Mahabba Campaign Part-241/365
ಹಾರಿಸರ ◌ؓ ತಾಯಿಯಲ್ಲಿ ಪ್ರವಾದಿಯವರು ﷺ, ಇದೇನು ಹೇಳುತ್ತಿದ್ದೀರಿ.? ಸ್ವರ್ಗ ಒಂದಲ್ಲ ಹಲವಾರು ಇದೆ, ಅವುಗಳಲ್ಲಿ ಉನ್ನತ ದರ್ಜೆಯಲ್ಲಿರುವುದು ಜನ್ನಾತುಲ್ ಫಿರ್’ದೌಸ್ ಎಂಬ ಸ್ವರ್ಗವಾಗಿದೆ, ಈಗ ಹಾರಿಸ್ ◌ؓ ಇರುವುದು ಆ ಜನ್ನಾತುಲ್ ಫಿರ್’ದೌಸ್’ನಲ್ಲಿ ಎಂದು ಹೇಳಿ ಸಮಾಧಾನ ಪಡಿಸಿದರು. ಅದನ್ನು ಕೇಳಿ ಹಾರಿಸರ ತಾಯಿ, ಸಂತೋಷದಿಂದ ಹಿಂತಿರುಗಿ ಹೋದರು.
ಸೀರತುಲ್ ಹಲಬಿಯಿಲ್ ಎಂಬ ಗ್ರಂಥದಲ್ಲಿ ಉಲ್ಲೇಖದ ಪ್ರಕಾರ, ಪ್ರವಾದಿಯವರು ﷺ ಒಂದು ಪಾತ್ರೆಯಲ್ಲಿ ನೀರು ತರಿಸಿ, ಅದರೊಳಗೆ ತಮ್ಮ ಕೈ ಹಾಕಿ ಅದರಿಂದ ಸ್ವಲ್ಪ ನೀರು ತೆಗೆದು ತಾನೂ ಕುಡಿದು, ಉಳಿದ ನೀರನ್ನು ಹಾರಿಸರ ◌ؓ ತಾಯಿಗೆ ಕೊಟ್ಟರು. ಅವರು ಅದರಿಂದ ಸ್ವಲ್ಪ ನೀರನ್ನು ಕುಡಿದು, ತನ್ನ ಮಗಳಿಗೆ ಕುಡಿಯಲು ಕೊಟ್ಟರು. ಅವರೂ ಕೂಡ ಸ್ವಲ್ಪ ನೀರನ್ನು ಕುಡಿದರು ನಂತರ, ಪ್ರವಾದಿಯವರ ﷺ ಅನುಮತಿ ಮೇರೆಗೆ ಅವರಿಬ್ಬರ ಬಟ್ಟೆಯ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಲಾಯಿತು. ಇದರಿಂದ ಬಹಳಷ್ಟು ಸಂತುಷ್ಟರಾದ ಹಾರಿಸರ ◌ؓ ತಾಯಿ, ಹಾಗೂ ಸಹೋದರಿಯು ಸಂತೋಷದಿಂದ ಹಿಂತಿರುಗಿ ಹೋದರು.
ರಣರಂಗದಲ್ಲಿ ಪ್ರವಾದಿಯವರ ﷺ ಅನುಚರರು ತೋರಿಸುತ್ತಿದ್ದ ಆವೇಶದ ಬಗ್ಗೆ ತಿಳಿಯೋಣ. ಅಫ್’ರಾಯಿನ ಮಗನಾದ ಔಫ್ ಬಿನ್ ಅಲ್ ಹಾರಿಸ್ ◌ؓ ಪ್ರವಾದಿಯವರ ﷺ ಬಳಿ ಬಂದು, ಸೇವಕ ಏನು ಮಾಡಿದರೆ ಅಲ್ಲಾಹನಿಗೆ ಅತೀ ಹೆಚ್ಚು ಸಂತೋಷವಾಗುತ್ತೆ.? ಎಂದು ಕೇಳಿದಾಗ, ಪ್ರವಾದಿಯವರು ﷺ ಕವಚವಿಲ್ಲದೆ ರಣರಂಗದಲ್ಲಿ ಹೊರಾಡುವಾಗ ಆಗಿರುತ್ತದೆ ಎಂದು ಹೇಳಿದರು.
ಅದನ್ನು ಕೇಳಿ, ಔಫ್ ◌ؓ ತಾನು ಧರಿಸಿದ್ದ ಕವಚವನ್ನು ಕಳಚಿ ರಣರಂಗಕ್ಕೆ ಇಳಿದು, ಭೀಕರವಾದ ಹೋರಾಟ ನಡೆಸಿ ಹುತಾತ್ಮರಾದರು. ರಣರಂಗವು ಬಹಳಷ್ಟು ತ್ಯಾಗಕ್ಕೆ ಸಾಕ್ಷಿಯಾಯಿತು, ಬಹಳಷ್ಟು ನಿಸ್ವಾರ್ಥ ಸಮಾರ್ಪಣೆಗೆ ಕಾರಣವಾಯಿತು, ಅಂತ್ಯವಿಲ್ಲದ ನಿಷ್ಕಲ್ಮಶ ವಿಶ್ವಾಸದ ಎದುರು ಗೆಲುವಿನ ಕಡೆಗೆ ಬರಲೇ ಬೇಕಾಯಿತು. ಸಣ್ಣ ವಯಸ್ಸಿನ ಯುವಕನಾಗಿದ್ದ ಅಲಿಯವರು ◌ؓ ಮಾತ್ರ, ಇಪ್ಪತ್ತೆರಡು ಯೋಧರನ್ನು ರಣರಂಗದಲ್ಲಿ ಸಾಯಿಸಿದ್ದರು.
ಧೈರ್ಯ, ಸಾಹಸದೊಂದಿಗೆ ಬದ್ರ್ ರಣರಂಗದಲ್ಲಿ ಬಹಳ ಉತ್ಸಾಹದಿಂದ ಹೋರಾಟ ಮಾಡಿದ್ದ ಮತ್ತೊಂದು ವ್ಯಕ್ತಿಯಾಗಿದ್ದರು ಪ್ರವಾದಿಯವರ ﷺ ಚಿಕ್ಕಪ್ಪ ಹಂಝ ◌ؓ. ಅಬ್ದುರಹ್ಮಾನ್ ಬಿನ್ ಔಫ್ ◌ؓ ಹೇಳುವುದು ಕಾಣಬಹುದು, ಯುದ್ಧ ಖೈದಿಯಾಗಿ ಶತ್ರುಗಳಿಂದ ಉಮಯ್ಯತ್ ಬಿನ್ ಖಲಫ್’ರನ್ನು ಬಂಧಿಸಿದಾಗ, ನಿಮ್ಮ ಗುಂಪಿನಲ್ಲಿ, ಎದೆಯ ಮೇಲೆ ಉಷ್ಟ್ರಪಕ್ಷಿಯ ಗರಿಗಳ ಗುರುತು ಇಟ್ಟುಕೊಂಡಿದ್ದ ವ್ಯಕ್ತಿ ಯಾರೆಂದು ಕೇಳಿದರು. ಅದು ಹಂಝ ಬಿನ್ ಅಬ್ದುಲ್’ಮುತ್ತಲಿಬ್ ಎಂದು ನಾವು ಹೇಳಿದಾಗ, ಆ ವ್ಯಕ್ತಿಯೇ ಆಗಿರುವರು ನಮ್ಮನ್ನು ಈ ಅವಸ್ಥೆಗೆ ತಂದು ನಿಲ್ಲಿಸಿದ್ದು ಎಂದು ಉಮಯ್ಯತ್ ಹೇಳಿದನು.
ಹಂಝರವರ ◌ؓ ಬಗ್ಗೆ ಅಲಿಯವರು ◌ؓ ಹೇಳುವುದು ಕಾಣಬಹುದು, ಬದ್ರ್ ದಿನದಂದು ಮಧ್ಯಾಹ್ನದ ನಂತರ ಸೈನಿಕರೊಂದಿಗೆ ಬಿರುಸಿನ ಹೋರಾಟ ನಡೆಯಲು ಆರಂಭಿಸಿತು, ಅಷ್ಟರಲ್ಲಿ ಸಅದ್ ಬಿನ್ ಖೈಸಮ ◌ؓ ಹಾಗೂ ಇನ್ನೊಬ್ಬ ಶತ್ರುಗಳ ಸೈನಿಕನೊಬ್ಬನ ನಡುವೆ ಯುದ್ಧ ಆರಂಭವಾಯಿತು, ಕೊನೆಗೆ ಆ ಯುದ್ಧದಲ್ಲಿ ಸಅದ್ ◌ؓ ಹುತಾತ್ಮರಾದರು. ಮುಖಕ್ಕೆ ಉಕ್ಕಿನ ಕವಚ ಧರಿಸಿದ್ದ ಕಾರಣ ಆ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ, ಕೊನೆಗೆ ಆ ವ್ಯಕ್ತಿಯು ನನಗೆ ದ್ವಂದ ಯುದ್ಧಕ್ಕೆ ಆಹ್ವಾನ ನೀಡಿ, ನನ್ನ ಬಳಿ ಬಂದು ನಿಂತನು. ಅವನು ನನಗಿಂತ ಅಧಿಕ ಎತ್ತರವಿದ್ದ ಕಾರಣ ಅವನೊಂದಿಗೆ ಯುದ್ಧ ಮಾಡಲು ಇಷ್ಟಪಡಲಿಲ್ಲ, ಆದರೆ ಅವನು ನನ್ನಿಂದ ಭಯ ಪಟ್ಟು ಓಡಿ ಹೋಗುತ್ತಿದ್ದೀಯ.? ಎಂದು ಕೇಳಿದಾಗ, ನಾನು ಅದಕ್ಕೆ ಓಡಿ ಹೋಗುತ್ತಿಲ್ಲ ಇನ್ನೊಂದು ಕಡೆಗೆ ಯುದ್ಧ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದೆನು.
ಅವನು ನನ್ನನ್ನು ಬಿಡದೆ, ನನ್ನ ಮುಂದೆ ಬಂದು ನಿಂತು ಖಡ್ಗದಿಂದ ದಾಳಿ ಮಾಡಿದನು. ನಾನು ಗುರಾಣಿಯಿಂದ ತಡೆದಾಗ ಅವನ ಖಡ್ಗ ಕೆಳಗೆ ಬಿದ್ದಿತು, ನಾನು ಅವನ ಭುಜಕ್ಕೆ ದಾಳಿ ಮಾಡಿದಾಗ, ಅವನು ಸ್ವಲ್ಪ ಅಲುಗಾಡಿನು. ಹಾಗಾಗಿ ಅವನ ಮುಖದ ಕವಚಕ್ಕೆ ನನ್ನ ಖಡ್ಗ ತಾಗಿ ಎರಡು ತುಂಡಾಯಿತು, ತಕ್ಷಣವೇ ಹಿಂದಿನಿಂದ ನಾನು ಅಬ್ದುಲ್ ಮುತ್ತಲಿಬಿನ ಮಗ ನನ್ನ ಖಡ್ಗವನ್ನು ಎದುರಿಸು ಎಂಬ ಶಬ್ದ ಕೇಳಿಸಿತು, ಅದನ್ನು ಕೇಳಿ ನಾನು ತಕ್ಷಣವೇ ನನ್ನ ತಲೆಯನ್ನು ತಗ್ಗಿಸಿ ಬಾಗಿ ನಿಂತೆನು. ಅವರು ಬೀಸಿದ ಆ ಖಡ್ಗ ನೇರವಾಗಿ ಆ ಶತ್ರುವಿನ ಕತ್ತನ್ನು ಸೀಳಿ ಕವಚದ ಸಮೇತವಾಗಿ ಅವನ ತಲೆಯು ಕೆಳಗೆ ಬಿದ್ದಿತು. ನಾನು ತಿರುಗಿ ನೋಡಿದಾಗ ಅದು ಚಿಕ್ಕಪ್ಪ ಹಂಝ ◌ؓ ಆಗಿದ್ದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-242/365
ಉಮಯ್ಯತ್ ಬಿನ್ ಖಲಫ್ ಕೇಳಿದ ಇನ್ನೊಬ್ಬ ವ್ಯಕ್ತಿ ಅಬೂದುಜಾನಃ ◌ؓ ಆಗಿದ್ದರು. ಸಮ್ಮಾಕ್ ಬಿನ್ ಖರ್’ಷ ಎಂದಾಗಿತ್ತು ಅವರ ಸಂಪೂರ್ಣ ಹೆಸರು. ಅಬ್ದುರಹ್ಮಾನ್ ಬಿನ್ ಔಫ್’ರಲ್ಲಿ ◌ؓ ಉಮಯ್ಯ ಪುನಃ, ಅಲ್ಪ ಗಿಡ್ಡವಾಗಿರುವ, ಸುಂದರನಾಗಿದ್ದ, ಕೆಂಪು ಪೇಟವನ್ನು ಕಟ್ಟಿಕೊಂಡಿದ್ದ ಆ ವ್ಯಕ್ತಿ ಯಾರು ಎಂದು ಕೇಳಿದಾಗ.? ಅದು ಅನ್ಸಾರ್’ಗಳಲ್ಲಿ ಒಬ್ಬರಾದ ಸಮ್ಮಾಕ್ ಬಿನ್ ಖರ್’ಷ ಎಂದಾಗಿದೆ ಅವರ ಹೆಸರು ಎಂದು ಇಬ್’ನು ಔಫ್ ಹೇಳಿದರು. ಅದಕ್ಕೆ ಉಮಯ್ಯ, ಆ ವ್ಯಕ್ತಿಯ ಕಾರಣದಿಂದಲೇ ನಾವು ಕಡಿದ ಮೃಗಗಳಂತೆ ಆದದ್ದು ಎಂದು ಹೇಳಿದರು. ಅಬೂದುಜಾನ ಹೋರಾಡಿ ಸೋಲಿಸಿದ್ದು ಎಂಟು ಜನರನ್ನಾಗಿತ್ತು, ಅವುಗಳಲ್ಲಿ ಒಂದು ದೃಶ್ಯದ ಬಗ್ಗೆ ತಿಳಿಯೋಣ.
ಖುರೈಷಿಗಳೇ, ಹೊಸ ಧರ್ಮದೊಂದಿಗೆ ಬಂದು, ಸಮೂಹವನ್ನು ಎರಡಾಗಿ ವಿಭಜಿಸಿದ ಮುಹಮ್ಮದ್’ರನ್ನು ﷺ ಹಿಡಿಯಬೇಕು. ಅವರು ತಪ್ಪಿಸಿಕೊಂಡರೆ, ನಾವು ಹೇಗೆ ಗೆದ್ದುಕೊಂಡೆವು ಎಂದು ಹೇಳಲು ಸಾಧ್ಯ.? ಎಂದು ಕೂಗಿ ಹೇಳುತ್ತಾ, ಆಸಿಮ್ ಅಬೂಔಫ್ ಎಂಬ ವ್ಯಕ್ತಿಯೂ ಮುಂದೆ ಬಂದನು. ತೋಳದಂತೆ ಓಡೋಡಿ ಬರುತ್ತಿದ್ದ ಆಸಿಮ್’ರನ್ನು, ಅಬೂದುಜಾನಃ ಎದುರಿಸಿದರು. ಅವರಿಬ್ಬರ ಭೀಕರವಾದ ಹೋರಾಟದಲ್ಲಿ ಆಸಿಮ್ ತತ್ತರಿಸಿ ಹೋದನು, ಅವನ ದೇಹದಲ್ಲಿದ್ದ ವಸ್ತುಗಳನ್ನು ಅಥವಾ “ಸಲಬ್’ನ್ನು” ತೆಗೆಯಲು ಪ್ರಯತ್ನಿಸುತ್ತಿದ್ದರು. ಸಲಬ್ ಎದುರಾಳಿಯನ್ನು ಯಾರು ಸೋಲಿಸುತ್ತಾರೋ.? ಅವರಿಗೆ ಸೇರಿದ್ದಾಗಿರುತ್ತದೆ. ಅದನ್ನು ಕಂಡು ಹತ್ತಿರದಲ್ಲೇ ಇದ್ದ, ಉಮರ್ ಬಿನ್ ಖತ್ತಾಬ್’ರು ◌ؓ ಆ ಸಲಬ್’ನ್ನು ಈಗ ಬಿಟ್ಟು ಬಿಡಿ, ಅವನು ಸೋತರೆ ಅದರ ಹಕ್ಕುದಾರ ನೀವೆ ಆಗಿರುತ್ತೀರಿ ಎಂದು ಹೇಳಿದರು. ಆದರೆ ಅಚಾನಕ್ಕಾಗಿ ಮಅಬದ್ ಬಿನ್ ವಹಾಬ್ ಮುಂದೆ ಬಂದು, ಅಬುದುಜಾನ ಮೇಲೆ ದಾಳಿ ಮಾಡಿದರು. ಅನಿರೀಕ್ಷಿತ ದಾಳಿಯಾದ ಕಾರಣ ಅವರು ಮಂಡಿಯೂರಿ ಕುಳಿತರು, ಆದರೆ ಮರುಕ್ಷಣವೇ ಅದೇ ಉತ್ಸಾಹದಿಂದ ಎದ್ದು, ಮಅಬದಿನ ಮೇಲೆ ದಾಳಿ ಮಾಡಿ, ಅವನನ್ನು ಸೋಲಿಸಿ ಅವನ ಸಲಬನ್ನು ವಶಪಡಿಸಿಕೊಂಡರು.
ಇಮಾಮ್ ಬೂಸೂರಿಯವರ “ಮಾಸಾಲ ಯಲ್’ಖಾಹುಮು…” ಎಂಬ ಸಾಲುಗಳನ್ನು ನೆನಪಿಸುವ ದೃಶ್ಯವನ್ನಾಗಿತ್ತು ಸ್ವಹಾಬಿಗಳ ಬಗ್ಗೆ ನಾವು ಈಗ ವಿವರಿಸಿದ್ದು. ಅವರ ಸಾಲುಗಳ ಸಾರವು ಈ ರೀತಿಯಾಗಿದೆ, “ರಣರಂಗದಲ್ಲಿ ಅವರು ಹೋರಾಡಿ, ಮಾಂಸದ ಅಂಗಡಿಯಲ್ಲಿ ವ್ಯಾಪಾರಿ ಮಾಂಸವನ್ನು ವ್ಯಾಪಾರಕ್ಕೆ ಇಟ್ಟ ರೀತಿಯಲ್ಲಿ ಎದುರಾಳಿಯನ್ನು ಕಡಿದು ಹಾಕಿ, ಸೋಲಿಸಿದರು”
ಬದ್ರ್ ರಣರಂಗದಲ್ಲಿ ಉಂಟಾದ ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಝುಬೈರ್ ಬಿನುಲ್ ಅವ್ವಾಮಿನದ್ದು. ಅವರ ದೇಹದಲ್ಲಿ ಆಗಿದ್ದ ಗಾಯಗಳು ಎಷ್ಟು ಆಳವಾಗಿತ್ತು ಅಂದರೆ, ಕೈಗಳು ಒಳಗೆ ಹೋಗುವಷ್ಟು ಆಳವಾಗಿತ್ತು. ಅವರೇ ಖುದ್ದಾಗಿ ತನ್ನ ಅನುಭವ ವಿವರಿಸುವುದು ಕಾಣಬಹುದು, ಉಬೈದತ್ ಬಿನ್ ಸಈದ್ ಅಲ್ ಅಸ್ವಿ ಎಂಬ ವ್ಯಕ್ತಿಯು, ಬದ್ರ್ ರಣರಂಗದಲ್ಲಿ ನನ್ನ ಮುಂದೆ, ನಾನು ದಾತುಲ್ ಕಿರ್’ಶಿನ ತಂದೆಯಾಗಿರುವೆನು ಎಂದು ಹೇಳುತ್ತಾ ಮುಂದೆ ಬಂದನು. ಎರಡು ಕಣ್ಣುಗಳನ್ನು ಬಿಟ್ಟು, ಉಳಿದ ಎಲ್ಲಾ ಭಾಗದಲ್ಲೂ ಕವಚ ಧರಿಸಿದ್ದರು, ತನ್ನ ಜೊತೆಯಲ್ಲಿ ದೊಡ್ಡ ಹೊಟ್ಟೆ ಇದ್ದ ಅನಾರೋಗ್ಯದಿಂದ ಬಳಲುತ್ತಿದ್ದ, ಒಬ್ಬಳು ಹೆಣ್ಣು ಮಗಳನ್ನು ಬೆನ್ನಿನ ಮೇಲೆ ಹೊತ್ತು ಬಂದಿದ್ದನು. ನಾನು ನನ್ನ ಕೈಯಲ್ಲಿದ್ದ ಈಟಿಯಿಂದ ಅವನ ಕಣ್ಣಿಗೆ ಚುಚ್ಚಿದಾಗ, ಅವನು ಕೆಳಗೆ ಬಿದ್ದನು. ನಾನು ಅವನ ಕೆನ್ನೆಯ ಮೇಲೆ ಕಾಲಿಟ್ಟು ಎಳೆದು ನೋಡಿದಾಗ, ಅದರ ಎರಡು ಮೊನೆಯು ಕೂಡ ಮುರಿದು ತುಂಡಾಗಿ ಹೋಗಿತ್ತು.
ರಣರಂಗದ ನಿಯಮದ ಪ್ರಕಾರ, ಯಾವ ರೀತಿಯಲ್ಲಾದರೂ ಎದುರಾಳಿಯನ್ನು ಸೋಲಿಸಬೇಕು ಎಂಬುವುದು ಮಾತ್ರವಲ್ಲವೇ ಮುಖ್ಯ.? ಶೌರ್ಯ ಹಾಗೂ ಧೈರ್ಯದಿಂದ ಹೊರಾಡಬೇಕಾದ ರಣರಂಗದಲ್ಲಿ ಅನುಕಂಪ, ಹಾಗೂ ಕರುಣೆಯಿಂದ ವರ್ತಿಸಿದರೆ ಪ್ರಾಣ ಉಳಿಯಲಿಕಿಲ್ಲ ತಾನೇ.? ಎಲ್ಲಾ ರೀತಿಯಲ್ಲೂ ಯುದ್ಧ ನಡೆಯದ ಹಾಗೆ ಬಹಳಷ್ಟು ತಡೆದರೂ, ಕೊನೆಗೆ ಎದುರಾಳಿಗಳೇ ಆಯುಧಗಳನ್ನು ಹಿಡಿದು ರಣರಂಗಕ್ಕೆ ಬಂದಿರುವಾಗ, ಬೇರೆ ವಿಧಿಯಿಲ್ಲದೆ ಎದುರಿಸಿದ್ದಾಗಿತ್ತು ಬದ್ರ್ ರಣರಂಗ ಎಂದು ನಾವು ಈಗಾಗಲೇ ತಿಳಿಸಿದ್ದೇವೆ.
ಏನೇ ಇರಲಿ, ರಣರಂಗದಲ್ಲಿ ಎದುರಾಳಿಯ ಕುತಂತ್ರ ಹಾಗೂ ಕವಚವನ್ನು ಬೇಧಿಸಿದ ಕೋಲನ್ನು ಪ್ರವಾದಿಯವರು ﷺ ಕೇಳಿದ ಕಾರಣ ಅವರಿಗೆ ನೀಡಲಾಯಿತು. ಪ್ರವಾದಿಯವರ ﷺ ಮರಣದ ನಂತರ, ಅಬೂಬಕ್ಕರ್ ◌ؓ, ಉಮರ್ ◌ؓ, ಉಸ್ಮಾನ್ ◌ؓ, ಹೀಗೆ ತಲೆಮಾರಿನಿಂದ ತಲೆಮಾರಿಗೆ ತಲುಪಿ, ಕೊನೆಗೆ ಅವರು ಕೂಡ ಮರಣ ಹೊಂದಿದ ನಂತರ, ಅವರ ಕೈಯಿಂದ ಅಲಿಯವರಿಗೆ ◌ؓ ಸಿಕ್ಕಿತು. ಅವರ ಕುಟುಂಬದವರಿಂದ ಅಬ್ದುಲ್ಲಾಹಿಬಿನ್ ಝುಬೈರ್ ಕೇಳಿ ಪಡೆದುಕೊಂಡು, ಅವರ ಮರಣದವರೆಗೆ ಅವರು ಕೂಡ ಅದನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-243/365
ರಣರಂಗದಲ್ಲಿ ಶೌರ್ಯದಿಂದ ಹೋರಾಡಿದ ಬಹಳಷ್ಟು ಯೋಧರನ್ನು ಬದ್ರ್ ಕದನವು ಪರಿಚಯಿಸಿತು, ಅದರಲ್ಲಿ ವಿಭಿನ್ನವಾದ ಒಂದು ಘಟನೆಯ ಬಗ್ಗೆ ತಿಳಿಯೋಣ. ರಣರಂಗದಿಂದ ಮೂರು ತಲೆಗಳನ್ನು ಹಿಡಿದು ಅಬೂಬುರ್’ದಃರು ◌ؓ ಪ್ರವಾದಿಯವರ ﷺ ಬಳಿ ಬಂದು, ಇದರಲ್ಲಿ ಇಬ್ಬರನ್ನು ನಾನೇ ಖುದ್ದಾಗಿ ಸೊಲಿಸಿದ್ದಾಗಿರುತ್ತದೆ, ಇನ್ನೊಂದನ್ನು ಬಿಳಿ ದೈತ್ಯ ವ್ಯಕ್ತಿಯೊಬ್ಬರು ಇನ್ನೊಬ್ಬನ ಜೊತೆಯಲ್ಲಿ ಕಾದಾಟ ನಡೆಸುತಿದ್ದರು, ಸ್ವಲ್ಪ ಸಮಯದ ನಂತರ ಅವನ ತಲೆ ನೆಲಕ್ಕೆ ಉರುಳುವುದು ಕಂಡಿತು. ಆ ತಲೆಯಾಗಿದೆ ಇದು ಎಂದು ಹೇಳಿದಾಗ, ಪ್ರವಾದಿಯವರು ﷺ ಆ ಬಿಳಿ ದೈತ್ಯ ವ್ಯಕ್ತಿಯು ದೇವಚರ (ಮಲಕ್) ಆಗಿದ್ದರು ಎಂದು ಹೇಳಿದರು.
ಈ ದೃಶ್ಯದ ಬಗ್ಗೆ ಒಮ್ಮೆ ಆಲೋಚಿಸಿರಿ, ಇಂತಹ ಶೌರ್ಯದೊಂದಿಗೆ ಹೋರಾಡಬೇಕಿದ್ದರೆ ಎಷ್ಟೊಂದು ಧೀರತೆ ಬೇಕು.? ಆಧ್ಯಾತ್ಮಿಕವಾಗಿ ಉನ್ನತ ದರ್ಜೆಯಲ್ಲಿ ತಲುಪಿದ್ದ ಅನುಚರರನ್ನು ಅಗತ್ಯ ಬಿದ್ದಾಗ, ರಣರಂಗ ಯೋಧರನ್ನಾಗಿ ಮಾಡಿದ ಮಹಾ ವಿಸ್ಮಯ ಭರಿತ ದೃಶ್ಯವಾಗಿದೆ ಇದು.
ತಮ್ಮ ಬಂಧು ಬಳಗ ಅಷ್ಟೇ ಯಾಕೆ, ಜನ್ಮ ನೀಡಿದ ತಂದೆಯೂ ಕೂಡ ತಮಗೆ ಸಮರ್ಪಣೆ ಎಂಬ ತ್ಯಾಗದ ಮಾತುಗಳನ್ನಾಗಿತ್ತು ಬದ್ರ್ ರಣರಂಗದಲ್ಲಿ ಅವರ ಅನುಚರರು ಹೇಳುತ್ತಿದ್ದದ್ದು. ಅದರಲ್ಲೂ ಅಬೂಉಬೈದರ ◌ؓ ಸಮರ್ಪಣೆಯಂತೂ ಮರೆಯಲಾಗದು. ಅಬೂಉಬೈದರು ◌ؓ, ರಣರಂಗದಲ್ಲಿ ಶೌರ್ಯದಿಂದ ಹೊರಾಡುತ್ತಿರುವುದನ್ನು ಎದುರಾಳಿಯ ಎದೆಯಲ್ಲಿ ನಡುಕ ಉಂಟಾಗಿತ್ತು. ಆದರೆ ಒಬ್ಬರು ಮಾತ್ರ ಅಬೂಉಬೈದರನ್ನು ◌ؓ ಎದುರಿಸಲು ಮುಂದೆ ಬಂದರು, ಆದರೆ ಆ ವ್ಯಕ್ತಿಯನ್ನು ಎದುರಿಸುವ ಮನಸ್ಸು ಬರದೆ ಅಬೂಉಬೈದ ◌ؓ ಬೇರೆ ಕಡೆ ಹೋದರು. ಹೀಗೆ ಅಬೂಉಬೈದ ◌ؓ ಹೋದ ಕಡೆಗೆಲ್ಲಾ ಆ ವ್ಯಕ್ತಿಯು ಬಂದು, ಅಬೂಉಬೈದರಿಗೆ ◌ؓ ಅಡ್ಡವಾಗಿ ನಿಲ್ಲುತ್ತಿದ್ದರು. ಅಬೂಉಬೈದರಿಗೆ ◌ؓ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು, ಕೊನೆಗೆ ವಿಧಿಯಿಲ್ಲದೆ ಈ ತಡೆಯುತ್ತಿದ್ದ ವ್ಯಕ್ತಿಯ ತಲೆಗೆ ಅಬೂಉಬೈದರು ◌ؓ ತಮ್ಮ ಖಡ್ಗವನ್ನು ಬೀಸಿದಾಗ, ಆ ವ್ಯಕ್ತಿಯ ತಲೆಯು ಇಬ್ಬಾಗವಾಗಿ ಅವರು ನೆಲಕ್ಕೆ ಉರಿಳಿದರು. ವಾಸ್ತವದಲ್ಲಿ ಅಬೂಉಬೈದರ ಎದುರು ಅಡ್ಡವಾಗಿ ನಿಂತು ತಡೆಯುತ್ತಿದ್ದ ವ್ಯಕ್ತಿ, ಅಬೂಉಬೈದರ ತಂದೆ ಆಗಿದ್ದರು. ಸತ್ಯ ವಿಶ್ವಾಸ ಹಾಗೂ ಜನ್ಮ ಕೊಟ್ಟ ತಂದೆ ಇವೆರಡೂ ಎರಡು ಭಾಗದಲ್ಲಿ ಆದಾಗ, ಸತ್ಯವಿಶ್ವಾಸವನ್ನು ಆಯ್ಕೆ ಮಾಡಿದ ಅನುಚರರ ಉದಾಹರಣೆಯಾಗಿದೆ ಇದು.
ಪ್ರವಾದಿಯವರ ﷺ ಅನುಚರರ ಈ ಸಮರ್ಪಣೆಯನ್ನು ಉದ್ದೇಶಿಸಿ ಪವಿತ್ರ ಕುರ್’ಆನಿನ ಐವತ್ತೆಂಟನೆ ಅಧ್ಯಾಯದ ಇಪ್ಪತ್ತೆರಡನೇ ಸೂಕ್ತದಲ್ಲಿ ತಿಳಿಸುವುದು ಕಾಣಬಹುದು. “ಅಲ್ಲಾಹನ ಹಾಗೂ ಅಂತ್ಯ ದಿನದ ಮೇಲೆ ವಿಶ್ವಾಸವಿರಿಸುವ ಜನತೆ, ಅಲ್ಲಾಹನಲ್ಲಿ ಹಾಗೂ ಅವನ ಪ್ರವಾದಿಯವರಲ್ಲಿ ﷺ ದ್ವೇಷವಿಡುವ ಜನರೊಂದಿಗೆ, ಯಾವುದೇ ಸ್ನೇಹ ಸಂಬಂಧವನ್ನು ಇಡುವುದು ಕಾಣಲು ಸಾಧ್ಯವಿಲ್ಲ. ಅದು ಸ್ವಂತ ತಂದೆಯಾದರೂ, ಮಗನಾಗದರೂ, ಸಹೋದರರಾದರೂ ಸರಿ, ಅವರ ಮನಸ್ಸಿನಲ್ಲಿರುವ ಅಲ್ಲಾಹನ ಬಗ್ಗೆಯಿರುವ ಸತ್ಯವಿಶ್ವಾಸವು, ಅವರನ್ನು ಶಕ್ತವಂತರನ್ನಾಗಿಸುತ್ತದೆ. ಅವನು (ಅಲ್ಲಾಹನು) ಅಂಥವರಿಗೆ ಕೆಳಭಾಗದಲ್ಲಿ ತೊರೆಗಳು ಹರಿಯುವ ಸ್ವರ್ಗಕ್ಕೆ ಪ್ರವೇಶ ನೀಡುವನು, ಆ ಸ್ವರ್ಗದಲ್ಲಿ ಅವರು ಶಾಶ್ವತವಾಗಿ ಇರುವರು, ಅಲ್ಲಾಹನು ಅವರಲ್ಲಿಯೂ, ಅವರು ಅಲ್ಲಾಹನಲ್ಲಿಯೂ ಸಂತೃಪ್ತಿ ಹೊಂದಿದವರಾಗಿರುವರು. ಅವರಾಗಿರುವರು ಅಲ್ಲಾಹನ ಪಕ್ಷದವರು, ಖಂಡಿತವಾಗಿಯೂ ಅಲ್ಲಾಹನ ಪಕ್ಷದವರು ಮಾತ್ರವಾಗಿರುವರು ವಿಜಯಶಾಲಿಗಳು”
ಉಮರಿಗೂ ◌ؓ ಇದೆ ರೀತಿಯ ಅನುಭವ ರಣರಂಗದಲ್ಲಿ ಉಂಟಾಗಿತ್ತು. ಅವರು ತಮ್ಮ ಚಿಕ್ಕಪ್ಪ, ಆಸ್ವ್ ಬಿನ್ ವಾಯಿಲ್’ನ್ನು ರಣರಂಗದಲ್ಲಿ ಕೊಂದು ಹಾಕಿದ್ದರು. ಕೆಲವೊಮ್ಮೆ ಅದನ್ನು ಬಹಳ ಹೆಮ್ಮೆಯಿಂದ ಉಮರ್’ರವರು ◌ؓ ಹೇಳುತ್ತಿದ್ದರು.
ಒಂದು ದಿನ ಉಮರ್ ಸಈದ್ ಬಿನ್ ಹಿಷಾಮಿನ ಹತ್ತಿರದಿಂದ ನಡೆದು ಹೋಗುವಾಗ, ಅವರು ಮುಖ ತಿರುಗಿಸಿದರು. ಅದನ್ನು ಕಂಡು ಉಮರ್ ◌ؓ, ನಿನ್ನ ತಂದೆಯನ್ನು ನಾನು ಬದ್ರ್ ರಣರಂಗದಲ್ಲಿ ಕೊಂದು ಹಾಕಿದ್ದೆ ಎಂಬ ಕಾರಣಕ್ಕೆ ನೀನು ನನ್ನಲ್ಲಿ ಕೋಪ ಗೊಂಡಿದ್ದರೆ.? ಕೇಳು, ನಾನು ನನ್ನ ಸ್ವಂತ ಚಿಕ್ಕಪ್ಪರನ್ನೇ ಸತ್ಯವಿಶ್ವಾಸದ ಕಾರಣ, ರಣರಂಗದಲ್ಲಿ ಕೊಂದು ಹಾಕಿದ್ದೇನೆ, ಮತ್ತೆ ಅಲ್ವಾ ನಿನ್ನ ತಂದೆ.? ಎಂದು ಹೇಳಿ, ಅವನ ಹತ್ತಿರ ಹೋದಾಗ ಆಗ ಅವನು ಮಲಗಿ ಬೈಯುತ್ತಿದ್ದನು. ಉಮರ್’ರು ಅವನ ಕಡೆ ತಿರುಗಿ ನಿನ್ನ ತಂದೆಯ ಸಂಬಂಧಿಯಾದ ಅಲಿಯಾಗಿದ್ದರು ◌ؓ ನಿನ್ನ ತಂದೆಯನ್ನು ಕೊಂದಿದ್ದು ಎಂದು ಹೇಳಿದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-244/365
ಬದ್ರ್ ರಣರಂಗದಲ್ಲಿ ಶೌರ್ಯದೊಂದಿಗೆ ಹೋರಾಡಿದ ಮಹಾತ್ಮರ ಸಾಲಿನಲ್ಲಿ ಅಬೂಬಕ್ಕರ್ ◌ؓ ಕೂಡ ಮುಂದೆ ಇದ್ದಾರೆ. ಮಹಾನರ ಸಮರ್ಪಣೆಯ ಧೀರತೆಯನ್ನು ತೋರಿಸಿಕೊಡುವ ಕೆಲವೊಂದು ಘಟನೆಗಳನ್ನು ತಿಳಿಯೋಣ. ಒಂದು ದಿನ ಭಾಷಣದ ನಡುವೆ ಅಲಿಯವರು ◌ؓ, ಸಭಿಕರಲ್ಲಿ ನಮ್ಮ ನಡುವೆ ಅತೀ ಶೌರ್ಯವಂತ ಯಾರು ಎಂದು ಕೇಳಿದಾಗ, ಕೇಳುಗರು ಎಲ್ಲರೂ ಒಟ್ಟಾಗಿ ನೀವೆ ಎಂದು ಉತ್ತರಿಸಿದರು. ಅದಕ್ಕೆ ಅಲಿಯವರು, ನನ್ನ ವಿರುದ್ಧ ದ್ವಂದ್ವ ಯುದ್ಧದಲ್ಲಿ ಯಾರೇ ಬಂದರೂ ನಾನು ಅವರನ್ನು ಸುಮ್ಮನೆ ಬಿಟ್ಟಿಲ್ಲ, ಆದರೆ ಅದಲ್ಲ ನಾನು ಹೇಳುತ್ತಿರುವುದು. ನಮ್ಮಲ್ಲಿ ಅತೀ ಶೌರ್ಯವಂತ ಯಾರೆಂದರೆ ಅದು ನಾನಲ್ಲ, ಅಬೂಬಕ್ಕರ್’ರು ◌ؓ ಆಗಿರುತ್ತಾರೆ. ಕಾರಣ ಏನೆಂದರೆ, ನಿಮಗೆ ಗೊತ್ತಿರಬಹುದು ಬದ್ರ್ ರಣರಂಗದಲ್ಲಿ, ಕುಳಿತುಕೊಂಡು ಯುದ್ಧ ನಿಯಂತ್ರಿಸಲು ನಾವು ಪ್ರವಾದಿಯವರಿಗೆ ﷺ ಡೇರೆ ನಿರ್ಮಿಸಿ ಮಾಡಿ ಕೊಟ್ಟಿದ್ದೆವು. ಆದರೆ ಪ್ರವಾದಿಯವರನ್ನು ﷺ ಡೇರೆಯ ಒಳಗಿನಿಂದ ಶತ್ರುಗಳು ದಾಳಿ ಮಾಡದ ಹಾಗೆ ಯಾರು ಕಾವಲು ನಿಲ್ಲುತ್ತಾರೆ.? ಎಂದು ಕೇಳಿದಾಗ, ಅಲ್ಲಾಹನಾಣೆ ಯಾರಿಗೂ ಧೈರ್ಯ ಸಾಕಗಲಿಲ್ಲ. ಆದರೆ ಧೀರತೆಯಿಂದ ತನ್ನ ಓರೆಯಿಂದ ಖಡ್ಗವನ್ನು ಹೊರ ತೆಗೆದು ಮುಂದೆ ಬಂದದ್ದು ಅಬೂಬಕ್ಕರ್ ◌ؓ ಆಗಿತ್ತು.
ನಂತರ ಮಾತು ಮುಂದುವರಿಸುತ್ತಾ, ಮಕ್ಕಾದಲ್ಲಿ ನಾವು ಜೀವಿಸುತ್ತಿದ್ದ ಕಾಲದಲ್ಲಿ ಪ್ರವಾದಿಯವರನ್ನು ﷺ ಶತ್ರುಗಳು ಸುತ್ತುವರಿದಿದ್ದ ಸಂದರ್ಭದ ಬಗ್ಗೆ ನನಗೆ ಚೆನ್ನಾಗಿ ನೆನೆಪಿದೆ. ಅವರು ಪ್ರವಾದಿಯವರಿಗೆ ﷺ ಬಹಳ ಕಿರುಕುಳ ನೀಡಿದಾಗ, ನಮಗೆಲ್ಲಾ ಅವರ ಬಳಿ ಹೋಗಲು ಸಾಧ್ಯವಾಗಿರಲಿಲ್ಲ, ಆದರೆ ಅಬೂಬಕ್ಕರ್’ರು ಒಂಟಿಯಾಗಿ ಧೈರ್ಯದಿಂದ ಮುಂದೆ ಹೋಗಿ, “ನನ್ನ ಆರಾಧ್ಯ ಒಬ್ಬನೇ ಹೇಳಿದ ಕಾರಣಕ್ಕೆ ನೀವು ಆ ಮಹಾ ವ್ಯಕ್ತಿತ್ವವನ್ನು ಹಿಂಸೆ ನೀಡುತ್ತಿದ್ದೀರ.? ಖಂಡಿತವಾಗಿಯೂ ನಿಮಗಾಗಿದೆ ಅದರ ನಷ್ಟ,” ಎಂದು ಕೂಗಿ ಹೇಳಿ, ಪ್ರವಾದಿಯವರನ್ನು ﷺ ಅವರ ಬಲೆಯಿಂದ ರಕ್ಷಿಸಿದ್ದರು.
ಇಷ್ಟು ಹೇಳುತ್ತಾ, ದುಃಖ ಸಹಿಸಲಾಗದೆ ತನ್ನ ಭುಜದಲ್ಲಿದ್ದ ಶಾಲನ್ನು ತೆಗೆದು, ಮುಖಕ್ಕೆ ಅಡ್ಡವಾಗಿ ಇಟ್ಟು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ನಂತರ ಕಣ್ಣೀರನ್ನು ಒರೆಸುತ್ತಾ, ಅಲಿಯವರು ◌ؓ ಸಭೆಯಲ್ಲಿ “ಅಲ್ಲಾಹನಾಣೆ ನಾನು ನಿಮಲ್ಲಿ ಫರೋವನ ಕುಟುಂಬದ ಸತ್ಯ ವಿಶ್ವಾಸಿಣಿಯೋ ಶ್ರೇಷ್ಠಳು.? ಅಥವಾ ಅಬೂಬಕ್ಕರ್’ರವರೋ.? ಎಂದು ಕೇಳುತ್ತಿದ್ದೇನೆ” ಎಂದು ಹೇಳಿದಾಗ,
ಸಭೆಯಲ್ಲಿ ಒಂದು ಕ್ಷಣ ಮೌನ ಆವರಿಸಿತು. ನಂತರ ಅಲಿಯವರೇ ಮಾತು ಮುಂದುವರಿಸುತ್ತಾ, ಅಲ್ಲಾಹನಾಣೆ ಅಬೂಬಕ್ಕರ್’ರ ◌ؓ ಕೇವಲ ಕೆಲವು ಸಮಯದ ಒಳಿತು, ಫರೋವನ ಕುಟುಂಬದ ವಿಶ್ವಾಸಿ ವನಿತೆಯ ಸಂಪೂರ್ಣ ಭೂಮಿಯಷ್ಟು ಇರುವ ಒಳಿತಿಗಿಂತ ಶ್ರೇಷ್ಠವಾಗಿದೆ, ಯಾಕೆಂದರೆ ಅವರು ರಹಸ್ಯವಾಗಿಯಾಗಿತ್ತು ತಮ್ಮ ಆರಾಧನೆಗಳನ್ನು ಮಾಡುತ್ತಿದ್ದದ್ದು. ಆದರೆ ಅಬೂಬಕ್ಕರ್’ರು ◌ؓ ಖುದ್ದಾಗಿ ತಮ್ಮ ಸತ್ಯವಿಶ್ವಾಸವನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದ್ದರೆಂದು ಎಂದು ಸಭೆಯಲ್ಲಿ ಹೇಳಿದರು
ಅಬೂಬಕ್ಕರ್’ರ ಮಗನಾದ ಅಬ್ದುರಹ್ಮಾನ್ ಬದ್ರ್ ಯುದ್ಧದ ಸಂದರ್ಭದಲ್ಲಿ ವಿರೋಧಿಗಳ ಗುಂಪಿನಲ್ಲಿ ಇದ್ದರು. ಅಂದು ಅವರ ಹೆಸರು, ಅಬ್ದುಲ್ ಕಅಬ ಎಂದಾಗಿತ್ತು, ನಂತರದ ಕಾಲದಲ್ಲಿ ಪ್ರವಾದಿಯವರು ﷺ ಆಗಿತ್ತು ಅವರಿಗೆ ಅಬ್ದುಲ್ ರಹ್ಮಾನ್ ಎಂಬ ಹೆಸರನ್ನು ಕೊಟ್ಟದ್ದು. ಅವರು ತಮ್ಮ ಪೂರ್ವ ಕಾಲದಲ್ಲಿ ಬಿಲ್ಲುಗಾರಿಕೆಯಲ್ಲಿ ನಿಪುಣತೆ
ಹೊಂದಿದ್ದ ಧೀರ ವ್ಯಕ್ತಿ ಆಗಿದ್ದರು.
ಅವರು ಬದ್ರ್ ಯುದ್ಧದ ಅನುಭವವನ್ನು ನಂತರ ಕಾಲದಲ್ಲಿ ಹೇಳುತ್ತಿದ್ದದ್ದು ಕಾಣಬಹುದು, ನಾನು ಮುಸ್ಲಿಂ ಆದ ನಂತರ ತಂದೆಯವರಲ್ಲಿ ಹೇಳಿದ್ದೆ, ಬದ್ರ್’ನ ರಣರಂಗದಲ್ಲಿ ತಾವು ನನ್ನ ಕಣ್ಣಮುಂದೆ ಬಹಳಷ್ಟು ಬಾರಿ ಸಿಕ್ಕಿದ್ರಿ ಆದರೆ ನಾನು ನಿಮ್ಮಿಂದ ದೂರ ಸರಿದು ಹಿಂತಿರುಗಿ ನಿಲ್ಲುತ್ತಿದ್ದೆ ಎಂದು ಹೇಳಿದಾಗ ತಂದೆಯವರು, ಬಹುಶಃ ನೀನು ಅವತ್ತು ನನ್ನ ಕೈಗೆ ಸಿಕ್ಕಿರುತ್ತಿದ್ದರೆ ನಿನಗೆ ಅಂದೆ ಒಂದು ಗತಿ ಕಾಣಿಸುತ್ತಿದ್ದೆ ಎಂದು ಹೇಳಿದರು.
ಇದರಲ್ಲೇ ನಮಗೆ ಅಬೂಬಕ್ಕರ್ ಸಿದ್ದೀಕ್’ರ ಆದರ್ಶ, ತ್ಯಾಗದ ಬಗ್ಗೆ ಅರ್ಥ ಮಾಡಿಕೊಳ್ಳಬಹುದು. ಒಂದು ಉಲ್ಲೇಖದ ಪ್ರಕಾರ ಬದ್ರ್ ಯುದ್ಧದ ಸಂದರ್ಭದಲ್ಲಿ, ಅಬ್ದುಲ್ ರಹ್ಮಾನ್’ರು ದ್ವಂದ ಯುದ್ಧಕ್ಕೆ ಸವಾಲು ಎಸೆದಾಗ, ಅವರನ್ನು ಎದುರಿಸಲು ಸ್ವತಃ ಅಬೂಬಕ್ಕರ್’ರು ಮುಂದಾದರು. ತಕ್ಷಣವೇ ಪ್ರವಾದಿಯವರು ﷺ ತಡೆಯುತ್ತಾ, ಸಧ್ಯಕ್ಕೆ ನೀವು ಇಲ್ಲಿ ಕುಳಿತು ಕೊಳ್ಳಿರಿ ಎಲ್ಲಿಗೂ ಹೋಗಬೇಡಿ, ಯಾಕೆಂದರೆ ನೀವೇ ಅಲ್ಲವೇ.? ಇಲ್ಲಿ ನನ್ನ ಕಾವಲುಗಾರರಾಗಿ ನಿಂತಿರುವುದು ಎಂದು ಹೇಳಿದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-245/365
ಅಬೂಬಕ್ಕರ್ ◌ؓ ಕೂಡ ಅದಕ್ಕೆ ಒಪ್ಪಿಕೊಂಡು ಪ್ರವಾದಿಯವರ ﷺ ಬಳಿಯೇ ನಿಂತರು. ಪ್ರವಾದಿಯವರ ﷺ ಹಾಗೂ ಅಬೂಬಕ್ಕರ್’ರ ◌ؓ ನಡುವಿನ ಆತ್ಮೀಯ ಸಂಬಂಧದ ಅವಿಸ್ಮರಣೀಯ ಕ್ಷಣವಾಗಿತ್ತು ಅದು.
ಪ್ರವಾದಿಯವರು ﷺ ಕೇವಲ ಅನುಚರರನ್ನು ಮಾತ್ರ ಉತ್ತೇಜನ ನೀಡುತ್ತಿದ್ದ ನಾಯಕ ಮಾತ್ರವಾಗಿರಲಿಲ್ಲ, ಬದಲಾಗಿ ಬಿಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ರಣರಂಗಕ್ಕೆ ಇಳಿದು ಬಹಳ ವೀರಾವೇಶದಿಂದ ಹೋರಾಟ ಕೂಡ ನಡೆಸಿದ್ದರು. ಅಲಿಯವರು ◌ؓ ಹೇಳುವುದು ಕಾಣಬಹುದು, ರಣರಂಗದಲ್ಲಿ ಬಿರುಸಿನ ಹೋರಾಟದ ನಡುವೆ ಏನಾದರೂ ತೊಂದರೆಯಾದರೆ ತಕ್ಷಣವೇ ನಾವು ಪ್ರವಾದಿಯವರ ﷺ ಬಳಿ ಹೋಗಿ, ಅವರನ್ನು ಮುಂದೆ ನಿಲ್ಲಿಸಿ ಅವರಲ್ಲಿ ರಕ್ಷಣೆ ಕೇಳುತ್ತಿದ್ದೆವು, ಆ ಸಮಯದಲ್ಲಿ ಅವರು ವಿರೋಧಿಗಳಿಗೆ ಬಹಳ ಹತ್ತಿರದಲ್ಲಿ ಇರುತ್ತಿದ್ದರು. ಪ್ರವಾದಿಯವರ ﷺ ಶೌರ್ಯದ ಬಗ್ಗೆ ಬರೆದಿರುವ ಕವಿತೆಯನ್ನು ಕಾಣಬಹುದು.
“ಲಹು ವಜ್’ಹುಲ್ ಹಿಲಾಲಿ ಲಿನಿಸ್’ಫಿ ಶಹ್’ರಿ
(ಪವಿತ್ರ ಮುಖದ ಶೋಭೆಗೆ ಚಂದಿರನು ಸೋಲುವನು)
ವ ಅಜ್’ಫಾನುಂ ಮುಕಹ್ಹಲತುಂ ಬಿ ಸಿಹಿರಿ
(ಸುಂದರವಾದ ಕಾಡಿಗೆ ಹಚ್ಚಿದಂತಿರುವ ಕಣ್ಣುಗಳು)
ವ ಇನ್ದಲ್ ಇಬ್’ತಿಸಾಮಿ ಕಲೈಲಿ ಬದ್’ರಿ
(ಒಮ್ಮೆ ನಕ್ಕರೆ ನೀವು ಕತ್ತಲಲ್ಲಿರುವ ಚಂದಿರನಂತೆ)
ವ ಇನ್ದಲ್ ಇನ್’ತಿಖಾಮಿ ಕ ಯೌಮಿ ಬದ್’ರಿ
(ಹೋರಾಡಿದರೆ ಬದ್’ರಿನ ದಿನದಂತೆ)
ಪ್ರವಾದಿಯವರ ﷺ ಮಂದಹಾಸ ಬೀರಿದ ಮುಖವು ಬದ್’ರಿನ ಚಂದಿರನ ಬೆಳಕಿನಂತೆ ಇದ್ದರೆ, ಬದ್’ರ ರಣರಂಗವು ಅವರ ಶೌರ್ಯದ ಸಂಕೇತವಾಗಿದೆ ಎಂಬುದಾಗಿದೆ ಅದರ ಅರ್ಥ.
ಸರಿ ಇನ್ನೂ ರಣರಂಗದ ಹೋರಾಟದ ಬಗ್ಗೆ ಸ್ವಲ್ಪ ತಿಳಿಯೋಣ, ಮುಸ್ಲಿಮರು ಬಹಳ ಶೌರ್ಯದಿಂದ ಹೋರಾಡಿದ ಕಾರಣದಿಂದ ಎದುರಾಳಿ ತಂಡದ ಬಹಳಷ್ಟು ತಲೆಗಳು ಉರುಳಿದವು, ಅದರೊಂದಿಗೆ ಶತ್ರುಗಳ ನಾಯಕನಾದ ಅಬೂಜಹಲಿಗೆ ಬಹಳಷ್ಟು ಚಿಂತೆಯಾಗತೊಡಗಿತು. ಅದರೊಂದಿಗೆ ಅಬೂಜಹಲ್’ನ ಸಂಬಂಧಿಕರು ಆತನಿಗೆ ಸಂರಕ್ಷಣೆ ನೀಡಲು ಮುಂದಾದರು. ಅವರೇ ಖುದ್ದಾಗಿ, ಸುತ್ತುವರಿದು ಅಬೂಜಹಲ್’ನ್ನು ಮಧ್ಯದಲ್ಲಿ ಇರಿಸಿದರು. ಅದರ ಜೊತೆಯಲ್ಲಿ ಅವರು ಅಬೂಜಹಲ್’ನ್ನು ಸಂರಕ್ಷಣೆ ಮಾಡಲು, ಅಬೂಜಹಲ್’ನ ಕವಚವನ್ನು ತೆಗೆದು ಅಬ್ದುಲ್ಲಾಹಿ ಬಿನ್ ಮುನ್ದಿರ್ ಎಂಬ ವ್ಯಕ್ತಿಗೆ ಹಾಕಿಸಿದರು. ಅಬ್ದುಲ್ಲಾಹಿಯನ್ನು ಕಂಡ ಕ್ಷಣದಲ್ಲೇ ನಾನು ಅಬ್ದುಲ್ ಮುತ್ತಲಿಬಿನ ಮಗ ಅಲಿ ◌ؓ ಎಂದು ಹೇಳುತ್ತಾ, ಅಲಿಯವರು ◌ؓ ಮುಂದೆ ಹೋಗಿ, ಬಲವಾದ ಏಟೊಂದನ್ನು ಕೊಟ್ಟಾಗ ಅವನು ನೆಲಕ್ಕುರುಳಿ ಬಿದ್ದನು. ತಕ್ಷಣವೇ, ಮಕ್’ಸೂಮಿಗಳು ಆ ಕವಚವನ್ನು ಅಬೂಖೈಸ್ ಬಿನ್ ಫಾಕಿಹ್ ಬಿನ್ ಅಲ್ ಮುಗೀರನಿಗೆ ಧರಿಸಿ ಕೊಟ್ಟರು. ಸ್ವಲ್ಪ ಸಮಯದ ನಂತರ ಅಬೂಜಹಲ್ ಎಂದು ತಿಳಿದು, ಹಂಝ’ರು ◌ؓ ನಾನು ಅಬ್ದುಲ್ ಮುತ್ತಲಿಬ್’ರ ಮಗ ಹಂಝ ◌ؓ ಎಂದು ಹೇಳುತ್ತಾ ಅವನಿಗೆ ಒಂದು ಏಟು ಕೊಟ್ಟರು, ಆ ಏಟಿಗೆ ತತ್ತರಿಸಿ ಅವನೂ ಕೂಡ ನೆಲಕ್ಕುರುಳಿ ಬಿದ್ದನು. ನಂತರ ಆ ಕವಚವನ್ನು ಹರ್’ಮಲತು ಬಿನ್ ಉಮರಿಗೆ ಧರಿಸಿದರು, ಅವನನ್ನೂ ಕೂಡ ಅಲಿಯವರು ಕೊಂದು ಹಾಕಿದರು. ನಂತರ ಮಖ್’ಸೂಮಿಗಳು ಆ ಕವಚವನ್ನು ಖಾಲಿದ್ ಬಿನ್ ಅಹ್’ಲಮಿಗೆ ಧರಿಸಲು ಮುಂದಾದಾಗ ಅವರು ಅದನ್ನು ಹಾಕಲು ಒಪ್ಪಿಕೊಳ್ಳಲಿಲ್ಲ.
ಇಷ್ಟೆಲ್ಲ ಆದರೂ, ಅಬೂಜಹಲ್ ಮಾತ್ರ ತನ್ನ ಸಂಬಂಧಿಕರ ಸಂರಕ್ಷಣೆಯಲ್ಲೇ ಇದ್ದನು. ಮುಆದ್ ಬಿನ್ ಅಂರ್ ಬಿನ್ ಅಲ್ ಜಮೂಹ್ ಹೇಳುವುದು ಕಾಣಬಹುದು, ಮರಗಳ ಗುಂಪಿನ ಹಾಗೆ ಒಂದು ಗುಂಪಿನ ನಡುವೆ ದೂರದಲ್ಲಿ ಅಬೂಜಹಲ್’ನ್ನು ಕಂಡೆನು. ಅಬೂಜಹಲ್’ನ ಬಳಿ ಯಾರಿಗೂ ತಲುಪಲು ಸಾಧ್ಯವಿಲ್ಲ ಎಂದು ಮಖ್’ಸೂಮಿಗಳು ಹೇಳುತ್ತಲೇ ಇದ್ದರು. ಆಗ ನನಗೆ ನಾನೇ ಒಂದು ದೃಢ ನಿಶ್ಚಯ ಮಾಡಿಕೊಂಡೆನು, ಖಂಡಿತ ನಾನು ಅವನ ಬಳಿ ತಲುಪುತ್ತೇನೆ ಎಂದು, ಅವಕಾಶಕ್ಕಾಗಿ ಕಾಯುತ್ತಾ ಇರುವಾಗ, ಸ್ವಲ್ಪ ಸಮಯ ಅವರ ಗಮನ ಬೇರೆ ಕಡೆ ಸರಿಯಿತು, ತಕ್ಷಣವೇ ನಾನು ಅವರ ನಡುವೆ ನುಸುಳಿಕೊಂಡು, ಅವನ ಕಾಲಿಗೆ ಒಂದು ಬಲವಾದ ಏಟು ಕೊಟ್ಟೆನು, ಅವನ ಪಾದವು ತುಂಡಾಗಿ ಹಾರಿ ಹೋಯಿತು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-246/365
ಅಷ್ಟರಲ್ಲಿ ಅಬೂಜಹಲ್’ನ ಮಗ ಇಕ್’ರಿಮ ಬಂದು ನನ್ನ ಭುಜಕ್ಕೆ ಒಂದು ಏಟು ಕೊಟ್ಟನು. ನನ್ನ ಕೈ ತುಂಡಾಗಿ ನೇತಾಡತೊಡಗಿತು, ನಾನು ಅದನ್ನು ಲೆಕ್ಕಿಸದೆ ಮುಂದಕ್ಕೆ ಹೋದಾಗ ಆ ನೇತಾಡುತಿದ್ದ ಕೈ ನನಗೆ ಭಾರವಾಗತೊಡಗಿತು. ಅದರ ಮೇಲೆ ನನ್ನ ಒಂದು ಹೆಜ್ಜೆಯನ್ನು ಇಟ್ಟು ಬೇರ್ಪಡಿಸಿ, ಪುನಃ ಮುಂದಕ್ಕೆ ಹೋದಾಗ, ಅವನು ಬೇರೆ ಕಡೆ ಓಡಿ ಹೋಗಿದ್ದನು. ನಾನು ಆ ಕ್ಷಣದಲ್ಲಿ ಅವನನ್ನು ಎದುರಿಸಲು ನನ್ನ ಕೈ ಇರುತ್ತಿದ್ದರೆ.? ಎಂದು ಅಂದುಕೊಂಡಿದ್ದೆನು. ಕೆಲವೊಂದು ಉಲ್ಲೇಖದ ಪ್ರಕಾರ, ಮುಆದ್ ಬಿನ್ ಅಂರ್’ರ ◌ؓ ಕೈಯನ್ನು ಪ್ರವಾದಿಯವರು ﷺ ತಮ್ಮ ಬಾಯಿಂದ ಪವಿತ್ರ ಲಾಲಾರಸವನ್ನು ತೆಗೆದು ಪುನಃ ಜೋಡಿಸಿ ಕೊಟ್ಟಿದ್ದರು ಎಂದು ಕಾಣಬಹುದು.
ಯುದ್ಧದ ನಂತರ ಅಬೂಜಹಲ್’ನ ಖಡ್ಗವನ್ನು ಪ್ರವಾದಿಯವರು ﷺ ಮುಆದಿಗೆ ಕೊಟ್ಟಿದ್ದರು, ಬದ್ರಿನ ನಂತರ ಬಹಳಷ್ಟು ಯುದ್ಧದಲ್ಲಿ ಭಾಗವಹಿಸಿದ ಅವರು ಉಸ್ಮಾನ್’ರ ಕಾಲದಲ್ಲಿ ಆಗಿತ್ತು ಮರಣ ಹೊಂದಿದ್ದು.
ಬದ್ರ್’ನಲ್ಲಿ ನಡೆದ ಅಪ್ರತಿಮ ತ್ಯಾಗದ ಹೋರಾಟವನ್ನಾಗಿತ್ತು ನಾವು ಕಂಡದ್ದು. ಆದರ್ಶದ ಆತ್ಮಶಕ್ತಿಯು ಯಾವ ರೀತಿ ಭೌತಿಕ ವೀಕ್ಷಣೆಗಳನ್ನು ಸೋಲಿಸಿತು ಎಂಬುದನ್ನು ಇತಿಹಾಸ ಕಲಿಸು ಕೊಡುತ್ತದೆ. ಅತ್ಯುತ್ತಮವಾದ ಸತ್ಯವಿಶ್ವಾಸವನ್ನು ಎತ್ತಿಹಿಡಿದಾಗ, ತನ್ನ ದೇಹಕ್ಕಾದ ನೋವನ್ನೂ ಕೂಡ ಮರೆತು ಹೋದ ಸುಂದರ ನಿಮಿಷಗಳನ್ನಾಗಿದೆ ಇತಿಹಾಸವು ನಮಗೆ ತಿಳಿಸಿ ಕೊಡುವುದು. ಇದ್ಯಾವುದೂ ಕಾದಂಬರಿಗಳಲ್ಲಿ ಬರುವ ಕಾಲ್ಪನಿಕ ಕಥೆಗಳಲ್ಲ, ಯಾವುದೇ ರೀತಿಯ ಕಲಬೆರಕೆಯಿಲ್ಲದೆ ನೈಜ ಇತಿಹಾಸವಾಗಿದೆ. ಬೇಕಿದ್ದರೆ ಮತ್ತೊಮ್ಮೆ ಓದಿ ನೋಡಿರಿ.
ಅಬೂಜಹಲ್’ನ ಅಂತ್ಯದ ಬಗ್ಗೆ ವಿವರಿಸುವ ಇನ್ನೊಂದು ಉಲ್ಲೇಖದಲ್ಲಿ, ಅಬ್ದು’ರಹ್ಮಾನ್ ಬಿನ್ ಔಫ್’ರು ಹೇಳುವುದು ಕಾಣಬಹುದು. ಬದ್ರ್’ರ ಹೋರಾಟದಲ್ಲಿ ನಾನು ಕೂಡ ಅಂದು ಬಾಗಿಯಾಗಿದ್ದೆ, ನನ್ನ ಸುತ್ತಮುತ್ತಲಿನಲ್ಲಿ ನಿಂತಿದ್ದದ್ದು ಎರಡು ಹದಿಹರೆಯದ ಮಕ್ಕಳಾಗಿದ್ದರು. ಅವರು ಸಣ್ಣ ಪ್ರಾಯದವರಾಗಿದ್ದ ಕಾರಣ ಅವರ ಖಡ್ಗವನ್ನು ಕತ್ತಿಗೆ ನೇತು ಹಾಕಲಾಗಿತ್ತು, ಅದನ್ನು ಕಂಡು ಈ ಮಕ್ಕಳ ನಡುವೆ ನಾನು ಬಾಕಿಯಾದೆ ಅಲ್ಲವೇ.? ಸ್ವಲ್ಪ ಪ್ರಾಯದಲ್ಲಿ ದೊಡ್ಡವರ ಬಳಿ ನಿಂತಿರುತಿದ್ದರೆ, ಸುರಕ್ಷಿತವಾಗಿ ಇರಬಹುದಿತ್ತು ಎಂದು ಆಲೋಚಿಸ ತೊಡಗಿದೆನು. ಹೀಗಿರುವಾಗ ಅವರಲ್ಲಿ ಒಬ್ಬನು ಮುಂದೆ, ಯಾ ಅಮ್ಮ್ (ಚಿಕ್ಕಪ್ಪ) ನಿಮಗೆ ಅಬೂಜಹಲ್ ಯಾರೆಂದು ಗೊತ್ತಿದೆಯ.? ಎಂದು ಕೇಳಿದಾಗ, ನಾನು ಹೌದು ಗೊತ್ತಿದೆ, ಯಾಕೆ.? ಅವನ ಬಗ್ಗೆ ತಿಳಿದು ನಿನಗೆ ಏನಾಗಬೇಕು.? ಎಂದು ಕೇಳಿದೆನು. ಅದಕ್ಕೆ ಆ ಹುಡುಗ, “ಅವನು ಪ್ರವಾದಿಯವರನ್ನು ﷺ ಅಪಹಾಸ್ಯ ಮಾಡಿರುವುದಾಗಿ ತಿಳಿಯಲು ಸಾಧ್ಯವಾಯಿತು, ಹಾಗಾಗಿ ಅಲ್ಲಾಹನಾಣೆ ಬಹುಶಃ ಅವನು ಸಿಕ್ಕರೆ.? ಇಬ್ಬರಲ್ಲಿ ಒಬ್ಬರು ಜೀವಂತವಾಗಿಯಂತೂ ಇರುವುದಿಲ್ಲ, ಒಂದೋ ಅವನನ್ನು ನಾನು ಸಾಯಿಸುತ್ತೇನೆ, ಇಲ್ಲದಿದ್ದರೆ ಅವನು ನನ್ನನ್ನು ಸಾಯಿಸುತ್ತಾನೆ, ಇದು ನಾನು ಅಲ್ಲಾಹನನ್ನು ಸಾಕ್ಷಿಯಾಗಿಸಿ ಮಾಡಿದ ಒಪ್ಪಂದ” ಎಂದು ಹೇಳಿದನು. ಅದನ್ನು ಕೇಳಿ, ನಾನು ಆಶ್ಚರ್ಯದಿಂದ ಇನ್ನೊಬ್ಬನ ಕಡೆಗೆ ನೋಡಿದಾಗ, ಅವನೂ ಕೂಡ ಇದೆ ರೀತಿ ಬಹಳ ಶೌರ್ಯದ ಮಾತುಗಳನ್ನು ಆಡುತ್ತಿದ್ದನು. ಅದನ್ನು ಕೇಳಿ, ನನಗೆ ಬಹಳಷ್ಟು ಅಭಿಮಾನ ಆಯಿತು, ಎರಡು ಬೆಟ್ಟಗಳ ನಡುವೆಯೇನೋ.? ನಾನು ನಿಂತಿರುವುದು ಎಂಬ ಭಾವನೆ ಬರತೊಡಗಿದವು.
ಅಷ್ಟೊತ್ತಿಗೆ ಅವರ ಸಂಬಂಧಿಕರ ನಡುವೆ ನಿಂತಿದ್ದ ಅಬೂಜಹಲ್’ನ್ನು, ತೋರಿಸುತ್ತಾ ಅದೋ ಅಲ್ಲಿ ನೀವುಗಳು ಹುಡುಕುತ್ತಿರುವ ವ್ಯಕ್ತಿ ಎಂದು ತೋರಿಸಿ ಕೊಟ್ಟೆನು. ನಂತರ ಅವರು ಅವನನ್ನೇ ನೋಡುತ್ತಾ ನಿಂತಿದ್ದರು, ಅವಕಾಶ ಸಿಕ್ಕಿದ ಕೂಡಲೇ, ಅವರಿಬ್ಬರೂ ಅವನ ಮುಂದೆ ಜಿಗಿದು ಅವನ ಮೇಲೆ ದಾಳಿ ಮಾಡಿದರು. ಆ ಎರಡು ಸಾಹಸಿ ಮಕ್ಕಳು, ಹಾರಿಸಿನ ಮಕ್ಕಳಾದ ಮುಅವ್ವಿದ್ ◌ؓ ಹಾಗೂ ಮುಆದ್ ◌ؓ ಆಗಿದ್ದರು.
ಅಂರಿನ ಮಗನಾದ ಮುಆದ್ ◌ؓ ಅಬೂಜಹಲ್’ನ ಕಾಲಿಗೆ ದಾಳಿ ಮಾಡಿ ಕೆಳಗೆ ಬೀಳಿಸಿದನು, ಹಾರಿಸಿನ ಮಕ್ಕಳು ಅವನ ಮೇಲೆ ದಾಳಿ ಮಾಡಿ ಅವನ ಕಥೆಯನ್ನು ಮುಗಿಸಿದರು, ಅವನ ಕೊನೆಯುಸಿರು ಹೋದ ನಂತರ ಅಬ್ದುಲ್ಲಾಹಿಬಿನ್ ಮಸ್’ವೂದ್ ◌ؓ ತಲೆಯನ್ನು, ದೇಹದಿಂದ ಕತ್ತರಿಸಿ ಬೇರೆ ಮಾಡಿದರು
ಅತ್ಯಂತ ಅಹಂಕಾರಿಯಾದ ಒಬ್ಬ ವ್ಯಕ್ತಿಯ ಅಂತ್ಯ ಹೇಗಾಯಿತು ಎಂದು ತಿಳಿದುಕೊಂಡೆವು. ವಿನಾಕಾರಣ ಹೋರಾಟದ ಹೆಸರಿನಲ್ಲಿ ನೆತ್ತರು ಸುರಿಸುವುದು ಬೇಡ ಎಂದು, ಮುಸ್ಲಿಮರು ಹಾಗೂ ಅವನ ಗುಂಪಿನ ಬಹಳಷ್ಟು ಜನರು ಪ್ರಯತ್ನ ಪಟ್ಟರೂ, ಅಬೂಜಹಲ್ ಮಾತ್ರ ಯಾರ ಮಾತನ್ನೂ ಕೇಳದೆ ಅಹಂಕಾರಿಯಾಗಿ ವರ್ತಿಸಿದ್ದನು. ಕೇವಲ ಅವನೊಬ್ಬನ ಹಠದ ಕಾರಣದಿಂದ ಮಾತ್ರವಾಗಿತ್ತು ಈ ಯುದ್ಧ ನಡೆದದ್ದು ಎಂದು ಹೇಳಿದರೂ ತಪ್ಪಾಗಲಾರದು. ಪ್ರವಾದಿಯವರ ﷺ ವ್ಯಕ್ತಿತ್ವವನ್ನಾಗಲಿ, ಇಸ್ಲಾಮಿನ ಮಹತ್ವವನ್ನಾಗಲಿ ತಿಳಿಯದ ವ್ಯಕ್ತಿ ಆಗಿರಲಿಲ್ಲ, ಅಬೂಜಹಲ್’ನ, ಎಲ್ಲಿ ನಾನು ಇವರ ಮುಂದೆ ಸಣ್ಣವನಾಗಿ ಹೋಗುವೇನೋ.? ಎಂಬ ಅಹಂಕಾರವಾಗಿತ್ತು, ಅವನ ಇಂತಹ ಭೀಕರ ಅಂತ್ಯಕ್ಕೆ ಕಾರಣವಾದದ್ದು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-247/365
ಅಬೂಜಹಲ್ ತನ್ನ ಕೊನೆಯುಸಿರು ಎಳೆಯುವ ದೃಶ್ಯವನ್ನು ಕಂಡ ಅಬ್ದುಲ್ಲಾಹಿ ಬಿನು ಮಸ್’ವೂದ್’ರು ◌ؓ ವಿವರಿಸುವುದು ಕಾಣಬಹುದು. ಬದ್ರ್ ಹೋರಾಟವು ಕಳೆದ ನಂತರ, ಯುದ್ಧಾನಂತರದ ವೀಕ್ಷಣೆಗೆ ಪ್ರವಾದಿಯವರು ﷺ ರಣರಂಗದಲ್ಲಿ ಅಬೂಜಹಲ್’ನ್ನು ಹುಡುಕುತ್ತಾ ಮುಂದೆ ಸಾಗುತ್ತಿದ್ದರು. ಆದರೆ ಅವರ ಕಣ್ಣಿಗೆ ಅಬೂಜಹಲ್ ಬಿದ್ದಿರಲಿಲ್ಲ, ಅದೇ ಬೇಸರದಲ್ಲಿ ಪ್ರವಾದಿಯವರು ﷺ ಈ ಸಮುದಾಯದ ಫರೋವನ ವಿಷಯದಲ್ಲಿ ನನ್ನನ್ನು ನಿರಾಸೆ ಮಾಡದಿರು ಪ್ರಭು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು. ನಂತರ ಅವನನ್ನು ಹುಡುಕಲು ಪ್ರವಾದಿಯವರು ﷺ ಆದೇಶ ನೀಡಿದಾಗ, ನಾವು ಹುಡುಕಲು ಆರಂಭಿಸಿದೆವು, ಸ್ವಲ್ಪ ಸಮಯದ ನಂತರ ನನಗೆ ಅವನು ಸಿಕ್ಕಿದನು. ಅವನು ತನ್ನ ಕೊನೆಯ ಕ್ಷಣದಲ್ಲಿ ಇದ್ದನು, ನಾನು ಅವನಿಗೆ ಕಾಲಲ್ಲಿ ಒದ್ದು, ಲೋ ಅಲ್ಲಾಹನ ಶತ್ರು ನಿನ್ನನ್ನು ಅಲ್ಲಾಹನು ಕೇವಲವಾಗಿ ನೋಡಿದನು ಅಲ್ವಾ.? ಎಂದು ಕೇಳಿದೆನು.
ಅದಕ್ಕೆ ಅವನು ತಕ್ಷಣವೇ, ನಾನು ಹೇಗೆ ಕೇವಲನಾಗುತ್ತೇನೆ.? ನೀವು ಯಾರನ್ನಾದರೂ ಸಾಯಿಸಿದರೆ.? ಅವನು ಕೇವಲನಾಗುತ್ತನೆಯೆ.? ಎಂದು ಅಹಂಕಾರದಿಂದಲೇ ಪುನಃ ಕೇಳಿದನು. ಕೃಷಿಕರಾಗಿದ್ದ ಮುಆದ್ ◌ؓ ಹಾಗೂ ಮುಅವ್ವಿದ್ ತನ್ನನ್ನು ಸೊಲಿಸಿದ್ದಕ್ಕೆ, ಅಬೂಜಹಲ್’ನ ಪ್ರತಿಷ್ಠೆಗೆ ಧಕ್ಕೆಯಾಗಿತ್ತು, ರೈತನಲ್ಲದ ಇನ್ಯಾರೇ ನನ್ನನ್ನು ಸಾಯಿಸಿದರೂ ಎಷ್ಟೋ ಚೆನ್ನಾಗಿತ್ತು ಎಂದು ಅವನು ಕೂಗಿ ಹೇಳಿದನು.
ನಿನ್ನನ್ನು ಅಲ್ಲಾಹನು ನಿಂದಿಸಲಿ ಎಂದು ಹೇಳಿ, ಜೋರಾಗಿ ಮತ್ತೊಮ್ಮೆ ಒದ್ದಾಗ, ಅವನು “ಲೋ ಸೇವಕಿಯ ಮಗನಾದ ಸೇವಕನೇ, ನೀನು ಇದು ಬೇಕಂತಲೇ ಸಮಸ್ಯೆಯನ್ನು ಎಳೆದು ಹಾಕುತ್ತಿದ್ದೀಯ.!” ಅಂತ ಹೇಳಿದಾಗ, ಏ ಮಗು ಗೆಲುವು ಯಾರಿಗೆ ಅಂತ ಗೊತ್ತಿದೆಯ ನಿನಗೆ.? ಅಲ್ಲಾಹನಿಗೂ, ಅವನ ಪ್ರವಾದಿಯವರಿಗೆ ﷺ ಆಗಿದೆ ಎಂದು ಇಬ್’ನು ಮಸ್’ವೂದ್’ರು ◌ؓ ಪುನಃ ಲೇವಡಿ ಮಾಡಿದರು.
ಮತ್ತೊಂದು ಉಲ್ಲೇಖದಲ್ಲಿ, ಇಬ್’ನು ಮಸ್’ವೂದ್’ರು ◌ؓ ಹೇಳುವುದು ಕಾಣಬಹುದು. ಇಬ್’ನು ಮಸ್’ವೂದ್’ರು ◌ؓ ಅಬೂಜಹಲ್’ನ ಬಳಿ ಬಂದು, “ನಿನ್ನನ್ನು ನಾನು ಸಾಯಿಸುತ್ತಿದ್ದೇನೆ” ಎಂದು ಹೇಳಿದಾಗ, ಅಬೂಜಹಲ್ ಅಹಂಕಾರದಿಂದ ಲೋ ಯಜಮಾನನ್ನು ಸಾಯಿಸುವ ಮೊದಲ ಸೇವಕ ನೀನೆ ಅಲ್ವೇನೋ.? ಆದರೆ ನೀನು ನನ್ನನ್ನು ಸಾಯಿಸ್ತಿದ್ದೀಯ ಎನ್ನುವುದೇ ನನಗೆ ಬಹಳ ಬೇಸರ ಉಂಟಾದದ್ದು. ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡವನೋ, ಉನ್ನತ ಮನೆತನದ ವ್ಯಕ್ತಿಯೋ ನನ್ನನ್ನು ಸಾಯಿಸಿದ್ದರೆ ಎಷ್ಟೋ ಒಳ್ಳೆದಿತ್ತು ಎಂದು ಹೇಳಿದನು.
ತನ್ನ ಕೊನೆಯ ಉಸಿರು ನಿಲ್ಲುವ ಸಂದರ್ಭದಲ್ಲಿಯೂ ಕೂಡ, ಅವನ ಒಳಗೆ ಇರುವ ಅಹಂಕಾರದ ಅಮಲು ಎಷ್ಟಿತ್ತು ಎಂಬುವುದು ಇದರಲ್ಲೇ ತಿಳಿಯುತ್ತದೆ. ಅವನ ಮನಸ್ಸಿನ ಒಳಗೆ ಇದ್ದ ನಾನೇ ಮೇಲೂ ಎಂಬ ಅಹಂ ಭಾವವನ್ನು ಕೊನೆಯ ಕ್ಷಣದ ವರೆಗೂ ಬಿಟ್ಟಿರಲಿಲ್ಲ. ಯಜಮಾನನ್ನೂ, ಸೇವಕನನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದಾರೆ ಎಂಬುದಾಗಿದೆ, ಅವನು ಪ್ರವಾದಿಯವರಲ್ಲಿ ﷺ ನೋಡುತ್ತಿದ್ದ ಕೊರತೆ. ಸೇವಕರ ಜೊತೆಯಲ್ಲಿ ಕುಳಿತು, ಆಹಾರ ಸೇವನೆ ಮಾಡುತಿದ್ದದ್ದು ಅವನಿಗೆ ಸಹಿಸಲು ಆಗುತ್ತಿರಲಿಲ್ಲ. ಈ ಕೀಳು ಭಾವನೆಯೇ ಆಗಿತ್ತು, ಅವನ ಅಂತ್ಯವೂ ಕೂಡ ಇಷ್ಟೊಂದು ನೀಚ ಆಗಲು ಕಾರಣ.
ಇಬ್’ನು ಮಸ್’ವೂದ್’ರು ◌ؓ ಮಾತು ಮುಂದುವರಿಸುತ್ತಾ, ನಾನು ಅವನಿಗೆ ಬಲವಾದ ಏಟೋಂದನ್ನು ಕೊಟ್ಟೆನು, ಅದರಲ್ಲಿ ಅವನ ತಲೆ ಬೇರೆ ಬೇರೆ ಆಯಿತು, ನಂತರ ಅವನ ತಲೆಗೆ ಧರಿಸಿದ ಕವಚ, ದೇಹದ ಕವಚ, ಹಾಗೂ ಆಯುಧಗಳನ್ನು ಎತ್ತಿಕೊಂಡು ಪ್ರವಾದಿಯವರ ﷺ ಬಳಿ ಹೋಗಿ, ಪ್ರವಾದಿಯವರೇ ﷺ ಅಬೂಜಹಲ್’ನ ಕಥೆ ಮೂಗಿಯಿತು, ನೀವು ಸಂತೋಷ ಪಡಿ ಎಂದು ಹೇಳಿದಾಗ, ಪ್ರವಾದಿಯವರು ﷺ ಏನು ಈ ಮಾತು ಸತ್ಯವೇ ಅಬ್ದುಲ್ಲಾಹ್.? ಅವನ ಸಾವು ನನಗೆ ಕೆಂಪು ಒಂಟೆಗಿಂತಲೂ ಅತೀ ಇಷ್ಟವಾಗಿದೆ.
ಭರವಸೆ ನೀಡಿದ ಹಾಗೆ, ಅದನ್ನು ಪಾಲಿಸಿದ ಅಲ್ಲಾಹನಿಗಾಗಿದೆ ಸರ್ವ ಸ್ತುತಿ, ಈ ಸಮುದಾಯದ ಫರೋವನನ್ನು ಅವನು ಸಾಯಿಸಿದನು, ನನಗೆ ನೀಡಿದ ಭರವಸೆಯನ್ನು ಪಾಲಿಸಿದ ಒಡೆಯ ನೀನು ನನಗೆ, ನಿನ್ನ ಅನುಗ್ರಹವನ್ನು ವರ್ಷಿಸಿ ಕೊಡು ಎಂದು ಹೇಳಿದರು.
ಈ ಅಧ್ಯಾಯದಲ್ಲಿ ಕೆಲವು ವ್ಯತ್ಯಾಸಗಳಿರುವ ಇತರ ಉಲ್ಲೇಖಗಳನ್ನೂ ಕೂಡ ತಿಳಿಯಲಿದೆ. ಹಾಗಾಗಿ ಇನ್ನಷ್ಟು ಕೆಲವು ವ್ಯಾಖ್ಯಾನಗಳನ್ನು ತಿಳಿಯೋಣ.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Leave a Reply