪಿ ಈ ವಿಷಯ ಮಕ್ಕಾದಲ್ಲಿ ಸಂಪೂರ್ಣವಾಗಿ ಹರಡಿತು. ಇದರ ಬಗ್ಗೆ ಅಬ್ಬಾಸ್’ರೆ ಹೇಳುವುದು ಕಾಣಬಹುದು, ನಾನು ಮುಂಜಾನೆ ಕಅಬಾ ಪ್ರದಕ್ಷಿಣೆಗೆಂದು ಹೋಗಿದ್ದಾಗ, ಖುರೈಷಿಗಳ ಗುಂಪೊಂದು ಈ ಕನಸಿನ ಬಗ್ಗೆ ಮಾತಾಡುತ್ತಿದ್ದರು. ಅವರ ಜೊತೆಯಲ್ಲಿ ಅಬುಜಹಲ್ ಕೂಡ ಇದ್ದನು. ಕಅಬಾ ತವಾಫ್ ಮುಗಿದ ತಕ್ಷಣ ನನ್ನ ಬಳಿ ಬರಬೇಕು ಎಂದು ಅವನು ಹೇಳಿದ್ದನು. ಅದೇ ರೀತಿ ನಾನು ಕಅಬಾದ ತ್ವವಾಫ್ ಮುಗಿದ ತಕ್ಷಣ ನಾನು ಅಬುಜಹಲ್’ನ ಬಳಿ ಹೋದೆನು. ತಕ್ಷಣವೇ ಆ ದುಷ್ಟ, ಓ ಅಬ್ದುಲ್ ಮುತ್ತಲಿಬ್’ನ ಮಗನೇ ನಿಮ್ಮಲ್ಲಿ ಯಾವಾಗ ಮಹಿಳೆ ಪ್ರವಾದಿ ಬಂದದ್ದು.? ಎಂದು ಲೇವಡಿ ಮಾಡಿದನು. ಅದಕ್ಕೆ ನಾನು ಅವನಲ್ಲಿ ವಿಷಯ ಏನೆಂದು ಕೇಳಿದಾಗ, ಅತ್ವೀಕರಿಗೆ ಕನಸೆಲ್ಲಾ ಬೀಳುತ್ತಂತೆ ಹೌದಾ.? ಅಥವಾ ನಿಜವಾಗಿಯೂ ಕನಸು ಬಿದ್ದಿಲ್ವಾ.? ಎಂದು ಪುನಃ ಗೇಲಿ ಮಾಡಿದನು. ನಾನು ಎಷ್ಟೇ ಅದನ್ನು ವಿರೋಧಿಸಿದರೂ ಅಬುಜಹಲ್ ಮಾತ್ರ “ನಿಮ್ಮಲ್ಲಿ ಪುರುಷರು ಪ್ರವಾದಿಯಾಗಿರುವುದು ಸಾಕಾಗದಕ್ಕೆ ಈಗ ಮಹಿಳೆಯರು ಕೂಡ ಪ್ರವಾದಿಯಾಗಲು ಪ್ರಯತ್ನ ಮಾಡುತ್ತಿದ್ದಾರೆ ಅಲ್ವಾ.? ಮೂರು ದಿನದ ನಂತರ ಅಂತ್ಯಭೂಮಿಗೆ ಹೋಗಿರಿ, ಎಂದಲ್ವಾ ಹೇಳಿದ್ದು.? ಮೂರು ದಿನ ಕಳೆಯಲಿ ಅಲ್ಲಿಯ ವರೆಗೆ ಕಾಯುತ್ತೇವೆ, ನಂತರ ಏನು ಆಗದಿದ್ದರೆ.? ಅರಬಿಗಳ ನಡುವೆ ಅತೀ ಹೆಚ್ಚು ಸುಳ್ಳು ಹೇಳುವ ವ್ಯಕ್ತಿಗಳು ನೀವೆ ಎಂದು ನಾವು ಘೋಷಣೆ ಮಾಡುತ್ತೇವೆ. ಇದೆಂಥ ಕರ್ಮ, ಪುರುಷರು ಏನೇನೋ ಹೇಳಿ ದ್ದು ಸಾಕಾಗದ್ದಕ್ಕೆ ಈಗ ಮಹಿಳೆಯರು ಕೂಡ ಏನೇನೋ ಹೇಳಲು ಬರುತ್ತಿದ್ದಾರೆ. ಎಂದು ಅದನ್ನು ಹೇಳಿ ಗೇಲಿ ಮಾಡುತ್ತಲೇ ಇದ್ದನು.

ನಂತರ ಮಾತು ಮುಂದುವರಿಸುತ್ತಾ, ನಾವೇನು ಕಡಿಮೆ ಮಹತ್ವ ಇರುವ ವ್ಯಕ್ತಿಗಳಲ್ಲ, ನೀವುಗಳು ಹಜ್ಜ್ ಯಾತ್ರಿಕರಿಗೆ ಪಾನಿಯ (ಸಿಖಾಯ) ನೀಡುವ ಜವಾಬ್ದಾರಿ ನಮಗೆ ಬೇಕೆಂದು ಹೇಳಿದಾಗ ನಾವು ಅದನ್ನು ನಿಮಗೆ ನೀಡಿದೆವು, ನಂತರ ನೀವುಗಳು ಕಅಬ ಪರಿಪಾಲನೆ (ಹಿಜಾಬತ್ತ್) ನಾವೇ ಮಾಡುತ್ತೇವೆ ಎಂದು ಹೇಳಿದಾಗಲೂ ಅದನ್ನೂ ಕೂಡ ನಿಮಗೆ ನಾವು ಕೊಟ್ಟಿದ್ದೇವೆ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-212/365

ಆಮೇಲೆ ನೀವು ಹೇಳಿದ್ರಿ, ಸಮಾಲೋಚನೆಯ (ರಿಫಾದಃ) ನಾಯಕತ್ವ ನಮಗೆ ಬೇಕೆಂದು ಅದಕ್ಕೂ ನಾವು ಅನುಮತಿ ನೀಡಿದೆವು. ಅತಿಥಿ ಸತ್ಕಾರದ ಭಕ್ಷ್ಯಗಳನ್ನು ಸಂಗ್ರಹಿಸುವ ಅನುಮತಿಯನ್ನೂ ನಿಮಗೆಯೇ ನೀಡಿದೆವು. ನೀವು ಅತಿಥಿಗಳಿಗೆ ಸತ್ಕಾರ ಮಾಡಿದಿರಿ, ನಾವು ಕೂಡ ಮಾಡಿದೆವು. ನಾವು ಪರಸ್ಪರ ಪಂತ ಕಟ್ಟಿದ ಕುದುರೆಗಳಂತೆ ಸ್ಪರ್ಧೆ ಮಾಡಿ ಮುಂದೆವರಿದೆವು. ಇದರ ನಡುವೆ ನಿಮ್ಮ ಕುಲದಿಂದ ಒಬ್ಬರು ಪ್ರವಾದಿಯವರು ಉದಯಿಸಿ ಬಂದರು, ಈಗ ಇನ್ನೊಂದು ಮಹಿಳೆ ಪ್ರವಾದಿ ಕೂಡ ನಿಮ್ಮ ಕುಲದಿಂದ ಬರುವುದು ಬಾಕಿಯಿತ್ತು. ನಿಮ್ಮ ಕುಲದ ಹಾಗೆ ಹಸಿ ಹಸಿ ಸುಳ್ಳು ಹೇಳುವ ಬೇರೊಂದು ಸಮೂಹ ಇರಲಿಕ್ಕಿಲ್ಲ.

ಅಬೂಜಹಲಿನ ಅಪವಾದಗಳನ್ನು ಅಬ್ಬಾಸ್’ರು ಸಮಾಧಾನದಿಂದ, ಕೇಳುತ್ತಾ ನಿಂತಿದ್ದರು. ಇದರ ಬಗ್ಗೆ ಅಬ್ಬಾಸ್’ರು ಹೇಳುವುದು ಕಾಣಬಹುದು, “ಆತ್ವಿಖರ ಕನಸನ್ನು ಅವರು ನಿರಾಕರಿಸಿದರೂ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ”

ಒಂದು ಉಲ್ಲೇಖದ ಪ್ರಕಾರ, ಅಬ್ಬಾಸ್’ರು ಅವನ ಮಾತುಗಳನ್ನು ಕೇಳಿ ಸಹಿಸಲಾಗದೆ “ಲೋ ಪುಕ್ಕಳ, ಸಾಕು ನಿಲ್ಲಿಸು, ನೀನೂ ನಿನ್ನ ಕುಟುಂಬದವರು ಸುಳ್ಳು ಹೇಳುವವರು” ಎಂದು ಹೇಳಿದಾಗ, ಸುತ್ತಮುತ್ತಲಿನಲ್ಲಿದ್ದ ಜನರು ಅಬ್ಬಾಸ್’ರಲ್ಲಿ, ನೀವು ಅವಿವೇಕಿ ಅಥವಾ ಮೂರ್ಖ ಅಲ್ಲವಲ್ಲ, ನೀವು ಒಳ್ಳೆಯ ಪಕ್ವತೆ ಇರುವ ವ್ಯಕ್ತಿಯಾಗಿರುವಾಗ, ನೀವು ಯಾಕೆ ಅವರಿಗೆ ಉತ್ತರ ಕೊಡಬೇಕು ಎಂದು ಸಮಾಧಾನ ಪಡಿಸಿದರು.

ಅಬ್ಬಾಸ್ ಹಾಗೂ ಅಬೂಜಹಲ್’ನ ನಡುವೆ ನಡೆದ ವಾಗ್ವಾದ ಅಬ್ದುಲ್ ಮುತ್ತಲಿಬರ ಕುಟುಂಬಕ್ಕೆ ತಿಳಿಯಿತು. ಅಬ್ಬಾಸ್’ರ ಪ್ರತಿಕ್ರಿಯೆ ಆತ್ವೀಕರಿಗೆ ಹಿಡಿಸಿರಲಿಲ್ಲ ಹಾಗಾಗಿ ಸಂಜೆಯ ವೇಳೆಯಲ್ಲಿ, ಕುಟುಂಬದ ಮಹಿಳೆಯರು ಸೇರಿ ಅಬ್ಬಾಸ್’ರನ್ನು ಭೇಟಿಯಾಗಿ, “ಆ ದುಷ್ಟ ನಮ್ಮ ಕುಟುಂಬದ ಪುರುಷರನ್ನು ಬಹಳ ಹೀನಾಯವಾಗಿ ಅವಮಾನ ಮಾಡಿದ್ದಾನೆ. ಅಷ್ಟೇ ಅಲ್ಲದೆ ಮಹಿಳೆಯರಿಗೂ ಕೂಡ ಅವಮಾನ ಮಾಡಿದ್ದಾನೆ, ಆದರೂ ಯಾಕೆ ನೀವು ಏನೂ ಮಾತಾಡದೆ ಸುಮ್ಮನೆ ನಿಂತದ್ದು.? ಇದು ನಮಗೆ ಯಾರಿಗೂ ಇಷ್ಟವಾಗಿಲ್ಲ. ಈ ಮಾತನ್ನು ಕೇಳಿ ಅಬ್ಬಾಸ್’ರಿಗೆ ಬಹಳಷ್ಟು ಮುಜುಗರ ಆಯಿತು, ಕೊನೆಗೆ ಅಬ್ಬಾಸ್’ರು ಅಲ್ಲಾಹನಾಣೆ ಇನ್ನೇನಾದರೂ ಅವನು ಒಂದು ಮಾತು ಹೇಳಿದರೂ ಖಂಡಿತ ಅವನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಅಬೂಜಹಲ್’ನಲ್ಲಿ ಮೃದುವಾಗಿ ವರ್ತಿಸಿದ್ದು, ಅಬ್ಬಾಸ್’ರಿಗೆ ಬಹಳಷ್ಟು ಬೇಸರ ತಂದಿತ್ತು. ಕನಸು ಬಿದ್ದ ಮೂರನೇ ದಿನ, ಅವರು ಮುಂಜಾನೆ ಬೇಗನೆ ಎದ್ದು ಮಸ್ಜಿದ್’ನ ಕಡೆಗೆ ಹೊರಟರು. ಇವತ್ತು ಏನೇ ಆದರೂ ಅಬುಜಹಲ್’ಗೆ ಒಂದು ಗತಿ ಕಾಣಿಸಲೇ ಬೇಕು ಎಂಬ ಉದ್ದೇಶದಿಂದಾಗಿತ್ತು ಹೊರಟಿದ್ದು. ಅಬ್ಬಾಸ್’ರನ್ನು ಕಂಡ ತಕ್ಷಣ ಅಬುಜಹಲ್ ಮಸ್ಜಿದಿನ ಬಾಗಿಲಿನಿಂದ ಜಿಗಿದು ಹೊರಗೆ ಹಾರಿದರು. ಅದನ್ನು ಕಂಡು ಅಬ್ಬಾಸ್’ರು, ಈತನಿಗೆ ಏನಾಯಿತು.? ಯಾಕೆ ಈ ರೀತಿ ವರ್ತಿಸುತ್ತಿದ್ದಾನೆ.? ನನ್ನನ್ನು ಕಂಡು ಹೆದರಿ ಓಡಿ ಹೋಗುತ್ತಿದ್ದೀನಾ? ಎಂದು ಆಲೋಚಿಸುತ್ತಿರುವಾಗ, ಒಂದು ಶಬ್ದ ಕೇಳಲು ಸಾಧ್ಯವಾಯಿತು.

ಅದು ಳಂಳಮುಲ್ ಗಿಫಾರಿ ಎಂಬ ವ್ಯಕ್ತಿಯು ಅಬ್’ತ್ವಹಿಲ್ ಎಂಬ ಒಂಟೆಯ ಮೇಲೆ ಕುಳಿತು ಏನನ್ನೋ ಕೂಗಿ ಹೇಳುತ್ತಿರುವ ಶಬ್ದವಾಗಿತ್ತು. ಆತನು ತನ್ನ ಒಂಟೆಯನ್ನು ತಿರುಗಿ ನಿಲ್ಲಿಸಿದ್ದನು, ಆ ಒಂಟೆಯ ಮೂಗು ಹಾಗೂ ಕಿವಿಯು ಕತ್ತರಿಸಿದ ರೀತಿಯಲ್ಲಿತ್ತು. ಅವನ ಬಟ್ಟೆಯ ಮುಂಭಾಗ ಹಾಗೂ ಹಿಂಬಾಗವು ಕೂಡ ಹರಿದಿತ್ತು. ಅವನು ಗಡಸು ಧ್ವನಿಯಲ್ಲಿ “ಓ ಖುರೈಷಿಗಳೇ, ಅಬೂ ಸೂಫಿಯಾನ್ ನಾಯಕತ್ವ ನೀಡುತ್ತಿರುವ ವ್ಯಾಪಾರ ಸಂಘವನ್ನು, ಬಹಳ ಬೇಗನೆ ಕರಿಸಿಕೊಳ್ಳಿ, ನಿಮ್ಮ ಸರಕುಗಳು ಹಾಗೂ ಸಂಪತ್ತುಗಳನ್ನು, ಮುಹಮ್ಮದ್’ರು ಹಾಗೂ ಅವರ ಅನುಯಾಯಿಗಳು ದಾರಿಯಲ್ಲಿ ತಡೆದು ನಿಲ್ಲಿಸಲು ತಯಾರಾಗಿದ್ದಾರೆ. ಅದನ್ನು ಪುನಃ ಹಿಂತಿರುಗಿ ಪಡೆಯಬಹುದು ಎಂದು ಅನಿಸುತ್ತಿಲ್ಲ, ಹಾಗೆ ಆದಲ್ಲಿ ಎಲ್ಲವೂ ನಮ್ಮಿಂದ ಕೈ ತಪ್ಪಿ ಹೋಗುತ್ತದೆ, ಹಾಗಾಗಿ ಅತೀ ಶೀಘ್ರದಲ್ಲೇ ಅವರಿಗೆ ಸಹಾಯ ಮಾಡಲು ಹೋಗಿರಿ.” ಎಂದು ಕೂಗಿ ಹೇಳಿದರು.

ಈ ಸುದ್ದಿಯೂ ಕಾಲ್ಗಿಚ್ಚಿನಂತೆ ಮಕ್ಕಾದಲ್ಲಿ ಸಂಪೂರ್ಣವಾಗಿ ಹರಡಿತು. ಆ ಸುದ್ದಿ ಕೇಳಿದ ಎಲ್ಲರೂ ದಿಗ್’ಭ್ರಾಂತರಾದರು, ಅಬುಜಹಲ್ ಹಾಗೂ ಅಬ್ಬಾಸ್’ರು ವ್ಯಾಪಾರ ಸಂಘವನ್ನು ಹೇಗೆ ಬಿಡಿಸಿಕೊಳ್ಳುವುದು ಎಂಬ ಚಿಂತೆಯಲ್ಲಿ ಮಗ್ನರಾದರು. ಯಾಕೆಂದರೆ ಸಂಪೂರ್ಣ ಮಕ್ಕಾ ನಿವಾಸಿಗಳ ದಿನನಿತ್ಯ ಬಳಕೆಯ ವಸ್ತುಗಳಾನ್ನಾಗಿತ್ತು ಪ್ರವಾದಿಯವರು ನಿರ್ಬಂಧಿಸಲು ಹೋಗುತ್ತಿದ್ದದ್ದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-213/365

ಅಬೂಸುಫಿಯಾನ್ ಮೊದಲೇ ಉಶೈರ ಬಿಟ್ಟು ಹೋದ ಕಾರಣದಿಂದಾಗಿತ್ತು ಶಾಮಿಗೆ ಹೋಗುತ್ತಿದ್ದ ಯಾತ್ರೆಯಲ್ಲಿ ಅವರು ರಕ್ಷೆ ಹೊಂದಿದ್ದು. ಮಕ್ಕಾದಿಂದ ಬಂದಿದ್ದ ಖಾಫಿಲ ಶಾಮಿಗೆ ತಲುಪಿದ ನಂತರ, ಬಹಳಷ್ಟು ಸರಕುಗಳನ್ನು ಶೇಖರಣೆ ಮಾಡಿಕೊಂಡರು, ಈ ಹತ್ತಿರದ ಕಾಲದಲ್ಲಿ ಖರೀದಿ ಮಾಡಿದಕ್ಕಿಂತಲೂ ಅಧಿಕ ಸರಕುಗಳನ್ನು ಖರೀದಿಸಿದರು. ರೇಷ್ಮೆ, ಸುಗಂಧ ದ್ರವ್ಯ ಹಾಗೂ ಇತರ ಕುತೂಹಲಕಾರಿ ವಸ್ತುಗಳು ಕೂಡ ಅದರಲ್ಲಿ ಇದ್ದವು.

ಅಬೂಸುಫಿಯಾನ್ ಯಹೂದಿಗಯಾದ ಒಬ್ಬ ಮನುಷ್ಯನನ್ನು ಭೇಟಿಯಾಗಿ, ಪ್ರವಾದಿಯವರು ﷺ ಹಾಗೂ ಅವರ ಅನುಚರರು ನಡೆಸುತ್ತಿರುವ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡು, ಏನೇ ಆದರೂ ಹಿಂತಿರುಗಿ ವಾಪಸು ಹೋಗಲೇ ಬೇಕು ಎಂಬ ತೀರ್ಮಾನಕ್ಕೆ ಬಂದರು. ಶಾಮಿಗೆ ಹೋಗುತ್ತಿದ್ದಾಗ, ಅತೀ ವೇಗದಲ್ಲಿ ಚಲಿಸುತ್ತಿದ್ದ ಒಂಟೆಗಳು, ಬಹಳಷ್ಟು ಸರಕುಗಳು ಇರುವುದರಿಂದ ನಿಧಾನವಾಗಿ ಆಗಿತ್ತು ಚಲಿಸುತ್ತಿದ್ದದ್ದು. ಅಬೂಸುಫಿಯಾನ್ ದಾರಿ ಮಧ್ಯೆ ಸಿಗುತ್ತಿದ್ದ ಪ್ರತಿಯೊಬ್ಬ ಯಾತ್ರಿಕನಲ್ಲೂ, ಪ್ರವಾದಿಯವರ ﷺ ಕಾರ್ಯಾಚರಣೆಯ ವಿಷಯವನ್ನು ಕೇಳಿ ತಿಳಿಯುತ್ತಿದ್ದರು. ಹಿಜಾಝ್’ಗೆ ತಲುಪುವವರೆಗೂ ಅವರು ಇಡುತ್ತಿದ್ದ ಒಂದೊಂದು ಹೆಜ್ಜೆಗೆ ಅವರ ಎದೆ ಬಡಿತ ಜಾಸ್ತಿ ಆಗುತ್ತಲೇ ಇತ್ತು.

ಶಾಮಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ತೋರಿಸುತ್ತಿದ್ದದ್ದು ಗಿಫಾರ್ ಜನಾಂಗದ ಳಂಳಂ ಆಗಿತ್ತು. ಅವರನ್ನು ಇಪ್ಪತ್ತು ಮಿಸ್’ಖಾಲಿಗೆ ದಾರಿ ತೋರಿಸಲೆಂದು ಕರೆದು ತರಲಾಗಿತ್ತು. ಅಬೂಸುಫಿಯಾನ್ ಅವರನ್ನು ಕರೆದು, ನೀವು ಆದಷ್ಟು ಬೇಗ ಮಕ್ಕಾಗೆ ತೆರಳಬೇಕು. ನಮ್ಮ ವ್ಯಾಪಾರ ಸಂಘವನ್ನು ಮುಹಮ್ಮದ್ ﷺ ಹಾಗೂ ಅವರ ಅನುಯಾಯಿಗಳು ತಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಅವರಿಗೆ ತಿಳಿಸಬೇಕು. ಖುರೈಷಿಗಳನ್ನು ಪ್ರಚೋದಿಸಲು ಯಾವ ತಂತ್ರ ಬೇಕಿದ್ದರೂ ಪ್ರಯೋಗಿಸಬಹುದು. ಮಕ್ಕಾ ನಿವಾಸಿಗಳ ಸಂಪತ್ತುಗಳು ಅಪಾಯದಲ್ಲಿದೆ ಎಂದು ಅವರನ್ನು ಹೆದರಿಸಬೇಕು ಎಂದು ಹೇಳಿ ಕಳುಹಿಸಿದರು. ಈ ಕಾರಣದಿಂದ ಆಗಿತ್ತು ಳಂಳಂ ಮಕ್ಕಾ ನಗರಕ್ಕೆ ಬಂದು, ಕೂಗಿ ಎಲ್ಲರನ್ನೂ ಒಟ್ಟು ಗೂಡಿಸಿ, ಅಪಾಯದ ಸೂಚನೆಯನ್ನು ಕೂಗಿ ಕೂಗಿ ಹೇಳಿದ್ದು.

ಮಕ್ಕಾದ ಎಲ್ಲಾ ನಿವಾಸಿಗಳೂ ಕೂಡ ವಿಷಯ ತಿಳಿದು ಚಡಪಡಿಸಿದರು. ಯಾಕೆಂದರೆ ಮಕ್ಕಾದ ಬಹುತೇಕ ಜನರ ಸಂಪತ್ತು ಈ ಖಾಫಿಲದಲ್ಲಿ ಅಡಗಿತ್ತು. ಬಹಳ ಎಚ್ಚರಿಕೆಯಿಂದ ಮುಂದೆ ಸಾಗುತ್ತಿದ್ದ ಅಬೂಸುಫಿಯಾನ್ ಬದರ್ ಎಂಬ ಸ್ಥಳಕ್ಕೆ ತಲುಪಿದರು. ಅಲ್ಲಿಂದ ಜನ ನಿಬಿಡ ಪ್ರದೇಶದ ಮೂಲಕ ಮುಂದೆ ಸಾಗಿ, ಹೌರಾನ್ ಎಂಬ ಸ್ಥಳದಲ್ಲಿ, ಜುಹೈನ ಜನಾಂಗದ ಕಶ್’ದ್ ಎಂಬ ವಯಸ್ಸಾದ ವ್ಯಕ್ತಿಯನ್ನು ಭೇಟಿಯಾಗಿ, ಮುಹಮ್ಮದ್ ಪ್ರವಾದಿಯವರ ﷺ ಗೂಢಚಾರಿಗಳು ಇಲ್ಲಿಗೆ ಬಂದಿದ್ರಾ.? ಎಂದು ಕೇಳಿದರು, ಅವರು ಇಲ್ವಲ್ಲಾ, ಯಾರೂ ಕೂಡ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು. ವಾಸ್ತವದಲ್ಲಿ ಮುಸ್ಲಿಂ ಗೂಢಚಾರಿಗಳು ಅವರ ಅತಿಥಿಯಾಗಿ ಅಲ್ಲೇ ತಂಗಿದ್ದರು. ಅಬೂಸುಫಿಯಾನ್ ಅಲ್ಲಿಂದ ಸ್ವಲ್ಪ ಮುಂದೆ ಹೋಗಿ, ಮಜ್’ದೀ ಬಿನ್ ಅಂರ್ ಎಂಬ ವ್ಯಕ್ತಿಯನ್ನು ಭೇಟಿಯಾಗಿ ಅವರಲ್ಲೂ ಕೂಡ ಈ ದಾರಿಯಲ್ಲಿ ಯಾರಾದರು ಹೋಗಿರುವುದು ನೋಡಿದ್ದೀರಾ.? ಎಂದು ಕೇಳಿದರು. ಅವರು ಖುರೈಷಿಗಳು ಹಾಗೂ ಮುಸ್ಲಿಮರಲ್ಲಿ ಸಮಾನ ರೀತಿಯಲ್ಲಿ ಮೈತ್ರಿ ಮಾಡಿಕೊಂಡಿದ್ದ ವ್ಯಕ್ತಿ ಆಗಿದ್ದರು. ಅವರು ಈ ದಾರಿಯಲ್ಲಿ ಅನುಮಾನಾಸ್ಪದವಾಗಿ ಯಾರೂ ಹೋಗುವುದನ್ನು ಕಂಡಿಲ್ಲ ಎಂದು ಹೇಳಿದರು. ಇಲ್ಲಿಂದ ಮದೀನದ ನಡುವೆ ಯಾವುದೇ ಶತ್ರುಗಳು ನಿಮಗೆ ಸಿಗಲಿಕಿಲ್ಲ. ಹಾಗೆ ಏನಾದರೂ ಇದ್ದಿದ್ದರೆ ನಾವು ನಿಮ್ಮಿಂದ ಮುಚ್ಚಿ ಇಡುತ್ತಿರಲಿಲ್ಲ. ಆದರೆ ಎರಡು ವಾಹನ ಯಾತ್ರಿಕರು, ಆ ಬಾವಿಯ ಬಳಿ ಹಿಂದೆ ಒಂಟೆಯನ್ನು ನಿಲ್ಲಿಸಿ ನೀರು ತೆಗೆದಿದ್ದರು, ಆಮೇಲೆ ಅಲ್ಲಿಂದ ಹೊರಟು ಹೋದರು, ಎಂದು ಹೇಳಿ ಆ ಬಾವಿ ಇರುವ ಸ್ಥಳವನ್ನೂ ತೋರಿಸಿ ಕೊಟ್ಟರು.

ವಾಸ್ತವದಲ್ಲಿ ಆ ಬಾವಿಯ ಬಳಿ ತಲುಪಿದ್ದು ಮುಸ್ಲಿಂ ಗೂಢಚಾರಿಗಳಾದ ಬಸ್,ಬಸ್ ಬಿನ್ ಅಂರ್ ಹಾಗೂ ಅದಿಯ್ಯ್ ಬಿನ್ ಅಬೀಸ್ವಅಬಾ ಆಗಿದ್ದರು. ಅವರು ಮಕ್ಕಾದ ಖಾಫಿಲ ತಂಡವನ್ನು ಹುಡುಕುತ್ತಾ ಈ ಬಾವಿಯ ಬಳಿ ಬಂದು ತಲುಪಿದ್ದರು. ಆ ಸಂದರ್ಭದಲ್ಲಿ ಮತ್ತೊಂದು ಕಡೆಯಲ್ಲಿ ಇಬ್ಬರು ಮಹಿಳೆಯರು ಮಾತಾಡುತ್ತಿದ್ದರು. ಒಬ್ಬಳು ಇನ್ನೊಬ್ಬಳಿಂದ ಸಿಗಬೇಕಿದ್ದ ಸಾಲವನ್ನು ಕೇಳುತ್ತಿದ್ದಳು. ಅದಕ್ಕೆ ಅವಳು ನಾಳೆ ಈ ದಾರಿಯಲ್ಲಿ ಖಾಫಿಲ ತಂಡವು ಬರಲಿದೆ, ಆಗ ಅವರಿಗೆ ಬೇಕಾದ ಸೇವೆಗಳನ್ನು ಮಾಡಿ ಅದರಲ್ಲಿ ಸಿಕ್ಕಿದ ಮೊತ್ತದಿಂದ ನಿನ್ನ ಸಾಲವನ್ನು ಕೊಡುತ್ತೇನೆ ಎಂದು ಹೇಳಿದಳು. ಈ ಮಾತನ್ನು ಸ್ವಾಹಾಬಿಗಳು ಕೇಳಿದ್ದೆ ತಡ ತಕ್ಷಣವೇ ಪ್ರವಾದಿಯವರ ﷺ ಬಳಿ ಓಡಿ ಹೋದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-214/365

ಮಜೀದಿಬಿನ್ ಅಂರ್ ತೋರಿಸಿದ ಬಾವಿಯ ಬಳಿ ಅಬೂಸುಫಿಯಾನ್ ಹೋದರು. ಅಲ್ಲಿದ್ದ ಒಂಟೆಯ ಸೆಗಣಿಯನ್ನು ತೆಗೆದು ಪರೀಕ್ಷಿಸಿದಾಗ, ಅದರಲ್ಲಿ ಖರ್ಜುರದ ಬೀಜ ಇರುವುದನ್ನು ಕಂಡು, ಅದು ಮದೀನದಲ್ಲಿ ಜಾನುವಾರುಗಳಿಗೆ ನೀಡುವ ಮೇವು ಎಂದು ಅರ್ಥ ಮಾಡಿಕೊಂಡರು. ಹಾಗಿದ್ದರೆ ಇಲ್ಲಿ ಬಂದಿದ್ದದ್ದು ಮುಹಮ್ಮದ್ ಪ್ರವಾದಿಯವರ ﷺ ಗೂಢಚಾರಿಗಳೇ ಆಗಿದ್ದರು ಎನ್ನುವ ವಿಷಯವನ್ನು ಅಬೂಸುಫಿಯಾನ್ ಖಚಿತಪಡಿಸಿದರು. ಇನ್ನೂ ಖಾಫಿಲ ಸರಕುಗಳನ್ನು ಈ ದಾರಿಯಲ್ಲಿ ಕೊಂಡೋಗುವುದು ಅಪಾಯ ಹಾಗಾಗಿ, ಬೇರೆ ದಾರಿಯಲ್ಲಿ ಸರಕುಗಳನ್ನು ಕೊಂಡೋಗಬೇಕು ಎಂದು, ಕೆಂಪು ಸಮುದ್ರದ ದಡದ ಮೂಲಕ ತಮ್ಮ ಯಾತ್ರೆಯನ್ನು ಮುಂದುವರಿಸಿದರು. ಮುಸ್ಲಿಮರ ಕಣ್ಣಿಗೆ ಬೀಳದೆ ಖುರೈಷಿಗಳ ಖಾಫಿಲ ಮಕ್ಕಾವನ್ನು ತಲುಪಿತು.

ಖಾಫಿಲ ಮಕ್ಕಾಗೆ ತಲುಪುದಕ್ಕೂ ಮುನ್ನ ಖುರೈಷಿಗಳು ಸೈನಿಕ ಕಾರ್ಯಾಚರಣೆಯ ಬಗ್ಗೆ ಮಾತುಕತೆ ಆರಂಭಿಸಿದರು. ಆತ್ವಿಕರ ಕನಸು ಹಾಗೂ ಳಂಳಮಿನ ಎಚ್ಚರಿಕೆ ಎಲ್ಲವೂ, ಅವರನ್ನು ಒಂದು ಯುದ್ಧಕ್ಕೆ ಪ್ರೇರಣೆ ನೀಡುತ್ತಿತ್ತು. ಅವರು ಬಹಳ ಆವೇಶದಿಂದ “ಮುಹಮ್ಮದ್’ರು ﷺ ಹಾಗೂ ಅವರ ಅನುಯಾಯಿಗಳು, ಇಬ್’ನುಲ್ ಹಳ್’ರಮಿನ ತಂಡವನ್ನು ತಡೆದ ಹಾಗೆ ಈ ತಂಡವನ್ನು ತಡೆಯಬಹುದು ಎಂದು ಅಂದುಕೊಂಡಿರಬಹುದು ಆದರೆ, ಇಲ್ಲ ಇದು ಯಾವತ್ತೂ ಸಾಧ್ಯವಿಲ್ಲ, ಇದರ ಪರಿಣಾಮ ತುಂಬಾ ಭೀಕರವಾಗಿರುತ್ತದೆ, ಅದು ಅವರಿಗೆ ಆಮೇಲೆ ಖಂಡಿತ ತಿಳಿಯುತ್ತದೆ.” ಎಂದು ಏನೇನೋ ಹೇಳುತ್ತಿದ್ದರು.

ಖುರೈಷಿಗಳು ಯುದ್ಧಕ್ಕೆ ತಯಾರಾದರು. ನೇರವಾಗಿ ಯುದ್ಧಕ್ಕೆ ಬರಲು ಸಾಧ್ಯವಾಗದವರು, ಸ್ವಂತ ಖರ್ಚಿನಲ್ಲಿ ಬದಲಿಗೆ ಬೇರೆ ಯೋಧರನ್ನು ಕಳುಹಿಸಬೇಕು ಎಂಬ ತೀರ್ಮಾನವನ್ನು ಮಾಡಲಾಯಿತು. ಅಬೂಲಹಬ್ ತಾನು ಬರುವುದಿಲ್ಲ ಎಂದು ತನ್ನ ನಿಲುವನ್ನು ತಿಳಿಸಿದರು. ಕಾರಣ ಆತ್ವಿಕರ ಕನಸು ಅವರನ್ನು ಬಹಳಷ್ಟು ಭಯಪಡಿಸಿತ್ತು ಹಾಗಾಗಿ ಆಸ್ವ್ ಬಿನ್ ಹಾಶಿಮನ್ನು ತನ್ನ ಬದಲಿಗೆ ಯುದ್ಧಕ್ಕೆ ಕಳುಹಿಸುದಾಗಿ ತಿಳಿಸಿದರು. ಅವರು ಅಬೂಲಹಬಿಗೆ ನೀಡಲಿರುವ ನಾಲ್ಕು ಸಾವಿರ ದಿರ್’ಹಮಿನ ಬದಲಿಗೆ ಹೋಗುವುದಾಗಿ ಭರವಸೆ ನೀಡಿದರು.

ಜನರಲ್ಲಿ ಯುದ್ಧದ ಮನೋಭಾವವನ್ನು ಹೊತ್ತಿ ಉರಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದರು. ಇಂತಹ ಒಂದು ಅವಕಾಶವನ್ನು ಕೈಬಿಟ್ಟರೆ ಖಂಡಿತ ನಮ್ಮ ಸಂಪತ್ತು ನಷ್ಟ ಹೊಂದುತ್ತದೆ ಎಂದು, ನಿರಂತರ ಜನರನ್ನು ಉತ್ತೇಜಿಸುತ್ತಲೇ ಇದ್ದರು. ನಾಯಕರು, ಗಣ್ಯ ವ್ಯಕ್ತಿಗಳೆಲ್ಲರೂ ಸೇರಿ ಸಾಮಾನ್ಯರ ಜೊತೆಯಲ್ಲಿ ಸೇರಿ ಯುದ್ಧಕವಚ, ಖಡ್ಗ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಿತರಣೆ ಮಾಡಿದರು. ಶ್ರೀಮಂತರು ಯುದ್ಧಕ್ಕೆ ದೇಣಿಗೆ ಹಾಗೂ ಯೋಧರಿಗೆ ಅನೇಕ ರೀತೀಯ ಆಮಿಷಗಳನ್ನು ಮುಂದೆ ಇಟ್ಟರು. ಹತ್ತು ಜನ ಯೋಧರಿಗೆ ಇರುವ ಒಂಟೆಗಳು, ಇಪ್ಪತ್ತು ಜನರ ಯೋಧರಿಗೆ ಇರುವ ಆಹಾರ ಹೀಗೆ ನಾನಾ ರೀತಿಯ ಬೆಂಬಲವನ್ನು ನೀಡಿದರು. ಅದರ ನಡುವೆ ಝುಹೈರ್ ಬಿನ್ ಅಂರ್ ಎಂಬ ವ್ಯಕ್ತಿಯು “ನಿಮ್ಮ ಸಂಪತ್ತುಗಳನ್ನು ಮುಹಮ್ಮದ್’ರಿಗೂ ﷺ, ಧರ್ಮ ಬಿಟ್ಟು ಹೋದ ಯಸ್’ರಿಬ್’ಗಳಿಗೆ ನೀಡುತ್ತೀರ.? ಇಲ್ಲ ಖಂಡಿತವಾಗಿಯೂ ಇಲ್ಲ, ಓ ಖುರೈಷಿಗಳೇ ನಿಮಗೆ ದುಡ್ಡು ಬೇಕಿದ್ದರೆ ಇಲ್ಲಿ ಬಹಳಷ್ಟಿದೆ, ನಿಮಗೆ ಆಹಾರ ಬೇಕಿದ್ದಲ್ಲಿ ನನ್ನ ಮನೆಯು ನಿಮಗೆ ತೆರೆದು ಇಟ್ಟಿದೆ” ಎಂದು ಕೂಗಿ ಹೇಳುತ್ತಿದ್ದರು.

ಮಕ್ಕಾ ನಿವಾಸಿಗಳು ಸಂಪೂರ್ಣ ಶಸ್ತ್ರಾಸ್ತ್ರಗಳ ಜೊತೆಯಲ್ಲಿ, ಹೊರಡಲು ಸಿದ್ದರಾಗಿದ್ದರು. ಅಬೂಜಹಲ್ ಅವರ ಮುಂದೆ ನಿಂತು ಮುಹಮ್ಮದ್’ರನ್ನು ﷺ ಸೋಲಿಸಿಯೇ ಬಿಡುತ್ತೇವೆ ಎಂಬ ಅತೀಯಾದ ಆತ್ಮವಿಶ್ವಾಸದಿಂದ ಅವನು ಅಹಂಕಾರದಿಂದ ಮೆರೆದನು.

ಆದರೆ ಶತ್ರು ಪಕ್ಷದ ಎರಡನೇ ಅತ್ಯುತ್ತಮ ನಾಯಕನಾಗಿದ್ದ ಉಮಯ್ಯತ್ ಉದಾಸೀನತೆಯಿಂದ ಮನೆಯಲ್ಲೇ ಕುಳಿತಿದ್ದರು. ಅವರಿಗೆ ಯುದ್ಧಕ್ಕೆ ತೆರಳುವ ಮನಸ್ಸು ಕೂಡ ಇರಲಿಲ್ಲ, ಯಾಕೆಂದರೆ ಅವರನ್ನು ಯಾವುದೋ ಕೆಲವು ಚಿಂತೆಗಳು ಕಾಡುತ್ತಿದ್ದವು. ಅದೇನೆಂದು ನಾವು ತಿಳಿಯೋಣ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-215/365

ಪ್ರವಾದಿಯವರು ﷺ ತನ್ನನ್ನು ಕೊಲೆ ಮಾಡಬಹುದೋ ಎಂಬ ಭಯ ಉಮಯ್ಯತನ್ನ ಕಾಡುತ್ತಿತ್ತು, ಅದಕ್ಕೆ ಕಾರಣ, ಕೆಲವು ದಿನದ ಹಿಂದಿನ ಒಂದು ಘಟನೆಯಾಗಿತ್ತು. ಅನ್ಸಾರಿಗಳಲ್ಲಿ ಗಣ್ಯ ವ್ಯಕ್ತಿಯಾಗಿದ್ದ ಸಅದ್ ಬಿನ್ ಮುಆದ್ ◌ؓ ಹಾಗೂ ಉಮಯ್ಯತ್ ಆತ್ಮೀಯ ಗೆಳೆಯರಾಗಿದ್ದರು. ಸಅದ್ ◌ؓ ಯಾವಾಗ ಮಕ್ಕಾಗೆ ಬಂದರೂ ಉಮಯ್ಯತ್ತಿನ ಅತಿಥಿಯಾಗಿ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಉಮಯ್ಯ ಮದೀನಕ್ಕೆ ಹೋದರೂ ಅದೇ ರೀತಿ ಆಗಿತ್ತು, ಸಅದ್’ರ ◌ؓ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಸಅದ್ ಸತ್ಯವಿಶ್ವಾಸಿಯಾಗಿ ಉಮ್ರಾ ನಿರ್ವಹಿಸಲು ಬಂದಾಗಲೂ ಉಮಯ್ಯ ತಮ್ಮ ಆತಿಥ್ಯವನ್ನು ಕೊಟ್ಟಿದ್ದರು. ಸಅದ್’ಗೆ ◌ؓ ಕಅಬಾದ ಪ್ರದಕ್ಷಿಣೆ ಹಾಕುವ ಅವಕಾಶವನ್ನೂ ಕೊಟ್ಟಿದ್ದರು. ಕಅಬಾದ ತ್ವವಾಫ್ ಹಾಕಲು ಜನ ಸಂದಣಿ ಕಡಿಮೆ ಇರುವ ಮಧ್ಯಾಹ್ನದ ಹೊತ್ತಿನಲ್ಲಿ ಉಮಯ್ಯ ಹಾಗೂ ಸಅದ್ ◌ؓ ತ್ವವಾಫ್ ಮಾಡಲು ಬಂದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಅಬುಜಹಲ್ ಎದುರಾದರು. ಅವರು ಯಾರದು ಕಅಬಾದ ತ್ವವಾಫ್ ಮಾಡುವುದು ಎಂದು ಕೇಳಿದರು. ” ಓಹ್ ಸಅದ್ ಬಿನ್ ಮುಆದ್, ಹಳೆಯ ಧರ್ಮವನ್ನು ಬಿಟ್ಟು, ಮಕ್ಕಾದಿಂದ ಬಂದ ನಿರಾಶ್ರಿತರಿಗೆ ಆಶ್ರಯ ನೀಡಿ, ಈಗ ಮಕ್ಕಾಗೆ ವಾಪಸು ಬಂದು ಯಾವುದೇ ಭಯವಿಲ್ಲದೆ ತ್ವವಾಫ್ ಮಾಡುತ್ತಿದ್ದೀರ.? ಉಮಯ್ಯತ್ (ಅಬೂಸ್ವಫ್ವಾನ್’ರ ತಂದೆ) ಜೊತೆಗೆ ಇರದೇ ಇರುತ್ತಿದ್ದರೆ.? ನಿಮಗೆ ಒಂದು ಗತಿ ಕಾಣಿಸುತ್ತಿದ್ದೆ. ನಿಮ್ಮ ಕುಟುಂಬಕ್ಕೆ ವಾಪಾಸು ಹೋಗುತ್ತಿರಲಿಲ್ಲ.

ಅದೇ ಕೋಪದ ದಾಟಿಯಲ್ಲಿ, ಸಅದ್ ◌ؓ ತಿರುಗಿ ಅಬುಜಹಲ್’ನಲ್ಲಿ, ನಮ್ಮನ್ನು ತ್ವವಾಫ್ ಮಾಡಲು ಅವಕಾಶ ಕೊಡದಿದ್ದರೆ ಅದೇ ದಾಟಿಯಲ್ಲಿ ಉತ್ತರ ಕೊಡಲು ನಮಗೂ ಕೂಡ ಗೊತ್ತಿದೆ. ನಿಮ್ಮ ವ್ಯಾಪಾರ ಗುಂಪನ್ನು ಹೇಗೆ ನಿಭಾಯಿಸಬೇಕೋ ಹಾಗೆ ನಿಭಾಯಿಸುತ್ತೇವೆ ಎಂದು ಹೇಳಿದರು. ಅದನ್ನು ಕೇಳಿ ತಕ್ಷಣವೇ ಉಮಯ್ಯತ್ ಮದ್ಯೆ ಬಂದು, ಅಬುಲ್’ಹಕಮ್ (ಅಬುಜಹಲ್) ಈ ಪ್ರಾಂತ್ಯದ ನಾಯಕ ಆಗಿರುತ್ತಾರೆ. ಅವರ ಮುಂದೆ ಎತ್ತರದ ಧ್ವನಿಯಲ್ಲಿ ಮಾತಾಡಬಾರದು, ಎಂದು ಸಅದನ್ನು ◌ؓ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಆ ಮಾತು ಸಅದ್’ಗೆ ◌ؓ ಇಷ್ಟವಾಗಿರಲಿಲ್ಲ, ಅವರು ಉಮಯ್ಯತ್’ನಲ್ಲಿ ನೀನು ಕೂಡ ಅವರ ಸಾಲಿಗೆ ಸೇರಿದೆಯ.? ಸುಮ್ಮನೆಯಲ್ಲ ಪ್ರವಾದಿಯವರು ﷺ ಅಂದು ನಿನ್ನನ್ನು ಕೊಲೆ ಮಾಡಬೇಕು ಎಂದು ಹೇಳಿದ್ದು.

ಈ ಮಾತನ್ನು ಕೇಳಿ ಉಮಯ್ಯತಿನ ಕಾಲ ಕೆಳಗಿನ ಭೂಮಿ ಕುಸಿದ ಅನುಭವ ಆಗಿತ್ತು. ಅವರು ಪುನಃ ಸಅದ್’ರಲ್ಲಿ ◌ؓ, ಪ್ರವಾದಿಯವರು ﷺ ನಿಜವಾಗಿಯೂ ಹೇಳಿದ್ದು ನನ್ನ ಬಗ್ಗೆಯೇ ಆಗಿತ್ತಾ.? ಕೇಳಿದಾಗ, ಸಅದ್ ◌ؓ ಹೌದು ನಿನ್ನ ಬಗ್ಗೆಯೇ ಆಗಿತ್ತು ಎಂದು ಹೇಳಿದರು. ಅದಕ್ಕೆ ಉಮಯ್ಯತ್ ಪುನಃ ಮಕ್ಕಾದಲ್ಲೇ ಮಾಡ್ತಾರಾ.? ಎಂದು ಕೇಳಿದಾಗ ಸಅದ್ ◌ؓ ಅದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಅಲ್ಲಾಹನಾಣೆ ಮುಹಮ್ಮದ್ ﷺ ಯಾವತ್ತೂ ಸುಳ್ಳು ಹೇಳುವ ವ್ಯಕ್ತಿಯಲ್ಲ, ಎಂದು ಹೇಳುತ್ತಾ, ಉಮಯ್ಯತ್ ಆ ಮಾತನ್ನು ಕಂಡ ಕಂಡ ಜನರಲ್ಲಿ ಹೇಳುತ್ತಾ ಹೋದರು. ಆದರ್ಶದ ಭಾಗವಾಗಿ ಪ್ರವಾದಿಯವರನ್ನು ﷺ ಎದುರಿಸಿದಾಗಲೂ, ಪ್ರವಾದಿಯವರ ﷺ ಮಾತುಗಳು ಅವರನ್ನು ಭಯಪಡಿಸಿತ್ತು. ಅದೇ ರೀತಿ ಉಮಯ್ಯತ್ತಿನ ಮೇಲೆ ಈ ಒಂದು ಮಾತು ಕೂಡ ಬಹಳ ಪ್ರಭಾವ ಬೀರಿತ್ತು.

ಈ ಒಂದು ವಿಷಯವಾಗಿತ್ತು ಉಮಯ್ಯತ್ತನ್ನ ಬದ್’ರಿಗೆ ಹೋಗುವುದರಿಂದ ತಡೆಯುತ್ತಿದ್ದದ್ದು. ತನ್ನ ಪತ್ನಿಯಿಂದರಲ್ಲೂ ಈ ವಿಷಯವನ್ನು ಹೇಳಿದ್ದರು, ಆ ದಿನದ ನಂತರ ಏನೇ ಆದರೂ ಮಕ್ಕಾ ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ತೀರ್ಮಾನ ಕೂಡ ಮಾಡಿದ್ದರು. ಆದರೆ ಮಕ್ಕಾದ ಎಲ್ಲಾ ಜನತೆ ಉತ್ತೇಜಿತರಾಗಿ ಹೋರಾಟ ಮಾಡಲು ಹೋಗುತ್ತಿರುವಾಗ, ನಾನು ಕೂಡ ಹೋದರೆ ಹೇಗೆ.? ಎಂದು ಮೊದಲು ಅಂದುಕೊಂಡಾಗ, ಸಅದ್ ಹೇಳಿದ ಮಾತನ್ನು ಅವರ ಪತ್ನಿ ಅವರನ್ನು ನೆನಪಿಸಿದರು. ಹಾಗಾಗಿ ಉಮಯ್ಯಃ ಇನ್ನೂ ಏನೇ ಆದರೂ ಯುದ್ಧಕ್ಕೆ ಹೋಗುವ ಮಾತೆ ಇಲ್ಲ ಎಂದು ತೀರ್ಮಾನ ಮಾಡಿ ಕುಳಿತರು. ಆದರೆ ಖುರೈಷಿಗಳು ಮಾತ್ರ ಅವರನ್ನು ಜೊತೆಗೆ ಸೇರಿಸಲೇ ಬೇಕು ಎಂದು ಹರಸಾಹಸ ಪಟ್ಟರು. ಅದಕ್ಕಾಗಿ ಅವರು ಬಹಳ ಯೋಜನೆಗಳನ್ನು ರೂಪಿಸಿದರು, ಬಹಳಷ್ಟು ಆಮಿಷಗಳನ್ನು ಒಡ್ಡಿದರೂ ಉಮಯ್ಯತ್ ಮಾತ್ರ ಅದಕ್ಕೆ ಒಪ್ಪಲೇ ಇಲ್ಲ. ಕೊನೆಗೆ ಉಖ್’ಬತ್ ಬಿನ್ ಅಬೀ ಮುಐತ್ ಎಂಬ ವ್ಯಕ್ತಿಯೂ ಸ್ವಲ್ಪ ಉಳುವಾನ್ ಗೂಡು ಹಾಗೂ ಊದನ್ನು ತಂದು, ಉಮಯ್ಯತ್’ರಲ್ಲಿ “ಹೆಂಗಸರ ಹಾಗೆ ಇದನ್ನು ಹೊತ್ತಿಸಿ ಇಲ್ಲೇ ಕುಳಿತುಕೊಳ್ಳಿ” ಎಂದು ಲೇವಡಿ ಮಾಡಿದಾಗ, ಉಮಯ್ಯತ್ ಕೋಪದಿಂದ ಎದ್ದು ನಿಂತು, “ನಿನಗೂ ನಿನ್ನ ಈಟಿಗೂ ನಾಶ, ಓ ದೇವನೆ ಇವನ ಕಥೆ ಮುಗಿದಿದ್ದರೆ.” ಎಂದು ಹೇಳಿದರು.

ಅವರ ಗುಂಪಿನಲ್ಲಿದ್ದ ಅಬೂಜಹಲ್ ಮೆಲ್ಲನೆ ಮುಂದೆ ಬಂದು, ಉಮಯ್ಯತ್’ನಲ್ಲಿ, “ಓ ಅಬೂ ಸ್ವಫ್ವಾನ್ ನೀವು ಕಣಿವೆಯ ನಾಯಕ ಆಗಿರುತ್ತೀರಿ, ನೀವೇ ಬರದಿದ್ದರೆ, ಬಹಳಷ್ಟು ಜನರು ಈ ಹೋರಾಟದಿಂದ ಖಂಡಿತ ಹಿಂದೆ ಸರಿಯುತ್ತಾರೆ ಹಾಗಾಗಿ ಬೇಗ ತಯಾರು ಆಗಿರಿ” ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-216/365

ಉಮಯ್ಯತ್ ಶಕುನ ಇಟ್ಟು ನೋಡಿದಾಗಲೂ ಯುದ್ಧಕ್ಕೆ ಹೋಗಬೇಡಿ ಎಂದು ಅದರಲ್ಲಿ ತೋರಿಸುತ್ತಿತ್ತು. ಅವರ ಜೊತೆಯಲ್ಲಿ ಸಂಅತು ಬಿನ್ ಅಲ್ಅಸ್’ವದ್, ರಬೀಅರ ಮಗನಾದ ಉತ್’ಬಃ, ಹಾಗೂ ಶೈಬ ಸೇರಿ ಶಕುನ ನೋಡಿದಾಗಲೂ ಅದೇ ರೀತಿ ಯುದ್ಧಕ್ಕೆ ತೆರಳಬೇಡಿ ಎಂದೇ ಆಗಿತ್ತು ಅದು ಸೂಚನೆ ನೀಡಿದ್ದು. ಇದೂ ಕೂಡ ಅವರನ್ನು ಇನ್ನಷ್ಟು ಚಿಂತೆಗೆ ನೂಕಿದರೂ, ಕೊನೆಗೆ ವಿಧಿಯಿಲ್ಲದೆ ಹೋಗಲೇ ಬೇಕಾದ ಪರಿಸ್ಥಿತಿ ಎದುರಾಯಿತು, ಹಾಗಾಗಿ ಉಮಯ್ಯತ್ ಮನಸ್ಸಿಲ್ಲದ ಮನಸ್ಸಲ್ಲಿ ಯುದ್ಧಕ್ಕೆ ಹೊರಟು ನಿಂತರು. ಅಂದು ಮಕ್ಕಾದಲ್ಲಿ ಸಿಗುತ್ತಿದ್ದ ಉತ್ಕುರ್ಷ್ಟ ಗುಣಮಟ್ಟದ ಒಂಟೆಯನ್ನು ಖರೀದಿಸಿ, ಅದರಲ್ಲಿ ಹೊರಟು ಹೋದರು, ದಾರಿ ಮಧ್ಯೆ ಆಗಾಗ ವಾಪಸ್ಸು ಹಿಂತಿರುಗಿ ಹೋಗಬೇಕೆಂದು ಬಹಳಷ್ಟು ಬಾರಿ ಅಂದುಕೊಂಡರೂ ಆದರೆ ಅದು ಅವರಿಗೆ ಸಾಧ್ಯವಾಗಿಲ್ಲ, ಕೊನೆಗೆ ಬದ್’ರ್ ರಣರಂಗಕ್ಕೆ ತಲುಪಿಯೇ ಬಿಟ್ಟರು.

ಉಖ್’ಬತ್ ಬಿನ್ ಅಬೀ ಮುಐತ್ ಕೂಡ ಯುದ್ಧಕ್ಕೆ ಹೊರಡಲು ಮೀನ ಮೇಷ ಎನಿಸುತ್ತಿದ್ದರು, ಅದರ ಹಿಂದೆಯೂ ಕೂಡ ಒಂದು ಬಲವಾದ ಕಾರಣ ಇತ್ತು. ಪಲಾಯನದ (ಹಿಜ್ರಾದ) ಮೊದಲು ಒಂದು ದಿನ ಪ್ರವಾದಿಯವರನ್ನು ﷺ ಅವರು ಔತಣಕ್ಕೆ ಕರಿದಿದ್ದರು. ಅದೇ ರೀತಿ ಪ್ರವಾದಿಯವರು ﷺ ಅವರ ಔತಣಕ್ಕೆ ತೆರಳಿದ್ದರು, ಆದರೆ ಸತ್ಯ ವಚನ ಸ್ವೀಕರಿಸಿದರೇ ಮಾತ್ರ ನಾನು ಆಹಾರ ಸೇವನೆ ಮಾಡುತ್ತೇನೆ ಎಂದು ಹೇಳಿದಾಗ, ಉಖ್’ಬತ್ ಅದಕ್ಕೆ ಸಮ್ಮತಿಸಿ, “ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್ ﷺ ಪ್ರವಾದಿಯವರು ಅಲ್ಲಾಹನ ದೂತರು, ಸಂದೇಶ ವಾಹಕರು ಆಗಿರುವರೆಂದು ನಾನು ಸಾಕ್ಷಿ ವಹಿಸುತ್ತೇನೆ ” ಎಂಬ ಸತ್ಯ ವಚನವನ್ನು ಘೋಷಣೆ ಮಾಡಿದರು. ಇದರೊಂದಿಗೆ ಸಮಸ್ಯೆ ಮುಗಿಯಿತು ಎಂದು ಅಂದುಕೊಂಡಿದ್ದರು, ಆದರೆ ಮಕ್ಕಾದಲ್ಲಿ ಮುಶ್ರಿಕ್’ಗಳು ಇದನ್ನು ಬಹಳ ದೊಡ್ಡ ಸಮಸ್ಯೆಯಾಗಿ ಬಿಂಬಿಸಿದರು. ಅವರು ಉಖ್’ಬರನ್ನು ಯಾವುದಕ್ಕೂ ಲೆಕ್ಕಕ್ಕೆ ತೆಗೆಯದ ರೀತಿಯಲ್ಲಿ ವರ್ತಿಸಲು ಆರಂಭಿಸಿದಾಗ, ಉಖ್’ಬ ನಾನೆಂತಹ ಮೂರ್ಖನಾಗಿದ್ದೆ ಎಂದು ಅಂದುಕೊಂಡು, ನಾನು ಇನ್ನೇನು ಮಾಡಬೇಕು ಎಂದು ಅವರಲ್ಲೇ ಕೇಳಿದರು. ಅವರು, ನೀವು ಮುಹಮ್ಮದ್ ಪ್ರವಾದಿಯರನ್ನು ﷺ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮುಖಕ್ಕೆ ಉಗುಳಬೇಕು ಎಂದು ಹೇಳಿದಾಗ, ಅವರು ಅದಕ್ಕೆ ಸಮ್ಮತಿಸಿದರು.

ಅವರು ಅದೇ ರೀತಿ, ಪ್ರವಾದಿಯವರನ್ನು ﷺ ನಿಂದಿಸಿ, ಅವರ ಮುಖದ ಮೇಲೆ ಉಗುಳಿದರು, ಆ ಸಂದರ್ಭದಲ್ಲಿ ಪ್ರವಾದಿಯವರು ﷺ ನೀನು ಮಕ್ಕಾದ ಹೊರಗೆ ಸಿಕ್ಕರೆ, ಖಂಡಿತ ನಿನ್ನ ಸಾವು ಖಚಿತ ಎಂದು ಹೇಳಿದ್ದರು. ಈ ಮಾತು ಉಖ್’ಬನನ್ನು ಬಹಳಷ್ಟು ಕಾಡುತ್ತಿತ್ತು. ಆ ಕಾರಣಕ್ಕೆ ಆತನಿಗೆ ಮಕ್ಕಾದಿಂದ ಹೊರಗೆ ಹೋಗುವ ಧೈರ್ಯವೇ ಇಲ್ಲದಾಯಿತು, ಆದರೆ ಖುರೈಷಿಗಳನ್ನು ಅವನನ್ನು ಕೂಡ ಒತ್ತಾಯ ಪಡಿಸಿ, ಅವನಿಗೆ ಒಂದು ಕೆಂಪು ವರ್ಣದ ಒಂಟೆಯನ್ನು ನೀಡಿದರು, ಅದರಲ್ಲಿ ಕುಳಿತು ಆತನು ಕೂಡ ಬದ್’ರಿಗೆ ತಲುಪಿದನು. ಕೊನೆಗೆ ಅವನೂ ಕೂಡ ಯುದ್ಧದಲ್ಲಿ ಖೈದಿಯಾಗಿ ಸೆರೆ ಸಿಕ್ಕಿ, ಸಾವನ್ನಪ್ಪಿದನು.

ಉತ್’ಬತ್ ಬಿನ್ ರಬೀಅರಿಗೆ ಯುದ್ಧಕ್ಕೆ ತೆರಳುವ ಯಾವುದೇ ಮನಸ್ಸು ಇರಳಿಲ್ಲ, ಆದರೆ ಶೈಬರ ಒತ್ತಾಯದ ಮೇರೆಗೆ ಅವರೂ ಕೂಡ ಯುದ್ಧಕ್ಕೆ ತೆರಳಿದರು. ಕೆಲವು ಉಲ್ಲೇಖದ ಪ್ರಕಾರ, ಉತ್’ಬ ಹಾಗೂ ಶೈಬ ಯುದ್ಧಕ್ಕೆ ಹೊರಡುತ್ತಿದ್ದ ವೇಳೆಯಲ್ಲಿ, ಕ್ರೈಸ್ತನಾಗಿದ್ದ ಅದ್ದಾಸ್ ಎಂಬ ಸೇವಕ ಅವರ ಮುಂದೆ ಬಂದು, ನೀವು ಯುದ್ಧಕ್ಕೆ ತೆರಳಬೇಡಿ ಎಂದು ಬಹಳಷ್ಟು ವಿನಂತಿ ಪಡಿಸಿದರು. ಅಂದು ತ್ವಾಹಿಫಿನಿಂದ ಪ್ರವಾದಿಯವರು ﷺ ಕಲ್ಲು ಎಸೆತ ಎದುರಿಸಿ, ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಪ್ರವಾದಿಯವರನ್ನು ﷺ ತೋಟದಲ್ಲಿ ಸೇವೆ ಮಾಡಿದ ಮಾಡಿದ ವ್ಯಕ್ತಿಯಾಗಿದ್ದರು ಈ ಅದ್ದಾಸ್, ಅವರು ಮಾಲೀಕರ ಮುಂದೆ ನಿಂತು ದಯವಿಟ್ಟು ನೀವು ಯುದ್ಧಕ್ಕೆ ತೆರಳಬೇಡಿ, ನನ್ನ ತಂದೆ ತಾಯಿಯು ನಿಮಗೆ ದಾನ, ಖಂಡಿತವಾಗಿಯೂ ನೀವು ಸಾವಿನ ದವಡೆಯಲ್ಲಿ ಇದ್ದೀರಿ.! ಎಂದು ಹೇಳಿದಾಗ, ಅವರಿಬ್ಬರೂ ಹಿಂದೆ ಸರಿದಿದ್ದರು. ಅಷ್ಟೊತ್ತಿಗೆ ಅಬೂಜಹಲ್ ಬಂದು ಅವರನ್ನು ಒತ್ತಾಯ ಪಡಿಸಿ ಕರೆದುಕೊಂಡು ಹೋದರು, ದಾರಿ ಮಧ್ಯೆ ಹಿಂತಿರುಗಿ ಬರೋಣ ಎಂಬ ಉದ್ದೇಶದಿಂದ ಅವರಿಬ್ಬರು ಯುದ್ಧಕ್ಕೆ ಹೊರಟರೂ, ಅವರು ಕೂಡ ವಾಪಸು ಬರಲು ಸಾಧ್ಯವಾಗದೇ ಬದ್’ರ್ ರಣರಂಗಕ್ಕೆ ತಲುಪಿ, ಅಲ್ಲೇ ದಾರುಣವಾಗಿ ಅಂತ್ಯವಾದರು.

ಮಕ್ಕಾದ ಝುಹ್’ರ ಜನಾಂಗದ ಒಬ್ಬರೇ ಒಬ್ಬ ವ್ಯಕ್ತಿಯೂ ಕೂಡ ಖುರೈಷಿಗಳ ಜೊತೆ ನಿಂತಿರಲಿಲ್ಲ, ಅದು ಪ್ರವಾದಿಯವರ ﷺ ತಾಯಿ ಈ ಜನಾಂಗದವರಾಗಿದ್ದರು ಎಂಬ ಕಾರಣಕ್ಕೆ ಅಲ್ಲ, ಬದಲಾಗಿ ಶಾಂತಿಪ್ರಿಯನಾಗಿದ್ದ ಅಖ್’ನಸು ಬಿನು ಶರೀಖಿನ ಮಧ್ಯಸ್ಥಿಕೆಯ ಕಾರಣದಿಂದಾಗಿತ್ತು. ಖುರೈಷಿಗಳ ಸೈನ್ಯದಲ್ಲಿ ಅದಿಯ್ಯ್ ಜನಾಂಗದ ಜನರು ಕೂಡ ಇರಲಿಲ್ಲ ಅದಕ್ಕೆ ಕಾರಣ ಅದಿಯ್ಯ್ ಜನಾಂಗ ವ್ಯಕ್ತಿಯಾಗಿದ್ದ ಉಮರ್ ಬಿನ್ ಖತ್ತಾಬ್ ಅವರ ಪ್ರಭಾವವಾಗಿರಬಹುದು ಎಂಬ ಅಭಿಪ್ರಾಯವೂ ಇದೆ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-217/365

ಖುರೈಷಿಗಳು ಮಕ್ಕಾದಿಂದ ಹೊರಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡರು. ಇದರ ನಡುವೆ ಪ್ರಮುಖ ವಿಷಯವೊಂದನ್ನು ಖುರೈಷಿಗಳು ಮರತೇ ಬಿಟ್ಟಿದ್ದರು. ಅದು ಕಿನಾನ ಜನಾಂಗದ ಜೊತೆಯಲ್ಲಿದ್ದ ಪ್ರತಿಕಾರ ವಿಷಯವಾಗಿತ್ತು. ಕೆಲವು ದಿನಗಳ ಹಿಂದೆ ಕಿನಾನ ಜನಾಂಗದ ಒಬ್ಬ ವ್ಯಕ್ತಿಯನ್ನು ಖುರೈಷಿಗಳು ಕೊಲೆ ಮಾಡಿದ್ದರು. ಅದೇ ಸಂದರ್ಭದಲ್ಲಿ ಸುಂದರನಾದ ಯುವಕನೊಬ್ಬ, ಕಾಣೆಯಾದ ಪ್ರಾಣಿಯನ್ನು ಹುಡುಕುತ್ತಾ ಕಿನಾನ ಜನಾಂಗದವರ ಸ್ಥಳಕ್ಕೆ ಬಂದು ತಲುಪಿದನು. ಅವನನ್ನು ಕಂಡು ಅಸೂಯೆಯಿಂದ ಆ ಜನಾಂಗದ ಮುಖ್ಯ, ಆಮಿರ್ ಬಿನ್ ಖಲೂಜ್ ತನ್ನ ಜನರನ್ನು ಅವನ ವಿರುದ್ಧ ಎತ್ತಿಕಟ್ಟಿ ಅವನನ್ನು ಕೊಲೆ ಮಾಡಿಸಿದರು. ತಮ್ಮ ಜನಾಂಗದ ವ್ಯಕ್ತಿಯ ಸಾವಿಗೆ ಈ ಕೊಲೆಯನ್ನು ಪ್ರತಿಕಾರವಾಗಿ ಕಿನಾನದ ಜನರು ಖುರೈಷಿಗಳಲ್ಲಿ ತಿಳಿಸಿದಾಗ, ಅವರಿಗೂ ಅದನ್ನು ಒಪ್ಪಿಕೊಳ್ಳಲೇ ಬೇಕಾಗಿತ್ತು. ಇದಾದ ಕೆಲವು ದಿನದ ಬಳಿಕ ಕೊಲೆಯಾದ ಯುವಕನ ಸಹೋದರನು, ಮರ್’ರುಳ್ಳಹಿರಾನಲ್ಲಿ ಕಿನಾನದ ಮುಖ್ಯ ಆಮಿರ್ ಸಿಕ್ಕಾಗ ಅವರನ್ನು ಕೊಲೆ ಮಾಡಿ, ಮೃತ ದೇಹವನ್ನು ಕಅಬಾದ ಕಿಸ್’ವಾದಲ್ಲಿ ತೂಗು ಹಾಕಿ, ಆಮಿರ್’ರ ಖಡ್ಗವನ್ನು ಕೂಡ ಜೊತೆಯಲ್ಲಿ ಕಟ್ಟಿ ಹಾಕಿ ಹೋದನು. ಮರುದಿನ ಬೆಳಿಗ್ಗೆ ಖುರೈಷಿಗಳು ಈ ದೃಶ್ಯವನ್ನು ಕಂಡಾಗ ದಿಗ್ಭ್ರಾಂತರಾಗಿದ್ದರು. ಖಡ್ಗ ಕಂಡಾಗ ಇದು ಯಾರ ಶರೀರ, ಯಾರು ಕೊಲೆ ಮಾಡಿದ್ದು ಎಂದು ಕೂಡ ಅವರಿಗೆ ಅರ್ಥ ಆಗಿತ್ತು. ಆದರೆ ಇದಕ್ಕೆ ಪ್ರತೀಕಾರವಾಗಿ ಕಿನಾನದವರು ಏನು ಮಾಡಬಹುದು ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಇದರ ನಡುವೆ ಆಗಿತ್ತು, ಪ್ರವಾದಿಯವರು ﷺ ಹಾಗೂ ಅವರ ಅನುಚರರ ವಿರುದ್ಧ ಯುದ್ಧಕ್ಕೆ ಹೊರಡುವ ಪರಿಸ್ಥಿತಿ ಎದುರಾದದ್ದು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಮಕ್ಕಾ ಬಿಟ್ಟು ಹೋದರೆ, ಎಲ್ಲಿ ಕಿನಾನದ ಜನತೆ ದಾಳಿ ಮಾಡಬಹುದೋ ಎಂಬ ಚಿಂತೆಯೂ ಕೂಡ ಅವರನ್ನು ಕಾಡುತ್ತಿತ್ತು. ಯೋಧರು ಯಾರೂ ಇಲ್ಲದ ಸಂದರ್ಭದಲ್ಲಿ ಇಲ್ಲಿಗೆ ಬಂದು ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ಮಾಡಿದರೆ.? ಅಥವಾ ಬೇರೆ ಏನಾದ್ರು ಸಿಡಿ ಮದ್ದು ಪ್ರಯೋಗಿಸಿ ದಾಳಿ ಮಾಡಿದರೆ ಏನು ಮಾಡುವುದು.? ಎಂಬ ಚಿಂತೆಯಲ್ಲೇ ಮುಳುಗಿದರು. ತಕ್ಷಣವೇ ಕಿನಾನ ವಾಸಿಯಾದ ಸುರಾಖತು ಬಿನ್ ಮಾಲಿಕ್ ಅವರ ಮುಂದೆ ಬಂದು ನಿಂತು, “ನಿಮ್ಮ ವಿರುದ್ಧ ಕಿನಾನದ ಜನತೆ ದಾಳಿ ಮಾಡಬಹುದು ಎಂಬ ಚಿಂತೆಯನ್ನು ಬಿಟ್ಟು ಬಿಡಿ, ಆ ವಿಷಯವನ್ನು ನಾನು ನೋಡಿಕೊಳ್ಳುತ್ತೇನೆ, ನಿಮ್ಮ ಜೊತೆಗೆ ಸೇರಿ ಯುದ್ಧ ಮಾಡಲು, ನನ್ನೊಂದಿಗಿರುವ ಕಿನಾನದ ಜನರು ಸಿದ್ಧರಾಗಿ ಬಂದಿದ್ದಾರೆ. ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ, ನೀವು ಧೈರ್ಯದಿಂದ ಮುಂದೆ ಸಾಗಿರಿ” ಎಂದು ಹೇಳಿದಾಗ, ಖುರೈಷಿಗಳು ಆ ಮಾತನ್ನು ಕೇಳಿ ಸಮಾಧಾನ ಪಟ್ಟರು.

ವಾಸ್ತವದಲ್ಲಿ ಸುರಾಖರ ರೂಪದಲ್ಲಿ ಬಂದದ್ದು ಪಿಶಾಚಿಯಾಗಿತ್ತು, ಬದರ್’ನಲ್ಲಿ ಮಲಕುಗಳು (angel) ಬಂದು ಇಳಿದಾಗ ಖುರೈಷಿಗಳು ಅದನ್ನು ಅರ್ಥಮಾಡಿಕೊಂಡರು.

ಮಕ್ಕಾದಿಂದ ಖುರೈಷಿಗಳ ತಂಡವು ಹೊರಡಲು ಎಲ್ಲಾ ರೀತಿಯಲ್ಲೂ ಸಿದ್ಧರಾಗಿ ನಿಂತಿದ್ದರು. ಅದಕ್ಕಿಂತ ಮೊದಲು ಅವರು ನೇರವಾಗಿ ಕಅಬಾದ ಬಳಿ ತೆರಳಿ, ಕಅಬಾದ ಕಿಸ್’ವವನ್ನು ಹಿಡಿದು, “ಪ್ರಭು ಎರಡು ಸೈನ್ಯಗಳಲ್ಲಿ ಅತ್ಯಂತ ಪ್ರಸಿದ್ಧರಾದ, ಎರಡು ಜನಾಂಗಗಳಲ್ಲಿ ಅತ್ಯಂತ ಮಹತ್ವವಿರುವ, ಹಾಗೂ ಎರಡು ಪಕ್ಷದಲ್ಲಿ ಅತ್ಯಂತ ಗೌರವಯುತರಾದವರಿಗೆ ನೀನು ಸಹಾಯ ಮಾಡು!” ಎಂದು ಪ್ರಾರ್ಥನೆ ಮಾಡಿದರು. ಈ ಪ್ರಾರ್ಥನೆಯನ್ನು ಉಲ್ಲೇಖಿಸಿ, ಪವಿತ್ರ ಖುರ್’ಆನಿನ ಎಂಟನೇ ಅಧ್ಯಾಯ ಅಲ್ ಅಂಫಾಲಿನ ಹತ್ತೊಂಬತ್ತನೆ ಸೂಕ್ತದಲ್ಲಿ ಹೇಳುವುದು ಕಾಣಬಹುದು. ಅದರ ಸಾರವು ಈ ರೀತಿಯಾಗಿದೆ, “ಸತ್ಯ ನಿಷೇಧಿಗಳೇ, ನೀವು ವಿಜಯವನ್ನು ಬಯಸಿರುದಾರೆ, ಆ ವಿಜಯವು ನಿಮಗೆ ಬಂದು ಬಿಟ್ಟಾಗಿದೆ, ನೀವು ವಿರಮಿಸುದಾದರೆ ಅದು ನಿಮಗೆ ಒಳಿತು, ನೀವು ಪುನಾವರ್ತಿಸುದಾದರೆ ನಾವು ಕೂಡ ಪುನಾವರ್ತಿಸುತ್ತೇವೆ, ನಿಮ್ಮ ಬಳಿ ಎಷ್ಟೇ ಬಲಿಷ್ಠ ಜನಬಲವಿದ್ದರೂ ಅದು ನಿಮಗೆ ಪ್ರಯೋಜನವಾಗುವುದಿಲ್ಲ. ಅಲ್ಲಾಹನು ಸತ್ಯವಿಶ್ವಾಸಿಗಳ ಜೊತೆಯಲ್ಲೇ ಇರುವನು.”

ಖುರೈಷಿಗಳು ಬಹಳ ಆವೇಶದಿಂದ, ಉತ್ಸವಗಳನ್ನು ಮಾಡುತ್ತ ಹೊರಟರು. ಅಷ್ಟೇ ಅಲ್ಲದೆ ತಾಳ ಮೇಳಗಾರರು, ನರ್ತಕಿಯರು, ಗಾಯಕಿಯರು ಕೂಡ ಅವರ ಜೊತೆಯಲ್ಲಿ ಇದ್ದರು. ಪ್ರತಿಯೊಂದು ದಿವಸ ಸ್ವಾದಿಷ್ಟವಾದ ಭೋಜನೆಯ ಸುರಿಮಳೆಯಾಗಿತ್ತು. ಹೊಗೆಯಾಡಿಸುವ ಉಲುವಾನ್ ಗೂಡುಗಳು ಇಡೀ ಪ್ರದೇಶವನ್ನು ಸುಂಗಧ ಭರಿತವಾಗಿಸುತ್ತಿತ್ತು. ಇದರೊಂದಿಗೆ ಇಸ್ಲಾಮ್ ಸಂಪೂರ್ಣವಾಗಿ ಕೊನೆಗೊಳ್ಳಬಹುದು ಎಂಬ ವ್ಯಾಮೋಹದಿಂದಾಗಿತ್ತು ಖುರೈಷಿಗಳು ಮುಂದೆ ಸಾಗುತ್ತಿದ್ದದ್ದು. ಅಬೂಜಹಲ್ ಸಹಿತ ಇರುವ ಇತರ ನಾಯಕರು, ಅತೀಯಾದ ಆತ್ಮವಿಶ್ವಾಸದಿಂದಾಗಿತ್ತು ಮುಂದೆ ಸಾಗುತ್ತಿದ್ದದ್ದು..

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-218/365

ಇನ್ನೂ ನಾವು ಸ್ವಲ್ಪ ಮದೀನಾದಲ್ಲಿರುವ ತಂಡದ ಬಗ್ಗೆ ಅಧ್ಯಯನ ನಡೆಸೋಣ. ಪ್ರವಾದಿಯವರು ﷺ ಬಿಅರು ಅಬೀ ಉತ್’ಬ ಎಂಬ ಬಾವಿಯಿಂದ ನೀರು ಸೇದಿ, ಕುಡಿದು, ಅದೇ ಬಾವಿಯ ನೀರಿನಿಂದ ಸ್ನಾನ ಕೂಡ ಮಾಡಿದರು. ನಂತರ ತಮ್ಮ ಜೊತೆಯಲ್ಲಿದ್ದ ಮುನ್ನೂರಕ್ಕೂ ಮಿಕ್ಕ ಅನುಚರರಲ್ಲಿ ಅದೇ ಬಾವಿಯಿಂದ ನೀರು ತೆಗಿಯಲು ಆದೇಶ ನೀಡಿದರು. ನಂತರ ಅಲ್ಲಿಂದ ತಮ್ಮ ಯಾತ್ರೆಯನ್ನು ಮುಂದುವರಿಸಿದರು. ಬದ್ರ್ ಯುದ್ಧದಲ್ಲಿ ಭಾಗವಹಿಸಿದ ಸ್ವಾಹಾಬಿಗಳ (ಪ್ರವಾದಿಯವರ ಅನುಚರರು) ಜನಸಂಖ್ಯೆಯ ಬಗ್ಗೆ ಬಹಳಷ್ಟು ಅಭಿಪ್ರಾಯಗಳಿವೆ. ಬದ್ರ್’ಗೆ ಹೊರಟವರಲ್ಲಿ ದಾರಿಯ ಅಡಚಣೆಯಿಂದ ಬರಲು ಸಾಧ್ಯವಾಗದವರು, ಯುದ್ಧದಲ್ಲಿ ಭಾಗವಹಿಸದಿದ್ದರೂ ಸಮಾರಾರ್ಜಿತ ಆಸ್ತಿಗೆ (ಗನೀಮತ್) ಅರ್ಹತೆ ಇರುವವರು, ಹೀಗೆ ಲೆಕ್ಕ ಹಾಕಿದಾಗ ಅಥವಾ ಹಾಕದೆ ಇದ್ದಾಗ ಆಗಿರುತ್ತದೆ ಜನಸಂಖ್ಯೆಯಲ್ಲಿ ವ್ಯತ್ಯಾಸ ಬರುವುದು. ರೌಹಾಅ ಎಂಬ ಸ್ಥಳಕ್ಕೆ ತಲುಪಿದಾಗ ಪ್ರವಾದಿಯವರು ﷺ ತಮ್ಮ ಅನುಚರರನ್ನು ಎಣಿಸಿ ನೋಡಿದರು. ಮುನ್ನೂರ ಹದಿಮೂರು ಜನ ಸ್ವಾಹಾಬಿಗಳು ಇರುವುದನ್ನು ನೋಡಿ, ಪ್ರವಾದಿಯವರು ﷺ ಸಂತೋಷದಿಂದ ಖುರ್’ಆನ್ ತಿಳಿಸಿ ಕೊಟ್ಟ, ತಾಲೂತ್’ರ ಜೊತೆಯಲ್ಲಿ ಹೊಳೆ ದಾಟಿದವರ ಸಂಖ್ಯೆಯಷ್ಟು ಇದೆಯಲ್ಲವೇ.? ನಮ್ಮ ತಂಡದ ಜನಸಂಖ್ಯೆ. (ತಾಲೂತ್’ರ ಜೊತೆಯಲ್ಲಿ ಹೊಳೆ ದಾಟಿದವರೆಲ್ಲರೂ ಸತ್ಯ ವಿಶ್ವಾಸಿಗಳಾಗಿದ್ದರು.)

ಬದ್ರ್’ ಯುದ್ಧದಲ್ಲಿ ದೈಹಿಕವಾಗಿ ಭಾಗವಹಿಸದಿದ್ದರೂ, ಬದ್ರೀಯಿನ್’ಗಳ ಸಾಲಿನಲ್ಲಿ ಸೇರಿಸಿ ಹೇಳುವ ಪ್ರಮುಖ ವ್ಯಕ್ತಿಯಾಗಿರುತ್ತಾರೆ ಉಸ್ಮಾನ್’ರವರು. ◌ؓ ಅವರ ಪತ್ನಿ ಅಂದರೆ ಪ್ರವಾದಿಯವರ ﷺ ಮಗಳಾದ ರುಖಿಯ್ಯಃರು ◌ؓ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ, ಅವರ ಶುಶ್ರೂಷೆಗಾಗಿ, ಪ್ರವಾದಿಯವರ ﷺ ಅನುಮತಿಯೇ ಮೇರೆಗೆ ಉಸ್ಮಾನ್’ರು ◌ؓ ಮದೀನದಲ್ಲೇ ಉಳಿಯಬೇಕಾಗಿ ಬಂದಿತು. ಅದೇ ಅನಾರೋಗ್ಯದ ಕಾರಣದಿಂದಲೇ ಮಹದಿಯವರು ಮರಣ ಹೊಂದಿದರು. ಸ್ವತಃ ಉಸ್ಮಾನ್’ರು ◌ؓ ಕೂಡ ಸಿಡುಬು ರೋಗದಿಂದ ಬಳಲುತ್ತಿದ್ದ ಕಾರಣದಿಂದಾಗಿತ್ತು ಅವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯವೂ ಹದೀಸ್’ಗಳಲ್ಲಿ ಇರುವುದು ಕಾಣಬಹುದು. ಪ್ರವಾದಿಯವರೇ ﷺ ಖುದ್ದಾಗಿ, ಉಸ್ಮಾನ್’ರಿಗೆ ಬದ್ರ್’ನಲ್ಲಿ ಭಾಗವಹಿಸಿದ ಪ್ರತಿಫಲ ಹಾಗೂ ಪಾಲು ಸಿಗಲಿದೆ ಎಂದು ಹೇಳಿದ್ದರು.

ಅನ್ಸಾರಿಯಾದ ಅಬೂ ಉಮಾಮತ್ ಬಿನ್ ಸಅಲಬರ ಕಥೆಯೂ ಕೂಡ ಇದೇ ರೀತಿ ಆಗಿತ್ತು, ಅವರು ಕೂಡ ಯುದ್ಧಕ್ಕೆ ಬರಲು ಸಂಪೂರ್ಣ ತಯಾರಾಗಿದ್ದರು, ಆದರೆ ಪ್ರವಾದಿಯವರ ﷺ ಅನುಮತಿಯ ಮೇರೆಗೆ, ರೋಗಿಯಾದ ತಾಯಿಯ ಶುಶ್ರೂಷೆಗಾಗಿ ಮದೀನದಲ್ಲೇ ಉಳಿದುಕೊಂಡರು. ಅವರ ತಾಯಿಯು ಕೂಡ ಅದೇ ರೋಗದಲ್ಲೇ ಇಹಲೋಕ ತ್ಯಜಿಸಿದರು, ನಂತರ ಪ್ರವಾದಿಯವರು ﷺ ಬಂದು ಅವರ ಸಮಾಧಿಯ (ಖಬರ್) ಪಕ್ಕದಲ್ಲಿ ನಿಂತು ಮಯ್ಯಿತ್ (ಜನಾಝ) ನಮಾಝ್ ಮಾಡಿದರು.

ಸಈದುಬಿನ್ ಝೈದ್ ◌ؓ ಹಾಗೂ ತ್ವಲ್’ಹತ್ ಬಿನ್ ಅಬ್’ದಿಲ್ಲಾಹ್ ಕೂಡ ಬದ್’ರ್ ಯುದ್ಧದಲ್ಲಿ ಭಾಗವಹಿಸಿ ಇರಲಿಲ್ಲ. ಅವರು ಪ್ರವಾದಿಯವರು ﷺ ನಿಯೋಗಿಸಿದ್ದ ಗೂಢಚಾರಿಗಳಾಗಿದ್ದರು, ಅವರು ಅಬೂಸುಫಿಯಾನ್’ರ ಖಾಫಿಲದ ಮಾಹಿತಿಯನ್ನು ಪಡೆದು, ಪ್ರವಾದಿಯವರು ﷺ ಮದೀನದಲ್ಲಿ ಇರಬಹುದು ಎಂದು ಮದೀನಕ್ಕೆ ಹೋಗಿದ್ದರು. ಆದರೆ ಅಲ್ಲಿ ಪ್ರವಾದಿಯವರು ﷺ ಬದ್’ರಿಗೆ ಹೋದ ವಿಷಯ ತಿಳಿದು ಹಿಂತಿರುಗಿ ಬಂದರು, ಅಷ್ಟೊತ್ತಿಗೆ ಪ್ರವಾದಿಯವರು ﷺ ಯುದ್ಧ ಕಳೆದು ವಾಪಸು ಬರುತ್ತಿದ್ದರು. ದಾರಿ ಮಧ್ಯೆ ಪ್ರವಾದಿಯವರನ್ನು ﷺ ಭೇಟಿಯಾದಾಗ, ಅವರಿಗೂ ಗನೀಮತ್ ಪಾಲನ್ನು ನೀಡಲಾಯಿತು, ಅದಕ್ಕೆ ಅವರು ನಮಗೆ ಬದ್ರೀಯಿನ್’ಗಳ ಪ್ರತಿಫಲ ಕೂಡ ಬೇಕು ಎಂದು ಕೇಳಿಕೊಂಡರು, ಅದಕ್ಕೆ ಪ್ರವಾದಿಯವರು ﷺ ಒಪ್ಪಿಗೆ ಸೂಚಿಸಿದರು.

ರೌಹಾಅ ಎಂಬ ಸ್ಥಳಕ್ಕೆ ತಲುಪಿದಾಗ, ಅಬೂಲುಬಾಬ ಅಬ್ದುಲ್ ಮುನ್’ಝಿರ್’ರನ್ನು ◌ؓ ಪ್ರವಾದಿಯವರ ﷺ ಮದೀನಕ್ಕೆ ಅವರ ಪ್ರತಿನಿಧಿಯಾಗಿ ಇರಬೇಕು ಎಂಬ ಉದ್ದೇಶದಿಂದ ವಾಪಾಸು ಕಳುಹಿಸಿದರು. ಅದೇ ರೀತಿ ಖುಬಾಅ್ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ, ಪ್ರತಿನಿಧಿಯಾಗಿ, ಆಸಿಮ್ ಬಿನ್ ಅದಿಯ್ಯಿರನ್ನೂ ◌ؓ ಕಳುಹಿಸಿದರು. ಮದೀನದಲ್ಲಿ ನಮಾಝಿಗೆ ನೇತೃತ್ವ ನೀಡಲು, ಅಬ್ದುಲ್ಲಾಹಿಬಿನ್ ಉಮ್ಮಿ ಮಕ್ತೂಮರನ್ನು ◌ؓ ಮೊದಲೇ ನಿಯೋಗಿಸಿದ್ದರು. ಅಂರ್ ಬಿನ್ ಔಫ್ ◌ؓ ಹಾಗೂ ಅವರ ಮಕ್ಕಳ ಬಗ್ಗೆ ಮಾಹಿತಿ ತಿಳಿಯುವ ಉದ್ದೇಶದಿಂದ ಹಾರಿಸ್ ಬಿನ್ ಅಂರ್’ರನ್ನು ◌ؓ ಪ್ರವಾದಿಯವರು ﷺ ರೌಹಾನಿಗೆ ತಲುಪಿದಾಗ ಹಿಂದಕ್ಕೆ ಕಳುಹಿಸಿದರು. ಗಾಯಗೊಂಡಿದ್ದ ಕಾರಣ ಖವ್ವತ್ ಬಿನ್ ಜುಬೈರ್ ◌ؓ ಹಾಗೂ ಹಾರಿಸ್ ಬಿನ್ ಸ್ವಿಮ್ಮರು ◌ؓ ಕೂಡ ಇದೇ ಸ್ಥಳದಿಂದಲೇ ವಾಪಸ್ಸು ಹೋದರು.

ಹಾವು ಕಚ್ಚಿದ್ದ ಕಾರಣ ಸಅದ್’ಬಿನ್ ಉಬಾದರು ◌ؓ ಬದ್’ರ್ ಯುದ್ಧದಲ್ಲಿ ಭಾಗವಹಿಸಿರಲಿಲ್ಲ, ಅನ್ಸಾರ್’ಗಳ ಪ್ರತಿಯೊಂದು ಮನೆಗೆ ತೆರಳಿ ಬದ್’ರಿಗೆ ಯೋಧರನ್ನು ಒಟ್ಟುಗೂಡಿಸಿದ ವ್ಯಕ್ತಿಯಾಗಿದ್ದರು ಅವರು. ಅವರ ಈ ಒಂದು ಉತ್ಸಾಹವನ್ನು ಪ್ರವಾದಿಯವರು ﷺ ವಿಶೇಷವಾಗಿ ಗಮನಿಸಿ ಹೊಗಳಿದ್ದರು.

ಅನಸ್ ಬಿನ್ ಮಾಲಿಕ್’ರು ◌ؓ ಸಣ್ಣ ಪ್ರಾಯದ ಹುಡುಗ ಆಗಿದ್ದ ಕಾರಣ ಅವರು ಬದ್’ರ್’ನಲ್ಲಿ ಭಾಗವಹಿಸಿದ್ದರೋ.? ಎಂಬುದರಲ್ಲಿ ಬಹಳಷ್ಟು ಅಭಿಪ್ರಾಯಗಳಿವೆ, ಅಬ್ದುಲ್ಲಾಹಿಬಿನ್ ಅಂರ್ ◌ؓ ಹಾಗೂ ಜಅಫರ್ ಬಿನ್ ಅಬೀತ್ವಾಲಿಬ್’ರಿಗೂ ◌ؓ ಕೂಡ ಪ್ರವಾದಿಯವರು ﷺ ಸಮರಾರ್ಜಿತ ಆಸ್ತಿಯಲ್ಲಿ ಪಾಲನ್ನು ನೀಡಿದ್ದರು.

ಮೇಲೆ ತಿಳಿಸಿದ ವ್ಯಕ್ತಿಗಳನ್ನು ಸೇರಿಸಿಯೂ, ಅಲ್ಲದೆಯೂ ಇರುವ ಜನಸಂಖ್ಯೆಗೆ, ಬದ್ರೀಯಿನ್’ಗಳ ಬಗ್ಗೆ ಇರುವ ಅಭಿಪ್ರಾಯಗಳೇ ಮುಖ್ಯ ಆಧಾರವಾಗಿದೆ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-219/365

ರೌಹಾನಿನಲ್ಲಿ ಹಬೀಬು ಬಿನ್ ಯಸಾಫ್ ಎಂಬ ಬಹುದೈವ ವಿಶ್ವಾಸಿಯಾಗಿದ್ದ ವ್ಯಕ್ತಿಯು, ಪ್ರವಾದಿಯವರ ﷺ ಗುಂಪಿನಲ್ಲಿ ಸೇರುವ ಆಗ್ರಹವನ್ನು ವ್ಯಕ್ತಪಡಿಸಿದರು. ಅವರೊಬ್ಬರು ಜನಬಲವಿರುವ ಧೀರ ಯೋಧನಾಗಿದ್ದರು, ಅವರು ತನ್ನ ತಂದೆಯ ಸಹೋದರನ ಮುಸ್ಲಿಮರಾದ ಮಕ್ಕಳ ಜೊತೆಯಲ್ಲಿ ಸೇರಿ ಯುದ್ಧ ಮಾಡಿ, ಸಮರಾರ್ಜಿತ ಆಸ್ತಿ ಸಿಕ್ಕರೆ.? ಅದರಲ್ಲಿ ಪಾಲು ಪಡೆಯುವ ಉದ್ದೇಶದಿಂದ ಬಂದಿದ್ದರು. ಅದಕ್ಕೆ ಪ್ರವಾದಿಯವರು ﷺ ಆ ವ್ಯಕ್ತಿಯಲ್ಲಿ, ನೀವು ಅಲ್ಲಾಹನನ್ನು ತನ್ನ ಆರಾಧ್ಯನಾಗಿಯೂ, ಅವನ ದೂತರನ್ನು ಪ್ರವಾದಿಯಾಗಿಯೂ ﷺ ವಿಶ್ವಾಸ ವಿರಿಸುತ್ತೀರೆ.? ಎಂದು ಕೇಳಿದರು. ಆ ವ್ಯಕ್ತಿಯು ಇಲ್ಲ ಎಂದಾಗ, ಪ್ರವಾದಿಯವರು ﷺ ಅವರನ್ನು ವಾಪಾಸು ಕಳುಹಿಸಿ, “ಬಹುದೈವ ವಿಶ್ವಾಸಿಗಳ, ವಿರುದ್ಧ ಬಹುದೈವ ವಿಶ್ವಾಸಿಗಳ ಸಹಾಯ ನಾವು ಖಂಡಿತ ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿದರು. ಆದರೆ ಅವರು ಪುನಃ ಬಂದು ವಿನಂತಿ ಮಾಡಿದಾಗಲೂ, ಪ್ರವಾದಿಯವರು ﷺ ವಾಪಸು ಕಳುಹಿಸಿದರು. ಮೂರನೇ ಬಾರಿ ಈ ವ್ಯಕ್ತಿ ಪುನಃ ಬಂದು ಅನುಮತಿ ಕೇಳಿದಾಗ, ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವುದಾದರೆ ಮಾತ್ರ ನಿಮಗೆ ಅನುಮತಿ ಕೊಡಲು ಸಾಧ್ಯ ಎಂದು ಹೇಳಿದರು. ಅದಕ್ಕೆ ಆ ವ್ಯಕ್ತಿಯೂ, ಸತ್ಯ ವಚನವನ್ನು ಹೇಳಿ, ಹೌದು ನಾನು ಅಲ್ಲಾಹನಲ್ಲಿ ವಿಶ್ವಾಸವಿರಿಸುತ್ತೇನೆ ಎಂದು ಹೇಳಿದರು. ಹಾಗಾಗಿ ಪ್ರವಾದಿಯವರು ﷺ ಅವರಿಗೆ ಯುದ್ಧದಲ್ಲಿ ಭಾಗವಹಿಸಲು ಅನುಮತಿ ನೀಡಿದರು, ಆ ವ್ಯಕ್ತಿಯು ಯುದ್ಧದಲ್ಲಿ ಬಹಳ ಕೆಚ್ಚೆಯಿಂದ ಹೊರಾಡಿದ್ದರು.
ಆದರೆ ಇಲ್ಲಿ ಅವರು ಇಸ್ಲಾಮ್ ಸ್ವೀಕರಿಸಿದ ನಂತರವಾಗಿತ್ತು ಬಂದು ಪ್ರವಾದಿಯವರಲ್ಲಿ ﷺ ಅನುಮತಿ ಕೇಳಿದ್ದು ಎಂಬ ಅಭಿಪ್ರಾಯವನ್ನು ಕೂಡ ಕೆಲವರು ಉಲ್ಲೇಖಿಸಿದ್ದು ಕಾಣಬಹುದು.

ಮುಸ್ಲಿಮರಲ್ಲಿ ಪ್ರಯಾಣಿಸಲು ಇದ್ದದ್ದು ಕೇವಲ ಎಪ್ಪತ್ತು ಒಂಟೆಗಳು ಮಾತ್ರವಾಗಿತ್ತು. ಮೂರು, ನಾಲ್ಕು ಜನರು ಒಟ್ಟಿಗೆ ಒಂದೇ ಒಂಟೆಯ ಮೇಲೆ ಸಲಾಗಿ ಕುಳಿತು ಪ್ರಯಾಣಿಸುತ್ತಿದ್ದರು. ಪ್ರವಾದಿಯವರು ﷺ, ಅಲಿ ◌ؓ ಹಾಗೂ ಮರ್’ಸದ್ ಬಿನ್ ಮರ್’ಸದ್ ಒಂದೇ ಒಂಟೆಯ ಮೇಲೆ ಪ್ರಯಾಣಿಸುತ್ತಿದ್ದರು. ಅಲಿ ◌ؓ ಹಾಗೂ ಮರ್’ಸದ್’ರು ◌ؓ ಪ್ರವಾದಿಯವರಲ್ಲಿ ﷺ ನೀವು ಒಂಟೆಯ ಮೇಲೆ ಬಹಳ ಆರಾಮವಾಗಿ ಕುಳಿತು ಬನ್ನಿ, ನಾವು ನಡೆದುಕೊಂಡು ಬರುತ್ತೇವೆ ಎಂದು ಹೇಳಿದಾಗ, ಪ್ರವಾದಿಯವರು ﷺ ಅದನ್ನು ನಿರಾಕರಿಸುತ್ತಾ, “ನೀವು ನನಗಿಂತ ಅಧಿಕ ಶಕ್ತಿವಂತರಾಗಲಿ, ಅಥವಾ ನಾನು ಅಲ್ಲಾಹನ ಬಳಿ ಪ್ರತಿಫಲ ಅಗತ್ಯವಿಲ್ಲದ ವ್ಯಕ್ತಿಯಾಗಲಿ ಅಲ್ಲ” ಹಾಗಾಗಿ ಒಟ್ಟಿಗೆ ಪ್ರಯಾಣಿಸೋಣ ಎಂದು ಹೇಳಿದರು.
ಪ್ರವಾದಿಯವರ ﷺ ಸುಂದರವಾದ ಒಡನಾಟ ಹಾಗೂ ವಿನಮ್ರತೆಯ ಒಂದು ಭಾಗ ಮಾತ್ರವಾಗಿದೆ ಇದು. ಒಂಟೆಯ ಮೇಲೆ ಸಾಲಾಗಿ ಕುಳಿತು ಬರುತ್ತಿದ್ದ ಕೆಲವು ತಂಡದ ಹೆಸರುಗಳು ಈ ರೀತಿಯಾಗಿದೆ.

1. ಉಬಯ್ಯು ಬಿನ್ ಕಅಬ್ ◌ؓ, ಉಮಾರ ಬಿನ್ ಹಝ್’ಮ್ ◌ؓ ಹಾಗೂ ಹಾರಿಸತ್ ಬಿನ್ ನುಅ್’ಮಾನ್ ◌ؓ

2. ಹಂಝ ◌ؓ, ಝೈದ್ ಬಿನ್ ಹಾರಿಸ ◌ؓ, ಅನಸತ್ ◌ؓ ಹಾಗೂ ಅಬೂ ಕಬ್’ಶ ◌ؓ

3. ಖಿರಾಶ್ ಬಿನ್ ಸಮ್ಮ ◌ؓ, ಖುತ್’ಬತ್ ಬಿನ್ ಆಮಿರ್ ◌ؓ, ಉತ್’ಬತ್ ಬಿನ್ ಗಸ್ವಾನ್ ◌ؓ, ಹಾಗೂ ತುಫೈಲ್ ಬಿನ್ ಅಂರ್ ◌ؓ

4. ಉಬೈದತ್ ಬಿನ್ ಹಾರಿಸ್ ◌ؓ, ಹಾರಿಸ್’ರ ಎರಡು ಮಕ್ಕಳು (ತುಫೈಲ್, ಹುಸೈನ್) ಮಿಸ್’ತಹ್ ಬಿನ್ ಅಸಾಮಃ ◌ؓ

5. ಅಬುಲ್ ಹಂರಾಅ ◌ؓ, ಅಫ್’ರಾಅ್’ರ ಮೂರು ಮಕ್ಕಳು (ಮುಆದ್, ಮುಅವ್ವಿದ್, ಔಫ್)

6. ಅಬ್ದುಲ್ಲಾಹ್ ಬಿನ್ ಮಸ್’ವೂದ್ ◌ؓ, ಅಮ್ಮಾರ್ ಬಿನ್ ಯಾಸಿರ್ ◌ؓ

7. ಮಿಸ್’ಅಬ್ ಬಿನ್ ಉಮೈರ್ ◌ؓ, ಸುವೈಬತ್ ಬಿನ್ ಹರ್’ಮಲ ◌ؓ, ಮಸ್’ವೂದ್ ಬಿನ್ ರಬೀಅ್ ◌ؓ

8. ಉಸ್ಮಾನ್ ಬಿನ್ ಮಳ್’ಗೂನ್ ◌ؓ, ಖುದಾಮ ◌ؓ, ಅಬ್ದುಲ್ಲಾಹ್ ಬಿನ್ ಮಳ್’ಗೂನ್ ◌ؓ, ಸಾಯಿಬ್ ಬಿನ್ ಉಸ್’ಮಾನ್ ◌ؓ

9. ಅಬ್ದುಲ್ಲಾಹ್ ಬಿನ್ ಕಅಬ್ ◌ؓ, ಅಬೂದಾವೂದ್ ಅಲ್ ಮಾಸಿನಿ ◌ؓ, ಸುಲೈತ್ ಬಿನ್ ಖೈಸ್ ◌ؓ

10. ಅಬೂಬಕ್ಕರ್ ◌ؓ, ಉಮರ್ ◌ؓ, ಅಬ್ದುರಹ್ಮಾನ್ ಬಿನ್ ಔಫ್ ◌ؓ

11. ಸಅದ್ ಬಿನ್ ಝೈದ್ ◌ؓ, ಸಲಮತ್ ಬಿನ್ ಸಲಾಮ ◌ؓ, ಉಬ್ಬಾದ್ ಬಿನ್ ಬಿಶ್’ರ್ ◌ؓ, ರಾಫಿಅ್ ಬಿನ್ ಯಝೀದ್ ◌ؓ

12. ಉಬೈದ್ ಬಿನ್ ಝೈದ್ ◌ؓ, ರಾಫಿಅ್’ನ ಎರಡು ಮಕ್ಕಳು (ರಿಫಾಅ ಹಾಗೂ ಖಲ್ಲಾದ್)

13. ಸಅದ್ ಬಿನ್ ಮುಆದ್ ◌ؓ, ಹಾರಿಸ್ ಬಿನ್ ಔಸ್ ◌ؓ, ಹಾರಿಸ್ ಬಿನ್ ಅನಸ್ ◌ؓ

ಉಬೈದ್ ಬಿನ್ ಝೈದ್ ಹಾಗೂ ಅವರ ಗೆಳೆಯರು ಪ್ರಯಾಣಿಸುತ್ತಿದ್ದ ಒಂಟೆಯು ಕುಸಿದು ಬಿದ್ದಿತು, ಅವರು ನೇರವಾಗಿ ಪ್ರವಾದಿಯವರ ﷺ ಬಳಿ ಹೋಗಿ ದೂರು ಕೊಟ್ಟರು, ಅದಕ್ಕೆ ಪ್ರವಾದಿಯವರು ﷺ ಅವರಲ್ಲಿ ಒಂದು ಪಾತ್ರೆಯಲ್ಲಿ ನೀರು ತರಲು ಹೇಳಿದರು. ಆ ನೀರಿನಲ್ಲಿ ಪ್ರವಾದಿಯವರು ﷺ ಅಂಗಸ್ನಾನ ಮಾಡಿ, ಆ ನೀರನ್ನು ಒಂಟೆಯ ಬಾಯಿಗೂ, ಇಡೀ ದೇಹಕ್ಕೂ ಸುರಿದರು. ನಂತರ ಈಗ ಇದರ ಮೇಲೆ ಪ್ರಯಾಣ ಮುಂದುವರಿಸಿರಿ ಎಂದು ಹೇಳಿದರು. ಆ ಒಂಟೆಯು ತನ್ನ ಎಲ್ಲಾ ಆಯಾಸದಿಂದ ಹೊರಗೆ ಬಂದು ಬಹಳ ವೇಗವಾಗಿ ಮುಂದೆ ಸಾಗಲು ಆರಂಭಿಸಿತು.
ಮುಸ್ಲಿಮರ ಬಳಿ ಬದ್’ರ್ ಯುದ್ಧದಲ್ಲಿ ಬಳಸಲು ಇದ್ದದ್ದು ಕೇವಲ ಐವತ್ತು ಕುದುರೆ ಮಾತ್ರವಾಗಿತ್ತು. ಅವುಗಳು ಪ್ರವಾದಿಯವರದ್ದು ﷺ ಹಾಗೂ ಮಿಖ್’ದಾದ್, ಮರ್’ಸದ್ ಹಾಗೂ ಝುಬೈರ್ ಎಂಬುವವರ ಕುದುರೆಗಳಾಗಿದ್ದವು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-220/365

ಬಿಆರ್ ಅಬೀ ಇನವಃ ಅಥವಾ ಅಬೂ ಇನಬಃ ಬಾವಿಯ ಬಳಿಯ ತಲುಪಿದಾಗ ಪ್ರವಾದಿಯವರು ﷺ ತಮ್ಮ ಖಡ್ಗವನ್ನು ಓರೆಯಲ್ಲಿ ಹಾಕಿ, ಯುದ್ಧ ಕವಚ ಧರಿಸಿದರು. ನಂತರ ತಮ್ಮ ಅನುಚರರಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಲು ಆರಂಭಿಸಿದರು. “ಯಾ ಅಲ್ಲಾಹ್ ಇವರು ನಗ್ನ ಪಾದದಲ್ಲಿ ಇರುವ ಜನಾರಿಗುತ್ತಾರೆ, ಅವರಿಗೆ ನೀನು ಓಡಾಡಲು ವಾಹನ ನೀಡು ಪ್ರಭು.!, ಇವರಿಗೆ ಧರಿಸಲು ಸರಿಯಾಗಿ ಉಡುಪುಗಳು ಕೂಡ ಇಲ್ಲ, ಇವರಿಗೆ ಒಳ್ಳೆಯ ಉಡುಪುಗಳನ್ನು ನೀಡಿ ಅನುಗ್ರಹಿಸು ಪ್ರಭು.! ಇವರಿಗೆ ತಿನ್ನಲು ಸರಿಯಾದ ಆಹಾರ ಕೂಡ ಇಲ್ಲ, ಇವರಿಗೆ ನೀನು ಒಳ್ಳೆಯ ಆಹಾರ ನೀಡಿ ಅನುಗ್ರಹಿಸು ಪ್ರಭು.! ಇವರು ತುಂಬಾ ಬಡವರಾಗಿರುವರು ನೀನು ಅವರಿಗೆ ಐಶ್ವರ್ಯವನ್ನು ಕೊಟ್ಟು ಅನುಗ್ರಹಿಸು ಪ್ರಭು!” ಎಂದು ಪ್ರಾರ್ಥಿಸಿದರು. ಈ ಪ್ರಾರ್ಥನೆಗೆ ಉತ್ತರ ಕೂಡ ಲಭಿಸಿತ್ತು, ಬದ್ರ್ ಹೋರಾಟ ಕಳೆದು ಹಿಂತಿರುಗಿ ಹೋಗುವಾಗ ಬಹಳಷ್ಟು ಆಹಾರ ಧಾನ್ಯಗಳು, ವಾಹನಗಳು, ಕೂಡ ಸಿಕ್ಕಿತ್ತು. ಅಷ್ಟೇ ಅಲ್ಲದೆ ಯುದ್ಧ ಖೈದಿಗಳನ್ನು ಬಿಡಿಸಲು ನೀಡಿದ ಮೌಲ್ಯಗಳಿಂದ ಅವರಿಗೆ ಸಂಪತ್ತು ಕೂಡ ಲಭಿಸಿತು.

ಮದೀನಾ ನಿವಾಸಿಗಳಿಗಾಗಿ ಕೂಡ ಪ್ರವಾದಿಯವರು ﷺ ವಿಶೇಷವಾಗಿ ಪ್ರಾರ್ಥನೆ ಮಾಡಿದರು. “ಯಾ ಅಲ್ಲಾಹ್ ನಿನ್ನ ದಾಸನೂ, ಇಷ್ಟ ಮಿತ್ರನೂ ಆದ ಪ್ರವಾದಿ ಇಬ್ರಾಹಿಂಮರು (ಅ) ಮಕ್ಕಾ ನಗರಕ್ಕೆ ಬೇಕಾಗಿ ಪ್ರಾರ್ಥಿಸಿದ್ದರು, ನಿನ್ನ ದಾಸನೂ, ದೂತನು ಆದ ನಾನು ನಿನ್ನಲ್ಲಿ ಮದೀನಕ್ಕೆ ಬೇಕಾಗಿ ಪ್ರಾರ್ಥಿಸುತ್ತಿದ್ದೇನೆ. ಇಲ್ಲಿಯ ಬೆಳೆಗಳಲ್ಲಿ, ದಾನ್ಯಗಳಲ್ಲಿ, ಭಕ್ಷ್ಯಗಳಲ್ಲಿ ನಿನ್ನ ಆಶೀರ್ವಾದ ನೀಡಿ ಅನುಗ್ರಹಿಸು ಪ್ರಭು.! ಮದೀನವನ್ನು ನಮಗೆ ಬಹಳ ಇಷ್ಟದ ಊರಾಗಿ ಬದಲಾಯಿಸು ಪ್ರಭು, ಇಲ್ಲಿಯ ರೋಗವನ್ನು ಸಂಪೂರ್ಣವಾಗಿ ಜುಹ್’ಫಾಗೆ ಸ್ಥಳಾಂತರಿಸು ಪ್ರಭು.! ನಿನ್ನ ಪ್ರೀತಿಯ ಪ್ರವಾದಿ ಇಬ್ರಾಹಿಮರು (ಅ) ಮಕ್ಕಾವನ್ನು ಪವಿತ್ರ ಭೂಮಿ ಅಥವಾ ಹರಮ್ ಎಂದು ಘೋಷಿಸಿದಂತೆಯೇ, ನಾನು ಮದೀನಾವನ್ನು ಎರಡು ಕಪ್ಪು ಕಲ್ಲಿನ ಗಡಿಗಳ ನಡುವಿನ ಪವಿತ್ರ ಭೂಮಿ ಎಂದು ಘೋಷಿಸುತ್ತೇನೆ.” ಎಂದು ಪ್ರಾರ್ಥಿಸಿದರು.

ಮುಸ್ಲಿಮರ ತಂಡವು ತಮ್ಮ ಪ್ರಯಾಣವನ್ನು ಮುಂದುವರಿಸಿತು. ಮದೀನದಿಂದ ಅರುವತ್ತೆಂಟು ಕಿಲೋಮೀಟರ್ ದೂರದಲ್ಲಿರುವ “ಅರ್’ಖುಳ್ಳಬಿಯ” ಎಂಬ ಪ್ರದೇಶಕ್ಕೆ ತಲುಪಿದರು. ಬಿಅರು ರೌಹಾಯಿಂದ ಕೇವಲ ಮೂರೇ ಕಿ.ಮಿ ದೂರವಿರುವ ಸ್ಥಳವಾಗಿದೆ ಇದು. ಈ ಸ್ಥಳಕ್ಕೆ ಅಧಿಕ ಬಿಸಿಯೂ ಅಲ್ಲದ, ಅಧಿಕ ತಂಪೂ ಅಲ್ಲದ ಗಾಳಿ ಬೀಸುವ ಕಾರಣ “ಸಜ್’ಸಾಜ್” ಎಂಬ ಹೆಸರು ಕೂಡ ಇದೆ.
ದಾರಿಮಧ್ಯೆ ಸಿಕ್ಕ, ಅದೇ ಊರಿನ ಒಬ್ಬರು ವಯಸ್ಸಾದ ವ್ಯಕ್ತಿಯಲ್ಲಿ, ಖುರೈಷಿಗಳ ವ್ಯಾಪಾರ ತಂಡದ ಬಗ್ಗೆ ಮಾಹಿತಿ ಕೇಳಲಾಯಿತು. ಆದರೆ ಅವರಲ್ಲಿ ಯಾವುದೇ ಮಾಹಿತಿ ಕೂಡ ಸಿಗಲಿಲ್ಲ. ನಂತರ ಅವರನ್ನು ಪ್ರವಾದಿಯವರ ﷺ ಜೊತೆ ಮಾತಾಡಲು ಹೇಳಿದಾಗ, ಆ ವ್ಯಕ್ತಿಯು ಪ್ರವಾದಿಯವರ ﷺ ಬಳಿ ಬಂದು ನೀವು ಅಲ್ಲಾಹುವಿನ ಪ್ರವಾದಿಯವರೇ ﷺ.? ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಹೌದು ಎಂದು ಉತ್ತರಿಸಿದಾಗ, ಆ ವ್ಯಕ್ತಿಯೂ ಪುನಃ ಆಗಿದ್ದಲ್ಲಿ, ಈ ಒಂಟೆಯ ಹೊಟ್ಟೆಯ ಒಳಗೆ ಏನಿದೆ ಎಂದು ಹೇಳಿ,ಎಂದು ಪುನಃ ಕೇಳಿದರು. ಆ ವ್ಯಕ್ತಿಯ ದುರುದ್ದೇಶಪೂರಿತ ಪ್ರಶ್ನೆಯು ಸಲಾಮತ್ ಬಿನ್ ಸಲಾಮರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಮುಂದೆ ಬಂದು, ಅದರ ಬಗ್ಗೆ ಪ್ರವಾದಿಯವರಲ್ಲಿ ﷺ ಕೇಳಬೇಡಿ, ನಾನು ನಿಮಗೆ ಹೇಳುತ್ತೇನೆ. ಅದರ ಹೊಟ್ಟೆಯಲ್ಲಿ ನಿಮ್ಮಿಂದ ಹುಟ್ಟಿದ ಮಗುವಿದೆ ಎಂದು ಹೇಳಿದರು. ಇಂತಹ ಅಹಂಕಾರದ, ಅಸಂಬದ್ಧ ಪ್ರಶ್ನೆ ಕೇಳಿದ ವ್ಯಕ್ತಿಯ ಬಾಯಿ ಮುಚ್ಚಿಸುವುದು ಮಾತ್ರವಾಗಿತ್ತು ಅವರ ಉದ್ದೇಶ, ಆದರೆ ಆ ಮಾತು ಪ್ರವಾದಿಯವರಿಗೆ ﷺ ಇಷ್ಟವಾಗಲಿಲ್ಲ. ಹಾಗಾಗಿ ಪ್ರವಾದಿಯವರು ﷺ ಮಧ್ಯೆ ಪ್ರವೇಶಿಸಿ, ಅವರಿಗೆ ಛಿಮಾರಿ ಹಾಕುತ್ತಾ “ಇದೇನು ಅವರಲ್ಲಿ ಅಸಂಬದ್ಧ ಮಾತುಗಳನ್ನು ಆಡುತ್ತಿದ್ದೀಯ.? ಎಂದು ಹೇಳಿ, ತನ್ನ ಮುಖವನ್ನು ಅವರ ಭಾಗದಿಂದ ತಿರುಗಿಸಿದರು.”

ಮುಸ್ಲಿಮರ ಪ್ರಯಾಣ ಪುನಃ ಮುಂದುವರಿಯಿತು, ಮಕ್ಕಾಗೆ ಹೋಗಬೇಕಾದ ದಾರಿಯೂ ಪ್ರವಾದಿಯವರ ﷺ ಎಡ ಭಾಗದಲ್ಲಿ ಬರುತ್ತಿತ್ತು. ಬಲ ಭಾಗದಲ್ಲಿ, “ನಾಸಿಯ್ಯ” ಎಂಬ ಪ್ರಾಂತ್ಯವು ಬರುತ್ತಿತ್ತು. ಅಲ್ಲಿಂದ ಇನ್ನಷ್ಟು ಮುಂದೆ ಹೋಗಿ, “ರಹ್’ಖಾನ್” ಕಣಿವೆಯ ಬಳಿ ತಲುಪಿದರು. ಅಲ್ಲಿ ಬನೂ ಸಈದ್ ಜನಾಂಗದವರಲ್ಲಿ ಒಪ್ಪಂದದಲ್ಲಿರುವ ಬಸ್’ಬಸ್ ಬಿನ್ ಅಂರ್ ಅಲ್’ಜುಹನಿ ಹಾಗೂ ಬನೂನಜ್ಜಾರ್ ಜನಾಂಗದ ಜೊತೆಯಲ್ಲಿ ಒಪ್ಪಂದದಲ್ಲಿರುವ ಅದಿಯ್ಯು ಬಿನ್ ಅಬುಸ್ಸಗಬಾಅ ಎಂಬವರನ್ನು ಖುರೈಷಿಗಳ ಬಗ್ಗೆ ಮಾಹಿತಿ ಪಡೆಯಲು ನಿಯೋಗಿಸಿದರು.

ಅಲ್ಲಿಂದ ಪುನಃ ಮುಂದೆ ಸಾಗಿದ ನಂತರ, ಪ್ರವಾದಿಯವರು ﷺ ಅಲ್ಲಿ ಕಾಣುತ್ತಿದ್ದ ಬೆಟ್ಟಗಳನ್ನು ತೋರಿಸಿ, ಈ ಬೆಟ್ಟ ಯಾವುದೆಂದು ನಿಮಗೆ ಗೊತ್ತಿದಿಯೇ.? ಎಂದು ಕೇಳಿದಾಗ, ಗುಂಪಿನಿಂದ ಯಾರೋ ಒಬ್ಬರು “ಮುಸ್’ಲಿಹ್ ಹಾಗೂ ಮುಅರ್’ರಿಖ್” ಎಂಬ ಬೆಟ್ಟಗಳಾಗಿವೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ಅಲ್ಲಿ ವಾಸಿಸುವ ಜನಾಂಗದವರ ಬಗ್ಗೆ ನಿಮಗೆ ಗೊತ್ತಾ.? ಎಂದು ಪುನಃ ಕೇಳಿದರು. ಬನುನ್ನಾರ್ ಎಂಬ ಬನೂಹರ್’ರಾಖ್ ಜನಾಂಗಗಳಾಗಿವೆ ಎಂದು ಗುಂಪಿನಿಂದ ಉತ್ತರ ಬಂದಿತು. ಆ ಹೆಸರುಗಳನ್ನು ಕೇಳಿದಾಗ ಪ್ರವಾದಿಯವರಿಗೆ ﷺ ಅಷ್ಟೊಂದು ಸಮಾಧಾನ ಆಗಿರಲಿಲ್ಲ, ಹಾಗಾಗಿ ಅಲ್ಲಿಂದ ಸ್ವಲ್ಪ ಬಲ ಭಾಗಕ್ಕೆ ಸರಿದು “ವಾದಿ ದಫ್’ರಾನ್” ಕಡೆಗೆ ಹೊರಟರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-221/365

ವಾದಿ ದಫ್’ರಾನ್’ಗೆ ತಲುಪಿದ ಸಂದರ್ಭದಲ್ಲಾಗಿತ್ತು ಮಕ್ಕಾ ನಿವಾಸಿಗಳು ಸೈನ್ಯದೊಂದಿಗೆ ಎದುರಿಸಲು ಬರುತ್ತಿದ್ದಾರೆ ಎಂಬ ವಿವರವು ತಿಳಿಯುವುದು. ಅಷ್ಟೊತ್ತಿಗೆ ಸಂಪೂರ್ಣ ಪರಿಸ್ಥಿತಿಯೇ ಬದಲಾಗಿತ್ತು, ಕೇವಲ ಎಪ್ಪತ್ತು ಜನರ ವ್ಯಾಪಾರ ಗುಂಪನ್ನು ಎದುರಿಸಲು ಬಂದಿದ್ದವರು, ಈಗ ಒಂದು ಸಂಪೂರ್ಣ ಸೇನೆಯನ್ನು ಎದುರಿಸಬೇಕಿತ್ತು. ಸಿರಿಯಾಗೆ ತೆರಳುತ್ತಿದ್ದ ವ್ಯಾಪಾರ ದಾರಿಯು, ಮಕ್ಕಾದ ಜನತೆಯ ಎಲ್ಲವೂ ಆಗಿದೆ, ಬಹುಶಃ ಇದನ್ನು ತಡೆಯುವುದು ಯಾರೇ ಆದರೂ, ಅದು ಮಕ್ಕಾ ಜನತೆಯ ಸಂಪೂರ್ಣ ಬದುಕಿಗೆ ಪರಿಣಾಮ ಬೀರುತ್ತೆ, ಎಂಬ ಮಾಹಿತಿಯು ಪ್ರವಾದಿಯವರಿಗೆ ﷺ ತಿಳಿಯಿತು.

ಪ್ರವಾದಿಯವರು ﷺ ಹಾಗೂ ಅವರ ಅನುಚರರರು ಆತ್ಮವಿಶ್ವಾಸದಿಂದ ಅಲ್ಲಾಹನ ಮೇಲಿನ ಭರವಸೆಯೊಂದಿಗೆ ಮುಂದಕ್ಕೆ ಸಾಗಿದರು. ಒಂದೋ ವ್ಯಾಪಾರ ತಂಡವನ್ನು (ಊರ್) ವಶಪಡಿಸಬೇಕು, ಇಲ್ಲದಿದ್ದರೆ ಸೈನ್ಯವನ್ನು (ನಫೀರ್) ಎದುರಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ಪ್ರವಾದಿಯವರು ﷺ ಮುಂದಕ್ಕೆ ಸಾಗಿದರು. ಹಾಗಾಗಿ ಭಯ ಪಡಬೇಡಬೇಕಾದ ಪರಿಸ್ಥಿತಿಯೇ ಬರಲಿಲ್ಲ.
ಪ್ರವಾದಿಯವರು ﷺ ಹಾಗೂ ಅವರ ಅನುಚರರು ಜೊತೆ ಸೇರಿ, ಹೊಸ ಮಾಹಿತಿಯನ್ನು ಪಡೆದುಕೊಂಡರು. ಮುಂದಿನ ಎಲ್ಲಾ ರಣತಂತ್ರದ ಬಗ್ಗೆ ಬಹಳಷ್ಟು ಯೋಜನೆಗಳನ್ನು ಹಾಕಿಕೊಂಡರು, ಇತಿಹಾಸದ ಪುಟದಲ್ಲಿ ಹೊಸದೊಂದು ಅಧ್ಯಾಯ ಸೃಷ್ಟಿಸುವ ಯುದ್ದಕ್ಕೆ ಮುನ್ನುಡಿ ಹಾಕುವ ಸಕಲ ಸಿದ್ಧತೆಗಳನ್ನೂ ಮಾಡಲಾಯಿತು.

ಇಲ್ಲಿ ಪ್ರವಾದಿಯವರಿಗೆ ﷺ ಒಂದು ಪ್ರತಿರೋಧ ಹಾಗೂ ಧರ್ಮ ಯುದ್ದವನ್ನು ಹೇಗೆ ಜೋಡಿಸಬೇಕೆಂಬ ಜವಾಬ್ದಾರಿಯನ್ನೂ ನಿಭಾಯಿಸಬೇಕಿತ್ತು. ಪ್ರವಾದಿಯವರು, ﷺ ತಮ್ಮ ಅನುಚರರಲ್ಲಿ ಯುದ್ಧದ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಾ, ನಾವು ಈಗ ಏನು ಮಾಡುವುದು.? ವ್ಯಾಪಾರ ಗುಂಪನ್ನು ತಡೆಯುವುದೋ.? ಅಥವಾ ಎರಡೂ ಜೊತೆ ಸೇರಿ ಯುದ್ಧ ಮಾಡುವುದೋ.? ಎಂದು ಕೇಳಿದಾಗ, ಒಂದು ವಿಭಾಗದ ಜನರು, ನೀವು ಮೊದಲೇ ಒಂದು ಯುದ್ಧದ ಬಗ್ಗೆ ತಿಳಿಸಿರುತ್ತಿದ್ದರೆ.? ನಮಗೆ ಅದಕ್ಕೆ ಸಂಪೂರ್ಣವಾಗಿ ತಯಾರು ಆಗಿ ಬರಬಹುದಿತ್ತು. ಈಗ ನಾವು ವ್ಯಾಪಾರ ಗುಂಪನ್ನು ಎದುರಿಸಿ ವಾಪಸು ಮರಳೋಣ ಎಂದು ಹೇಳಿತು. ಅದನ್ನು ಕೇಳಿ ಪ್ರವಾದಿಯವರ ﷺ ಮುಖ ಭಾವ ಸಂಪೂರ್ಣವಾಗಿ ಬದಲಾಯಿತು, ಆ ಸಂದರ್ಭದಲ್ಲಾಗಿತ್ತು ಪವಿತ್ರ ಖುರ್’ಆನಿನ ಎಂಟನೇ ಅಧ್ಯಾಯ ಅಲ್ – ಅಂಫಾಲ್’ನ ಐದನೇ ಸೂಕ್ತವು ಅವತರಿಸಿದ್ದು, ಅದರ ಸಾರವು ಈ ರೀತಿಯಾಗಿದೆ, “ವಿಶ್ವಾಸಿಗಳ ಪೈಕಿ ಒಂದು ವಿಭಾಗಕ್ಕೆ ಇಷ್ಟವಿಲ್ಲದಿದ್ದರೂ, ನ್ಯಾಯೋಚಿತವಾದ ವಿಷಯಕ್ಕಾಗಿ, ನಿಮ್ಮ ಪ್ರಭು, ನಿಮ್ಮನ್ನು ಹೊರ ತಂದಿದ್ದನು”

ಪ್ರವಾದಿಯವರು ﷺ ಪುನಃ, ತಮ್ಮ ಅನುಚರರಲ್ಲಿ ಅಭಿಪ್ರಾಯಗಳನ್ನು ಕೇಳಿದರು. ಆ ಸಂದರ್ಭದಲ್ಲಿ ಅಬೂಬಕ್ಕರ್ ◌ؓ ಎದ್ದು ನಿಂತು, ಆತ್ಮಸಮರ್ಪಣೆಯೊಂದಿಗೆ ನಾವು ಯಾವುದಕ್ಕೂ ತಯಾರು ಆಗಿರುತ್ತೇವೆ ಎಂದು ಹೇಳಿದರು. ನಂತರ ಉಮರ್’ರವರು ◌ؓ ಎದ್ದು ನಿಂತು, ಮುಹಾಜಿರ್’ಗಳು ಈಗಲೂ ಕೂಡ ಬಹಳ ವೀರಾವೇಶದಿಂದ ಖಂಡಿತ ಹೋರಾಡುತ್ತೇವೆ ಎಂದು ಹೇಳಿ ಸುಮ್ಮನಾದರು. ನಂತರ ಪ್ರವಾದಿಯವರು ﷺ ಪುನಃ ತಮ್ಮ ಅನುಚರರಲ್ಲಿ ಅಭಿಪ್ರಾಯಗಳನ್ನು ಕೇಳಿದಾಗ, ಮಿಖ್’ದಾದ್ ಬಿನ್ ಅಂರ್ ◌ؓ ಎದ್ದು ನಿಂತು, “ಓ ಪ್ರವಾದಿಯವರೇ ﷺ, ಅಲ್ಲಾಹನ ಆಜ್ಞೆ ಹೇಗೆ ಇದೆಯೋ.? ಅದೇ ರೀತಿ ಮುಂದೆ ಸಾಗೋಣ, ನೀವು ಹಾಗೂ ನಿಮ್ಮ ಪ್ರಭು ಸೇರಿ ಯುದ್ಧ ನಡೆಸಿರಿ, ನಾವು ಇಲ್ಲೇ ಇರುತ್ತೇವೆ. ಎಂದು ಬನೂ ಇಸ್ರಾಯೇಲರು ಪ್ರವಾದಿ ಮೂಸರಲ್ಲಿ (ಅ) ಹೇಳಿದ ಹಾಗೆ, ನಿಮ್ಮಲ್ಲಿ ನಾವು ಖಂಡಿತ ಹೇಳುವುದಿಲ್ಲ, ನೀವು ಹಾಗೂ ನಿಮ್ಮ ಪ್ರಭು ಯುದ್ಧ ನಡೆಸುವಾಗ, ನಾವು ಕೂಡ ಖಂಡಿತ ಇದ್ದೇ ಇರುತ್ತೇವೆ, ಎಂದಾಗಿದೆ ನಮ್ಮ ಪ್ರತಿಕ್ರಿಯೆ. ಅಲ್ಲಾಹನಾಣೆ.! ನಮ್ಮ ಕಣ್ರೆಪ್ಪೆ ಚಲಿಸುವ ಕಾಲದವರೆಗೂ ನಾವು ನಿಮ್ಮ ಜೊತೆಯಲ್ಲಿ ಖಂಡಿತ ಇದ್ದೇ ಇರುತ್ತೇವೆ. ಬಹುಶಃ ನೀವು ನಮ್ಮನ್ನು ಅರೇಬಿಯನ್ ಉಪಖಂಡದ ಆಚೆ, ಬರ್’ಕುಲ್ ಗಿಮಾದಿಗೆ ಕಳುಹಿಸುದಾದರೂ ನಾವು ಖಂಡಿತ ಹೋಗೆ ಹೋಗುತ್ತೇವೆ.” ಎಂದು ಹೇಳಿದರು, ಈ ಮಾತು ಕೇಳಿದ ಕೂಡಲೇ ಪ್ರವಾದಿಯವರ ﷺ ಕಳೆಗುಂದಿದ ಮುಖವು ಹರಳಿತು. ಮಿಖ್’ದಾದಿಗೆ ◌ؓ ಅಲ್ಲಾಹನು ಅನುಗ್ರಹ ನೀಡಲಿ ಎಂದು ಪ್ರಾರ್ಥಿಸಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-222/365

ಪ್ರವಾದಿಯವರು ﷺ ಪುನಃ, ಮದೀನಾ ನಿವಾಸಿಗಳಾದ ಅನ್ಸಾರ್’ಗಳ ಅಭಿಪ್ರಾಯ ತಿಳಿಯುವ ಉದ್ದೇಶದಿಂದ, ತಮ್ಮ ಅನುಚರರಲ್ಲಿ ಅಭಿಪ್ರಾಯಗಳನ್ನು ಕೇಳಿದರು. ಯಾಕೆಂದರೆ ಮದೀನಾ ನಿವಾಸಿಗಳಲ್ಲಿ ಈ ಹಿಂದೆ ಮಾಡಿದ್ದ ಒಪ್ಪಂದದಲ್ಲಿ, ಮದೀನದಲ್ಲಿ ಮಾತ್ರ ರಕ್ಷಣೆ ನೀಡಲಾಗುವುದು ಎಂದಾಗಿತ್ತು ಉಲ್ಲೇಖಿಸಿದ್ದು, ಮದೀನದ ಹೊರಗೆ ಇರುವ ಈ ರಣತಂತ್ರದಲ್ಲಿ, ಮದೀನಾ ನಿವಾಸಿಗಳ ನಿಲುವು ಏನಿರಬಹುದು ಎಂದು ತಿಳಿಯುವ ಉದ್ದೇಶವಾಗಿತ್ತು.

ಮುಹಾಜಿರುಗಳಾದ ಮಕ್ಕಾ ನಿವಾಸಿಗಳ ಸಂಪೂರ್ಣ ಬೆಂಬಲದ ನಂತರವು, ಪುನಃ ಪ್ರವಾದಿಯವರು ﷺ ಅಭಿಪ್ರಾಯ ಕೇಳುತ್ತಿರುವುದು ನಮ್ಮ ನಿಲುವು ತಿಳಿಯುವ ಉದ್ದೇಶದಿಂದಾಗಿದೆ ಎಂದು ಅನ್ಸಾರುಗಳಿಗೆ ಅರ್ಥ ಆಗಿತ್ತು. ಹಾಗಾಗಿ ತಕ್ಷಣವೇ ಸಅದ್ ಬಿನ್ ಮುಆದ್ ◌ؓ ಎದ್ದು ನಿಂತು, ಓ ಪ್ರೀತಿಯ ಪ್ರವಾದಿಯವರೇ ﷺ, ತಾವು ಪುನಃ ಕೇಳುವುತ್ತಿರುವುದು ನಮ್ಮ ನಿಲುವು ಏನಿರಬಹುದು ಎಂದು ತಿಳಿಯುವ ಉದ್ದೇಶದಿಂದ ಆಗಿರಬಹುದು. ಅದಕ್ಕೆ ಪ್ರವಾದಿಯವರು ﷺ ಹೌದು ಎಂದು ಉತ್ತರಿಸಿದಾಗ, ಸಅದ್ ◌ؓ ತನ್ನ ಮಾತು ಮುಂದುವರಿಸುತ್ತಾ, “ನಾವು ನಿಮ್ಮನ್ನು, ಅಲ್ಲಾಹನ ಪ್ರವಾದಿ ಆಗಿರುವಿರಿ ಎಂದು ಸಂಪೂರ್ಣವಾಗಿ ಅಂಗೀಕರಿಸಿದ್ದೇವೆ, ನೀವು ತಿಳಿಸುತ್ತಿರುವ ವಿಶ್ವಾಸವು ಸತ್ಯವಿಶ್ವಾಸವಾಗಿದೆ ಎಂದೂ ಕೂಡ ಅಂಗೀಕರಿಸಿದೆವು. ನಿಮ್ಮ ಆಜ್ಞೆಯನ್ನು ಚಾಚೂ ತಪ್ಪದೆ ಪಾಲಿಸುತ್ತಲೂ ಇದ್ದೇವೆ, ಹಾಗಾಗಿ ನೀವು ನಿಮ್ಮಲ್ಲಿ ನಿರ್ದೇಶಿಸಲ್ಪಟ್ಟ ಕಾರ್ಯವನ್ನು ನಿಷ್ಚಿಂತೆಯಿಂದ ನಡೆಸಿರಿ, ನಾವು ಖಂಡಿತ ನಿಮ್ಮ ಜೊತೆ ಇದ್ದೇ ಇರುತ್ತೇವೆ. ನಮ್ಮಲ್ಲಿ ಒಬ್ಬನೇ ಒಬ್ಬನೂ ಕೂಡ ಹಿಂದೆ ಸರಿಯಲ್ಲ, ನಮ್ಮ ವಿರೋಧಿಗಳನ್ನು ಹಿಮ್ಮೆಟ್ಟಿಸುವುದರಲ್ಲಿ ನಮಗೆ ಯಾವುದೇ ಹಿಂಜರಿಕೆ ಇಲ್ಲ. ನಾವು ಯುದ್ಧದಲ್ಲಿ ಬಹಳ ಸಹಾಸದಿಂದ ಖಂಡಿತ ಹೋರಾಡುತ್ತೇವೆ. ಹಾಗಾಗಿ ಅಲ್ಲಾಹನ ಆಶೀರ್ವಾದದಿಂದ ನೀವು ಧೈರ್ಯವಾಗಿ ಮುಂದೆ ಸಾಗಿರಿ, ನಿಮಗೆ ಅಲ್ಲಿ ಆಹ್ಲಾದಕರ ಸಂಗತಿಗಳೇ ನೋಡಲು ಸಿಗುತ್ತದೆ.” ಎಂದು ಹೇಳಿದರು.

ಸಅದ್’ರು ◌ؓ ಆಡಿದ ಮಾತಿನ ಇನ್ನೊಂದು ಉಲ್ಲೇಖವು ಈ ರೀತಿಯಾಗಿದೆ. “ಬಹುಶಃ ಅನ್ಸಾರ್’ಗಳಿಗೆ ಅವರ ಊರಿನಲ್ಲಿಯಲ್ಲದೆ, ಬೇರೆ ಕಡೆ ಸಹಾಯ ಮಾಡಲು ಸಾಧ್ಯವಾಗಬೇಕೆಂದಿಲ್ಲ ಎಂದಾಗಿರಬಹುದು ನೀವು ಆಲೋಚಿಸುತ್ತಿರುವುದು. ಆದರೆ ನಾನು ಈಗ ಎದ್ದು ನಿಂತಿರುವುದು, ಅನ್ಸಾರ್’ಗಳ ಪ್ರತಿನಿಧಿಯಾಗಿ ಆಗಿದೆ. ನೀವು ಉದ್ದೇಶಿಸಿದ ಸ್ಥಳಕ್ಕೆ ಯಾತ್ರೆ ಹೊರಡಿರಿ, ನೀವು, ಯಾರೊಂದಿಗೂ ಒಪ್ಪಂದ ಮಾಡಿಕೊಳ್ಳಬೇಕು, ಯಾರೊಂದಿಗೂ ವಿರೋಧ ಮಾಡಿಕೊಳ್ಳಬೇಕು ಎಂದು ನೀವೇ ಆಲೋಚಿಸಿರಿ. ನಮ್ಮ ಆಸ್ತಿಯಿಂದ ನಿಮಗೆ ಇಷ್ಟವಿದ್ದದ್ದು, ಇಷ್ಟವಿದ್ದಷ್ಟು, ತೆಗದುಕೊಳ್ಳಿರಿ. ನೀವು ಅದರಲ್ಲೂ ಬಾಕಿ ಬಿಡುವುದಕ್ಕಿಂತ ನಮಗೆ ಇಷ್ಟ ಎಲ್ಲವನ್ನೂ ನೀವೆ ತೆಗೆದುಕೊಳ್ಳುವುದು ಆಗಿದೆ. ನಿಮ್ಮ ಎಲ್ಲಾ ಆಜ್ಞೆಯನ್ನೂ ಚಾಚೂ ತಪ್ಪದೆ ಪಾಲಿಸಲು ನಾವು ಸದಾ ತಯಾರಿಗೆಯೇ ಇದ್ದೇವೆ. ನಿಮ್ಮ ನಾಲ್ಕು ದಿಕ್ಕಿನಲ್ಲೂ ನಿಮ್ಮ ಸಹಾಯಕ್ಕೆ ಖಂಡಿತ ನಾವು ಇದ್ದೇ ಇರುತ್ತೇವೆ.”

ಈ ಮಾತನ್ನು ಕೇಳಿದ ತಕ್ಷಣ, ಸಂತೋಷದಿಂದ ಪ್ರವಾದಿಯವರ ﷺ ಕಣ್ಣು ಹರಳಿತು. ನಂತರ ಪ್ರವಾದಿಯವರು ﷺ ಸಂತೋಷದಿಂದ ನೀವು ಮುಂದೆ ಸಾಗಿರಿ, ಎರಡರಲ್ಲಿ ಒಂದು ಗುಂಪನ್ನು ನಾವು ಖಂಡಿತ ಸೋಲಿಸುತ್ತೇವೆ. ಒಂದೋ ವ್ಯಾಪಾರ ತಂಡವನ್ನು (ಊರ್) ಅದು ಅಲ್ಲದಿದ್ದರೆ ಸೈನ್ಯವನ್ನು (ನಫೀರ್), ಅಲ್ಲಾಹನು ನನಗೆ ಭರವಸೆ ನೀಡಿರುವನು. ಶತ್ರು ಪಕ್ಷದ ಗಣ್ಯ ವ್ಯಕ್ತಿಗಳು ಸತ್ತು ಬೀಳುವ ದೃಶ್ಯ ನನ್ನ ಕಣ್ಣೆದುರಿಗೆ ನಡೆದ ಹಾಗೆ ಭಾಸವಾಗುತ್ತಿದೆ ಎಂದು ಹೇಳಿದರು.

ಬಲಿಷ್ಠವಾದ ಒಂದು ಸೈನ್ಯವನ್ನೇ ಎದುರಿಸಲು ಹೊರಟಿರುವುದು ಎಂದು ಪ್ರವಾದಿಯವರ ﷺ ಆ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತಿತ್ತು, ಅದು ಅನುಚರರಿಗೂ ಅರ್ಥ ಆಗಿತ್ತು. ಏನೇ ಬಂದರೂ ಖಂಡಿತ ಎದುರಿಸುತ್ತೇವೆ, ಎಂಬ ರೀತಿಯಲ್ಲಿ ಮಾನಸಿಕವಾಗಿ ಸಿದ್ಧರಾದರು.
ಮೂರು ಧ್ವಜದ ಹಿಂದೆ ಸಾಲಾಗಿ ಮುಸ್ಲಿಂ ಸೈನ್ಯವು ಮುಂದೆ ಸಾಗತೊಡಗಿತು. ಎರಡು ಕಪ್ಪು ಬಣ್ಣದ ಧ್ವಜ ಹಾಗೂ ಒಂದು ಬಿಳಿ ಬಣ್ಣದ ಧ್ವಜವಾಗಿದ್ದವು, ಬಿಳಿ ಬಣ್ಣದ ಧ್ವಜವನ್ನು ಮಿಸ್’ಅಬುಬಿನು ಉಮೈರ್ ◌ؓ ಹಿಡಿದಿದ್ದರು, ಕಪ್ಪು ಬಣ್ಣದ ಧ್ವಜಗಳನ್ನು ಅಲಿಯವರು ◌ؓ ಹಾಗೂ ಅನ್ಸಾರ್’ಗಳ ನಾಯಕರಾದ ಸಅದ್ ಬಿನ್ ಮುಆದ್’ರು ◌ؓ ಹಿಡಿದಿದ್ದರು. ಮದೀನಾದಿಂದ ಹೊರಟಿದ್ದಾಗ ಯಾವುದೇ ಧ್ವಜವನ್ನು ಹಾರಿಸಿ ಇರಲಿಲ್ಲ ಎಂದು ಇಮಾಮ್ ವಾಖಿದಿಯವರು ಹೇಳುವುದು ಕಾಣಬಹುದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-223/365

ಇನ್ನೂ ನಾವು ಖುರೈಷಿಗಳ ಬಗ್ಗೆ ಸ್ವಲ್ಪ ತಿಳಿಯೋಣ. ಉತ್ಸವಗಳನ್ನು ಮಾಡುತ್ತಾ, ಪ್ರತಿದಿನವೂ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಿದ್ದರು. ಮರ್’ರುಳ್ಳಹ್’ರಾನ್ ಎಂಬ ಸ್ಥಳಕ್ಕೆ ತಲುಪಿದಾಗ, ಅಬೂಜಹಲ್ ಹತ್ತು ಒಂಟೆಯನ್ನು ಕಟುಕಿದರು, ಆದರೆ ಅದರಲ್ಲಿ ಒಂದು ಒಂಟೆಯು ತನ್ನ ಮರಣ ವೇದನೆಯನ್ನು ಸಹಿಸಲಾಗದೆ, ಜನರು ವಿಶ್ರಾಂತಿ ಪಡೆಯುತ್ತಿದ್ದ ಡೇರೆಯ ಕಡೆಗೆ ಓಡಿತು. ಅಲ್ಲಿದ್ದ ಡೇರೆಗಳಿಗೆ ಚಿಮ್ಮಿದ ರಕ್ತವನ್ನು ಕಂಡು ಬನೂಅದಿಯ್ಯ್ ಜನಾಂಗದ (ಗೋತ್ರ) ಜನರು ಅಶುಭ ಲಕ್ಷಣವೆಂದು, ತಮ್ಮ ಊರಿಗೆ ವಾಪಸು ಹೋದರು.

ಬದ್’ರಿಗೆ ಹೊರಟ್ಟಿದ್ದ ಖುರೈಷಿಗಳ ಪ್ರಯಾಣ ಹತ್ತು ದಿನದ ವರೆಗೆ ಮುಂದುವರಿದಿತ್ತು. ಪ್ರತಿಯೊಂದು ದಿವಸ, ಪ್ರತಿಯೊಂದು ಸ್ಥಳಗಳಲ್ಲಿ ಕಸಾಯಿ ಮಾಡಿದ ಒಂಟೆಯ ವಿವರಗಳು ಈ ರೀತಿಯಾಗಿವೆ. ಉಸ್’ಫಾನಿನಲ್ಲಿ ಉಮಯ್ಯತ್ ಬಿನ್ ಖಲಫ್ ಒಂಬತ್ತು ಒಂಟೆ, ಖದೀದ್’ನಲ್ಲಿ ಸುಹೈಲ್ ಬಿನ್ ಅಂರ್ ಹತ್ತು ಒಂಟೆ, ಮನಾತ್’ನಲ್ಲಿ ಶೈಬತ್ ಬಿನ್ ರಬೀಅ ಒಂಬತ್ತು ಒಂಟೆ, (ಅಲ್ಲೇ ಒಂದು ದಿನ ತಂಗಿದ್ದರು) ಉತ್’ಬತ್ ಬಿನ್ ರಬೀಅಃ ಜುಹ್’ಫಾದಲ್ಲಿ ಹತ್ತು ಒಂಟೆ, ಮಖೀಸ್ ಬಿನ್ ಉಮರ್ ಅಬವಾಅ್’ನಲ್ಲಿ ಒಂಬತ್ತು ಒಂಟೆ, ಏಳನೇ ದಿನ ಹಜ್ಜಾಜಿನ ಮಕ್ಕಳಾದ ನಬೀಹ್ ಹಾಗೂ ಮುನಬ್ಬಿಹ್ ಸೇರಿ ಹತ್ತು ಒಂಟೆ, ಎಂಟನೇ ದಿನ ಅಬ್ಬಾಸ್ ಮುತ್ತಲಿಬ್ ಹತ್ತು ಒಂಟೆ, ಒಂಬತ್ತನೇ ದಿನ ಹಾರಿಸ್ ಬಿನ್ ಅಂರ್ ಬಿನ್ ನೌಫಲ್ ಒಂಬತ್ತು ಹಾಗೂ ಕೊನೆಯದಾಗಿ ಹತ್ತನೇ ದಿನ ಬದ್’ರಿನಲ್ಲಿ ಅಬುಲ್ ಬುಖ್’ತಿರಿ ಹತ್ತು ಒಂಟೆಗಳನ್ನು ಕಟುಕಿದರು.

ಖುರೈಷಿಗಳ ಸೈನ್ಯವು ಜುಹ್’ಫಾಗೆ ತಲುಪಿದಾಗ, ಮುತ್ವಲಿಬ್ ಜನಾಂಗದ ಜುಹೈಮ್ ಬಿನ್ ಸ್ವಲತ್’ಗೆ ಒಂದು ಕನಸು ಬಿದ್ದಿತು. ಕುದುರೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು, ಓಡೋಡಿ ಬರುತ್ತಿದ್ದನು, ಆತನ ಜೊತೆಯಲ್ಲಿ ಇನ್ನೊಂದು ಒಂಟೆ ಕೂಡ ಇತ್ತು, ಅವನು ಓಡಿ ಬಂದು ಅಲ್ಲಿ ನೆರೆದಿದ್ದ ಜನರಲ್ಲಿ, ಉತ್’ಬತ್ ಬಿನ್ ರಬೀಅಃರನ್ನು ಕೊಲೆ ಮಾಡಲಾಗಿದೆ, ಶೈಬತ್ ಬಿನ್ ರಬೀಅಃರನ್ನು ಕೊಲೆ ಮಾಡಲಾಗಿದೆ, ಅಬುಲ್ ಹಕಮ್ ಬಿನ್ ಹಿಷಾಮ್’ರನ್ನು ಕೊಲೆ ಮಾಡಲಾಗಿದೆ, ಹೀಗೆ ಖುರೈಷಿಗಳ ಪ್ರತಿಯೊಬ್ಬ ನಾಯಕರ ಹೆಸರನ್ನು ಹೇಳಿ ಕೊಲೆ ಮಾಡಲಾಗಿದೆ ಎಂದು ಕೂಗಿ, ಕೂಗಿ ಹೇಳಿದನು. ನಂತರ ಅವನು ತನ್ನ ಒಂಟೆಯ ಗೊರಸುಗಳಿಗೆ ಬಲವಾದ ಏಟೊಂದನ್ನು ಕೊಟ್ಟು, ಖುರೈಷಿಗಳ ಶಿಬಿರದ ಕಡೆಗೆ ಅದನ್ನು ಓಡಿಸಿದನು, ಅದರ ಕಾಲಿನಿಂದ ಬರುತ್ತಿದ್ದ ರಕ್ತವು ಖುರೈಷಿಗಳ ಎಲ್ಲಾ ಡೇರೆಗಳಿಗೆ ಹಾರಿ ಚಿಮ್ಮಿತು.

ಈ ಕನಸು ತಿಳಿದ ನಂತರ, ಅಬೂಜಹಲ್ ಅಬ್ದುಲ್ ಮುತ್ವಲಿಬ್’ರ ಕುಟುಂಬದಿಂದ ಮತ್ತೊಂದು ಪ್ರವಾದಿ ಕೂಡ ಬಂದಿರುವರು, ನಾಳೆ ನೋಡೋಣ ಯಾರು ಯಾರನ್ನು ಕೊಲೆ ಮಾಡುತ್ತಾರೆ ಎಂದು ಲೇವಡಿ ಮಾಡಿದನು. ಜುಹೈಮ್’ರನ್ನು ಉಳಿದವರು ಸೇರಿ, ಪಿಶಾಚಿ ಹಿಡಿದಿದೆ ಎಂದು ಗೇಲಿ ಮಾಡ ತೊಡಗಿದರು.
ಒಂಬೈನೂರಾ ಐವತ್ತು ಹಾಗೂ ಸಾವಿರದ ಒಳಗೆಯಿದ್ದ ಸೈನಿಕರ ಜನಸಂಖ್ಯೆ, ಏಳ್ನೂರ ಐವತ್ತು ಒಂಟೆಗಳು, ನೂರು ಕುದುರೆಗಳು, ಕಾಲಾಳುಪಡೆ ಹಾಗೂ ಅಶ್ವದಳಕ್ಕೆ ಯುದ್ಧ ಕವಚಗಳು. ಇದನ್ನೆಲ್ಲ ತಯಾರು ಮಾಡಿ ಮುಂದೆ ಸಾಗುತ್ತಿದ್ದ ಬಲಿಷ್ಠ ಸೇನೆಯ ನಾಯಕನಿಗೆ ಈ ಕನಸು ತಮಾಷೆಯಾಗಿ ಕಂಡಿತು.

ಆದರೆ ಆತ್ವೀಕ ಹಾಗೂ ಜುಹೈಮಿನ ಕನಸು ಖುರೈಷಿಗಳ ಸೇನೆಯಲ್ಲಿ ಕೆಲವು ಜನರ ಮೇಲೆ ಪ್ರಭಾವ ಬೀರಿತ್ತು. ವಿಶೇಷವಾಗಿ ಮುತ್ತಲಿಬ್’ರ ಕುಟುಂಬದ ಸದಸ್ಯರಿಗೆ ಚಿಂತೆಯನ್ನು ತಂದಿದ್ದವು. ಆದರೆ ವಿಧಿ ಇಲ್ಲದೆ, ನಾಯಕರ ಭಯ ಹಾಗೂ ತಮಗೆ ಅವಮಾನ ಆಗಬಹುದು ಎಂಬ ಕಾರಣಕ್ಕೆ ಹಿಂತಿರುಗದೆ ಅಲ್ಲೇ ನಿಂತರು.

ಅದರ ನಡುವೆ ಇನ್ನೊಂದು ಘಟನೆ ನಡೆಯಿತು, ಜುಹ್’ಫಾದಲ್ಲಿ ಖುರೈಷಿಗಳ ವ್ಯಾಪಾರ ಸಂಘದ ನಾಯಕನಾದ ಅಬುಸುಫಿಯಾನ್’ರ ದೂತನನ್ನು ಖುರೈಷಿಗಳು ಭೇಟಿಯಾದರು. ವ್ಯಾಪಾರ ಸಂಘವು ಯಾವುದೇ ಅಪಾಯವಿಲ್ಲದೆ ಮಕ್ಕಾಗೆ ತಲುಪಿದ ಮಾಹಿತಿಯು ಅವರಿಗೆ ತಿಳಿಸಿದನು. ಸೃಷ್ಟಿಕರ್ತನ ಅನುಗ್ರಹದಿಂದ ನಾವು ಯಾವುದೇ ಅಪಾಯವಿಲ್ಲದೆ ಊರಿಗೆ ತಲುಪಿದ್ದೇವೆ, ನೀವು ಇನ್ನೂ ಯಾವುದೇ ತೊಂದರೆಗಳಿಗೆ ದಾರಿ ಮಾಡಿ ಕೊಡದೆ ಹಿಂತಿರುಗಿ ಬನ್ನಿ ಎಂದು ಬರೆದಿದ್ದ, ಅಬೂಸುಫಿಯಾನ್’ರ ಪತ್ರವನ್ನು ಅವರಿಗೆ ಕೊಟ್ಟರು. ಆದರೆ ಖುರೈಷಿಗಳ ಅಹಂ ಅವರನ್ನು ಹಿಂತಿರುಗಿ ಹೋಗಲು ಬಿಡಲಿಲ್ಲ, ಅಬೂಜಹಲ್ “ದೇವರಾಣೆ ಯಾವುದೇ ಕಾರಣಕ್ಕೂ ಹಿಂತಿರುಗಿ ಹೋಗುವ ಮಾತೇ ಇಲ್ಲ, ಖುರೈಷಿಗಳ ಸೇನೆಯು ಮೂರು ದಿನಗಳ ಕಾಲ ಬದ್’ರಿನಲ್ಲಿ ಡೇರೆ ಹಾಕಿ ಉಳಿದುಕೊಂಡರು. ಒಂಟೆಗಳನ್ನು ಕಸಾಯಿ ಮಾಡಿ ವಿಧ ವಿಧವಾದ ಭಕ್ಷ್ಯಗಳನ್ನು ತಯಾರು ಮಾಡಿದರು, ಮದ್ಯಪಾನ ಮಾಡಿ ನಶೆಯಲ್ಲಿ ತೇಲುತ್ತಾ, ನರ್ತಕಿಯರ ನೃತ್ಯವನ್ನು ಕಂಡು ಮೈಮರೆತರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-224/365

ಅಬುಜಹಲ್’ಗೆ ಅಹಂಕಾರದ ಜೊತೆಯಲ್ಲಿ, ಮುಸ್ಲಿಮರು ಹೇಡಿಗಳಾಗಿರಬಹುದು ಎಂಬ ಭಾವನೆ ಅವರ ತಲೆಯಲ್ಲಿ ಬೇರೂರಿತ್ತು. ವ್ಯಾಪಾರ ಸಂಘ ದಾರಿ ತಪ್ಪಿಸಿ ರಕ್ಷೆ ಹೊಂದಿರುವ ವಿಷಯ ತಿಳಿದು ಅವರು ಮದೀನಕ್ಕೆ ಹಿಂತಿರುಗಿ ಹೋಗಬಹುದು, ಮಕ್ಕಾದಿಂದ ಅವರನ್ನು ಎದುರಿಸಲು ಬಂದಿರುವ ಬಲಿಷ್ಠ ಸೈನ್ಯದ, ಜನಬಲವನ್ನು ಕಂಡು ಹೆದರಿ ಹೋಗಬಹುದು. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಯುದ್ಧ ಮಾಡಲು ಮುಂದೆ ಬರುವುದಿಲ್ಲ, ನಾವು ಇನ್ನಷ್ಟು ವೈಭವದಿಂದ ಹಿಂದಕ್ಕೆ ಮರಳಬಹುದು, ಇತರ ಜನಾಂಗದವರ ಮುಂದೆ ನಮಗಿದ್ದ ಪ್ರತಿಷ್ಠೆ ಇನ್ನಷ್ಟು ಜಾಸ್ತಿ ಆಗುತ್ತೆ ಹೀಗೆ ಏನೇನೋ ಅಲೋಚನೆಯಲ್ಲಿ ಮುಳುಗಿದ್ದರು.

ಮತ್ತೊಂದು ಕಡೆ, ಪ್ರವಾದಿಯವರು ﷺ ಹಾಗೂ ಅವರ ಅನುಚರರಿಗೆ ಕೆಲವೊಂದು ಜವಾಬ್ದಾರಿಗಳನ್ನು ಮಾಡಿಕೊಳ್ಳಬೇಕಿತ್ತು. ಅದೇನೆಂದರೆ, ಖುರೈಷಿಗಳನ್ನು ಇನ್ನುಮುಂದೆಯೂ ಇದೇ ರೀತಿ ಅಹಂಕಾರದಿಂದ, ಮೂರ್ಖತನದಿಂದ ಮುಂದುವರೆಯಲು ಬಿಡುವುದು ಸರಿಯಲ್ಲ. ಅಲ್ಲಾಹನ ಸಹಾಯ ಸಿಗಲಿರುವ ಭರವಸೆ ಇರುವಾಗ, ಒಂದೋ ವ್ಯಾಪಾರ ಸಂಘವನ್ನು ಎದುರಿಸಬೇಕು, ಇಲ್ಲದಿದ್ದರೆ ಸೈನ್ಯವನ್ನು ಎದುರಿಸಬೇಕು, ಎರಡರಲ್ಲಿ ಒಂದನ್ನು ಸಾಧಿಸಿಯೇ ಹಿಂತಿರುಗಬೇಕು ಎಂಬ ದೃಢ ನಿಶ್ಚಯ ಮಾಡಿಕೊಂಡಿದ್ದರು. ಬಹುಶಃ ಇವರನ್ನು ಎದುರಿಸದೆ ಇದ್ದರೆ, ಮದೀನದಲ್ಲಿ ಒಪ್ಪಂದದಲ್ಲಿ ಕಳೆಯುತ್ತಿರುವ ಯಹೂದಿ ಹಾಗೂ ಕ್ರೈಸ್ತ ಧರ್ಮದ ಕೆಲವು ಗುಂಪುಗಳು ಇವರು ದುರ್ಬಲರು ಎಂದು, ಒಂದು ಕೈ ನೋಡಲು ಮುಂದಾಗುವರು, ಅದು ಮತ್ತೊಮ್ಮೆ ಮದೀನದಲ್ಲಿ ಗೊಂದಲಕ್ಕೆ ದಾರಿ ಮಾಡಿ ಕೊಡಬಹುದು.

ಒಂದು ಕಡೆಯಲ್ಲಿ ಸ್ಪಷ್ಟವಾದ ರಣನೀತಿಯೊಂದಿಗೆ, ಪ್ರತಿಕಾರಕ್ಕಾಗಿ ಬರುತ್ತಿರುವ ಮುಸ್ಲಿಮ್ ಸಂಘ ಹಾಗೂ ಮತ್ತೊಂದೆಡೆ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಂಕಾರದೊಂದಿಗೆ ಬರುತ್ತಿರುವ ಖುರೈಷಿ ಸಂಘವು ಬದ್ರ್’ಗೆ ತಲುಪಿತು. ನೈಜವಾದ ಆದರ್ಶಕ್ಕಾಗಿ, ತಾಯ್ನಾಡನ್ನೂ, ಬಂಧುಗಳನ್ನು ಬಿಟ್ಟು ನಾನೂರಕ್ಕೂ ಅಧಿಕ ಕಿಲೋಮೀಟರ್’ನಷ್ಟು ದೂರ ಹೋಗಿ ಶಾಂತಿಯಿಂದ ಜೀವಿಸುತ್ತಿರುವ ಒಂದು ಸಂಘವನ್ನು, ಯಾವುದೇ ಕಾರಣಕ್ಕೂ ಶಾಂತಿಯಿಂದ ಜೀವಿಸಲು ಬಿಡುವುದಿಲ್ಲ, ಅವರ ಅಸ್ತಿತ್ವ ಕೂಡ ಇರಬಾರದು ಎಂದು, ಅಂದುಕೊಂಡಿರುವ ಶತ್ರು ಪಕ್ಷದ ನಡುವೆ ಆಗಿದೆ ಯುದ್ಧದ ಕರಿಮೋಡ ಆವರಿಸಿ ಕೊಂಡಿರುವುದು.

ನಾವು ಇನ್ಯಾಕೆ ಯುದ್ಧಕ್ಕೆ ಹೋಗಬೇಕು.? ನಮ್ಮ ವ್ಯಾಪಾರ ಸಂಘ ಕ್ಷೇಮವಾಗಿ ಮಕ್ಕಾಗೆ ತಲುಪಿದೆಯಲ್ಲವೇ.? ನಮಗೆ ಯಾವುದೇ ನಷ್ಟ ಆಗಿಲಿಲ್ಲ ಅಲ್ವಾ.? ಎಂದು ಖುರೈಷಿಗಳ ತಂಡದ ನಡುವೆ, ಅವರ ನಾಯಕರೇ ಈ ರೀತಿ ಚಿಂತಿಸಲು ಆರಂಭಿಸಿದರು.

ಮಕ್ಕಾಗೆ ಹಿಂತಿರುಗಿ ಬರಲು ಪತ್ರ ಬರೆದಿದ್ದರೂ, ಅಬುಜಹಲ್ ಪುನಃ ಮುಂದೆ ಹೋಗುವುದರ ಹಿಂದಿನ ಉದ್ದೇಶ ಅಬೂಸುಫಿಯಾನ್’ರಿಗೆ ತಿಳಿಯಿತು. ಈ ಮಾಹಿತಿಯು ಖೈಸ್ ಬಿನ್ ಇಂರಿಉಲ್ ಯೈಸಾನ್ ಎಂಬ ದೂತನು ಬಂದು ಅಬುಸುಫಿಯಾನ್’ರಿಗೆ ತಿಳಿಸಿದನು. ಅಯ್ಯೋ.! ನಮ್ಮ ಜನರ ಕಷ್ಟವೇ.! ಆ ಅಂರ್ ಬಿನ್ ಹಿಷಾಮಿನ ಕೆಲಸ ಆಗಿರಬಹುದು ಇದು, ಅವನೇ ಆಗಿರಬಹುದು ಹಠ ಹಿಡಿದು ಅವರನ್ನು ನಿಲ್ಲಿಸಿದ್ದು, ಅವನು ನಾಯಕತ್ವ ನೀಡುತ್ತಿರುವ ಜನರೊಂದಿಗೆ ಅವನು ಅನ್ಯಾಯ ಮಾಡುತ್ತಿದ್ದಾನೆ. ಅಪಶಕುನ, ಹಾಗೂ ಅಪರಾಧದ ಲಕ್ಷಣವಾಗಿದೆ ಇದು. ಬಹುಶಃ ಮುಹಮ್ಮದ್’ರು ﷺ ಹಾಗೂ ಅವರ ಅನುಚರರು ನಮ್ಮ ಸಂಘವನ್ನು ಎದುರಿಸಿದರೆ.? ಖಂಡಿತವಾಗಿಯೂ ಇವರು ಮಕ್ಕಾಗೆ ತಲುಪುವ ವರೆಗೂ ಹಿಂಬಾಲಿಸುತ್ತಲೇ ಇರುತ್ತಾರೆ.

ಖುರೈಷಿಗಳ ಆಂತರಿಕ ಒತ್ತಡದ ಇನ್ನೊಂದು ಚಿತ್ರಣದ ಬಗ್ಗೆ ತಿಳಿಯೋಣ. ಬನೂ ಸಹ್’ರ ಜನಾಂಗದ ಮಿತ್ರನೂ, ನಾಯಕನೂ ಆಗಿದ್ದ ಉಬಯ್ಯ್ ಬಿನ್ ಶುರೈಖ್, ಬನೂಸಹ್’ರ ಜನಾಂಗದ ಜನರನ್ನು ಭೇಟಿಯಾಗಿ, “ನಿಮ್ಮ ಸಂಪತ್ತನ್ನು ದೇವರು ರಕ್ಷಿಸಿರುವನು, ನಿಮ್ಮ ಪ್ರತಿನಿಧಿಯಾದ ಮಖ್’ರಮತು ಬಿನ್ ನೌಫಲ್ ಕೂಡ ಯಾವುದೇ ಅಪಾಯ ಇಲ್ಲದೆ ತಲುಪಿದ್ದಾರೆ ಕೂಡ, ಇನ್ನೂ ಬಾಕಿ ಇರುವುದು ಅವಮಾನ ಅಲ್ವಾ.? ಅದನ್ನು ನನ್ನ ಹೆಗಲ ಮೇಲೆ ಹಾಕಿ. ಇವನು (ಅಬೂಜಹಲ್) ಹೇಳುವ ಹಾಗೆ ಅಲ್ಲ ವಿಷಯ, ನಿಮಗೆ ಯಾವುದೇ ಲಾಭವಿಲ್ಲದೆ ನೀವ್ಯಾಕೆ ಈ ವಿಷಯಕ್ಕೆ ಹೋಗಬೇಕು.? ನೀವು ಊರಿಗೆ ಹಿಂತಿರುಗಿ ಹೋಗಿ. “ಬನೂ ಸಹ್’ರ ಜನಾಂಗದ ಜನರು ಪರಿಸ್ಥಿತಿ ಅರ್ಥ ಮಾಡಿಕೊಂಡು, ಅವರು ಹಿಂತಿರುಗಿ ಹೋದರು, ಅಂದಿನಿಂದ ಉಬಯ್ಯ್’ನನ್ನು ಅಖ್’ನಸ್ ಬಿನ್ ಶುರೈಖ್ (ಬೆನ್ನು ತಿರುಗಿಸಿ ಹೋದವನು) ಎಂದು ಕರೆಯಲು ಆರಂಭಿಸಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-225/365

ಅಬೂಜಹಲ್ ಒಬ್ಬರೇ ಇರುವ ಸಂದರ್ಭದಲ್ಲಿ, ಅಖ್’ನಸ್ ಹೋಗಿ, ಮುಹಮ್ಮದ್ ﷺ ಪ್ರವಾದಿಯವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಅವರು ಸುಳ್ಳು ಹೇಳುವ ವ್ಯಕ್ತಿ ಎಂದು ನಿಮಗೆ ಅನಿಸುತ್ತದೋ.? ಎಂದು ಕೇಳಿದಾಗ, ಅಬೂಜಹಲ್ ಇಲ್ಲ ಅವರನ್ನು ಅಲ್ ಅಮೀನ್ ಎಂದಲ್ಲವೇ ಕರೆಯುತ್ತಿದ್ದದ್ದು, ಆದರೆ ಸಮಸ್ಯೆ ಏನೆಂದರೆ ಸಮಾಲೋಚನೆ, ತೀರ್ಥ ಯಾತ್ರಿಕರಿಗೆ ಪವಿತ್ರ ಜಲ ವಿತರಿಸುವುದು, ಮುಂತಾದ ಮಕ್ಕಾದ ಅತ್ಯುತ್ತಮ ವಿಷಯಗಳನ್ನು ನಿಯಂತ್ರಿಸುತ್ತಿರುವುದು ಮುತ್ತಲಿಬ್’ರ ಸಂತಾನಗಳಾಗಿವೆ. ಈಗ ಪ್ರವಾದಿತ್ವವನ್ನೂ ಕೂಡ ಅವರದೇ ಕುಟುಂಬದ ಒಬ್ಬ ವ್ಯಕ್ತಿಗೆ ನೀಡಲು ಮನಸ್ಸಿಲ್ಲ. ಎಲ್ಲವೂ ಅವರಿಗೆ ಸಿಕ್ಕರೆ ನಮಗೆ ಏನಿದೆ.? ಎಂದು ಹೇಳಿದರು.
ಅಸೂಯೆ ಹಾಗೂ ಅಧಿಕಾರದ ವ್ಯಾಮೋಹವಾಗಿದೆ ಅಬೂಜಹಲನ್ನು ಕೆರಳಿಸಿದ್ದು ಎಂದು ಅಖ್’ನಸಿಗೆ ತಿಳಿಯಿತು, ಬಹುಶಃ ಇದೇ ಕಾರಣಕ್ಕೆ ಆಗಿರಬಹುದು ಹಿಮ್ಮೆಟ್ಟಿಸಲು ತಯಾರು ಆದದ್ದು ಕೂಡ.

ಖುರೈಷಿಗಳು ಬದ್’ರಿಗೆ ತಲುಪುದಕ್ಕೂ ಮುಂಚೆ ಉಂಟಾದ ಇನ್ನೊಂದು ಘಟನೆಯ ಬಗ್ಗೆ ತಿಳಿಯೋಣ. ಖುರೈಷಿಗಳು ಗಿಫಾರ್ ಜನಾಂಗದ ಜನರು ವಾಸವಾಗಿದ್ದ ಸ್ಥಳದ ಮೂಲಕ ಹಾದು ಹೋಗುವಾಗ, ಅಲ್ಲಿನ ಮುಖ್ಯನಾಗಿದ್ದ ಈಮಾವು ಬಿನ್ ರಹ್’ಳಃ ಎಂಬವರು, ತನ್ನ ಮಗನ ಮೂಲಕ ಖುರೈಷಿಗಳಿಗೆ ಬೇಕಾಗಿ ಹತ್ತು ಒಂಟೆಯನ್ನು ಕೊಟ್ಟು ಕಳುಹಿಸಿ, ನಂತರ ನೀವು ಒಪ್ಪುದಾದರೆ ನಾವು ಕೂಡ ನಿಮ್ಮ ಜೊತೆ, ಬಂದು ಯುದ್ಧದಲ್ಲಿ ಸಹಾಯ ಮಾಡಲು ತಯಾರು ಆಗಿರುತ್ತೇವೆ, ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ ಎಂದು ಹೇಳಿದಾಗ, ಖುರೈಷಿಗಳು ಅವರಲ್ಲಿ ದೇವರಾಣೆಗೂ.! ಮುಹಮ್ಮದ್’ರನ್ನು ﷺ, ಅವರ ಅನುಚರರನ್ನು ಸೋಲಿಸಲು ನಮ್ಮಲ್ಲಿ ಈಗಾಗಲೇ ಸನ್ನದ್ದ ಪಡೆಗಳು ಇವೆ. ಇನ್ನೂ ಈ ಮುಹಮ್ಮದ್’ರು ﷺ ಹೇಳುವ ಹಾಗೆ ಅಲ್ಲಾಹನಲ್ಲಿ ಯುದ್ಧ ಮಾಡುವುದಾದರೆ, ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ.? ಎಂದು ಹೇಳಿದರು.

ಈ ಘಟನೆಯ ಬಗ್ಗೆಯಿರುವ ಇನ್ನೊಂದು ಉಲ್ಲೇಖದಲ್ಲಿ ಈಮಾವುನ ಮಗನಾದ ಖಿಫಾಫ್ ಹೇಳುವುದು ಕಾಣಬಹುದು. ನನ್ನ ತಂದೆಯು ಜನರ ನಡುವೆ ಸೌಹಾರ್ದತೆ ಉಂಟುಮಾಡುವುದನ್ನು ತುಂಬಾ ಇಷ್ಟ ಪಡುತ್ತಿದ್ದರು. ಖುರೈಷಿಗಳು ಬದ್’ರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರಿಗೆ ನೀಡಲೆಂದು, ಹತ್ತು ಒಂಟೆಗಳನ್ನು ನನ್ನ ಕೈಯಲ್ಲಿಟ್ಟು ಅವರ ಬಳಿ ಹೋಗಲು ಹೇಳಿದರು. ನಾನು ಹೊರಟು ನಿಂತಾಗ, ನನ್ನೊಂದಿಗೆ ಅವರು ಕೂಡ ಜೊತೆಯಲ್ಲೇ ಬಂದರು, ನಾನು ಆ ಒಂಟೆಗಳನ್ನು ಖುರೈಷಿಗಳ ತಂಡಕ್ಕೆ ಕೊಟ್ಟಾಗ, ಅವರು ಜನಾಂಗದ ನಡುವೆ ಅದನ್ನು ವಿತರಣೆ ಮಾಡಿದರು. ನಂತರ ತಂದೆಯವರು, ಖುರೈಷಿಗಳ ನಾಯಕನಾಗಿದ್ದ ಉತ್’ಬರ ಬಳಿ ಹೋಗಿ, ಇದು ಯಾವ ಪ್ರಯಾಣ.? ಎಂದು ಕೇಳಿದಾಗ, ಉತುಬ ನನಗೆ ಗೊತ್ತಿಲ್ಲ, ದೇವರಾಣೆಗೂ ನಾನು ಖಂಡಿತ ಸೋಲುದಂತೂ ಖಚಿತ ಎಂದು ಹೇಳಿದರು. ಅದಕ್ಕೆ ನನ್ನ ತಂದೆಯವರು, “ನೀವು ನಿಮ್ಮ ಜನರ ನಾಯಕ ಅಲ್ವಾ.? ಅವರನ್ನು ಕರೆದುಕೊಂಡು ಹಿಂತಿರುಗಿ ಹೋಗಬಹುದು ಅಲ್ವಾ.? ಅದರಲ್ಲಿ ಯಾವ ಅಡಚಣೆ ಇದೆ, ನೀವು ನಿಮ್ಮ ಮಿತ್ರ ಅಂರ್ ಬಿನುಲ್ ಹಳ್’ರಮಿಯ ರಕ್ತದ ಹಣವನ್ನು ನೀವು ತೆಗಿಯಿರಿ, ಮುಸ್ಲಿಮರು ಬತ್ವನ್ ನಖ್’ಲಿನಲ್ಲಿ ಕಿತ್ತುಕೊಂಡ ಒಂಟೆಯ ಜವಾಬ್ದಾರಿಯನ್ನೂ ನೀವೇ ತೆಗೆದುಕೊಳ್ಳಿ, ಈಗ ನಿಮಗೆ ಮುಹಮ್ಮದ್’ರಿಂದ ﷺ ಸಿಗಬೇಕಾದದ್ದು ಇಷ್ಟು ಮಾತ್ರ ಅಲ್ವಾ.? ಅಲ್ಲಾಹನಾಣೆ.! ಓ ಅಬುಲ್ ವಲೀದ್, ಮುಹಮ್ಮದ್’ರು ﷺ ಹಾಗೂ ಅವರ ಅನುಚರರನ್ನು ಸಾಯಿಸುವೆವು ಎಂದು ಅಂದುಕೊಳ್ಳುವುದು, ನಮ್ಮನ್ನು ನಾವೇ ಸಾಯಿಸುವುದಕ್ಕೆ ಸಮಾನವಾಗಿದೆ ಎಂದು ಹೇಳಿದರು.

ಈಮಾವುನ ಈ ಮಧ್ಯಸ್ಥಿಕೆಯ ಬಗ್ಗೆ ಇತಿಹಾಸಗಾರರ ವಿಭಿನ್ನವಾದ ಅಭಿಪ್ರಾಯಾಗಳನ್ನು ತಿಳಿಸಿರುವುದು ಕಾಣಬಹುದು. ಅವರು ಈಗಾಗಲೇ ಇಸ್ಲಾಂ ಸ್ವೀಕರಿಸಿದ್ದರೂ ಎಂದೂ, ಅಥವಾ ಬದ್’ರಿನಲ್ಲಿ ಖುರೈಷಿಗಳ ಕಡೆ ಇದ್ದರು ಎಂದೂ ಅಭಿಪ್ರಾಯಗಳಿಗೆ.
ಇಸ್ಲಾಮಿನ ಶತ್ರು ಪಕ್ಷವು, ಬದ್’ರಿಗೆ ಹೊರಟಿದ್ದ ಯಾತ್ರೆಯಲ್ಲಿ ಒಂದೇ ಮನಸ್ಸು ಹಾಗೂ ಒಂದೇ ಅಭಿಪ್ರಾಯಗಳನ್ನು ರೂಪಿಸಲು ಸಾಧ್ಯವಾಗಿಲ್ಲ ಎಂದು ಈ ಘಟನೆಯಲ್ಲಿ ಅರ್ಥವಾಗುತ್ತದೆ. ಯುದ್ಧಕ್ಕೆ ಹತ್ತಿರವಾಗುತ್ತಿದ್ದಂತೆ, ಬಹಳಷ್ಟು ಜನರ ಅಸಮಾಧಾನಗೊಂಡಿದ್ದರು, ಬಹಳಷ್ಟು ಭಿನ್ನಾಭಿಪ್ರಾಯಗಳು ಹೊಂದಿದ್ದರು, ಕೆಲವರಂತೂ ಬಹಳಷ್ಟು ಭಯಗೊಂಡಿದ್ದರು.
ಖುರೈಷಿಗಳ ತಂಡವು ಮುಂದಕ್ಕೆ ಸಾಗಿತು, ಅಹಂಕಾರಿಗಳಾದ ನಾಯಕರು ಇನ್ನಷ್ಟು ಘೋಷಣೆಗಳನ್ನು ಕೂಗಿದರು. ಶಾಪಗ್ರಸ್ಥ ಪಿಶಾಚಿಯು ಮಿತ್ರನಾಗಿ ಅವರ ಜೊತೆ ಸೇರಿಕೊಂಡು “ನಾನು ಕೂಡ ನಿಮ್ಮ ಜೊತೆಯಲ್ಲಿ ಇದ್ದೇನೆ, ನಿಮ್ಮಲ್ಲಿ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ಕೂಗಿ ಹೇಳಲು ಆರಂಭಿಸಿದನು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-226/365

ಬದ್’ರಿನ ಹೋರಾಟಕ್ಕೆ ಇನ್ನೂ ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ, ಮುಸ್ಲಿಮರ ಸೇನೆಯ ಹಾಗು ಹೋಗುಗಳ ಬಗ್ಗೆ ತಿಳಿಯಲು ಉಮೈರ್ ಬಿನ್ ವಹಾಬ್’ರನ್ನು ನೇಮಿಸಿದರು. ಉಮೈರ್ ಮುಸ್ಲಿಮರು ಹಾಕಿದ್ದ ಡೇರೆಯ ಬಳಿ ಬಂದು, ಸುತ್ತ ಮುತ್ತ ಚೆನ್ನಾಗಿ ಗಮನಿಸಿ ಪುನಃ ಖುರೈಷಿಗಳ ಬಳಿ ವಾಪಸು ಬಂದು “ಅವರು ಸುಮಾರು ಮುನ್ನೂರ ಜನರು ಇರಬಹುದು, ಅಥವಾ ಅದಕ್ಕಿಂತ ಸ್ವಲ್ಪ ಅಧಿಕ ಇರಲೂಬಹುದು. ಇನ್ನೂ ಯಾರಾದರೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅಡಗಿ ಕುಳಿತಿದ್ದಾರ, ಎಂದು ನೋಡಿ ಬರುತ್ತೇನೆ, ಅದಕ್ಕಾಗಿ ನನಗೆ ಸ್ವಲ್ಪ ಸಮಯಾವಕಾಶ ಬೇಕು,” ಎಂದು ಹೇಳಿ ಕಣಿವೆಯನ್ನು ದಾಟಿ ಬಹಳಷ್ಟು ದೂರ ಪ್ರಯಾಣ ಮಾಡಿ ಹೋದರು, ಅಲ್ಲಿ ಎಷ್ಟೇ ಜಾಲಾಡಿದರೂ ಅಡಗಿ ಕುಳಿತಿರುವುದಾಗಿ ಯಾರನ್ನು ಕಂಡಿಲ್ಲ.

ಬಹಳಷ್ಟು ಹುಡುಕಾಟದ ನಂತರ ಹಿಂತಿರುಗಿ ಬಂದ, ಉಮೈರ್ ಖುರೈಷಿಗಳ ಬಳಿ ಬಂದು, ವಿಶೇಷವಾಗಿ ತಿಳಿಸಲು ಏನು ಇಲ್ಲ, ಆದರೆ ಸಾವನ್ನು ಎಳೆದುಕೊಂಡು ಹೋಗುವ ಒಂಟೆಗಳನ್ನು ನಾನು ಅವರ ಬಳಿ ಕಂಡೆನು. ಯಸ್’ರಿಬಿನಲ್ಲಿ ನೀರು ಎಳೆಯುವ ಒಂಟೆಯು ತುಂಬಾ ಭಯಾನಕವಾಗಿ ಸಾವನ್ನು ಎಳೆಯಬಹು ಎಂದು ನನಗೆ ಅನಿಸುತ್ತಿದೆ. ಆಜ್ಞೆ ಕೇಳಿ ಮೌನವಹಿಸಿರುವ ಅಥವಾ ಮುಹಮ್ಮದ್ ಪ್ರವಾದಿಯವರ ﷺ ಅನುಚರರನ್ನು ನಾನು ಕಂಡಿಲ್ಲ. ಹೊಳೆಯುವ ಕಲ್ಲಿನಂತ ಹೊಳಪಿನೊಂದಿಗೆ ಅವರು ನೋಡುತ್ತಿರುವುದು ನಿಮಗೆ ಕಾಣುವುದಿಲ್ಲವೇ.? ಅವರು ತಮ್ಮ ಕುಟುಂಬಕ್ಕೆ ಹಿಂತಿರುಗಿ ಹೋಗಲು ಬಂದವರಲ್ಲ, ಅವರ ಬಳಿ ಇರುವುದು ಕೇವಲ ಖಡ್ಗ ಮಾತ್ರ, ಅಲ್ಲದೆ ಇನ್ಯಾವ ಗುರಾಣಿಯಾಗಲಿ, ಕವಚವಾಗಲಿ ಇಲ್ಲ. ದೇವರಾಣೆಗೂ ನಿಮ್ಮಲ್ಲಿ ಒಬ್ಬರ ಸಾವು ಆಗುವವರೆಗೆ, ಅವರಲ್ಲಿ ಒಬ್ಬರ ಸಾವು ಕೂಡ ಆಗುವುದಿಲ್ಲ ಎಂದು ನನಗೆ ಅನಿಸುತ್ತದೆ. ಹಾಗಾದಲ್ಲಿ ಅವರಲ್ಲಿ ಇರುವ ಜನಸಂಖ್ಯೆಯಷ್ಟು ಜನರು ನಮ್ಮ ಸೈನ್ಯದಿಂದ ಮರಣ ಹೊಂದಿದರೆ ನಮ್ಮ ಗತಿಯೇನು.? ಹಾಗಾಗಿ ಏನು ಮಾಡಬೇಕು ಎಂದು. ನೀವುಗಳು ಆಲೋಚನೆ ಮಾಡಿರಿ ಎಂದು ಹೇಳಿದರು.

ಉಮೈರ್ ಶಕುನ ನೋಡಿದ ಕಾರಣ ಹಿಂತಿರುಗಿ ಹೋದರೆ ಹೇಗೆ ಎಂದು ಆಲೋಚಿಸಲು ಆರಂಭಿಸಿದರು. ಅಷ್ಟರಲ್ಲೇ ಹಕೀಮ್ ಬಿನ್ ಹಿಸಾಂ ಮುಂದೆ ಬಂದು, ಉತ್’ಬರ ಬಳಿ ಬಂದು, “ಓ ಅಬುಲ್ ವಲೀದ್.! ನೀವು ಖುರೈಷಿಗಳಲ್ಲಿ ಅತ್ಯಂತ ಘನತೆ ಇರುವ ವ್ಯಕ್ತಿ ಆಗಿದ್ದೀರಿ.! ಅಲ್ಲವೇ.? ನಿಮನ್ನು ಸದಾ ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಅಂತಹ ತೀರ್ಮಾನ ತೆಗೆದುಕೊಳ್ಳುಲು ನೀವು ಸಿದ್ಧರಿದ್ದೀರೇ.? ಎಂದು ಕೇಳಿದಾಗ, ಉತ್’ಬ ಅದೇನೆಂದು ಕೇಳಿದರು. ಅದಕ್ಕೆ ಹಕೀಮ್ ನೀವು ನಿಮ್ಮ ಜೊತೆಯಲ್ಲಿರುವ ಜನರನ್ನು ಕರೆದುಕೊಂಡು ಹಿಂತಿರುಗಿ ಹೋಗಿರಿ, ಅಂರ್ ಬಿನ್ ಹದ್’ರಮಿ ನಿಮ್ಮ ಆತ್ಮೀಯ ಮಿತ್ರನಾದ ಕಾರಣ ಅವರನ್ನು ನಿಮಗೆ ನಿಭಾಯಿಸಬಹುದು ಅಲ್ವಾ.? ಎಂದು ಹೇಳಿದರು. ಸರಿ ಅವರು ನನ್ನ ಗೆಳೆಯ ಆದ ಕಾರಣ ಅವರನ್ನು ನಾನು ನಿಭಾಯಿಸುತ್ತೇನೆ, ರಕ್ತದ ಹಣ ಹಾಗೂ ನಷ್ಟ ಉಂಟಾದ ಆಸ್ತಿಯನ್ನೂ ಕೂಡ ನಾನೇ ಭರಿಸುತ್ತೇನೆ, ಆದರೆ ಅಂರ್ ಬಿನ್ ಹಿಷಾಮ್’ರನ್ನು (ಅಬೂಜಹಲ್) ನೀನೆ ನಿಭಾಯಿಸಬೇಕು ಎಂದು ಹೇಳಿ, ಉತ್’ಬ ಬಿನ್ ರಬೀಅಃ ಖುರೈಷಿಗಳ ಮುಂದೆ ಬಂದು ನಿಂತರು.
ನಂತರ ಅವರಲ್ಲಿ “ಓ ಖುರೈಷಿಗಳೇ ಅಲ್ಲಾಹನಾಣೆ ಮುಹಮ್ಮದ್’ರೊಂದಿಗೆ ﷺ ಹಾಗೂ ಅವರ ಅನುಚರರರೊಂದಿಗೆ ಹೋರಾಟ ನಡೆಸುವುದರಿಂದ ನಮಗೆ ಯಾವುದೇ ಲಾಭವೂ ಇಲ್ಲ. ಬಹುಶಃ ನೀವು ಅವರನ್ನು ಸಾಯಿಸಿದರೇ, ಆಮೇಲೆ ಚಿಕ್ಕಪ್ಪನ ಮಕ್ಕಳನ್ನು ಕೊಂದರು, ಅಥವಾ ಮಾವನ ಮಕ್ಕಳನ್ನು ಕೊಂದರು ಎಂಬ ಅಪವಾದಗಳು ಕೇಳಬೇಕಾಗಬಹುದೇ ವಿನಃ ಇನ್ನೇನು ಇಲ್ಲ. ನಂತರ ನಿಮ್ಮ ನಿಮ್ಮ ನಡುವೆಯೇ ಕಲಹಗಳು ಉಂಟಾಗಿ, ಆಮೇಲೆ ನೀವು ನೀವೇ ಕಚ್ಚಾಡಬೇಕಾಗುತ್ತದೆ. ಹಾಗಾಗಿ ಮುಹಮ್ಮದ್ ﷺ ಹಾಗೂ ಅವರ ಅನುಚರರನ್ನು ಸುಮ್ಮನೆ ಬಿಟ್ಟು ಬಿಡೋಣ. ಅವರಿಗೆ ಏನಾದರೂ ಒಳಿತುಗಳು ಸಿಕ್ಕರೆ.? ಅದರಿಂದ ಲಾಭವೂ ಕೂಡ ಖುರೈಷಿಗಳಿಗೆಯಲ್ಲವೇ.?” ಎಂದು ಹೇಳಿದರು.

ನಂತರ ಮಾತು ಮುಂದುವರಿಸುತ್ತಾ, ಹಿಂತಿರುಗಿ ಹೋಗುವುದು ಅವಮಾನ ಎಂದು ಬಹುಶಃ ಆಲೋಚಿಸಬಹುದು, ಅದನ್ನು ನನ್ನ ಮೇಲೆ ಹಾಕಿ, ಬಹುಶಃ ನೀವುಗಳು ನಾನು ಹೇಡಿಯಾದೆ ಅಲ್ವಾ ಅಂತ ಆಲೋಚಿಸಬಹುದು.? ಆದರೆ ನಿಮಗೆಲ್ಲರಿಗೂ ಉತ್’ಬನ ಶೌರ್ಯದ ಬಗ್ಗೆ ಈಗಾಗಲೇ ತಿಳಿದಿದೆಯಲ್ಲವೇ ನಾನು ಹೇಳಬೇಕಿಂದಿಲ್ಲ ತಾನೇ ಎಂದು ಹೇಳಿದರು. ಹಕೀಮಿನ ಅಭಿಪ್ರಾಯವನ್ನು ಪರಿಗಣಿಸಿ, ಅವಮಾನ, ರಕ್ತದ ಹಣ ಹಾಗೂ ಇತರ ನಷ್ಟವನ್ನು ತಾನೇ ಹೊತ್ತುಕೊಂಡು, ಉತ್’ಬ ಒಂದು ಒಂಟೆಯ ಮೇಲೆ ಹತ್ತಿ, ಖುರೈಷಿಗಳ ಬಳಿ ಬಂದು, ಓ ಖುರೈಷಿಗಳೇ ದೀಪದಂತೆ ಹೊಳೆಯುವ ಈ ಕಮಲ ಪುಷ್ಪಗಳನ್ನು, ಸರ್ಪ ಕಣ್ಣುಗಳ ವಿರುದ್ಧ ಹೋರಾಟ ನಡುಸುವುದರಿಂದ ದೇವನಲ್ಲಿ ನಾನು ಕಾವಲು ಬೇಡುತ್ತಿದ್ದೇನೆ, ಅಥವಾ ಖುರೈಷಿಗಳು ಹಾಗೂ ಅನ್ಸಾರಿಗಳ ನಡುವೆ ರಕ್ತ ಹರಿಯುವುದು ನನಗೆ ಇಷ್ಟವಿಲ್ಲ ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-227/365

ಉತ್’ಬರ ಅಭಿಪ್ರಾಯವನ್ನು ಪರಿಗಣಿಸಿದ ಹಕೀಮ್, ಏನೇ ಆಗಲಿ ಅಬೂಜಹಲನ್ನು ಒಮ್ಮೆ ಭೇಟಿ ಆಗೋಣ ಎಂದು ಅವನ ಬಳಿ ಹೋದರು. ಆ ಸಂದರ್ಭದಲ್ಲಿ ಅಬುಜಹಲ್ ಚರ್ಮದ ಚೀಲದಿಂದ ಕವಚವನ್ನು ಹೊರಗೆ ತೆಗೆಯುತ್ತಿದನು. ಹಕೀಮ್ ಮಾತು ಮುಂದುವರಿಸುತ್ತಾ, ಓ ಅಂರ್ ಬಿನ್ ಹಿಷಾಮ್’ರೇ ನಿಮಗೆ, ತಮ್ಮ ಚಿಕ್ಕಪ್ಪರ ಮಗನ (ಪ್ರವಾದಿ ಮುಹಮ್ಮದ್’ರು) ವಿರುದ್ಧ ನಡೆಸುವ ಈ ಹೋರಾಟವನ್ನು ಒಮ್ಮೆ ನಿಲ್ಲಿಸಬಹುದು ಅಲ್ಲವೇ.? ಎಂದು ಉತ್’ಬತ್ ಬಿನ್ ರಬೀಅಃ ಕೇಳುತ್ತಿದ್ದಾರೆ ಎಂದು ಹಕೀಮ್ ಹೇಳಿದ್ದನ್ನು ಕೇಳಿ, ಅವನಿಗೆ ನೀನಲ್ಲದೆ ಇನ್ಯಾರು ಸಿಕ್ಕಿಲ್ವಾ.? ಎಂದು ಲೇವಡಿ ಮಾಡಿದಾಗ ಉತ್’ಬರಿಗೆ ಅಲ್ಲದೆ ಇನ್ಯಾರಿಗೂ ನನ್ನನ್ನು ದೂತನಾಗಿ ತೆಗೆಯುವ ಅಗತ್ಯ ಇಲ್ಲ ಎಂದು ಹಕೀಮ್ ಹೇಳಿದರು.

ಅದಕ್ಕೆ ಅಬುಜಹಲ್, ಅವನೊಬ್ಬ (ಉತ್’ಬತ್’ರ) ಹೇಡಿ, ಮುಹಮ್ಮದ್ ﷺ ಹಾಗೂ ಅವರ ಅನುಚರರು ಒಟ್ಟು ಸೇರಿದರೆ ಕೇವಲ ಒಂದು ಒಂಟೆಯನ್ನು ತಿಂದು ಮುಗಿಸುವ ಬೆರಳೆಣಿಕೆಯಷ್ಟು ಜನರು ಮಾತ್ರ ಇರುವುದು. ಅವನ ಮಗ ಅಬೂಹುದೈಫಾ ಇರುವುದು ಅವರ ಗುಂಪಿನಲ್ಲಿ ಅಲ್ವಾ.? ಬಹುಶಃ ಅವನು ಸಾಯಬಹುದೋ.? ಎಂಬ ಭಯ ಆಗಿರಬಹುದು ಅವನನ್ನು ಕಾಡುತ್ತಿರುವುದು ಎಂದು ಹೇಳಿದನು.
ಇನ್ನೊಂದು ಉಲ್ಲೇಖದ ಪ್ರಕಾರ, ನೀನೇನಾ ಈ ಮಾತು ಹೇಳುತ್ತಿರುವುದು.? ನಿನ್ನ ಜಾಗದಲ್ಲಿ ಇನ್ಯಾರೆ ಇದ್ದಿದ್ರೂ ಅವನ ತಾಯಿಗೆ ಬೈಯುತ್ತಿದ್ದೆ. ನೀನು ಈಗ ಹೇಡಿ ಆಗಿದ್ದೀಯ ಅಲ್ವಾ.? ದೇವಾರಣೆ, ಇನ್ನೂ ಏನೇ ಆದರೂ ನಮ್ಮ ಹಾಗೂ ಮುಹಮ್ಮದ್’ರ ﷺ ನಡುವೆ ಒಂದು ತೀರ್ಮಾನ ಆಗುವ ವರೆಗೆ, ನಾನು ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದನು.
ಮತ್ತೊಂದು ಉಲ್ಲೇಖದ ಪ್ರಕಾರ, ಹಕೀಮ್’ನ ಮಾತು ಕೇಳಿ ಅಬೂಜಹಲ್ ಖುರೈಷಿಗಳನ್ನು ಕರೆಸಿ, ಉತ್’ಬ ಹೀಗೆ ಹೇಳುವುದು ಮುಹಮ್ಮದ್ ﷺ ಅವನ ಚಿಕ್ಕಪ್ಪನ ಮಗ ಆದ ಕಾರಣ ಹಾಗೂ ಅವನ ಮಗ ಮುಹಮ್ಮದ್’ರ ﷺ ಜೊತೆಯಲ್ಲಿ ಇರುವ ಕಾರಣದಿಂದ, ಬಹುಶಃ ಅವನು ಸಾಯುವನೋ.? ಎಂಬ ಭಯದಿಂದ ಆಗಿದೆ ಎಂದು ಹೇಳಿದನು.

ಅಬೂಜಹಲ್ ಸುಮ್ಮನಾಗದೆ, ಖುರೈಷಿಗಳನ್ನು ಉತ್ತೇಜಿಸಲು, ಇನ್ನೂ ಬೇಕಾದ ಮಾತುಗಳನ್ನು ಆಡಲು ಆರಂಭಿಸಿದನು. ಕೊಲೆಯಾದ ಅಂರ್ ಬಿನ್ ಅಲ್ ಹಳ್’ರಮಿಯ ಸಹೋದರ, ಆಮಿರ್ ಬಿನ್ ಅಲ್ ಹಳ್’ರಮಿಯನ್ನು ಕರೆಸಿ, ನಿನ್ನ ಮಿತ್ರನಾದ ಉತ್’ಬ ಹೇಳುವುದು ಕೇಳಿದ್ದೀಯ.? ನಾವು ಹಿಂತಿರುಗಿ ಹೋಗಬೇಕಂತೆ.! ನಿನ್ನ ಸಹೋದರನ ಸಾವಿನ ರಕ್ತಕ್ಕೆ ಉತ್’ಬ ರಕ್ತದ ಹಣ ಕೊಡ್ತಾನಂತೆ. ನಿನಗೆ ಅದನ್ನು ತೆಗಿಯಲು ನಾಚಿಕೆ ಆಗುವುದಿಲ್ವ.? ನಿನ್ನ ಸಹೋದರನ ಕೊಲೆಗಾರ ನಿನ್ನ ಕಣ್ಣೆದುರು ಇರುವಾಗ ಸುಮ್ಮನೆ ಬಿಟ್ಟು ಬಿಡಲು.? ನೀನು ಪ್ರತಿಕಾರ ತೀರಿಸಿದರೆ.? ನಿನಗೆ ಕೊಟ್ಟ ರಿಯಾಯಿತಿಯ ಬಗ್ಗೆ ನಿನಗೆ ನೆನಪಿಲ್ವಾ.? ಎಂದು ಹೇಳಿದನು.

ಅದನ್ನು ಕೇಳಿ, ಆಮಿರ್’ಗೆ ಕೋಪ ಉಕ್ಕಿ ಬಂತು, ಅವನು ಎದ್ದು ನಿಂತು ತನ್ನ ಬಟ್ಟೆಯನ್ನು ಕಿತ್ತೆಸೆದು, ಮೈಮೇಲೆ ಮಣ್ಣು ಹಾಕಿ, ಕೋಪದಿಂದ ಅಯ್ಯೋ ಅಂರ್’ನ ನಾಶವೇ ಎಂದು ಕೂಗಿ ಹೇಳಿದನು, ಅಷ್ಟೇ ಅಲ್ಲ ಹಕೀಮ್ ಹಾಗೂ ಉತ್’ಬರ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಕೂಡ ಹೇಳಿದನು. ಅದನ್ನು ಕೇಳಿ, ಉತ್’ಬ “ಆಯಿತು ನೋಡೋಣ ಯಾರು ಹೇಡಿ.? ಯಾರಿಗೆ ಭಯ” ಎಂದು ಹೇಳಿದರು.

ಪ್ರವಾದಿಯವರು ﷺ ಹಾಗೂ ಅನುಚರರು ಪ್ರಯಾಣ ಮುಂದುವರೆಸಿ ಬದ್’ರಿನ ಹತ್ತಿರದಲ್ಲಿರುವ ದಬ್ಬಾಯಿಗೆ ತಲುಪಿದರು. ಪ್ರವಾದಿಯವರು ﷺ ಹಾಗೂ ಅಬೂಬಕ್ಕರ್’ರು ◌ؓ ಶತ್ರುಗಳ ಬಗ್ಗೆ ಮಾಹಿತಿ ಕಲೆಹಾಕಲು ಹೊರಟರು. ಯಾತ್ರೆ ಮಧ್ಯೆ ಸುಫಿಯಾನುಳ್ಳಮರಿ ಎಂಬ ವಯ್ಯಸ್ಸಾದ ವ್ಯಕ್ತಿಯನ್ನು ಭೇಟಿಯಾಗಿ, ಅವರಲ್ಲಿ ಖುರೈಷಿಗಳ ಬಗ್ಗೆ ಹಾಗೂ ಮುಸ್ಲಿಮರ ಬಗ್ಗೆಯೂ ಕೂಡ ಕೇಳಿದಾಗ, ಅವರು ನೀವು ಯಾರೆಂದು ಹೇಳಿದರೆ ನಾನು ಹೇಳುತ್ತೇನೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ನೀವು ಮಾಹಿತಿ ಕೊಡಿ, ಖಂಡಿತ ನಿಮಗೆ ನಾವು ಯಾರೆಂದು ನಿಮಗೆ ತಿಳಿಸುತ್ತೇವೆ ಎಂದು ಹೇಳಿದರು. ಅದಕ್ಕೆ ಅವರು ನನಗೆ ತಿಳಿದ ಮಟ್ಟಿಗೆ, ಮುಹಮ್ಮದ್ ﷺ ಹಾಗೂ ಅವರ ಅನುಚರರು ಇಂತಾ ದಿನ ಹೊರಟಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು, ಹೀಗಿರುವಾಗ ಅವರು ಇಂತಿಂತ ಸ್ಥಳಕ್ಕೆ ತಲುಪಿರಬೇಕು ಎಂದು ಪ್ರವಾದಿಯವರು ﷺ ಹಾಗೂ ಅನುಚರರು ಹೊರಟಿದ್ದ ದಿನ ಹಾಗೂ ಸ್ಥಳವನ್ನು ಸ್ಪಷ್ಟವಾಗಿ ತಿಳಿಸಿದರು. ಇನ್ನೂ ಖುರೈಷಿಗಳು, ಅವರೂ ಕೂಡ ಇಂತಾ ಸ್ಥಳಕ್ಕೆ ತಲುಪಿರಬೇಕು, ಎಂದು ಅದನ್ನೂ ಕೂಡ ತಿಳಿಸಿದರು. ನಂತರ ಅವರು ನೀವು ಎಲ್ಲಿಂದ ಬರುತ್ತಿದ್ದೀರಿ.? ಎಂದು ಕೇಳಿದಾಗ, ನೀರಿನಿಂದ ಎಂದು ಅರ್ಥ ಬರುವ ಹಾಗೆ ಮಿನಲ್ ಮಾಅ್ ಎಂದು ಹೇಳಿ ಇರಾಖಿನ ಭಾಗಕ್ಕೆ ಸನ್ನೆ ಮಾಡಿದರು. ಅದಕ್ಕೆ ಆ ವ್ಯಕ್ತಿ ಮಾವುಲ್ ಇರಾಖ್’ನ (ಇರಾಖಿನ ಜಲಾಶಯದ) ಬಳಿ ಇರುವವರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹಾಗೂ ಸಿದ್ದೀಕ್’ರು ◌ؓ ಏನೂ ಮಾತಾಡದೆ ಅಲ್ಲಿಂದ ಮುಂದೆ ಸಾಗಿದರು. ಎಲ್ಲವೂ ಉಂಟಾದದ್ದು ನೀರಿನಿಂದ ಅಲ್ಲವೇ ಎಂಬ ಅರ್ಥದಲ್ಲಿ ಆಗಿತ್ತು ಮಿನಲ್ ಮಾಅ್ ಎಂದು ಅವರು ಹೇಳಿದ್ದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-228/365

ಇನ್ನೂ ಹೋರಾಟವಲ್ಲದೆ ಬೇರೆ ದಾರಿಯಿಲ್ಲ ಎಂದು ಮನಗಂಡು, ಪ್ರವಾದಿಯವರು ﷺ ತಮ್ಮ ಅನುಚರರ ಬಳಿ ಬಂದರು. ತಮಗೆ ಲಭಿಸಿದ್ದ ಎಲ್ಲಾ ವಿವರಗಳನ್ನು ತಿಳಿಸಿ, ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ನೇರವಾದ ಹೋರಾಟದ ಬಾಗಿಲಿಗೆ ಬಂದು ತಲುಪಿದ್ದೇವೆ. ಇನ್ನೂ ಈ ಯುದ್ಧದಲ್ಲಿ ಸೋಲು ಅಥವಾ ಗೆಲುವು ನಿಶ್ಚಿತ, ಗೆಲುವಾದರೆ ಬಹಳಷ್ಟು ಲಾಭಗಳಿವೆ. ಜಗತ್ತಿನಾದ್ಯಂತ ತಲುಪಬೇಕಾದ ನೈಜ ಆದರ್ಶವು ಯಾವುದೇ ಅಡಚಣೆಗಳಿಲ್ಲದೆ, ಮುಂದೆ ಸಾಗುತ್ತದೆ. ದೀರ್ಘಕಾಲದ ಚಿತ್ರಹಿಂಸೆ, ದೌರ್ಜನ್ಯಗಳಿಂದ ವಿಶ್ವಾಸಿ ಸಮೂಹಕ್ಕೆ ಬಿಡುಗಡೆ ಲಭಿಸುತ್ತದೆ. ಬಿಟ್ಟು ಬಂದ ತಾಯಿನಾಡಿಗೆ ಪುನಃ ಮರಳಿ ಹೋಗಲು ಸಾಧ್ಯವಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಉಸಿರಿಗೆ ಉಸಿರಾಗಿ ಇಷ್ಟಪಡುವ ಕಅ್’ಬಾಲಯವನ್ನು ಕಾಣಲು ಸಾಧ್ಯವಾಗುತ್ತದೆ.
ಇನ್ನೂ ಬಹುಶಃ ಸೋತರೆ, ಮದೀನಕ್ಕೆ ವಾಪಸು ಮರಳೋಣ. ಆದರೆ ಅಲ್ಲಿ ಪ್ರವಾದಿಯವರನ್ನು ﷺ ಹಾಗೂ ಅವರ ಅನುಚರರನ್ನು ಬುಡ ಸಮೇತ ಇಲ್ಲವಾಗಿಸಲು ಕಾದು ಕುಳಿತಿರುವ ಯಹೂದಿಗಳಿದ್ದಾರೆ, ಅವರ ಜೊತೆ ಸೇರಲು ಇರುವ ಈ ಅವಕಾಶವನ್ನು ಬಹುದೈವ ವಿಶ್ವಾಸಿಗಳು ಬಳಸದೆ ಇರಲಾರರು ಎಂದು ಹೇಳಿದರು.

ಪ್ರವಾದಿಯವರು ﷺ ಹಾಗೂ ಅನುಚರರು ಎಲ್ಲದಕ್ಕೂ ಮಾನಸಿಕವಾಗಿ ತಯಾರಾಗಿ ಮುಂದಕ್ಕೆ ಸಾಗಿದರು. ಮಣ್ಣಿನಗುಡ್ಡೆಯ ಉತ್ತರ ಭಾಗದಲ್ಲಿರುವ ಬದ್’ರ್ ಕಣಿವೆಯ ಮೂಲಕ ಹೊರಟರು. ತಕ್ಷಣಕ್ಕೆ ನೀರು ಇರುವ ಸ್ಥಳವನ್ನು ಹುಡುಕಬೇಕಿತ್ತು, ನೀರು ಅನ್ಯರ ಪಾಲದರೆ ಅಲ್ಲಿ ಉಳಿದುಕೊಳ್ಳುವುದು ಬಹಳ ಕಷ್ಟಕರವಾದ ಕಾರಣ, ನೀರು ಸಿಗುವ ಸ್ಥಳದಲ್ಲಿ ಡೇರೆ ಹಾಕುವುದು ಬಹಳ ಮುಖ್ಯವಾದ ವಿಷಯವಾಗಿತ್ತು.

ಸಂಜೆಯ ಹೊತ್ತಿಗೆ ಪ್ರವಾದಿಯವರು ﷺ ನೀರು ಸಿಗುವ ಸ್ಥಳವನ್ನು ಗುರುತಿಸಲು ಹಾಗೂ, ಶತ್ರುಗಳ ಚಲನೆ ವಲನೆಗಳನ್ನು ಗಮನಿಸಲು, ಅಲಿ ಬಿನ್ ಅಬೀತ್ವಾಲಿಬ್ ◌ؓ, ಝುಬೈರ್ ಬಿನ್ ಅಲ್ ಅವಾಂ ◌ؓ ಹಾಗೂ ಸಅದ್ ಬಿನ್ ಅಬೀ ವಖ್ಖಾಸ್’ರನ್ನು ◌ؓ ನಿಯೋಗಿಸಿದರು. ಹೀಗೆ ಅವರು ಬದ್’ರಿನಲ್ಲಿ ನೀರು ಸಿಗುವ ಸ್ಥಳದ ಬಳಿ ತಲುಪಿದಾಗ, ಅಲ್ಲಿಗೆ ಖುರೈಷಿಗಳಲ್ಲಿ ಬನುಲ್ ಹಾಜಿನ ಸೇವಕನಾದ ಅಸ್’ಲಂ ಹಾಗೂ ಬನೂಅಸ್’ಕರಿನ ಸೇವಕನಾದ ಅರೀಳುಮಾನ್ ನೀರು ಶೇಖರಿಸಲು ಬಂದಿದ್ದರು. ಅವರನ್ನು ಕಂಡ ಕೂಡಲೇ ವೇಗವಾಗಿ ಹೋಗಿ ಅವರಿಬ್ಬರನ್ನು ಹಿಡಿದು ಪ್ರವಾದಿಯವರ ﷺ ಬಳಿ ಕರೆದುಕೊಂಡು ಹೋದರು. ಇದರ ನಡುವೆ ಅವರ ಜೊತೆಯಲ್ಲಿದ್ದ ಇನ್ನೊಬ್ಬ ಸೇವಕ ತಪ್ಪಿಸಿಕೊಂಡಿದ್ದನು. ಅವರು ಮೂವರು ಪ್ರವಾದಿಯವರ ﷺ ಬಳಿ ಅವರನ್ನು ಕರೆದುಕೊಂಡು ತಲುಪಿದಾಗ, ಪ್ರವಾದಿಯವರು ﷺ ನಮಾಝ್ ಮಾಡುತ್ತಿದ್ದರು. ಹಾಗಾಗಿ ಸ್ವಹಾಬಿಗಳು ಅವರಿಬ್ಬರಲ್ಲಿ ಪ್ರಶ್ನೆಗಳನ್ನು ಕೇಳಿದರು, ಅವರು ನಾವು ಖುರೈಷಿಗಳ ಸೇವಕರೆಂದೂ, ನೀರು ತರಲು ಬಂದಿರುವುದಾಗಿಯೂ ಒಪ್ಪಿದರು. ನಂತರ ಮುಂದಿನ ವಿವರಣೆ ಕೇಳಿದಾಗ, ಅವರು ಖುರೈಷಿ ಸೈನ್ಯದ ಸೇವಕರೆಂದು ಹೇಳಿದರು. ಇದನ್ನು ಕೇಳಿ ಸ್ವಹಾಬಿಗಳಿಗೆ ಆಘಾತವಾಗಿತ್ತು, ಯಾಕೆಂದರೆ ಅವರು ಅಂದುಕೊಂಡದ್ದು ಅಬೂಸುಫಿಯಾನ್’ರ ಖಾಫಿಲದ ಸೇವಕರಗಿರಬಹುದು ಎಂದಾಗಿತ್ತು, ಹಾಗಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಅವರಿಗೆ ಹಿಂಸೆ ನೀಡಲು ಆರಂಭಿಸಿದರು. ನೋವು ತಾಳಲಾರದೆ ಅವರು ಖಾಫಿಲದ ಸೇವಕರೆಂದು ಸುಳ್ಳು ಹೇಳಿದರು. ಅದನ್ನು ಕೇಳಿದಾಗ ಪ್ರಶ್ನೆ ಕೇಳಿದ ಅನುಚರರಿಗೆ ಸಮಾಧಾನ ಆಯಿತು. ಅಷ್ಟೊತ್ತಿಗೆ ಪ್ರವಾದಿಯವರು ﷺ ನಮಾಝ್ ಮುಗಿಸಿ, ಬಂದು ಸ್ವಾಹಾಬಿಗಳಲ್ಲಿ ಅವರು ಸತ್ಯ ಹೇಳಿದಾಗ ನೀವು ಹಿಂಸೆ ನೀಡಿದಿರಿ, ಸುಳ್ಳು ಹೇಳಿದಾಗ ಅವರನ್ನು ಬಿಟ್ಟು ಬಿಟ್ಟಿರಿ ಅಲ್ವಾ.?, ವಾಸ್ತವದಲ್ಲಿ ಅವರು ಖುರೈಷಿಗಳ ಸೈನ್ಯದ ಸೇವಕರಾಗಿರುತ್ತಾರೆ ಎಂದು ಹೇಳಿದರು.

ಮುಸ್ಲಿಮರು ಕೊನೆಯ ಗಳಿಗೆಯವರೆಗೂ ಅಂದುಕೊಂಡದ್ದು, ವ್ಯಾಪಾರ ಸಂಘವನ್ನು ತಡೆಹಿಡಿಯುವುದು ಮಾತ್ರವಾಗಿತ್ತು ಎಂದು ಈ ಘಟನೆಯಿಂದ ಅರ್ಥ ಮಾಡಿಕೊಳ್ಳಬಹುದು. ನಾವು ಹೋಗುತ್ತಿರುವುದು ಯುದ್ಧಕೆ ಎಂದು ತಿಳಿದಾಗ, ಕೆಲವು ಜನರಿಗಾದರೂ ಆಘಾತ ಆಗುವುದರಲ್ಲಿ ಯಾವುದೇ ಆಶ್ಚರ್ಯ ಇರಲಿಲ್ಲ. ಒಂದು ವ್ಯಾಪಾರ ಸಂಘವನ್ನು ತಡೆದು ಅವರಿಂದ ಸೊತ್ತುಗಳನ್ನು ಕಸಿದುಕೊಳ್ಳುವುದಕ್ಕೂ, ಒಂದು ಸನ್ನದ್ದ ಸೇನೆಯನ್ನು ಎದುರಿಸಿ ಸಾವು, ನೋವನ್ನು ಎದುರಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಈ ಕಾರಣಕ್ಕೆ ಆಗಿತ್ತು, ಅವರು ಬಹಳಷ್ಟು ಆಲೋಚಿಸಿದ್ದು. ಈ ಸಂದರ್ಭದ ಬಗ್ಗೆ ಪವಿತ್ರ ಕುರ್’ಆನಿನ ಎಂಟನೇ ಅಧ್ಯಾಯದ (ಅಲ್ ಅಂಫಾಲ್) ಏಳನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು. “ಎರಡು ತಂಡದಲ್ಲಿ ಒಂದು ನಿಮ್ಮ ಅಧೀನಕ್ಕೆ ಬರಲಿದೆ, ಎಂದು ಅಲ್ಲಾಹನ ನೀಡಿದ ಮಾತನ್ನು ನೀವು ಸ್ಮರಿಸಿರಿ. ನಿರಾಯುಧವಾದ ಗುಂಪು ನಿಮ್ಮ ಅಧೀನಕ್ಕೆ ಬರಲಿದೆ ಎಂದಾಗಿತ್ತು ನೀವು ಅಂದುಕೊಂಡಿದ್ದು, ಆದರೆ ಅಲ್ಲಾಹನು, ತನ್ನ ವಚನವನ್ನು ಸತ್ಯವಾಗಿ ತೋರಿಸಬೇಕು ಎಂದೂ, ಸತ್ಯ ನಿಷೇಧಿಗಳನ್ನು ಬುಡ ಸಮೇತ ಕಿತ್ತೊಗೆಯಬೇಕು ಎಂದಾಗಿತ್ತು ಇಚ್ಛಿಸಿದ್ದು.”

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-229/365

ಮುಸ್ಲಿಮರು ಹಿಡಿದು ತಂದಿದ್ದ ಜನರಲ್ಲಿ ಪ್ರವಾದಿಯವರು ﷺ ಪುನಃ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಉದ್’ವತುಲ್ ಖುಸ್’ವಾ ಎಂಬ ಮಣ್ಣಗುಡ್ಡೆಯ ಹಿಂದೆ ಖುರೈಷಿಗಳು ಡೇರೆ ಹಾಕಿದ್ದಾರೆ, ಅವರ ಜನ ಸಂಖ್ಯೆ ಎಷ್ಟಿದೆ ಎಂದು ಗೊತ್ತಿಲ್ಲ, ಆದರೆ ಒಂದು ಉಗ್ರ ಹೋರಾಟಕ್ಕೆ ಸನ್ನದ್ದರಾಗಿಯೇ ಬಂದಿದ್ದಾರೆ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ ಅವರು ಆಹಾರಕ್ಕೆ ದಿನಾಲೂ ಎಷ್ಟು ಒಂಟೆಗಳನ್ನು ಕಡಿಯುತ್ತಾರೆ.? ಎಂದು ಕೇಳಿದಾಗ, ಒಂದು ದಿನ ಒಂಬತ್ತು ಒಂಟೆಗಳನ್ನು ಕಡಿದರೆ, ಮರುದಿನ ಹತ್ತು ಒಂಟೆಗಳನ್ನು ಕಡಿಯುವರು ಎಂದು ಹೇಳಿದರು. ಹೋ ಹಾಗಿದ್ದರೆ ಅವರ ಜನಸಂಖ್ಯೆ ಒಂಬೈನೂರು ಹಾಗೂ ಸಾವಿರದ ಮಧ್ಯೆ ಇರಬಹುದು ಎಂದು ಪ್ರವಾದಿಯವರು ﷺ ಲೆಕ್ಕ ಹಾಕಿದರು. ಯಾಕೆಂದರೆ ಸಾಮಾನ್ಯವಾಗಿ ಒಂದು ಸಂಪೂರ್ಣ ಒಂಟೆಯ ಮಾಂಸವನ್ನು ನೂರು ಜನರಿಗೆ ಸೇವಿಸಲು ಸಾಧ್ಯವಾಗುತ್ತದೆ. ನಂತರ ಮಾತು ಮುಂದುವರಿಸುತ್ತಾ, ಎಷ್ಟು ಜನ ಖುರೈಷಿ ನಾಯಕರು ಬಂದಿದ್ದಾರೆ.? ಎಂದು ಕೇಳಿದಾಗ, ಅಬೂಜಹಲ್ ಬಿನ್ ಹಿಷಾಮ್, ಸುಹೈಲ್ ಬಿನ್ ಅಂರ್, ಉತ್’ಬತ್ ಬಿನ್ ರಬೀಅಃ, ಶೈಬತ್ ಬಿನ್ ರಬೀಅಃ, ಅಬುಲ್ ಬುಖ್’ತಿರಿ ಬಿನ್ ಹಿಷಾಮ್, ಹಾರಿಸ್ ಬಿನ್ ಆಮಿರ್, ನಳರ್ ಬಿನ್ ಹಾರಿಸ್, ತ್ವಐಮತ್ ಬಿನ್ ಅದಿಯ್ಯ್, ಸಂಅತ್ ಬಿನ್ ಅಸ್’ವದ್, ಅಂರ್’ಬಿನ್ ಅಬ್’ದುವುದ್ದ್, ಉಮಯ್ಯತ್ ಬಿನ್ ಖಲಫ್, ನಬೀಹ್ ಬಿನ್ ಹಜ್ಜಾಜ್, ಮುನಬ್ಬಿಹ್ ಬಿನ್ ಹಜ್ಜಾಜ್, ಹಕೀಮ್ ಬಿನ್ ಹಿಝಾಮ್, ನೌಫಲ್ ಬಿನ್ ಖುವೈಲಿದ್, ಮುಂತಾದ ಬಹಳಷ್ಟು ನಾಯಕರು ಇದ್ದಾರೆ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ “ಅದೋ ಮಕ್ಕಾ ಅದರ ಪ್ರೀತಿಯ ಜನರನ್ನು ನಿಮಗಾಗಿ ಕೊಟ್ಟು ಕಳುಹಿಸಿದೆ” ಎಂದು ತಮ್ಮ ಅನುಚರರಲ್ಲಿ ಹೇಳಿದರು.

ಇತ್ತ ಮುಸ್ಲಿಮರ ಡೇರೆಯಲ್ಲಿ ವಿಚಾರಣೆ ನಡೆಯುತ್ತಿರುವಾಗ, ಅತ್ತ ಸ್ವಹಾಬಿಗಳ ಕೈಯಿಂದ ತಪ್ಪಿಸಿದ ಮೂರನೇ ಸೇವಕ ಖುರೈಷಿಗಳ ಡೇರೆಯ ಕಡೆಗೆ ಓಡಿ ಹೋಗಿ “ಓ ಖುರೈಷಿಗಳೇ, ಅಬೂಕಬ್’ಷರ ಮಗ (ಪ್ರವಾದಿಯವರು ﷺ) ಹಾಗೂ ಅವರ ಅನುಚರರು ಈಗಾಗಲೇ ಬದ್’ರಿಗೆ ತಲುಪಿದ್ದಾರೆ, ನೀವು ನೀರು ಸಂಗ್ರಹ ಮಾಡಲು ಕಳುಹಿಸಿದ ದಾಸರನ್ನು ಅವರು ಹಿಡಿದಿದ್ದಾರೆ.” ಎಂದು ಕೂಗಿ ಹೇಳಿದನು. ಕೂಗು ಕೇಳಿದ ಖುರೈಷಿಗಳಿಗೆ ಆಶ್ಚರ್ಯವಾಗಿತ್ತು, ಆಕಸ್ಮಿಕವಾಗಿ ಕೇಳಿದ ಸುದ್ದಿಯೂ, ಡೇರೆಯ ಒಳಗಿದ್ದ ಖುರೈಷಿಗಳ ಕೋಪಕ್ಕೆ ತುಪ್ಪ ಸುರಿಯುವ ಕೆಲಸವನ್ನು ಮಾಡಿತು.

ಮುಸ್ಲಿಮರ ಡೇರೆಯ ಒಳಗಿನಿಂದ ಕೆಲವೊಂದು ಚರ್ಚೆಗಳು ನಡೆಯಲು ಆರಂಭವಾಯಿತು. ನಾವು ಸತ್ಯದ ವಕ್ತಾರರು, ಖಂಡಿತ ನಮಗೆ ಗೆಲುವು ಸಿಗಲಿದೆ, ಆದರೆ ನಾವು ಈಗ ಇರುವುದು ನೀರು ಸಿಗುವ ಸ್ಥಳದಿಂದ ತುಂಬಾ ದೂರದಲ್ಲಿ ಆಗಿದೆ. ನಮಗೆ ಈಗ ಇರುವ ನೀರೆ ಕುಡಿಯಲು, ಶುದ್ಧೀಕರಣ ಮಾಡಲು ಸಾಕಾಗುವುದಿಲ್ಲ. ನಮ್ಮಲ್ಲಿ ಕೆಲವರಿಗೆ ನಮಾಝ್ ಮಾಡಬೇಕಿದ್ದರೂ ಸ್ನಾನ ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗಿದೆ, ಆದರೆ ಖುರೈಷಿಗಳಾದರೆ.? ಸತ್ಯ ನಿಷೇಧಿಗಳಾಗಿರುತ್ತಾರೆ, ಅವರು ಡೇರೆ ಹಾಕಿರುವುದು ಕೂಡ ಉದ್’ವತುಲ್ ಖುಸ್’ವದ ಹತ್ತಿರದಲ್ಲೇ ಆಗಿದೆ. ನಾವು ಡೇರೆ ಹಾಕಿದ ಸ್ಥಳದಲ್ಲಿ ಇರುವುದು ಮರಳಿನ ರಾಶಿ ಆಗಿದೆ, ನಮಗೆ ಇಲ್ಲಿ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ನಾವೇನಾದರೂ ದಾಹದಿಂದ ಆಯಾಸಗೊಂಡರೆ, ಅದು ಖುರೈಷಿಗಳಿಗೆ ಸುಲಭವೇ ಆಗುತ್ತದೆ. ಆಗ ಅವರಿಗೆ ನಮ್ಮನ್ನು ಸುಲಭವಾಗಿ ಸೋಲಿಸಬಹುದು, ನಮ್ಮನ್ನು ಬಂದಿಯಾಗಿಸಿ ಮಕ್ಕಾಗೆ ಹಿಡಿದುಕೊಂಡು ಕೂಡ ಹೋಗಬಹುದು. ಹೀಗೆ ಏನೇನೋ ಚಿಂತೆಗಳು ಅವರನ್ನು ಕಾಡುತ್ತಿದ್ದವು. ಅಷ್ಟೊತ್ತಿಗೆ ಆಗಸದಲ್ಲಿ ಕಾರ್ಮೋಡ ಹಿಡಿದು ಮಳೆಯ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಮಳೆಯೂ ಕೂಡ ಬಂದಿತು, ಮುಸ್ಲಿಮರು ಸಂತೋಷದಿಂದ ಮಳೆಯನ್ನು ಆನಂದಿಸಿ, ಮಳೆಯ ನೀರನ್ನು ಬೇಕಾದ ರೀತಿಯಲ್ಲಿ ಶೇಖರಿಸಲು ಆರಂಭಿಸಿದರು. ಅವರ ಸುತ್ತಮುತ್ತಲಿನಲ್ಲಿದ್ದ ಮರಳುಗಳು ಮಳೆಯ ನೀರಿನಿಂದ ಉಷ್ಣತೆ ಕಡಿಮೆಯಾಗಿ ಸಂಚಾರಕ್ಕೆ ಯೋಗ್ಯವಾಯಿತು. ಇತ್ತ ಮಳೆಯಿಂದ ಮುಸ್ಲಿಮರು ಸಂತೋಷದಿಂದ ಆನಂದಿಸಿದರೆ, ಅತ್ತ ಖುರೈಷಿಗಳ ಪರಿಸ್ಥಿತಿ ನೇರ ವಿಭಿನ್ನವಾಗಿತ್ತು, ಅವರು ಡೇರೆ ಹಾಕಿದ್ದ ನೆಲ ಮಣ್ಣಿನ ಭೂಮಿ ಆಗಿದ್ದ ಕಾರಣ, ಮಳೆಯ ನೀರಿನಿಂದ ಸುತ್ತಲೂ ಕೆಸರು ನಿರ್ಮಾಣವಾಗಿ ಒಂದು ಹೆಜ್ಜೆ ಕೂಡ ಮುಂದೆ ಇಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಖುರೈಷಿಗಳು ಇದರಿಂದಾಗಿ ಸಂಪೂರ್ಣವಾಗಿ ವಿಚಲಿತರಾದರು. ಒಂದೇ ಮಳೆ, ಸತ್ಯವಿಶ್ವಾಸಿಗಳಿಗೆ ಉಪಯುಕ್ತವಾಗಿಯೂ, ನಿಷೇಧಿಗಳಿಗೆ ತೊಂದರೆಯಾಗಿಯೂ ಪರಿಣಮಿಸಿತು. ಈ ಸಂದರ್ಭದ ಬಗ್ಗೆ ಕುರ್’ಆನಿನ ಎಂಟನೇ ಅಧ್ಯಾಯದ (ಅಲ್ ಅಂಫಾಲ್) ಹನ್ನೊಂದನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು “ಅಲ್ಲಾಹನು ಅವನ ಕಡೆಯಿಂದಿರುವ ಮನಃಶಾಂತಿಗಾಗಿ, ನಿಮ್ಮನ್ನು ನಿದ್ರಾ ಮಂಪರಿನಿಂದ ಸುತ್ತುವರಿದಿದ್ದ ಸಂದರ್ಭದ ಬಗ್ಗೆ ನೆನಪಿಸಿರಿ. ನಿಮ್ಮನ್ನು ಶುಚಿಗೊಳಿಸಲು, ಪಿಶಾಚಿಯ ಕೆಟ್ಟ ಚಿಂತನೆಗಳಿಂದ ರಕ್ಷಿಸಲು, ನಿಮ್ಮ ಹೃದಯಗಳಿಗೆ ದೃಢಸಂಕಲ್ಪವನ್ನು ಮೂಡಿಸಿ, ನಿಮ್ಮ ಪಾದಗಳನ್ನು ದೃಢವಾಗಿ ನೆಲೆಯೂರಿಸಲು, ಅವನು ನಿಮ್ಮ ಮೇಲೆ ಆಕಾಶದಿಂದ ನೀರು ಸುರಿಸಿದ ಸಂದರ್ಭವನ್ನು ನೆನಪಿಸಿರಿ.”

ಈ ನಿರ್ಣಾಯಕ ರಾತ್ರಿಯ ಬಗ್ಗೆ ಅಲಿಯವರು ◌ؓ ವಿವರಿಸುವುದು ಕಾಣಬಹುದು. ನಮ್ಮ ಮೇಲೆ ರಾತ್ರಿ ಹೊತ್ತು ಬಿರುಸಿನ ಮಳೆ ಸುರಿದಿತ್ತು, ನಾವು ಮಳೆಯಿಂದ ರಕ್ಷಿಸಲು ಮರದ ಕೆಳಗೆ, ಚರ್ಮದ ಗುರಾಣಿಗಳ ಸಹಾಯ ಪಡೆದುಕೊಂಡೆವು. ನಾವೆಲ್ಲರೂ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಕೂಡ ಮಾಡಿದ್ದೆವು, ಆದರೆ ಪ್ರವಾದಿಯವರು ﷺ ಮಾತ್ರ ಬೆಳಕು ಹರಿಯುವ ವರೆಗೂ ಒಂದು ಮರದ ಕೆಳಗೆ ನಮಾಝ್ ಮಾಡುತ್ತಾ, ಪ್ರಾರ್ಥನೆಯಲ್ಲೇ ಮುಳುಗಿದ್ದರು.

ಹಿಜ್ರಾದ ಎರಡನೇ ವರ್ಷ, ರಂಝಾನ್ ಹದಿನೇಳು ಶುಕ್ರವಾರ ರಾತ್ರಿಯಾಗಿತ್ತು ಅದು. ಸುಮಾರು ಹೊತ್ತಿನ ವರೆಗೆ ಸುಜೂದಿನಲ್ಲೇ ಇದ್ದು, ಪ್ರವಾದಿಯವರು ﷺ “ಯಾ ಹಯ್ಯು ಯಾ ಖಯ್ಯೂಂ” ಎಂಬ ವಾಕ್ಯಗಳನ್ನು ಮಂತ್ರಿಸುತ್ತಲೇ ಇದ್ದರು. “ಅಲ್ಲಾಹನೇ ಈ ಸಣ್ಣ ಸೇನೆ ಏನಾದರೂ ಸೋತರೆ ನಿನ್ನನ್ನು ಇನ್ನೂ ಆರಾಧಿಸುವವರು ಯಾರೂ ಇರಲಿಕ್ಕಿಲ್ಲ ಅಲ್ಲವೇ…? ಎಂದು ಪ್ರಾರ್ಥಿಸುತ್ತಲೇ ಇದ್ದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-230/365

ಪ್ರವಾದಿಯವರ ﷺ ಪ್ರಾರ್ಥನೆಯನ್ನು ಕೇಳಿ, ಅಬೂಬಕ್ಕರ್’ರು ◌ؓ ಸಾಕು ಪ್ರವಾದಿಯವರೇ ﷺ, ಅವರು ಖಂಡಿತ ಸೋಲುಂಡು ಓಡಿ ಹೋಗುತ್ತಾರೆ. ನೀವು ಚಿಂತಿತರಾಗಬೇಡಿ ಎಂದು ಹೇಳಿದರು.
ಮುಂಜಾನೆ ನಮಾಝಿನ ಸಮಯ ಹತ್ತಿರವಾದರೂ ಪ್ರವಾದಿಯವರ ﷺ ಅನುಚರರಿಗೆ ಮಾತ್ರ ಎಚ್ಚರವಾಗಿರಲಿಲ್ಲ, ಮಳೆಯ ತಂಪಿನಿಂದ ಚೆನ್ನಾಗಿ ನಿದ್ರಿಸುತ್ತಿದ್ದ ಸ್ವಹಾಬಗಳನ್ನು ಪ್ರವಾದಿಯವರು ﷺ ಎಬ್ಬಿಸಿ, ಒಟ್ಟಾಗಿ ನಮಾಝ್ ಮಾಡಿದರು.

ಇಬ್’ನುಹಿಷಾಮಿಯವರ ಉಲ್ಲೇಖದ ಪ್ರಕಾರ, ಅಂದು ರಾತ್ರಿಯೇ ಸ್ವಾಹಾಬಿಗಳು ಜಲಾಶಯಯ ಹತ್ತಿರ ಹೋಗಿ, ಅದನ್ನು ತಮ್ಮ ಅಧೀನಕ್ಕೆ ಮಾಡಿಕೊಂಡಿದ್ದರು. ಪ್ರವಾದಿಯವರ ﷺ ರಣನೀತಿಯ ಮೊದಲ ಸೈನಿಕ ಕಾರ್ಯಾಚರಣೆ ಆಗಿತ್ತು ಅದು. ರಾತ್ರಿ ಹೊತ್ತಿನಲ್ಲಿ ರಣತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿದ್ದ ಬನೂ ಸಲಮಃ ಜನಾಂಗದ
ಸ್ವಹಾಬಿಯಾಗಿದ್ದ ಖಬ್ಬಾಬ್ ಬಿನ್ ಮುನ್’ದಿರ್ ಬಿನ್ ಅಲ್ ಜಮೂಹ್’ರು ◌ؓ ಮುಂದೆ ಬಂದು, ನಾವು ಇಲ್ಲಿ ಡೇರೆ ಹಾಕಿರುವುದರ ಉದ್ದೇಶ, ಅಲ್ಲಾಹನ ಕಟ್ಟುನಿಟ್ಟಾದ ಆಜ್ಞೆಯ ಕಾರಣದಿಂದಲೋ ಅಥವಾ, ಇದೊಂದು ರಣತಂತ್ರವೋ.? ಎಂದು ಪ್ರವಾದಿಯವರಲ್ಲಿ ﷺ ಕೇಳಿದಾಗ, ಪ್ರವಾದಿಯವರು ﷺ ಇಲ್ಲ, ಹಾಗೇನಿಲ್ಲ ಇದೊಂದು ರಣತಂತ್ರದ ಭಾಗವಾಗಿದೆ ಎಂದು ಹೇಳಿದರು. ಅದಕ್ಕೆ ಖಬ್ಬಾಬ್ ಹಾಗಿದ್ದರೆ, ನಾವಿಲ್ಲಿಂದ ಹೊರಟು ಖುರೈಷಿಗಳ ಜಲಾಶಯ ಇರುವ ಕಡೆಗೆ ಹೋಗೋಣ. ಅಲ್ಲಿ ನಮಗಾಗಿ ಪ್ರತ್ಯೇಕವಾಗಿ ನೀರನ್ನು ಶೇಖರಣೆ ಮಾಡಲು ತೊಟ್ಟಿಯನ್ನು ನಿರ್ಮಿಸೋಣ ಎಂದು ಹೇಳಿದಾಗ, ಪ್ರವಾದಿಯವರು ﷺ ಅದಕ್ಕೆ ಸಮ್ಮತಿಸಿ, ಅದೇ ರೀತಿ ಒಂದು ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿ ನೀರು ಶೇಖರಣೆ ಮಾಡಿದರು.

ಅದರ ನಂತರ, ಸಅದ್ ಬಿನ್ ಮುಆದ್ ◌ؓ ಪ್ರವಾದಿಯವರಲ್ಲಿ ﷺ, ಇಲ್ಲಿ ಪಕ್ಕದಲ್ಲಿ ನಾವು ನಿಮಗಾಗಿ ಒಂದು ಡೇರೆ ನಿರ್ಮಿಸಬೇಕೆಂದು ಅಂದುಕೊಂಡಿದ್ದೇವೆ. ಹಾಗೆ ಡೇರೆ ಮಾಡಿದರೆ, ನಮ್ಮ ಪ್ರಾಣಿಗಳನ್ನು ಕೂಡ ಇಲ್ಲೇ ಕಟ್ಟಿಹಾಕಬಹುದು. ನಾವು ಶತ್ರುಗಳನ್ನು ಎದುರಿಸಿ, ನಮಗೆ ಗೆಲವು ಸಿಕ್ಕರೆ ಬಹಳ ಸಂತೋಷದಿಂದ ಹಿಂತಿರುಗಿ ಹೋಗಬಹುದು. ಇನ್ನೂ ಏನಾದರೂ ಸೋತರೆ, ನಿಮಗೆ ವಾಹನ ಹತ್ತಿ, ನಮಗಾಗಿ ಕಾದು ಕುಳಿತಿರುವ ಇತರ ಅನುಚರರ ಜೊತೆ ಸೇರಬಹುದು ಅಲ್ಲವೇ.? ಅವರು ನಮ್ಮ ಜೊತೆ ಇಲ್ಲಿಗೆ ಬರದಿದ್ದರೂ, ನಮಗಿಂತ ಅಧಿಕವಾಗಿ ನಿಮ್ಮನ್ನು ಪ್ರೀತಿಸುವ ಜನರಾಗಿದ್ದಾರೆ. ನಾವು ಬಂದಿದ್ದು ಯುದ್ದಕ್ಕೆ ಎಂದು ಅವರಿಗೆ ತಿಳಿದಿದ್ದರೆ.? ಖಂಡಿತ ಅವರು ನಮ್ಮ ಜೊತೆ ಬರುತ್ತಿದ್ದರು. ಅವರು ನಿಮ್ಮನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವರು, ಅಷ್ಟೇ ಅಲ್ಲ ಇನ್ನೂ ಬರುವ ಯುದ್ಧಗಳಲ್ಲಿ ನಿಮ್ಮ ಜೊತೆಯಲ್ಲೇ ನಿಲ್ಲುವರು ಎಂದು ಹೇಳಿದಾಗ, ಆ ಮಾತು ಕೇಳಿ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷ ಆಯಿತು.

ಪ್ರವಾದಿಯವರು ﷺ, ಸಅದ್’ಗಾಗಿ ವಿಶೇಷ ಪ್ರಾರ್ಥನೆಯನ್ನೂ ನಡೆಸಿದರು. ಸಅದ್ ಹೇಳಿದ ಹಾಗೆ, ಅಲ್ಲೊಂದು ಡೇರೆಯನ್ನು ಕೂಡ ನಿರ್ಮಿಸಲಾಯಿತು. ಇಂದು ಆ ಸ್ಥಳದಲ್ಲಿ ಅಂದಿನ ಡೇರೆಯ ನೆನಪಿಗಾಗಿ, ಮಸ್ಜಿದುಲ್ ಅರೀಷ್ ಕಟ್ಟಲಾಗಿದೆ. ಪ್ರವಾದಿಯವರಿಗೆ ﷺ ಎಲ್ಲಾ ದೃಶ್ಯಗಳು ಚೆನ್ನಾಗಿ ಕಾಣುವ ಹಾಗೆ ಡೇರೆಯನ್ನು ನಿರ್ಮಿಸಲಾಯಿತು.

ಪ್ರವಾದಿಯವರು ﷺ ಹಾಗೂ ಅಬೂಬಕ್ಕರ್’ರು ◌ؓ ಡೇರೆಯ ಒಳಗೆ ಹೋದ ನಂತರ, ಸಅದ್ ಬಿನ್ ಮುಆದ್ ◌ؓ ತನ್ನ ಖಡ್ಗವನ್ನು ತೆಗೆದು, ಡೇರೆಯ ಹೊರಗೆ ಕಾವಲು ನಿಂತರು. ಅಬ್ದುಲ್ಲಾಹಿಬಿನು ಮಸ್’ವೂದ್ ಹಾಗೂ ಅಮ್ಮಾರ್ ಬಿನ್ ಯಾಸಿರ್’ರನ್ನು ಖುರೈಷಿಗಳ ಚಲನ ವಲನಗಳನ್ನು ಗಮನಿಸಲು ಕಳುಹಿಸಿದರು. ಅವರಿಬ್ಬರೂ ಖುರೈಷಿಗಳ ಡೇರೆಯ ಸುತ್ತಮುತ್ತಲಿನಲ್ಲಿ ಸ್ವಲ್ಪ ಸಮಯದ ವರೆಗೆ ಸುತ್ತಾಡಿ, ಪ್ರವಾದಿಯವರ ﷺ ಬಳಿ ವಾಪಸು ಬಂದು, ಅವರು ಬಹಳಷ್ಟು ಚಿಂತೆಯಲ್ಲಿ ಹಾಗೂ ಭಯದಲ್ಲಿ ಇದ್ದಾರೆ ಎಂದು ತಿಳಿಸಿದರು. ಇಮಾಮ್ ಮುಸ್ಲಿಂ ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು, ಮರುದಿನ ಪ್ರವಾದಿಯವರು ﷺ, ರಣರಂಗಕ್ಕೆ ಬಂದು ಕೆಲವೊಂದು ಸ್ಥಳಗಳನ್ನು ಸೂಚಿಸಿ, ಇಲ್ಲಿ ಇವರು ಸಾಯುವರು ಎಂದು ಒಂದೊಂದೇ ಖುರೈಷಿ ನಾಯಕರ ಹೆಸರು ಹೇಳಿದ್ದರು. ಇದರ ಬಗ್ಗೆ ಅನಸ್’ರವರು ಹೇಳುವುದು ಕಾಣಬಹುದು, ಪ್ರವಾದಿಯವರು ﷺ ಸೂಚಿಸಿದ ಪ್ರತಿಯೊಂದು ಸ್ಥಳದಲ್ಲೂ ಒಬ್ಬರೂ ಬಾಕಿಯಾಗದೆ ಸತ್ತು ಬಿದ್ದಿದ್ದರು ಎಂದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-231/365

ರಾತ್ರಿಯ ನಿರ್ಣಾಯಕ ರಣನೀತಿಯ ನಂತರ, ಮುಂಜಾನೆಯ ನಮಾಝ್ ಮುಗಿಸಿ ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ, ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೆಲವೊಂದು ಮಾತುಗಳನ್ನು ಆಡಲು ಆರಂಭಿಸಿದರು. “ಅಲ್ಲಾಹನಿಗಾಗಿದೆ ಸರ್ವಸ್ತುತಿ, ಖಂಡಿತವಾಗಿಯೂ ಅಲ್ಲಾಹನು ಮಹಾ ಕರುಣಾನಿಧಿ ಆಗಿರುವನು, ಅವನ ಮಹತ್ವವನ್ನು ಸ್ತುತಿಸುತ್ತಾ, ಅವನು ಅನುಮತಿಸಿದ ಕಾರ್ಯಗಳನ್ನು ಮಾಡಲು ನಿಮಗೆ ಪ್ರೋತ್ಸಾಹ ನೀಡುತ್ತೇನೆ. ಅವನು ನಿಷೇಧಿಸಿದ ವಿಷಯಗಳನ್ನು ನಾನು ಕಡಾ ಖಂಡಿತವಾಗಿ ವಿರೋಧಿಸುತ್ತೇನೆ. ಒಳಿತು ಮಾಡುವವರಿಗೆ ಅವನು ಭರವಸೆ ಕೊಟ್ಟ ಸ್ಥಾನಗಳನ್ನು ನೀಡುವನು, ಹಾಗಾಗಿ ಅವರು ಅವನನ್ನು ಸ್ಮರಿಸಿ ಅವನಿಗೆ ಕೃತಜ್ಞತೆಯನ್ನೂ ತಿಳಿಸಿರಿ, ನೀವು ಈಗ ತಲುಪಿರುವುದು ಸತ್ಯದ ಹಾದಿಯಲ್ಲಾಗಿದೆ.
ಅವನ ತೃಪ್ತಿಗಾಗಿ ಮಾಡುವ ಕಾರ್ಯಾಚರಣೆಗಳನ್ನು ಮಾತ್ರವಾಗಿದೆ ಅವನು ಇಷ್ಟಪಡುವುದು. ಬಿಕ್ಕಟ್ಟಿನ ಸಂದರ್ಭವನ್ನು ನೀವು ತಾಳ್ಮೆಯಿಂದ ಎದುರಿಸಿದರೆ, ಖಂಡಿತವಾಗಿಯೂ ಅಲ್ಲಾಹನು ಎಲ್ಲವನ್ನೂ ನಿವಾರಿಸಿ ಕೊಡುವನು. ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುವನು, ನಿಮಗೆ ಪರಲೋಕ ಮೋಕ್ಷವನ್ನು ನೀಡುವನು. ನಿಮ್ಮ ಜೊತೆಯಲ್ಲಿ ಶುಭವಾರ್ತೆ ಹಾಗೂ ಎಚ್ಚರಿಕೆ ನೀಡುವ ಪ್ರವಾದಿಯವರು ﷺ ಇರುವರು. ಅಲ್ಲಾಹನು ನಿಮ್ಮಲ್ಲಿ ಕೋಪಗೊಳ್ಳುದರ ಬಗ್ಗೆ ಎಚ್ಚರ ವಹಿಸಿರಿ. ಅಲ್ಲಾಹನೇ ಹೇಳುವುದು ಕಾಣಬಹುದು ನೀವು ನಿಮ್ಮ ಸ್ವಂತದವರಲ್ಲಿ ಕೋಪಗೊಳ್ಳುವುದಕ್ಕಿಂತ ಭಯಾನಕವಾಗಿದೆ ಅಲ್ಲಾಹನು ನಿಮ್ಮಲ್ಲಿ ಕೋಪಗೊಳ್ಳುವುದು ಎಂದು. ಅಲ್ಲಾಹನು ಅವನ ವೇದ ಗ್ರಂಥದಲ್ಲಿ, ತಿಳಿಸಿರುವುದು ಕೂಡ ಅದನ್ನೇ ಆಗಿದೆ. ನೀವು ಅಪಮಾನದ ನಂತರ ಗೌರವವನ್ನು ನಿರೀಕ್ಷಿಸಿರಿ, ಅಲ್ಲಾಹನ ಸಂತೃಪ್ತಿಯನ್ನು ಬಯಸಿರಿ ಎಂದು.

ನಿಮ್ಮ ಪ್ರಭು, ನಿಮಗೆ ಭರವಸೆ ನೀಡಿದ ಕರುಣೆ ಹಾಗೂ ಪಾಪಮೋಚನೆಗೆ ನೀವು ಅರ್ಹರಾಗಿದ್ದೀರಿ. ಅದಕ್ಕಾಗಿ ಪ್ರಯತ್ನ ಪಡಬೇಕು, ಖಂಡಿತವಾಗಿಯೂ ಅವನ ನೀಡಿರುವ ಭರವಸೆ ಸತ್ಯವಾಗಿದೆ. ಅವನು ಶಾಶ್ವತವಾಗಿ ಇರುವವನಾಗಿದ್ದಾನೆ, ಅವನಲ್ಲಿ ನಾವು ಸಹಾಯ ಕೇಳಿದಾಗ, ಅವನು ನಮ್ಮನ್ನು ಕಾಪಡಿದನು. ಅವನ ಮೇಲೆ ಎಲ್ಲಾ ಭಾರವನ್ನು ಕೊಟ್ಟೆವು, ಅವನ ಬಳಿಯಾಗಿದೆ ನಮ್ಮ ಕೊನೆಯ ಯಾತ್ರೆ, ಅಲ್ಲಾಹನು ನನಗೂ, ನಿಮಗೆಲ್ಲರಿಗೂ ಪಾಪ ಮೋಚನೆಯನ್ನು ನೀಡಲಿ.”
ಪ್ರವಾದಿಯವರ ﷺ ಮಾತುಗಳನ್ನು ಕೇಳಿ, ಸ್ವಹಾಬಿಗಳು ಇನ್ನಷ್ಟು ಉತ್ತೇಜಿತರಾದರು. ಸತ್ಯ ವಿಶ್ವಾಸಿಗಳ ಮಹತ್ವ, ಪ್ರಾಮುಖ್ಯತೆಯ ಬಗ್ಗೆ ಅವರಿಗೆ ಇನ್ನಷ್ಟು ಅರ್ಥ ಆಯಿತು.

ಖುರೈಷಿಗಳ ಡೇರೆಯ ಬಳಿ ಹೋಗಿ, ಚಲನವಲನಗಳನ್ನು ವೀಕ್ಷಿಸಿ ಬಂದ ಅಮ್ಮಾರ್ ◌ؓ ಹಾಗೂ ಮಸ್’ವೂದ್’ರ ಹೆಜ್ಜೆಗುರುತುಗಳನ್ನು ಖುರೈಷಿಗಳು ಗುರುತಿಸಿಕೊಂಡರು. ಅವರ ಗುಂಪಿನಲ್ಲಿದ್ದ ಹೆಜ್ಜೆಗುರುತುಗಳನ್ನು ಕಂಡುಹಿಡಿಯುವ ತಜ್ಞನಾಗಿದ್ದ ನಬಿಹ್ ಬಿನ್ ಅಲ್’ಹಜ್ಜಾಜ್ ಹೆಜ್ಜೆ ಗುರುತನ್ನು ಕಂಡು ಅವರಿಬ್ಬರನ್ನು ಗುರುತಿಸಿಕೊಂಡು, ಓಹೋ ಇದು ಸುಮಯ್ಯರ ಮಗನಾದ ಅಮ್ಮಾರ್’ನ ಹಾಗೂ ಉಮ್ಮು ಅಬ್’ದಿನ ಮಗನಾದ ಇಬ್’ನು ಮಸ್’ವೂದಿನ ಹೆಜ್ಜೆ ಗುರುತು ಅಲ್ವಾ.? ಅಯ್ಯೋ ಕಷ್ಟ.! ನಮ್ಮ ಜೊತೆಯಲ್ಲಿದ್ದ, ಹಾಗೂ ಮದೀನ ನಿವಾಸಿಯಾದ ಮೂರ್ಖರನ್ನು ಮುಹಮ್ಮದ್’ರು ﷺ ಕರೆದುಕೊಂಡು ಬಂದಿದ್ದಾರೆ. ಅವರ ಮಾತಿನ ಅರ್ಥ ಮುಹಾಜಿರ್ ಹಾಗೂ ಅನ್ಸಾರ್’ಗಳ ಬಗ್ಗೆ ಆಗಿತ್ತು. ನಂತರ ಅವರು “ಭಯದಿಂದ ನಮಗೆ ನಿದ್ರಿಸಲು ಸಾಧ್ಯವಾಗುತ್ತಿಲ್ಲ.
ಒಂದೋ ನಾವು ಸಾಯಬೇಕು ಬೇಕು, ಇಲ್ಲದಿದ್ದರೆ ನಮ್ಮನ್ನು ಸಾಯಿಸಬೇಕು” ಎಂದು ಹಾಡಿದರು.

ಪ್ರವಾದಿಯವರು ﷺ ತಮ್ಮ ಅನುಚರರನ್ನು ನಮಾಝಿಗೆ ನಿಲ್ಲುವ ಹಾಗೆ ಸಾಲಾಗಿ ನಿಲ್ಲಿಸಿದರು, ಅದರ ನಡುವೆ ಒಂದು ಕುತೂಹಲಕಾರಿ ಘಟನೆ ನಡೆಯಿತು. ಸಾಲಾಗಿ ನಿಲ್ಲಿಸುತ್ತಿದ್ದ ಸಂದರ್ಭದಲ್ಲಿ ಸವಾದ್ ಎಂಬ ಸ್ವಹಾಬಿಯು ಸಾಲು ತಪ್ಪಿ ನಿಂತಿರುವುದು ಕಂಡಾಗ, ಪ್ರವಾದಿಯವರು ﷺ ತಮ್ಮ ಕೈಯಲ್ಲಿದ್ದ ಕೋಲಿನಿಂದ ಸವಾದ್’ರ ಹೊಟ್ಟೆಗೆ ಮೆಲ್ಲನೆ ತಟ್ಟಿ ಸಾಲನ್ನು ಸರಿಪಡಿಸಿದರು. ಸವಾದ್ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಉದ್ದೇಶಿಸಿ, ಪ್ರವಾದಿಯವರನ್ನು ﷺ ಕರೆದು ನೀವು ನನ್ನ ಹೊಟ್ಟೆಗೆ ತಟ್ಟಿದ್ದು ನನಗೆ ತುಂಬಾ ನೋವಾಯಿತು ಪ್ರವಾದಿಯವರೇ ﷺ, ನಿಮ್ಮನ್ನು ಅಲ್ಲಾಹನು ಕಳುಹಿಸಿದ್ದು ಸತ್ಯ, ನೀತಿಯನ್ನು ಬೋಧಿಸುವ ಉದ್ದೇಶದಿಂದ ಅಲ್ಲವೇ.? ಹಾಗಾಗಿ ನನಗೆ ಇದಕ್ಕೆ ಪ್ರತೀಕಾರ ತೀರಿಸಲು ಅವಕಾಶ ಕೊಡಬೇಕು ಎಂದು ಕೇಳಿದಾಗ, ಪ್ರವಾದಿಯವರು ﷺ ಅದಕ್ಕೆ ಸಮ್ಮತಿಸಿ ತಮ್ಮ ಕೈಯಲ್ಲಿದ್ದ ಕೋಲನ್ನು ಸವಾದ್’ರ ಕೈಗೆ ಕೊಟ್ಟರು. ತಮ್ಮ ಹೊಟ್ಟೆಯ ಮೇಲಿರುವ ಬಟ್ಟೆಯನ್ನು ಸರಿಸಿರಿ ಎಂದು ಸವಾದ್ ಹೇಳಿದಾಗ, ಪ್ರವಾದಿಯವರು ﷺ ತಮ್ಮ ಹೊಟ್ಟೆಯ ಮೇಲಿನ ಬಟ್ಟೆಯನ್ನು ಕೂಡ ಸರಿಸಿದರು. ಈ ದೃಶ್ಯವನ್ನು ಕಂಡು ಉಳಿದವರು ಎಲ್ಲರೂ ಆಶ್ಚರ್ಯಚಕಿತರಾಗಿ ನೋಡತೊಡಗಿದರು, ಇದೇನು ಈ ಸವಾದ್ ಮಾಡುತ್ತಿರುವುದು ಎಂದು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-232/365

ಸವಾದ್’ಗೆ ಬಹಳಷ್ಟು ಸಂತೋಷವಾಯಿತು. ಬಹಳ ಪ್ರೀತಿಯಿಂದ ತಮ್ಮ ಪ್ರೀತಿಯ ನಾಯಕನನ್ನ ಗಟ್ಟಿಯಾಗಿ ತಬ್ಬಿಕೊಂಡು ಭಾವುಕರಾಗಿ ನಿಂತರು. ಇದನ್ನು ಕಂಡು ಪ್ರವಾದಿಯವರು ﷺ ಇದೇನು ಮಾಡುತ್ತಿದ್ದೀಯ ಸವಾದ್ ◌ؓ ಎಂದು ಕೇಳಿದರು. ಅದಕ್ಕೆ ಸವಾದ್ ◌ؓ, ಪ್ರೀತಿಯ ಪ್ರವಾದಿಯವರೇ ﷺ ತಾವೇ ಹೇಳಿದ ಹಾಗೆ ಯುದ್ಧದ ಬಾಗಿಲಿನಲ್ಲಿ ನಿಂತಿದ್ದೇವೆ. ನನ್ನ ಕೊನೆಯ ಅಪ್ಪುಗೆ ತಮ್ಮ ಶರೀರವನ್ನು ಗಟ್ಟಿಯಾಗಿ ತಬ್ಬಿಕೊಂಡು ಆಗಲಿ ಎಂದು ಈ ರೀತಿ ಮಾಡಿದೆನು. ಅದಕ್ಕೆ ಪ್ರವಾದಿಯವರು ﷺ ಸವಾದ್’ಗೆ ಆಶೀರ್ವಾದಿಸಿ, ಪ್ರಾರ್ಥನೆ ಮಾಡಿದರು.

ಇದೇ ರೀತಿಯ ಇನ್ನೊಂದು ಘಟನೆಯೂ ಕೂಡ ನಮಗೆ ತಿಳಿಯಲಿದೆ. ಬಹಳಷ್ಟು ತಮಾಷೆ ಮಾಡಿ ಎಲ್ಲರನ್ನು ನಗಿಸುವ ಸ್ವಹಾಬಿಯೊಬ್ಬರು ಪ್ರವಾದಿಯವರ ﷺ ತಂಡದಲ್ಲಿ ಇದ್ದರು. ಹೀಗೆ ಒಂದು ದಿನ ನಗಿಸುತ್ತಿದ್ದಾಗ ಪ್ರವಾದಿಯವರು ﷺ ತಮ್ಮ ಕೈಯಲ್ಲಿದ್ದ, ಸಣ್ಣ ಕೋಲಿನಿಂದ ಅವರ ಸೊಂಟಕ್ಕೆ ಸಣ್ಣದಾಗಿ ಚುಚ್ಚಿದರು. ಅದಕ್ಕೆ ಆ ಸ್ವಹಾಬಿಯವರು ನನಗೆ ನೋವಾಯಿತು, ನನಗೆ ಇದಕ್ಕೆ ಪ್ರತೀಕಾರ ಬೇಕು ಎಂದು ಹಠ ಹಿಡಿದಾಗ, ಪ್ರವಾದಿಯವರು ﷺ ಸಮ್ಮತಿ ನೀಡಿದರು. ಅದಕ್ಕೆ ಆ ಸ್ವಹಾಬಿಯು, ನೀವು ನನ್ನ ಅಂಗಿಯಿಲ್ಲದ ಸೊಂಟಕ್ಕೆ ಚುಚ್ಚಿದ್ದು, ನೀವು ಅಂಗಿ ಧರಿಸಿದ್ದೀರಿ ಎಂದು ಹೇಳಿದಾಗ, ಪ್ರವಾದಿಯವರು ﷺ ತಮ್ಮ ಅಂಗಿಯನ್ನು ಎತ್ತಿ, ಪ್ರತೀಕಾರ ತೀರಿಸಲು ಅವಕಾಶ ಮಾಡಿಕೊಟ್ಟರು. ಸಿಕ್ಕಿದ ಅವಕಾಶವನ್ನು ಆ ಸ್ವಹಾಬಿಯು ಓಡಿ ಬಂದು, ಪ್ರವಾದಿಯವರ ﷺ ಪುಣ್ಯ ಶರೀರರವನ್ನು ಗಟ್ಟಿಯಾಗಿ ತಬ್ಬಿಕೊಂಡು, ಪ್ರೀತಿಯಿಂದ ಮನಸೋ ಇಚ್ಛೆ ಚುಂಬಿಸಿದರು. ಇಮಾಮ್ ಅಬೂದಾವೂದ್’ರು ಈ ಘಟನೆಯನ್ನು ಉಲ್ಲೇಖಿಸಿದ್ದು ಕಾಣಬಹುದು.

ನ್ಯಾಯ, ನೀತಿಯ ಪ್ರತಿರೂಪಕ್ಕೆ ಸಾಕ್ಷಿಯಾದ ಘಟನೆಗಳನ್ನಾಗಿದೆ ನಾವು ತಿಳಿದದ್ದು. ಎಷ್ಟೇ ಸಣ್ಣ ವ್ಯಕ್ತಿಯಾದರೂ ಸರಿ, ಪ್ರವಾದಿಯವರ ﷺ ಮುಂದೆ ಎಲ್ಲರೂ ಒಂದೇ, ಅವರ ಹಕ್ಕನ್ನು ಕೇಳಿ ಪಡೆಯುವ ಅವಕಾಶ ಇತ್ತು ಎಂದು ತೋರಿಸುವ ಘಟನೆಯಾಗಿದೆ ಇದರಿಂದ ನಮಗೆ ತಿಳಿಯುವುದು. ತಮ್ಮ ಅನುಚರರೊಂದಿಗೆ ತೋರಿಸುತ್ತಿದ್ದ ಪ್ರೀತಿಯ ಆಳವಾಗಿತ್ತು ನಮಗೆ ಇಲ್ಲಿ ಕಾಣಲು ಸಾಧ್ಯವಾಗುವುದು. ಅದೇ ರೀತಿ ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಪ್ರವಾದಿಯವರ ﷺ ಮೇಲಿನ ಪ್ರೀತಿಯನ್ನು ತೋರಿಸಲು ಅನುಚರರು ಹಿಂದೇಟು ಹಾಕುತ್ತಿರಲಿಲ್ಲ ಎಂದು ಕೂಡ ಇದರಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಪ್ರವಾದಿಯವರ ﷺ ಪವಿತ್ರ ಶರೀರದೊಂದಿಗೆ ತಮ್ಮ ಶರೀರದ ಸಣ್ಣ ಸ್ಪರ್ಶವಾದರೂ ನರಕಾಗ್ನಿಯಿಂದ ರಕ್ಷೆ ಹೊಂದಲು ಅದು ಸಾಕು ಎಂಬ ಆಳವಾದ ವಿಶ್ವಾಸವಾಗಿತ್ತು ಅವರಲ್ಲಿ ಇದ್ದದ್ದು. ರಣರಂಗಕ್ಕೆ ಬಂದದ್ದೂ ಕೂಡ ಪ್ರವಾದಿಯವರಿಗಾಗಿ ﷺ ತಮ್ಮ ಜೀವನವನ್ನೇ ಸಮರ್ಪಣೆ ಮಾಡುವ ಉದ್ದೇಶದಿಂದಲೇ ಆಗಿತ್ತು.

ಬದ್’ರ್ ದಿನ ಮುಂಜಾನೆ ಪ್ರವಾದಿಯವರು ﷺ ತಮ್ಮ ಅನುಚರರ ಬಳಿ ಹೋಗಿ, ಅವರಿಗೆ ಯುದ್ದೋತ್ಸಾಹ ಮೂಡಿಸಲು ಇನ್ನಷ್ಟು ಉತ್ತೇಜನ ನೀಡಿದರು. ಜೊತೆಯಲ್ಲಿ ಹೋರಾಟದಲ್ಲಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸುತ್ತಾ, ಗುರಿ ಇಟ್ಟ ವ್ಯಕ್ತಿಗೆ ಸ್ಪಷ್ಟವಾಗಿ ಆ ಬಾಣ ತಾಗುತ್ತದೆ ಎಂಬ ವಿಶ್ವಾಸವಿದ್ದರೆ ಮಾತ್ರ ಬಾಣ ಬಿಡಬೇಕು. ಶತ್ರುಗಳು ನಿಮ್ಮನ್ನು ಸುತ್ತಿವರಿದಾಗ ಮಾತ್ರವೇ ನೀವು ಓರೆಯಿಂದ ಖಡ್ಗವನ್ನು ಹೊರತೆಗಿಯಬೇಕು ಎಂದು ಹೇಳಿದರು.

ಗಿಫಾರ್ ಜನಾಂಗದ ಜನರು ಈ ನಿರ್ದೇಶನವನ್ನು ಕೇಳಿ ಆಶ್ಚರ್ಯಚಕಿತರಾದರು. ವಿಶೇಷವಾದ ನಿಯಮಗಳೇನು ಇಲ್ಲದೆ ಬೇಕಾದ ರೀತಿಯಲ್ಲಿ ಯುದ್ಧ ಮಾಡುತ್ತಿದ್ದ ಜನರಿಗೆ ಇದು ಹೊಸದಾಗಿ ಕಂಡಿತು. ಎಲ್ಲರನ್ನು ಸಾಲಾಗಿ ನಿಲ್ಲಿಸಿ, ಕೇವಲ ಗುರಿಯ ಕಡೆಗೆ ಮಾತ್ರ ಇರುವ ಪವಿತ್ರ ಯುದ್ಧದ ಬಗ್ಗೆ ಅವರಿಗೆ ಗೊತ್ತೇ ಇರಲಿಲ್ಲ. ಬೇಕಾದ ಹಾಗೆ ಕತ್ತರಿಸಿ, ಅವರು ಸೋತರೆ ಅವರ ಸಂಪತ್ತುಗಳನ್ನು ಲೂಟಿ ಮಾಡುವುದು, ಇದು ಮಾತ್ರವಾಗಿತ್ತು ಅವರಿಗೆ ತಿಳಿದಿದ್ದದ್ದು. ಅದನ್ನೇ ಆಗಿತ್ತು ಇಲ್ಲಿಯೂ ಅವರು ಆಗ್ರಹಿಸಿ ಬಂದದ್ದು ಕೂಡ, ಆದರೆ ಇಲ್ಲಿಯ ಚಿತ್ರಣವೇ ಬೇರೆಯಾಗಿತ್ತು.

ತಮ್ಮ ಅನುಚರರನ್ನು ಉದ್ದೇಶಿಸಿ, ಪ್ರವಾದಿಯವರು ﷺ ಪುನಃ ಮಾತು ಮುಂದುವರಿಸುತ್ತಾ, “ಮುಹಮ್ಮದ್ ಪ್ರವಾದಿಯವರ ﷺ ಆತ್ಮ ಯಾರ ಕೈಯಲ್ಲಿದಿಯೋ, ಅವನ ಮೇಲಾಣೆ (ಅಲ್ಲಾಹನಾಣೆ) ತಾಳ್ಮೆಯಿಂದ, ಹೇಡಿಯಂತೆ ಬೆನ್ನು ತಿರುಗಿಸಿ ಓಡದೆ, ಶತ್ರುವಿನೊಂದಿಗೆ ಹೋರಾಡಿ ಸಾಯಲ್ಪಟ್ಟರೆ, ಅವರು ಸ್ವರ್ಗ ಪ್ರವೇಶಿಸುವುದರಲ್ಲಿ ಯಾವುದೇ ಸಂಶಯವಿಲ್ಲ.” ಎಂದು ಹೇಳಿದರು.

ಅಷ್ಟೊತ್ತಿಗೆ, ಸಂಅತ್ ಬಿನ್ ಅಲ್ ಅಸ್’ವದ್ ಹಾಗೂ ಅವರ ಮಗ ಸೇರಿ ಶತ್ರು ಪಕ್ಷದಿಂದ ಮುತ್ತಿಗೆ ಹಾಕಲು ಮುಂದೆ ಬಂದರು. ಅವರಿಬ್ಬರು ಸುರಕ್ಷಿತವಾದ ಸ್ಥಳವನ್ನು ಹುಡುಕುತ್ತಾ ಬರುತ್ತಿದ್ದರು, ಅಷ್ಟರಲ್ಲಿ ಪ್ರವಾದಿಯವರು ﷺ ಪುನಃ ಪ್ರಾರ್ಥನೆ ಮಾಡಲು ಆರಂಭಿಸಿದರು. ಆ ಪ್ರಾರ್ಥನೆಯ ಬಗ್ಗೆ ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-233/365

“ಯಾ ಅಲ್ಲಾಹ್, ಖುರೈಷಿಗಳು ಅವರ ಅಹಂಕಾರದ ಕಾರಣ ಮುಂದೆ ಬರುತ್ತಿದ್ದಾರೆ, ಅವರು ನಿನ್ನ ಆಜ್ಞೆಯನ್ನು ಧಿಕ್ಕರಿಸಿ ನಿನ್ನೊಂದಿಗೆ ವಿರೋಧ ಕಟ್ಟಿಕೊಂಡಿದ್ದಾರೆ. ಅವರು ನಿನ್ನ ಪ್ರವಾದಿಯವರ ﷺ ಮೇಲೆ ನಂಬಿಕೆ ಇಡದೆ ಅಪಮಾನಿಸಿದ್ದಾರೆ. ಹಾಗಾಗಿ, ನೀನು ಭರವಸೆ ನೀಡಿದ ಹಾಗೆ ಗೆಲುವು ಬಹಳ ವೇಗವಾಗಿ ಸಿಗುವ ಹಾಗೆ ಮಾಡು ಪ್ರಭು. ನೀನು ನನಗೆ ಗ್ರಂಥವನ್ನು ಅವತರಿಸಿ ಕೊಟ್ಟು, ಧೈರ್ಯದಿಂದ ಎದುರಿಸಲು ಹೇಳಿದೆ, ಎರಡರಲ್ಲಿ ಒಂದು ಗುಂಪನ್ನು ನೀಡುವುದಾಗಿ ಭರವಸೆಯನ್ನೂ ಕೊಟ್ಟೆ, ಅದರಲ್ಲಿ ಒಂದು ನಮ್ಮನ್ನು ದಾಟಿ ಹೋಯಿತು, ಖಂಡಿತವಾಗಿಯೂ ನೀನು ಕೊಟ್ಟ ಮಾತನ್ನು ಮುರಿಯುವವನು ಅಲ್ಲ, ಹಾಗಾಗಿ ನೀನು ಅವರನ್ನು ಬೆಳಿಗ್ಗೆಯೇ ಸೋಲಿಸು ಪ್ರಭು. ಈ ಸಮುದಾಯದ ಫರೋವನಾದ ಅಬೂಜಹಲನಿಗೊಂದು ಪಾಠ ಕಲಿಸಬೇಕು, ಸಂಅತ್ ಬಿನ್ ಅಸ್’ವದ್’ನಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡಬಾರದು, ಅಬೂ ಸಂಅನ ಕಣ್ಣಿನ ದೃಷ್ಟಿಯನ್ನು ಕಿತ್ತು ಬಿಡು, ಸುಹೈಲನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು ಪ್ರಭು” ಎಂದು ಪ್ರವಾದಿಯವರು ಪ್ರಾರ್ಥಿಸಿದರು.

ಧ್ವಜವನ್ನು ಮಿಸ್’ಅಬ್ ಬಿನ್ ಉಮೈರ್ ಪಡೆದುಕೊಂಡು, ಪ್ರವಾದಿಯವರು ﷺ ಸೂಚಿಸಿದ ಸ್ಥಳಕ್ಕೆ ಹೋಗಿ ನಿಂತರು. ಪ್ರವಾದಿಯವರು ﷺ ತಮ್ಮ ಅನುಚರರನ್ನು, ದೂರದಿಂದಲೇ ನೋಡುತ್ತಿದ್ದರು. ಮುಸ್ಲಿಂ ಸೈನ್ಯವು ಪಶ್ಚಿಮ ಭಾಗಕ್ಕೆ ಬೆನ್ನು ತಿರುಗಿಸಿ ನಿಂತಿತ್ತು, ಖುರೈಷಿಗಳು ನೇರ ವಿರುದ್ಧ ಅಂದರೆ ಪೂರ್ವ ದಿಕ್ಕಿಗೆ ಬೆನ್ನು ಮಾಡಿ ನಿಂತಿದ್ದರು. ಅಷ್ಟೊತ್ತಿಗೆ ಒಬ್ಬರು ಪ್ರವಾದಿಯವರ ಬಳಿ ಬಂದು, ಅಲ್ಲಾಹನ ಆಜ್ಞೆಯ ಪ್ರಕಾರ ಇಲ್ಲಿ ನಿಂತಿದ್ದರೆ ಪರವಾಗಿಲ್ಲ, ಇಲ್ಲದಿದ್ದರೆ ಕಣಿವೆಯ ಎತ್ತರದ ಭಾಗದಲ್ಲಿ ನಿಂತಿದ್ದರೆ ಬಹಳ ಒಳ್ಳೆದಿತ್ತು, ಆ ಎತ್ತರದ ಭಾಗದಿಂದ ಒಳ್ಳೆಯ ಸುವಾಸನೆ ಬರುತ್ತಿದೆ, ತಮಗೆ ಸಹಾಯ ಬಂದು ತಲುಪಿದ ಭಾಸವಾಗುತ್ತದೆ ಎಂದು ಹೇಳಿದಾಗ, ಪ್ರವಾದಿಯವರು ﷺ ಈಗ ಇಲ್ಲಿ ನಿಂತಾಗಿದೆ, ಧ್ವಜವು ಕೂಡ ಹಸ್ತಾಂತರ ಮಾಡಿ ಆಗಿದೆ, ಇನ್ನು ಇಲ್ಲಿಂದಲೇ ಮುಂದುವರಿಸೋಣ ಎಂದು ಹೇಳಿದರು. ನಂತರ ಡೇರೆಯ ಒಳಗೆ ಬಂದು ಪುನಃ ಪ್ರಾರ್ಥನೆಯಲ್ಲಿ ನಿರತರಾದರು.
ಇಲ್ಲಿ ನಮಗೆ ಪ್ರವಾದಿಯವರ ﷺ ನಾಯಕತ್ವದ ಗುಣವನ್ನು ಕಾಣಲು ಸಾಧ್ಯವಿದೆ, ತಮ್ಮ ಅನುಯಾಯಿಗಳ ಮಾತುಗಳನ್ನು ಗಮನವಿಟ್ಟು ಕೇಳುವುದು ಕಾಣಬಹುದು, ಪರಿಣಾಮಕಾರಿಯಾದ ಅಭಿಪ್ರಾಯಗಳು ಆಗಿದ್ದಲ್ಲಿ ತಕ್ಷಣವೇ ಅದನ್ನು ಪಾಲಿಸುತ್ತಾರೆ, ಅದಾಗಿತ್ತು ಜಲಾಶಯದ ಬಳಿಯ ಘಟನೆ ನಮಗೆ ತಿಳಿಸಿ ಕೊಡುವುದು. ಅದರೊಟ್ಟಿಗೆ ಸ್ಪಷ್ಟವಾದ ದೂರದೃಷ್ಟಿಯಿಂದ ಆಗಿತ್ತು ತೀರ್ಮಾಣಗಳನ್ನು ಕೈಗೊಳ್ಳುವುದು, ಅದಾಗಿದೆ ನಮಗೆ ಈ ಘಟನೆಯಿಂದ ತಿಳಿಯುವುದು.

ಮುಸ್ಲಿಮರ ಮುಂದೆ ಬಂದು ನಿಂತಾಗ ಅಬೂಜಹಲ್ ಕೂಡ ಪ್ರಾರ್ಥಿಸಿದ್ದರು. “ಓ ದೇವರೇ, ನಮ್ಮ ನಡುವೆ ನಮಗೆ ಪರಿಚಯವೇ ಇಲ್ಲದ ಧರ್ಮವನ್ನು ತಂದು, ನಮ್ಮ ಕುಟುಂಬ ಸಂಬಂಧವನ್ನು ಮುರಿದವರು ಯಾರೋ.? ಅವರನ್ನು ನೀನು ಈ ಮುಂಜಾನೆಯೇ ಇಲ್ಲವಾಗಿಸಬೇಕು.” ಈ ಸಂದರ್ಭದಲ್ಲಾಗಿತ್ತು, ಪವಿತ್ರ ಖುರ್’ಆನಿನ ಎಂಟನೇ ಅಧ್ಯಾಯ ಅಲ್ ಅಂಫಾಲ್’ನ ಹತ್ತೊಂಬತ್ತನೆ ಸೂಕ್ತವು ಅವತರಿಸಿದ್ದು, ಅದರ ಸಾರವು ಈ ರೀತಿಯಾಗಿದೆ. “ಸತ್ಯ ನಿಷೇಧಿಗಳೇ, ನೀವು ಬಯಸಿದ್ದು ಗೆಲುವು ಆಗಿದ್ದರೆ.? ಆ ಗೆಲವು ಈಗಾಗಲೇ ನಿಮಗೆ ಸಿಕ್ಕಾಗಿದೆ, ನೀವು ಬಿಟ್ಟು ಹೋಗುವುದೇ ನಿಮಗೆ ಉತ್ತಮ, ನೀವು ಪುನಃ ತಿರುಗಿ ಬರುವುದಾದರೆ ನಾವು ಕೂಡ ತಿರುಗಿ ಬರುತ್ತೇವೆ. ನಿಮ್ಮ ಗುಂಪುನಲ್ಲಿ ಎಷ್ಟೇ ಜನಬಲ ಇದ್ದರೂ ನಿಮಗೆ ಅದು ಪ್ರಯೋಜನಕ್ಕೆ ಬರುವುದಿಲ್ಲ, ಅಲ್ಲಾಹನು ಇರುವುದು ಸತ್ಯವಿಶ್ವಾಸಿಗಳ ಜೊತೆಯಲ್ಲಿ ಆಗಿದೆ.”

ಖುರೈಷಿಗಳ ಒಂದು ಗುಂಪು, ಮುಸ್ಲಿಮರು ಕಟ್ಟಿದ್ದ ಜಲಾಶಯದ ಬಳಿ ನೀರು ತೆಗಿಯಲು ಬಂದಾಗ, ಸ್ವಹಾಬಿಗಳಲ್ಲಿ ಕೆಲವರು ಅವರನ್ನು ತಡೆಯಲು ಮುಂದಾದರು. ಅದನ್ನು ಕಂಡು ಪ್ರವಾದಿಯವರು ﷺ ಅವರನ್ನು ಬಿಡಲು ಸೂಚನೆ ನೀಡಿದರು. ಆ ನೀರು ತೆಗಿಯಲು ಬಂದಿದ್ದ ಗುಂಪಿನಲ್ಲಿ ಒಬ್ಬರನ್ನು ಬಿಟ್ಟು ಬಾಕಿಯಿರವರೆಲ್ಲರೂ ರಣರಂಗದಲ್ಲಿ ಸಾವನ್ನಪ್ಪಿದ್ದರು. ಬಾಕಿ ಉಳಿದ ಹಕೀಮ್ ಬಿನ್ ಹಿಸಾಮ್ ಎಂಬ ವ್ಯಕ್ತಿಯು ನಂತರದ ದಿನಗಳಲ್ಲಿ ಇಸ್ಲಾಮ್ ಸ್ವೀಕರಿಸಿ ಒಳ್ಳೆಯ ರೀತಿಯಲ್ಲಿ ಜೀವಿಸಲು ಆರಂಭಿಸಿದರು. “ಅಂದು ಯುದ್ಧದಲ್ಲಿ ಸಾಯದೇ ಬದುಕುಳಿದ್ದದ್ದು ಅಲ್ಲಾಹನು ನನ್ನ ಮೇಲೆ ತೋರಿದ ಕೃಪೆ ಎಂದು” ಅವರು ಆಗಾಗ ಹೇಳುತ್ತಲೇ ಇದ್ದರು.

ಮುಂದಿನ ಭಾಗದಲ್ಲಿ ರಣರಂಗದ ಬಗ್ಗೆ ಚರ್ಚಿಸೋಣ…

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-234/365

ಪ್ರವಾದಿಯವರು ﷺ ರಣರಂಗದ ಮಹತ್ವವನ್ನು ತಿಳಿಸಿ, ಸ್ವರ್ಗ ನೀಡುವುದಾಗಿ ಭರವಸೆಯನ್ನೂ ನೀಡಿದರು. ಅಲ್ಲೇ ಪಕ್ಕದಲ್ಲಿ ಖರ್ಜುರವನ್ನು ತಿನ್ನುತ್ತಿದ್ದ ಉಮೈರ್ ಬಿನುಲ್ ಹುಮಾಮ್’ರು ಈ ಮಾತನ್ನು ಕೇಳಿ ರಣರಂಗದಲ್ಲಿ ಹೋರಾಡಿ ಸ್ವರ್ಗ ಸೇರಬೇಕಾದ ನಾನು, ಈ ಖರ್ಜುರವನ್ನು ತಿನ್ನುತ್ತಾ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಾದರೂ ಏನಿದೆ.? ಎಂದು ಅಲ್ಲಿಂದ ನೇರವಾಗಿ ಅವರು ರಣರಂಗಕ್ಕೆ ಇಳಿದರು. ಉಗ್ರವಾದ ಹೋರಾಟದ ನಂತರ ಅವರು ಅದೇ ಯುದ್ಧದಲ್ಲಿ ವೀರ ಮರಣ ಹೊಂದಿದರು.

ಅಖನ್’ಖಲ್ ಬೆಟ್ಟದ ಹಿಂದಿನಿಂದ ವಿರೋಧಿಗಳು ಕಣಿವೆಗೆ ಬಂದು ತಲುಪಿದರು. ಹಿಂದಿನ ರಾತ್ರಿ ಭಯದಿಂದ ಯಾರಿಗೂ ನಿದ್ದೆ ಬಂದಿರಲಿಲ್ಲ, ಆಗಲೂ ಅವರು ಯುದ್ಧ ಬೇಕೋ, ಬೇಡವೋ ಎಂಬ ಗೊಂದಲದಲ್ಲೇ ಇದ್ದರು. ಕೊನೆಗೆ ಹೇಗೋ ಮನಸ್ಸಿಲ್ಲದ ಮನಸ್ಸಿನಲ್ಲಿ ರಣರಂಗಕ್ಕೆ ಬಂದು ತಲುಪಿದರು.

ಇದೇ ಸಂದರ್ಭದಲ್ಲಿ ಮುಸ್ಲಿಮರ ಕಣ್ಣಿಗೆ ಶತ್ರು ಪಕ್ಷದ ಸೈನ್ಯವು ಕೆಲವೇ ಕೆಲವು ಜನರು ಇರುವ ಹಾಗೆ ಕಾಣುತ್ತಿದ್ದವು ಅಬ್ದುಲ್ಲಾಹಿ ಬಿನ್ ಮಸ್’ವೂದ್ ◌ؓ ಹೇಳುವುದು ಕಾಣಬಹುದು, ಬದ್’ರ್ ದಿನದಲ್ಲಿ ನಮಗೆ ಅವರನ್ನು ಸಣ್ಣ ಸೈನ್ಯದ ತುಕಡಿಯಂತೆ ಕಾಣುತ್ತಿತ್ತು. ನಾನೇ ಒಬ್ಬರಲ್ಲಿ , “ಅವರ ಸೈನ್ಯದಲ್ಲಿ ಅಂದಾಜು ಎಪ್ಪತ್ತು ಜನರು ಇರಬಹುದು ಅಲ್ವಾ” ಎಂದು ಕೇಳಿದಾಗ, ಅವರು ಬಹುಶಃ ನೂರು ಜನ ಇರಬಹುದೇನೋ.? ಎಂದು ಹೇಳಿದರು. ಈ ವಿಷಯದ ಬಗ್ಗೆ ಪವಿತ್ರ ಖುರ್’ಆನಿನ ಎಂಟನೇ ಅಧ್ಯಾಯ ಅಲ್ ಅಂಫಾಲ್’ನ ನಲ್ವತ್ಮೂರನೇ ಹಾಗೂ ನಲ್ವತ್ನಾಲ್ಕನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು, “ಅವರನ್ನು (ಶತ್ರುಗಳನ್ನು) ಅಲ್ಲಾಹನು ನಿಮಗೆ ಕನಸಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ತೋರಿಸಿದ ದೃಶ್ಯವನ್ನು ನೀವು ಸ್ಮರಿಸಿರಿ, ನಿಮಗೆ ಅವರನ್ನು ಅಧಿಕವಾಗಿ ತೋರಿಸಿ ಕೊಡುತ್ತಿದ್ದರೆ, ನಿಮ್ಮ ಧೈರ್ಯ ಕಮ್ಮಿ ಆಗುತ್ತಿತ್ತು. ಈ ಕಾರಣದಿಂದ ನಿಮ್ಮಲ್ಲಿ ಭಿನ್ನಾಭಿಪ್ರಾಯಗಳೂ ಬರುತ್ತಿತ್ತು, ಆದರೆ ಅಲ್ಲಾಹನು ನಿಮ್ಮನ್ನು ರಕ್ಷಿಸಿದನು, ಖಂಡಿತವಾಗಿಯೂ ಅಲ್ಲಾಹನು ಹೃದಯದೊಳಗೆ ಇರುವುದನ್ನು ಬಲ್ಲವನಾಗಿರುವನು. ನೀವು ಅವರನ್ನು ನೋಡಿದ ಸಂದರ್ಭದಲ್ಲಿ, ನಿಮ್ಮ ದೃಷ್ಟಿಯಲ್ಲಿ ಅವರನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಿದ ಹಾಗೆ, ಅವರ ದೃಷ್ಟಿಯಲ್ಲಿಯೂ ನಿಮ್ಮ ಸಂಖ್ಯೆಯನ್ನು ಕಡಿಮೆ ಇರುವ ಹಾಗೆ ತೋರಿಸಿದ ದೃಶ್ಯವನ್ನು ಸ್ಮರಿಸಿರಿ, ಸಂಭವಿಸಬೇಕಾದ ಒಂದು ಕಾರ್ಯವನ್ನು ನಿರ್ವಹಿಸುವ ಉದ್ದೇಶದಿಂದ ಆಗಿತ್ತು ಅದು, ಎಲ್ಲಾ ಕಾರ್ಯಗಳು ಮರಳುವುದು ಅಲ್ಲಾಹನ ಬಳಿಯಾಗಿದೆ”

ಇಂತಹ ಒಂದು ಉಗ್ರ ಹೋರಾಟದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ, ಪವಿತ್ರ ಖುರ್’ಆನಿನ ಆಲು ಇಮ್ರಾನ್ ಅಧ್ಯಾಯದ ಹದಿಮೂರನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು, “ಬದ್’ರಿನಲ್ಲಿ ಎದುರಿಸಿದ ಎರಡು ವಿಭಾಗದಲ್ಲಿ ನಿಮಗೊಂದು ಪಾಠವಿದೆ, ಒಂದು ವಿಭಾಗ ಅಲ್ಲಾಹನ ಮಾರ್ಗದಲ್ಲಿ ಹೊರಾಡಿತು, ಇನ್ನೊಂದು ವಿಭಾಗವು ಸತ್ಯನಿಷೇಧಿಗಳಾಗಿತ್ತು. ಅವರ ದೃಷ್ಟಿಯಲ್ಲಿ, ಸತ್ಯವಿಶ್ವಾಸಿಗಳು ತಮಗಿಂತ ಎರಡು ಪಟ್ಟು ಅಧಿಕವಾಗಿ ಕಾಣುತ್ತಿದ್ದರು, ಅಲ್ಲಾಹನು ತಾನಿಚ್ಛಿಸಿದವರಿಗೆ ತನ್ನ ಸಹಾಯ, ಬೆಂಬಲ ನೀಡುವನು, ಖಂಡಿತವಾಗಿಯೂ ಕಣ್ಣಿದ್ದವರಿಗೆ ಇದರಲ್ಲಿ ಮಹತ್ತರವಾದ ಪಾಠವಿದೆ.”

ಈ ಸೂಕ್ತವು ತಿಳಿಸಿಕೊಡುವ ಕುತೂಹಲವಾದ ಸಂಗತಿ ಇದೆ, ಯುದ್ಧದ ಆರಂಭಕ್ಕೂ ಮುನ್ನ ಎರಡು ವಿಭಾಗದ ಜನರಿಗೂ ಪರಸ್ಪರ ಸೈನ್ಯದಲ್ಲಿ ಕಡಿಮೆ ಜನರು ಇರುವಂತೆ ಕಾಣುತ್ತಿತ್ತು, ಹಾಗಾಗಿ ಎರಡು ವಿಭಾಗವೂ ಆತ್ಮವಿಶ್ವಾಸದಿಂದ ಹೋರಾಡಲು ತಯಾರಾಗಿ ನಿಂತರು. ಯುದ್ಧ ಆರಂಭವಾದ ನಂತರ ಅಲ್ಲಿದ್ದ ನಿಜಸ್ಥಿತಿಯು ಹೊರಗೆ ಬಿದ್ದಿತ್ತು.

ರಣರಂಗದಲ್ಲಿ, ಸೈನ್ಯಗಳು ಪರಸ್ಪರ ಎದುರಾದಾಗ ಪ್ರವಾದಿಯವರು ﷺ ಪುನಃ ಪ್ರಾರ್ಥಿಸಲು ಆರಂಭಿಸಿದರು. “ಅಲ್ಲಾಹನೇ, ನೀನು ನನಗೆ ನೀಡಿದ ಭರವಸೆಯನ್ನು ಮರೆಯದಿರು, ನಿನ್ನ ಸಹಾಯವನ್ನು ನೀನು ಮರೆಯದಿರು,” ಎಂದು ವಿನಮ್ರವಾಗಿ ತಮ್ಮ ಎರಡು ಕೈಗಳನ್ನು ಎತ್ತಿ ಪ್ರಾರ್ಥಿಸಿವುದನ್ನು ಕಂಡು ಅಬೂಬಕ್ಕರ್’ರಿಗೆ ಬಹಳಷ್ಟು ಬೇಸರವಾಯಿತು. ಸಿದ್ದೀಕ್’ರು ಪ್ರವಾದಿಯವರ ﷺ ಬಳಿ, ಅವರ ಅಸ್ತವ್ಯಸ್ತಗೊಂಡ ಬಟ್ಟೆಯನ್ನು ಸರಿಪಡಿಸುತ್ತಾ, ಪ್ರವಾದಿಯವರನ್ನು ﷺ ಸಮಾಧಾನ ಪಡಿಸಲು ಮುಂದಾದರು. “ಪ್ರವಾದಿಯವರೇ ﷺ, ನಿಮ್ಮ ಪ್ರಾರ್ಥನೆಗೆ ಖಂಡಿತ ಉತ್ತರ ಸಿಗಲಿದೆ, ಅಲ್ಲಾಹನು ಖಂಡಿತವಾಗಿಯೂ ಏನಾದರೂ ಸಹಾಯ ನೀಡುವನು,” ಎಂದು ಹೇಳಿದರು. ಈ ಸಂದರ್ಭದಲ್ಲಾಗಿತ್ತು, ಪವಿತ್ರ ಖುರ್’ಆನಿನ ಎಂಟನೇ ಅಧ್ಯಾಯದ ಒಂಬತ್ತನೇ ಸೂಕ್ತವು ಅವತರಿಸಿದ್ದು. ಅದರ ಸಾರವು ಈ ರೀತಿಯಾಗಿದೆ “ನೀವು, ನಿಮ್ಮ ಪ್ರಭುವಿನಲ್ಲಿ ಸಹಾಯ ಕೇಳಿದ ಸಂದರ್ಭವನ್ನು ಸ್ಮರಿಸಿರಿ, ಸಾವಿರ ಮಲಕ್’ಗಳನ್ನು (ದೇವಚರ) ಸಾಲು ಸಾಲಾಗಿ ಕಲುಹಿಸುದಾಗಿ ಅಲ್ಲಾಹನು ನಿಮಗೆ ಉತ್ತರ ನೀಡಿದನು.”

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-235/365

ನಂತರ ಪ್ರವಾದಿಯವರಿಗೆ ﷺ ನಿದ್ರೆ ಬಂದ ಅನುಭವ ಆಯಿತು, ಕೂತಲ್ಲಿಯೇ ತೂಕಡಿಸಲು ಆರಂಭಿಸಿದರು. ಸ್ವಲ್ಪ ಸಮಯದ ನಂತರ ಎಚ್ಚರವಾಯಿತು, ನಂತರ ಅವರು ಅಬೂಬಕ್ಕರ್’ರನ್ನು ◌ؓ ಕರೆದು ಸಂತೋಷ ಪಡಿ ನಮಗೆ ಅಲ್ಲಾಹನ ಸಹಾಯ ಸಿಕ್ಕಿರುತ್ತದೆ ಎಂದು ಹೇಳಿದರು.

ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದರೂ, ಅಲ್ಲಾಹನ ಔದಾರ್ಯತೆ ಮಾತ್ರವಾಗಿದೆ ಗೆಲುವು ಸಾಧಿಸಲು ಮುಖ್ಯ ಎಂಬ ಪಾಠವನ್ನಾಗಿದೆ ಪ್ರವಾದಿಯವರು ﷺ ಇಲ್ಲಿ ತಿಳಿಸಿಕೊಡುವುದು. ತಮ್ಮ ಅನುಚರರನ್ನು ಸಾಲಾಗಿ ನಿಲ್ಲಿಸುವಾಗಲೂ, ಹೋರಾಟಕ್ಕೆ ಉತ್ತೇಜನ ನೀಡುವಾಗಳೂ, ಗೆಲುವು ಮಾತ್ರ ಅಲ್ಲಾಹನ ಔದಾರ್ಯತೆಯಿಂದಾಗಿದೆ ಎಂಬ ಕಾರಣಕ್ಕೆ ಆಗಿತ್ತು, ಪ್ರವಾದಿಯವರು ﷺ ನಿರಂತರವಾಗಿ ಪ್ರಾರ್ಥನೆಯಲ್ಲೇ ಮುಳುಗಿದ್ದದ್ದು.

ಹೀಗಿರುವಾಗ, ಇಸ್ಲಾಮಿನ ಕಠಿಣ ವಿರೋಧಿಯೂ, ಒರಟು ಸ್ವಭಾವದವನೂ, ಅಜಾನುಬಾಹುವಾದ ಮನುಷ್ಯನಾದ ಅಸ್’ವದುಲ್ ಮಖ್’ಸೂಮಿ, ಅಹಂಕಾರದಿಂದ ಮುಂದೆ ಬಂದು “ಮುಹಮ್ಮದ್’ರ ತೊಟ್ಟಿಯಿಂದ (ಜಲಾಶಯ) ನಾನು ಖಂಡಿತ ನೀರು ಕುಡಿಯುತ್ತೇನೆ, ಇಲ್ಲದಿದ್ದರೆ ಅದನ್ನು ಒಡೆದು ಹಾಕುತ್ತೇನೆ, ಅದೂ ಆಗದಿದ್ದರೆ ಅದಕ್ಕಾಗಿ ನಾನು ಸಾಯುತ್ತೇನೆ ಎಂದು ಕೂಗಿ ಹೇಳಿದನು.”

ಇವನನ್ನು ಎದುರಿಸದೇ ಬೇರೆ ದಾರಿಯಿಲ್ಲ ಎಂದು, ತಕ್ಷಣವೇ ಹಂಝರವರು ◌ؓ ನೇರವಾಗಿ ಅಸ್’ವದ್’ನ ಮುಂದೆ ಹೋಗಿ ನಿಂತು ಅವನ ಕಾಲಿಗೆ ಖಡ್ಗವನ್ನು ಬೀಸಿದರು. ಅವನ ಕಾಲು ತುಂಡಾಗಿ ಅವನ ಬೆನ್ನಿಗೆ ಹೋಗಿ ತಾಗಿತು, ಅದರಿಂದ ವಸರುತ್ತಿದ್ದ ರಕ್ತ ಪರಿಸರದಲ್ಲಿ ಚಿಮ್ಮಿತು, ಆದರೂ ಅಹಂಕಾರಿಯಾದ ಅಸ್’ವದ್ ಇರುವ ಒಂದು ಕಾಲಿನಲ್ಲಿ ಕುಂಟುತ್ತಾ ತೊಟ್ಟಿಯ ಬಳಿ ಹೋಗಿ, ತೊಟ್ಟಿಯ ಒಂದು ಭಾಗವನ್ನು ಹೊಡೆದು ಹಾಕಿ, ಅದರಿಂದ ಸ್ವಲ್ಪ ನೀರನ್ನೂ ಕುಡಿದನು. ಅದನ್ನು ಕಂಡು ಸಹಿಸಲಾಗದೆ ಹಂಝರು ◌ؓ ಅವನನ್ನು ಅದೇ ನೀರಿಗೆ ತಳ್ಳಿ ಹಾಕಿ, ಅಲ್ಲೇ ಅವನ ಕಥೆಯನ್ನು ಮುಗಿಸಿದರು.

ಇದೇ ರೀತಿ ಸ್ವಲ್ಪ ಹೊತ್ತಿಗೆ ಮುಂಚೆ ನೀರು ತೆಗಿಯಲು ಒಂದು ಗುಂಪನ್ನು ತಡೆಯಬೇಡಿ ಎಂದು ಪ್ರವಾದಿಯವರು ﷺ ಹೇಳಿದ್ದನ್ನು ನಾವು ಈಗಾಗಲೇ ಓದಿದ್ದೇವೆ. ಅದು ಅವರ ದಿನನಿತ್ಯದ ಅಗತ್ಯ ಪೂರೈಕೆಗೆ ಆಗಿತ್ತು ಅವರು ಬಂದಿದ್ದು, ಹಾಗಾಗಿ ಪ್ರವಾದಿಯವರು ﷺ ಅವರಲ್ಲಿ ಶತ್ರುಗಳು ಎನ್ನುವುದನ್ನು ಮರೆತು ಅದಕ್ಕೆ ಅನುಮತಿ ನೀಡಿದ್ದರು, ಆದರೆ ಈಗ ಅಸ್’ವದ್ ಬಂದದ್ದು ಅಹಂಕಾರದಿಂದ ತೊಟ್ಟಿಯನ್ನು ವಶಪಡಸುವ ಉದ್ದೇಶದಿಂದ ಆಗಿತ್ತು, ಹಾಗಾಗಿ ಇಲ್ಲಿ ಸುಮ್ಮನಿರುವುದು ಹೇಡಿತನಕ್ಕೆ ಕಾರಣವಾಗಬಹುದು, ಇದು ವಿರೋಧಿಗಳಿಗೆ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲು ಕಾರಣವಾಗಬಹುದು, ಅದಕ್ಕಾಗಿತ್ತು ಹಂಝರವರು ◌ؓ ಪ್ರತೀಕಾರವನ್ನು ತೀರಿಸಿದ್ದು.

ಒಂದು ಅರ್ಥದಲ್ಲಿ ಯುದ್ದ ಆರಂಭವಾಗಿತ್ತು, ಆದರೆ ಅರಬ್ಬರ ರೀತಿಯಲ್ಲಿ ಯುದ್ಧ ಆರಂಭವಾಗುವುದು ದ್ವಂದ್ವಯುದ್ಧದ ಮೂಲಕವಾಗಿತ್ತು. ಅದು ಕೆಲವೊಮ್ಮೆ ಎರಡು ಸೈನಿಕರ ನಡುವೆ ಅಥವಾ ಎರಡು ಅಶ್ವ ಸೈನಿಕರ ನಡುವೆ ಆಗುತಿತ್ತು.
ಅದೇ ರೀತಿ ಖುರೈಷಿಗಳ ಸೇನೆಯಿಂದ ಉತ್’ಬತ್ ಬಿನ್ ರಬೀಅಃ, ಶೈಬನ ಮಗ ಹಾಗೂ ವಲೀದ್’ನ ನಡುವಿನಿಂದ ಬಹಳ ವೀರಾವೇಶದೊಂದಿಗೆ ಮುಂದೆ ಬಂದು ಸವಾಲು ಹಾಕಿದನು.
ಯುದ್ಧದಿಂದ ಹಿಂದೆ ಸರಿದು ಮಕ್ಕಾಗೆ ಹಿಂತಿರುಗಿ ಹೋಗಲು ಪ್ರಯತ್ನಿಸಿದ ವ್ಯಕ್ತಿಯಾಗಿದ್ದನು ಉತ್’ಬಃ, ಆದರೆ ಈಗ ಮೊದಲು ಸವಾಲು ಹಾಕಿದ್ದೂ ಕೂಡ ಅವನೇ ಆಗಿದ್ದನು. ಯಾಕೆಂದರೆ ತಾನು ಹೇಡಿಯಲ್ಲವೆಂದೂ, ಯುದ್ಧದಿಂದ ಹಿಂತಿರುಗಿ ಹೋಗೋಣ ಅಂದದ್ದು ಹೇಡಿತನದಿಂದ ಅಲ್ಲವೆಂದೂ, ತೋರಿಸಿಕೊಡುವ ಉದ್ದೇಶದಿಂದಲೂ ಆಗಿತ್ತು, ತಲೆಯಲ್ಲಿ ಕವಚ ನಿಲ್ಲದ ಕಾರಣ ಕವಚವನ್ನು ತಲೆಗೆ ಕವಚವನ್ನು ಕಟ್ಟಿಯಾಗಿತ್ತು ಅವನು ರಣರಂಗಕ್ಕೆ ಇಳಿದದ್ದು.

ಖುರೈಷಿಗಳ ಸವಾಲನ್ನು ಎದುರಿಸಲು ಅಬ್ದುಲ್ಲಾಹಿಬಿನು ರವಾಹಃ ◌ؓ, ಹಾರಿಸಿನ ಮಕ್ಕಳಾದ ಔಫ್ ◌ؓ ಹಾಗೂ ಮುಅವ್ವಿದ್’ರು ◌ؓ ಮುಂದೆ ಬಂದರು. ಮುಅವ್ವಿದ್’ರ ◌ؓ ಸಹೋದರನಾದ ಮುಅದ್’ರೆ ◌ؓ ಸೇರಿ ಹಾರಿಸ್’ರ ಮೂರು ಜನ ಮಕ್ಕಳೇ ಆಗಿತ್ತು ಮುಂದೆ ಬಂದದ್ದು ಎಂಬ ಅಭಿಪ್ರಾಯವೂ ಇದೆ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-236/365

ರಣಗಂಕ್ಕೆ ಇಳಿದ ಅನ್ಸಾರುಗಳಲ್ಲಿ, ಉತ್’ಬ ನೀವು ಯಾರೆಂದು ಕೇಳಿದಾಗ, ಅವರು ನಾವು ಅನ್ಸಾರುಗಳು ಎಂದು ಹೇಳಿದರು, ಅದಕ್ಕೆ ಉತ್’ಬ ನಿಮ್ಮ ಅವಶ್ಯಕತೆ ನಮಗಿಲ್ಲ ಎಂದು ಹೇಳಿದನು. ನಂತರ ಖುರೈಷಿಗಳ ಗುಂಪಿನಿಂದ, ಮುಹಮ್ಮದ್’ರೆ ﷺ ನಮ್ಮವರಲ್ಲೇ (ಮುಆಜಿರ್) ಧೀರರನ್ನು ಕಳುಹಿಸಿ ಕೊಡಿ ಎಂಬ ಕೂಗು ಕೇಳಿ ಬಂದಿತ್ತು. ಹಾಗಾಗಿ ಪ್ರವಾದಿಯವರು ﷺ ಅನ್ಸಾರುಗಳನ್ನು ವಾಪಸು ಕರೆಸಿ, ಉಬೈದ ◌ؓ, ಹಂಝ ◌ؓ ಹಾಗೂ ಅಲಿಯವರನ್ನು ◌ؓ ಕರೆದು ನೀವು ಅಖಾಡಕ್ಕೆ ಇಳಿಯಿರಿ ಎಂದು ಹೇಳಿದರು. ಅಷ್ಟರಲ್ಲೇ ವಿರೋಧಿಗಳಿಂದ ಯಾರೆಲ್ಲ ಬಂದಿದ್ದಾರೆ ಎಂಬ ಕೂಗು ಕೇಳಿ ಬಂದಿತು, ಅದಕ್ಕೆ ಅವರಲ್ಲೇ ಒಬ್ಬ ಅದು ಹಂಝ ◌ؓ, ಉಬೈದ ◌ؓ ಹಾಗೂ ಅಲಿ ◌ؓ ಎಂದು ಹೇಳಿದಾಗ, ಓಹೋ ಪರವಾಗಿಲ್ಲ ಒಳ್ಳೆಯ ಧೀರರೆ ಅಖಾಡಕ್ಕೆ ಇಳಿದಿದ್ದಾರೆ ಎಂದು ಇನ್ನೊಬ್ಬ ಹೇಳಿದನು.

ಇನ್ನೊಂದು ಉಲ್ಲೇಖದ ಪ್ರಕಾರ, ಉತ್’ಬ ನೀವುಗಳು ಯಾರೆಂದು ಇವರಲ್ಲಿ ಕೇಳಿದಾಗ, ಹಂಝರು ◌ؓ ನಾನು ಅಲ್ಲಾಹನ ಹಾಗೂ ಅವನ ಪ್ರವಾದಿಯವರ ﷺ ಸಿಂಹ ಎಂದು ಹೇಳಿದರು, ನಂತರ ಅಲಿಯವರು ◌ؓ ನಾನು ಅಲ್ಲಾಹನ ದಾಸ ಹಾಗೂ ಪ್ರವಾದಿಯವರ ﷺ ಸಹೋದರ ಎಂದು ಹೇಳಿದರು, ಕೊನೆಗೆ ಉಬೈದ ◌ؓ ನಾನು ಮಿತ್ರಪಕ್ಷದ ಸದಸ್ಯ ಎಂದು ಹೇಳಿದರು.

ಹಂಝ ◌ؓ ಶೈಬನನ್ನು ಎದುರಿಸಿದ ಕೆಲವೇ ಕೆಲವು ನಿಮಿಷದಲ್ಲಿ, ಶೈಬ ಕಥೆ ಮುಗಿಸಿದರು. ಅಲಿಯವರು ◌ؓ ವಲೀದ್’ನನ್ನು ಎದುರಿಸಿ ಅವನ ಕಥೆಯನ್ನೂ ಮುಗಿಸಿದರು. ಕೊನೆಗೆ ಉಳಿದ ಉತ್’ಬ ಹಾಗೂ ಉಬೈದ ◌ؓ ನಡುವೆ ಉಗ್ರ ಹೋರಾಟ ನಡೆಯಿತು. ಉತ್’ಬರಿಗಿಂತ ಪ್ರಾಯದಲ್ಲಿ ಹಿರಿಯ ವ್ಯಕ್ತಿಯಾಗಿದ್ದ ಉಬೈದರಿಗೆ ◌ؓ ಸುಲಭವಾಗಿ ಎದುರಿಸಲು ಆಗಲಿಲ್ಲ, ಸುಮಾರು ಐವತ್ಮೂರು ವಯಸ್ಸಾಗಿತ್ತು ಅವರಿಗೆ. ಆದರೂ ಬಿಟ್ಟು ಕೊಡದೆ ಹೊರಡುವಾಗ, ಉಬೈದರ ◌ؓ ಕಾಲಿಗೆ ಬಲವಾದ ಏಟು ಬಿದ್ದು, ಮಾಂಸ ಹೊರಗೆ ಕಾಣುತ್ತಿತ್ತು. ಆ ಕೂಡಲೇ ಅಲಿಯವರು ◌ؓ ಹಾಗೂ ಹಂಝರು ◌ؓ ಸೇರಿ ಉತ್’ಬನನ್ನು ಎದುರಿಸಿ ಅವನನ್ನು ಕೂಡ ಸಾಯಿಸಿದರು. ಹೀಗೆ ಖುರೈಷಿಗಳಿಂದ ಮೊದಲು ದ್ವಂದ್ವ ಯುದ್ಧ ಬಂದವರು ರಣರಂಗದಲ್ಲಿ ಸತ್ತು ಬಿದ್ದಿದ್ದರು.

ಗಾಯ ಗೊಂಡಿದ್ದ ಉಬೈದರನ್ನು ◌ؓ, ಸಹಚರರು ಸೇರಿ ಡೇರೆಯ ಒಳಗೆ ಕೊಂಡು ಹೋಗಿ ಪ್ರವಾದಿಯವರ ﷺ ಬಳಿ ತಲುಪಿಸಿದರು. ಉಬೈದ ◌ؓ ಪ್ರವಾದಿಯವರ ﷺ ಬಳಿ ಬಂದು, ಪ್ರವಾದಿಯವರ ﷺ ಪಾದಕ್ಕೆ ತಮ್ಮ ಮುಖವನ್ನು ಒತ್ತಿ ಹಿಡಿದು, ಬಿಕ್ಕಿ ಬಿಕ್ಕಿ ಅಳುತ್ತಾ, ನಾನು ಹುತಾತ್ಮ ಆಗುವುದಿಲ್ಲವೇ ಪ್ರವಾದಿಯವರೇ ﷺ ಎಂದು ಕೇಳಿದಾಗ, “ನೀವು ಖಂಡಿತ ಹುತಾತ್ಮರಾಗಲಿದ್ದೀರಿ, ಎಂದು ನಾನು ನಿಮಗೆ ಮಾತು ಕೊಡುತ್ತೇನೆ” ಎಂದು ಹೇಳಿದರು. ಅದನ್ನು ಕೇಳಿ, ಪ್ರವಾದಿಯವರ ﷺ ಪಾದವನ್ನು ಇನ್ನಷ್ಟು ಒತ್ತಿ ಹಿಡಿದು “ವನುಸ್’ಲಿಮುಹು ಹತ್ತಾ…”
“ಮಡದಿ, ಮಕ್ಕಳೆಲ್ಲರನ್ನೂ ಮರೆತು, ಜೀವ ಕೊಟ್ಟದರೂ ಸರಿ ನಾವು ಮಗನನ್ನು ಕಾಪಾಡುತ್ತೇವೆ” ಎಂದು ಹೇಳುತ್ತಾ, ಹೀಗೆ ಹಾಡಿದ ಅಬೂತ್ವಾಲಿಬ್’ರು ಇಂದು ಬದುಕಿದ್ದು, ಅವರು ಈ ದೃಶ್ಯವನ್ನು ಕಂಡಿದ್ದರೆ ಖಂಡಿತ ನಾನು ಆ ಕೆಲಸವನ್ನು ಮಾಡಿದೆ ಎಂದು ಹೇಳಬಹುದಿತ್ತು ಎಂದು ಹೇಳಿದರು.

ಯುದ್ಧ ಕಳೆದು, ಹಿಂತಿರುಗಿ ಹೋಗುವಾಗ ಸ್ವಫ್’ರಾಅ್ ಎಂಬ ಸ್ಥಳಕ್ಕೆ ತಲುಪಿದಾಗ, ಮಹಾನರು ಮರಣ ಹೊಂದಿದರು, ಅಲ್ಲೇ ಅವರನ್ನು ಸಮಾಧಿಯೂ ಮಾಡಲಾಯಿತು. ನಂತರ ಉಸಾಸರ ಮಗಳಾದ ಹಿಂದ್ ಮಹಾನರ ನೆನಪಿಗಾಗಿ, “ಲಖದ್ ಳಮಿನ ಸ್ಸಫ್’ರಾಉ ಮಜ್’ದನ್ ವ ಸೂದದಾ…”
“ಸ್ವಫ್’ರಾಅ್’ನಲ್ಲಿ ಪರಾಕ್ರಮ, ವೈಭವ, ನಾಯಕತ್ವ, ಒಳ್ಳೆಯ ಗುಣಗಳ ಒಡೆಯ ವಿಶ್ರಾಂತಿ ಪಡೆಯುತ್ತಿದ್ದಾರೆ ಅಲ್ಲವೇ..” ಎಂಬ ಸಾಲುಗಳನ್ನು ಹಾಡಿದರು.

ನಂತರ ಅಲಿಯವರು ◌ؓ ಅಂತ್ಯದಿನದಲ್ಲಿ ಅಲ್ಲಾಹನ ಸನ್ನಿಧಿಯಲ್ಲಿ ಚರ್ಚೆ ಪರಿಹಾರಕ್ಕಾಗಿ, ಮಂಡಿಯೂರಿ ನಿಲ್ಲುವ ಮೊದಲ ವ್ಯಕ್ತಿ ನಾನಾಗಿರುವೆನು ಎಂದು ಹೇಳುತ್ತಾ, ಅದರ ಬಗ್ಗೆ ಅವತರಿಸಲಾದ ಪವಿತ್ರ ಕುರ್’ಆನಿನ ಇಪ್ಪತ್ತೆರಡನೆ ಅಧ್ಯಾಯ ಅಲ್ ಹಜ್ಜ್’ನ ಹತ್ತೊಂಬತ್ತನೆ ಸೂಕ್ತವನ್ನು ಓದಿದರು. ಅದರ ಸಾರವು ಈ ರೀತಿಯಾಗಿದೆ, “ಈ ಎರಡು ವಿಭಾಗ ಗುಂಪುಗಳು ನಿಮ್ಮ ಪ್ರಭುವಿನ ವಿಷಯದಲ್ಲಿ ಪರಸ್ಪರ ವಿರೋಧಿಗಳಾದರು. ಆದರೆ ಇದರಲ್ಲಿ ಸತ್ಯನಿಷೇಧಿಗಳಿಗೆ ಅಗ್ನಿಯಿಂದ ಕತ್ತರಿಸಿದ ಉಡುಪುಗಳನ್ನು ಕೊಡಲಾಗುವುದು, ಅವರ ತಲೆಯ ಮೇಲೆ ಕುದಿಯುವ ನೀರನ್ನು ಸುರಿಯಲಾಗುವುದು.” ಹಂಝ ◌ؓ, ಅಲಿ ◌ؓ ಹಾಗೂ ಉಬೈದ ◌ؓ ಈ ಸೂಕ್ತದಲ್ಲಿ ತಿಳಿಸಿದ ಸತ್ಯವಿಶ್ವಾಸಿಗಳಾದರೆ, ಉತ್’ಬ, ಶೈಬ ಹಾಗೂ ವಲೀದ್ ಆಗಿರುವರು, ಈ ಸೂಕ್ತದಲ್ಲಿ ತಿಳಿಸಿದ ಸತ್ಯನಿಷೇಧಿಗಳು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-237/365

ಪ್ರವಾದಿಯವರು ﷺ ಪುನಃ ತಮ್ಮ ಅನುಚರರಿಗೆ ಹೋರಾಟಕ್ಕೆ ಉತ್ತೇಜನ ನೀಡಿದರು. ದ್ವಂದ ಯುದ್ಧದ ಗೆಲುವು ಸತ್ಯವಿಶ್ವಾಸಿಗಳಿಗೆ ಇನ್ನಷ್ಟು ಬಲ ನೀಡಿತು. ಪ್ರವಾದಿಯವರು ﷺ ಮತ್ತೊಮ್ಮೆ ತಮ್ಮ ಅನುಚರರಲ್ಲಿ, “ದೂರದಿಂದ ಯಾರಿಗೂ ಬಾಣ ಬಿಡಬೇಡಿರಿ, ಸ್ಪಷ್ಟವಾದ ಲಕ್ಷ್ಯಕ್ಕೆ ತಾಗುವ ಹಾಗೆ ಇದ್ದರೆ ಮಾತ್ರ ಬಾಣ ಬಿಡಬೇಕು, ಗುರಿಗೆ ಹೋಗಿ ತಾಗುವುದಾದರೆ ಮಾತ್ರವೇ ಈಟಿ ಎಸೆಯಬೇಕು, ವಿನಾಕಾರಣ ಬಾಣ ಬಿಟ್ಟು, ಬಾಣ ಕಳೆದುಬೇಡಿ. ಶತ್ರುಗಳು ನಿಮ್ಮನ್ನು ಸುತ್ತುವರಿದರೆ ಮಾತ್ರವೇ ನಿಮ್ಮ ಓರೆಯಿಂದ ಖಡ್ಗ ಹೊರಗೆ ತೆಗೆಯಿರಿ.” ಎಂದು ಹೇಳುತ್ತಾ, ಇನ್ನಷ್ಟು ಉತ್ತೇಜನ ನೀಡಿದರು.

ಬದ್ರ್ ರಣರಂಗದಲ್ಲಿ ತಮ್ಮ ಖಡ್ಗಗಳನ್ನು ಓರೆಯೊಳಗೆ ಇಟ್ಟು ಸಾಲಾಗಿ ನಿಂತಿರುವ ಪ್ರವಾದಿಯವರ ﷺ ಅನುಚರರನ್ನು ಕಂಡು, ಖಫ್ಫಾಫ್ ಬಿನ್ ಈಮಾಅ ಉಲ್ಲೇಖಿಸುವುದು ಕಾಣಬಹುದು, ಒಬ್ಬರು ಇನ್ನೊಬ್ಬರ ಭುಜಕ್ಕೆ ತಾಗುವ ಹಾಗೆ ಸಾಲಾಗಿ ನಿಂತಿದ್ದರು, ಅವರು ಬಿಲ್ಲುಗಳ ತಂತಿಗಳನ್ನು ಚಲಾಯಿಸುತ್ತಿದ್ದರು. ಆದರೆ ವಿರೋಧಿಗಳು ರಣ ರಂಗ ಪ್ರವೇಶ ಮಾಡಿದ್ದೆ ತಮ್ಮ ತಮ್ಮ ಖಡ್ಗಗಳನ್ನು ಕೈಯಲ್ಲಿ ಹಿಡಿದುಕೊಂಡು ಆಗಿತ್ತು. ಈ ದೃಶ್ಯವು ನನ್ನನ್ನು ಆಶ್ಚರ್ಯಗೊಳಿಸಿತ್ತು, ಹಾಗಾಗಿ ನಾನು ಮುಹಾಜಿರ್’ಗಳಲ್ಲಿ ಒಬ್ಬ ವ್ಯಕ್ತಿಯನ್ನು ಕರೆದು ಅವರಲ್ಲಿ ವಿಷಯ ಕೇಳಿದಾಗ, ಶತ್ರುಗಳನ್ನು ನಮ್ಮನ್ನು ಸುತ್ತುವರಿಲ್ಪಟ್ಟರೆ ಮಾತ್ರವೇ ನಮ್ಮ ಖಡ್ಗವನ್ನು ಓರೆಯಿಂದ ಹೊರ ತೆಗೆಯಬೇಕು ಎಂದಾಗಿದೆ ಪ್ರವಾದಿಯವರ ﷺ ಆದೇಶ ಎಂದು ಆ ವ್ಯಕ್ತಿ ಹೇಳಿದರು.

ಉತ್’ಬ, ಶೈಬ ಹಾಗೂ ವಲೀದ್’ನ ಸಾವಿನಿಂದ ಖುರೈಷಿಗಳು ಬಹಳಷ್ಟು ಹತಾಶರಾದರು. ಕೊನೆಗೆ ಅವರವರೇ ಸಮಾಧಾನವನ್ನು ಮಾಡಿಕೊಂಡು, ಮುಸ್ಲಿಮರಲ್ಲಿ “ನಮ್ಮ ಜೊತೆಯಲ್ಲಿ ಲಾತ, ಹುಝ್ಝ ಇದ್ದಾರೆ ನಿಮ್ಮ ಜೊತೆಯಲ್ಲಿ ಯಾರಿದ್ದಾರೆ.?” ಎಂದು ಕೂಗಿ ಹೇಳಿದಾಗ, ಮುಸ್ಲಿಮರಿಂದ ನಮ್ಮ ರಕ್ಷಕ ಅಲ್ಲಾಹನಾಗಿದ್ದಾನೆ.! ನಿಮಗೆ ಯಾರಿದ್ದಾರೆ ರಕ್ಷಕನಾಗಿ.? ನಮ್ಮಿಂದ ಯಾರಾದ್ರೂ ವೀರ ಮರಣ ಹೊಂದಿದರೆ, ಅವರು ಸ್ವರ್ಗಕ್ಕೆ ಹೋಗುತ್ತಾರೆ, ಆದರೆ ನಿಮ್ಮಿಂದ ಯಾರಾದರೂ ಸಾವನ್ನಪ್ಪಿದರೆ ಅವರು ಹೋಗುವುದು ನರಕಕ್ಕೆ ಆಗಿದೆ ಎಂದು ಮುಸ್ಲಿಮರ ಭಾಗದಿಂದಲೂ ಇನ್ನೊಂದು ಕೂಗು ಕೇಳಿಸಿತು.

ಪ್ರವಾದಿಯವರು ﷺ ಡೇರೆಯ ಒಳಗಿಂದಲೇ ಪ್ರಾರ್ಥನೆಯಲ್ಲಿ ತೊಡಗಿದಾಗ, ಅವರ ಜೊತೆಯಲ್ಲಿ ಅಬೂಬಕ್ಕರ್ ಕೂಡ ಸೇರಿದರು. “ಅಲ್ಲಾಹನೇ ನೀನು ಭರವಸೆ ನೀಡಿದ ಸಹಾಯ ಅತೀ ವೇಗವಾಗಿ ನೀಡು ಪ್ರಭು” ಎಂದು ಪ್ರವಾದಿಯವರು ﷺ ಪ್ರಾರ್ಥಿಸಿದ ಕೆಲವು ಕೆಲವು ನಿಮಿಷಗಳಲ್ಲಿ ಆಕಾಶದಿಂದ ದೇವಚರರು (ಮಲಕ್’ಗಳು) ಭೂಮಿಗೆ ಇಳಿದು ಬರುತ್ತಿರುವ ವಿಷಯವು ಪ್ರವಾದಿಯವರಿಗೆ ﷺ ತಲುಪಿತು. ಅಷ್ಟೊತ್ತಿಗೆ ಮಲಕ್ ಜಿಬ್’ರೀಲರು ಕುದುರೆಯ ಲಗಾಮು ಹಿಡಿದು ಪ್ರವಾದಿಯವರ ﷺ ಮುಂದೆ ಬಂದು ನಿಂತಿದ್ದರು. ಆ ಕುದುರೆಯ ಮುಂಭಾಗದ ಹಲ್ಲಿನ ನಡುವೆ ದೂಳುಗಳು ಇದ್ದದ್ದು ಕಾಣುತ್ತಿದ್ದವು.

ಇಬ್’ನು ಅಬ್ಬಾಸ್’ರ ಉಲ್ಲೇಖದಲ್ಲಿ ಕಾಣಬಹುದು, ಬದ್ರ್ ದಿನದಲ್ಲಿ ಪ್ರವಾದಿಯವರು ﷺ, ಅದೋ ಜಿಬ್’ರೀಲರು (ಅ) ಕುದುರೆಯ ತಲೆಯನ್ನು ಹಿಡಿದಿರುವರು, ಅದರ ತಲೆಯಲ್ಲಿ ಬಹಳ ಆಯುಧಗಳಿವೆ ಎಂದು ಹೇಳಿದ್ದರು.

ದೇವಚರರ (ಮಲಕ್) ಆಗಮನದಿಂದ ಮುಸ್ಲಿಮರಿಗೆ ಇನ್ನಷ್ಟು ಉತ್ಸಾಹ ಬಂದಿತು. ಅದೇ ಸಮಯದಲ್ಲಿ ವಿರೋಧಿಗಳಲ್ಲಿ ನಡುಕ ಉಂಟಾಯಿತು, ಅವರಿಗೂ ಕೂಡ ಮುಸ್ಲಿಂ ಸೇನೆಯ ಬಲ ಅಧಿಕವಾದದ್ದು ಗಮನಕ್ಕೆ ಬಂದಿದ್ದವು. ಕಿನಾನ ವಂಶಸ್ಥನ ರೂಪದಲ್ಲಿ ಬಂದಿದ್ದ ಪಿಶಾಚಿಯು, ಸತ್ಯ ನಿಷೇಧಿಗಳ ಸೇನೆಯಲ್ಲಿ ತಮ್ಮ ಜಿನ್ ವರ್ಗದ ಕೆಲವು ಜಿನ್’ಗಳನ್ನು ಸೇರಿಸಿ ಬಂದಿದ್ದನು.
ಅವನು ಅಬೂಜಹಲ್’ನ ಸಹೋದರ ಹಾರಿಸ್ ಬಿನ್ ಹಿಷಾಮಿನ ಕೈ ಹಿಡಿದುಕೊಂಡಿದ್ದ ಸಂದರ್ಭದಲ್ಲಾಗಿತ್ತು, ಜಿಬ್’ರೀಲರು ತಮ್ಮ ಅನುಚರರೊಂದಿಗೆ ಭೂಮಿಗೆ ಇಳಿಯುವ ದೃಶ್ಯ ಪಿಶಾಚಿಗೆ ಕಾಣುವುದು. ಆ ಕೂಡಲೇ ಪಿಶಾಚಿಯು ಕೂಡ ಅವನ ಅನುಯಾಯಿಗಳ ಜೊತೆಯಲ್ಲಿ ಅಲ್ಲಿಂದ ಓಡಿ ಹೋಗಲು ತಯಾರಾದನು. ಅದನ್ನು ಕಂಡು ಹಾರಿಸ್ “ಓ ಸುರಾಖ ನೀನು ಎಲ್ಲಿಗೆ ಹೋಗುವುದು.! ನೀನೆ ಅಲ್ವಾ ನಮ್ಮ ಹಿತೈಷಿ ಎಂದು ನಮ್ಮ ಜೊತೆಯಲ್ಲಿ ಬಂದು ಸೇರಿದ್ದು, ಈಗ ಎಲ್ಲಿಗೆ ಓಡುತ್ತಿರುವುದು.?” ಎಂದು ಕೇಳಿದಾಗ, ಪಿಶಾಚಿಯು “ನಾವು ನಿಮ್ಮ ವಿಭಾಗದ ಜನರಲ್ಲ, ನಾವು ಬೇರೆ ವಿಭಾಗದವರು, ನಿಮಗೆ ಕಾಣಲು ಸಾಧ್ಯವಾಗದ ಬಹಳಷ್ಟು ವಿಷಯಗಳು ನಮಗೆ ಕಾಣಲು ಸಾಧ್ಯವಿದೆ, ನಮಗೆ ಸರ್ವಾಧಿಕಾರಿಯಾದ ಸೃಷ್ಟಿಕರ್ತನ ಭಯವಿದೆ, ಅವನ ಶಿಕ್ಷೆಯು ಅತೀ ಭಯಂಕರವಾಗಿರುತ್ತೆ ಎಂದು ಕೂಗಿ ಹೇಳಿದನು” ಅದಕ್ಕೆ ಹಾರಿಸ್ “ದೇವರಾಣೆಗೂ ಇಲ್ಲಿ ಕೇವಲ ಯಸ್’ರಿಬಿನ ಬಾವಲಿಗಳನ್ನಲ್ಲದೆ ಇನ್ನೇನು ಕಾಣುತ್ತಿಲ್ಲ” ಎಂದು ಪಿಶಾಚಿಯ ಕೈ ಹಿಡಿದಾಗ, ಪಿಶಾಚಿಯು ಹಾರಿಸಿನ ಎದೆಗೆ ಬಲವಾದ ಏಟು ಕೊಟ್ಟಿತು. ಅದರಿಂದ ಹಾರಿಸ್ ನೆಲಕ್ಕೆ ಉರುಳಿ ಬಿದ್ದನು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-238/365

ಕೊನೆಗೆ ಪಿಶಾಚಿಯು ಅಲ್ಲಿಂದ ತಪ್ಪಿಸಿ ಓಡಿ ಹೋದನು. ಅವನ ಕುತಂತ್ರಿ ಬುದ್ಧಿಯಲ್ಲಿ ಅವನ ಸ್ವಂತ ರಕ್ಷಣೆ ಹೇಗೆ ಮಾಡುವುದು ಎಂಬುವುದು ಮಾತ್ರವಾಗಿತ್ತು ಅವನಿಗೆ ಮುಖ್ಯವಾದದ್ದು. ಅಲ್ಲಾಹನಲ್ಲಿ ಅಂತ್ಯ ದಿನದವರೆಗೆ ಆಯಸ್ಸು ವಿಸ್ತರಿಸಿ ಕೊಡಬೇಕು ಎಂದು ಬೇಡಿಕೊಂಡಾಗ, ನಿಗದಿತ ಸಮಯದ ವರೆಗೆ ಎಂಬ ಉತ್ತರ ಬಂದಿತ್ತು. ಆ ಸಮಯ ಈಗ ಬಂದಿತೋ.? ಎಂಬ ಭಯ ಪಿಶಾಚಿಯನ್ನು ಆವರಿಸಿದವು. “ಅವರು ದೇವಚರರನ್ನು (ಮಲಕ್) ಎದುರಿಸುವ ದಿನದಂದು ತಪ್ಪಿತಸ್ಥರು ಬಹಳಷ್ಟು ದುಃಖಿತರಾಗಿರುವರು,” ಎಂದು ಹೇಳಿದ್ದ ಆ ಸಮಯ ಇವತ್ತು ಬಂದಿತೋ.? ಎಂಬ ಭಯವೂ ಅವನನ್ನು ಕಾಡತೊಡಗಿತು.

ಖುರೈಷಿಗಳು ಬಹಳಷ್ಟು ಚಿಂತಿತರಾದರು. ಜೊತೆಯಲ್ಲಿ ನಿಂತು, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದ ಸುರಾಖಃ, ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮನ್ನು ಬಿಟ್ಟು ಓಡಿ ಹೋಗಿದ್ದಾನೆ ಎಂದು. ಆದರೆ ಅವರಿಗೆ ತಾನೇ ಹೇಗೆ ಗೊತ್ತು ಸುರಾಖನ ರೂಪದಲ್ಲಿ ನಿಂತಿರುವುದು ಪಿಶಾಚಿ ಆಗಿದೆ ಎಂದು, ಹಾಗಾಗಿಯೇ ಅವನ ಜೊತೆಯಲ್ಲಿದ್ದ ಅವನ ಇತರ ಗುಂಪಿನವರು ಕೂಡ ಓಡಿ ಹೋದರು.

ಇದರ ನಡುವೆ, ಮಕ್ಕಾದಲ್ಲಿ ನಿಜವಾದ ಸುರಾಖರನ್ನು ಮಕ್ಕಾದಲ್ಲಿ ಕೆಲವರು ಭೇಟಿಯಾದಾಗ, ಅವರು ಸುರಾಖರಲ್ಲಿ ಕೇಳಿಯೇ ಬಿಟ್ಟರು. ನೀನು, ನಿನ್ನ ಗುಂಪಿನ ಜನರನ್ನು ಕರೆದುಕೊಂಡು, ಯುದ್ಧ ನಡೆಯುವಾಗ ಅರ್ಧದಲ್ಲಿ ಬಿಟ್ಟೋಗಿ, ನಮ್ಮ ಸೇನೆ ಸೋಲುವ ಹಾಗೆ ಮಾಡಿದ್ದೆ ಅಲ್ವಾ.? ಎಂದಾಗ, ಸುರಾಖ “ಅಲ್ಲಾಹನಾಣೆ ನಾನು ಯುದ್ಧಕ್ಕೆ ಬರಲೇ ಇಲ್ಲ, ಬಹುಶಃ ನಿಮಗೆ ತಪ್ಪಿರಬೇಕು” ಎಂದು ಹೇಳಿದಾಗ, ಅವರು ಮಾತ್ರ ಅದನ್ನು ಒಪ್ಪಿಕೊಳ್ಳಲು ತಯಾರು ಆಗಲಿಲ್ಲ. ಅದರ ನಂತರ, ಖುರ್’ಆನ್ ಸೂಕ್ತ ಅವತರಿಸಿದ ನಂತರವಾಗಿತ್ತು, ಅವರಿಗೂ ಕೂಡ ತಿಳಿದದ್ದು ಅದು ಪಿಶಾಚಿ ಆಗಿತ್ತು ಎಂದು. ಅಂದು ಅವರ ಜೊತೆಯಲ್ಲಿದ್ದ ಹಾರಿಸ್ ಹಾಗೂ ಇತರ ಬಹಳಷ್ಟು ಜನರು ನಂತರದ ಕಾಲದಲ್ಲಿ ಇಸ್ಲಾಮ್ ಸ್ವೀಕರಿಸಿದರು.

ಹೀಗೆ ಪಿಶಾಚಿಯು ಸೇನೆಯನ್ನು ಬಿಟ್ಟು ಓಡಿ ಹೋಗುವಾಗ, ಅಬುಜಹಾಲ್ ತಮ್ಮ ಅನುಚರರನ್ನು ಇನ್ನಷ್ಟು ಉತ್ತೇಜನ ನೀಡಲು, ಭಾಷಣ ಮಾಡಲು ಆರಂಭಿಸಿದರು. “ಸುರಾಖ ಓಡಿ ಹೋದ ಕಾರಣದಿಂದ ನೀವು ಯಾರೂ ಕೂಡ ವಿಚಲಿತರಾಗಬೇಡಿ, ಅವನು ಬಹುಶಃ ಮುಹಮ್ಮದ್’ರ ﷺ ಜೊತೆಯಲ್ಲಿ ಸೇರಿಕೊಂಡಿರಬಹುದು, ನಾನು ಹಿಂತಿರುಗಿ ಹೋದ ನಂತರ ಅವನಿಗೆ ಒಂದು ಗತಿ ಕಾಣಿಸೋಣ, ಆಗ ಅವನಿಗೆ ಅರ್ಥ ಆಗುತ್ತದೆ.
ಇನ್ನೂ ನೀವುಗಳು, ಉತ್’ಬ, ಶೈಬ ಹಾಗೂ ವಲೀದ್’ನ ಕೊಲೆಯಿಂದ ಯಾರೂ ಕೂಡ ಚಿಂತಿತರಾಗಬೇಡಿ, ಅವರಿಗೆ ಸ್ವಲ್ಪ ಆತುರ ಜಾಸ್ತಿ ಇತ್ತು, ಅಷ್ಟೇ ಅಲ್ಲ ಅವರ ಅಹಂಕಾರವೇ ಅವರಿಗೆ ಅಧಿಕವಾಗಿತ್ತು. ಮುಹಮ್ಮದ್ ﷺ ಹಾಗೂ ಅವರ ಅನುಚರರನ್ನು ಕಟ್ಟಿಹಾಕಿ ಬಂದಿಸದೆ ನಮಗೆ ಸಮಾಧಾನವೇ ಇಲ್ಲ, ನೀವು ಯಾರೂ ಅವರನ್ನು ಕೊಲೆ ಮಾಡಬೇಡಿ, ಎಲ್ಲರನ್ನೂ ಜೀವಂತವಾಗಿ ಹಿಡಿಯಬೇಕು, ನಿಮ್ಮ ಧರ್ಮವನ್ನು ಬಿಟ್ಟು ಹೋಗಿ, ನಿಮ್ಮ ಆರಾಧ್ಯ ವಸ್ತುಗಳನ್ನು ವಿರೋಧಿಸಲು ಅವರು ಏನಲ್ಲ ಮಾಡಿದ್ದಾರೆ ಎಂದು ನಾವು ಅವರಿಗೆ ತೋರಿಸಿ ಕೊಡಲೇ ಬೇಕು” ಎಂದು ಹೇಳಿ ಉತ್ತೇಜಿಸಲು ಪ್ರಯತ್ನ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಮುಸ್ಲಿಂ ಸೇನೆಯು ಬಹಳಷ್ಟು ನಿರೀಕ್ಷೆಯಲ್ಲಿ ನಿಂತಿದ್ದವು. ಪವಿತ್ರ ಖುರ್’ಆನಿನ ಐವತ್ನಾಲ್ಕನೇ ಅಧ್ಯಾಯವಾದ ಅಲ್ ಖಮರ್’ನ ನಲ್ವತ್ತೈದನೇ ಸೂಕ್ತವನ್ನು ಉಚ್ಚಾರಿಸುತ್ತಾ ಪ್ರವಾದಿಯವರು ﷺ ಡೇರೆಯಿಂದ ಹೊರಗೆ ಬಂದರು. ಅದರ ಸಾರವು ಈ ರೀತಿಯಾಗಿದೆ “ಆದರೆ ಈ ಸಂಘವು ಸದ್ಯದಲ್ಲೇ ಸೋತು, ಬೆನ್ನು ತಿರುಗಿಸಿ ಓಡಿ ಹೋಗುವರು.”

ರಣರಂಗವು ಇನ್ನಷ್ಟು ಉತ್ತೇಜನಗೊಂಡು, ಎರಡು ಸೈನ್ಯದ ನಡುವೆ ಯುದ್ಧ ಆರಂಭವಾಯಿತು. ಆ ಸಮಯದಲ್ಲಿ, ನೌಫಲ್ ಬಿನ್ ಖುವೈಲಿದ್ ಗುಂಪಿನಿಂದ “ಓ ಖುರೈಷಿಗಳೇ, ಇದು ನಮ್ಮ ಹೆಮ್ಮೆಯ ಹಾಗೂ ಉನ್ನತಿಯ ದಿನವಾಗಿದೆ, ನಿಮಗೆಲ್ಲರಿಗೂ ಸುರಾಖ ಹಾಗೂ ಅವನ ಗುಂಪು ನಮ್ಮನ್ನು ಬಿಟ್ಟು ಹೋದದ್ದು ನೆನಪಿರಬಹುದು, ಹಾಗಾಗಿ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳ ಸ್ಪಷ್ಟವಾಗಿರಬೇಕು, ವಿರೋಧಿಗಳನ್ನು ಬಹಳ ನಿಖರವಾಗಿ ಎದುರಿಸಬೇಕು, ಗುರಿ ತಪ್ಪದೆ ದಾಳಿ ಮಾಡಬೇಕು. ದ್ವಂದ್ವ ಯುದ್ಧದಲ್ಲಿ ರಬೀಅರ ಮಕ್ಕಳು ಸ್ವಲ್ಪ ಆತುರತೆಯಲ್ಲಿ ಇದ್ದ ಕಾರಣವಾಗಿತ್ತು ಅವರು ಸೋತದ್ದು” ಎಂದು ಕೂಗಿ ಹೇಳಿದರು.

ಈ ಕೂಗಿ ಕೇಳಿ, ಪ್ರವಾದಿಯವರು ﷺ “ಈ ನೌಫಲನ್ನು ನಮ್ಮ ಅಧೀನಕ್ಕೆ ಬರುವ ಹಾಗೆ ಮಾಡು ಪ್ರಭು” ಎಂದು ಪ್ರಾರ್ಥನೆ ಮಾಡಿದರು. ಯುದ್ಧ ಕಳೆದು ನಂತರದ ಹುಡುಕಾಟದಲ್ಲಿ ಅಲಿಯವರ ◌ؓ ಕೈಯಿಂದ ನೌಫಲ್ ಕೊಲೆಯಾದ ವಿಷಯವು ಪ್ರವಾದಿಯವರಿಗೆ ﷺ ತಿಳಿಯಿತು. ತಕ್ಷಣವೇ ಪ್ರವಾದಿಯವರು ﷺ ಅವನ ವಿಷಯದಲ್ಲಿ ನನ್ನ ಪ್ರಾರ್ಥನೆಯನ್ನು ಪರಿಗಣಿಸಿದ ಅಲ್ಲಾಹನೇ ನಿನಗಾಗಿದೆ ಸರ್ವ ಸ್ತುತಿ ಎಂದು ಹೇಳಿದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-239/365

ರಣರಂಗದಲ್ಲಿ ಬಿರುಸಿನ ಹೋರಾಟ ನಡೆಯುತ್ತಿತ್ತು. ಅದರ ನಡುವೆ ಪ್ರವಾದಿಯವರು ಅಲಿಯವರನ್ನು ◌ؓ ಕರೆದು ನೆಲದಲ್ಲಿ ಬಿದ್ದಿರುವ ಮಣ್ಣಿನಿಂದ ಒಂದು ಹಿಡಿ ಮಣ್ಣು ತರಲು ಹೇಳಿದಾಗ, ಅಲಿಯವರು ◌ؓ ಒಂದು ಹಿಡಿ ಮಣ್ಣು ಮಿಶ್ರಿತ ಮರಳನ್ನು ತಂದು ಪ್ರವಾದಿಯವರ ﷺ ಕೈಗೆ ಕೊಟ್ಟರು. ಪ್ರವಾದಿಯವರು ﷺ ಅದನ್ನು ಕೈಯಲ್ಲಿ ಹಿಡಿದು “ವಿರೋಧಿಗಳ ಮುಖವನ್ನು ಕಪ್ಪು ಗೊಳಿಸು ಪ್ರಭು, ಅವರ ಎದೆಯಲ್ಲಿ ಭಯ ಹಾಕು, ಅವರ ಕಾಲುಗಳು ನಡುಗುವ ಹಾಗೆ ಮಾಡು ಪ್ರಭು” ಎಂದು ಪ್ರಾರ್ಥಿಸಿ, ವಿರೋಧಿಗಳ ಸೈನ್ಯದ ಕಡೆಗೆ, ಕೈಯ್ಯಲ್ಲಿದ್ದ ಮಣ್ಣನ್ನು ಎಸೆದರು. ನಂತರ ತಮ್ಮ ಅನುಚರರಲ್ಲಿ, ಇನ್ನಷ್ಟು ಉತ್ಸಾಹದಿಂದ ಹೊರಡಲು ಹೇಳಿದರು. ಪ್ರವಾದಿಯವರು ﷺ ವಿಧಿ ಇಲ್ಲದೆ ಆಗಿತ್ತು ಈ ಹೋರಾಟ ಭೂಮಿಗೆ ಬಂದದ್ದು, ಶಾಂತಿಯಿಂದ ಮಕ್ಕಾದಲ್ಲಿ ಜೀವಿಸಲು ಬಿಡದಿದ್ದಾಗ, ಮದೀನಕ್ಕೆ ಪಲಾಯನ ಮಾಡಿ ಹೋದರೂ, ಅಲ್ಲಿಯೂ ಕೂಡ ನೆಮ್ಮದಿಯಿಂದ ಜೀವಿಸಲು ಬಿಡದಿದ್ದಾಗ, ಮದೀನಕ್ಕೆ ಹತ್ತಿರವಿರುವ ಸ್ಥಳದಲ್ಲಿ ಅನಿವಾರ್ಯವಾಗಿ ವಿರೋಧಿಗಳನ್ನು ಎದುರಿಸಲೇ ಬೇಕಾಯಿತು. ಮೂರು ಪಟ್ಟು ಅಧಿಕ ಸೈನ್ಯವನ್ನು ಎದುರಿಸುತ್ತಿರುವ ಸಂದರ್ಭಲ್ಲೂ ವಿರೋಧಿಗಳು ಯುದ್ಧದಿಂದ ಬಿಟ್ಟೋಗಬೇಕು, ಯುದ್ಧ ಅತೀ ವೇಗವಾಗಿ ನಿಲ್ಲಬೇಕು ಎಂದಾಗಿತ್ತು ಪ್ರವಾದಿಯವರು ﷺ ಹಂಬಲಿಸುತ್ತಿದ್ದದ್ದು.
ಪ್ರವಾದಿಯವರು ﷺ ಎಸೆದ ಒಂದು ಹಿಡಿ ಮರಳಿಂದ ಯಾರಿಗೂ ಪಾರಾಗಲು ಸಾಧ್ಯವಾಗಿಲ್ಲ, ಅದು ಅವರ ಮೇಲೆ ಬಿದ್ದ ಮರುಕ್ಷಣವೇ ಅವರ ಕಣ್ಣಿಗೆ ಕತ್ತಲು ಬಾಧಿಸಿದ ಹಾಗೆ ಹಿಂತಿರುಗಿ ಓಡಲು ಆರಂಭಿಸಿದರು. ಆದರೂ ಮುಸ್ಲಿಮರು ಅವರನ್ನು ಬಿಡಲಿಲ್ಲ, ಅವನ್ನು ಬೆನ್ನಟ್ಟಿ ಹೋಗಿ ಕೆಲವರನ್ನು ಕೊಲೆ ಮಾಡಿದರೆ, ಕೆಲವರನ್ನು ಬಂಧಿಸಿದರು.

ಹಕೀಮುಬಿನ್ ಹಿಝಾಂರು ಇಸ್ಲಾಮಿನ ವಿರುದ್ಧ ಬದ್ರ್’ನಲ್ಲಿ ಹೋರಾಡಿ ನಂತರ ಮುಸ್ಲಿಮಾದ ವ್ಯಕ್ತಿಯಾಗಿರುವರು, ಅವರಲ್ಲಿ ಕೆಲವೊಮ್ಮೆ ಬದ್ರ್ ಯುದ್ಧದ ಬಗ್ಗೆ ಕೇಳುವಾಗ, ವಯ್ಯಸ್ಸಿನಲ್ಲಿ ಹಿರಿಯ ವ್ಯಕ್ತಿ ಆಗಿದ್ದ ಕಾರಣ ಜಾಸ್ತಿ ಏನೂ ಹೇಳಲು ಇಷ್ಟ ಪಡುತ್ತಿರಲಿಲ್ಲ. ಆದರೆ ಒಂದು ದಿನ ಜಾಸ್ತಿ ಒತ್ತಾಯ ಪಡಿಸಿದಾಗ, “ನಾವು ಪರಸ್ಪರ ಬಿರುಸಿನಿಂದ ಹೋರಾಡುತ್ತಿದ್ದ ಸಂದರ್ಭದಲ್ಲಿ, ಪಾತ್ರೆಯಿಂದ ಕಲ್ಲು ಮಣ್ಣುಗಳು ಬೀಳುವ ಹಾಗೆ, ಆಕಾಶದಿಂದ ಒಂದು ಭಯಾನಕ ಶಬ್ದ ಕೇಳಲು ಸಾಧ್ಯವಾಯಿತು, ಅದು ಪ್ರವಾದಿಯವರು ﷺ ಮಣ್ಣು ಎಸೆದದ್ದು ಆಗಿತ್ತು, ಆ ಶಬ್ದದಿಂದ ನಮ್ಮ ಎದೆಯಲ್ಲಿ ನಡುಕ ಉಂಟಾಯಿತು, ಅದನ್ನು ಕೇಳಿದ ತಕ್ಷಣವೇ ನಾವು ಹಿಂತಿರುಗಿ ಓಡಿ ಹೋದೆವು” ಎಂದಾಗಿತ್ತು ಅವರು ಹೇಳಿರುವುದಾಗಿ, ನೌಫಲ್ ಬಿನ್ ಮುಆವಿಯತುದ್ದೈಲಿಯವರು ಹೇಳಿದ್ದು.

ಪ್ರವಾದಿಯವರು ﷺ ಮಣ್ಣು ಎಸೆದ ಘಟನೆಯನ್ನು ಉದ್ದೇಶಿಸಿ, ಪವಿತ್ರ ಕುರ್’ಆನಿನ ಎಂಟನೇ ಅಧ್ಯಾಯ ಅಲ್ ಅಂಫಾಲ್’ನ ಹದಿನೇಳನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು. “ವಾಸ್ತವದಲ್ಲಿ ಅವರನ್ನು ಕೊಂದದ್ದು ನೀವಲ್ಲ, ಅಲ್ಲಾಹನಾಗಿದ್ದಾನೆ. ನೀವು ಎಸೆದಾಗ, ವಾಸ್ತವದಲ್ಲಿ ಎಸೆದದ್ದು ನೀವಲ್ಲ ಅಲ್ಲಾಹನಾಗಿರುವನು, ಅದು ಸತ್ಯವಿಶ್ವಾಸಿಗಳನ್ನು ಮಹತ್ವದ ಪರೀಕ್ಷೆಯೊಂದಿಗೆ ಪ್ರತ್ಯೇಕ ಗೊಳಿಸಿದ್ದಾಗಿತ್ತು, ಅಲ್ಲಾಹನು ಎಲ್ಲವನ್ನೂ ಕೇಳುವವನು, ತಿಳಿಯುವವನು ಆಗಿರುವನು.”

ಈ ಘಟನೆಯು ಸ್ಪಷ್ಟವಾದ ಮುಅ್’ಜಿಝತ್ ಅಥವಾ ಪ್ರವಾದಿಯವರಿಂದ ﷺ ಉಂಟಾದ ವಿಸ್ಮಯವಾಗಿದೆ. ಒಂದು ಹಿಡಿ ಮಣ್ಣನ್ನು ಒಂದು ಸೈನ್ಯದ ಮುಂದೆ ಎಸೆದಾಗ, ಎಲ್ಲರ ಮೇಲೂ ಅದು ಪ್ರಭಾವ ಬೀರಿ, ಅವರು ಹೆದರಿ ಓಡಿ ಹೋದರು. ಇಲ್ಲಿ ಭೌತಿಕ ಕಾರಣಗಳು ಹಾಗೂ ಮಾರ್ಗಗಳನ್ನು ಪರಿಗಣಿಸಿದಾಗಲೂ, ವಾಸ್ತವದಲ್ಲಿ, ಸಾರ್ವಭೌಮತ್ವದಿಂದ ಎಲ್ಲವನ್ನೂ ಕಾರ್ಯಗತಗೊಳಿಸುವವನು ಅಲ್ಲಾಹನು ಮಾತ್ರ. ಹಾಗಾಗಿ ಎಲ್ಲಾ ಸಂದರ್ಭದಲ್ಲೂ ಅವನ ಬಗ್ಗೆ ಇರುವ ಚಿಂತನೆಯೂ ಅನಿವಾರ್ಯವಾಗಿದೆ. ಪ್ರವಾದಿಯವರ ﷺ ಸೈನಿಕ ಕಾರ್ಯಾಚರಣೆಯಿಂದಲೂ ತಿಳಿಯುವುದು ಇದೇ ಆದರ್ಶ ಆಗಿರುತ್ತದೆ.

ಪ್ರವಾದಿಯವರು ﷺ ಎಸೆದದ್ದದ್ದನ್ನು, ಅಲ್ಲಾಹನು ಎಸೆದದ್ದು ಎಂದಾಗಿದೆ ಕುರ್’ಆನ್ ತಿಳಿಸಿದ್ದು. ಇಂತಹ ಸಾಂಕೇತಿಕ ಪ್ರಯೋಗದ ಒಳಾರ್ಥವನ್ನು ತಿಳಿದುಕೊಳ್ಳಲು ನಮಗೆ ಸಾಧ್ಯವಾಗಬೇಕು. ಒಬ್ಬರು ನೀಡಿದ ದಾನದಲ್ಲಿ, ವಾಸ್ತವವಾಗಿ ನೀಡಿದ ಆ ವ್ಯಕ್ತಿಯನ್ನೂ, ಅದಕ್ಕೆ ಕಾರಣವಾದ ಸೃಷ್ಟಿಕರ್ತನನ್ನು ಸೇರಿಸಿ ಹೇಳಬಹುದು. ಇವೆರಡು ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡರೂ ವಾಸ್ತವದಲ್ಲಿ ಎರಡೂ ಕೂಡ ಒಂದೇ ಆಗಿದೆ. ಮದುವೆ ಕಳೆದು ಹಲವಾರು ವರ್ಷಗಳಾದರೂ ಮಕ್ಕಳಾಗದ ಕಾರಣಕ್ಕೆ ಒಬ್ಬರು ವೈದ್ಯರ ಬಳಿ ಹೋದಾಗ, ಅವರು ಕೆಲವು ಔಷಧಿಗಳನ್ನು ಕೊಡುವರು, ಅದರ ಕಾರಣದಿಂದ ಆ ದಂಪತಿಗಳಿಗೆ ಸಂತಾನ ಭಾಗ್ಯ ಸಿಕ್ಕಿತು, ಹಾಗಾಗಿ ಅವರು ನಮಗೆ ಇಷ್ಟು ವರ್ಷದ ನಂತರ ಸಂತಾನ ಭಾಗ್ಯವನ್ನು ನೀಡಿದ ಅಲ್ಲಾಹನಿಗೆ ಸ್ತುತಿ ಎಂದು ಹೇಳುವರು, ಇನ್ನೊಮ್ಮೆ ಆ ಔಷಧಿ ನೀಡಿದ ವೈದ್ಯರನ್ನು ತೋರಿಸಿ, ನಮಗೆ ಈ ಮಗುವನ್ನು ನೀಡಿದ್ದು ಇವರಾಗಿದ್ದಾರೆ ಎಂದು ಹೇಳುವರು, ಅದೇ ರೀತಿ ಮತ್ತೊಮ್ಮೆ ಆ ಔಷಧಿಯನ್ನು ತೋರಿಸಿ ನಮ್ಮ ಕನಸನ್ನು ನನಸು ಮಾಡಿದ್ದು ಈ ಔಷಧಿ ಆಗಿದೆ ಎಂದು ಹೇಳುವರು. ಈ ಮೂರು ಉತ್ತರವೂ ಕೂಡ ಸರಿಯಾಗಿದೆ, ಮೊದಲು ತಿಳಿಸಿದ್ದು ಅಂತಿಮ ಸತ್ಯ, ಎರಡನೇ ಹಾಗೂ ಮೂರನೇದು ಅದಕ್ಕೆ ಕಾರಣವಾದ ಪ್ರಯೋಗ ಮಾತ್ರ. ಅಲ್ಲದೆ ಅದರಲ್ಲಿ ಯಾವುದೇ ತಪ್ಪಾಗಲಿ, ಅಲ್ಲಾಹನೊಂದಿಗೆ ಸಾಮೀಪ್ಯ ತೋರಿಸಿದ್ದು ಆಗಲಿ ಏನು ಇಲ್ಲ. ಕೇವಲ ಪದಗಳ ಮೂಲಕ ಅರ್ಥ ಮಾಡಿಕೊಳ್ಳುವಾಗ ಆಗಿದೆ ಸಮಸ್ಯೆಗಳು ಬರುವುದು.

ನಾವು ಪುನಃ ರಣರಂಗಕ್ಕೆ ವಾಪಸು ಮರಳೋಣ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-240/365

ಪ್ರವಾದಿಯವರ ﷺ ಅನುಮತಿಯೊಂದಿಗೆ, ಅನುಚರರು ರಣರಂಗದಲ್ಲಿ ಆವೇಶದಿಂದ ಘೋಷಣೆ ಕೂಗಿದರು. ಅಲ್ಲಾಹನ ದಾರಿಯಲ್ಲಿ ಹುತಾತ್ಮರಾಗಬೇಕು, ಆ ಕಾರಣದಿಂದ ಸ್ವರ್ಗಕ್ಕೆ ಪ್ರವೇಶ ಮಾಡಬೇಕು, ಎಂದು ಹೇಳುತ್ತಿದ್ದರು. ಈ ಮಾತು ಅವರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು, ಅಲ್ಲಾಹನ ದಾರಿಯಲ್ಲಿ ಹುತಾತ್ಮರಾಗಿ ಸ್ವರ್ಗಕ್ಕೆ ತಲುಪಬೇಕು ಎಂಬ ಲಕ್ಷ್ಯ ಮಾತ್ರ ನಮ್ಮ ಮುಂದೆ ಇರುವುದು, ರಣರಂಗದಲ್ಲಿ ನನ್ನ ನೆತ್ತರು ಸುರಿಸಲು ನಾನೇಕೆ ಕಾದು ನಿಲ್ಲಬೇಕು.? ಎಂದು ಕೆಲವು ಅನುಚರರು ಆಲೋಚಿಸಿದರು, ಇನ್ನೂ ಯಾವುದೇ ಕಾರಣಕ್ಕೂ ತಡವಾಗಬಾರದು ಎಂದು ಇನ್ನಷ್ಟು ಉತ್ತೇಜಿತರಾದರು. ಇನ್ನೂ ನಾವು ತಡ ಮಾಡಿದಷ್ಟು ನಮಗೆ ಸ್ವರ್ಗ ಸೇರಲು ತಡವಾಗುತ್ತೆ ಎಂದು ಪ್ರತಿಯೊಂದು ಅನುಚರರೂ ಚಿಂತಿಸಲು ಆರಂಭಿಸಿದರು.

ಇದರ ಬಗ್ಗೆ ಪವಿತ್ರ ಕುರ್’ಆನಿನ ಮೂರನೇ ಅಧ್ಯಾಯ ಆಲುಇಮ್ರಾನ್’ನ ನೂರಮೂವತ್ಮೂರನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು, “ನಿಮ್ಮ ಪ್ರಭುವಿನಿಂದ, ಪಾಪ ಮೋಚನೆಯನ್ನೂ, ಆಕಾಶ ಭೂಮಿಯಷ್ಟು ವಿಶಾಲವಾದ ಸ್ವರ್ಗವನ್ನೂ ಪಡೆಯಲು ಅತೀ ವೇಗವಾಗಿ ಮುಂದೆ ಬನ್ನಿರಿ, ಭಕ್ತಿಯಿರುವವರಿಗಾಗಿ ತಯಾರಿಸಿದ್ದಾಗಿದೆ ಅದು.” ಈ ಸೂಕ್ತವನ್ನು ಕೇಳಿದ ತಕ್ಷಣ, ತಾನು ತಿನ್ನುತ್ತಿದ್ದ ಖರ್ಜುರವನ್ನೂ ಎಸೆದು ರಣರಂಗಕ್ಕೆ ಓಡಿ ಹೋದದ್ದು, ಆ ತಿನ್ನುವಷ್ಟು ಸಮಯವೂ ಕೂಡ ನನ್ನ ಸ್ವರ್ಗಕ್ಕೆ ಬಹಳ ತಡವಾಗಬಹುದು ಎಂದು ಆಲೋಚಿಸಿಯಾಗಿತ್ತು. ಉಮೈರುಬಿನ್ ಅಲ್ ಹುಮಾಂ ನಂತರ ತಡಮಾಡದೆ ಮುಂದಕ್ಕೆ ಹೊರಟರು ಆ ಸಮಯದಲ್ಲಿ ಹಾಡಿದ ಸಾಲುಗಳು ಈ ರೀತಿಯಾಗಿದೆ. “ರಕ್’ಳನ್ ಇಲಲ್ಲಾಹಿ ಬಿ ಗೈರಿ ಸಾದಿ……………ಗೈರಿತ್ತುಖಾ ವಲ್ ಬಿರ್’ರಿ ವರ್’ರಶಾದಿ.”

(ಯಾವುದೇ ದಾರಿಯನ್ನು ಆಲೋಚಿಸದೆ ಅಲ್ಲಾಹನ ಮಾರ್ಗದಲ್ಲಿ ಸಮರ್ಪಿಸಿದೆನು, ಪರಲೋಕದ ಮೋಕ್ಷವನ್ನು, ಭಕ್ತಿಯಿಂದ ರಣರಂಗದಲ್ಲಿ ಸಹಿಸಿಕೊಂಡೆನು, ಯಾವುದೇ ಭರವಸೆಯು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಧರ್ಮನಿಷ್ಠೆ, ಒಳ್ಳೆಯತನ ಹಾಗೂ ಒಳ್ಳೆಯ ಭಯವನ್ನು ಹೊರತುಪಡಿಸಿ.”

ರಣರಂಗದಲ್ಲಿ ಸ್ವರ್ಗದ ಅನುಭವವಾದ ಮತ್ತೊಂದು ಚಿತ್ರಣ ಈ ರೀತಿಯಾಗಿದೆ, ಪ್ರವಾದಿಯವರು ﷺ, ಹಾರಿಸತ್ ಬಿನ್ ಸುರಾಖರನ್ನು ಒಮ್ಮೆ ನೋಡಿ, ಈಗ ನಿನ್ನ ಸ್ಥಿತಿ ಏನು.? ಎಂದು ಕೇಳಿದಾಗ, ಖಂಡಿತವಾಗಿಯೂ ನಾನು ಅಲ್ಲಾಹನ ಮೇಲೆ ಸಂಪೂರ್ಣ ಭರವಸೆ ಇಟ್ಟಿರುತ್ತೇನೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ನಿನ್ನ ಮಾತಿನ ನಿಜವಾದ ಅರ್ಥ ಏನೆಂದು ನಿನಗೆ ಗೊತ್ತೇ.? ಎಲ್ಲದಕ್ಕೂ ಅದರದೇ ಆದ ಕೆಲವು ಅರ್ಥಗಳಿರುತ್ತೆ ನಿನ್ನ ಮಾತಿನ ಅರ್ಥವೇನು.? ಎಂದು ಪ್ರವಾದಿಯವರು ﷺ ಪುನಃ ಕೇಳಿದಾಗ.
ಹಾರಿಸರು “ಪ್ರವಾದಿಯವರೇ ﷺ, ನಾನು ನಶ್ವರ ಲೋಕವನ್ನು ತ್ಯಜಿಸಿದೆನು, ರಾತ್ರಿ ನಿದ್ರೆಗೆಟ್ಟು, ಹಗಲು ಹೊತ್ತಿನಲ್ಲಿ ಉಪವಾಸ ಹಿಡಿದು, ಅಲ್ಲಾಹನ ಸಿಂಹಾಸನ ಹಾಗೂ ಸ್ವರ್ಗವಾಸಿಗಳ ಸಂತೋಷವನ್ನೂ, ನರಕವಾಸಿಗಳ ದುಃಖವನ್ನು ನೋಡುತ್ತಿರುವ ಹಾಗೆ” ಎಂದು ಹೇಳಿದರು.
ಅದಕ್ಕೆ ಪ್ರವಾದಿಯವರು ﷺ ಸರಿ ಆಗಿದ್ದರೆ, ನಿನ್ನ ಮಾತಿನ ಪ್ರಕಾರ ಅಲ್ಲಾಹನು ಮನಸ್ಸಿನಲ್ಲಿ ನೈಜವಿಶ್ವಾಸವನ್ನು ನೀಡಿದ ವ್ಯಕ್ತಿಯಾಗಿರುವೆ ನೀನು ಎಂದು ಹೇಳಿದಾಗ, ಹಾರಿಸರು ನನಗೆ ಹುತಾತ್ಮನಾಗಬೇಕು ಅದಕ್ಕಾಗಿ ನೀವು ಪ್ರಾರ್ಥನೆ ನಡೆಸಿರಿ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಸಮ್ಮತಿಸಿದರು.

ಪ್ರವಾದಿಯವರ ﷺ ಪ್ರಾರ್ಥನೆಯಂತೆ ಅನ್ಸಾರಿಗಳಲ್ಲಿ (ಮದೀನಾ ನಿವಾಸಿಗಳಲ್ಲಿ) ಮೊದಲು ಹುತಾತ್ಮರಾದ ವ್ಯಕ್ತಿ ಹಾರಿಸ ಆಗಿದ್ದರು. ನೀರು ಕುಡಿಯುತ್ತಿದ್ದ ಸಂದರ್ಭದಲ್ಲಿ ಶತ್ರುವಿನಿಂದ ಸಿಕ್ಕಿದ ಬಲವಾದ ಏಟಿನ ಕಾರಣ, ಹಾರಿಸರು ರಣರಂಗದಲ್ಲೇ ಹುತಾತ್ಮರಾದರು. ಯುದ್ಧ ಕಳೆದು ಮದೀನಕ್ಕೆ ತಲುಪಿದ ಪ್ರವಾದಿಯವರಲ್ಲಿ ﷺ, ಹಾರಿಸರ ತಾಯಿ ಬಂದು “ಓ ಪ್ರವಾದಿಯವರೇ ﷺ, ನನ್ನ ಮಗ, ನನಗೆ ಪ್ರಾಣಕ್ಕಿಂತ ಹೆಚ್ಚು ಇಷ್ಟ ಎಂದು ನಿಮಗೆ ಗೊತ್ತಿದೆಯಲ್ಲವೇ.? ಅವನ ಯೋಚನೆಯಲ್ಲಿ ಅಳಬೇಕೆಂದು ಅನಿಸಿದರೂ, ನಿಮ್ಮಲ್ಲಿ ಒಂದು ಬಾರಿ ಅನುಮತಿ ಕೇಳಬೇಕೆಂದು ಬಂದಿರುವೆನು, ಅವನು ಸ್ವರ್ಗವಾಸಿಯಾಗಿದ್ದರೆ ನನಗೆ ಯಾವುದೇ ಬೇಸರವಿಲ್ಲ, ಅದು ಅವನಿಗೆ ಅಲ್ಲಾಹನು ನೀಡಿದ ಪ್ರತಿಫಲ ಎಂದು ಸಂತೋಷ ಪಡುತ್ತೇನೆ, ಆದರೆ ಅವನು ನರಕವಾಸಿಯಾಗಿದ್ದರೆ, ನನ್ನ ಕೊನೆಯುಸಿರು ಇರುವವರೆಗೂ ಅಳದೆ ಇರಲು ಹೇಗೆ ಸಾಧ್ಯ.? ಎಂದು ಕೇಳಿದರು”

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-241/365

ಹಾರಿಸರ ◌ؓ ತಾಯಿಯಲ್ಲಿ ಪ್ರವಾದಿಯವರು ﷺ, ಇದೇನು ಹೇಳುತ್ತಿದ್ದೀರಿ.? ಸ್ವರ್ಗ ಒಂದಲ್ಲ ಹಲವಾರು ಇದೆ, ಅವುಗಳಲ್ಲಿ ಉನ್ನತ ದರ್ಜೆಯಲ್ಲಿರುವುದು ಜನ್ನಾತುಲ್ ಫಿರ್’ದೌಸ್ ಎಂಬ ಸ್ವರ್ಗವಾಗಿದೆ, ಈಗ ಹಾರಿಸ್ ◌ؓ ಇರುವುದು ಆ ಜನ್ನಾತುಲ್ ಫಿರ್’ದೌಸ್’ನಲ್ಲಿ ಎಂದು ಹೇಳಿ ಸಮಾಧಾನ ಪಡಿಸಿದರು. ಅದನ್ನು ಕೇಳಿ ಹಾರಿಸರ ತಾಯಿ, ಸಂತೋಷದಿಂದ ಹಿಂತಿರುಗಿ ಹೋದರು.

ಸೀರತುಲ್ ಹಲಬಿಯಿಲ್ ಎಂಬ ಗ್ರಂಥದಲ್ಲಿ ಉಲ್ಲೇಖದ ಪ್ರಕಾರ, ಪ್ರವಾದಿಯವರು ﷺ ಒಂದು ಪಾತ್ರೆಯಲ್ಲಿ ನೀರು ತರಿಸಿ, ಅದರೊಳಗೆ ತಮ್ಮ ಕೈ ಹಾಕಿ ಅದರಿಂದ ಸ್ವಲ್ಪ ನೀರು ತೆಗೆದು ತಾನೂ ಕುಡಿದು, ಉಳಿದ ನೀರನ್ನು ಹಾರಿಸರ ◌ؓ ತಾಯಿಗೆ ಕೊಟ್ಟರು. ಅವರು ಅದರಿಂದ ಸ್ವಲ್ಪ ನೀರನ್ನು ಕುಡಿದು, ತನ್ನ ಮಗಳಿಗೆ ಕುಡಿಯಲು ಕೊಟ್ಟರು. ಅವರೂ ಕೂಡ ಸ್ವಲ್ಪ ನೀರನ್ನು ಕುಡಿದರು ನಂತರ, ಪ್ರವಾದಿಯವರ ﷺ ಅನುಮತಿ ಮೇರೆಗೆ ಅವರಿಬ್ಬರ ಬಟ್ಟೆಯ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಲಾಯಿತು. ಇದರಿಂದ ಬಹಳಷ್ಟು ಸಂತುಷ್ಟರಾದ ಹಾರಿಸರ ◌ؓ ತಾಯಿ, ಹಾಗೂ ಸಹೋದರಿಯು ಸಂತೋಷದಿಂದ ಹಿಂತಿರುಗಿ ಹೋದರು.

ರಣರಂಗದಲ್ಲಿ ಪ್ರವಾದಿಯವರ ﷺ ಅನುಚರರು ತೋರಿಸುತ್ತಿದ್ದ ಆವೇಶದ ಬಗ್ಗೆ ತಿಳಿಯೋಣ. ಅಫ್’ರಾಯಿನ ಮಗನಾದ ಔಫ್ ಬಿನ್ ಅಲ್ ಹಾರಿಸ್ ◌ؓ ಪ್ರವಾದಿಯವರ ﷺ ಬಳಿ ಬಂದು, ಸೇವಕ ಏನು ಮಾಡಿದರೆ ಅಲ್ಲಾಹನಿಗೆ ಅತೀ ಹೆಚ್ಚು ಸಂತೋಷವಾಗುತ್ತೆ.? ಎಂದು ಕೇಳಿದಾಗ, ಪ್ರವಾದಿಯವರು ﷺ ಕವಚವಿಲ್ಲದೆ ರಣರಂಗದಲ್ಲಿ ಹೊರಾಡುವಾಗ ಆಗಿರುತ್ತದೆ ಎಂದು ಹೇಳಿದರು.
ಅದನ್ನು ಕೇಳಿ, ಔಫ್ ◌ؓ ತಾನು ಧರಿಸಿದ್ದ ಕವಚವನ್ನು ಕಳಚಿ ರಣರಂಗಕ್ಕೆ ಇಳಿದು, ಭೀಕರವಾದ ಹೋರಾಟ ನಡೆಸಿ ಹುತಾತ್ಮರಾದರು. ರಣರಂಗವು ಬಹಳಷ್ಟು ತ್ಯಾಗಕ್ಕೆ ಸಾಕ್ಷಿಯಾಯಿತು, ಬಹಳಷ್ಟು ನಿಸ್ವಾರ್ಥ ಸಮಾರ್ಪಣೆಗೆ ಕಾರಣವಾಯಿತು, ಅಂತ್ಯವಿಲ್ಲದ ನಿಷ್ಕಲ್ಮಶ ವಿಶ್ವಾಸದ ಎದುರು ಗೆಲುವಿನ ಕಡೆಗೆ ಬರಲೇ ಬೇಕಾಯಿತು. ಸಣ್ಣ ವಯಸ್ಸಿನ ಯುವಕನಾಗಿದ್ದ ಅಲಿಯವರು ◌ؓ ಮಾತ್ರ, ಇಪ್ಪತ್ತೆರಡು ಯೋಧರನ್ನು ರಣರಂಗದಲ್ಲಿ ಸಾಯಿಸಿದ್ದರು.

ಧೈರ್ಯ, ಸಾಹಸದೊಂದಿಗೆ ಬದ್ರ್ ರಣರಂಗದಲ್ಲಿ ಬಹಳ ಉತ್ಸಾಹದಿಂದ ಹೋರಾಟ ಮಾಡಿದ್ದ ಮತ್ತೊಂದು ವ್ಯಕ್ತಿಯಾಗಿದ್ದರು ಪ್ರವಾದಿಯವರ ﷺ ಚಿಕ್ಕಪ್ಪ ಹಂಝ ◌ؓ. ಅಬ್ದುರಹ್ಮಾನ್ ಬಿನ್ ಔಫ್ ◌ؓ ಹೇಳುವುದು ಕಾಣಬಹುದು, ಯುದ್ಧ ಖೈದಿಯಾಗಿ ಶತ್ರುಗಳಿಂದ ಉಮಯ್ಯತ್ ಬಿನ್ ಖಲಫ್’ರನ್ನು ಬಂಧಿಸಿದಾಗ, ನಿಮ್ಮ ಗುಂಪಿನಲ್ಲಿ, ಎದೆಯ ಮೇಲೆ ಉಷ್ಟ್ರಪಕ್ಷಿಯ ಗರಿಗಳ ಗುರುತು ಇಟ್ಟುಕೊಂಡಿದ್ದ ವ್ಯಕ್ತಿ ಯಾರೆಂದು ಕೇಳಿದರು. ಅದು ಹಂಝ ಬಿನ್ ಅಬ್ದುಲ್’ಮುತ್ತಲಿಬ್ ಎಂದು ನಾವು ಹೇಳಿದಾಗ, ಆ ವ್ಯಕ್ತಿಯೇ ಆಗಿರುವರು ನಮ್ಮನ್ನು ಈ ಅವಸ್ಥೆಗೆ ತಂದು ನಿಲ್ಲಿಸಿದ್ದು ಎಂದು ಉಮಯ್ಯತ್ ಹೇಳಿದನು.

ಹಂಝರವರ ◌ؓ ಬಗ್ಗೆ ಅಲಿಯವರು ◌ؓ ಹೇಳುವುದು ಕಾಣಬಹುದು, ಬದ್ರ್ ದಿನದಂದು ಮಧ್ಯಾಹ್ನದ ನಂತರ ಸೈನಿಕರೊಂದಿಗೆ ಬಿರುಸಿನ ಹೋರಾಟ ನಡೆಯಲು ಆರಂಭಿಸಿತು, ಅಷ್ಟರಲ್ಲಿ ಸಅದ್ ಬಿನ್ ಖೈಸಮ ◌ؓ ಹಾಗೂ ಇನ್ನೊಬ್ಬ ಶತ್ರುಗಳ ಸೈನಿಕನೊಬ್ಬನ ನಡುವೆ ಯುದ್ಧ ಆರಂಭವಾಯಿತು, ಕೊನೆಗೆ ಆ ಯುದ್ಧದಲ್ಲಿ ಸಅದ್ ◌ؓ ಹುತಾತ್ಮರಾದರು. ಮುಖಕ್ಕೆ ಉಕ್ಕಿನ ಕವಚ ಧರಿಸಿದ್ದ ಕಾರಣ ಆ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ, ಕೊನೆಗೆ ಆ ವ್ಯಕ್ತಿಯು ನನಗೆ ದ್ವಂದ ಯುದ್ಧಕ್ಕೆ ಆಹ್ವಾನ ನೀಡಿ, ನನ್ನ ಬಳಿ ಬಂದು ನಿಂತನು. ಅವನು ನನಗಿಂತ ಅಧಿಕ ಎತ್ತರವಿದ್ದ ಕಾರಣ ಅವನೊಂದಿಗೆ ಯುದ್ಧ ಮಾಡಲು ಇಷ್ಟಪಡಲಿಲ್ಲ, ಆದರೆ ಅವನು ನನ್ನಿಂದ ಭಯ ಪಟ್ಟು ಓಡಿ ಹೋಗುತ್ತಿದ್ದೀಯ.? ಎಂದು ಕೇಳಿದಾಗ, ನಾನು ಅದಕ್ಕೆ ಓಡಿ ಹೋಗುತ್ತಿಲ್ಲ ಇನ್ನೊಂದು ಕಡೆಗೆ ಯುದ್ಧ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದೆನು.

ಅವನು ನನ್ನನ್ನು ಬಿಡದೆ, ನನ್ನ ಮುಂದೆ ಬಂದು ನಿಂತು ಖಡ್ಗದಿಂದ ದಾಳಿ ಮಾಡಿದನು. ನಾನು ಗುರಾಣಿಯಿಂದ ತಡೆದಾಗ ಅವನ ಖಡ್ಗ ಕೆಳಗೆ ಬಿದ್ದಿತು, ನಾನು ಅವನ ಭುಜಕ್ಕೆ ದಾಳಿ ಮಾಡಿದಾಗ, ಅವನು ಸ್ವಲ್ಪ ಅಲುಗಾಡಿನು. ಹಾಗಾಗಿ ಅವನ ಮುಖದ ಕವಚಕ್ಕೆ ನನ್ನ ಖಡ್ಗ ತಾಗಿ ಎರಡು ತುಂಡಾಯಿತು, ತಕ್ಷಣವೇ ಹಿಂದಿನಿಂದ ನಾನು ಅಬ್ದುಲ್ ಮುತ್ತಲಿಬಿನ ಮಗ ನನ್ನ ಖಡ್ಗವನ್ನು ಎದುರಿಸು ಎಂಬ ಶಬ್ದ ಕೇಳಿಸಿತು, ಅದನ್ನು ಕೇಳಿ ನಾನು ತಕ್ಷಣವೇ ನನ್ನ ತಲೆಯನ್ನು ತಗ್ಗಿಸಿ ಬಾಗಿ ನಿಂತೆನು. ಅವರು ಬೀಸಿದ ಆ ಖಡ್ಗ ನೇರವಾಗಿ ಆ ಶತ್ರುವಿನ ಕತ್ತನ್ನು ಸೀಳಿ ಕವಚದ ಸಮೇತವಾಗಿ ಅವನ ತಲೆಯು ಕೆಳಗೆ ಬಿದ್ದಿತು. ನಾನು ತಿರುಗಿ ನೋಡಿದಾಗ ಅದು ಚಿಕ್ಕಪ್ಪ ಹಂಝ ◌ؓ ಆಗಿದ್ದರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Leave a Reply